ಮುಂದಿನ ವರ್ಷ ಬರಲಿದೆ ಜೆನೋಮ್ ಎಡಿಟಿಂಗ್ ಬಾಸ್ಮತಿ
ಬೆಂಗಳೂರು: ಹವಾಮಾನ ವೈಪರೀತ್ಯದ ಈ ಸಂದರ್ಭದಲ್ಲಿ, ಕೃಷಿ ಸುಸ್ಥಿರತೆಗೆ ಜೆನೋಮಿಕ್ಸ್ ಹಾಗೂ ಜೀನ್ ಎಡಿಟಿಂಗ್ ಪರಿಹಾರವಾಗಬಲ್ಲುದು ಎಂದು ಇಸ್ರೇಲ್‌ನ ವೈಝ್‌ಮನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ಪ್ರೊ.ಅವಿ ಲೆವಿ ಹೇಳಿದ್ದಾರೆ.
ಬೆಂಗಳೂರಿನ ಅರಮನೆ ಆವರಣದಲ್ಲಿ ನ.29ರಂದು ಆರಂಭಗೊಂಡ ಬೆಂಗಳೂರು ಟೆಕ್ ಶೃಂಗಸಭೆ 2023ರ ಅಂಗವಾಗಿ ನಡೆದ “ಸುಸ್ಥಿರ ಆಹಾರ ಮತ್ತು ಕೃಷಿ ಪದ್ಧತಿಗಳು” ವಿಷಯದ ಕುರಿತು ಅವರು ಮಾತನಾಡಿದರು.
ಪರಸ್ಪರ ಸಂಬಂಧಿಸಿರುವ ಕೃಷಿ, ಪರಿಸರ, ಜೀವ ವೈವಿಧ್ಯತೆ ಹಾಗೂ ಪೋಷಕಾಂಶಗಳ ಸಮತೋಲನ ಸಾಧಿಸುವುದು, ಸುಸ್ಥಿರತೆ ಕಾಪಾಡುವುದು ಸವಾಲಿನ ಸಂಗತಿಯಾಗಿದೆ. ಇಂದು ಆಹಾರ ಉತ್ಪಾದನೆಯಿಂದಾಗಿ ಶೇ.26ರಷ್ಟು ಹಸಿರುಮನೆ ಅನಿಲ ಬಿಡುಗಡೆಗೊಳ್ಳುತ್ತಿದೆ. ಜತೆಗೆ ಆಹಾರ ಉತ್ಪಾದನಾ ಕ್ಷೇತ್ರವು ಶೇ.70ರಷ್ಟು ಸಿಹಿ ನೀರನ್ನು ಬಳಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಜೆನೋಮಿಕ್ಸ್ ಆಶಾವಾದವಾಗಿ ಕಾಣುತ್ತಿದೆ ಎಂದು ಅವರು ಹೇಳಿದರು.
ಜೆನೋಮಿಕ್ಸ್‌ನೊಂದಿಗೆ ಜೆನೋಮ್ ಎಡಿಟಿಂಗ್ ಪ್ರಶಸ್ತವಾದ ತಳಿ ಸಂವರ್ಧನೆಯನ್ನು ಸಾಧ್ಯವಾಗಿಸಲಿದೆ. ಇದರಿಂದ ಹೆಚ್ಚು ಸುಸ್ಥಿರ ಕೃಷಿ ಸಾಧಿಸಬಹುದು. ತರಕಾರಿ ಬೆಳೆಗಳಿಗೆ ವರ್ಟಿಕಲ್ ಫಾರ್ಮಿಂಗ್ ಅನುಕೂಲಕರ ಎಂದು ಅವರು ಅಭಿಪ್ರಾಯಪಟ್ಟರು.
ಬರಲಿದೆ ಜೆನೋಮ್ ಎಡಿಟಿಂಗ್ ಬಾಸ್ಮತಿ
ತಂತ್ರಜ್ಞಾನದ ಬೆಂಬಲದೊಂದಿಗೆ ಅಧಿಕ ಇಳುವರಿಯ ರೋಗ ನಿರೋಧಕ ಬಾಸ್ಮತಿ ತಳಿಗಳನ್ನು ನಿರಂತರವಾಗಿ ಅಭಿವೃದ್ಧಿಪಡಿಸ ಲಾಗುತ್ತಿದ್ದು, ಮುಂದಿನ ವರ್ಷ ಬರ ನಿರೋಧಕ ಜೆನೋಮ್ ಎಡಿಟಿಂಗ್ ಬಾಸ್ಮತಿ ತಳಿ ಬರಲಿದೆ ಎಂದು ದೆಹಲಿಯ ಇಂಡಿಯನ್ ಅಗ್ರಿಕಲ್ಚರಲ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ಪ್ರೊ.ಎ.ಕೆ.ಸಿಂಗ್ ಹೇಳಿದರು.
ಹಿಂದೆಲ್ಲಾ ವಿಪರೀತ ಎತ್ತರ ಹಾಗೂ ಸುದೀರ್ಘ ಬೆಳೆ ಅವಧಿಯಿಂದಾಗಿ ರೈತರಿಗೆ ನಷ್ಟವಾಗುತ್ತಿತ್ತು, ಇಳುವರಿಯೂ ಕಡಿಮೆಯಾಗುತ್ತಿತ್ತು. ಆದರೆ ನಾವು ಕಡಿಮೆ ಎತ್ತರದ, ಕಡಿಮೆ ಬೆಳೆ ಅವಧಿಯ ಹಾಗೂ ಉದ್ದನೆಯ ಧಾನ್ಯದ ಪುಸಾ ಬಾಸ್ಮತಿಯನ್ನು ಅಭಿವೃದ್ಧಿಪಡಿಸುತ್ತಾ ಬಂದಿದ್ದೇವೆ. ಮಾಲೆಕ್ಯುಲಾರ್ ಬ್ರೀಡಿಂಗ್, ಜೆನೆಟಿಕ್ ಮ್ಯಾಪಿಂಗ್ ತಂತ್ರಜ್ಞಾನ ಅಳವಡಿಸಿದ್ದೇವೆ. ಸಾಂಪ್ರದಾಯಿಕ ಬಾಸ್ಮತಿ ತಳಿ ಹೆಕ್ಟೇರ್‌ಗೆ 2.5 ಟನ್ ಇಳುವರಿ ಇರುತ್ತಿದ್ದರೆ, ಈಗಿನ ತಳಿ 7 ಟನ್ ತನಕ ಇಳುವರಿ ನೀಡುತ್ತವೆ ಎಂದು ಅವರು ಹೇಳಿದರು.
ಇದರೊಂದಿಗೆ ಮಧುಮೇಹಸ್ನೇಹಿ ಮೆಕ್ಕೆ ಜೋಳ ಹಾಗೂ ಮುಸುಕಿನ ಜೋಳ ತಳಿ ಅಭಿವೃದ್ಧಿಯ ಬಗೆಗೂ ಅವರು ವಿವರಿಸಿದರು. ಈ ಸಂವಾದವನ್ನು ಡಾ.ಕೆ.ಕೆ.ನಾರಾಯಣನ್ ಅವರು ನಿರ್ವಹಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ