ಬೆಂಗಳೂರು: ಬಯೋ ಮಾಂಗೇ ಮೋರ್... ಇದು ನಮ್ಮ ಮಂತ್ರವಾಗಬೇಕು. ಜೈವಿಕ ವಿಜ್ಞಾನವು ದೇಶದ ಜೈವಿಕ ಆರ್ಥಿಕತೆಯಾಗಿ ಬದಲಾಗಬೇಕಿದೆ ಎಂದು ಕೇಂದ್ರ ಜೈವಿಕ ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ, ಡಾ.ರಾಜೇಶ್ ಗೋಖಲೆ ಅವರು ಹೇಳಿದ್ದಾರೆ.
ಬೆಂಗಳೂರಿನ ಅರಮನೆ ಆವರಣದಲ್ಲಿ ನ.29ರಂದು ಆರಂಭಗೊಂಡ ಬೆಂಗಳೂರು ಟೆಕ್ ಶೃಂಗಸಭೆ 2023ರ ಅಂಗವಾಗಿ ನಡೆದ “ಭಾರತ ಜೈವಿಕ ಉತ್ಪಾದನೆ ಉಪಕ್ರಮ” ವಿಷಯದ ಕುರಿತು ಡಾ.ಗೋಖಲೆ ಅವರು ವರ್ಚುವಲ್ ಆಗಿ ದಿಕ್ಸೂಚಿ ಭಾಷಣ ಮಾಡಿದರು.
ಜೀವಶಾಸ್ತ್ರವು ಮುಂದಿನ ತಂತ್ರಜ್ಞಾನ ಕ್ರಾಂತಿಯನ್ನು ರೂಪಿಸಲಿದೆ. ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಜಾಗತಿಕ ನಾಯಕನಾಗಲಿದೆ. ಜೈವಿಕ ಉತ್ಪಾದನೆ ಸಂಶೋಧನೆ ಹಾಗೂ ಮಾರುಕಟ್ಟೆ ಇವೆರಡರಲ್ಲೂ ಯೋಜಿತ, ಸಂಘಟಿತ ಪ್ರಯತ್ನ ನಡೆಸುವುದರಿಂದ ಇದು ಸಾಧ್ಯವಿದೆ ಎಂದು ಅವರು ದೃಢವಾದ ಧ್ವನಿಯಲ್ಲಿ ಹೇಳಿದರು.
300 ಶತಕೋಟಿ ಆರ್ಥಿಕತೆ ಗುರಿ:
2022ರಲ್ಲಿ 80 ಶತಕೋಟಿ ಡಾಲರ್‌ನಷ್ಟಿದ್ದ ಜೈವಿಕ ಆರ್ಥಿಕತೆಯು 2030ರ ವೇಳೆಗೆ 300 ಶತಕೋಟಿ ಡಾಲರ್ ತಲಪುವ ಗುರಿ ಹಾಕಿಕೊಳ್ಳಲಾಗಿದೆ. ಇದರಲ್ಲಿ ಜೈವಿಕಫಾರ್ಮಾಸ್ಯುಟಿಕಲ್ ಕ್ಷೇತ್ರವು ಶೇ.68ರಷ್ಟು ಸಿಂಹಪಾಲು ಹೊಂದಲಿದೆ. ಜೈವಿಕ ಫಾರ್ಮಾ, ಜೈವಿಕ ಕೃಷಿ, ಜೈವಿಕ ಉದ್ಯಮ, ಜೈವಿಕ ಇಂಧನ, ಜೈವಿಕ ಸೇವೆ, ಜೈವಿಕ ಮೆಡ್‌ಟೆಕ್ ಹಾಗೂ ಜೈವಿಕ ಎಐ ಹೀಗೆ ಏಳು ವಿಭಾಗಗಳಲ್ಲಿ ಜೈವಿಕ ಉತ್ಪಾದನೆ ಭವಿಷ್ಯದಲ್ಲಿ ಪ್ರಗತಿ ಸಾಧಿಸಲಿದೆ ಎಂದು ಹೇಳಿದರು.
ಶೀಘ್ರ ಜೈವಿಕ ವಿಷನ್ ಬಿಡುಗಡೆ
ದೇಶದ ಜೈವಿಕ ವಿಷನ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಇದು ಜೈವಿಕ ಉತ್ಪಾದನಾ ಕ್ಷೇತ್ರದ ಅಡಿಗಲ್ಲಾಗಲಿದೆ. ಬಯೋಹಬ್ ಸ್ಥಾಪಿಸುವತ್ತ ನಾವು ಯೋಚಿಸಬೇಕು. ಸುಸ್ಥಿರ, ನವೀನ ಹಾಗೂ ಜವಾಬ್ದಾರಿಯುತ ಜೈವಿಕ ಉತ್ಪಾದನೆಯ ಪರಿಹಾರವನ್ನು ನಾವು ಜಗತ್ತಿಗೆ ನೀಡಬೇಕಿದೆ. ಇದರೊಂದೆಗ ಅಪಾರ ಉದ್ಯೋಗ ಸೃಷ್ಟಿಯೂ ಆಗಲಿದೆ ಎಂದು ನುಡಿದರು.
ಭಾರತೀಯ ಬಯೋಲಾಜಿಕಲ್ ಡೇಟಾ ಸೆಂಟರ್ ಅನ್ನು ಕೇಂದ್ರ ಸರ್ಕಾರ ಸ್ಥಾಪಿಸಿದೆ. ಇದರ ಪ್ರಯೋಜನವನ್ನು ಉದ್ಯಮ ಪಡೆದುಕೊಳ್ಳಬೇಕು. ವೈದ್ಯಕೀಯ ಕ್ಷೇತ್ರದಲ್ಲಿ ಜೈವಿಕ ತಂತ್ರಜ್ಞಾನ ಹಾಗೂ ಕೃತಕಬುದ್ಧಿಮತ್ತೆ ಇದೆರಡನ್ನೂ ಬೆಸದ “ಹೀಲ್ ವಿತ್ ದವಾಎಐ” ಅನ್ನು ಅಭಿವೃದ್ಧಿಪಡಿಸುವ ಉದ್ದೇಶ ಸರ್ಕಾರದ್ದಾಗಿದೆ. ಜೈವಿಕ ಉತ್ಪಾದನಾ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರ ಈಗಾಗಲೇ 6,300 ಕೋಟಿ ರೂ. ಹೂಡಿಕೆ ನಡೆಸಿದೆ. ವಿದ್ಯಾರ್ಥಿಗಳಿಗೆ ಫೆಲೋಶಿಪ್‌ನಿಂದ ತೊಡಗಿ 7 ಕೋಟಿ ರೂ. ತನಕ ಜೈವಿಕ ನವೋದ್ಯಮಗಳಿಗೆ ಸರ್ಕಾರ ಬೆಂಬಲ ನೀಡುತ್ತಿದೆ ಎಂದು ಕೇಂದ್ರ ಜೈವಿಕ ತಂತ್ರಜ್ಞಾನ ಇಲಾಖೆಯ ಕಾರ್ಯಗಳನ್ನು ಅವರು ವಿವರಿಸಿದರು.
ಕರ್ನಾಟಕದಲ್ಲಿ ಜೈವಿಕ ಉತ್ಪಾದನಾ ಹಬ್?
ಜೈವಿಕ ಉತ್ಪಾದನಾ ಹಬ್ ಸ್ಥಾಪನೆಗಾಗಿ ಕರ್ನಾಟಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರದಲ್ಲೇ ಸರ್ಕಾರದ ಭೂಮಿ ಒದಗಿಸಲಿದೆ. ಇದು ಜೈವಿಕಉತ್ಪಾದನಾ ಕ್ಷೇತ್ರಕ್ಕೆ ಭಾರೀ ಉತ್ತೇಜನ ನೀಡಲಿದೆ ಎಂದು ಜೈವಿಕ ತಂತ್ರಜ್ಞಾನ ಉದ್ಯಮ ಸಂಸ್ಥೆಗಳ ಅಸೋಸಿಯೇಶನ್ (ABLE) ಅಧ್ಯಕ್ಷರಾದ ಜಿ.ಎಸ್.ಕೃಷ್ಣನ್ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಪರಿಚಯ ಭಾಷಣ ಮಾಡಿದ ಅವರು, ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ಅಭಿವೃದ್ಧಿಪಡಿಸಿದ ವ್ಯಾಕ್ಸಿನ್ ಮೂಲಕ ಭಾರತದ ಜೈವಿಕ ತಂತ್ರಜ್ಞಾನದ ನಾವೀನ್ಯತೆಯ ಸಾಮರ್ಥ್ಯ ಜಗತ್ತಿಗೆ ಪರಿಚಯಗೊಂಡಿತು. ಜಿ20 ಶೃಂಗಸಭೆಯಲ್ಲಿ ಭಾರತ ಜೈವಿಕ ಇಂಧನದ ಸಹಭಾಗಿತ್ವ ಒಪ್ಪಂದಕ್ಕೆ ಸಹಿ ಹಾಕಿದ್ದು, ಇದು ಭವಿಷ್ಯದಲ್ಲಿ ಎಥೆನಾಲ್ ಉತ್ಪಾದನೆಯನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಲಿದೆ.
ಬಯೋಟೆಕ್ ಕ್ಷೇತ್ರದಲ್ಲಿ ನವೋದ್ಯಮಗಳ ಸಂಖ್ಯೆ ಹೆಚ್ಚುತ್ತಿದ್ದು, ಇವುಗಳ ಸವಾಲುಗಳೇನು? ಅವುಗಳಿಗೆ ಅಗತ್ಯವಾಗಿರುವ ಹೂಡಿಕೆ, ಸಂಸ್ಥೆಯ ಪ್ರಗತಿಯನ್ನು ಪ್ರೋತ್ಸಾಹಿಸುವುದು ಹೇಗೆ ಎಂಬುದರ ಕುರಿತು ಚಿಂತಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ