ಮಂಗಳೂರು: ಮಾದಕ ವ್ಯಸನದ ಜಾಲ ವ್ಯವಸ್ಥಿತವಾಗಿ ದೇಶದಾದ್ಯಂತ ಹರಡಿಕೊಂಡಿದೆ. ಯುವ ಜನತೆ ಮೋಜು ಮಸ್ತಿಗಾಗಿ ಆರಂಭಿಸುವ ಮಾದಕ ಪದಾರ್ಥಗಳ ಸೇವನೆ ನಂತರ ವ್ಯವಸ್ಥಿತ ರೀತಿಯಲ್ಲಿ ವ್ಯಸನವಾಗಿ ಬದಲಾಗುತ್ತದೆ. ಹಾಗಾಗಿ ಮಾದಕ ವ್ಯಸನ ಜಾಗತಿಕ ಸವಾಲುಗಳಲ್ಲಿ ಒಂದಾಗಿದೆ ಎಂದು ದ. ಕ. ಜಿಲ್ಲಾ ಉಪಪೊಲೀಸ್ ಆಯುಕ್ತ ಬಿ. ಪಿ. ದಿನೇಶ್ ಕುಮಾರ್ ಆತಂಕ ವ್ಯಕ್ತಪಡಿಸಿದರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಾನವ ಹಕ್ಕುಗಳ ಭಾರತೀಯ ಮಹಾ ಮೈತ್ರಿ, ರಾಷ್ಟ್ರೀಯ ಸೇವಾ ಯೋಜನೆ, ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಜರುಗಿದ ಮಾನವ ಹಕ್ಕುಗಳ ಬಗ್ಗೆ ಮಾಹಿತಿ, ಮಾದಕ ವಸ್ತು ಸೇವನೆ ಪರಿಣಾಮ ಹಾಗೂ ಅಪರಾಧ, ಸಂಚಾರಿ ನಿಯಮಗಳ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹವ್ಯಾಸ ವ್ಯಸನವಾಗದಿರಲಿ: ಯುವಕರು ವಿಶೇಷವಾಗಿ ಕಾಲೇಜು ವಿದ್ಯಾರ್ಥಿಗಳು ಮೋಜು-ಮಸ್ತಿಗಾಗಿ ಮಾದಕ ದ್ರವ್ಯ ಸೇವನೆಗೆ ತೊಡಗುತ್ತಾರೆ. ಆನಂತರ ಅದೇ ವ್ಯಸನವಾಗಿ ಬದಲಾಗುತ್ತದೆ. ದೇಶದಲ್ಲಿ ಮಾದಕ ವ್ಯಸನ ಮಿತಿಮೀರಿ ಬೆಳೆಯಲು ಕಾನೂನು ಸುವ್ಯವಸ್ಥೆ ಜಾರಿಯಾಗುವಲ್ಲಿ ತೊಡಕಾಗುತ್ತಿದೆ. ಮಾದಕ ದ್ರವ್ಯ ಸೇವನೆಯಲ್ಲಿ ಕಾನೂನು ರೀತಿಯ ಹಾಗೂ ಕಾನೂನು ಬಾಹಿರವಾದ ವ್ಯಸನ ಎಂದು ಎರಡು ವಿಧಗಳನ್ನು ಗುರುತಿಸಬಹುದು. ಯಾವುದೇ ವೈದ್ಯಕೀಯ ತಜ್ಞರ ಔಷಧೀಕರಣದಲ್ಲಿ ಯಾವುದೇ ಕಾನೂನು ತೊಡಕಿರುವುದಿಲ್ಲ. ಆದರೆ ಯಾವುದೇ ವೈದ್ಯರ ಮೇಲ್ವಿಚಾರಣೆ ಇಲ್ಲದೇ, ಸ್ವಯಂ ಔಷಧೀಕರಣ ಮಾಡುವುದು ದೀರ್ಘ ಸಮಯಕ್ಕೆ ಅದು ವ್ಯಸನವಾಗಿ ಬದಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಯುವ ಜನಾಂಗ ಯಾವುದೇ ಸಂದರ್ಭದಲ್ಲೂ ೨೧ ವರ್ಷ ತುಬುವ ಮುನ್ನಾ ಧೂಮಪಾನ ಅಥವಾ ಮದ್ಯಪಾನದಂತಹ ವ್ಯಸನಗಳಿಗೆ ಒಳಗಾಗಬಾರದು. ಹಾಗೊಮ್ಮೆ ಒಳಗಾದರೆ ನಿಯಂತ್ರಣ ಸಾಧ್ಯವಾಗುವುದಿಲ್ಲ. ಹವ್ಯಾಸದಿಂದಲೇ ವ್ಯಸನಗಳೆಲ್ಲವೂ ಪ್ರಾರಂಭವಾಗುತ್ತದೆ.
ಶಿಕ್ಷೆ ತಪ್ಪಿದ್ದಲ್ಲ: ಮಾದಕ ದ್ರವ್ಯ ಮಾರಾಟ ಮತ್ತು ಸೇವನೆ ಯಾವುದೇ ಜಾಲದಲ್ಲಿ ತೊಡಗಿಕೊಂಡರೂ ಖಂಡಿತವಾಗಿಯೂ ಶಿಕ್ಷೆ ಅನುಭವಿಸಬೇಕಾಗುತ್ತದೆ. ಹಾಗೆಂದ ಮಾತ್ರಕ್ಕೆ ಮಾದಕ ವ್ಯಸನಕ್ಕೆ ತುತ್ತಾದರೆ ಅದರಿಂದ ಆಚೆ ಬರಲು ಕೂಡ ಮಾರ್ಗವಿದೆ ಎಂಬ ಕಾರಣಕ್ಕೆ ಆ ಮಟ್ಟಕ್ಕೆ ಇಳಿಯಬಾರದು ಎಂದು ಕಿವಿ ಮಾತು ಹೇಳಿದರು.
ರಸ್ತೆ ಸುರಕ್ಷತೆ ಮತ್ತು ಸಂಚಾರಿ ನಿಯಮ: ಪ್ರಸ್ತುತ ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣ ಹೆಚ್ಚಾಗುತ್ತಿದೆ. ಯಾವುದೇ ರೀತಿಯ ವಾಹನ ಸವಾರ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದರೆ ಆತನ ವಾಹನ ಚಾಲನಾ ಪರವಾನಗಿಯನ್ನು ರದ್ದುಗೊಳಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ ಯುವ ಜನಾಂಗ ಎಚ್ಚರಿಕೆಯಿಂದ ವಾಹನ ಚಲಾವಣೆ ಮಾಡಬೇಕು. ಈ ನಿಟ್ಟಿನಲ್ಲಿ ಸಂಚಾರಿ ನಿಯಮ ಕುರಿತಾದ ಶಿಕ್ಷಣ, ಕಾನೂನಿನ ಅರಿವು ಮತ್ತು ಉತ್ತಮ ರಸ್ತೆಗಳು, ರಸ್ತೆ ಸುರಕ್ಷತೆಗೆ ಇರುವಂತಹ ಮೂಲಭೂತ ಅವಶ್ಯಕತೆಗಳು ಎಂದು ಹೇಳಿದರು.
ರಸ್ತೆ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕೆ ಮೂರು ಅಂಶಗಳು ಮುಖ್ಯವಾಗುತ್ತವೆ. ಶಿಕ್ಷಣ, ಕಡ್ಡಾಯ ಜಾರಿ ಹಾಗೂ ಎಂಜಿನಿಯರಿಂಗ್ನ ಅಗತ್ಯವಿದೆ. ರಸ್ತೆ ಸುರಕ್ಷತೆ ಮತ್ತು ಸುಗಮ ಸಂಚಾರದ ಕುರಿತು ಸಾರ್ವಜನಿಕರಲ್ಲಿ ಶಿಕ್ಷಣ ನೀಡುವುದು, ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ಕಟ್ಟುನಿಟ್ಟಿನ ಕಾನೂನು ಜಾರಿ ಹಾಗೂ ಉತ್ತಮ ಗುಣಮಟ್ಟದ ರಸ್ತೆಗಳು ಅತ್ಯಂತ ಅಗತ್ಯವಾಗಿದೆ ಎಂದು ವಿವರಿಸಿದರು.
ಮಾನವ ಹಕ್ಕುಗಳ ಬಗ್ಗೆ ಅರಿವು ವಿಷಯದ ಕುರಿತು ನಗರದ ಖ್ಯಾತ ನ್ಯಾಯವಾದಿ ಯು. ಉದಯಾನಂದ, ಮಾನವೀಯತೆ ಎನ್ನುವುದು ಕೇವಲ ತೋರ್ಪಡಿಕೆಗೆ ಮಾತ್ರವೇ ಇರದೇ ವಾಸ್ತವದಲ್ಲಿ ಅದನ್ನು ಕಾರ್ಯರೂಪಕ್ಕೆ ತರಬೇಕಿದೆ. ಸಮಾಜವನ್ನು ಮಾನವೀಯ ದೃಷ್ಟಿಕೋನದಿಂದ ನೋಡಿದಾಗ ನಾಗರಿಕ ಸಮಾಜದ ಅವಶ್ಯಕತೆಗಳನ್ನು ಪೂರೈಸಲು ಸಾಧ್ಯವಾಗುತ್ತದೆ. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುದು ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಇರುವ ಪ್ರಮುಖ ಅಸ್ತ್ರವಾಗಿದೆ. ಸಮಾಜದಲ್ಲಿ ಅವಶ್ಯಕತೆ ಇರುವವರಿಗೆ ಸಹಾಯ ಹಸ್ತ ಚಾಚುವುದೇ ನಿಜವಾದ ಮಾನವೀಯತೆ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಕೇಂದ್ರ ವಿದ್ಯುತ್ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಮತ್ತು ಡೆಕ್ಕನ್ ಹೆರಾಲ್ಡ್ ಚೇಂಜ್ ಮೇಕರ್ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದ ಸರ್ವಜ್ಞ ಎಜುಟೆಕ್ ಪ್ರೈವೇಟ್ ಲಿಮಿಟೆಡ್ನ ಮುಖ್ಯ ಕಾರ್ಯನಿರ್ವಾಹಕ ಶ್ರೀನಿಧಿ ಆರ್. ಎಸ್. ಅವರನ್ನು ಸನ್ಮಾನಿಸಲಾಯಿತು.
ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದ. ಕ. ಜಿಲ್ಲಾ ವಿಭಾಗದ ಮಾನವ ಹಕ್ಕುಗಳ ಭಾರತೀಯ ಮಹಾ ಮೈತ್ರಿಯ ಅಧ್ಯಕ್ಷ ಬಿ. ಶೇಷಪ್ಪ ಬಂಬಿಲ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವವಿದ್ಯಾನಿಲಯ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ. ಸುರೇಶ್, ಡಾ. ಗಾಯತ್ರಿ ಎನ್. ಸೇರಿದಂತೆ ನಾನಾ ವಿಭಾಗಗಳ ಉಪನ್ಯಾಸಕರು ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ