ಸರೋವರ ಕ್ಷೇತ್ರ ಅನಂತಪುರದಲ್ಲಿ ಪ್ರತ್ಯಕ್ಷವಾಯ್ತು ಮೂರನೇ 'ಬಬಿಯಾ'; ಭಕ್ತರ ನಂಬಿಕೆ ನಿಜವಾಯ್ತು

Upayuktha
0


ಕುಂಬಳೆ: ಕಾಸರಗೋಡಿನ ಸರೋವರ ಕ್ಷೇತ್ರ ಅನಂತಪುರದ ಕೆರೆಯಲ್ಲಿ ಇದೀಗ ಮತ್ತೊಂದು ಮೊಸಳೆ ಕಾಣಸಿಕ್ಕಿದೆ. ಭಕ್ತರ ನಂಬಿಕೆಯಂತೆ ಮೊಸಳೆ ಪ್ರತ್ಯಕ್ಷವಾಗಿರುವುದು ಆಸ್ತಿಕರ ನಂಬಿಕೆಯನ್ನು ಮತ್ತಷ್ಟು ಬಲಗೊಳಿಸಿದೆ.


ದೇವರ ಮೊಸಳೆ ಎಂದೇ ಖ್ಯಾತವಾಗಿದ್ದ 'ಬಬಿಯಾ' ಹೆಸರಿನ ಮೊಸಳೆ ಕಳೆದ ವರ್ಷ ವೃದ್ಧಾಪ್ಯದ ಕಾರಣದಿಂದ ಅಸುನೀಗಿತ್ತು. ಅದು ಜಗತ್ತಿನಾದ್ಯಂತ ಬಹಳ ದೊಡ್ಡ ಸುದ್ದಿಯೂ ಆಗಿತ್ತು. ಆಗಲೂ ಕ್ಷೇತ್ರದ ಕಾರಣಿಕದ ಬಗ್ಗೆ ಅಪಾರ ನಂಬಿಕೆಯಿರುವ ಭಕ್ತರು, ಮುಂದಿನ ದಿನಗಳಲ್ಲಿ ಮತ್ತೊಂದು ದೇವರ ಮೊಸಳೆ ಇಲ್ಲಿ ಕಾಣಿಸಿಕೊಳ್ಳಲಿದೆ ಎಂಬ ದೃಢ ನಂಬಿಕೆ ವ್ಯಕ್ತಪಡಿಸುತ್ತಿದ್ದರು. ಆ ನಂಬಿಕೆಯನ್ನು ನಿಜಗೊಳಿಸಿದೆ ಈಗ ಕಾಣಿಸಿಕೊಂಡಿರುವ ಮೂರನೇ 'ಬಬಿಯಾ'.


ಸ್ಥಳೀಯ ಸುದ್ದಿ ಮಾಧ್ಯಮಗಳಲ್ಲಿ ಇಂದು ಬೆಳಗ್ಗೆಯಿಂದಲೇ ಈ ಬಗ್ಗೆ ವದಂತಿ ರೂಪದ ವರದಿಗಳು ಬರಲಾರಂಭಿಸಿದ್ದವು. ಆದರೆ ಇಂದು ಸಂಜೆಯ ವರೆಗೆ ಮೊಸಳೆ ಮೂರ್ನಾಲ್ಕು ಬಾರಿ ಕಾಣಿಸಿಕೊಂಡಿದೆ ಎಂದು ದೇವಸ್ಥಾನದ ಮೂಲಗಳು ಖಚಿತಪಡಿಸಿವೆ. ಆದರೆ ಹಿಂದಿನ ಬಬಿಯಾನಂತೆ ಈ ಮೊಸಳೆ ಇಂದು ದೇವರ ಪ್ರಸಾದವನ್ನು ಸೇವಿಸಿಲ್ಲ ಮತ್ತು ಅರ್ಚಕರು ಕರೆದಾಗ ಸ್ಪಂದಿಸಿಲ್ಲ.


ಬ್ರಿಟಿಷರ ಆಡಳಿತವಿದ್ದಾಗ ಕ್ಷೇತ್ರದ ಮೊಸಳೆಯನ್ನು ಬ್ರಿಟಿಷ್ ಅಧಿಕಾರಿಯೊಬ್ಬ ಗುಂಡಿಟ್ಟು ಸಾಯಿಸಿದ ಘಟನೆ ಹಾಗೂ ಅನಂತರ ಕೆಲವೇ ದಿನಗಳಲ್ಲಿ ಎರಡನೇ ಬಬಿಯಾ ಕಾಣಿಸಿಕೊಂಡಿದ್ದು ಇತಿಹಾಸ. ಆ ಮೊಸಳೆ 75 ವರ್ಷಗಳ ಕಾಲ ಪೂಜಿಸಲ್ಪಟ್ಟಿತ್ತು. ಆದರೆ, 2022 ರ ಅಕ್ಟೋಬರ್ 9 ರಂದು ಇದು ಮೃತಪಟ್ಟಿತ್ತು.



ಬಬಿಯಾ ಮೃತಪಟ್ಟು ಒಂದು ವರ್ಷ ಒಂದು ತಿಂಗಳ ಬಳಿಕ ಸದೃಢ ಮೊಸಳೆಯೊಂದು ಪ್ರತ್ಯಕ್ಷವಾಗಿದೆ. ಇದು ಭಕ್ತರಲ್ಲಿ ಭಾರೀ ಅಚ್ಚರಿಗೆ ಕಾರಣವಾಗಿದೆ.


ಎರಡನೇ ಬಬಿಯಾ ಮೃತಪಟ್ಟು ಒಂದು ವರ್ಷದ ಬಳಿಕ ಮೂರನೇ ಬಬಿಯಾ ಎಂದು ಕರೆಯಬಹುದಾದ ಮೊಸಳೆ ಕಾಣಿಸಿಕೊಂಡಿರುವುದು ಸೋಜಿಗವೇ ಸರಿ. ಮನುಷ್ಯನ ತಾರ್ಕಿಕ ಬುದ್ಧಿ ಯಾವ ರೀತಿ ಯೋಚಿಸಿದರೂ ಅದನ್ನು ಮೀರಿ ಅನಂತಪುರ ಕ್ಷೇತ್ರದಲ್ಲಿ ಮೊಸಳೆ ಪ್ರತ್ಯಕ್ಷವಾಗಿರುವುದಂತೂ ನಿಜವಾಗಿದೆ.


ಪ್ರಶಾಂತ ಪರಿಸರದಲ್ಲಿರುವ ಅನುಪಮ ಸೌಂದರ್ಯದ ಅನಂತಪುರ ಕ್ಷೇತ್ರಕ್ಕೆ ಅನಂತಪದ್ಮನಾಭ ಸ್ವಾಮಿಯ ದರ್ಶನದ ಜತೆಗೆ ಮೊಸಳೆಯ ದರ್ಶನಕ್ಕೂ ಭಕ್ತರು ದಕ್ಷಿಣ ಭಾರತದ ಎಲ್ಲೆಡೆಯಿಂದ ಬರುತ್ತಿದ್ದರು.



ಈ ಬಾರಿಯ ದೀಪಾವಳಿಗೆ ಈ ಪವಾಡಸದೃಶ ಘಟನೆ ಆಸ್ತಿಕ ಭಕ್ತರ ಸಂಭ್ರಮವನ್ನು ಹೆಚ್ಚಿಸಿದೆ. ಕ್ಷೇತ್ರದ ದಿವ್ಯ ಸಾನಿಧ್ಯವನ್ನು ಮತ್ತೊಮ್ಮೆ ಜಗತ್ತಿನೆದುರು ತೆರೆದಿಟ್ಟಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top