ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಆಚರಣೆ

Upayuktha
0



ಉಡುಪಿ : ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಆಚರಣಾ ಸಮಿತಿ ಉಡುಪಿ ಜಿಲ್ಲೆ ಇವರ ವತಿಯಿಂದ 68 ನೇ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮವು ಇಂದು ನಗರದ ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ  ಆರ್ ಹೆಬ್ಬಾಳ್ಕರ್  ಧ್ವಜಾರೋಹಣ ನೆರವೇರಿಸಿ, ಕರ್ನಾಟಕ ರಾಜ್ಯೋತ್ಸವದ ಸಂದೇಶ ನೀಡಿದರು. 



ಕರ್ನಾಟಕ ಎಂದು ನಾಮಕರಣ ಮಾಡಿ 50 ವರ್ಷ ಪೂರೈಸಿರುವ ಈ ಸಂದರ್ಭದಲ್ಲಿ ತಮ್ಮೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಕನ್ನಡದ ಮೊದಲ ಕೃತಿಯಾದ ಕವಿರಾಜ ಮಾರ್ಗದಲ್ಲಿ ಕನ್ನಡನಾಡು ಕಾವೇರಿಯಿಂದ ಗೋದಾವರಿ ನದಿಯವರೆಗೂ ತನ್ನ ಮೇರೆಗಳನ್ನು ಹೊಂದಿತ್ತು. ಎರಡು ಸಾವಿರ ವರ್ಷಗಳಿಗೂ ಹೆಚ್ಚು ಇತಿಹಾಸ ಹೊಂದಿರುವ ಕನ್ನಡ ನಾಡಿನ ಪರಿಪೂರ್ಣ ಪರಿಕಲ್ಪನೆ ಸಕಾರಾತ್ಮಕವಾಗಿದ್ದು, 1956 ನವೆಂಬರ್ 01 ರಂದು ಭಾಷಾವಾರು ಪ್ರಾಂತ್ಯಗಳು ರಚನೆಯೊಂದಿಗೆ ವಿಶಾಲ ಮೈಸೂರು ರಾಜ್ಯ ಉದಯವಾಯಿತು. 




ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸುರವರ ಪ್ರಯತ್ನದ ಫಲವಾಗಿ 1973 ರ ನವೆಂಬರ್ 01 ರಂದು ಕರ್ನಾಟಕ ಎಂದು ಮರು ನಾಮಕರಣಗೊಳ್ಳುವುದರೊಂದಿಗೆ ಈ ನಮ್ಮ ನಾಡು ಕನ್ನಡಿಗರನ್ನು ಭಾವನಾತ್ಮಕವಾಗಿ ಬೆಸೆದಿರುವುದು 50 ವಸಂತಗಳಿಗೆ ಸಾಕ್ಷಿಯಾಗಿದೆ.  ಕನ್ನಡ ನಾಡು ಭೌಗೋಳಿಕವಾಗಿ ಬಹುತ್ವವನ್ನು ಹೊಂದಿದ್ದರೂ, ಸಾಮುದಾಯಿಕವಾಗಿ ಐಕ್ಯತೆ ಉಳಿಸಿಕೊಂಡು ಬಂದಿದೆ. ಕನ್ನಡ ಭಾಷೆಯ ಮಾಧುರ್ಯವನ್ನು ಅನೇಕ ವಚನಕಾರರು, ದಾಸರು, ಕವಿ ಪುಂಗವರು, ಹಾಡಿ ಹೊಗಳಿದ್ದಾರೆ. 




ಕನ್ನಡ ನುಡಿಯನ್ನು ಕಟ್ಟುವ, ಉಳಿಸಿ ಬೆಳೆಸುವ ಕಾಯಕದಲ್ಲಿಯೂ ಜಿಲ್ಲೆಯ ಕೊಡುಗೆ ಅಪಾರ. ನಾಡು ಹರಿದು ಹಂಚಿ ಹೋಗಿದ್ದ ಅಂದಿನ ದಿನಗಳಲ್ಲಿ ಕನ್ನಡ ನಾಡಿನಾದ್ಯಂತ ಬೇರೆ ಬೇರೆ ಭಾಗಗಳಿಗೆ ಹೋಗಿ ಬೆನಗಲ್ ರಾಮರಾಯರು, ಕೋಟ ಶಿವರಾಮ ಕಾರಂತರು, ಪಂಜೆ ಮಂಗೇಶರಾಯರು ಸೇರಿದಂತೆ ಮತ್ತಿತರ ಹಿರಿಯರು ಕನ್ನಡ ಕಹಳೆಯನ್ನು ರಾಜ್ಯಾದ್ಯಂತ ಮೊಳಗಿಸಿದರು.  ಭಾರತೀಯ ಭಾಷೆಗಳಲ್ಲಿ ಪ್ರಕಟವಾಗಿ ರಾಷ್ಟ್ರೀಯ ಘನತೆಯನ್ನು ಎತ್ತಿ ಹಿಡಿಯುವ, ಅಂತಾರಾಷ್ಟ್ರೀಯ ಗುಣಮಟ್ಟದ ಶ್ರೇಷ್ಠ ಕೃತಿಗೆ 1965 ರಿಂದ 2022 ರ ವರೆಗೆ ಪ್ರಧಾನ ಮಾಡಲಾಗಿದ್ದ 62 ಜ್ಞಾನಪೀಠ ಪ್ರಶಸ್ತಿಗಳಲ್ಲಿ ಕನ್ನಡದ ಸೃಜನಶೀಲ ಸಾಹಿತ್ಯ ರಚಿಸಿದ ಎಂಟು ಸಾಹಿತಿಗಳು ಈ ಗೌರವಕ್ಕೆ ಪಾತ್ರರಾಗಿದ್ದು, ಪ್ರಶಸ್ತಿ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಕನ್ನಡವಿದೆ.




ಕನ್ನಡ ಭಾಷೆಯನ್ನು ಉಳಿಸುವ ಮತ್ತು ಬೆಳೆಸುವ ಜವಾಬ್ದಾರಿ ನಾಡಿನ ಯುವ ಸಮುದಾಯದ ಮೇಲಿದೆ. ಭಾಷೆ ನವ ಚೈತನ್ಯವನ್ನು ಮೂಡಿಸಿಕೊಂಡು ಬೆಳೆಯಬೇಕಾದರೆ ಅದು ಯುವ ಸಮುದಾಯದಿಂದ ಮಾತ್ರ ಸಾಧ್ಯ. ಯುವ ಜನರು ತಮ್ಮ ದೈನಂದಿನ ಜೀವನದಲ್ಲಿ ಕನ್ನಡ ಬಳಸುವುದರಿಂದ ಮಾತ್ರ ಸಾಧ್ಯ. ವಿವಿಧ ಸಂಸ್ಕೃತಿ, ಭಾಷೆ ವೈವಿಧ್ಯತೆಯನ್ನು ಹೊಂದಿರುವ ನಮ್ಮ ದೇಶದಲ್ಲಿ ಪ್ರಾಂತ್ಯ ಭಾಷೆಗಳಿಗೆ ಆದ್ಯತೆ ನೀಡಬೇಕು ಎಂಬ ಕನಸು ಮಹಾತ್ಮ ಗಾಂಧೀಜಿಯವರದ್ದಾಗಿತ್ತು. ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯಬೇಕು, ಸ್ಥಳೀಯ ಭಾಷೆಯ ಮೂಲಕ ಆಡಳಿತ ನಡೆಸಬೇಕೆಂಬುದು ಅವರ ಆಶಯವೂ ಆಗಿತ್ತು. ಅದರಂತೆ ನಮ್ಮ ಸರ್ಕಾರ ರಾಜ್ಯದ ಆಡಳಿತ ಹಾಗೂ ಶಿಕ್ಷಣವನ್ನು ಕನ್ನಡದಲ್ಲಿ ಪರಿಪೂರ್ಣವಾಗಿ ಅನುಷ್ಠಾನಕ್ಕೆ ತರಲು ಮುಂದಾಗಿದೆ ಎಂದರು.



      

 ಕನ್ನಡ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದ ಮೆರವಣಿಗೆಯಲ್ಲಿ ಭಾಗವಹಿಸಿದ ಸ್ಥಬ್ದಚಿತ್ರಗಳಲ್ಲಿ ಕರ್ನಾಟಕ ರಾಜ್ಯದ ಅರಣ್ಯ ಇಲಾಖೆ ಪ್ರಥಮ ಸ್ಥಾನ, ಕೃಷಿ ಇಲಾಖೆ ದ್ವಿತೀಯ ಸ್ಥಾನ ಪಡೆದಿದೆ. ಮೆರವಣಿಗೆಯಲ್ಲಿ ಭಾಗವಹಿಸಿದ ಕಾಲೇಜು ವಿದ್ಯಾರ್ಥಿಗಳ ತಂಡದಲ್ಲಿ ಉಡುಪಿಯ ಬಾಲಕಿಯರ ಪದವಿ ಪೂರ್ವ ಕಾಲೇಜು ಪ್ರಥಮ ಸ್ಥಾನ, ಒಳಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆ ಎರಡನೇ ಸ್ಥಾನ ಮತ್ತು ಉಡುಪಿಯ ಸರಕಾರಿ ಪ್ರೌಢಶಾಲೆ (ಬೋರ್ಡ್ ಹೈಸ್ಕೂಲ್) ತೃತೀಯ ಸ್ಥಾನ ಪಡೆದಿದೆ. 




  ಪಥ ಸಂಚಲನದಲ್ಲಿ ವಿವಿಧ ಇಲಾಖೆಯ ಹಾಗೂ ಶಾಲಾ-ಕಾಲೇಜುಗಳ 14 ತುಕಡಿಗಳು ಭಾಗವಹಿಸಿದ್ದು, ಕಾಲೇಜು ವಿಭಾಗದ ಎನ್.ಸಿ.ಸಿ ನೋವೆಲ್ ವಿಭಾಗದ ಪೂರ್ಣಪ್ರಜ್ಞ ಕಾಲೇಜು ಮೊದಲನೇ ಸ್ಥಾನ, ಎನ್.ಸಿ.ಸಿ ನೋವೆಲ್ ವಿಭಾಗದ ಎಂ.ಜಿಂ.ಎಂ ಕಾಲೇಜು ಎರಡನೇ ಸ್ಥಾನ,  ಎನ್.ಸಿ.ಸಿ ಆರ್ಮಿ ವಿಭಾಗದ ಪೂರ್ಣಪ್ರಜ್ಞ ಕಾಲೇಜು ಮೂರನೇ ಸ್ಥಾನ ಪಡೆದಿದೆ. ಪ್ರಾಥಮಿಕ ಹೈಸ್ಕೂಲ್ ವಿಭಾಗದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಸಂತೆಕಟ್ಟೆ ಕಳತ್ತೂರು ಪ್ರಥಮ ಸ್ಥಾನ, ಸರಕಾರಿ ಪ್ರೌಢಶಾಲೆ ಆವರ್ಸೆ ಎರಡನೇ ಸ್ಥಾನ, ಸೈಂಟ್ ಸಿಸಿಲೀಸ್ ಪ್ರೌಢಶಾಲೆ ಉಡುಪಿ ಮೂರನೇ ಸ್ಥಾನ ಪಡೆದಿದೆ. 




ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸರಕಾರಿ ಪ್ರೌಢಶಾಲೆ ಒಳಕಾಡು ಮೊದಲನೇ ಸ್ಥಾನ, ನಾರಾಯಣ ಗುರು ಆಂಗ್ಲಮಾಧ್ಯಮ ಶಾಲೆ ಎರಡನೇ ಸ್ಥಾನ ತಮ್ಮದಾಗಿಸಿಕೊಂಡಿದೆ. ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 29 ಮಂದಿಗೆ ಹಾಗೂ 5 ಸಂಘ-ಸಂಸ್ಥೆಗಳಿಗೆ ಸನ್ಮಾನಿಸಿ, ಗೌರವಿಸಲಾಯಿತು.  ಕಾರ್ಯಕ್ರಮಕ್ಕೂ ಮುನ್ನ ಬೋರ್ಡ್ ಹೈಸ್ಕೂಲ್ ನಿಂದ ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದವರೆಗೆ ನಡೆದ ಭುವನೇಶ್ವರಿ ದೇವಿಯ ಮೆರವಣಿಗೆಗೆ ಬೋರ್ಡ್ ಹೈಸ್ಕೂಲ್ ಆವರಣದಲ್ಲಿ  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ  ಆರ್  ಹೆಬ್ಬಾಳ್ಕರ್ ಚಾಲನೆ ನೀಡಿದರು. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 





Post a Comment

0 Comments
Post a Comment (0)
To Top