ಕಾಸರಗೋಡು: ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗವು ತನ್ನ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ 'ಕಾಸರಗೋಡಿನ ಸಾಂಸ್ಕೃತಿಕ ವೈವಿಧ್ಯ' ಕುರಿತು 2023ರ ನವೆಂಬರ್ 14 ರಿಂದ 16 ರ ತನಕ ಮೂರು ದಿನಗಳ ಅಂತಾರಾಷ್ಟ್ರೀಯ ಮಟ್ಟದ ಸಮಾವೇಶವನ್ನು ಆಯೋಜಿಸುತ್ತಿದೆ.
ಕೇರಳ ಸರ್ಕಾರದ ಕಾಲೇಜು ಶಿಕ್ಷಣ ಇಲಾಖೆಯ ಪ್ರಾಯೋಜಕತ್ವದಲ್ಲಿ ನಡೆಯುವ ಈ ಸಮಾವೇಶದಲ್ಲಿ ಅಂತಾರಾಷ್ಟ್ರೀಯ ಮಟ್ಟದ ವಿಷಯ ತಜ್ಞರು ಭಾಗವಹಿಸಲಿದ್ದಾರೆ. ನವದೆಹಲಿಯ ಅಮೇರಿಕನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಸ್ಟಡೀಸ್‌ನ ಡಾ.ಪುರುಷೋತ್ತಮ ಬಿಳಿಮಲೆ ಉದ್ಘಾಟಿಸಲಿದ್ದಾರೆ. ಕಾಲೇಜು ಪ್ರಾಂಶುಪಾಲ ಡಾ.ಅನಿಲ್ ಕುಮಾರ್ ವಿ.ಎಸ್. ಅಧ್ಯಕ್ಷತೆ ವಹಿಸಲಿದ್ದಾರೆ.
ವಿವಿಧ ಗೋಷ್ಠಿಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ರಷ್ಯಾದ ಮಾಸ್ಕೋನ ಇನ್ಸ್ಟಿಟ್ಯೂಟ್ ಆಫ್ ಎಥ್ನಾಲಜಿ ಮತ್ತು ಆಂಥ್ರೊಪಾಲಜಿ ರಷ್ಯನ್ ಅಕಾಡೆಮಿ ಆಫ್ ಸೈನ್ಸ್ ನ ಡಾ. ಸ್ವೆಟ್ಲಾನಾ ರೈಝಕೋವಾ, ನವದೆಹಲಿಯ ಡಾ.ಪುರುಷೋತ್ತಮ ಬಿಳಿಮಲೆ, ತೆಲಂಗಾಣದ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಡಾ. ಸುಜಿತ್ ಕುಮಾರ್ ಪರಾಯಿಲ್, ಕಲಬುರ್ಗಿ ಕರ್ನಾಟಕ ಕೇಂದ್ರೀಯ ವಿ.ವಿ.ಯ ಡಾ.ಬಸವರಾಜ ಕೊಡಗುಂಟಿ, ಬೆಂಗಳೂರು ರೇವಾ ವಿ.ವಿ.ಯ ಡಾ.ವಿದ್ಯಾ ಕುಮಾರಿ ಶಿಮ್ಲಡ್ಕ, ಮಂಗಳೂರು ವಿ.ವಿ.ಯ ಡಾ. ಧನಂಜಯ ಕುಂಬ್ಳೆ, ಕರ್ನಾಟಕ ಜಾನಪದ ವಿ.ವಿ.ಯ ಡಾ.ಕಮಲಾಕ್ಷ ಕೆ. ಕಣ್ಣೂರು ವಿ.ವಿ.ಯ ಡಾ. ಕಣ್ಣನ್ ಸಿ., ಡಾ. ಮಹೇಶ್ವರಿ ಯು., ಮಂಜೇಶ್ವರದ ಪ್ರೊ. ಸದಾಶಿವ ಬಿ. ಕಾಸರಗೋಡಿನ ಸಾಂಸ್ಕೃತಿಕ ವೈವಿಧ್ಯಗಳ ಕುರಿತು ಮುಖ್ಯ ಪ್ರಬಂಧಗಳನ್ನು ಮಂಡಿಸಲಿದ್ದಾರೆ.
ದೇಶದ ವಿವಿಧ ಕಡೆಗಳಿಂದ ಆಯ್ಕೆಯಾದ 62 ಮಂದಿ ಸಂಶೋಧಕರು ಕಾಸರಗೋಡಿನ ಭಾಷೆ, ಸಾಹಿತ್ಯ, ಶಿಲ್ಪ, ಮಾಧ್ಯಮ, ಜಾನಪದ, ಪ್ರದರ್ಶಕ ಕಲೆಗಳ ಕುರಿತು ಸಮಾನಾಂತರ ವೇದಿಕೆಗಳಲ್ಲಿ ಮಧ್ಯಾಹ್ನ 3.30ರ ನಂತರ ಆಹ್ವಾನಿತ ಪ್ರಬಂಧಗಳನ್ನು ಮಂಡಿಸಲಿದ್ದಾರೆ. ತಜ್ಞರ ಸಮಿತಿ ಆಯ್ಕೆ ಮಾಡಿದ ಅತ್ಯುತ್ತಮ ಸಂಶೋಧನಾ ಪ್ರಬಂಧಗಳನ್ನು ನಡಾವಳಿ ರೂಪದಲ್ಲಿ ಅಥವಾ ಪುಸ್ತಕ ರೂಪದಲ್ಲಿ ಪ್ರಕಟಿಸಲು ಸಮಾವೇಶ ಸಮಿತಿ ನಿರ್ಧರಿಸಿದೆ. ಸಮಾವೇಶದಲ್ಲಿ ಅತ್ಯುತ್ತಮ ಸಂಶೋಧನಾ ಪ್ರಬಂಧಕ್ಕೆ ಇರುವ ಪುರಸ್ಕಾರವನ್ನು ವಿತರಿಸಲಾಗುತ್ತದೆ.
ಪ್ರಾಚೀನ ತುಳು ಕಾವ್ಯದ ಬಗ್ಗೆ ಮಂಗಳೂರು ವಿ.ವಿ.ಯ ಶ್ರೀವಾಣಿ ಕಾಕುಂಜೆ, ತಿರುವಾದಿರ ಬಗ್ಗೆ ಕುಂಬ್ಳೆ ನಾಟ್ಯ ವಿದ್ಯಾ ನಿಲಯದ ಡಾ.ವಿದ್ಯಾಲಕ್ಷ್ಮಿ, ಯಕ್ಷಗಾನ ಬೊಂಬೆಯಾಟದ ಬಗ್ಗೆ ಕಾಸರಗೋಡು ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘ (ರಿ) ದ ಕೆ.ವಿ. ರಮೇಶ್ ಪ್ರಾತ್ಯಕ್ಷಿಕೆ ನೀಡಲಿದ್ದಾರೆ. ಕಿರುಚಿತ್ರ: ದೈವಾರಾಧನೆ: ಆರಾಧನಾ ರಂಗಭೂಮಿ ಎಂಬ ಕಿರುಚಿತ್ರ ಪ್ರದರ್ಶನವೂ ನಡೆಯಲಿದೆ.
ಸಮಾವೇಶ ನಡೆಯುವ ಮೂರು ದಿನಗಳಲ್ಲೂ ಅಂತರ ರಾಷ್ಟ್ರೀಯ ಕಲಾವಿದರಾದ ಪಿ.ಎಸ್. ಪುಣಿಂಚಿತ್ತಾಯ, ನವೀನ್ ಕುಮಾರ್ ಪುತ್ತೂರು, ರಾಜೇಶ್ ಬಿ. ಆಚಾರ್ಯ ಕೆ., ಕರಣ್ ಆಚಾರ್ಯ, ಹಾಗೂ ಸ್ಥಳೀಯ ಕಲಾವಿದರಾದ ಡಾ.ಎ.ಎನ್. ಮನೋಹರನ್, ನೀರಜ್ ಹರಿ, ರಚನಾ ಫಡ್ಕೆ ಅವರ 'ಪರಂಪರೆಯ ಪುನರ್ಮಿಲನ' ಎಂಬ ಶೀರ್ಷಿಕೆಯ ವರ್ಣಚಿತ್ರ ಪ್ರದರ್ಶನ ಜರಗಲಿದೆ. ಕರಕುಶಲ ವಸ್ತು, ಅಪರೂಪದ ಪುಸ್ತಕ, ಛಾಯಾಚಿತ್ರ, ತಾಳೆ ಎಲೆಯ ಹಸ್ತಪ್ರತಿಗಳ ಪ್ರದಶನವೂ ನಡೆಯಲಿದೆ. ಸಾಂಸ್ಕೃತಿಕ ಸಂಗಮದಲ್ಲಿ ರಂಗೋಲಿ, ಪೂಕಳಂ, ಗೂಡುದೀಪ, ಎಲೆ ಕಲೆಗಳ ಪ್ರದರ್ಶನವಿದೆ.
ಪ್ರಾಂಶುಪಾಲರಾದ ಡಾ.ಅನಿಲ್ ಕುಮಾರ್ ವಿ.ಎಸ್. ಅವರ ನೇತೃತ್ವದ ಸಮಾವೇಶ ಸಮಿತಿಯ ವಿವಿಧ ವಿಭಾಗಗಳಲ್ಲಿ ಡಾ. ಜಿಜೋ ಪಿ. ಉಲಹನ್ನನ್, ಪ್ರೊ.ಸುಜಾತ , ಡಾ.ರತ್ನಾಕರ ಎಂ, ಡಾ. ರಾಧಾಕೃಷ್ಣ ಎನ್.ಬೆಳ್ಳೂರು, ಡಾ.ಶ್ರೀಧರ ಎನ್., ಡಾ.ಸವಿತ ಬಿ., ಡಾ. ವೇದಾವತಿ ಎಸ್., ಡಾ.ಆಶಾಲತ ಸಿ.ಕೆ., ಪ್ರೊ.ಲಕ್ಷ್ಮಿ ಕೆ. ದುಡಿಯುತ್ತಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಪ್ರಭಾರ ಪ್ರಾಂಶುಪಾಲರಾದ ಡಾ. ಎ. ಎಲ್. ಅನಂತಪದ್ಮನಾಭ, ವಿಭಾಗ ಮುಖ್ಯಸ್ಥರಾದ ಪ್ರೊ. ಸುಜಾತ ಎಸ್., ಮಾಧ್ಯಮ ವಿಭಾಗದ ಡಾ. ಶ್ರೀಧರ ಎನ್., ಅಂತರರಾಷ್ಟ್ರೀಯ ಸಮಾವೇಶದ ಸಂಯೋಜಕರಾದ ಡಾ. ಬಾಲಕೃಷ್ಣ ಬಿ.ಎಂ. ಹೊಸಂಗಡಿ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ