ಮಂಗಳೂರು: ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ಸಕಾಲದಲ್ಲಿ ರಕ್ತದಾನ ಮಾಡುವುದರಿಂದ ರೋಗಿಯ ಜೀವ ಉಳಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ನಿರಂತರವಾಗಿ ವರ್ಷಕ್ಕೆ ಕನಿಷ್ಠ ಎರಡು ಬಾರಿಯಾದರೂ ರಕ್ತದಾನ ಮಾಡಬೇಕು. ಹೀಗೆ ಮಾಡುವುದರಿಂದ ಸಮಾಜದಲ್ಲಿ ರಕ್ತದ ಕೊರತೆ ಉಂಟಾಗುವುದಿಲ್ಲ ಮತ್ತು ಎಲ್ಲ ಅಗತ್ಯ ರೋಗಿಗಳಿಗೆ ಸಕಾಲದಲ್ಲಿ ರಕ್ತ ದೊರೆತರೆ ರೋಗಿಯ ಜೀವ ಉಳಿಸುವಲ್ಲಿ ವೈದ್ಯರಿಗೆ ಅನುಕೂಲವಾಗಲಿದೆ. ಈ ಹಿನ್ನಲೆಯಲ್ಲಿ ಹವ್ಯಕ ಸಭಾ ಮಂಗಳೂರು, ಶ್ರೀ ಭಾರತೀ ಕಾಲೇಜು ನಂತೂರು ಮತ್ತು ಚೂಂತಾರು ಸರೋಜಿನಿ ಭಟ್ ಪ್ರತಿಷ್ಟಾನ ರಕ್ತದಾನ ಶಿಬಿರ ಆಯೋಜಿಸಿ ರಕ್ತದಾನಕ್ಕೆ ಮುಂದಾಗುವುದು ಧನಾತ್ಮಕ ಬೆಳವಣಿಗೆ ಎಂದು ಖ್ಯಾತ ವೈದ್ಯ ಡಾ|| ಸಂಪತ್ತಿಲ ಮಹಾಲಿಂಗ ಶರ್ಮಾ ಅವರು ನುಡಿದರು.
ಇಂದು (ನ.5) ನಂತೂರಿನ ಶ್ರೀಭಾರತಿ ಕಾಲೇಜು, ಚೂಂತಾರು ಪ್ರತಿಷ್ಟಾನ ಮತ್ತು ಮಂಗಳೂರು ಹವ್ಯಕ ಸಭಾ ಇದರ ಆಶ್ರಯದಲ್ಲಿ ನಗರದ ನಂತೂರಿನಲ್ಲಿರುವ ಶ್ರೀ ಭಾರತೀ ಕಾಲೇಜಿನಲ್ಲಿ ರಕ್ತದಾನ ಶಿಬಿರವು ನಡೆಯಿತು.
ಈ ಸಂದರ್ಭದಲ್ಲಿ ವೆನ್‌ಲಾಕ್ ಆಸ್ಪತ್ರೆಯ ರಕ್ತನಿಧಿಯ ಸಂಚಾಲಕ ಆಂಟೋನಿ ಅವರು ರಕ್ತದಾನದ ಮಹತ್ವದ ಬಗ್ಗೆ ವಿವರ ನೀಡಿದರು. ಪ್ರತಿ ಆರೋಗ್ಯವಂತ ಪುರುಷ 18 ವರ್ಷದ ಬಳಿಕ 65 ವರುಷದ ವರೆಗೆ ವರ್ಷದ ನಾಲ್ಕು ಬಾರಿ ರಕ್ತದಾನ ಮಾಡಬಹುದು. ದೇಹದಲ್ಲಿ ಹಿಮೋಗ್ಲೋಬಿನ್ ಅಂಶ 12ಕ್ಕಿಂತ ಜಾಸ್ತಿ ಇದ್ದು ದೇಹದ ತೂಕ 40ಕೆ.ಜಿ ಗಿಂತ ಜಾಸ್ತಿ ಇರಬೇಕು. ಮಹಿಳೆಯರ ವರ್ಷಕ್ಕೆ ಮೂರು ಬಾರಿ ರಕ್ತದಾನ ಮಾಡಬಹುದು ಎಂದು ನುಡಿದರು.
ಈ ಸಂದರ್ಭದಲ್ಲಿ ಶ್ರೀಭಾರತಿ ಕಾಲೇಜು ಇದರ ಅಧ್ಯಕ್ಷರಾದ ಗಣೇಶ ಮೋಹನ್ ಕಾಶಿಮಠ, ಹವ್ಯಕ ಸಭಾ ಮಂಗಳೂರು ಇದರ ಅಧ್ಯಕ್ಷ ರಾದ ಶ್ರೀಮತಿ ಗೀತಾ ಗಣೇಶ, ಡಾ ರವಿ, ಶ್ರೀಮತಿ ಆಶಾರವಿ, ಡಾ ಅನನ್ಯ, ಚೂಂತಾರು ಸರೋಜಿನಿ ಪ್ರತಿಷ್ಟಾನದ ಡಾ ಮುರಲಿ ಮೋಹನ್ ಚೂಂತಾರು, ವೆನ್ ಲಾಕ್ ಆಸ್ಪತ್ರೆಯ ವೈದ್ಯರಾದ ಡಾ ವಿಜಯಶ್ರೀ, ಡಾ ಶ್ರೀ ವತ್ಸ ಭಾರದ್ವಾಜ್, ಶ್ರೀ ಭಾರತೀ ಕಾಲೇಜು ಇದರ ಖಜಾಂಚಿ ಉದಯಶಂಕರ್ ನೀರ್ಪಾಜೆ, ಕಾರ್ಯದರ್ಶಿ ಶ್ರೀಕೃಷ್ಣ ನೀರಮೂಲೆ ಉಪಸ್ಥಿತರಿದ್ದರು. ವೆನ್‌ಲಾಕ್ ಆಸ್ಪತ್ರೆಯ ತಂತ್ರಜ್ಞರು ಈ ಶಿಬಿರವನ್ನು ನಡೆಸಿಕೊಟ್ಟರು. ಸುಮಾರು 18 ಮಂದಿ ರಕ್ತದಾನ ಮಾಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ