ಕೃಷಿಯಲ್ಲಿ ಐಒಟಿ, ಎಐ ಬಳಕೆಯಿಂದ ಇಳುವರಿ ಹೆಚ್ಚಿಸಬಹುದು

Upayuktha
0

ಜವಾಬ್ದಾರಿಯುತ ನೀರಿನ ಬಳಕೆಗೆ ತಂತ್ರಜ್ಞಾನದ ಸಹಯೋಗ ಅಗತ್ಯ



ಬೆಂಗಳೂರು: ಕೃಷಿಯಲ್ಲೂ ಆಧುನಿಕತೆ ಮೈಗೂಡಿಸಿಕೊಂಡು, ಐಒಟಿ, ಎಐ ಬಳಸಿದರೆ ನಿಖರ ಗೊಬ್ಬರ ಬಳಕೆ, ನೀರಿನ ಪ್ರಶಸ್ತ ಬಳಕೆ ಹಾಗೂ ಅತಿಹೆಚ್ಚಿನ ಗುಣಮಟ್ಟದ ಇಳುವರಿ ಪಡೆಯಲು ಸಾಧ್ಯ ಎಂದು ಕ್ರಾಪ್ ಆಂಡ್ ಡಿಜಿಟಲ್ ಸೊಲ್ಯೂಶನ್ಸ್‌ನ ಮುಖ್ಯಸ್ಥ ಸಾಗರ್ ಎನ್. ಪ್ರತಿಪಾದಿಸಿದರು. 



ಬೆಂಗಳೂರಿನ ಅರಮನೆ ಆವರಣದಲ್ಲಿ ನಡೆಯುತ್ತಿರುವ ಬೆಂಗಳೂರು ಟೆಕ್ ಶೃಂಗಸಭೆ 2023ರ 2ನೇ ದಿನ ನಡೆದ “ಸುಸ್ಥಿರ ಭವಿಷ್ಯಕ್ಕಾಗಿ ಟೆಕ್ ಮಧ್ಯಪ್ರವೇಶ” ವಿಷಯದ ಕುರಿತು ಸಂವಾದದಲ್ಲಿ ಸಾಗರ್ ಮಾತನಾಡಿದರು.



ಕೃಷಿಯಲ್ಲಿ ತಂತ್ರಜ್ಞಾನ ಬಳಕೆ ಎಂದಾಕ್ಷಣ ಕಾರ್ಪೊರೇಟ್ ಕಪಿಮುಷ್ಟಿಯೊಳಗೆ ರೈತರು ಸಿಲುಕಿದಂತಾಗುವುದಿಲ್ಲ. ಸಣ್ಣ ರೈತರಿಗೂ ಇದರ ಅಳವಡಿಕೆ ಸಾಧ್ಯ. ತಂತ್ರಜ್ಞಾನ ಎಲ್ಲರನ್ನೂ ಸಬಲೀಕರಣಗೊಳಿಸುತ್ತದೆ. ಬೀಜ ಬಿತ್ತನೆಗೆ ಮುನ್ನ ಅದರ ಗುಣಮಟ್ಟ ನಿರ್ಣಯಿಸಬೇಕು. ಬೀಜ ಹಾಗೂ ಮಣ್ಣಿನ ಹೊಂದಾಣಿಕೆಯ ಪರೀಕ್ಷೆಯಾಗಬೇಕು. ಬೆಳೆಗೆ ಅಗತ್ಯವಾಗಿರುವ ನಿಖರ ಪೋಷಕಾಂಶ ಹಾಗೂ ನೀರಿನ ಪ್ರಮಾಣದ ಲೆಕ್ಕಾಚಾರ ನಡೆಯಬೇಕು. ಕೊನೆಗೆ ಇಳುವರಿಯ ಗುಣಮಟ್ಟವನ್ನೂ ಅಳೆಯುವಂತಾಗಬೇಕು. ಇದೆಲ್ಲವೂ ಭಾರತದಲ್ಲಿ ಸಾಧ್ಯವಾಗಿ ಕೃಷಿಯ ಗುಣಮಟ್ಟ ಹೆಚ್ಚುವ ದಿನ ದೂರವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.



ಕೃಷಿಗೆ ತ್ಯಾಜ್ಯ ನೀರು ಬಳಕೆಯ ಚಿಂತನೆ ಬೇಕು:

ನಮ್ಮ ದೇಶದಲ್ಲಿ ಕೈಗಾರಿಕೆ ಹಾಗೂ ನಗರ ಬಳಕೆಗೆ ವಿನಿಯೋಗವಾಗುತ್ತಿರುವುದು ಶೇ.20ರಷ್ಟು ಮಾತ್ರ. ಈ ನೀರಿನ ಪೋಲು, ತ್ಯಾಜ್ಯ ಸಂಸ್ಕರಣೆಯ ಕುರಿತು ತುಂಬಾ ಗಮನಹರಿಸಲಾಗುತ್ತಿದೆ. ಆದರೆ ಶೇ.80ರಷ್ಟು ನೀರು ಬಳಸುವ ಕೃಷಿಯ ಕುರಿತು ಚಿಂತನೆ ನಡೆದಿಲ್ಲ. ಕೃಷಿಯಲ್ಲಿ ಪ್ರಶಸ್ತ ನೀರಿನ ಬಳಕೆ ಹಾಗೂ ಕೃಷಿಗೆ ಉಪಯುಕ್ತವಾಗಿರುವ ನೈಟ್ರೋಜನ್‌ಭರಿತ ತ್ಯಾಜ್ಯ ನೀರಿನ ಬಳಕೆ ಹೇಗೆ ಸಾಧ್ಯ ಎಂಬ ಕುರಿತು ನಾವು ಆಲೋಚಿಸಬೇಕಿದೆ ಎಂದು ಅವರು ಹೇಳಿದರು.



ಜವಾಬ್ದಾರಿಯುತ ನಡವಳಿಕೆಗೆ ಬೇಕು ತಂತ್ರಜ್ಞಾನ:

ನೀರಿನ ಮಿತ ಬಳಕೆಯಂತಹ ಜವಾಬ್ದಾರಿಯುತ ನಡವಳಿಕೆಗೆ ತಂತ್ರಜ್ಞಾನದ ಅಗತ್ಯವಿದೆ. ಶೇ.80ರಷ್ಟು ತ್ಯಾಜ್ಯ ನೀರು ಸಂಸ್ಕರಣೆಯಾಗದೆ ಜಲಮೂಲವನ್ನು ಸೇರುತ್ತಿದೆ. ನೀರಿನ ನಿರ್ವಹಣೆ ಹಾಗೂ ಮರುಬಳಕೆಗಾಗಿ ಡೇಟಾ ಸಂಗ್ರಹಣೆ ಆಗಬೇಕು. ಐಒಟಿ, ಡಿಜಿಟಲ್ ಟ್ವಿನ್ ಅನ್ನು ಜಲೋದ್ಯಮಕ್ಕೆ ಬಳಸಬಹುದಾಗಿದೆ ಎಂದು ವೋಲಿಯಾ ವಾಟರ್ ಟೆಕ್ನಾಲಜೀಸ್‌ನ ದಕ್ಷಿಣ ಏಷ್ಯಾ, ಆಗ್ನೇಯ ಏಷ್ಯಾ ಮತ್ತು ಒಶೇನಿಯಾದ ಪ್ರಾದೇಶಿಕ ಸಿಐಒ, ಸಂತೋಷ್ ಸುಬ್ರಮಣಿಯನ್ ಹೇಳಿದರು.



ಬ್ಲಾಕ್‌ಚೈನ್ ತಂತ್ರಜ್ಞಾನ ಅಳವಡಿಸಬೇಕು:

ನಿತ್ಯಜೀವನದಲ್ಲಿ ತಂತ್ರಜ್ಞಾನದ ಅಳವಡಿಕೆ ನಡವಳಿಕೆಯ ಸಾಲುಗೂಡುವಿಕೆ ಮುಖ್ಯ. ಎಲ್ಲರೂ ಒಟ್ಟಾಗಿ ಸಮಗ್ರ ಚಿಂತನೆ ನಡೆಸಬೇಕು. ಬ್ಲಾಕ್‌ಚೈನ್ ತಂತ್ರಜ್ಞಾನದ ಮೂಲಕ ಸುರಕ್ಷಿತ ಡೇಟಾ ಶೇಖರಣೆ ಮಾಡಬಹುದಾಗಿದೆ. ಬಳಿಕ ಅದರ ನಿರಂತರ ಮೇಲ್ವಿಚಾರಣೆಯನ್ನೂ ನಡೆಸಬೇಕು ಎಂದು ಜ್ಯೂರಿಚ್ ಯುನಿವರ್ಸಿಟಿಯ ಇನ್ಫೊರ್ಮ್ಯಾಟಿಕ್ಸ್ ವಿಭಾಗದ ಪ್ರೊ.ಕ್ಲಾಡಿಯಾ ಜೆ ಟೆಸ್ಸಾನ್ ಅವರು ಹೇಳಿದರು.

ಈ ಸಂವಾದವನ್ನು ಇನ್ಫೋಸಿಸ್‌ನ ಕ್ಲೈಮ್ಯಾಟ್ ಆಕ್ಷನ್ ಮುಖ್ಯಸ್ಥರಾದ ಗುರುಪ್ರಕಾಶ್ ಶಾಸ್ತ್ರಿ ನಿರ್ವಹಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top