ಕಲೆಯ ಪರಿಮಳ ಬೀರಿದ ಸದಭಿರುಚಿಯ ಕಾರ್ಯಕ್ರಮ-ಅಶ್ವಿತಾ ಮತ್ತು ಲಿಪಿ ರಂಗಪ್ರವೇಶ

Upayuktha
0

 


ಬೆಂಗಳೂರು: ಬೆಂಗಳೂರು ನಗರದ ಜೆ ಎಸ್ ಎಸ್ ಸಭಾಂಗಣದಲ್ಲಿ ನಿರಂತರ ಸ್ಕೂಲ್ ಆಫ್ ಡ್ಯಾನ್ಸ್ ವತಿಯಿಂದ ಸದಭಿರುಚಿಯ ಕಾರ್ಯಕ್ರಮವೊಂದು ಆಯೋಜಿತವಾಗಿತ್ತು. ಪ್ರಖ್ಯಾತ ನೃತ್ಯದಂಪತಿ ಗಳಾದ ವಿದುಷಿ ಸೌಮ್ಯ ಸೋಮಶೇಖರ್ ಹಾಗೂ ವಿದ್ವಾನ್ ಸೋಮಶೇಖರ್ ಚೂಡಾನಾಥ್ ರವರ ಶಿಷ್ಯೆಯರಾದ ಕುಮಾರಿ ಅಶ್ವಿತಾ ಎಸ್ ಮತ್ತು ಕುಮಾರಿ ಲಿಪಿ ಮಹೇಂದ್ರನ್ ಬಹಳ ಲಗುಬಗೆಯಿಂದ ತಮ್ಮ ಭರತನಾಟ್ಯ ರಂಗಪ್ರವೇಶವನ್ನು ಸಾದರಪಡಿಸಿದರು. 


ಕಲೆಯ ಸದಭಿರುಚಿಯ ಪ್ರಸ್ತುತಿ ಎದ್ದು ಕಾಣುತ್ತಿತ್ತು. ಗುರುಗಳ ಮತ್ತು ಶಿಷ್ಯೆಯರ ಶ್ಲಾಘನೀಯ ಪ್ರಯತ್ನಕ್ಕೆ ಸಂಗೀತ ದಿಗ್ಗಜರಿಂದ ಸಂಗೀತ ಸಹಕಾರ ಒದಗಿತ್ತು. ಗುರು ವಿದುಷಿ ಸೌಮ್ಯಾ ಸೋಮಶೇಖರ್ ರವರ ನಿಪುಣತೆಯ ನಟುವಾಂಗ, ವಿದ್ವಾನ್ ರಘುರಾಮ್ ರಾಜಗೋಪಾಲನ್ ರವರ ಮಾಂತ್ರಿಕ ಗಾಯನ, ಕರ್ನಾಟಕ ಕಲಾಶ್ರೀ ವಿದ್ವಾನ್ ಜಿ ಗುರುಮೂರ್ತಿಯವರ ಅದ್ಭುತ ಮೃದಂಗವಾದನ, ವಿದ್ವಾನ್ ಮಹೇಶ್ ಸ್ವಾಮಿಯವರ ಮೋಹಕ ವೇಣುವಾದನ, ವಿದ್ವಾನ್ ಗೋಪಾಲ್ ವೆಂಕಟರಮಣರವರ ಸೊಗಸಾದ ವೀಣಾವಾದನ, ವಿದ್ವಾನ್ ಡಿ ವಿ ಪ್ರಸನ್ನಕುಮಾರ್ ರವರ ವೈಶಿಷ್ಟ್ಯಪೂರ್ಣ ಬಹುವಾದ್ಯಘೋಷ ಕಾರ್ಯಕ್ರಮದ ಶೋಭೆಯನ್ನು ಶ್ರೇಷ್ಠವಾಗಿ ವರ್ಧಿಸಿತ್ತು. 


ನೃತ್ಯಗುರು ಸೋಮಶೇಖರ್ ಚೂಡಾನಾಥ್ ರವರು ಕಾರ್ಯಕ್ರಮದ ಅತ್ಯುತ್ತಮ ಸಮನ್ವಯಕಾರರಾಗಿ ಕಲಾಜಾಣ್ಮೆ ಮೆರೆದರು. ವಿದ್ವಾನ್ ಜಿ ಗುರುಮೂರ್ತಿರವರು ವಿನೂತನವಾಗಿ ರಚಿಸಿದ್ದ ಭಕ್ತಿಭಾವದ ಪುಷ್ಪಮಂಜರೀ, ರಸಿಕಪ್ರಿಯ ರಾಗದ ಜತಿಸ್ವರ, ಅಠಾಣ ರಾಗ ಮತ್ತು ಆದಿ ತಾಳಕ್ಕೆ ಅಳವಟ್ಟ ಕೃಷ್ಣಪ್ರೇಮ ತುಂಬಿದ ಪದವರ್ಣ, ಕುಮಾರಿ ಅಶ್ವಿತಾ ಪ್ರದರ್ಶಿಸಿದ ವಾರಣ ಆಯಿರಂ ಆಂಡಾಳ್ ಕನಸು, ಕುಮಾರಿ ಲಿಪಿ ಮಹೇಂದ್ರನ್ ಪ್ರಸ್ತುತಪಡಿಸಿದ ಕೀರವಾಣಿ ರಾಗದ ದೇವೀ ಸ್ತುತಿ ಹಾಗೂ ಡಾ|| ಬಾಲಮುರಳಿ ಕೃಷ್ಣರವರ ಅಮೋಘ ರಚನೆಯ ಕದನಕುತೂಹಲ ರಾಗದ ತಿಲ್ಲಾನ ಪ್ರೇಕ್ಷಕರನ್ನು ಬಹುವಾಗಿ ಮುದಗೊಳಿಸಿದವು. 



ಕಲಾತ್ಮಕ ಹಾಗೂ ಶೈಕ್ಷಣಿಕ ಎರಡೂ ಕ್ಷೇತ್ರಗಳಲ್ಲಿ ಜಾಣ್ಮೆ ಮೆರೆದಿರುವ ಈ ಇಬ್ಬರು ಭರವಸೆಯ ಕಲಾವಿದೆಯರನ್ನು ಗೌರವಾನ್ವಿತ ಅತಿಥಿಗಳಾಗಿ ಆಗಮಿಸಿದ್ದ ಐ ಸಿ ಸಿ ಆರ್ ನ ವಲಯ ನಿರ್ದೇಶಕರಾದ ಶ್ರೀ ಕೆ ಅಯ್ಯನಾರ್ ರವರು, ಪ್ರಖ್ಯಾತ ನೃತ್ಯ ಆರಾಧಕರಾದ ಶ್ರೀ ಸಾಯಿ ವೆಂಕಟೇಶ್ ರವರು ಹಾಗೂ ನೃತ್ಯಲೋಕದ ದಿಗ್ಗಜರಾದ ಆಚಾರ್ಯ ಶ್ರೀ ಪುಲಿಕೇಶಿ ಕಸ್ತೂರಿಯವರು ತುಂಬು ಹೃದಯದಿಂದ ಆಶೀರ್ವದಿಸಿದರು. ಅತಿಥಿಗಳು ಸಂದರ್ಭೋಚಿತವಾಗಿ ಮಾತನಾಡಿ ಉದಯೋನ್ಮುಖ ಕಲಾವಿದೆಯರಿಗೆ ಇನ್ನು ಮುಂದೆಯೂ ಗುರುಗಳಿಗೆ ಶರಣಾಗಿ ನಿಷ್ಠೆಯಿಂದ ಅಭ್ಯಾಸ ಕೈಗೊಳ್ಳಬೇಕು ಎಂದು ಕರೆ ನೀಡಿದರು.


ಗುರು ಸೋಮಶೇಖರ್ ರವರು ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳನ್ನು ಸಮರ್ಪಿಸಿದರು. ನೃತ್ಯ ಕಲಾವಿದೆಯರ ಪೋಷಕರಾದ ಶ್ರೀಮತಿ ಸುನೀತಾ ಸತೀಶ್ ಮತ್ತು ಶ್ರೀ ಶ್ಯಾಮ್ ಸತೀಶ್ ಹಾಗೂ ಶ್ರೀಮತಿ ತಿಲಕ ವಿ ಕೆ ಜಿ ಮತ್ತು ಶ್ರೀ ಮಹೇಂದ್ರನ್ ರವರು ಮಕ್ಕಳ ಪ್ರತಿಭೆಯನ್ನು ಕಂಡೂ ಅಭಿಮಾನದಿಂದ ಹರಸಿದರು. ಗುರುಗಳ ಕರುಣಾಪೂರ್ಣ ಅಧ್ಯಾಪನ ಕಂಡು ಧನ್ಯತಾಭಾವ ತಳೆದರು. ಕುಶಲ ತಾಂತ್ರಿಕವರ್ಗದ ಸಹಾಯದಿಂದ ಕಾರ್ಯಕ್ರಮ ಪೂರ್ಣಮಟ್ಟದ ಯಶಸ್ಸು ಕಂಡಿತು. ಕಿಕ್ಕಿರಿದ ಸಭಾಂಗಣದಲ್ಲಿ ಆತ್ಮವಿಶ್ವಾಸದಿಂದ ಭರತನಾಟ್ಯವನ್ನು ಪ್ರದರ್ಶಿಸಿದ ಕಲಾವಿದೆಯರನ್ನು ಎಲ್ಲ ಕಲಾಪ್ರೇಮಿಗಳೂ ಮನದುಂಬಿ ಹರಸಿದರು.

-ವಿದುಷಿ ರೂಪಶ್ರೀ ಮಧುಸೂದನ್ 


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top