ಮಂಗಳೂರು: ಶಿವಮೊಗ್ಗದ ಪ್ರತಿಷ್ಠಿತ ಕರ್ನಾಟಕ ಸಂಘದ ವಾರ್ಷಿಕ ಪ್ರಶಸ್ತಿ ಪ್ರಕಟವಾಗಿದ್ದು ಉ.ಕ.ಜಿಲ್ಲೆಯ ಹಳಿಯಾಳ ತಾಲೂಕಿನ ತೆರಗಾಂವ್ ಗ್ರಾಮದ ಸಾಹಿತಿ ಅಂಕಣಕಾರ ಸಂತೋಷಕುಮಾರ ಮೆಹೆಂದಳೆ ಅವರ ಅಲೆಮಾರಿಯ ಡೈರಿ ಕೃತಿಗೆ ಘೋಷಿಸಲಾಗಿದೆ.
ಕಳೆದ ಎರಡು ವರ್ಷ ಕಾಲ ವಿಶ್ವವಾಣಿ ಪತ್ರಿಕೆಗೆ ಪ್ರತಿವಾರದ ಅಂಕಣ ಬರೆಯುತ್ತಿದ್ದ ಅಂಕಣಕಾರ ಮೆಹೆಂದಳೆಯವರ ಅಲೆಮಾರಿಯ ಡೈರಿ ಭಾರತದ ಉದ್ದಕ್ಕೂ ತಾವು ಸಂಚರಿಸಿದ ಪ್ರವಾಸದ ಅನುಭವ ಕಥಾನಕವನ್ನು ಹೊಂದಿತ್ತು. ಸಂಪೂರ್ಣ ಭಾರತದ ಪ್ರವಾಸಿ ಸ್ಥಳಗಳ ಹೊರತಾಗಿ ಆಫ್ ಬೀಟ್ ಟ್ರಾವೆಲ್ ಗೈಡ್ ನಂತೆ ಪ್ರಕಟವಾಗುತ್ತಿದ್ದ ಅಂಕಣಕ್ಕೆ ಸಂತೋಷಕುಮಾರ ಮೆಹೆಂದಳೆ ತಾವು ಸ್ವತಃ: ಮಾಡಿದ್ದ ಆಫ್ ಬೀಟ್ ಪ್ರವಾಸದ ಅನುಭವನ್ನು ಪ್ರತಿವಾರ "ಅಲೆಮಾರಿಯ ಡೈರಿ" ಎನ್ನುವ ಅಂಕಣ ಮಾಲಿಕೆಯಲ್ಲಿ ಬರೆಯುತ್ತಿದ್ದರು. ಬೆಂಗಳೂರಿನ ಅತ್ಯಂತ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ 'ವಿಕ್ರಮ ಪ್ರಕಾಶನ' ಈ ಅಂಕಣ ಮಾಲಿಕೆಯ ಮೊದಲ ವರ್ಷದ ಲೇಖನಗಳ ಸಂಗ್ರಹವನ್ನು ಆಯ್ದು "ಅಲೆಮಾರಿಯ ಡೈರಿ" ಎಂದೇ ಪ್ರಕಟಿಸಲಾಗಿತ್ತು.
1930ರಲ್ಲಿ ಆರಂಭಗೊಂಡಿರುವ ಕುವೆಂಪು ಅವರು ಉದ್ಘಾಟಿಸಿದ್ದ ಅತ್ಯಂತ ಪುರಾತನ ಕನ್ನಡ ಸಂಘವಾಗಿರುವ ಶಿವಮೊಗ್ಗ ಕರ್ನಾಟಕ ಸಂಘ ಪ್ರತಿವರ್ಷ ಪ್ರವಾಸ ಸಾಹಿತ್ಯದಲ್ಲಿ ವಿಶೇಷ ಪ್ರಶಸ್ತಿಯನ್ನು ಘೋಷಿಸುತ್ತದೆ. ಕನ್ನಡ ಸಾಹಿತ್ಯ ಲೋಕದಲ್ಲಿ ಈ ಪ್ರಶಸ್ತಿಗೆ ವಿಶೇಷ ಪ್ರಾಧಾನ್ಯತೆ ಇದ್ದು ತನ್ನದೇ ಆದ ಮಹತ್ವವನ್ನು ಹೊಂದಿದೆ.
ಇದೆ ನವಂಬರ್ 26ರಂದು ಕರ್ನಾಟಕ ಸಂಘದ ಭವನದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಮತ್ತು ಪ್ರಶಸ್ತಿಯು ಹತ್ತು ಸಾವಿರ ರೂಪಾಯಿ, ಗೌರವ ಸನ್ಮಾನವನ್ನು ಒಳಗೊಂಡಿರುತ್ತದೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್ ಸುಂದರರಾಜ್ ಮತ್ತು ಗೌರವ ಕಾರ್ಯದರ್ಶಿ ಪ್ರೊ.ಎಸ್.ಆಶಾಲತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೊನ್ನೆಯಷ್ಟೇ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಸಾಹಿತ್ಯ ವಿಭಾಗದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಸಾಹಿತ್ಯಕ್ಕಾಗಿ ಉ.ಕ. ಜಿಲ್ಲಾಡಳಿತ ಮೆಹೆಂದಳೆಯವರಿಗೆ ಘೋಷಿಸಿ, ಕಾರವಾರದ ಪೊಲೀಸ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗಿತ್ತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ