ಬೆಂಗಳೂರಿನ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ 13ನೇ ಪದವಿ ಪ್ರದಾನ ಸಮಾರಂಭ

Upayuktha
0

ಮೊದಲು ಗುರಿ ನಿಗದಿ, ನಂತರ ಅದನ್ನು ತಲುಪುವ ಹಾದಿ ಖಚಿತಪಡಿಸಿಕೊಳ್ಳಿ: ಡಾ. ಬಿ.ಎಸ್ ಮೂರ್ತಿ



ಬೆಂಗಳೂರು : ಇಪ್ಪತ್ತು ವರ್ಷಗಳ ತರುವಾಯ ತಾನು ಎಲ್ಲಿರಬೇಕು, ತನ್ನ ಸಾಧನೆ ಎಷ್ಟಿರಬೇಕು ಎಂಬುದನ್ನು ನಾವು ಈಗಲೇ ಯೋಜಿಸಿಕೊಳ್ಳಬೇಕು. ಆಗ ಮಾತ್ರ ನಾವು ನಿರ್ದಿಷ್ಟ ಗುರಿ ತಲುಪಲು ಸಾಧ್ಯ. ನಮ್ಮ ನೂತನ ಪದವೀಧರರು ಮೊದಲು ಗುರಿ ಯಾವುದೆಂದು ಖಚಿತಪಡಿಸಿಕೊಂಡು ನಂತರ ಆ ಗುರಿ ತಲುಪುವ ಹಾದಿಯಲ್ಲಿ ಸಾಗಬೇಕು. ನಡುವೆ ಎದುರಾಗುವ ಸವಾಲುಗಳನ್ನು ಆತ್ಮವಿಶ್ವಾಸದಿಂದ ಸ್ವೀಕರಿಸಬೇಕು. ಧೈರ್ಯ ಹಾಗೂ ಆತ್ಮವಿಶ್ವಾಸಗಳಿದ್ದರೆ ಸವಾಲುಗಳು ಸುಲಭವಾಗಿ ಪರಿಹಾರವಾಗುತ್ತವೆ ಎಂದು ಹೈದರಾಬಾದ್‍ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್  ಟೆಕ್ನಾಲಜಿಯ ನಿರ್ದೇಶಕರಾದ ಡಾ|| ಬಿ.ಎಸ್. ಮೂರ್ತಿ ನುಡಿದರು. 




ಅವರು ಬೆಂಗಳೂರಿನ ಯಲಹಂಕದಲ್ಲಿರುವ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ 13ನೇ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು. ಮುಂದುವರಿದು ಮಾತನಾಡಿದ ಅವರು, ‘ಹೊಸ ಶಿಕ್ಷಣ ನೀತಿ ಈಗ ಅನೇಕ ಅವಕಾಶಗಳನ್ನು ಕಲ್ಪಿಸಿದೆ. ಸ್ವಲ್ಪ ಸಮಯ ಇಂಜಿನಿಯರಿಂಗ್, ಸ್ವಲ್ಪ ಸಮಯ ಸಾಹಿತ್ಯ/ಸಂಸ್ಕೃತಿ, ಸ್ವಲ್ಪ ಸಮಯ ಇತರೆ ಅಧ್ಯಯನ- ಹೀಗೆ ತೊಡಗುವವರಿಗೆ ಕೂಡ ಮಾನ್ಯತೆ ಲಭಿಸುತ್ತದೆ. ವಿವಿಧ ಜ್ಞಾನಶಾಖೆಗಳಲ್ಲಿ ಗಳಿಸುವ ಕ್ರೆಡಿಟ್ ಮೌಲ್ಯ 130 ಸಂಖ್ಯೆ ದಾಟಿದರೆ ಅಂತಹವರಿಗೆ ಬ್ಯಾಚುಲರ್ ಆಫ್  ಲಿಬರಲ್ ಎಜುಕೇಶನ್ ಪದವಿ ಸಿಗಲಿದೆ. ಈಗ ಭಾರತ ಬದಲಾಗಿದೆ. ಬಹುಶಿಸ್ತೀಯ ಅಧ್ಯಯನಕ್ಕೆ ಎಲ್ಲೆಡೆ ಪ್ರಾಧಾನ್ಯತೆ ಸಿಗುತ್ತಿದೆ ಎಂದರು.




ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಂಡಿದ್ದ ನಿಟ್ಟೆ ಎಜುಕೇಶನ್ ಟ್ರಸ್ಟ್‌ನ ತಂತ್ರಜ್ಞಾನ ಬೋಧನಾ ವಿಭಾಗದ ಉಪಾಧ್ಯಕ್ಷ ಹಾಗೂ ಗೋವಾ ಮತ್ತು ಅಗರ್ತಲಗಳಲ್ಲಿರುವ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್  ಟೆಕ್ನಾಲಜಿಯ ವಿಶ್ರಾಂತ ನಿರ್ದೇಶಕ ಪ್ರೊ. ಗೋಪಾಲ ಮುಗೆರಾಯ ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಅವರು ಮಾತನಾಡಿ - ನಿಟ್ಟೆ ಶಿಕ್ಷಣ ಸಂಸ್ಥೆ, ಶಿಕ್ಷಣದ ಗುಣಮಟ್ಟದ ವರ್ಧನೆಗೆ ಕೈಗೊಂಡಿರುವ ಯೋಜನೆಗಳ ಬಗ್ಗೆ ವಿವರಿಸಿದರು. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ವಿಶ್ರಾಂತ ಕುಲಾಧಿಪತಿ ಹಾಗೂ ನಿಟ್ಟೆ ಶಿಕ್ಷಣ ಸಂಸ್ಥೆಗಳ ಹಿರಿಯ ಸಲಹೆಗಾರರಾದ ಪ್ರೊ. ಎನ್.ಆರ್. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.




ಪ್ರತಿ ವರ್ಷದಂತೆ ಈ ವರ್ಷವೂ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ವಿತರಿಸಲಾಯಿತು. ಅತ್ಯುತ್ತಮ ಶೈಕ್ಷಣಿಕ ಕ್ಷಮತೆ ದಾಖಲಿಸಿದ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ಗುರುದತ್ತ್ ಬಿ.ಎಂ ಪ್ರತಿಷ್ಠಿತ ನಿಟ್ಟೆ ಗುಲಾಬಿಶೆಟ್ಟಿ ಸ್ಮರಣಾರ್ಥ ಚಿನ್ನದ ಪದಕವನ್ನು ಸ್ವೀಕರಿಸಿದರು. ಅತ್ಯುತ್ತಮ ವಿದ್ಯಾರ್ಥಿನಿಗೆ ಸಲ್ಲುವ ನಿಟ್ಟೆ ಮೀನಾಕ್ಷಿ ಹೆಗ್ಡೆ ಸ್ಮರಣಾರ್ಥ ಚಿನ್ನದ ಪದಕ ಕಂಪ್ಯೂಟರ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್ ವಿಭಾಗದ ತೇಜಶ್ರೀ ಕೃಷ್ಣಮೂರ್ತಿ ಅವರಿಗೆ ಲಭಿಸಿತು. ಅತ್ಯುತ್ತಮ ವಿದ್ಯಾರ್ಥಿಗೆ ಮೀಸಲಿರುವ ಜಸ್ಟಿಸ್ ಕೆ.ಎಸ್. ಹೆಗ್ಡೆ ಸ್ಮರಣಾರ್ಥ ಚಿನ್ನದ ಪದಕವನ್ನು ಕಂಪ್ಯೂಟರ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್ ವಿಭಾಗದ ಕನಾದ್ ಡಿ.ಎಸ್ ಪಡೆದರು. ಪ್ರತಿ ವಿಭಾಗಗಳಲ್ಲಿ ಒಟ್ಟು 13 ಪ್ರತಿಭಾನ್ವಿತರಿಗೆ ಚಿನ್ನದ ಪದಕಗಳನ್ನು (ಸ್ನಾತಕ: 7 ಚಿನ್ನದ ಪದಕ ಹಾಗೂ ಸ್ನಾತಕೋತ್ತರ: 6) ವಿತರಿಸಲಾಯಿತು. ಪ್ರತಿ ವಿಭಾಗದ ಪ್ರಥಮ 10 ರ‍್ಯಾಂಕ್‌ಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ರ‍್ಯಾಂಕ್ ಸರ್ಟಿಫಿಕೇಟ್‍ಗಳನ್ನು ನೀಡಲಾಯಿತು.



ಪ್ರಾರಂಭದಲ್ಲಿ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಹೆಚ್.ಸಿ. ನಾಗರಾಜ್ ಸ್ವಾಗತಿಸಿದರು. ನಿಟ್ಟೆ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ರೋಹಿತ್ ಪೂಂಜ ನೂತನ ಪದವೀಧರರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top