ರತ್ನಾಕರ ಓರ್ವ ದರೋಡೆಕೋರ. ಕಾಡಿನ ಹಾದಿಯಲ್ಲಿ ಸಾಗುವ ಜನರನ್ನು ದೋಚಿ ತನ್ನ ಜೀವನ ಸಾಗಿಸುತ್ತಿದ್ದ. ಒಂದು ಬಾರಿ ಹೀಗೆ ಆತ ತನ್ನ ಕಾರ್ಯವನ್ನು ನಿರ್ವಹಿಸುತ್ತಿದ್ದಾಗ ಆತನಿಗೆ ಸಿಕ್ಕ ವ್ಯಕ್ತಿ ಓರ್ವ ಸಂತ. ಆ ಸಂತನ ಬಳಿ ಈತನಿಗೆ ಕೊಡಲು ಏನೂ ಇರಲಿಲ್ಲ ಆದರೂ ದರೋಡೆಕೋರನ ಒತ್ತಾಯ ಮಿತಿಮೀರಿದಾಗ ಸಂತ ಆತನನ್ನು ಎಚ್ಚರಿಸಿದ ಪಾಪವಲ್ಲವೇ ಎಂದು? ಅದಕ್ಕೆ ದರೋಡೆಕೋರ ನಿಜ ಈ ಪಾಪದಿಂದ, ಈ ಪಾಪದ ಹಣದಿಂದ ನಾನು ನನ್ನ ಸಂಸಾರವನ್ನು ಸಾಗಿಸುತ್ತಿದ್ದೇನೆ. ಆಗ ಸನ್ಯಾಸಿಯು ಆತನಿಗೆ ಹಾಗಾದರೆ ನಿನ್ನ ಈ ಪಾಪದಲ್ಲಿ ನಿನ್ನ ಹೆಂಡತಿ ಮಕ್ಕಳ ಪಾಲಿದೆಯೇ ಎಂದು ಕೇಳಿದಾಗ ಅಟ್ಟಹಾಸದಿಂದ ನಗುತ್ತಾ ದರೋಡೆಕೋರ ರತ್ನಾಕರ ಯಾಕಿಲ್ಲ ನನ್ನ ಹೆಂಡತಿ ಮಕ್ಕಳಿಗೆ ನನ್ನ ಪಾಪದಲ್ಲಿಪಾಲಿದೆ ಎಂದು ಹೇಳಿದ.
ನಸು ನಕ್ಕ ಸಂತ ಶೀಘ್ರವೇ ಮನೆಗೆ ಹೋಗಿ ನಿನ್ನ ಹೆಂಡತಿ ಮಕ್ಕಳನ್ನು ನಿನ್ನ ಪಾಪದಲ್ಲಿ ಪಾಲುದಾರರಾಗಲು ಒಪ್ಪಿರುವರೇ? ಎಂದು ಕೇಳಿ ಬಾ ನಾನು ಇಲ್ಲಿಯೇ ನಿನಗಾಗಿ ಕಾಯುತ್ತಾ ಕುಳಿತಿರುವೆ ಎಂದು ಹೇಳಿದ. ತನ್ನ ಮನೆಗೆ ಮರಳಿದ ದರೋಡೆಕೋರ ರತ್ನಾಕರ ತನ್ನ ಮನೆಯ ಸರ್ವ ಸದಸ್ಯರನ್ನು ಕರೆದು ಒಬ್ಬೊಬ್ಬರನ್ನೇ ಎಂದು ಪ್ರಶ್ನೆ ಕೇಳಿದಾಗ ಎಲ್ಲರ ಉತ್ತರ ನಕಾರಾತ್ಮಕವಾಗಿತ್ತು. ತಮ್ಮ ಹೊಟ್ಟೆ ತುಂಬಿಸುವುದು ಕುಟುಂಬದ ಯಜಮಾನನಾದ ನಿನ್ನ ಜವಾಬ್ದಾರಿ, ನಿನ್ನ ಪಾಪದಲ್ಲಿ ನಮಗೆ ಪಾಲು ಬೇಕಿಲ್ಲ ಎಂಬ ಅವರ ಉತ್ತರ ಕೇಳಿದ ರತ್ನಾಕರ ವ್ಯಾಕುಲನಾದ. ಆತನನ್ನು ಒಂದು ರೀತಿಯ ಅನಾಥ ಪ್ರಜ್ಞೆ ಕಾಡಿ, ಸಂತನ ಬಳಿ ಮರಳಿದ. ಆತನ ಚಿಂತಾಕ್ರಾಂತ ಮುಖ, ಬಸವಳಿದಂತೆ ಕಾಣುವ ದೈಹಿಕ ಸ್ಥಿತಿಯನ್ನು ನೋಡಿದ ಸಂತ ಮುಗುಳ್ನಗುತ್ತಾ ಯಾರಿಗೆ ಯಾರು ಅಲ್ಲ ನಿನ್ನ ಬದುಕಿನ ಆಗುಹೋಗುಗಳಿಗೆ ನೀನೊಬ್ಬನೇ ನಿಮಿತ್ತ ಎಂದು ಹೇಳಿ ಆತನ ತಲೆ ಸವರಿ ಅಲ್ಲಿಂದ ಮುಂದೆ ಸಾಗಿದ.
ತುಸು ಹೊತ್ತಿನಲ್ಲಿ ಮಾನಸಿಕವಾಗಿ ಸಮ ಚಿತ್ತತೆಯನ್ನು ಸಾಧಿಸಲು ರತ್ನಾಕರ ಅಲ್ಲಿಯೇ ಧ್ಯಾನಕ್ಕೆ ಕುಳಿತ ದಿನಗಳು ತಿಂಗಳುಗಳಾದವು ವರ್ಷಗಳು ಉರುಳಿದವು ಆತನ ಸುತ್ತಲೂ ಹುತ್ತವೇ ಬೆಳೆಯಿತು. ಒಂದು ದಿನ ದಾರಿಹೋಕರು ಆ ಹುತ್ತದ ಬಳಿ ಹೋಗುತ್ತಿದ್ದಾಗ ಆ ಹುತ್ತದ ಬಳಿ ಯಾವುದೋ ವ್ಯಕ್ತಿಯ ಉಸಿರಾಡುವ ಶಬ್ದವನ್ನು ಕೇಳಿ ಹುತ್ತವನ್ನು ಅಗೆದು ನೋಡಿದಾಗ ಅಲ್ಲಿ ಕಂಡದ್ದು ಜಟಾಧಾರಿಯಾಗಿದ್ದ ರತ್ನಾಕರ. ವಲ್ಮೀಕವೆಂದರೆ ಹುತ್ತ... ಹುತ್ತದಿಂದ ಹೊರಬಂದ ರತ್ನಾಕರ ವಾಲ್ಮೀಕಿ ಎಂಬ ಹೆಸರಿನಿಂದ ಕರೆಯಲ್ಪಟ್ಟ. ಮುಂದೆ ರಾಮಾಯಣದ ಮಹಾಕಾವ್ಯವನ್ನು ಬರೆದ ಈತನೇ ನಮ್ಮ ಕಥಾನಾಯಕ ಮಹರ್ಷಿ ವಾಲ್ಮೀಕಿ.
ಇನ್ನೊಂದು ಐತಿಹ್ಯದ ಪ್ರಕಾರ ಪ್ರಚೇತಸ ಎಂಬ ಮುನಿಯ ಮಗನಾದ ವಾಲ್ಮೀಕಿಯು ಪ್ರಚೇತಸ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ. ಒಂದು ದಿನ ಅರಣ್ಯದಲ್ಲಿ ಸಂಚರಿಸುತ್ತಿದ್ದಾಗ ಕ್ರೌAಚ ಪಕ್ಷಿಗಳ ಜೋಡಿಯೊಂದು ಸರಸ ಸಲ್ಲಾಪದಲ್ಲಿ ತೊಡಗಿದ್ದಾಗ ಬೇಟೆಗಾರನ ಬಾಣಕ್ಕೆ ಸಿಲುಕಿ ಸಂಗಾತಿಯನ್ನು ಕಳೆದುಕೊಂಡ ಇನ್ನೊಂದು ಕ್ರೌAಚ ಪಕ್ಷಿಯ ಆಕ್ರಂದನವನ್ನು ಕೇಳಿದ ಮುನಿವರನ ಬಾಯಿಂದ ಹೊರಟ ಶಾಪವಾಕ್ಯ
ಮಾನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ |
ಯತ್ಕ್ಕ್ರೌಂಚಮಿಥುನಾದೇಕಮವಧೀಃ ಕಾಮಮೋಹಿತಮ್ ||
ಇದು ರಾಮಾಯಣ ರಚನೆಗೆ ಪ್ರೇರಣೆಯಾದ ಘಟನೆ ಹಾಗೂ ಆ ಸಂದರ್ಭಕ್ಕೆ ಪ್ರತಿಕ್ರಿಯೆಯಾಗಿ ಶ್ಲೋಕ ರೂಪದಲ್ಲಿ ವಾಲ್ಮೀಕಿಯವರ ಬಾಯಿಂದ ಹೊರಹೊಮ್ಮಿದ ಮಾತುಗಳು.
ಈ ಶ್ಲೋಕದ ಅರ್ಥ ಹೀಗಿದೆ :
ಅಕಾರಣವಾಗಿ ಹಕ್ಕಿಯನ್ನು ಕೊಂದ ಹೇ ಅನ್ಯಾಯಿ |
ನಿನ್ನ ಪಾಪದ ಫಲವಾಗಿ ನೀ ಈ ಕೂಡಲೇ ಸಾಯಿ ||
ಅದೇ ಸಮಯಕ್ಕೆ ಬ್ರಹ್ಮದೇವನು ಪ್ರಚೇತಸ ಮಹರ್ಷಿಗಳ ಆಶ್ರಮಕ್ಕೆ ಬಂದು ಇದೇ ಶ್ಲೋಕರೂಪದಲ್ಲಿ ರಾಮಾಯಣ ಕಾವ್ಯವನ್ನು ರಚಿಸಲು ಹೇಳುತ್ತಾರೆ. ಬ್ರಹ್ಮದೇವನ ಅಪ್ಪಣೆಯನ್ನು ಶಿರಸಾವಹಿಸಿ ಪಾಲಿಸಿದ ಮಹರ್ಷಿ ವಾಲ್ಮೀಕಿಯು ನಾರದರು ತಮಗೆ ಹೇಳಿದ್ದ ರಾಮನ ಕಥೆಯನ್ನು ವಾಲ್ಮೀಕಿ ಮಹರ್ಷಿಗಳು 24,000 ಶ್ಲೋಕಗಳನ್ನೊಳಗೊಂಡ ಮಹಾಕಾವ್ಯವಾಗಿ ಬರೆದರು.
ರಾಮಾಯಣ ಕೇವಲ ಒಂದು ಕಾವ್ಯವಲ್ಲ ನಮ್ಮೆಲ್ಲರ ಬದುಕಿನ ಆದರ್ಶ ಪುರುಷನ ಮಹಾಗಾಥೆಯಾಗಿದೆ. ಪ್ರಪಂಚದಲ್ಲಿ ಸಾವಿರಾರು ರಾಮಾಯಣ ಕಥೆಗಳು ಇದ್ದರೂ ಕೂಡ ಮಹರ್ಷಿ ವಾಲ್ಮೀಕಿಗಳು ರಚಿಸಿದ ರಾಮಾಯಣವನ್ನು ಮೊತ್ತ ಮೊದಲ ಮಹಾಕಾವ್ಯ ಎಂದು ಪರಿಗಣಿಸಿದ್ದಾರೆ. ಗದ್ಯ ಶ್ಲೋಕ ರೂಪದಲ್ಲಿರುವ ಈ ಮಹಾಕಾವ್ಯ ಅತ್ಯಂತ ಪ್ರಾಚೀನ ಮಹಾ ಕಾವ್ಯ. ಒಂದು ಐತಿಹ್ಯದ ಪ್ರಕಾರ ಮಹರ್ಷಿ ವಾಲ್ಮೀಕಿಗಳು ಹೇಳಿದಂತೆ ಶಿವನ ಪುತ್ರ ಗಣೇಶನು ರಾಮಾಯಣದ ಲಿಪಿಕಾರ. ಕಣ್ಣು ಮುಚ್ಚಿ ಒಂದೇ ಸಮನೆ ಮಹರ್ಷಿ ವಾಲ್ಮೀಕಿಗಳು ಹೇಳುತ್ತಾ ಹೋದಂತೆ ಬರೆಯುತ್ತಿದ್ದ ಗಣೇಶನಿಗೆ ಒಂದು ಹಂತದಲ್ಲಿ ಆತ ಬರೆಯುತ್ತಿದ್ದ ಲೇಖನಿ ಮುರಿದು ಹೋಯಿತು. ಕಣ್ಣು ಮುಚ್ಚಿ ಕುಳಿತಿದ್ದ ಮಹರ್ಷಿಗಳ ಓಘಕ್ಕೆ ಭಂಗ ಬಾರದಂತೆ ಗಣಪತಿಯು ತನ್ನ ದಂತ ಒಂದನ್ನು ಮುರಿದು ಅದರಲ್ಲೇ ಬರೆದನಂತೆ. ಆದ್ದರಿಂದಲೇ ಗಣಪತಿಯನ್ನು ಏಕದಂತ, ದಂತ ವಕ್ರ ಎಂಬ ಹೆಸರಿನಿಂದ ಕರೆದರು ಎಂದು ಹೇಳುತ್ತಾರೆ.
ಮುಂದೆ ರಾಮನು ರಾವಣನನ್ನು ವಧಿಸಿ ಸೀತೆ ಲಕ್ಷ್ಮಣರೊಡಗೂಡಿ ಅಯೋಧ್ಯೆಗೆ ಬಂದು ಹಲವಾರು ವರ್ಷಗಳ ಕಾಲ ರಾಜ್ಯಭಾರ ಮಾಡಿ, ಕಾರಣಾಂತರಗಳಿಂದ ಸೀತೆಯನ್ನು ಕಾಡಿಗೆ ಪುನಹ ಕಳುಹಿಸಿದಾಗ ಮಹರ್ಷಿ ವಾಲ್ಮೀಕಿಗಳೆ ಸೀತೆಗೆ ಆಶ್ರಯ ನೀಡಿದರು ಅಲ್ಲಿಯೇ ಲವಕುಶರ ಜನನವಾಯಿತು. ಮಹರ್ಷಿ ವಾಲ್ಮೀಕಿಗಳೇ ಲವಕುಶರಿಗೆ ರಾಮಾಯಣದ ಕಥೆಯನ್ನು ವಿವರವಾಗಿ ಕಲಿಸಿದ್ದರು. ಇಂದಿಗೂ ಕೂಡ ಮಹರ್ಷಿ ವಾಲ್ಮೀಕಿಯನ್ನು ಭಾರತೀಯರು ನೆನೆಸುತ್ತಾರೆ. ಮಹರ್ಷಿ ವಾಲ್ಮೀಕಿಯ ಜೀವನ, ಆದರ್ಶ, ಬೇಡನಾಗಿ ಹುಟ್ಟಿ ಮಹಾಕವಿಯಾಗಿ ಬೆಳೆದ ಅಗಾಧ ಎತ್ತರವನ್ನು ಸ್ಮರಿಸುತ್ತಾ ಪ್ರತಿವರ್ಷ ದೀಪಾವಳಿಯ ನಂತರ ಬರುವ ಕಾರ್ತಿಕದ ಹುಣ್ಣಿಮೆ ಎಂದು ಮಹರ್ಷಿ ವಾಲ್ಮೀಕಿಗಳ ಜಯಂತಿಯನ್ನು ಆಚರಿಸುತ್ತಾರೆ. ಮೊಟ್ಟ ಮೊದಲ ಮಹಾಕಾವ್ಯ ರಚಿಸಿದ ಮಹರ್ಷಿ ವಾಲ್ಮೀಕಿಯನ್ನು ಜಗತ್ತು ಮಹಾಕವಿ ಎಂದು ಗೌರವಿಸಿದೆ.
"ಕೂಜಂತಂ ರಾಮರಾಮೇತಿ
ಮಧುರA ಮಧುರಾಕ್ಷರಂ
ಆರುಹ್ಯ ಕವಿತಾ ಶಾಖಾA
ವಂದೇ ವಾಲ್ಮೀಕಿ ಕೋಕಿಲಂ"
ರಾಮಾಯಣದ ಕೊಂಬೆಯಲ್ಲಿ ಕುಳಿತು ರಾಮ ರಾಮ ಎಂದು ಭಜಿಸುತ್ತಿರುವ ವಾಲ್ಮೀಕಿ ಎಂಬ ಪೂಜನ ಪಕ್ಷಿಯ ಧ್ವನಿಯನ್ನು ಮಹಾಕವಿ ಮಹರ್ಷಿ ವಾಲ್ಮೀಕಿಗೆ ಹೋಲಿಸಿದ್ದಾರೆ ಶ್ರೀರಾಮರಕ್ಷಾ ಸ್ತೋತ್ರದಲ್ಲಿ.
ಸರ್ವರಿಗೂ ವಾಲ್ಮೀಕಿ ಜಯಂತಿಯ ಶುಭಾಶಯಗಳು
-ವೀಣಾ ಹೇಮಂತ್ ಗೌಡ ಪಾಟೀಲ್,
ಮುಂಡರಗಿ ಗದಗ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ