ಪ್ರಾಚೀನ ಜ್ಞಾನಭಂಡಾರದ ಕೀಲಿಕೈ ಸಂಸ್ಕೃತ: ಶ್ರೀಶ್ರೀ ಈಶಪ್ರಿಯತೀರ್ಥಶ್ರೀಪಾದರು

Upayuktha
0

ಉಡುಪಿ: 'ನಮ್ಮ ಪ್ರಾಚೀನರ ಅಧ್ಯಯನ, ಆ ಮೂಲಕ ಅವರು ಕಂಡುಕೊಂಡ ಸತ್ಯ, ವಿವಿಧ ಕ್ಷೇತ್ರಗಳಲ್ಲಿ ಅವರ ಸಾಧನೆ ಅಪಾರ, ಅಗಾಧವಾದುದು. ಈ ಜ್ಞಾನಭಂಡಾರದ ಕೀಲಿಕೈ ಸಂಸ್ಕೃತ ಭಾಷೆಯಾಗಿದೆ' ಎಂದು ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಶ್ರೀ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಮಂಗಳೂರು ವಿ.ವಿ. ಸಂಸ್ಕೃತ ಪಾಠ್ಯವಿಷಯಗಳ ಕಾರ್ಯಾಗಾರವನ್ನು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಉದ್ಘಾಟಿಸಿ, ಆಶೀರ್ವದಿಸಿದರು.


'ದೈನಂದಿನ ವ್ಯವಹಾರಗಳು ಬದಲಾದಂತೆ ಭಾಷೆಯೂ ಬದಲಾಗುತ್ತದೆ. ಆದರೆ ಸಂಸ್ಕೃತವು ತನ್ನ ವಿಶಿಷ್ಟ ಭಾಷಾರಚನೆಯ ಕಾರಣದಿಂದ ಅವಿಚ್ಛಿನ್ನವಾಗಿ ಬದಲಾಗದೆ ಉಳಿದಿದೆ.‌ ಸನಾತನ ಭಾರತೀಯ ಜೀವನ ಮೌಲ್ಯವನ್ನು ಅರಿಯಲು ಸಂಸ್ಕೃತ ಸಹಾಯಕವಾಗಿದೆ. ಆನಂದಮಯ ಬದುಕಿಗೆ ಸಂಸ್ಕೃತವು ಮೂಲಾಧಾರವೆಂದೆನಿಸಿದೆ. ಭಾರತವು ಇಂದು ವಿಶ್ವಗುರುವೆಂದೆನಿಸಿದೆ. ಇಂತಹ ಭಾರತದ ಪ್ರಜೆಗಳಾಗಿರುವ ನಮಗೆ ಸಂಸ್ಕೃತದ ಅರಿವಿರಬೇಕಾದುದು ಅತ್ಯವಶ್ಯ. ಮುಂದಿನ ದಿನಗಳಲ್ಲಿ ಸಂಸ್ಕೃತದ ಕೃಷಿ ಹೆಚ್ಚಾಗಲಿ' ಎಂದು ಶ್ರೀಗಳು ನುಡಿದರು.


ಮುಖ್ಯ ಅಭ್ಯಾಗತರಾದ ಪೂರ್ಣಪ್ರಜ್ಞ ಕಾಲೇಜಿನ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿಗಳಾದ ಡಾ. ಜಿ. ಎಸ್ ಚಂದ್ರಶೇಖರ್ ಅವರು 'ಕಾಲಕ್ಕೆ ತಕ್ಕಂತೆ ಪಾಠ್ಯವಿಷಯಗಳು ಬದಲಾಗಲಿ. ಅವು ಮಕ್ಕಳ ಕೌಶಲಾಭಿವೃದ್ಧಿಗೆ ಸಹಾಯಕವಾಗುವಂತಿರಲಿ, ಸಂಸ್ಕೃತದ ವಾತಾವರಣ ನಿರ್ಮಾಣವಾಗಲಿ' ಎಂದು ಆಶಿಸಿದರು.  


ಇನ್ನೋರ್ವ ಅಭ್ಯಾಗತರಾದ ಪೂರ್ಣಪ್ರಜ್ಞ ಕಾಲೇಜಿನ ಆಡಳಿತ ಮಂಡಳಿಯ ಗೌರವ ಕೋಶಾಧಿಕಾರಿಗಳಾದ ಸಿಎ ಪ್ರಶಾಂತ್ ಹೊಳ್ಳ ಇವರು 'ಆಧುನಿಕ ತಂತ್ರಜ್ಞಾನದಲ್ಲಿ ಸಂಸ್ಕೃತದ ಬಳಕೆ ಹೆಚ್ಚಾಗಲಿ' ಎಂದು ಹೇಳಿದರು. 


ಕಾರ್ಯಕ್ರಮದ ಅಧ್ಯಕ್ಷರಾದ ಪೂರ್ಣಪ್ರಜ್ಞ ಕಾಲೇಜಿನ ಪ್ರಾಚಾರ್ಯರಾದ ಡಾ. ರಾಮು ಎಲ್ ಅವರು 'ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಸಂಸ್ಕೃತವನ್ನು ಜನಮಾನಸದೆಡೆಗೆ ಒಯ್ಯುವ ಹೊಣೆಗಾರಿಕೆಯನ್ನು ಸಂಸ್ಕೃತ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಹೊರಬೇಕು' ಎಂದು ಹೇಳಿದರು.


ಮಂಗಳೂರು ವಿ.ವಿ. ಸಂಸ್ಕೃತ ಅಧ್ಯಾಪಕರ ಸಂಘದ ಅಧ್ಯಕ್ಷರಾದ ಡಾ. ರಮೇಶ್ ಟಿ. ಎಸ್. ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಈ ವರ್ಷ ನಿವೃತ್ತರಾದ ಡಾ. ಮಧುಸೂದನ ಭಟ್ ಹಾಗೂ ವಿದ್ವಾನ್ ವಾಗೀಶ ಶಾಸ್ತ್ರಿಗಳನ್ನು ಸಮ್ಮಾನಿಸಲಾಯಿತು. ಕಾಲೇಜಿನ ವಿದ್ಯಾರ್ಥಿನಿಯರಾದ ಹರ್ಷಿತಾ ಹಾಗೂ ವೈಷ್ಣವೀ ಪ್ರಾರ್ಥನೆಯನ್ನು ನೆರವೇರಿಸಿದರು. ಸಂಸ್ಕೃತ ಉಪನ್ಯಾಸಕ ಡಾ.ಆನಂದ ಆಚಾರ್ಯರು ನಿರ್ವಹಿಸಿದ ಕಾರ್ಯಕ್ರಮದಲ್ಲಿ ಮಂಗಳೂರು ವಿ.ವಿ. ಸಂಸ್ಕೃತ ಅಧ್ಯಾಪಕರ ಸಂಘದ ಕಾರ್ಯದರ್ಶಿಗಳಾದ ಡಾ. ಮಂಜುನಾಥ ಭಟ್ ಧನ್ಯವಾದವಿತ್ತರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top