ಜಗತ್ತಿನ ಶ್ರೇಷ್ಠ ಸಾಧಕರ, ಚಿಂತಕರ ಸಾಲಿನಲ್ಲಿ ನಮ್ಮ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅಗ್ರಗಣ್ಯರು, ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದು ರಕ್ತಪಾತದ ಹೊರತಾಗಿಯೂ ಹೋರಾಡಬಹುದು ಎಂದು ಇಡೀ ಜಗತ್ತಿಗೆ ತೋರಿಸಿಕೊಟ್ಟವರು. ಅವರ ವಿಚಾರಧಾರೆಗಳು ಮನುಕುಲ ಇರುವವರೆಗೂ ಪ್ರಸ್ತುತ. ಅವರನ್ನು ತಿಳಿಯದಿದ್ದರೆ ನಷ್ಟವಾಗುವುದು ಗಾಂಧೀಜಿಯವರಿಗಲ್ಲ. ನಮಗೆ.
ಮಹಾತ್ಮಗಾಂಧೀಜಿಯೆಂದರೆ, ಯಾರಿಗೂ ನಿಲುಕದ ಅತಿಮಾನವನಲ್ಲ, ಸುಮಾರು ನೂರ ಐವತ್ತು ವರ್ಷಗಳ ಹಿಂದೆ ಎಲ್ಲರಂತೆಯೇ ಹುಟ್ಟಿ, ಎಲ್ಲರಂತೆಯೇ ಬೆಳೆದ ಒಬ್ಬ ಸಾಮಾನ್ಯ ಮಗುವಾಗಿದ್ದವನು; ಎಲ್ಲರಂತೆಯೇ ಅಪ್ಪ ಅಮ್ಮನ ಮುದ್ದಿನ ಪಾಪುವಾಗಿದ್ದವನು; ಶಾಲೆಗೆ ಸೇರಿ, ಆಟವಾಡಿ, ಪಾಠ ಓದಿ ಪರೀಕ್ಷೆ ಬರೆದು ಪಾಸಾಗಿ ದೊಡ್ಡ ವಕೀಲನಾಗಿದ್ದವನು; ಕಷ್ಟದಲ್ಲಿರುವವರ ಬಗ್ಗೆ ಸದಾ ಮರುಗುವ, ಸುಳ್ಳು ಮತ್ತು ಅನ್ಯಾಯದ ವಿರುದ್ಧ ಎದೆಗುಂದದೆ ಹೋರಾಡಿದ ಯುವಕನಾಗಿದ್ದವನು; ಸಾಮಾನ್ಯ ಮನುಷ್ಯನೊಬ್ಬ ಪರಿಪೂರ್ಣ ಮನುಷ್ಯನಾಗಲು, ಮಹಾತ್ಮನೆಂಬುದಾಗಿ ಕರೆಸಿಕೊಳ್ಳಲು ಹೇಗೆ ಬದುಕಿ ಬಾಳಬೇಕು ಎಂಬುದಕ್ಕೆ ಮಾದರಿ ಅಜ್ಜನಾಗಿದ್ದವನು; ಪ್ರಯತ್ನಪಟ್ಟರೆ ಎಲ್ಲ ಮಕ್ಕಳೂ ಗಾಂಧೀಜಿಯಂತಾಗಬಹುದು.
ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟವರು ಬಾಪೂಜಿ ಎಂದೇ ಪ್ರಖ್ಯಾತರಾದ ಮಹಾತ್ಮ ಗಾಂಧೀಜಿಯೆಂಬುದು ನಮಗೆ ಗೊತ್ತಿದೆ. ನಮ್ಮ ಊರಿನ ಎಲ್ಲ ಶಾಲೆಗಳಲ್ಲಿ ಮಾತ್ರವಲ್ಲ, ಸರಕಾರಿ ಕಛೇರಿಗಳಲ್ಲೂ, ನ್ಯಾಯಾಲಯಗಳಲ್ಲೂ ಬಾಪೂಜಿಯವರ ಭಾವಚಿತ್ರ ಇರಿಸಿರುವುದನ್ನು ನಾವು ನೋಡಿದ್ದೇವೆ. ಚಿತ್ರದಲ್ಲಿರುವ ಅವರ ಬೋಳು ತಲೆಯನ್ನು, ದೊಡ್ಡ ಕಿವಿಗಳನ್ನು, ಉರುಟು ಕನ್ನಡಕದೆಡೆಯಿಂದ ಇಣುಕುವ ಪ್ರೀತಿ ಸೂಸುವ ಕಣ್ಣುಗಳನ್ನು, ಬಿಳುಪು ಮೀಸೆಯನ್ನು ಮತ್ತು ಬರಿಮೈಗೆ ಸುತ್ತಿರುವ ತುಂಡು ಮೇಲು ವಸ್ತ್ರವನ್ನು ಕಂಡು ನಾವು ವಿಸ್ಮಿತರಾಗಿದ್ದೇವು. ಅವರ ಹುಟ್ಟುಹಬ್ಬವನ್ನು ‘ಗಾಂಧಿ ಜಯಂತಿ’ಯಂದು ನಾವು ನಮ್ಮ ಶಾಲೆಯಲ್ಲಿ ಸಹಪಾಠಿಗಳ ಜತೆ ಸೇರಿ ಆಚರಿಸಿದ್ದೇವೆ.
ಗಾಂಧೀಜಿ ದೊಡ್ಡವರು. ದೊಡ್ಡವರ ದಾರಿ ಅನುಕರಣೀಯ. ನುಡಿದಂತೆ ನಡೆಯುವವರು ಅತಿ ಕಡಿಮೆ. ಗಾಂಧೀಜಿಯನ್ನು ಮಹಾತ್ಮ ಎಂದು ಪೂಜಿಸುತ್ತೇವೆ. ಕಾರಣ ನುಡಿದಂತೆ ನಡೆದರು. ಅವರ ನಿಷ್ಠೆ, ಪ್ರಾಮಾಣಿಕತೆ, ಜೀವನ ಶ್ರದ್ಧೆ, ಸಮಯಪಾಲನೆ, ಸೇವಾಕಾಂಕ್ಷೆ, ಸ್ವಾರ್ಥತ್ಯಾಗ ಅಸಾಧಾರಣ. ಗಾಂಧೀ ವಿಶ್ವಕ್ಕೆ ಮಾದರಿಯಾದವರು. ಆದರೆ ಅವರೇನು ಸರ್ವಸಂಗ ಪರಿತ್ಯಾಗ ಮಾಡಿ ಸನ್ಯಾಸಿಯಾಗೋ ಸಂತನಾಗೋ ಹೊರಟವರಲ್ಲ. ಎಲ್ಲರಂತೆ ಬದುಕಿ ಎಲ್ಲರ ನಡುವೆಯೇ ಇದ್ದವರು. ಸತ್ಯಶೋಧಕರು. ಸತ್ಯನಿಷ್ಠರೂ ಆಗಿದ್ದರು. ಅವರ ತತ್ವಗಳ ಪಾಲನೆ ಎಂದಿಗೂ ಶ್ರೇಯಸ್ಕರ.
ಗಾಂಧೀ ತಾವು ಹೇಳುತ್ತಿದ್ದುದ್ದಕ್ಕೆ ತಾವೇ ನಿದರ್ಶನವಾಗಿರುತ್ತಿದ್ದರು. ಇದಕ್ಕೆ ಒಮ್ಮೆ ಅವರು ಕೈಗೊಂಡ ಸ್ಥಳ ಸ್ವಚ್ಛ ಮಾಡುವ ಕಾರ್ಯವೇ ಸಾಕ್ಷಿ. ತಾವೇ ಪೊರಕೆ ಹಿಡಿದು ಅಶುದ್ಧವಿದ್ದ ಜಾಗವನ್ನು ಸ್ವಚ್ಛಗೊಳಿಸಿದರು. ತಿಳಿದವರಿಗೆ ಇದು ಜೀವನ ಸೂತ್ರವಾಯಿತು. ಗಾಂಧೀಜಿಯವರಿಂದ ಜನ ಕಲಿಯಬೇಕಾದುದು ಬಹಳಷ್ಟಿದೆ. ಆರ್ಥಿಕ ಸ್ವಾವಲಂಬನೆ. ಪ್ರತಿ ಮನುಷ್ಯನು ತಾನು ಸ್ವತಃ ದುಡಿಯಬೇಕು. ತನ್ನ ಅನ್ನ ಗಳಿಸಿ ಬದುಕಬೇಕು. ತಮ್ಮ ಕುಲದ ಕಸುಬು ಬಿಟ್ಟು ದೂರ ಹೋಗಬಾರದೆಂದೂ ಹಳ್ಳಿಗರಿಗೆ ಅವರು ಹೇಳುತ್ತಿದ್ದರು. ಆರ್ಥಿಕ ಸ್ವಾವಲಂಬನೆ, ಮಿತವ್ಯಯ, ಸ್ವಾರ್ಥರಹಿತ ಜೀವನ, ಕಾಯಕವೇ ಕೈಲಾಸ ಇವೆಲ್ಲ ಗಾಂಧೀಜಿ ಜೀವನ ಸೂತ್ರಗಳಾಗಿದ್ದವು.
“ಜನನಾಯಕನಾಗುವುದು ಸುಲಭ. ಆದರೆ ಜನನಾಯಕನ ಹೊಣೆ ದೊಡ್ಡದು”. ಇತರರಿಗೆ ದಾರಿತೋರಿಸುವಷ್ಟು ಯೋಗ್ಯತೆ ತನಗುಂಟೆ ಎಂದು ಮತ್ತೆ ನಿಷ್ಠುರವಾಗಿ ಪರೀಕ್ಷೆ ಮಾಡಿಕೊಳ್ಳುತ್ತಿರಬೇಕು. ತಾನು ಇಟ್ಟ ಹೆಜ್ಜೆಯನ್ನು ಅನುಸರಿಸುವವನ ಕೆಲಸಗಳ ಹೊಣೆ ಎಲ್ಲ ತನ್ನದು. ಅವರೆಲ್ಲರ ಮೇಲೆ ಪ್ರಭಾವ ಬೀರಿ ತನ್ನ ಬೋಧನೆಗೆ ವಿರುದ್ಧ ಅವರು ಹೋಗದಂತೆ ನೋಡಿಕೊಳ್ಳುವ ಹೊಣೆ ತನ್ನದು. ಈ ಹೊಣೆ ಹೊರಲು ಸಾಧ್ಯವಿಲ್ಲದವನು ನಾಯಕತ್ವದಿಂದ ದೂರವಿರಬೇಕು. ಅವನ ಮಾರ್ಗವನ್ನು ಇತರರೂ ಅನುಸರಿಸುವುದರಿಂದ ಅವನು ಸದಾ ಆತ್ಮವಿಮರ್ಶೆ ಮಾಡಿಕೊಂಡು ಆತ್ಮವಿಶ್ವಾಸದಿಂದ ಬದುಕನ್ನು ಸಾಗಿಸಿ, ಅಪೂರ್ಣವಾದ ಜಗತ್ತನ್ನು ಪೂರ್ಣತೆಯ ಕಡೆಗೆ ಸಾಗಿಸಬೇಕೆಂಬುದು ಅವರ ಅಮರ ಸಂದೇಶ.
ಗಾಂಧೀಜಿ ನಮ್ಮ ದೇಶದ ಶ್ರೇಷ್ಠ ವ್ಯಕ್ತಿ. ಅವರು ಈ ನೆಲದಲ್ಲಿ ಹುಟ್ಟಿದರು. ಬೆಳೆಯಲು ಪ್ರಾರಂಭಿಸಿದರು. ಜಗತ್ತಿನ ಸತ್ವವನ್ನು ಹೀರಿಕೊಂಡು ಹೆಚ್ಚು ಬೆಳೆದರು. ಇಡೀ ಜಗತ್ತಿನ ಜನತೆ ನಿಂತು ನೋಡುವಂತೆ ಬೆಳೆದರು. ದೇಶ-ವಿದೇಶಗಳ ಮಹಾಜನರು ಇವರ ಅಭಿಮಾನಿಗಳಾದರು. ಕೆಲವರಂತೂ ಇವರೊಡನೆ ಬದುಕುವುದೇ ಒಂದು ಹಿರಿಮೆ ಎಂದು ತಮ್ಮ ಊರು ದೇಶಗಳನ್ನು ಮರೆತು ಅನುಯಾಯಿಗಳಾದರು.
ಗಾಂಧೀಜಿ ತಮ್ಮ ಜೀವನದಲ್ಲಿ ಸತ್ಯ-ಧರ್ಮ-ಅಹಿಂಸೆಗಳೆಂಬ ಕುದುರೆಗಳನ್ನು ಸವಾರಿ ಮಾಡಿದರು. ಎದುರಾದ ಸಂಕಷ್ಟಗಳನ್ನು ನೇರವಾಗಿ ಎದುರಿಸಿದರು. ಎಲ್ಲವನ್ನೂ ಗೆದ್ದರು. ಅತಿ ಬಲಿಷ್ಠರಾದ ಬ್ರಿಟಿಷರನ್ನು ದಕ್ಷಿಣ ಆಫ್ರಿಕೆಯಲ್ಲಿ ಹಾಗೂ ಭಾರತದಲ್ಲಿ ಎದುರಿಸಿದರು, ಮಣಿಸಿದರು. ಗಾಂಧಿಯವರು ಅಹಿಂಸೆಯನ್ನು ಪ್ರತಿಪಾದಿಸಿದಂತೆ ಉಳಿದರವರು ಅಹಿಂಸೆಯನ್ನು ಪ್ರತಿಪಾದಿಸಲಾಗಲಿಲ್ಲ. ಆದ್ದರಿಂದಲೇ ಗಾಂಧೀಜಿ ಬೃಹತ್ ಗಾತ್ರಕ್ಕೆ ಬೆಳೆದರು.
ಗಾಂಧೀಜಿ ನಮ್ಮೆಲ್ಲರ ಹೆಮ್ಮೆ. ಇಡೀ ವಿಶ್ವವೇ ಭಾರತದ ಕಡೆಗೆ ಬೆರಗುಗಣ್ಣುಗಳಿಂದ ತಿರುಗಿ ನೋಡುವಂತಹ ಮಹತ್ವದ ಮೌಲ್ಯಗಳನ್ನು ಮನುಕುಲದ ಮಂದೆ ಬಿಡಿಬಿಡಿಯಾಗಿ ಬಿಡಿಸಿಟ್ಟ ಮಹಾನ್ ಚೇತನ. ಮಹಾತ್ಮಗಾಂಧೀಜಿಯವರ ಬದುಕು ಮತ್ತು ಸಾಧನೆ ಅತ್ಯಂತ ವಿಸ್ಮಯಕಾರಿಯಾದ್ದು. ರಕ್ತ ಮಾಂಸಗಳಿಂದ ತುಂಬಿರುವ ವ್ಯಕ್ತಿಯೊಬ್ಬ ಹೀಗೆಲ್ಲಾ ಸೇವೆ ಮತ್ತು ತ್ಯಾಗ ಮಾಡಬಹುದೇ ಎನ್ನುವಷ್ಟು ಸೋಜಿಗ ಹುಟ್ಟಿಸುವ ಅವರ ಬದುಕು ವಿಶಿಷ್ಟವಾದದ್ದು.
ಸಾರ್ವಕಾಲಿಕ ಪ್ರಸ್ತುತತೆಯುಳ್ಳ ಆದರ್ಶಗಳನ್ನು ಪ್ರತಿಪಾದಿಸಿ ಅನುಷ್ಠಾನಕ್ಕೆ ತಂದ ವಿರಳಾತಿ ವಿರಳರಲ್ಲಿ ಗಾಂಧೀಜಿ ಒಬ್ಬರು. ಅವರ ಜೀವನದಲ್ಲಿ ಹೇಗೆ ಈ ಪರಿವರ್ತನೆ ಆಯಿತು ಎಂದು ನೋಡಿದರೆ ಅದೊಂದು ಪವಾಡ, ಅದು ಆಶ್ಚರ್ಯಕರ. ಅವರು ಸಾಮಾನ್ಯತೆಯಿಂದ ಮೇಲೆದ್ದು ಮಹಾತ್ಮರಾಗಿ ಮೆರೆಯಲು ಅವರ ಸತ್ಯನಿಷ್ಠೆ, ನಿರಂತರ ಹೋರಾಟ, ಸೋಲರಿಯದ ಇಚ್ಛಾಶಕ್ತಿ, ಆದರ್ಶಗಳಿಗೆ ಸದಾ ಜಿಗುಟಾಗಿ ಅಂಟಿಕೊಳ್ಳುವ ಸ್ವಭಾವ, ಇದೆಲ್ಲ ಹೇಗೆ ಕಾರಣಗಳಾದವು ಎಂಬುದನ್ನು ಅವರ ಜೀವನದಲ್ಲಿ ಕಾಣುತ್ತೇವೆ. ಗಾಂಧಿ ತತ್ವಗಳೆಲ್ಲನ್ನಲ್ಲದಿದ್ದರೂ, ಕೆಲವುಗಳನ್ನಾದರೂ ಅನುಸರಿದರೆ ಭಾರತ ಭವಿಷ್ಯದಲ್ಲಿ ಒಳ್ಳೆಯ ರೀತಿಯಲ್ಲಿ ರೂಪಿತವಾಗಬಹುದು.
ಮಾನವ ಜಗತ್ತು ಕಂಡ ಶ್ರೇಷ್ಠ ಚಿಂತಕ, ದಾರ್ಶನಿಕ, ನುಡಿದಂತೆ ನಡೆದು ವಿಶ್ವಕ್ಕೆ ಆದರ್ಶಪ್ರಾಯರಾದ ಅಪರೂಪದ ಸಂತ. ಅವರ ವ್ಯಕ್ತಿ ವಿಚಾರಗಳು ಮನುಕುಲ ಇರುವವರೆಗೆ ಪ್ರಸ್ತುತ ಅಹಿಂಸೆ ಪ್ರತಿಪಾದನೆ ಹಾಗೂ ಸತ್ಯಾಗ್ರಹದ ಪರಿಕಲ್ಪನೆಯನ್ನು ಜಗತ್ತಿಗೆ ನೀಡುವ ಮೂಲಕ ಜನಮನ್ನಣೆ ಪಡೆದ ಮಹನೀಯರಲ್ಲಿ ಮಹಾತ್ಮ ಗಾಂಧೀಜಿಯವರು ಅಗ್ರಗಣ್ಯರು. ಈ ನೆಲದ ಮಹತ್ವವನ್ನು ಜಾಗತಿಕ ಮಟ್ಟದಲ್ಲಿ ತಿಳಿಹೇಳಿ ಪರಿಣಾಮಕಾರಿಯಾದ ಸಂವಹನವನ್ನು ತೋರಿದ ಧೀಮಂತ ನಾಯಕ.
-ಸುಮ ಚಂದ್ರಶೇಖರ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ