'ಹದಿಹರೆಯದವರ ಆರೋಗ್ಯ'- ದೈಹಿಕ ಮತ್ತು ಮಾನಸಿಕ ಬದಲಾವಣೆ: ವಿಶೇಷ ಉಪನ್ಯಾಸ
ಉಜಿರೆ: "ಬೇರೆ ಬೇರೆ ಅಂಶಗಳು [ಮೆದುಳಿನ ಕಾರ್ಯ, ಸಾಮಾಜಿಕ ಹಿನ್ನೆಲೆ, ಹಾರ್ಮೋನ್ಸ್ ಇತ್ಯಾದಿ] ಗಳ ಫಲಿತಾಂಶವೇ ನಮ್ಮ ನಡವಳಿಕೆ. ಇತ್ತೀಚಿನ ದಿನಮಾನಗಳಲ್ಲಿ ಯುವಜನತೆಗೆ ಯವ್ವನದ ಸಮಯದಲ್ಲಾಗುವ ಬದಲಾವಣೆಗಳ ಬಗ್ಗೆ ಜಾಗೃತಿ ಮೂಡಿಸುವುದು ಮುಖ್ಯವೆಂಬುದು ಸರ್ಕಾರದ ಅಭಿಪ್ರಾಯ. ಸರಿಯಾದ ಮಾರ್ಗದರ್ಶನ ಇಲ್ಲದೆ ಈವಾಗಿನ ಯುವಕರು ಮಾದಕ ವಸ್ತುಗಳಿಗೆ ಬಲಿಯಾಗುತ್ತಿದ್ದಾರೆ"ಎಂದು ತಾಲೂಕು ಆಸ್ಪತ್ರೆ, ಬೆಳ್ತಂಗಡಿ ಆರೋಗ್ಯ ಸಲಹೆಗಾರರಾದ ಶ್ರೀಮತಿ ರಮ್ಯಾ ಹೇಳಿದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ಸ್ವಾಯತ್ತ) ಉಜಿರೆಯ ಸಮ್ಯಗ್ದರ್ಶನ ಸಭಾಂಗಣದಲ್ಲಿ ಅ.21, ಶನಿವಾರದಂದು 'ಹದಿಹರೆಯದವರ ಆರೋಗ್ಯ'- ದೈಹಿಕ ಮತ್ತು ಮಾನಸಿಕ ಬದಲಾವಣೆ ಎಂಬ ವಿಷಯದ ಕುರಿತು ವಿಶೇಷ ಚರ್ಚೆಯನ್ನು ಆಯೋಜಿಸಲಾಗಿತ್ತು. ಮಹಿಳಾ ಅಭಿವೃದ್ಧಿ ಕೋಶ ಇದರ ಸಹಯೋಗದಲ್ಲಿ ಸಾಮಾಜಿಕ ಜವಾಬ್ದಾರಿ ಉಪಕ್ರಮ ಸಮಿತಿಯ ಹಾಗೂ ಎಸ್.ಡಿ.ಎಂ. ಕಾಲೇಜು, ಉಜಿರೆ, ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಶ್ರೀಮತಿ ರಮ್ಯಾ ಮಾತನಾಡಿದರು.
"ಹದಿಹರೆಯದಲ್ಲಿ ಮೊದಲು ಆತ್ಮಾಭಿಮಾನ, ಸಪ್ರಜ್ಞೆ ಮತ್ತು ಭಾವನೆಗಳ ನಿಯಂತ್ರಣದ ಬಗ್ಗೆ ಅರಿವಿರಬೇಕು. ಈ ಪ್ರಾಯದಲ್ಲಿ ಕುತೂಹಲ, ಭಾವನಾತ್ಮಕ ಬದಲಾವಣೆಗಳಿಂದ ದುಡುಕಿನ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಸೋತಾಗ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗುತ್ತಾರೆ. ಸಮಸ್ಯೆಗಳು ಬಂದಾಗ ನಮ್ಮಂತಹ ಆರೋಗ್ಯ ಸಲಹೆಗಾರರ ಬಳಿ ಬಂದು ಹೇಳಿಕೊಳ್ಳಬೇಕು. ಗತಿಸಿಹೋದ ವಿಷಯಗಳ ಬಗ್ಗೆ ಅತಿಯಾಗಿ ಯೋಚಿಸುವುದನ್ನು ನಿಲ್ಲಿಸಬೇಕು. ಜಗತ್ತಿನಲ್ಲಿ ಹೇಗೆ ಎಲ್ಲಾ ಪ್ರಶ್ನೆಗಳಿಗೆ ಉತ್ತರವಿದೆಯೋ, ಹಾಗೆ ಎಲ್ಲಾ ಸಮಸ್ಯೆಗಳಿಗೂ ಪರಿಹಾರವಿದೆ. ನಾವು ಹುಡುಕುವ ಪ್ರಯತ್ನ ಮಾಡಬೇಕು. ಹಾಗಾಗಿ know yourself, accept yourself, love yourself" ಎಂದು ಮನುಷ್ಯನ ಮಾನಸಿಕ ಖಿನ್ನತೆಗೆ ಒಳಗಾದಾಗ ಎದುರುಸುವ ಸಮಸ್ಯೆಗಳ ಬಗ್ಗೆ ವಿವರಿಸಿದರು.
ಎಸ್.ಡಿ.ಎಂ ಕಾಲೇಜು ಉಜಿರೆಯ ಪ್ರಾಂಶುಪಾಲರು ಡಾ.ಬಿ.ಎ ಕುಮಾರ್ ಹೆಗ್ಡೆ ಅಧ್ಯಕ್ಷಿಯ ನುಡಿಗಳನ್ನಾಡಿದರು.
"ನಮ್ಮ ಜೀವನದಲ್ಲಿ ನಾಲ್ಕು ಹಂತಗಳಿವೆ- ಬಾಲ್ಯ, ಕೌಮಾರ್ಯ, ಯೌವ್ವನ, ವೃದ್ಧಾಪ್ಯ. ಬಾಲ್ಯ ಆಟದಲ್ಲಿ ಮುಗಿದು ಹೋಗುತ್ತದೆ. ಕೌಮಾಯದಲ್ಲಿ ತಂದೆ ತಾಯಿಯ ಭಯದಿಂದ ಸ್ವಲ್ಪ ಜವಾಬ್ದಾರಿ ಬರುತ್ತದೆ. ನಂತರ ಕೌಮಾರ್ಯದಿಂದ ಯವ್ವನಕ್ಕೆ ಕಾಲಿಡುವ ಸಮಯ ನಮ್ಮ ಜೀವನದ ಬಹುಮುಖ್ಯ ಘಟ್ಟ. ಆ ಸಮಯದಲ್ಲಿ ನೈಸರ್ಗಿಕ, ಶಾರೀರಿಕ ಹಾಗೂ ಮಾನಸಿಕ ಬದಲಾವಣೆಗಳಾಗುತ್ತವೆ. ಈ ಸಂದರ್ಭದಲ್ಲಿ ಯುವಕ ಯುವತಿ ಯಾವುದು ಸರಿ, ಯಾವುದು ತಪ್ಪು ಎಂಬುದರ ಬಗ್ಗೆ ವಿವೇಕ ಬೆಳೆಸಿಕೊಳ್ಳಬೇಕು"ಎಂದರು.
ಕಾರ್ಯಕ್ರಮದಲ್ಲಿ ಸಾಮಾಜಿಕ ಜವಾಬ್ದಾರಿ ಉಪಕ್ರಮ ಸಮಿತಿಯ ಸದಸ್ಯರಾದ ಶೃತಿ ಮಂಕಿಕರ್, ಮಹಿಳಾ ಅಭಿವೃದ್ಧಿ ಕೋಶದ ಸ್ವಯಂಸೇವಕರು ಮತ್ತು ವಿದ್ಯಾರ್ಥಿಗಳಾದ ಅಕ್ಷತಾ ಜೈನ್, ಎನ್.ಎಸ್.ಎಸ್ ಘಟ್ಟಕದ ಯೋಜನಾಧಿಕಾರಿಗಳು ಹಾಗೂ ಮಹಿಳಾ ಅಭಿವೃದ್ಧಿ ಕೋಶದ ಸಂಯೋಜಕರಾದ ಪ್ರೊ. ದೀಪಾ ಆರ್.ಪಿ ಹಾಗು ಸ್ವಯಂಸೇವಕರು ಉಪಸ್ಥಿತರಿದ್ದರು. ಸ್ವಯಂಸೇವಕಿಯರಾದ ವೀಕ್ಷಾ, ಮೇಘ, ತೃಪ್ತಿ ಪ್ರಾರ್ಥಿಸಿದರು. ವಿನುತಾ ಸ್ವಾಗತಿಸಿ, ತನ್ವಿಕಾ ವಂದಿಸಿದರು. ಎನ್.ಎಸ್.ಎಸ್ ಕಾರ್ಯದರ್ಶಿ ಸಿಂಚನ ನಿರೂಪಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ