ನವರಾತ್ರಿಯ ಪರ್ವಕಾಲದಲ್ಲಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಅನುಗ್ರಹಿಸುತ್ತಿರುವ "ಲಲಿತೋಪಾಖ್ಯಾನ" ಪ್ರವಚನದ ಅಕ್ಷರರೂಪ.
ರಾಜನೀತಿಯಲ್ಲಿ ಒಂದು ಮಾತಿದೆ; ಎದುರಿಸು. ಸಾಧ್ಯವಾಗದಿದ್ದರೆ, ದಿಕ್ಕು ತಪ್ಪಿಸು. ನಮ್ಮೆಲ್ಲರಿಗೂ ಸವಾಲು ಬಂದಾಗ, ಒಂದು ಶಕ್ತಿ ನಮ್ಮ ಎದುರಿಗೆ ಬಂದು ನಿಂತಾಗ ಸಾಮಥ್ಯ೯ ಇದ್ದರೆ ಹೋರಾಡಬೇಕು ಇಲ್ಲದಿದ್ದರೆ ಆ ಶಕ್ತಿಯ ದಿಕ್ಕು ತಪ್ಪಿಸಬೇಕು. ಭಂಡಾಸುರನನ್ನು ಎದುರಿಸಲು ಸಾಧ್ಯವಿರಲಿಲ್ಲ. ದೇವತೆಗಳಿಗಾಗಲಿ, ಬೇರೆ ಯಾವ ದೇವ ಗಣಗಳಿಗಾಗಲಿ ಭಂಡಾಸುರನನ್ನು ಎದುರಿಸುವ ಸಾಮರ್ಥ್ಯವಿರಲಿಲ್ಲ. ಸಾಲದ್ದಕ್ಕೆ ವರ ಬಲ ಬೇರೆ- ಎದುರಿರುವವನ ಅರ್ಧ ಶಕ್ತಿ ಅವನಿಗೆ ಸಿಗುವಂತದ್ದು, ಅವನ ಶಕ್ತಿ ಪ್ರತ್ಯೇಕ. ಹೀಗಾಗಿ ಪ್ರತಿಭಟರು ಯಾರಿದ್ದರೂ ಸಹಿತ ಅವರು ಇವನ ಮುಂದೆ ಸೋಲಲೇಬೇಕು ಎನ್ನುವ ಪರಿಸ್ಥಿತಿ, ಹೀಗಾಗಿ ಆತನನ್ನು ಎದುರಿಸುವವರು ಯಾರೂ ಇರಲಿಲ್ಲ. ಏನು ಮಾಡಬೇಕು? ಎಂದರೆ, ಎದುರಿಸಲು ಆಗದಿದ್ದರೆ ದಿಕ್ಕು ತಪ್ಪಿಸಬೇಕು. ಹಾಗೆ ಮೋಹಿನಿಯ ಪ್ರವೇಶ ಆಗಿರುವಂತದ್ದು. ಶ್ರೀಹರಿಯ ಸೃಷ್ಟಿಯಾಗಿ ಮೋಹಿನಿ, ತನ್ನ ಬಳಗದೊಂದಿಗೆ ಭಂಡಾಸುರ ಹಾಗೂ ಆತನ ಬಳಗವನ್ನು ಮೋಹಿಸಿ, ಅವರ ದಿಕ್ಕನ್ನು ಬೇರೆ ಮಾಡಿದಾಗ ಪ್ರಪಂಚಕ್ಕೆ ಸ್ವಲ್ಪ ಸಮಾಧಾನ. ಏಕೆಂದರೆ ಪ್ರಪಂಚದ ಮೇಲೆ ಗಮನ ಇಲ್ಲವಲ್ಲ, ದೇವತೆಗಳ ಮೇಲೆ ಎಲ್ಲಿಯವರೆಗೆ ಆತನ ಗಮನ ಇದೆಯೋ, ದೇವತೆಗಳು ಅವನ ಜೀತದಾಳುಗಳಾಗಿಯೇ ಇರಬೇಕು. ಇವನ ಪೀಡೆಯನ್ನು, ಅನುಕ್ಷಣವೂ, ಅನುದಿನವೂ ಅನುಭವಿಸಬೇಕು. ಒಂದು ಸಮಾಧಾನ ತಾತ್ಕಾಲಿಕವಾಗಿ ಸಿಗಬೇಕು ಅಂದರೆ, ಅವನ ಲಕ್ಷ್ಯ ಬೇರೆ ಕಡೆಗೆ ಹರಿಸಬೇಕು. ಹೀಗಾಗಿ ಮೋಹಿನಿ ಹಾಗೂ ಬಳಗ ಆತನ ಗಮನವನ್ನು ವಿಮೋಹನಗೊಳಿಸಿ, ಆ ಮೋಹದಲ್ಲೆ ಅವರು ದಿನ - ರಾತ್ರಿಯನ್ನು ಕಳೆಯುವಂತೆ ಮಾಡಿದಾಗ ಸಮಾಧಾನ ದೊರಕಿದ್ದು ತಾತ್ಕಾಲಿಕವಾಗಿ ಇರುವಂಥದ್ದು.
ಈ ವಕೀಲರಲ್ಲಿ ಒಂದು ಪರಿಭಾಷೆ ಉಂಟು, ದೊಡ್ಡ ವಕೀಲರು, ಸಣ್ಣ ವಕೀಲರಿಗೆ ಮಂತ್ರೋಪದೇಶ ಮಾಡುತ್ತಾರಲ್ಲ, ಕೆಲವು ಗುಟ್ಟು ಹೇಳಿಕೊಡುತ್ತಾರೆ, ಅಂದರೆ convince the court ಅದಾಗದೆ ಇದ್ದರೆ confuse the court. ಇದೆರಡೆ ದಾರಿ. ಒಂದು ನ್ಯಾಯಾಧೀಶರನ್ನು convince ಮಾಡಬೇಕು, ಸಾಧ್ಯವಾಗದೆ ಇದ್ದರೆ confuse ಮಾಡಬೇಕು. ಹಾಗೆ ಇದು ದೇವತೆಗಳ ದಾರಿ ಆಗಿರುವಂಥದ್ದು. ನಿನ್ನೆ ನಾವು ಮೋಹದ ಬಗ್ಗೆ ಹೇಳುತ್ತಿದ್ದೆವು. ಮೋಹ ಯಾರಿಗೆ ಉಂಟಾಯಿತೋ ಅವರಿಗೆ ಗೊತ್ತೇ ಆಗುವುದಿಲ್ಲ. ತಾವು ಮೋಹಪಾಶದಲ್ಲಿ ಬಿದ್ದಿದ್ದೇವೆ ಎಂದು ಅವರಿಗೆ ಅನ್ನಿಸುವುದೇ ಇಲ್ಲ, ಬೇರೆಯವರು ಗುರುತಿಸುತ್ತಾರೆ. ಈಗ ಒಬ್ಬ ವ್ಯಕ್ತಿ ಮೋಹದಲ್ಲಿ ಬಿದ್ದಿದ್ದಾನೆ ಎಂದು ಬೇರೆಯವರು ಗುರುತಿಸುವುದು ಹೇಗೆ ಎಂದರೆ, ಯಾರು ಮೋಹದಲ್ಲಿ ಬಿದ್ದಿದ್ದಾರೋ ಅವರಿಗೆ ಒಂದು ಗೀಳು ಹಿಡಿದಿರುತ್ತದೆ, ಯಾವ ವಿಷಯಕ್ಕೆ ಮೋಹಕ್ಕೆ ಬಿದ್ದಿರುತ್ತಾರೋ ಅದೊಂದನ್ನೇ ಮಾಡುತ್ತಿರುತ್ತಾರೆ. ಬೇರೆ ಎಲ್ಲವನ್ನೂ, ತಮ್ಮ ಕರ್ತವ್ಯವನ್ನೂ ಮರೆತುಬಿಡುತ್ತಾರೆ. ತಮ್ಮ ಶ್ರೇಯಸ್ಸಿನ ಮಾರ್ಗವನ್ನು ಮರೆಯುತ್ತಾರೆ. ಸುಲಭವಾಗಿ ಹೇಳುವುದಾದರೆ ಮಕ್ಕಳಿಗೆ ಮೊಬೈಲ್ ಮೇಲೆ ಮೋಹ ಬಂತು ಎಂದರೆ ದಿನವಿಡೀ ಅದನ್ನೇ ನೋಡುತ್ತಿರುತ್ತವೆ. ಓದುವ ಸಮಯದಲ್ಲೂ ಅದೇ, ಊಟ ಮಾಡುವ ಸಮಯದಲ್ಲೂ ಅದೇ, ರಾತ್ರಿ ನಿದ್ರೆ ಮಾಡುವ ಸಮಯದಲ್ಲೂ ಅದನ್ನೇ ಹಿಡಿದಿರುತ್ತವೆ. ಏನದು? ಎಂದರೆ ಮೋಹ. ಕರ್ತವ್ಯ ಮರೆಯುವುದು ಮೋಹದ ಲಕ್ಷಣಗಳಲ್ಲಿ ಒಂದು. ಮಾಡಲೇಬೇಕಾದ ಕರ್ತವ್ಯ ಮರೆತು ಒಂದೇ ಕೆಲಸವನ್ನೇ ಪದೇ ಪದೇ ಮಾಡುತ್ತಿರುವುದು. ಉದಾಹರಣೆಗೆ ಮದ್ಯದ ಮೇಲೆ ಮೋಹ ಬಂತು ಎಂದುಕೊಳ್ಳಿ, ಅವನು ಬೋಧ ತಪ್ಪುವವರೆಗೂ ಕುಡಿಯುತ್ತಾನೆ. ಬೋಧ ಬಂದ ಕೂಡಲೇ ಮತ್ತೆ ಅದನ್ನೇ ಮಾಡುತ್ತಾನೆ. ಮೋಹ ಒಂದು ಹದದಲ್ಲಿ ಇದ್ದರೆ ಸರಿ. ಮಿತಿ ಮೀರಿದರೆ ಹೀಗೆ ತಿರುಗುವಂಥದ್ದು.
ರಾಮಾಯಣದಲ್ಲಿ ಸುಗ್ರೀವನ ದೃಷ್ಟಾಂತ, ನಿಮಗೆಲ್ಲಾ ಗೊತ್ತೇ ಇದೆ. ರಾಮ ಮತ್ತು ಸುಗ್ರೀವನ ನಡುವೆ ಒಂದು ಒಪ್ಪಂದ ಆಯಿತು. ಅದೇನೆಂದರೆ, ರಾಮ ವಾಲಿಯನ್ನು ಸಂಹಾರ ಮಾಡಿ ಕಪಿರಾಜ್ಯವನ್ನು ಸುಗ್ರೀವನಿಗೆ ಮರಳಿ ಕೊಡಿಸಬೇಕು. ಪ್ರತಿಯಾಗಿ ಸುಗ್ರೀವ ಸೀತೆಯನ್ನು ಹುಡುಕುವಲ್ಲಿ ಮತ್ತು ಮರಳಿ ಪಡೆಯುವಲ್ಲಿ ರಾಮನಿಗೆ ಸಹಾಯ ಮಾಡಬೇಕು. ಒಪ್ಪಂದದ ಪ್ರಕಾರ ರಾಮ ವಾಲಿ ವಧೆಯನ್ನು ಮಾಡಿದ, ಅಷ್ಟೊತ್ತಿಗೆ ಮಳೆಗಾಲ ಶುರುವಾಯಿತು, ಅವತ್ತಿನ ಕಾಲದಲ್ಲಿ ಮಳೆಗಾಲದಲ್ಲಿ ಓಡಾಟ ಏನೂ ಇಲ್ಲ, ಏನೇ ಇದ್ದರೂ ಮಳೆ ಕಳೆದ ಮೇಲೆಯೇ. ಸಂಚಾರ ಏಕೆ ಇರುವುದಿಲ್ಲ ಎಂದರೆ ಮಾರ್ಗವೆಲ್ಲಾ ಜಲಾವೃತವಾಗಿರುತ್ತದೆ. ಹಾಗಾಗಿ ಈ ಸಮಯದಲ್ಲಿ ನೀನು ಸೀತಾನ್ವೇಷಣೆಗೆ ಹೋಗಬೇಕೆಂದು ನಾನೇನು ಹೇಳುವುದಿಲ್ಲ, ಮಳೆಗಾಲ ಮುಗಿಯುವರೆಗೆ ಅವಕಾಶ, ಮಳೆಗಾಲ ಮುಗಿದ ಮರುದಿನ ನೀನು ಆ ಕಾರ್ಯವನ್ನು ಮಾಡಬೇಕು. ಚತ್ವಾರೋ ವಾರ್ಷಿಕ ಮಾಸಃ ಅವತ್ತಿನ ಕಾಲದಲ್ಲಿ ನಾಲ್ಕು ತಿಂಗಳು ಗಟ್ಟಿ ಮಳೆಗಾಲ ಎಂದು ಲೆಕ್ಕ. ಆಗಲಿ ಎಂದು ಸುಗ್ರೀವ ಕಿಷ್ಕಿಂಧೆ ಗುಹೆಯೊಳಗೆ ಪ್ರವೇಶ ಮಾಡಿದವನು ಮೋಹಕ್ಕೆ ಒಳಗಾದ. ಬಹಳ ದಿನ ಆಗಿದ್ದವು ಆತನಿಗೆ ಈ 'ಮ' ಕಾರಗಳು ಸಿಗದೆ. ಮದಿರೆಯೋ ಮಾನಿನಿಯೋ.. ಹಾಗಾಗಿ ಅವನಿಗೆ ದಿಕ್ಕು, ಕರ್ತವ್ಯ ಮರೆತುಹೋಯಿತು. ಈ 'ಮ'ಕಾರಗಳಲ್ಲಿಯೇ ಮುಳುಗಿ ಹೋಗಿದ್ದರಿಂದ, ಮಳೆಗಾಲ ಕಳೆದದ್ದು ಗೊತ್ತೇ ಆಗಲಿಲ್ಲ. ಮಂತ್ರಿಗಳು ಎಚ್ಚರಿಸುತ್ತಾರೆ, ಆದರೂ ಎಚ್ಚರಿಕೆ ಆಗಲಿಲ್ಲ. ಲಕ್ಷ್ಮಣ ಕಿಷ್ಕಿಂಧೆ ಬಾಗಿಲಿಗೆ ಬಂದು ನಿಂತು ಧನುಷ್ಠೇಂಕಾರ ಮಾಡಿದಾಗ, ಇಡೀ ಕಿಷ್ಕಿಂಧೆ ಕಪಿಗಳು ಒಂದೇ ಸ್ವರದಲ್ಲಿ ಹಾಹಾಕಾರ ಮಾಡಿದಾಗ ಆತನಿಗೆ ಅಮಲು ಇಳಿದು ಎಚ್ಚರವಾಯಿತಂತೆ! ಆತನಿಗೆ ಉಪಕಾರದ ಸ್ಮರಣೆ ಬೇಕಿತ್ತು, ಋಣ ತೀರಿಸುವ ಕಾರ್ಯ ಇದೆಯಲ್ಲ. ಭಂಡಾಸುರನಿಗೆ ಇದೇ ಬಗೆಯ ಸ್ಥಿತಿ ಉಂಟಾಗಿರುವಂಥದ್ದು. ಯಾವಾಗ ಮೋಹಿನಿಯ ಪ್ರವೇಶವಾಯಿತೋ, ಭಂಡಾಸುರ ತನ್ನ ನೆಲೆಯನ್ನು ಕಳೆದುಕೊಂಡ. ಹಾಗಾಗಿ ರಾಜ್ಯಭಾರವನ್ನು ಮರೆತ. ಹಾಗೆಯೇ ಎಲ್ಲಿಂದ ಅಪಾಯ ಬರುತ್ತದೆ, ಹೇಗೆ ರಕ್ಷಣೆ ಮಾಡಿಕೊಳ್ಳಬೇಕು, ಎನ್ನುವುದನ್ನು ಮರೆತ. ಹಾಗಾಗಿ ರಾಜನಾದವನು ಸದಾಕಾಲ ಜಾಗರೂಕನಾಗಿಯೇ ಇರಬೇಕು. ವಾಲ್ಮೀಕಿಗಳು ಬಣ್ಣಿಸುವಂತೆ, ದಶರಥನಾಗಲಿ ಆತನ ಮಂತ್ರಿಗಳಾಗಲಿ, ಅವರ ನೀತಿಯ ನೇತ್ರವು ತೆರೆದೇ ಇರುತ್ತಿತ್ತಂತೆ. ಅದಕ್ಕೆ ನಿದ್ದೆ ಇಲ್ಲ. ಆದರೆ ಭಂಡಾಸುರ ಮೋಹ, ಗೀಳಿನ ಕಾರಣದಿಂದ ಎಲ್ಲವನ್ನೂ ಮರೆತಿದ್ದಾನೆ. ದೇವತೆಗಳಿಗಾಗಲಿ, ಸಾತ್ವಿಕ ಶಕ್ತಿಗಳಿಗಾಗಲೀ ಇದೇ ಬೇಕಾಗಿದ್ದು, ಒಂದು ಸಾರಿ ತಮ್ಮ ಮೇಲಿರುವ ಗಮನ ಹೋಗಲಿ ಎಂದು.
ಭಕ್ತಿಯಲ್ಲಿ ಕೂಡ ಹೀಗೇ ಆಗುತ್ತದೆ, ಈಗ ಯಾರು ಭಕ್ತಿಯಲ್ಲಿ ಪರವಶ ಆಗುತ್ತಾರೋ, ಅವರಿಗೆ ಬೇರೆ ಎಲ್ಲವೂ ಮರೆತು ಹೋಗುತ್ತದೆ. ಹಗಲು ರಾತ್ರಿ ಅದೇ ನೆನಪು ಅವರಿಗೆ, ಭಕ್ತ ಶ್ರೇಷ್ಠರೆಲ್ಲಾ ಹಾಗೇ ಇದ್ದರು. ವ್ಯತ್ಯಾಸ ಏನು ಅಂದರೆ ಮೋಹದಲ್ಲಿ ಮುಳುಗಿದಾಗ ಅವನು ಹಾಳಾಗುತ್ತಾ ಹೋಗುತ್ತಾನೆ. ಭಕ್ತಿಯಲ್ಲಿ ಮುಳುಗಿದಾಗ ಆತ್ಮೋನ್ನತಿ ಆಗುತ್ತಿರುತ್ತದೆ.
ಹಾಗಾಗಿ ನಾವು ಭಕ್ತಿ ವಶರಾದರೆ ತೊಂದರೆ ಏನು ಇಲ್ಲ, ಮೋಹ ವಶವಾದರೆ ನಮಗೂ ಆಪತ್ತು, ನಮ್ಮನ್ನು ನಂಬಿದವರಿಗೂ ಆಪತ್ತು ಎನ್ನುವುದಕ್ಕೆ ಭಂಡಾಸುರ ಬಹು ದೊಡ್ಡ ದೃಷ್ಟಾಂತ.
ಅದಿಲ್ಲದಿದ್ದರೆ ಒಂದು ಕಡೆಯಿಂದ ಗುರು ನಿಷ್ಠೆ, ಶಿವ ಭಕ್ತಿ, ಸತ್ಕರ್ಮಗಳು ಇವೆಲ್ಲವನ್ನೂ ಮಾಡಿಕೊಂಡು, ಬಹಳ ಸುಖವಾಗಿ ಇದ್ದವನು, ದಾನವ ಸಂಕುಲವನ್ನು ಸುಖವಾಗಿ ಇಟ್ಟವನು, ಮೈಮರೆತ. ನಿನ್ನೆ ಹೇಳಿದ ಹಾಗೆ ಭಂಡನ ಪೀಡೆಗೆ ಇದು ತಡೆಯಾಜ್ಞೆ ಮಾತ್ರ, ಪ್ರಕರಣ ಸಂಪೂರ್ಣ ಇತ್ಯರ್ಥವಾಗಿಲ್ಲ. ದೇವತೆಗಳು ನಿರಾತಂಕರಾದರು, ಮೆಲ್ಲನೆ ಭಂಡಾಸುರನ ಊಳಿಗವನ್ನು ಬಿಟ್ಟು ತಮ್ಮ ಊರನ್ನು ಸೇರಿಕೊಂಡರು. ಭಂಡಾಸುರನಿಗೆ ಏನೂ ಗೊತ್ತಾಗಲೇ ಇಲ್ಲ. ಇಂತಹ ಸಮಯದಲ್ಲಿ ದೇವೇಂದ್ರನಿರುವಲ್ಲಿಗೆ ನಾರದರು ಬರುತ್ತಾರೆ. ನಾರದರು ಸೃಷ್ಟಿಯ ಒಂದು ಕೊಂಡಿ ಇದ್ದ ಹಾಗೆ, ಇನ್ನೊಂದು ದ್ವೀಪದಲ್ಲಿ ಇರಲಿ ಸಮುದ್ರದ ಮಧ್ಯದಲ್ಲಿ ಇರಲಿ ದಿಗಂತದಲ್ಲಿ ಇರಲಿ, ಕೂಡಿಸಬೇಕು ಎಂದು ವಿಧಿಗೆ ಇದ್ದರೆ ಆತ ಕೂಡಿಸುತ್ತಾನಂತೆ. ನಾರದರು ಬಂದರು ಎಂದರೆ ಒಂದೋ ಜಗಳ ಪ್ರಾರಂಭವಾಗುತ್ತದೆ ಎಂದರ್ಥ ಇಲ್ಲವೇ ಇರುವ ಜಗಳ ಇತ್ಯರ್ಥವಾಗುತ್ತದೆ ಎಂದರ್ಥ. ಇದರಲ್ಲಿ ಯಾವುದಾದರೊಂದು ಆಗುವಂತದ್ದು.
ದೇವತೆಗಳ ನಡುವೆ ಸಿಂಹಾಸನವೇರಿ ಕುಳಿತಿದ್ದಾನೆ ದೇವೇಂದ್ರ. ಅದೇನು ವಿಶೇಷ? ಯಕ್ಷಗಾನದ ವಡ್ಡೋಲಗ ಇರುವುದೇ ಹಾಗೆ ಎಂದು ಹೇಳಬೇಡಿ. ಅಪರೂಪದಲ್ಲಿ ದೇವೇಂದ್ರ ತನ್ನ ಸಿಂಹಾಸನ ಏರಿ ಕುಳಿತಿದ್ದಾನೆ. ಸಿಂಹಾಸನಗಳೆಲ್ಲಾ ಹಾಗೇ; ಯಾವಾಗ ಬರುತ್ತದೆ, ಹೋಗುತ್ತದೆ ಗೊತ್ತೇ ಆಗುವುದಿಲ್ಲ. ಅಧಿಕಾರವೂ ಹಾಗೇ.. ಶಾಶ್ವತವಲ್ಲ. ಈಗ ಇದ್ದರೆ ನಾಳೆ ಇರಬೇಕೆಂದಿಲ್ಲ ಅಥವಾ ಈಗ ಇರದಿದ್ದರೆ ನಾಳೆ ಇರಬಾರದು ಅಂತ ಕೂಡ ಇಲ್ಲ. ಧಿಗ್ರಾಜ್ಞಾಂ ಚಂಚಲಾ ಶ್ರಿಯಃ ಈ ರಾಜರುಗಳ ಚಂಚಲವಾದ ಸಿರಿಗೆ ಧಿಕ್ಕಾರ. ಒಂದು ಕ್ಷಣ ಎಂತಹ ವೈಭವ, ಇನ್ನೊಂದು ಕ್ಷಣ ಏನಿಲ್ಲ ಎಂಬ ಸ್ಥಿತಿ. ರಾಮನಂತಹ ರಾಮ ಈಗ ಸಿಂಹಾಸನ ಏರಬೇಕು. ಆದರೆ ಪಟ್ಟವೇರುವ ರಾಮ ಬೆಟ್ಟವ ಸೇರಿದ, ಹೀಗೆಲ್ಲಾ ಆಗುತ್ತದೆ.
ಸದ್ಯ ಭಂಡಾಸುರನಿಗೆ ತಿಳಿಯದ ಹಾಗೆ ಸಿಂಹಾಸನ ಏರಿ ಕುಳಿತಿದ್ದಾನೆ. ನಾರದರ ಕಂಡ ದೇವೇಂದ್ರ ಅವರನ್ನು ಗೌರವಿಸಿ, ಅವರ ಉದ್ದೇಶಿಸಿ ಹೇಳಿದ, ಭಗವನ್ ಎಲ್ಲವನ್ನು ತಿಳಿದವರು ನೀವು, ನಿಮಗೆ ಉತ್ಕರ್ಷವೂ ಗೊತ್ತು, ಪತನವೂ ಗೊತ್ತು. ಒಳಿತು, ಕೆಡಕು ಎಲ್ಲವೂ ಗೊತ್ತು. ನೀವು ಬಂದಿರಿ ಎಂದರೆ, ನನಗೇನೋ ಒಳ್ಳೆಯದಾಗುತ್ತದೆ ಎಂದರ್ಥ. ಹಾಗಾಗಿ ತಮ್ಮ ಮಾತನ್ನು ಕೇಳಲು ಆಸಕ್ತಿ ನನಗೆ, ಅದರಿಂದ ನನಗೆ ಯಾವುದಾದರೂ ದಾರಿ ಸಿಗಬಹುದು ನನ್ನನ್ನು ಕೃತಾರ್ಥನನ್ನಾಗಿ ಮಾಡಿ ಎಂದು ಸತ್ಕರಿಸಿ ಪ್ರಾರ್ಥಿಸುತ್ತಾನೆ. ಆಗ ನಾರದರು ದೇವೇಂದ್ರನಿಗೆ ಉಪದೇಶ ಮಾಡಿದ್ದು ಲಲಿತೋಪಾಸನೆ, ಆದಿಪರಾಶಕ್ತಿಯ ಸೇವೆ. ಈ ಪ್ರವಚನ ಪ್ರಾರಂಭ ಮಾಡಬೇಕಾದರೆ ಹೇಳಿದ್ದೆವು, ಅಗಸ್ತ್ಯರು ಭೂಲೋಕವನ್ನು ಸಂಚಾರ ಮಾಡುತ್ತಾರೆ. ಎಲ್ಲಿಗೆ ಹೋದರೂ ಅವರಿಗೆ ಕಂಡದ್ದು ನೋವು, ದುಃಖ, ನೆಮ್ಮದಿ ಇಲ್ಲದ ಸ್ಥಿತಿ. ಇದಕ್ಕೆ ಪರಿಹಾರವೇನು ಎಂದು ತಪಸ್ಸು ಮಾಡಿದಾಗ ಪ್ರತ್ಯಕ್ಷವಾಗಿದ್ದು ಶ್ರೀ ಮಹಾವಿಷ್ಣು ಹಯಗ್ರೀವನ ರೂಪದಲ್ಲಿ. ಆಗ ಹಯಗ್ರೀವ ಕೊಟ್ಟಿದ್ದು ರಾಜರಾಜೇಶ್ವರಿಯ ತ್ರಿಪುರಸುಂದರಿಯ ಮಂತ್ರಗಳು, ಶ್ರೀಚಕ್ರಾರ್ಚನೆ ವಿಧಾನಗಳು. ಇವುಗಳು ದುಃಖ ಶಮನದ ದಾರಿ, ವಿಧಿವತ್ತಾಗಿ ಅಥವಾ ಭಕ್ತಿಯಿಂದ ಮಾಡಿದರೆ ಅಂತಹವರು ದುಃಖಗಳಿಂದ ಬಿಡುಗಡೆ ಹೊಂದುತ್ತಾರೆ.
ಇನ್ನೂ ಚೆನ್ನಾಗಿ ಮಾಡಿದರೆ ಮುಕ್ತಿಯನ್ನು ಹೊಂದುತ್ತಾನೆ ಎಂದು ಹೇಳಿದ್ದಾರೆ. ಇಂದ್ರನದ್ದು ಅದೇ ಪ್ರಶ್ನೆ, ನನ್ನ ಹಾಗೂ ನನ್ನವರ ದುಃಖ ಬಗೆಹರಿಯುವ ದಾರಿ ಯಾವುದು ಎಂದು ಕೇಳಿದಾಗ ಇಂದ್ರನಿಗೆ ಹೇಳುತ್ತಾರೆ, ಭಂಡಾಸುರ ಮೋಹದಲ್ಲಿ ಇದ್ದಾನೆ, ವಿಷ್ಣು ಮಾಯೆಯಾದ ಮೋಹಿನಿಯ ಪ್ರಭಾವದಲ್ಲಿ. ಆದರೆ ಇದೇ ಶಾಶ್ವತ ಎಂದು ತಿಳಿಯಬೇಡ. 'ಇದು ಹೀಗೇ ಇರದು'. ಎಂತಹ ಕಷ್ಟ ಬಂದರೂ ಕುಗ್ಗಬಾರದು ಏಕೆಂದರೆ ಇದು ಹೀಗೇ ಇರದು ಕಾಲ ಬದಲಾಗುತ್ತದೆ, ಸಂದರ್ಭ ಬೇರೆ ಬರುತ್ತದೆ ಮುಂದೆ. ನಿನ್ನೆ ನಾವು ನಿಮಗೆ ಹೇಳಿದ ಹಾಗೆ ಮೋಹ ಅದು ಸ್ಥಿರ ಅಲ್ಲ, ಅದು ಸ್ವಲ್ಪ ಕಾಲ ಇರುವುದಷ್ಟೇ. ಇರುವಷ್ಟು ಸಮಯ ಮಾಡಬೇಕಾದ, ಮಾಡಬಾರದ ಅನಾಹುತಗಳನ್ನು ಮಾಡಿ ಹೋಗುತ್ತದೆ. ಒಂದು ನಶೆ ಇದ್ದ ಹಾಗೆ ಸ್ವಲ್ಪ ಕಾಲವಷ್ಟೇ ಇರುವಂತಹದ್ದು. ಮೋಹ ಯಾವತ್ತೂ ಶಾಶ್ವತ ಅಲ್ಲ. ಹಾಗಾಗಿ ನೀನು ಈಗ ಆರಾಮವಾಗಿ ಕುಳಿತುಕೊಳ್ಳುವ ಸಮಯವಲ್ಲ. ಭಂಡಾಸುರನ ಮೋಹ ಶಾಶ್ವತ ಅಲ್ಲ. ಒಂದು ವೇಳೆ ಈ ಮೋಹದಿಂದ ಹೊರಗೆ ಬಂದರೆ, ಮೋಹಿನಿಯ ಮೋಹ ಪಾಶದಿಂದ ಭಂಡಾಸುರ ಹೊರಗೆ ಬಂದ ಅಂತಾದರೆ ನಿಮಗೆ ಉಳಿಗಾಲ ಇಲ್ಲ. ನಿಮಗೆ ಮಾತ್ರವಲ್ಲ ಮೂರು ಲೋಕಗಳಿಗೂ ಉಳಿಗಾಲವಿಲ್ಲ. ಪ್ರಳಯ ಕಾಲದ ಅಗ್ನಿಯಂತೆ ಅವನು ಲೋಕವನ್ನೇ ಸುಡುತ್ತಾನೆ. ಅವನನ್ನು ಎದುರಿಸಲು ನಿನ್ನಿಂದಲೂ ಸಾಧ್ಯವಿಲ್ಲ ಎಂಬುದು ನಿನಗೂ ಗೊತ್ತು ನನಗೂ ಗೊತ್ತು. ಏಕೆಂದರೆ, "ಅಧಿಕಸ್ಥವ ತೇಜೋಭಿಃ" ನಿನಗಿಂತ ಹೆಚ್ಚು ತೇಜಸ್ವಿ ಅವನು, ಅಷ್ಟೇ ಅಲ್ಲದೆ "ಮಾಯಾಬಲೇನ ಚ" ಬಲ ಮತ್ತು ಮಾಯಾಬಲ ನಿನಗಿಂತ ಅಧಿಕವಾಗಿ ಅವನಲ್ಲಿ ಇರುವಂತಹದ್ದು. ಹಾಗಾಗಿ ಅವನು ಎಚ್ಚೆತ್ತುಕೊಂಡರೆ ನಿಮಗೆ ಯಾರಿಗೂ ಉಳಿಗಾಲವಿಲ್ಲ. ಈಗಲೇ ನೀನು ಪರಿಹಾರದ ದಾರಿಯನ್ನು ಹುಡುಕಬೇಕು. ಅವನು 'ಎಚ್ಚೆತ್ತುಕೊಳ್ಳುವ ಮೊದಲು ಶಾಶ್ವತವಾಗಿ ಎಚ್ಚೆತ್ತುಕೊಳ್ಳದ' ಹಾಗೆ, ಶಾಶ್ವತವಾಗಿ ಅವನು ಇಲ್ಲದಂತೆ ಮಾಡುವ ಮಾರ್ಗವನ್ನು ನೀವು ಅನ್ವೇಷಣೆ ಮಾಡಬೇಕೇ ಹೊರತು, ಹೀಗೆ ಸದ್ಯಕ್ಕೆ ಏನು ತೊಂದರೆಯಿಲ್ಲ ಎಂದು ಸಮಯ ಹರಣ ಮಾಡಬಾರದು.
ಹಾಗಿದ್ದರೆ ಏನು ಮಾಡಬೇಕು ಗುರುಗಳೇ? ಏನು ಬೇಕಿದ್ದರೂ ಹೇಳಿ ಅದನ್ನು ಮಾಡಲಿಕ್ಕೆ ಸಿದ್ಧ. ಏನು ಮಾಡಿದರೆ ನಾವು ಭಂಡಾಸುರನನ್ನು ಮೀರಿಸಬಹುದು? ಅವನ ನಾಶವನ್ನು ಸಾಧಿಸಬಹುದು ಎಂದು ದೇವತೆಗಳು ಕೇಳಿದಾಗ, ನಾರದರು ಇದೇ ದಾರಿಯನ್ನು ಹೇಳುತ್ತಾರೆ: ಪರಾಶಕ್ತಿಯ ಆರಾಧನೆ ಮಾಡಿ, ಅದೊಂದೇ ದಾರಿ, ಬಿಟ್ಟರೆ ಬೇರೆ ಯಾವ ದಾರಿಯೂ ಕೂಡ ಇಲ್ಲ. ನೂರಾರು ಕೋಟಿ ಯುಗಗಳು ಕಳೆದರೂ ಕೂಡ ಬೇರೆ ಯಾವ ದಾರಿಯಿಂದ ಭಂಡಾಸುರನನ್ನು ಮಣಿಸಲು ಸಾಧ್ಯವಿಲ್ಲ. ಒಂದೇ ದಾರಿ ಇರುವಂತಹದ್ದು ಪರಾಶಕ್ತಿ. ಆಕೆ ಎದ್ದು ಬರಬೇಕು, ಆಕೆ ಭಂಡನಿಗೆ ಎದುರಾಗಬೇಕು. ಆ ಸನ್ನಿವೇಶ ಸೃಷ್ಟಿ ಆಗಬೇಕು. ಹಾಗಿದ್ದರೆ ನೀವೆಲ್ಲಾ ಉಳಿಯಲು ಸಾಧ್ಯ. ಹಾಗಾಗಿ ಪರಾಶಕ್ತಿಯ ಆರಾಧನೆಯನ್ನು ಮಾಡಿ. ಬಾಲಿಶರೇ ನಿಮಗೆ ಬುದ್ಧಿ ಇಲ್ಲ. ತಾತ್ಕಾಲಿಕ ರಕ್ಷೆ ಸಿಕ್ಕಿತು ಎಂದು ಭವಿಷ್ಯವನ್ನು ಮರೆತು ಕಾಲ ಕಳೆಯುತ್ತಿದ್ದೀರಿ. ಹೋಗಿ ತಪಸ್ಸನ್ನು ಮಾಡಿ, ಶ್ರೀಚಕ್ರೇಶ್ವರಿಯನ್ನು, ರಾಜರಾಜೇಶ್ವರಿಯನ್ನು ಒಲಿಸಿ ಎಂಬುದಾಗಿ ಹೇಳಿ, ಆ ಶ್ರೀವಿದ್ಯೆಯನ್ನು ಅಂದರೆ ರಾಜರಾಜೇಶ್ವರಿಯ ಉಪಾಸನೆಯ ವಿಧಾನವನ್ನು ಇಂದ್ರನಿಗೆ ಅವರು ಹೇಳಿ ಕೊಡುತ್ತಾರೆ. "ದುರ್ಗೇ ಸ್ಮೃತಾ ಹರಸಿ ಭೀತಿಮಶೇಷಜಂತೋಃ" ಎನ್ನುವ ಹಾಗೆ, ಅವಳನ್ನು ನೆನಪು ಮಾಡಿದರೆ ಸಾಕು ಭಯ ಹಾಗೂ ಕಷ್ಟಗಳು ದೂರವಾಗುತ್ತದೆ. ಅವಳ ಸೇವೆಯನ್ನು ಮಾಡಿ ಎಂಬುದಾಗಿ ವಿಧಾನಗಳನ್ನು ನಾರದರು ನಿರೂಪಿಸುತ್ತಾರೆ. ಹಾಗೆ ಈ ತಡೆಯಾಜ್ಞೆ ಶಾಶ್ವತವಾಗುವಂತೆ, ಶಾಶ್ವತ ಪರಿಹಾರ ಸಿಗುವಂತೆ ಮಾಡಲು ದೇವತೆಗಳು ತಪಸ್ಸಿಗಾಗಿ ಹಿಮಾಲಯಕ್ಕೆ ಹೊರಟರು. ಮನುಷ್ಯರು ಮಾತ್ರ ಅಲ್ಲ, ದೇವತೆಗಳೂ ತಪಸ್ಸನ್ನು ಹಾಗೂ ಉಪಾಸನೆಯನ್ನು ಮಾಡಬೇಕಾಗುತ್ತದೆ. ಅಂತಹ ಸಂದರ್ಭ ಇದು. ನಾರದರನ್ನು ವಿಧಿವತ್ತಾಗಿ ಪೂಜಿಸಿ ಅವರಿಗೆ ಧನ್ಯವಾದವನ್ನು ಹೇಳಿ, ಗಂಗಾ ತೀರಕ್ಕೆ, ಹಿಮಾಲಯದ ಪರಿಸರಕ್ಕೆ ದೇವತೆಗಳು ಒಡಗೂಡಿ ಹೋಗುತ್ತಾರೆ.
ಅಲ್ಲಿ ಪರಾಶಕ್ತಿಯ ಮಹಾಪೂಜೆಯನ್ನು ಮಾಡುತ್ತಾರೆ. ಸಣ್ಣ ಶಕ್ತಿಯೂ ಅಲ್ಲ, ಸಣ್ಣ ಪೂಜೆಯೂ ಅಲ್ಲ. ಏಕೆಂದರೆ ಫಲ ಬರಬೇಕಾದುದು ಸಣ್ಣದಲ್ಲ. ಬಹುದೊಡ್ಡ ಫಲವೇ ಬರಬೇಕಾಗಿದೆ. ಹಾಗಾಗಿ ದೊಡ್ಡ ಶಕ್ತಿಯನ್ನು ದೊಡ್ಡ ರೀತಿಯಿಂದ ದೇವತೆಗಳು ಪೂಜಿಸುತ್ತಾರೆ. ಆ ಪರಿಸರಕ್ಕೆ 'ಇಂದ್ರಪ್ರಸ್ಥ' ಎನ್ನುವ ಹೆಸರು ಬಂತು. ಅದು ಅಖಿಲಸಿದ್ಧಿಪ್ರದ. ಆ ಮಣ್ಣಿಗೊಂದು ಗುಣವಿದೆ ಹಾಗೇ ಶಕ್ತಿಯಿದೆ. ನೀವು ಬೇರೆ ಕಡೆ ಸಹಸ್ರ ಜಪಗಳನ್ನ ಮಾಡಿ, ಇಲ್ಲಿ ಒಂದು ಜಪವನ್ನು ಮಾಡಿದರೆ ಇಲ್ಲಿ ಸಿಗುವ ಫಲವೇ ಅಧಿಕ. ಅದು ಆ ಮಣ್ಣಿನ ಗುಣ. ಇಂದ್ರ ದೇವತೆಗಳನ್ನು ಒಡಗೂಡಿ ತಪಸ್ಸು ಮಾಡಿರುವ ಸ್ಥಳವಾಗಿರುವುದರಿಂದ, ಸಿದ್ಧಿಯನ್ನು ಪಡೆದುಕೊಂಡ ಸ್ಥಳವಾಗಿರುವುದರಿಂದ ಆ ಪರಿಸರಕ್ಕೆ "ಇಂದ್ರಪ್ರಸ್ಥ" ಎನ್ನುವ ಹೆಸರು ಬಂತು. ಜಪದ ಮೂಲಕ, ಧ್ಯಾನದ ಮೂಲಕ, ತಪಸ್ಸಿನ ಮೂಲಕ ದೇವಿಯ ಆರಾಧನೆಯನ್ನು ದೇವತೆಗಳು ಮಾಡುತ್ತಾರೆ. ಬಹುಕಾಲ ಕಳೆಯಿತು. ಲೆಕ್ಕಕ್ಕೆ ಸಿಗದಷ್ಟು ಕಾಲ ಕಳೆಯಿತು. ಸಹಜವಾಗಿ ಹೇಳುವುದಾದರೆ ಹತ್ತುಸಾವಿರ ವರ್ಷಗಳು ಕಳೆದವು. ನಮ್ಮ ಹತ್ತುಸಾವಿರ ವರ್ಷ ದೇವತೆಗಳಿಗೆ ಹತ್ತು ವರ್ಷವೇ ಆಗಿರಬಹುದು. ದೊಡ್ಡ ಕಾಲ ಕಳೆದಿದೆ. ಉಗ್ರ ತಪಸ್ಸು ನಡೆಯುತ್ತಾ ಇದೆ. ಇನ್ನೂ ದೇವಿ ಬಂದಿಲ್ಲ. ತ್ರಿಪುರಸುಂದರಿಯ ಸಾಕ್ಷಾತ್ಕಾರ ಆಗಿಲ್ಲ. ಏನೂ ವ್ಯಥೆಯಿಲ್ಲ. ಫಲ ಕಣ್ಣಿಗೆ ಕಂಡರೆ ಮಾತ್ರ ನಾವು ಮಾಡಿದ ಕರ್ಮಕ್ಕೆ ಸಾರ್ಥಕತೆ ಬಂತು ಎಂದು ಅಂದುಕೊಳ್ಳಬಾರದು. ಕಣ್ಣಿಗೆ ಕಾಣದೆಯೇ ಎಷ್ಟೋ ಫಲಗಳು ಇರುತ್ತವೆ. ಹತ್ತುಸಾವಿರ ವರ್ಷಗಳ ಕಾಲ ಭಂಡಾಸುರನ ಜೀತ ಮಾಡಿಕೊಂಡು ಇರುವವರು, ಇಲ್ಲಿ ದೇವಿಯ ಸೇವೆಯನ್ನು ಮಾಡಿಕೊಂಡು ಪುಣ್ಯವನ್ನು ಸಂಪಾದನೆ ಮಾಡಿಕೊಂಡು ಇದ್ದಾರೆ. ಒಳಗಿಂದೊಳಗೆ ಶಕ್ತಿ ವೃದ್ಧಿ ಆಗುತ್ತಾ ಇರುವಂತಹ ಕಾಲ. ಯಾವುದಕ್ಕೂ ಅವಸರ ಮಾಡಬಾರದು. ತಪಸ್ಸು ಅಂದರೇ ಹಾಗೆ, ಕಾಯಬೇಕು ಅಥವಾ ಪ್ರತೀಕ್ಷೆ ಮಾಡಬೇಕು. ಈಗ ಕಾಣದ ಫಲವನ್ನು ನಿರೂಪಿಸುವುದಾದರೆ, ಈ ಹತ್ತುಸಾವಿರ ವರ್ಷಗಳಲ್ಲಿ ದೇವತೆಗಳು ತಮ್ಮ ಅಂತಃಶಕ್ತಿಯನ್ನು ಬಹುಧಾ ವೃದ್ಧಿ ಮಾಡಿಕೊಂಡಿದ್ದರು. ಅದೇ ಸಮಯದಲ್ಲಿ ಭಂಡಾಸುರನು ಮೋಹಿನಿಯ ಜೊತೆ ಭೋಗಲಂಪಾಟದಲ್ಲಿ ಮೈ ಮರೆತಿದ್ದ. ಶಿವಪೂಜೆಯೂ ಇಲ್ಲದೇ, ಸತ್ಕರ್ಮಗಳೂ ಇಲ್ಲದೇ ತನ್ನ ಶಕ್ತಿಯನ್ನು ಕ್ಷೀಣ ಮಾಡಿಕೊಳ್ಳುತ್ತಿದ್ದ. ಇಲ್ಲಿ ದೇವತೆಗಳ ಶಕ್ತಿ ವೃದ್ಧಿ ಆಗುತ್ತಾ ಇತ್ತು. ಇದನ್ನು ಅಳೆಯುವ ಮಾನದಂಡ ಬೇಕು. ಅದು ಎಲ್ಲರಲ್ಲಿಯೂ ಇರುವುದಿಲ್ಲ. ಈ ಸುಖವೆಂಬುದು ಪುಣ್ಯವನ್ನು ಕಳೆಯುತ್ತದೆ. ದುಃಖವು ನಮ್ಮ ಪಾಪವನ್ನು ಕಳೆಯುತ್ತದೆ. ದುಃಖ ಬಂದಾಗ ನಾವು ಏನೋ ನಮ್ಮ ಒಂದು ಪಾಪ ಕಳೆಯಿತು ಎಂದು ಸಮಾಧಾನ ಮಾಡಿಕೊಳ್ಳಬೇಕು.
ಈಗ ಸ್ವರ್ಗ ಒಳ್ಳೆಯದೋ ನರಕ ಒಳ್ಳೆಯದೋ ಎಂದು ನೋಡಿದಾಗ: ಸ್ವರ್ಗದಲ್ಲಿ ಸುಖ ಇರುತ್ತವೆ, ನರಕದಲ್ಲಿ ಕಷ್ಟ ಇರುತ್ತವೆ. ದೇವರು ಯಾಕೆ ನರಕವನ್ನು ಸೃಷ್ಟಿ ಮಾಡಬೇಕು? ನರಕದಲ್ಲಿ ಕಷ್ಟ ಕೊಡುವುದು ಏಕೆ? ಸ್ವರ್ಗದಲ್ಲಿ ಎಲ್ಲಾ ಸುಖವು ಇದೆ, ಎಲ್ಲಾ ಜೀವಗಳೂ ಸ್ವರ್ಗಕ್ಕೆ ಹೋಗುವಂತೆ ಮಾಡಬಹುದಲ್ಲಾ? ಅಂದರೆ, ನರಕವೂ ಬೇಕು ಅಂತ. ನರಕಕ್ಕೂ ಪ್ರಯೋಜನವಿದೆ. ಅದರ ಪ್ರಯೋಜನ ತಿಳಿದುಕೊಂಡಾಗ ಸ್ವರ್ಗಕ್ಕಿಂತ ನರಕವೇ ಶ್ರೇಷ್ಠ ಎಂದು ಅನಿಸುತ್ತದೆ. ನರಕದಲ್ಲಿ ನಮ್ಮ ಪಾಪವ್ಯಯ ಆಗುತ್ತಾ ಇರುತ್ತದೆ. ನರಕ ಎನ್ನುವಂತದ್ದು ದೇವರು ಸೃಷ್ಟಿ ಮಾಡಿರುವಂತಹ ಬಹುದೊಡ್ಡ ಚಿಕಿತ್ಸಾಲಯ. ಆತ್ಮಕ್ಕೆ ಚಿಕಿತ್ಸೆ ಮಾಡುವಂತದ್ದು. ಅಲ್ಲಿ ಜೀವಗಳ ಪಾಪಗಳು ಕಳೆಯುತ್ತವೆ. ಸ್ವರ್ಗದಲ್ಲಿ ಪುಣ್ಯಗಳು ಖರ್ಚಾಗುವಂತಹದ್ದು. ನಮ್ಮ ಪ್ರಯತ್ನದಿಂದ ಸಂಪಾದಿಸಿದ ಪುಣ್ಯಗಳು ಖಾಲಿ ಆಗುತ್ತದೆ. ಫೈವ್ ಸ್ಟಾರ್ ಹೋಟೆಲ್ ಇದ್ದ ಹಾಗೆ, ಏನು ಅದ್ಭುತ, ವೈಭವ, ಸುಖ ಆದರೆ ನಿಮ್ಮ ಕಿಸೆಯಲ್ಲಿ ಇರುವ ಹಣ ಖಾಲಿ ಆಗುವ ತನಕ ಮಾತ್ರ ಇರುವಂತಹದ್ದು. ಹಾಗೆ ಸ್ವರ್ಗದಲ್ಲಿ ನಮ್ಮ ಪುಣ್ಯ ಖಾಲಿ ಆಗುತ್ತಿದ್ದಂತೆ ನಮ್ಮನ್ನು ಅಲ್ಲಿಂದ ನೂಕಲಾಗುತ್ತದೆ. ನಾವು ಮತ್ತೆ ಭೂಮಿಗೆ ಬಂದು ಬೀಳುತ್ತೇವೆ. ಹಾಗಾಗಿ ನಾವು ದೇವರ ಸೃಷ್ಟಿಗೆ ಯಾವತ್ತೂ ಇದು ಕೆಟ್ಟದ್ದು ಇದು ಒಳ್ಳೆಯದು ಎಂದು ತೀರ್ಮಾನ ಮಾಡಬಾರದು. ಒಳ್ಳೆಯದು ಯಾವತ್ತೂ ಎಲ್ಲರಿಗೂ ಒಳ್ಳೆಯದಲ್ಲ, ಕೆಟ್ಟದ್ದು ಎಲ್ಲರಿಗೂ ಕೆಟ್ಟದ್ದಲ್ಲ ಎಂಬುದನ್ನು ನಾವು ಸರಿಯಾಗಿ ಯೋಚಿಸಿದಾಗ ಅರ್ಥವಾಗುತ್ತದೆ.
ಈಗ ದೇವತೆಗಳು ತಪಸ್ಸು ಮಾಡುತ್ತಿದ್ದಾರೆ, ಕಷ್ಟ ಪಡುತ್ತಿದ್ದಾರೆ, ಅವರ ಪಾಪ ಕಳೆಯುತ್ತಿದೆ. ಅವರಲ್ಲಿಯೂ ಪಾಪಗಳುಂಟು. ಶಿವನು ತಪಸ್ಸಿನಲ್ಲಿ ಮುಳುಗಿದ್ದಾಗ ಕಾಮನನ್ನು ಕಳುಹಿಸಿ ಪುಷ್ಪಗಳ ಬಾಣದಿಂದ ಅದನ್ನು ಕೆಡಿಸುವ ಪ್ರಯತ್ನ ಮಾಡಿದ್ದರಲ್ಲಾ, ಅದೂ ಪಾಪವೇ. ಅದರಿಂದಲೇ ಭಂಡಾಸುರನ ಉತ್ಪತ್ತಿ ಆಗಿರುವಂತಹದ್ದು. ಹಾಗಾಗಿ ಈ ಕಡೆ ದೇವತೆಗಳ ಪಾಪ ಕಳೆಯುತ್ತಾ ಇತ್ತು, ಆ ಕಡೆ ಭಂಡಾಸುರನ ಪುಣ್ಯ ಕಳೆಯುತ್ತಾ ಇತ್ತು. ಇಲ್ಲಿ ದೇವತೆಗಳ ಅಂತಃಶಕ್ತಿ ವೃದ್ಧಿ ಆಗುತ್ತಾ ಇತ್ತು, ಆ ಕಡೆ ಅಸುರರ ಶಕ್ತಿ ಕ್ಷಯವಾಗುತ್ತಾ ಇತ್ತು. "ಕುಳಿತು ತಿನ್ನುವವನಿಗೆ ಕುಡಿಕೆ ಹೊನ್ನು ಸಾಲದು" ಎನ್ನುವ ಗಾದೆಯ ಹಾಗೆ, ಹಿಂದೆ ಸಂಪಾದಿಸಿದ ಪುಣ್ಯ ಎಷ್ಟು ದಿನ ಇರಲು ಸಾಧ್ಯ. ಇವುಗಳ ಮಧ್ಯೆ ಆಚಾರ್ಯ ಶುಕ್ರರು ಇವುಗಳನ್ನೆಲ್ಲಾ ಗಮನಿಸುತ್ತಾರೆ.
ಗುರುವಿನಲ್ಲಿ ಮೂರು ಮಹಾಗುಣಗಳು ಇರುತ್ತವೆ: ಒಂದು ದೃಷ್ಟಿ, ಇನ್ನೊಂದು ಕರುಣೆ, ಮತ್ತೊಂದು ಕ್ಷಮೆ. ಇವು ಧಾರಾಳವಾಗಿ ಇರುವಂಥವನು ಗುರು. ಒಬ್ಬ ಗುರುವಿಗೆ ತನ್ನ ಶಿಷ್ಯನ ಮುಂದಿನ ಒಳಿತು ಕೆಡುಕುಗಳನ್ನು ಕಾಣುವ, ಭವಿಷ್ಯವನ್ನು ನೋಡುವ ದೃಷ್ಟಿ ಇರಬೇಕು. ಹಾಗೆ ಅವನ ಮೇಲೆ ತಾಯಿಯ ಕರುಣೆ ವಾತ್ಸಲ್ಯ ಇರಬೇಕು. ಕೊನೆಯಲ್ಲಿ ಕ್ಷಮೆ, ಶಿಷ್ಯರು ತಪ್ಪು ಮಾಡಿದಾಗ ಕ್ಷಮಿಸಿ ಕೈ ಹಿಡಿದು ಮೇಲೆತ್ತಿ ಮುಂದೆ ಹೋಗುವ ದಾರಿ ತೋರಿಸುವಂತಹ ಗುಣಗಳು ಇರಬೇಕು. ದೃಷ್ಟಿ, ಕರುಣೆ, ಕ್ಷಮೆಗಳ ತ್ರಿವೇಣಿ ಸಂಗಮ ಗುರು.
ಶುಕ್ರಾಚಾರ್ಯರಿಗೆ ತನ್ನ ಶಿಷ್ಯ ಭಂಡಾಸುರನ ಮುಂದಿನ ಪತನ, ಸರ್ವನಾಶ ಕಣ್ಣಿಗೆ ಕಾಣಿಸುತ್ತಾ ಇದೆ. ಅವನು ಹಾಳಾಗಿ ಹೋಗುತ್ತಾನೆ ಎಂಬ ಕರುಣೆ, ಅಂತೆಯೇ ಕ್ಷಮೆ. ಮೊದಲು ಭಂಡಾಸುರ ಗೌರವದಿಂದ ಗುರುಗಳನ್ನು ನೋಡಿಕೊಳ್ಳುತ್ತಿದ್ದ. ಅವರ ನುಡಿಯನ್ನು ಪಾಲಿಸುತ್ತಿದ್ದ, ಅವರು ಹಾಕಿದ ಗೆರೆಯನ್ನು ದಾಟುತ್ತಿರಲಿಲ್ಲ. ಆದರೆ ಯಾವಾಗ ಮೋಹಿನಿಯ ಪ್ರವೇಶವಾಯಿತೋ ಆಗ ಬದಲಾದ. ಆಚಾರ್ಯರು ಬುದ್ಧಿ ಹೇಳಿದರು- ಈ ಮೋಹಿನಿಯ ಸಂಗ ಬಿಡು, ಶಿವಾರ್ಚನೆ ಮಾಡು, ಸತ್ಕರ್ಮಗಳನ್ನು ಮಾಡು ಎಂದು ಬುದ್ಧಿ ಹೇಳಿದ್ದು ಹೆಚ್ಚಾಯಿತು. ಆಗ ಭಂಡಾಸುರ ತನ್ನ ಗುರುವನ್ನು ಅನೇಕ ಬಾರಿ ಅಪಮಾನ ಮಾಡಿದ್ದಾನೆ. ಅಷ್ಟಾದರೂ ಶುಕ್ರಾಚಾರ್ಯರಿಗೆ ಶಿಷ್ಯನ ಮೇಲೆ ದೃಷ್ಟಿ, ಕರುಣೆ ಇದೆ, ಹಾಗಾಗಿ ಮತ್ತೆ ಭಂಡಾಸುರನ ಬಳಿ ಹೋಗುತ್ತಾರೆ. ಅವರಿಗೆ ಪ್ರವೇಶವೂ ಸುಲಭವಿಲ್ಲ. ಮತ್ತೆ ಭಂಡಾಸುರನಂತೂ ಹೊರಗೆ ಬರುವುದು ಅಂತಲೇ ಇಲ್ಲ. ಅಂತಃಪುರ, ಮಂಚವನ್ನು ಬಿಟ್ಟು ಹೊರಗೆ ಬರುವುದೇ ಇಲ್ಲ. ನಿರಂತರ ಭೋಗ. "ಸುಖತಃ ಕ್ರಿಯತೇ ರಾಮಾ ಭೋಗಃ ಪಶ್ಚಾತ್ ಹಂತ ಶರೀರೇ ರೋಗಃ", ಶಂಕರಾಚಾರ್ಯರ ಮಾತು. ಈ ಮದಿರೆ, ಮಾಂಸ ಮೊದಲಾದ ಭೋಗಲಂಪಟತೆ. ಅದರಿಂದ ಕೇವಲ ಅವನ ಶರೀರಕ್ಕೆ ಮಾತ್ರವಲ್ಲದೇ, ಅವನ ರಾಜ್ಯಕ್ಕೇ ರೋಗ ಬಂದಂತಾಗಿದೆ. ಅವನ ಭವಿಷ್ಯಕ್ಕೇ ರೋಗ ಬಂದಿದೆ. ಅಂತಹ ಸ್ಥಿತಿ, ಅದು ಅವನಿಗೆ ಅರ್ಥವಾಗುತ್ತಾ ಇಲ್ಲ. ಅಂತಃಪುರದಿಂದ ಹೊರಗೆ ಬರುವುದೇ ಇಲ್ಲ. ಶುಕ್ರಾಚಾರ್ಯರು ಅದು ಹೇಗೋ ಅಂತಃಪುರ ಸೇರಿ, ಭಂಡಾಸುರನಿಗೆ ಎಚ್ಚರವಾಗುವಂತಹ ಧ್ವನಿ ಕೊಟ್ಟು ಮಾತನಾಡುತ್ತಾರೆ. ಮೋಹಿತಾನಥ ತಾಂದೃಷ್ಟ್ವಾ ಭೃಗುಪುತ್ರೋ ಮಹಾಮತಿಃ ಮಹಾ ಪ್ರಾಜ್ಞನಾದ, ಮಹಾ ಮೇಧಾವಿಗಳಾದ ಶುಕ್ರಾಚಾರ್ಯರು ಯಾವುದೋ ಉಪಾಯದಿಂದ, ಮಾರ್ಗಾಂತರದಿಂದ ಅಂತಃಪುರವನ್ನು ಸೇರಿ ದಿಗ್ಗನೆ ಭಂಡಾಸುರನು ಎಚ್ಚರಗೊಳ್ಳುವ ಸ್ವರದಲ್ಲಿ, ಅವನ ಮೋಹ ತೊಲಗುವ ಧ್ವನಿಕೊಟ್ಟು ಹೇಳಿದರಂತೆ "ಶಿಷ್ಯ, ನೀನು ಸಾಮಾನ್ಯನಲ್ಲ, ನೀನೊಬ್ಬ ಚಕ್ರವರ್ತಿ. ನಿನ್ನನ್ನ ಆಶ್ರಯಿಸಿ ತುಂಬಾ ಸಂಗತಿಗಳಿವೆ, ಇಡಿಯ ದಾನವ ಸಂಕುಲ ನಿನ್ನನ್ನ ಆಶ್ರಯಿಸಿದೆ. ತ್ವಾಮೇವಾಶ್ರಿತ್ಯ ರಾಜೇಂದ್ರ ಸದಾ ದಾನವ ಸತ್ತಮಾಃ ನಿರ್ಭಯಾಃ ಇವತ‌್ತು ಈ ದಾನವ ಸಂಕುಲ ಇಷ್ಟು ನಿರ್ಭಯವಾಗಿ, ನಿಶ್ಚಿಂತೆಯಿಂದ ಇದ್ದರೆ, ನೀನೇ ಕಾರಣ ಅದಕ್ಕೆ. ಒಂದು ವೇಳೆ ನೀನು ಪತನಗೊಂಡರೆ ಕೋಟಿ ಕೋಟಿ ದಾನವರ ಬದುಕು ಅಸ್ತವ್ಯಸ್ತ ಆಗುತ್ತದೆ. ಏನು ಅಂತಹ ಸಂದರ್ಭ ಬಂದಿದೆ ಈಗ ಅಂದರೆ, ಮಹಾವಿಷ್ಣುವಿಗೆ ನಿನ್ನ ಜಾತಿಯ ಮೇಲೆ ದ್ವೇಷ. ಇಲ್ಲಿಯವರೆಗೆ ಯಾವ ಯಾವ ದೈತ್ಯ-ದಾನವರು ಮೆರೆದಿದ್ದಾರೋ ಅವರಲ್ಲಿ ಹೆಚ್ಚಿನ ದಾನವರನ್ನು ಮುಗಿಸಿದ್ದು ಮಹಾವಿಷ್ಣು ಅಥವಾ ಅವನ ಕಪಟಕಾರ್ಯತಂತ್ರ. ನೀನು ಎಚ್ಚರವಾಗಿರಬೇಕು. ನಿನ್ನ ವಿರುದ್ಧ ಷಡ್ಯಂತ್ರವಾಗಿದೆ. ಮೋಹಿನಿ ವಿಷ್ಣುವಿನ ಸೃಷ್ಟಿ, ನಿನ್ನ ಪತನಕ್ಕಾಗಿ ವಿಷ್ಣು ಮೋಹಿನಿಯನ್ನು ನಿನ್ನ ಬಳಿ ಕಳಿಸಿರುವುದು. ಮೋಹಿನಿ ಅಂದರೆ ವಿಷ್ಣು ಮಾಯೆ. ನೀನು ಆ ಬಲೆಯಲ್ಲಿ ಬಿದ್ದೆ. ಹಾಗಾಗಿ ನೀನು ಎಚ್ಚೆತ್ತುಕೊಳ್ಳದಿದ್ದರೆ ತೊಂದರೆ ಆಗಬಹುದು. ಅತ್ತ ದೇವೇಂದ್ರ ಮತ್ತು ಬಳಗ ಹಿಮಾಲಯದ ಪರಿಸರವನ್ನು ಸೇರಿ ತಪಸ್ಸು, ಪೂಜೆ-ಯಾಗಗಳನ್ನು ಮಾಡುತ್ತಿದ್ದಾರೆ. ಪರಾಶಕ್ತಿಯ ಉಪಾಸನೆ ಮಾಡುತ್ತಿದ್ದಾರೆ. ಏನಾದರು ಪರಾಶಕ್ತಿ ಒಲಿದು ಬಂದರೆ ನಿನಗೆ ಮತ್ತೆ ಉಳಿಗಾಲವಿಲ್ಲ, ನಿನ್ನ ನಾಶವಾದೀತು ಜಾಗ್ರತೆ. ಈ ಮೋಹಿನಿಯನ್ನು ಬಿಡು, ಈ ಮೋಹದ ಬಲೆಯಿಂದ ಹೊರಗೆ ಬಾ, ನಿನ್ನ ಕರ್ತವ್ಯದ ಕುರಿತು ಜಾಗೃತನಾಗು. ಫಲ ಬರುವ ದಿನ ದೂರವಿಲ್ಲ. ಹಾಗಾಗಿ ನಿನಗೆ ಇದು ಕೊನೆಯ ಎಚ್ಚರಿಕೆಯ ಘಂಟೆ. ನೀನು ಎಚ್ಚೆತ್ತುಕೊಳ್ಳದಿದ್ದರೆ ಶಾಶ್ವತ ನಿದ್ರೆಗೆ ಹೋಗುತ್ತೀಯೆ."
ಆವರೆಗೆ ಅನಾದರ ಮಾಡಿದವನಿಗೆ, ಇವರು ಹೇಳುವುದು ಸತ್ಯವೇ ಎಂದು ಅಳುಕಾಯಿತಂತೆ ಭಂಡಾಸುರನಿಗೆ. ಅಷ್ಟು ತೀವ್ರತೆ ಇತ್ತು ಶುಕ್ರಾಚಾರ್ಯರ ಮಾತಿನಲ್ಲಿ. ಅವನಿಗೆ ಎದ್ದು ಬರಲು ಪೂರ್ತಿ ಮನಸಿಲ್ಲ. ಕೊನೆಗೆ ಅವನ 8 ಮಂದಿ ಮಂತ್ರಿಗಳನ್ನು ಕರೆದು ಒಂದು ಸಮಾಲೋಚನೆ ಮಾಡಿದ. ಈ ಇಡಿಯ ವಿಷಯವನ್ನು ಮಂಡನೆ ಮಾಡಿ ಅವರ ಅಭಿಪ್ರಾಯ ಕೇಳುತ್ತಾನೆ. ಆಗ ಆ ಮಂತ್ರಿಗಳ ಪೈಕಿಯಲ್ಲಿ ಒಬ್ಬ ಶ್ರುತಿಪಾರಗ ಅಂತ ಅವನ ಹೆಸರು. ಅಂದರೆ ವೇದಗಳ ಕೊನೆಯವರೆಗೆ ಬಲ್ಲವನು ಎಂದು ಆ ಶಬ್ದಕ್ಕೆ ಅರ್ಥ. ಅಪರೂಪದಲ್ಲಿ ಮಂಚವನ್ನು ಬಿಟ್ಟು ಎದ್ದು ಬಂದ ಭಂಡಾಸುರನಿಗೆ ಶ್ರುತಿಪಾರಗನ ಸಲಹೆ ಏನೆಂದರೆ ಮತ್ತೆ ಮಂಚಕ್ಕೆ ಹೋಗಿಬಿಡು ಅಂತ. "ದೊರೆ, ಶಿವ ನಿನಗೆ ಕೊಟ್ಟ ವರ ಅರವತ್ತು ಸಾವಿರ ವರ್ಷಗಳ ಕಾಲ ರಾಜ್ಯಭಾರ ಮಾಡು ಅಂತ. ಆ ಕಾಲ ಕಳೆಯಿತು. ಅದರ ಮೇಲೆ ಎಷ್ಟೋ ಕಾಲ ಕಳೆದಿದೆ. ಈಗ ಹತ್ತಿರ ಹತ್ತಿರ ಹನ್ನೊಂದು ಸಾವಿರ ವರ್ಷ ಅದರ ನಂತರ ಕಳೆದಿದೆ." ಅರವತ್ತು ಸಹಸ್ರ ವರ್ಷ ಎಲ್ಲಿಯೂ ಯಾವ ತೊಂದರೆಯೂ ಇರಲಿಲ್ಲ ಭಂಡಾಸುರನಿಗೆ. ಅರವತ್ತು ಸಹಸ್ರ ವರ್ಷ ಕಳೆದ ಬಳಿಕ ಅವನ ಪತನದ ಪ್ರಕ್ರಿಯೆಗಳು ಆರಂಭವಾಗಿದೆ. ಅದರಲ್ಲಿ ಈ ಹತ್ತು ಸಾವಿರ ವರ್ಷ ಕಳೆದಿರುವಂತಹದ್ದು. ಮೋಹಿನಿಯ ಮೋಹಪಾಶದಲ್ಲಿ ಬೀಳುವಂತಹದ್ದು. ಶ್ರುತಿಪಾರಗ ಹೇಳುವುದು "ಶಿವನ ಮಾತಿಗೆ ಎದುರಿಲ್ಲ. ಅರವತ್ತು ಸಾವಿರ ವರ್ಷ ಕಳೆದಿದೆ. ಈ ಸಮಸ್ಯೆಗೆ ಪರಿಹಾರವಿಲ್ಲ. ಯಾವ ಕಾಲಕ್ಕೆ ಯಾವುದು ಆಗಬೇಕೋ ಅದು ಆಗುತ್ತದೆ. ಹಾಗಾಗಿ ಕಾಲ ಕಾಲಕ್ಕೆ ನಮಗೆ ಏನು ಸಿಗುತ್ತದೋ ಅದನ್ನ ಅನುಭವಿಸಿ ಬಿಡುವುದು ಒಳ್ಳೆಯದು. ಇರುವ ಸುಖವನ್ನು ಅನುಭವಿಸಿ ಬಿಡು" ಎಂದು ಸಲಹೆ ಕೊಟ್ಟನು.
ಆಗ ಉಗ್ರಕರ್ಮ ಎಂಬ ಇನ್ನೊಬ್ಬ ಮಂತ್ರಿ ಅದಕ್ಕೆ ಒಪ್ಪಲಿಲ್ಲ. ಅವನು ಹೇಳಿದನಂತೆ "ನನಗೆ ಸಮಾಧಾನವಿಲ್ಲ. ರಾಜನೀತಿ ಹೇಳುವುದೇನು? ಶತ್ರುಗಳನ್ನು ಉಪೇಕ್ಷೆ ಮಾಡಬಾರದು. ಕಿಡಿಯನ್ನು ಆರಿಸಬೇಕು. ಆ ಕಿಡಿ ಇಡಿಯಾದರೆ ಮನೆಯನ್ನೇ ಸುಡಬಹುದು, ಸರ್ವನಾಶವಾಗಬಹುದು. ಶತ್ರುವಾಗಲಿ, ಬೆಂಕಿಯಾಗಲಿ ಸಣ್ಣದಿರುವಾಗಲೇ ಅದನ್ನು ಶಮನಮಾಡಬೇಕು. ಅವರಿಗಿನ್ನೂ ಪೂರ್ತಿ ಬಲ ಬಂದಿಲ್ಲ. ಅವರನ್ನು ನಾಶ ಮಾಡಬೇಕು ನಾವು. ಮತ್ತೆ ಶ್ರುತಿಪಾರಗ ಹೇಳಿದ ಹಾಗೆ ನಿನಗೆ ಇನ್ನೂ ಮುಂದೆ ಏನೋ ಆಪತ್ತು ಬರುತ್ತದೆ, ನಾಶವಾಗುತ್ತೀಯೆ ಎಂದರೆ ನನಗೇನೋ ನಂಬಿಕೆಯಿಲ್ಲ. ನಿನಗೆ ಶಿವನೇ ಕೊಟ್ಟ ವರ ಇದೆಯಲ್ಲ. ಯಾವುದೇ ಪ್ರತಿಭಟನಾ ಅರ್ಧ ಶಕ್ತಿ ನಿನಗೆ, ಅವನ ಅಸ್ರ್ತ ಶಸ್ತ್ರಗಳು ನಿನ್ನನ್ನು ನೋಯಿಸುವುದಿಲ್ಲ. ಇಂತಹ ವರ ಇದ್ದಾಗ ಯಾವ ಶತ್ರು ನಿನಗೆ ಏನು ಮಾಡಲು ಸಾಧ್ಯ? ಒಂದು ವೇಳೆ ಅಂತಹ ಸಂದರ್ಭ ಬಂದರೆ ವಿಜಯ ನಿನಗೆ ನಿಶ್ಚಿತ ಶಿವನ ವರದ ಪ್ರಕಾರ. ಹಾಗಾಗಿ ನನ್ನ ಪ್ರಕಾರ ಈಗಲೇ ನಾವು ಹೋಗಿ ಆ ತಪಸ್ಸು , ಪೂಜೆಗೆ ವಿಘ್ನ ಮಾಡಬೇಕು." ಎಂದು ಭೀಮಕರ್ಮ ಹೇಳಿದಾಗ ಅದು ಆಗಬಹುದು ಅನಿಸಿತಂತೆ ಭಂಡಾಸುರನಿಗೆ. ಏಕೆಂದರೆ ಅವನ ಸಂಸ್ಕಾರಕ್ಕೆ ಈ ಸಲಹೆ ಸರಿ ಇದೆ.
ಎರಡು ಆಯ್ಕೆಗಳು ನಮ್ಮ ಮುಂದೆ ಬಂದಾಗ ನಮ್ಮ ಸಂಸ್ಕಾರಕ್ಕೆ ನಾವು ಆಯ್ಕೆ ಮಾಡುತ್ತೇವೆ. ರಾವಣನಿಗೆ ಶೂರ್ಪನಖಿ ಸಲಹೆ ಕೊಟ್ಟಳು ಹೋಗಿ ಸೀತೆಯನ್ನು ಅಪಹಾರ ಮಾಡು ಎಂದು. ಮಾರೀಚ ಸಲಹೆ ಕೊಟ್ಟ ಯಾವ ಕಾರಣಕ್ಕೂ ಮಾಡಬೇಡ, ನಿನ್ನ ನಾಶ ಆಗುತ್ತದೆ, ಎಂದು. "ಮಾ ಕೃತಾ ರಾಮವಿಪ್ರಿಯಂ" ರಾವಣ ಆಯ್ಕೆ ಮಾಡಿಕೊಂಡಿದ್ದು ತಂಗಿಯ ಮಾತನ್ನು. ಅವನು ಬಂದ ದಾರಿಯದು ಹಾಗಾಗಿ ಆ ಸಲಹೆ ರುಚಿಸಿತು. ಹಾಗೆಯೇ ಶ್ರುತಿಪಾರಗನ ಮಾತನ್ನು ಭಂಡಾಸುರ ಸ್ವೀಕಾರ ಮಾಡಲಿಲ್ಲ, ಉಗ್ರಕರ್ಮನ ಮಾತನ್ನು ಸ್ವೀಕಾರ ಮಾಡಿ ಸೇನಾ ಸಮೇತನಾಗಿ ದೇವತೆಗಳು ಇರುವಲ್ಲಿಗೆ ಹೋದ. ಗುರುಗಳು ಒಂದು ಸಮಾಧಾನದ ನಿಟ್ಟುಸಿರು ಬಿಟ್ಟರು.
ಒಂದು ವೇಳೆ ಭಂಡಾಸುರ ಅಲ್ಲಿಗೆ ಹೋಗಿ ತಲುಪಿದ ಅಂದರೆ ಮತ್ತೆ ದೇವತೆಗಳಿಗೆ ಉಳಿಗಾಲವೇ ಇಲ್ಲ. ಈಗಂತು ದ್ರೋಹವಾಗಿದೆ. ಇವನ ಪ್ರಕಾರ ಇವನ ವಿರುದ್ಧ ಸಂಚು ಮಾಡುತ್ತಿರುವರು. ಹಾಗಾಗಿ ಇವನ ಕೈಗೆ ಸಿಕ್ಕಿದರೆ ಮತ್ತೆ ಸರ್ವನಾಶವೇ. ಅಂತಹ ಸ್ಥಿತಿ ಬರಬಹುದು. ಯಾರು ರಕ್ಷಕರು ಅವರಿಗೆ? ತಪಸ್ಸು ಮಾಡುತಿದ್ದಾರೆ ಬೇರೆ, ದೇವತೆಗಳು ತಪಸ್ಸು ಮಾಡುತ್ತಿರುವ ಇಂದ್ರಪ್ರಸ್ಥದ ಹತ್ತಿರ ಹತ್ತಿರ ಹೋಗುತ್ತಿದ್ದಾನೆ.
ಆ ಸಮಯದಲ್ಲಿ ಒಂದು ಸ್ವಾರಸ್ಯ ನಡೆಯಿತಂತೆ. ಹತ್ತಿರ ಹತ್ತಿರ ಹೋಗುತ್ತಿದ್ದಂತೆ ಅವರ ಮುಂದೆ ಒಂದು ಕೋಟೆ ಪ್ರಕಟವಾಯಿತು. ಅದು ಬಲವಾದ ಕೋಟೆ ಮಾತ್ರವಲ್ಲ, ಬೆಂಕಿಯ ಜ್ವಾಲೆಗಳು ಕೂಡ ಇದೆ ಕೋಟೆಯಲ್ಲಿ. ದಾಟಿ ಹೋಗಲು ಸಾಧ್ಯವೇ ಇಲ್ಲ ಅಂತಹ ಕೋಟೆ ಎದುರು ಬಂದು ನಿಂತಿದೆ. ಅದು ಜಗದಂಬಿಕೆ ದೇವತೆಗಳ ರಕ್ಷಣೆಗಾಗಿ ನಿರ್ಮಿಸಿದಂತಹ ಮಾಯಾಮಯವಾದ ಪ್ರಾಕಾರ. ತಪೋ ವಿಘ್ನಕರಾಂ ದೃಷ್ಟ್ವಾ ತಪಸ್ಸಿಗೆ ಕಲ್ಲು ಹಾಕಲು ಬಂದ ರಾಕ್ಷಸರನ್ನು ಕಂಡು ಕೋಪ, ಕರುಣೆ ಎರಡು ಒಟ್ಟಿಗೆ ಬಂತಂತೆ ರಾಜರಾಜೇಶ್ವರಿಗೆ. ಭಂಡಾಸುರನ ಮೇಲೆ ಕೋಪ, ದೇವತೆಗಳ ಕುರಿತು ಕರುಣೆ. ದೇವರು ದುರ್ಬಲ ಪಕ್ಷಪಾತ ಯಾವಾಗಲೂ. ರಾಮ ವಾಲಿಯ ಸಖ್ಯವನ್ನು ಮಾಡಲಿಲ್ಲ, ಸುಗ್ರೀವನ ಸಖ್ಯವನ್ನು ಮಾಡುತ್ತಾನೆ. ಏಕೆಂದರೆ ವಾಲಿ ಬಲಿಷ್ಠ, ಸುಗ್ರೀವ ದುರ್ಬಲ. ವಾಲಿಯಿಂದ ಸುಗ್ರೀವನಿಗೆ ಅನ್ಯಾಯವಾಗಿದೆ. ಅನ್ಯಾಯದ ಪಕ್ಷವನ್ನು ರಾಮ ಸೇರಲಿಲ್ಲ. ದೇವರಿಗೆ, ತಾಯಿಗೆ ಆದರೂ ಕೂಡ ದುರ್ಬಲವಾದ ಮಗುವಿನ ಮೇಲೆ ಕನಿಕರ, ಪ್ರೀತಿ ಜಾಸ್ತಿ ಇರುತ್ತದೆ.
ಹಾಗೆ ಉಜ್ವಲವಾದ ಮಾಯಾ ಪ್ರಾಕಾರವನ್ನು ದೇವಿ ನಿರ್ಮಾಣ ಮಾಡಿದ್ದಾಳೆ. ದಾಟಿ ಹೋಗಲು ಅಸಾಧ್ಯ ಅದು. ಭಂಡಾಸುರನಿಗೆ ಆಶ್ಚರ್ಯವಾಯಿತು. ಗೀತೆಯ ಮಾತನ್ನು ನೆನಪು ಮಾಡಿಕೊಳ್ಳಬೇಕು. ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯುಪಾಸತೇ| ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್||
ಯಾರು ನನ್ನನ್ನು ಅನನ್ಯವಾಗಿ ಭಾವಿಸುತ್ತಾರೋ, ಅವರ ಯೋಗಕ್ಷೇಮ ನನ್ನ ಹೊಣೆ. ದೇವಿ ಅದನ್ನು ತೋರಿಸಿದ್ದು. ಅನನ್ಯವಾಗಿ ದೇವತೆಗಳು ದೇವಿಯನ್ನೇ ಉಪಾಸನೆ ಮಾಡುತ್ತಿದ್ದಾರೆ, ಅವರ ಯೋಗಕ್ಷೇಮ ತನ್ನ ಹೊಣೆ. ಹಾಗಾಗಿ ಯಾವುದೇ ಉಪಾಸಕನಿಗೆ ತನ್ನ ರಕ್ಷಕನ ಚಿಂತೆಯಿಲ್ಲ. ಅವನು ಅನನ್ಯವಾಗಿ ಉಪಾಸನೆ ಮಾಡುತ್ತಿರುವುದೇ ಹೌದಾದರೆ ಅವನ ರಕ್ಷಣೆಯನ್ನು ಆ ದೇವತೆಯೇ ಮಾಡುತ್ತದೆ. ವಿಸ್ಮಯ! ಭಂಡಾಸುರನಿಗೆ ಇದೇನು ಅಂತ, ಕೋಪ, ತನಗೆ ಅಡ್ಡ ಬರಲಿಕ್ಕೆ ಉಂಟಾ?! ಎಂದು. ಹಾಗಾಗಿ ಅವನು ದಾನವಾಸ್ತ್ರವನ್ನು ಪ್ರಯೋಗ ಮಾಡಿ ಕೋಟೆಯನ್ನು ಭಗ್ನಗೊಳಿಸುತ್ತಾನೆ. ಮತ್ತೆ ಅರೆಕ್ಷಣದಲ್ಲಿ ಅಲ್ಲಿ ಅದೇ ರೀತಿ ಕೋಟೆ ನಿರ್ಮಾಣವಾಯಿತು. ಈ ಬಾರಿ ಅದನ್ನು ದಾಟಲಿಕ್ಕೆ ಇನ್ನೂ ಕೂಡ ಕಷ್ಟ. ಈಗ ವಾಯವ್ಯಾಸ್ತ್ರವನ್ನು ಪ್ರಯೋಗ ಮಾಡಿ ಕೋಟೆಯನ್ನು ಭಗ್ನಗೊಳಿಸುತ್ತಾನೆ. ಪುನಃ ಮತ್ತೊಂದು ಕೋಟೆ ಉದಯಿಸಿ ಬಂತು ಅಲ್ಲಿ. ಎಷ್ಟು ಬಾರಿ ಭಂಡಾಸುರ ಕೋಟೆ ಭಗ್ನಗೊಳಿಸಿದರೂ ಮತ್ತೆ ಕೋಟೆ ಆವಿರ್ಭಾವ ಆಗುತ್ತದೆ. ಒಂದಿಷ್ಟು ಸಮಯ ಬೇರೆ ಬೇರೆ ಅಸ್ತ್ರ, ಶಸ್ತ್ರಗಳ ಮೂಲಕ ಭೇದಿಸಿ, ಭಗ್ನಗೊಳಿಸಲು ಭಂಡಾಸುರ ಪ್ರಯತ್ನ ಪಟ್ಟ. ಮತ್ತೆ ಮತ್ತೆ ಹೊಸ ಪ್ರಾಕಾರ ನಿರ್ಮಾಣವಾಗುವಾಗ ಬಿಟ್ಟ. ಮರಳಿ ತನ್ನ ಊರಿಗೆ ಹೊರಟ. ಹಾಗಾಗಿ ದೇವತೆಗಳು ಸುರಕ್ಷಿತವಾಗಿ ಉಳಿದರು.
ದೇವತೆಗಳಿಗೆ ಭಂಡಾಸುರ ಬಂದಿದ್ದು ಗೊತ್ತಾಯಿತು ಆದರೆ ಮುಂದಿನದ್ದು ಗೊತ್ತಾಗಲಿಲ್ಲ. ಅವರಿಗೆ ತಾವು ಸುರಕ್ಷಿತ ಅಂತ ಗೊತ್ತಿಲ್ಲ. ದೇವತೆಗಳು ಮಾತಾಡಿಕೊಳ್ಳುತ್ತಾರೆ "ಇನ್ನೂ ದೇವಿ ಬರಲಿಲ್ಲ, ಇವನು ಬಂದಾಯಿತು. ತಪಸ್ಸು ಮಾಡಿದ್ದು ಕಷ್ಟ ದಾಟಬೇಕು ಎಂದು, ಈಗ ಇವನು ಬಂದ ಮೇಲೆ ನಮ್ಮ ಕತೆಯೇ ಮುಗಿಯಿತು." ಎಂದು ತಮ್ಮ ಉಪಾಸನೆಯನ್ನು ಪರಿತ್ಯಾಗ ಮಾಡಿ ಎದ್ದು ದಿಕ್ಕು ದಿಕ್ಕಿಗೂ ಓಡುತಿದ್ದಾರೆ ದೇವತೆಗಳು. ದೇವಿ ಬಂದು ರಕ್ಷಣೆ ಮಾಡಿದ್ದು ಗೊತ್ತಾಗಲಿಲ್ಲ. ಎಷ್ಟೋ ಬಾರಿ ನಮ್ಮ ರಕ್ಷಣೆ ಆಗಿರುತ್ತದೆ, ಆದರೆ ನಮಗೆ ಅದು ಗೊತ್ತಿರುವುದಿಲ್ಲ. ಒಳ್ಳೆಯ ಕೆಲಸ ಮಾಡಿದರೆ ಅವು ನಮಗೆ ಗೊತ್ತಿಲ್ಲದಂತೆ ನಮ್ಮನ್ನು ಪರಿಪರಿಯಾಗಿ ರಕ್ಷಣೆ ಮಾಡಿರುತ್ತವೆ. ಆ ಪ್ರಜ್ಞೆ ನಮಗೆ ಇರುವುದಿಲ್ಲ. ಇದು ಕೂಡ ಅದೇ ಸ್ಥಿತಿ. ಆ ಕರ್ಮವನ್ನು ಬಿಟ್ಟೇಳುವಂತಹ ಸ್ಥಿತಿಯಿದೆ. ಅಲ್ಲಿಂದ ಮುಂದೇನಾಯ್ತು ಕರ್ಮ ಸಂಪನ್ನವಾಯ್ತೋ ಇಲ್ಲವೋ ಎಂದು ನಾಳಿನ ಪ್ರವಚನದಲ್ಲಿ ತಿಳಿದುಕೊಳ್ಳಲಿದ್ದೀರಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ