ಸ್ವಚ್ಛತೆ ನಿಜವಾದ ದೇವರ ಸೇವೆ: ಎನ್. ವಿನಯ ಹೆಗ್ಡೆ

Upayuktha
0

- ಸ್ವಚ್ಛ ಮಂಗಳೂರು 2.0 ಅಭಿಯಾನ ಉದ್ಘಾಟನೆ 

- ಮಂಗಳೂರಿನಲ್ಲಿ ಮೊದಲ ಬಾರಿಗೆ ಬೃಹತ್ ಪ್ಲಾಗ್ಗಿಂಗ್ ಸಂಪನ್ನ 

- 800 ಸ್ವಯಂ ಸೇವಕರಿಂದ ಶ್ರಮದಾನ

- ಒನ್ ಅಪ್ ಕುಡ್ಲದ ಮೂಲಕ ನಗರದ ಸೌಂದರ್ಯೀಕರಣ



ಮಂಗಳೂರು: "ಸ್ವಚ್ಛತೆ ನಿಜವಾದ ದೇವರ ಸೇವೆ. ಸ್ವಚ್ಛಾಂಜಲಿ ಕಾರ್ಯಕ್ರಮದ ಮುಖಾಂತರ ಮಂಗಳೂರು ಜನತೆಗೆ ತನ್ಮೂಲಕ ಸಮಾಜಕ್ಕೆ ಈ ಸೇವೆ ಅರ್ಪಣೆಯಾಗಲಿ. ರಾಮಕೃಷ್ಣ ಮಠದ ಸೇವೆ ಮಂಗಳೂರಿಗೆ ನಿರಂತರವಾಗಿರಲಿ. ರಾಮಕೃಷ್ಣ ಮಠ ಮತ್ತು ಮಂಗಳೂರಿನ ಜನತೆಯ ನಡುವೆ ಉತ್ತಮ ಸಂಬಂಧ ಮುಂದುವರಿಯಲಿ ಇದನ್ನು ಉಳಿಸುವ ಪ್ರಯತ್ನ ನಮ್ಮಿಂದಾಗಲಿ " ಎಂದು ನಿಟ್ಟೆ (ಪರಿಗಣಿಸಲ್ಪಟ್ಟ) ವಿಶ್ವವಿದ್ಯಾಲಯದ ಕುಲಾಧಿಪತಿ ಎನ್. ವಿನಯ ಹೆಗ್ಡೆ ಹೇಳಿದರು.


ಮಾನ್ಯ ಪ್ರಧಾನ ಮಂತ್ರಿಗಳ ಕರೆಯಂತೆ ಮಂಗಳೂರಿನ ರಾಮಕೃಷ್ಣ ಮಠದಲ್ಲಿ ನಡೆದ  "ಸ್ವಚ್ಛಾಂಜಲಿ" - ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮದಲ್ಲಿ ಎರಡನೇ ಹಂತದ ಸ್ವಚ್ಛ ಮಂಗಳೂರು ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು. 


ಉದ್ಘಾಟನಾ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ವಹಿಸದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು  "ಸ್ವಚ್ಛಾಂಜಲಿಯ ಮೂಲಕ ಸ್ವಚ್ಛತೆಯ ಈ ಸೇವೆ, ಭಾರತ ಮಾತೆಗೆ ಹಾಗೂ ಸ್ವಚ್ಛತೆಯ ಕನಸು ಕಂಡ ಮಹಾತ್ಮಾ ಗಾಂಧೀಜಿಯವರಿಗೆ ಅರ್ಪಣೆಯಾಗಲಿ. ಜನರಲ್ಲಿ ಸ್ವಚ್ಛತೆಯ ಜಾಗೃತಿ ಮೂಡಿಸುವುದೇ ನಮ್ಮ ಮುಖ್ಯ ಉದ್ದೇಶ. ಎರಡನೇ ಆವೃತ್ತಿಯ ಸ್ವಚ್ಛ ಮಂಗಳೂರು ಅಭಿಯಾನದಲ್ಲಿ ಜನ ಜಾಗೃತಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು" ಎಂದರು. 


ಮಂಗಳೂರು ಮಹಾನಗರ ಪಾಲಿಕೆಯ ಮಹಾಪೌರರಾದ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ "ಸ್ವಚ್ಛತೆಯ ಈ ಕಾರ್ಯ ನಿರಂತರವಾಗಿ ಮುಂದುವರೆಯಬೇಕು. ನಮಗೆ ರಾಮಕೃಷ್ಣ ಮಠದ ಮಾರ್ಗದರ್ಶನ ಅಗತ್ಯ. ಮಹಾನಗರ ಪಾಲಿಕೆಯ ವತಿಯಿಂದ ಈ ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡಲಾಗುವುದು" ಎಂದರು. 


ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಲೋಕಸಭಾ ಸಂಸದರಾದ ನಳಿನ್ ಕುಮಾರ್ ಕಟೀಲ್  ಭಾಗವಹಿಸದರು. ಗೌರವ ಅತಿಥಿಗಳಾಗಿ ಮಂಗಳೂರು ದಕ್ಷಿಣದ ಶಾಸಕರಾದ ಡಿ. ವೇದವ್ಯಾಸ ಕಾಮತ್ ಹಾಗೂ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್ ಪಾಲ್ಗೊಂಡರು. ವಿಶೇಷ  ಆಹ್ವಾನಿತರಾಗಿ ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮಹಾಪೌರರಾದ ಪ್ರೇಮಾನಂದ ಶೆಟ್ಟಿ, ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಾದ ಆನಂದ್ ಹಾಗೂ ಕೆನರಾ ಬ್ಯಾಂಕ್ ಮಂಗಳೂರು ವೃತ್ತ ಕಚೇರಿಯ ಉಪಪ್ರಧಾನ ವ್ಯವಸ್ಥಾಪಕರಾದ ಸುಧಾಕರ ಕೊಟ್ಟಾರಿ ಉಪಸ್ಥಿತರಿದ್ದರು. 


ಮಂಗಳೂರಿನಲ್ಲಿ ಮೊದಲ ಬಾರಿಗೆ ಬೃಹತ್ ಪ್ಲಾಗ್ಗಿಂಗ್ ಸಂಪನ್ನ:

ಈ ಸಂದರ್ಭದಲ್ಲಿ ನಡೆದ ಬೃಹತ್ ಪ್ಲಾಗಿಂಗ್ ಅಭಿಯಾನವನ್ನು  ಎಂ. ಆರ್. ಪಿ. ಎಲ್. ಸಂಸ್ಥೆಯ ಹೆಚ್.ಅರ್. ವಿಭಾಗದ ಪ್ರಧಾನ ವ್ಯವಸ್ಥಾಪಕರಾದ ಕೃಷ್ಣ ಹೆಗ್ಡೆ ಉದ್ಘಾಟಿಸಿದರು.  ಪ್ಲಾಗಿಂಗ್ ಎಂಬ ವಿನೂತನ ಪ್ರಯೋಗವು ಮಂಗಳೂರಿನಲ್ಲಿ ಮೊತ್ತ ಮೊದಲ ಬಾರಿಗೆ ಯಶಸ್ವಿಯಾಗಿ ನಡೆಯಿತು. ಜಾಗಿಂಗ್ ನಡೆಸುತ್ತಾ ಕಸವನ್ನು ಹೆಕ್ಕುವ ಮೂಲಕ ಸ್ವಯಂಸೇವಕರು ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾದರು.


ಪ್ರಮುಖ ಸಂಘ ಸಂಸ್ಥೆಗಳ ಭಾಗಿ:

ಎಂ. ಆರ್. ಪಿ. ಎಲ್., ಕೆನರಾ ಬ್ಯಾಂಕ್, ಶ್ರೀರಾಮ್ ಟ್ರಾನ್ಸ್‌ಪೋರ್ಟ್ಸ್, ಶ್ರೀನಿವಾಸ ಫೈನಾನ್ಸ್, ಮಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ಹಲವಾರು ಸಂಸ್ಥೆಯ ಉದ್ಯೋಗಿಗಳು  ನಿಟ್ಟೆ ವಿಶ್ವವಿದ್ಯಾಲಯ, ಶ್ರೀನಿವಾಸ ವಿಶ್ವವಿದ್ಯಾಲಯ, ಸಹ್ಯಾದ್ರಿ ವಿದ್ಯಾಸಂಸ್ಥೆ, ಕೆನರಾ ಕಾಲೇಜು, ಎಸ್. ಡಿ. ಎಂ. ವ್ಯವಹಾರ ಅಧ್ಯಯನ ಕಾಲೇಜು, ಎಸ್. ಡಿ. ಎಂ. ಸ್ನಾತಕೋತ್ತರ ಅಧ್ಯಯನ ಕಾಲೇಜು,  ಮೂಡಬಿದ್ರೆಯ ಆಳ್ವಾಸ್ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 800 ಕ್ಕೂ ಹೆಚ್ಚು ಸ್ವಯಂಸೇವಕರು ಈ ಶ್ರಮದಾನದಲ್ಲಿ ಭಾಗವಹಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top