ಪಿತೃಪಕ್ಷ – ಮಹಾಲಯ ಅಮಾವಾಸ್ಯೆ

Upayuktha
0


" ಶ್ರಾದ್ಧದಲ್ಲಿ ರಜತ ಪಾತ್ರೆ, ತುಳಸೀ ಜನಿವಾರ ಮತ್ತು ವಸ್ತ್ರದ ವಿಶೇಷತೆ" 

ಶ್ರಾದ್ಧ ಕರ್ಮಕ್ಕೆ ಉಪಯೋಗಿಸುವ ಪಾತ್ರೆಗಳು ಬೆಳ್ಳಿಯದ್ದೇ ಆಗಿರಬೇಕು. ಬೆಳ್ಳಿಯು ಶ್ರೀ ರುದ್ರದೇವರ ಕಣ್ಣಿನಿಂದ ಹುಟ್ಟಿದೆ. ಪಿತೃಗಳಿಗೆ ಈ ಧಾತುವು ಅತ್ಯಂತ ಪ್ರಿಯವಾಗಿದೆ. ದೇವ ಬ್ರಾಹ್ಮಣರಿಗೆ ದಕ್ಷಿಣೆ ಕೊಡುವಾಗ ಸುವರ್ಣವನ್ನು ಕೊಟ್ಟರೇ, ಪಿತೃಗಳಿಗೆ " ತತ್ತುಲ್ಯ೦ ರಜತಂ" ಎಂಬಂತೆ ಬೆಳ್ಳಿಯನ್ನು ಕೊಡುವುದುಂಟು. ಪಿತೃಗಳಿಗೆ ಅನ್ನ ನಿದರ್ಶನ ಮಾಡುವಾದ "ರಜತಮಯ ಪಾತ್ರೇ ಸ್ಥಿತಮನ್ನಂ" ಎಂದು ಹೇಳಲಾಗುತ್ತದೆ. ಆದ್ದರಿಂದ ಪಿತೃ ಕಾರ್ಯಗಳಿಗೆ ರಜತ ಪಾತ್ರೆಗಳು ಅವಶ್ಯ ಮತ್ತು ಅನಿವಾರ್ಯ. ಈ ಪಿತೃ ಕಾರ್ಯಗಳಲ್ಲಿ ಬೇಕಾದಷ್ಟು ಬೆಳ್ಳಿಯ ಪಾತ್ರಗಳನ್ನೂ ಸಂಗ್ರಹ ಮಾಡುವಷ್ಟು ಯೋಗ್ಯತೆ ಇಲ್ಲದಿದ್ದರೆ ಒಂದಾದರೂ ಬೆಳ್ಳಿಯ ಪಾತ್ರಯನ್ನಿಟ್ಟು ಪಿತೃ ಕಾರ್ಯವನ್ನು ನಡೆಸಬೇಕು. ಶ್ರಾದ್ಧ ಕರ್ಮದಲ್ಲಿ ಉಪಯೋಗಿಸಿದ ವಸ್ತುಗಳಲ್ಲಿ ಸ್ವಲ್ಪ ಕಬ್ಬಿಣದ ಅಂಶವಿದ್ದರೂ ಪಿತೃಗಳು ಶ್ರಾದ್ಧದಲ್ಲಿ ಕೊಡಲ್ಪಟ್ಟ ಅನ್ನ ಜಲಾದಿಗಳನ್ನು ಸ್ವೀಕರಿಸದೇ ಆ ಸ್ಥಳದಿಂದ ಓಡಿ ಹೋಗುತ್ತಾರೆ. " ಪದ್ಮ ಪುರಾಣದ ನಾಗರಖಂಡ" ದಲ್ಲಿ... ಅಯಸೋ ದರ್ಶನಾದೇವ ಪಿತರೋ ವಿದ್ರವಂತಿ ಹಿ ।। ಎಲ್ಲಾ ಪಿತೃಗಳ ಪ್ರೀತ್ಯರ್ಥವಾಗಿ ಬೆಳ್ಳಿಯ ಪಾತ್ರೆ ಅಥವಾ ಬೆಳ್ಳಿ ಮಿಶ್ರಿತವಾದ ಪಾತ್ರೆಯಲ್ಲಿ "ಸ್ವಧಾ ಪಿತೃಭ್ಯ:" ಎಂದು ಹೇಳಿ ಮಾಡಲ್ಪಟ್ಟ ಶ್ರಾದ್ಧವು ಪಿತೃಗಳಿಗೆ ತೃಪ್ತಿಯನ್ನುಂಟು ಮಾಡುತ್ತದೆ. 


ಸರ್ವೇಷಾ೦ ರಜತಂ ಪಾತ್ರಮಥವಾ ರಜತಾನ್ವಿತಮ್ ।

ದತ್ತಂ ಸ್ವಧಾ೦ ಪುರೋಧಾಯ ಶ್ರಾಧ್ಧ೦ ಪ್ರೀಣಾತಿ ವೈ ಪಿತ್ರೂನ್ ।। 

"ನಾರದೀಯ ಪುರಾಣದನ್ವಯ ಶ್ರಾದ್ಧದಲ್ಲಿ ತುಳಸಿಯ ಮಹತ್ವ


ಪ್ರತಿಯೊಂದು ದಾನ ಕೊಡುವಾಗಲೂ, ಶ್ರಾದ್ಧದಲ್ಲಿ ಯವೋದಕ - ತಿಲೋದಕಗಳನ್ನು ಬಿಡುವಾಗಲೂ, ದತ್ತ ಮಾಡುವಾಗಲೂ, ತಾಂಬೂಲ - ದಕ್ಷಿಣೆಗಳನ್ನು ಕೊಡುವಾಗಲೂ ತುಳಸೀ ದಳವನ್ನು ಸೇರಿಸಿಕೊಂಡೇ ಕೊಡಬೇಕು. 


ತುಳಸೀ ಗಂಧ ಮಾತ್ರೇಣ ಪಿತರಃ ತುಷ್ಟಿಮಾಪ್ನುಯು: ।

ಪ್ರಯಾಂತಿ ಮುಕ್ತಿ ಮಾರ್ಗೇಣ ತತ್ಪದಂ ಚಕ್ರಪಾಣಿನಃ ।। 


ಪರಮಾತ್ಮನಿಗೆ ಅರ್ಪಿಸಿರುವ ತುಳಸಿಯ ವಾಸನೆಯಿಂದ ಮಾತ್ರವೇ ಪಿತೃಗಳು ಸಂತೋಷವನ್ನು ಹೊಂದುತ್ತಾರೆ. ಚಕ್ರಪಾಣಿಯಾದ ಶ್ರೀಮಹಾವಿಷ್ಣುವಿನ ಲೋಕವನ್ನೂ ಮುಕ್ತಿ ಮಾರ್ಗದಿಂದ ಹೋಗಿ ಸೇರುತ್ತಾರೆ. ತುಳಸೀ ಶ್ರಾದ್ಧ ಕಾಲೇ ತು ದತ್ವಾ ಶಿರಸಿಧಾರಿತೇ ।ದಾತಾ ಭೋಕ್ತಾ ಪಿತಾ ತಸ್ಯ ವಿಷ್ಣು ಲೋಕೇ ಮಹೀಯತೇ ।। 


ಶ್ರಾದ್ಧ ಕಾಲದಲ್ಲಿ ಕರ್ತೃವು ಕೊಟ್ಟ ತುಳಸಿಯನ್ನು ( ಅದನ್ನು ) ಭೋಕ್ತೃವು ತಲೆಯಲ್ಲಿ ಧರಿಸುವುದರಿಂದ ಕರ್ತೃ, ಕರ್ತೃವಿನ ತಂದೆ ಅಥವಾ ತಾಯಿ ಮತ್ತು ಭೋಜನ ಮಾಡಿದವರು ಮುಂದೆ ವಿಷ್ಣು ಲೋಕದಲ್ಲಿ ಪ್ರಕಾಶಿತರಾಗಿರುತ್ತಾರೆ. 


ಪಿತೃ ಪಿಂಡಾರ್ಚನಂ ಶ್ರಾದ್ಧೇ ಯೈ: ಕೃತಂ ತುಳಸೀದಲೈ: ।

ತರ್ಪಿತಾ ಪಿತರಸ್ತೈಶ್ಚ ಯಾವಚ್ಚ೦ದ್ರಾರ್ಕ ಮೇದಿನೀ ।। 


ಶ್ರಾದ್ಧದಲ್ಲಿ ಯಾರಿಂದ ಪಿತೃ ಪಿಂಡಗಳ ಅರ್ಚನವು ತುಲಸೀದಳಗಳಿಂದ ಮಾಡಲ್ಪಡುತ್ತದೆಯೋ ಅವರಿಂದ ಎಲ್ಲಿಯವರೆಗೂ ಚಂದ್ರ ಸೂರ್ಯಗಳು ಭೂಮಿಗಳಿರುತ್ತವೆಯೋ ಅಲ್ಲಿಯ ವರೆಗೂ ಪಿತೃಗಳು ಸಂತುಷ್ಟರಾಗಿರುವಂತೆ ಮಾಡಲ್ಪಡುತ್ತದೆ.


"ನಾರದೀಯ ಪುರಾಣದನ್ವಯ ವಸ್ತ್ರ - ಜನಿವಾರದ ಮಹತ್ವ " 

ವಾಸೋsಸಿ ಸರ್ವ ದೈವತ್ಯಂಸರ್ವ ದೇವೈರಭಿಷ್ಟುತಮ್ ।

ವಸ್ತ್ರಾಭಾವೇ ಕ್ರಿಯಾ ನಶ್ಯಾತ್ ಯಜ್ಞ ದಾನಾದಿಕಾ: ಕ್ವಚಿತ್ ।

ತಸ್ಮಾದ್ವಸ್ತ್ರಾಣಿ ದೇಯಾನಿ ಶ್ರಾದ್ಧ ಕಾಲೇ ವಿಶೇಷತಃ ।। 


ವಸ್ತ್ರವಾದರೋ ಎಲ್ಲಾ ದೇವತೆಗಳ ಸಾನ್ನಿಧ್ಯವನ್ನು ಹೊಂದಿರುವುದು. ಎಲ್ಲಾ ದೇವತೆಗಳಿಂದಲೂ ಸ್ತುತಿಸಲ್ಪಟ್ಟಿರುವುದು. ಕೆಲೆವೆಡೆ ಯಜ್ಞ ದಾನಾದಿ ಕ್ರಿಯೆಗಳು ವಸ್ತ್ರದಾನ ಮಾಡದುದರಿಂದ ನಷ್ಟವಾಗುತ್ತದೆ. ಆದ್ದರಿಂದ ಶ್ರಾದ್ಧ ಕಾಲದಲ್ಲಿ ವಿಶೇಷವಾಗಿ ವಸ್ತ್ರಗಳನ್ನು ಕೊಡಬೇಕು. 


ಆಚ್ಚಾದನಂ ತು ಯೋ ದದ್ಯಾತ್ ಅಹತಂ ಶ್ರಾದ್ಧ ಕರ್ಮಣಿ ।

ಆಯು: ಶ್ರೀ: ಕಾಮಂ ಐಶ್ವರ್ಯ೦ರೂಪಂ ಚ ಲಭತೇ ಧ್ರುವಮ್ ।। 


ಶ್ರಾದ್ಧ ಕರ್ಮದಲ್ಲಿ ಬ್ರಾಹ್ಮಣರಿಗೆ ಯಾವನು ಉತ್ತಮವಾದ ವಸ್ತ್ರವನ್ನು ಕೊಡುತ್ತಾನೆಯೋ; ಅವನು ನಿಶ್ಚಯವಾಗಿಯೂ ದೀರ್ಘ ಕಾಲದ ಆಯುಷ್ಯವನ್ನೂ, ಸಂಪತ್ತನ್ನೂ, ತನ್ನ ಇಷ್ಟವಾದ ಧನ ಕನಕವನ್ನೂ, ಸಕಲೈಶ್ವರ್ಯಗಳನ್ನೂ, ತೇಜಸ್ಸಿನಿಂದ ರೂಪವನ್ನೂ ಹೊಂದುತ್ತಾನೆ. 


ಉತ್ತಮವಾದ ವಸ್ತ್ರವನ್ನು ತಗೆದುಕೊಡಲು ಹಣದ ಸೌಕರ್ಯ ಇಲ್ಲದವರು ತಮ್ಮ ಶಕ್ತಿಗನುಗುಣವಾಗಿ ವಸ್ತ್ರಕ್ಕೆ ಪ್ರತಿಯಾಗಿ ಕೇವಲ ಹಣವನ್ನಾದರೂ ದಾನ ಮಾಡಬೇಕು. 


ಯಜ್ನೋಪವೀತಂ ವೈ ದದ್ಯಾತ್ಶ್ರಾದ್ಧ ಕಾಲೇಷು ಧರ್ಮವಿತ್ ।

ಪಾವನಂ ಸರ್ವ ವಿಪ್ರಾಣಾ೦ಬ್ರಹ್ಮ ದಾನಸ್ಯ ತತ್ಫಲಂ ।। 


ಧರ್ಮವನ್ನರಿತವನು ಎಲ್ಲಾ ವಿಪ್ರರನ್ನು ಶುದ್ಧಿಗೊಳಿಸಿವ ಜನಿವಾರವನ್ನು ಶ್ರಾದ್ಧ ಕಾಲದಲ್ಲಿ ಕೊಡಬೇಕು. ಅದರಿಂದ ಸರ್ವ ವ್ಯಾಪಿಯಾದ ಪರಬ್ರಹ್ಮನನ್ನೇ ಅಂದರೆ ವಿಶ್ವದಲ್ಲಿರುವ ಎಲ್ಲಾ ವಸ್ತುಗಳನ್ನೂ ದಾನ ಮಾಡಿದ ಫಲ ಉಂಟಾಗುತ್ತದೆ.

-ಡಾ. ಗುರುರಾಜ ಪೋಶೆಟ್ಟಿಹಳ್ಳಿ

ಮುಂದುವರೆಯುವುದು...

 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top