ನವರಾತ್ರಿಯ ಪರ್ವಕಾಲದಲ್ಲಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಅನುಗ್ರಹಿಸುತ್ತಿರುವ "ಲಲಿತೋಪಾಖ್ಯಾನ" ಪ್ರವಚನದ ಅಕ್ಷರರೂಪ.
~~~~~~
*"ಶ್ರೇಯಾಂಸಿ ಬಹುವಿಘ್ನಾನಿ”*. ಶ್ರೇಯಸ್ಸಿಗೆ ವಿಘ್ನಗಳು ಬಹಳ ಅಥವಾ ವಿಘ್ನಗಳಿಲ್ಲದೇ ಶ್ರೇಯಸ್ಸಿಲ್ಲ. ಯಾವ ಬದುಕಿನಲ್ಲಿ ವಿಘ್ನಗಳೇ ಇಲ್ಲ ಅಂಥದ್ದೊಂದು ಬದುಕನ್ನು ತೋರಿಸಿ ನೋಡೋಣ? ಈ ಲೋಕದಲ್ಲಿ ಅಂತಹ ಬದುಕಿಲ್ಲ. ಯಾವ ಲೋಕದಲ್ಲಿಯೂ ಕೂಡ ಇಲ್ಲ. ವಿಘ್ನಗಳು ಜೀವನದ ಅವಿಭಾಜ್ಯ ಅಂಗ. ಅವು ಬಂದೇ ಬರುತ್ತವೆ. ಯಾರು ಆ ವಿಘ್ನಗಳನ್ನು ಮೆಟ್ಟಿ ಮುಂದುವರೆಯುತ್ತಾನೋ ಅವನಿಗೆ ಶ್ರೇಯಸ್ಸು ಪ್ರಾಪ್ತವಾಗುತ್ತದೆ. ಯಾರು ವಿಘ್ನಗಳಿಗೆ ಬೆದರಿ ಹಿಮ್ಮೆಟ್ಟುತ್ತಾನೋ ಅವನಿಗೆ ಶೇಯಸ್ಸು ಇಲ್ಲವಾಗುತ್ತದೆ. ವಿಘ್ನಗಳು ಬಂದಾಗ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದೇ ನಮ್ಮ ಶ್ರೇಯಸ್ಸಿನ ಮೂಲ ಸೂತ್ರ. ಕಾರ್ಯಕ್ಕಾಗಿ ನಾವು ಮಾಡುವ ಪ್ರಯತ್ನ ದೊಡ್ಡದಲ್ಲ. ಬರುವ ವಿಘ್ನಗಳನ್ನು ಎದುರಿಸುವ ಆ ಸಿದ್ಧತೆಯಿದೆಯಲ್ಲಾ ಅದು ಮುಖ್ಯವಾದಂತಹದು. ವಿಘ್ನಗಳಿಗೆ ಹೆದರಿ ಕಾರ್ಯವನ್ನೇ ಆರಂಭ ಮಾಡದಿರುವವರು, ಕಾರ್ಯವನ್ನು ಆರಂಭ ಮಾಡಿ ವಿಘ್ನಗಳು ಬಂದಾಗ ಹೆದರಿ ಹಿಮ್ಮೆಟ್ಟಿ ನಿಲ್ಲಿಸುವವರು, ಎಷ್ಟು ವಿಘ್ನಗಳು ಬಂದರೂ ಕೂಡ ಹಿಡಿದ ಕಾರ್ಯವನ್ನು ಬಿಡದೇ ಮಾಡುವವರು, ಹೀಗೆ ಮೂರು ವರ್ಗವದು. ನೀಚ, ಮಧ್ಯಮ ಮತ್ತು ಉತ್ತಮವೆಂಬ ಮೂರು ವರ್ಗವದು. ವಿಘ್ನಗಳು ಬಂದಾಗ ಹೆದರದೇ ಕಾರ್ಯವನ್ನು ಮಾಡುವವರ ವರ್ಗಕ್ಕೆ ನಾವು ಸೇರಬೇಕು. ಒಂದು ಸಿದ್ಧಿ ಪ್ರಾಪ್ತವಾಗಬೇಕಾದರೆ ನಮ್ಮ ಅರ್ಹತೆಯ ಪರೀಕ್ಷೆಯಾಗುತ್ತದೆ. ಅರ್ಹತೆ ಇದ್ದರೆ ಆ ವಿಘ್ನವನ್ನು ದಾಟುತ್ತೇವೆ ಇಲ್ಲದಿದ್ದರೆ ಅಲ್ಲಿಯೇ ನಾವು ತಗ್ಗುತ್ತೇವೆ. ಮತ್ತೆ ನಮ್ಮನ್ನು ಗಟ್ಟಿ ಮಾಡಲಿಕ್ಕಾಗಿ ಇರತಕ್ಕಂತಹದು ವಿಘ್ನಗಳು. ಪೆಟ್ಟುಗಳು ಬಿದ್ದಾಗ ವ್ಯಕ್ತಿ ಗಟ್ಟಿಯಾಗುತ್ತಾನೆ. ಒಂದೂ ಪೆಟ್ಟೇ ತಿನ್ನದೇ ಕರಾಟೆಯನ್ನೋ, ಕುಂಗ್-ಫುವನ್ನೋ ಕಲಿಯುತ್ತೇನೆಂದರೆ ಸಾಧ್ಯವೇ ಇಲ್ಲ. ಮೊದಲು ಬೀಳುವುದನ್ನು ಕಲಿಯುತ್ತಾರೆ, ಪೆಟ್ಟು ತಿನ್ನುವುದನ್ನು ಕಲಿಯುತ್ತಾರೆ. ಮತ್ತೆ ಕೊಡುವುದನ್ನು ಕಲಿಯುವುದು. ಅದೇಕೆ ಹಾಗೆ ಎಂದರೆ, ಪೆಟ್ಟುಗಳು ನಮ್ಮನ್ನು ದೃಢಗೊಳಿಸುತ್ತವೆ. ಹಾಗಾಗಿ ವಿಘ್ನಗಳು ಬೇಕು. ಹಾಗಾಗಿಯೇ ನಮ್ಮ ಸಂಸ್ಕೃತಿಯಲ್ಲಿ ವಿಘ್ನಕ್ಕೆ ಅಂತಲೇ ಒಂದು ದೇವತೆ. ವಿಘ್ನರಾಜ, ಮಹಾಗಣಪತಿ. ಅವನು ವಿಘ್ನಕರ್ತ ಮತ್ತು ವಿಘ್ನಹರ್ತಾ. ಪರೀಕ್ಷೆ ಮಾಡುವಾಗ ವಿಘ್ನಕರ್ತ ಅವನು, ಯೋಗ್ಯತೆ ಇದ್ದರೆ ವಿಘ್ನಹರ್ತಾ ಅವನು. ಮಂಗಳಮೂರ್ತಿ ಆಗುತ್ತಾನೆ.
ಇಲ್ಲಿಯೂ ವಿಘ್ನ ಬಂದಿದೆ. ಹಿಮಾಲಯದ ಪರಿಸರದಲ್ಲಿ, ದೇವೇಂದ್ರನ ನೇತೃತ್ವದಲ್ಲಿ ದೇವತೆಗಳು ತಪಸ್ಸು ಮಾಡುತ್ತಿದ್ದಾರೆ. ಪೂಜೆ, ಧ್ಯಾನ ದೇವಿಯ ಕುರಿತಾಗಿ. ಬ್ರಹ್ಮಾಂಡ ಪುರಾಣ ನಿರೂಪಣೆ ಮಾಡುವಂತೆ, ಹತ್ತುಸಾವಿರ ವರ್ಷಗಳ ಕಾಲ ವಿಘ್ನ ಬರಲಿಲ್ಲ, ದೇವಿಯ ದರ್ಶನವೂ ಆಗಲಿಲ್ಲ. ಆದರೀಗ ವಿಘ್ನ ಬಂದಿದೆ. ಅದೂ ಎಂತಹ ವಿಘ್ನವೆಂದರೆ ಆ ವಿಘ್ನವನ್ನು ಎದುರಿಸಲು ಸಾಧ್ಯವಿಲ್ಲ ದೇವತೆಗಳಿಗೆ, ಮತ್ತದು ಅವರಿಗೂ ತಿಳಿದಿದೆ. ಭಂಡಾಸುರ ತನ್ನ ಮಂತ್ರಿಗಳನ್ನು, ಸೇನೆಯನ್ನು ಕಟ್ಟಿಕೊಂಡು ದೇವತೆಗಳು ತಪಸ್ಸು ಮಾಡುತ್ತಿದ್ದಲ್ಲಿಗೆ ಬರುತ್ತಿದ್ದಾನೆ. ಆ ಸುದ್ದಿ ಯಾವಾಗ ದೇವತೆಗಳಿಗೆ ಗೊತ್ತಾಯಿತೋ ಭಯದಲ್ಲಿ ನಡುಗಿದರು. *“ ತಾಂ ಚ ಅದೃಷ್ಟ್ವಾ ಜಗದ್ಧಾತ್ರೀಂ ದೃಷ್ಟ್ವಾ ತದ್ಘೋರ ಸೈನಿಕಾಮ್”*. ಮಂಗಲವಾದ ದೇವಿಯ ರೂಪ ಗೋಚರಿಸಲಿಲ್ಲ, ಆದರೆ ಘೋರ ರೂಪದ ರಾಕ್ಷಸರು ಗೋಚರಿಸಿದರು. ಯಾರಿಗಾಗಿ ತಪಸ್ಸು ಮಾಡುತ್ತಿದ್ದರೋ ಅವರು ಗೋಚರಿಸಲಿಲ್ಲ, ಯಾರಿಂದ ತಪ್ಪಿಸಿಕೊಳ್ಳಲಿಕ್ಕಾಗಿ ತಪಸ್ಸು ಮಾಡುತ್ತಿದ್ದರು ಅವರೇ ಪ್ರತ್ಯಕ್ಷರಾದರು. ಭಂಡಾಸುರ ಪ್ರತ್ಯಕ್ಷನಾದ. ದೇವಿ ಗೋಚರಿಸಲೇ ಇಲ್ಲ. *“ಭಯಾತ್ ದುದೃವಿರೇ”*, ದೇವತೆಗಳು ಭಯದಿಂದ ತಪಸ್ಸನ್ನು ಬಿಟ್ಟೆದ್ದು ಓಡಿದರು. ಎಷ್ಟೋ ಬಾರಿ ಏನಾಗುತ್ತದೆ ಎಂದರೆ ಆಪತ್ತು ಮಾಡುವ ಅನಾಹುತಕ್ಕಿಂತ ಆಪತ್ತಿನ ಭೀತಿ ಮಾಡುವ ಅನಾಹುತವೇ ಹೆಚ್ಚು. ಸಾಮಾನ್ಯವಾಗಿ ಆಗುವುದು ಹೀಗೆಯೇ. ತೊಂದರೆ ಬರಬಹುದು, ಹೀಗಾಗಬಹುದು, ಹಾಗಾಗಬಹುದು ಎಂಬ ಯೋಚನೆ ನಮ್ಮನ್ನು ಕಿತ್ತು ತಿನ್ನುತ್ತದೆ. ಮೃತ್ಯುವನ್ನು ತೆಗೆದುಕೊಂಡರೆ, ಇಡೀ ಜೀವನ ಮೃತ್ಯುವಿಗಾಗಿ ನಾವು ಭಯ ಪಡುತ್ತೇವೆ, ಉದ್ವೇಗ ಪಡುತ್ತೇವೆ. ಆದರೆ ಮೃತ್ಯು ಕೆಲಕ್ಷಣಗಳ ಸಂಗತಿ ಅದು. ಮೃತ್ಯುವನ್ನು ಅನುಭವಿಸುವುದಕ್ಕಿಂತ ಮೃತ್ಯುವಿನ ಭೀತಿಯನ್ನು ಅನುಭವಿಸುವುದು ಬಹಳ ಬಹಳ ಕಷ್ಟ. ಹಾಗಾಗಿ ಒಮ್ಮೆ ಇದನ್ನು ಮನಸ್ಸಿನಲ್ಲಿ ಧಾರಣೆ ಮಾಡಿ, ಆಪತ್ತು ಆಪತ್ತಲ್ಲ, ಆಪತ್ತಿನ ಭೀತಿ ಆಪತ್ತು. ಇಲ್ಲಿ ನೋಡಿ ಭಂಡಾಸುರ ದೇವತೆಗಳಿಗೆ ಏನೂ ತೊಂದರೆ ಮಾಡಲು ಸಾಧ್ಯವಿಲ್ಲ. ಏಕೆಂದರೆ ದೇವಿ, ದೇವತೆಗಳನ್ನು ರಕ್ಷಿಸುತ್ತಿದ್ದಾಳೆ. ದೇವಿ ಕಣ್ಮುಂದೆ ಗೋಚರಿಸದಿದ್ದರೂ ಮಾಯಾಪ್ರಾಕಾರವನ್ನು ದೇವತೆಗಳು ಮತ್ತು ದಾನವರ ಮಧ್ಯೆ ಕಲ್ಪಿಸಿದ್ದಾಳೆ. ಭಂಡಾಸುರ ದಾನವಾಸ್ತ್ರವನ್ನು ಪ್ರಯೋಗ ಮಾಡಿದ, ಕೋಟೆ ಮುರಿಯಿತು. ಮುಂದೆ ಹೋಗುವ ಎಂದರೆ ಕೋಟೆ ಎದ್ದುನಿಂತಿತು. ವಾಯವ್ಯಾಸ್ತ್ರವನ್ನು ಪ್ರಯೋಗ ಮಾಡಿದ. ಮುಂದೆ ಹೋಗುವಷ್ಟರಲ್ಲಿ ಮತ್ತೊಂದು ಕೋಟೆ ಸೃಷ್ಟಿಯಾಯಿತು. ಹೀಗೆ ಭಂಡಾಸುರನಿಗೆ ಕೋಟೆಯನ್ನು ಭಗ್ನಗೊಳಿಸುವುದೇ ಕೆಲಸ. ಅದನ್ನು ಪುನಃ ಸೃಷ್ಟಿ ಮಾಡುವುದೇ ದೇವಿಯ ಕೆಲಸ ಎನ್ನುವ ಹಾಗಾಯಿತು. ಕೊನೆಗೆ ಬೇಸತ್ತ ಭಂಡಾಸುರ ತನ್ನ ನಗರಿಗೆ ಹೊರಟುಹೋದ.
ಕೆಲವು ಬಾರಿ ಕೆಟ್ಟವರು ಶಾಪ ಕೊಟ್ಟರೆ ಒಳ್ಳೆಯದಾಗುತ್ತದೆ. ಒಳ್ಳೆಯವರು ಹರಸಿದರೆ ಒಳ್ಳೆಯದಾಗುತ್ತದೆ. ಆದರೆ ಎಲ್ಲರೂ ಹರಸಬೇಕು ಎಂದು ನಾವು ನಿರೀಕ್ಷೆ ಮಾಡಬಾರದು. ಉದಾಹರಣೆಗೆ: ಪೊಲೀಸ್ ಇಲಾಖೆಯ ಅಧಿಕಾರಿ, ಎಲ್ಲರೂ ತನ್ನನ್ನು ಮೆಚ್ಚಬೇಕು ಎಂದರೆ ಆಗಲಿಕ್ಕಿಲ್ಲ. ಏಕೆಂದರೆ ಕಳ್ಳ, ಅಪರಾಧಿ ಅವರು ಅಧಿಕಾರಿಯನ್ನು ಮೆಚ್ಚುವುದಿಲ್ಲ. ಅವನು ಶಾಪ ಹಾಕುತ್ತಾನೆ. ಆ ಶಾಪದಿಂದಲೇ ಒಳ್ಳೆಯದಾಗುವುದು. ಎಲ್ಲರನ್ನೂ ಮೆಚ್ಚಿಸುವವನು ಯಾರನ್ನೂ ಮೆಚ್ಚಿಸುವುದಿಲ್ಲ. ಸಾತ್ವಿಕರು, ಸಜ್ಜನರು, ದೇವರು, ಗುರು-ಹಿರಿಯರು ಮೆಚ್ಚುವಂತೆ ಇರಬೇಕು.
ದೇವತೆಗಳಿಗೆ ಕೋಟೆ ಭಗ್ನವಾಗಿದ್ದು, ಈ ವಿಷಯವೇ ತಿಳಿದಿಲ್ಲ. ಹಾಗೆಯೇ ಹೆದರಿ ಓಡಿ ಹೋಗಿರುತ್ತಾರೆ. ದೇವರು ನಮ್ಮನ್ನು ರಕ್ಷಣೆ ಮಾಡಿರುತ್ತಾರೆ, ಆದರೆ ಅದು ನಮಗೆ ಗೊತ್ತೇ ಆಗಿರುವುದಿಲ್ಲ. ನಾವು ತಿಳಿಯದ ಆಪತ್ತುಗಳು ಎಷ್ಟೋ ಇರುತ್ತವೆ, ಅವುಗಳಿಂದ ನಮ್ಮನ್ನು ನಾವು ಮಾಡಿದ ಒಳ್ಳೆಯ ಕೆಲಸಗಳು ಕಾಪಾಡಿರುತ್ತವೆ. ನಮಗದು ಗೊತ್ತೇ ಇರುವುದಿಲ್ಲ. ನಾನು ಇಷ್ಟೆಲ್ಲಾ ಮಾಡಿದೆ, ಅಷ್ಟೆಲ್ಲಾ ಮಾಡಿದೆ ಏನೂ ಪ್ರಯೋಜನವಿಲ್ಲ ಎಂದು ನಾವು ವ್ಯಥೆ ಪಡುತ್ತಿರುತ್ತೇವೆ. ಇಲ್ಲಿಯೂ ಹಾಗೇ ಆಗಿರುವಂಥದ್ದು. ಅವರು ಮಾಡಿದ ತಪಸ್ಸಿಗೆ ಫಲವಿದೆ, ಪರಿಣಾಮವಿದೆ. ಪ್ರತ್ಯಕ್ಷವಾಗಿ ದೇವಿಯೇ ಬಂದು ಅವರನ್ನು ಕಾಪಾಡುತ್ತಿರುತ್ತಾಳೆ, ಆದರೆ ಅದು ಅವರಿಗೆ ಗೊತ್ತಿಲ್ಲ. ಹಾಗಾಗಿ ದೇವತೆಗಳು ಎದ್ದು ಓಡಿದರು. ದೇವರೂ ಅಗೋಚರ, ದೇವರು ಮಾಡಿದ ಒಳ್ಳೆಯದೂ ಅಗೋಚರ. ಹಾಗಾಗಿ ದೇವರನ್ನು ಕಾಣುವ ಕಣ್ಣು ಬೇಕು. ದೇವರಿಂದಾದ ಒಳ್ಳೆಯದನ್ನು ಕಾಣುವ ಕಣ್ಣು ಬೇಕು. ಕೊನೆಯ ಪಕ್ಷ ನಂಬಿಕೆ ಬೇಕು . ನಾವು ನಂಬಿದ ತಾಯಿ ನಮ್ಮನ್ನು ಕಾಪಾಡುತ್ತಾಳೆ, ಬಿಟ್ಟುಕೊಡುವುದಿಲ್ಲ ಎಂಬ ನಂಬಿಕೆ ಬೇಕು. ದೇವರು ನಮ್ಮನ್ನು ಕಾಪಾಡುತ್ತಾನೆ ಎನ್ನುವ ಶ್ರದ್ಧೆ ಬೇಕು.
ದೇವತೆಗಳೆಲ್ಲಾ ಎದ್ದು ಓಡಿದರು. ಆದರೆ ದೇವೇಂದ್ರ ಏಳಲಿಲ್ಲ. *“ತಾನುವಾಚ ವ್ರತೀ ಶುಕ್ರಃ”*. ಸುರರಾಜ ಮಾತ್ರ ವ್ರತವನ್ನು ಬಿಡಲಿಲ್ಲ. ಮಾತ್ರವಲ್ಲ ತನ್ನ ಅನುಚರರಿಗೆ ಪ್ರೇರಣೆಯನ್ನು ನೀಡುತ್ತಾನೆ. ಒಂದು ಒಳ್ಳೆಯ ಸಂದರ್ಭವಿದು. ಇಂದ್ರ ಒಂದು ಸಂದೇಶ ನೀಡುತ್ತಾನೆ, ಸಂದೇಶವೇನೆಂದರೆ- ನಮಗೆ ಯುದ್ಧ ಮಾಡಲಿಕ್ಕಿಲ್ಲ ಭಂಡಾಸುರನೊಟ್ಟಿಗೆ. ಯಾಕೆಂದರೆ ಯುದ್ಧ ಮಾಡಿ ಗೆಲ್ಲಲಿಕ್ಕೆ ಸಾಧ್ಯವಿಲ್ಲ. ಹಾಗಂತ ಓಡಿಯೂ ಪ್ರಯೋಜನವಿಲ್ಲ. ಎಲ್ಲಿಗೆ ಹೋಗುವುದು? ಭಂಡಾಸುರನ ವ್ಯಾಪ್ತಿಯಿಲ್ಲದ ಸ್ಥಳ ಯಾವುದಿದೆ ಬ್ರಹ್ಮಾಂಡದಲ್ಲಿ? ಭಂಡಾಸುರನನ್ನು ಎದುರಿಸಿ ನಿಂತು ಆಶ್ರಯ ನೀಡುವವರು ಯಾರಿದ್ದಾರೆ? ಹಾಗಿದ್ದರೆ ಏನು ಮಾಡುವುದು?, ನಾವು ಉಪಾಸನೆಯನ್ನೇ ಮಾಡೋಣ. ಅಳಿದು ಹೋಗುವವರೆಗೂ ನಾವು ದೇವಿಯ ಸೇವೆಯನ್ನು, ಪೂಜೆಯನ್ನು, ತಪಸ್ಸನ್ನು ಮಾಡೋಣ. ಎದ್ದು ಓಡುವುದು ಬೇಡ ಎಂಬುದಾಗಿ ದೇವೇಂದ್ರನು ಹೇಳಿದ. ನಾಯಕನಾದವನು ಪ್ರೇರಕನಾಗಿರಬೇಕು. ಯಾರು ಪ್ರೇರಕನಲ್ಲವೋ ಅವನು ನಾಯಕನಲ್ಲ. ಪ್ರೇರಣೆ ಕೊಡುವ ಶಕ್ತಿಯಿಲ್ಲದಿದ್ದರೆ ಮುಂದಾಳತ್ವದ ಕೆಲಸಕ್ಕೇ ಹೋಗಬಾರದು. ನಾಯಕತ್ವದ ಪ್ರಥಮ ಪರಿಭಾಷೆಯೇ ಪ್ರೇರಣೆ. ಇಂದ್ರ ಇಲ್ಲಿ ಆ ಕಾರ್ಯವನ್ನು ಮಾಡುತ್ತಿದ್ದಾನೆ.
ರಾಮಾಯಣದಲ್ಲಿ, ಇಂದ್ರಾಂಶದಿಂದ ಹುಟ್ಟಿಬಂದ ಒಬ್ಬ ವೀರ ರಾಮನಿಗೆ ಬಹುದೊಡ್ಡ ಸೇವೆಯನ್ನು ಮಾಡುತ್ತಾನೆ. ವಾಲಿ ಅಲ್ಲ, ವಾಲಿಗೆ ರಾಮನ ಸೇವೆಯನ್ನು ಮಾಡುವ ಅವಕಾಶ ಪ್ರಾಪ್ತವಾಗಲಿಲ್ಲ. ವಾಲಿ ಸಾಯುವ ಸಮಯದಲ್ಲಿ ಆತನ ಮಗ ಅಂಗದನಿಗೆ, ರಾಮನ ಸೇವೆಯನ್ನು ನೀನು ಮಾಡು ಎಂಬುದಾಗಿ ಸಂದೇಶವನ್ನು ನೀಡುತ್ತಾನೆ. ವಾಲಿಯನ್ನು ಕೊಂದಿದ್ದು ರಾಮ, ಕೊಲ್ಲಿಸಿದ್ದು ಸುಗ್ರೀವ. ಆದರೂ ವಾಲಿ ತನ್ನ ಮಗನಿಗೆ ರಾಮನ ಸೇವೆಯನ್ನು ನಿನ್ನ ಚಿಕ್ಕಪ್ಪ ಸುಗ್ರೀವನ ಮಾರ್ಗದರ್ಶನದಂತೆ ಮಾಡು ಎಂದು ಹೇಳುತ್ತಾನೆ. ವಾಲಿ ಪ್ರೇರಣೆ, ಚೈತನ್ಯ ಅಂಗದನಲ್ಲಿ ಬಂತು. ಅವನು ಬಹುದೊಡ್ಡ ಸೇವೆಯನ್ನು ಮಾಡುತ್ತಾನೆ ರಾಮನಿಗೆ. ಇನ್ನೊಂದು ಸಂದರ್ಭ ರಾಮಾಯಣದಲ್ಲಿ, ಕುಂಭಕರ್ಣ ಯುದ್ಧಕ್ಕೆ ಬರುತ್ತಾನೆ. ಆತನ ಕಣ್ಣು ಹಳೆಯ ಕಾಲದ ಎತ್ತಿನಗಾಡಿಯ ಚಕ್ರದಷ್ಟು ದೊಡ್ಡದಾಗಿರುತ್ತದೆ. ದಾಟಲು ಅಸಾಧ್ಯವಾಗಿರುವಂತಹ ಲಂಕೆಯ ಕೋಟೆಯನ್ನು ಎದ್ದುನಿಂತು, ಕಾಲಿನಿಂದ ದಾಟಿ ಬಂದನಂತೆ. ಅವನನ್ನು ಕಂಡ ಕಪಿಸೇನೆ ಓಡಿದ್ದೇ. ದಿಕ್ಕುದೆಸೆ ಇಲ್ಲದೇ, ಸಮುದ್ರದಲ್ಲಿ ಮುಳುಗಿ, ಬೆಟ್ಟಹತ್ತಿ, ಮರಹತ್ತಿ ಹೀಗೆಲ್ಲಾ ಓಡಿದರು. ಆಗ ಅಂಗದ ಇದೇ ರೀತಿಯ ಪ್ರೇರಣಾದಾಯಕವಾದ ವಚನದಿಂದ ಅವರನ್ನೆಲ್ಲಾ ಹಿಂದಿರುಗಿಸುತ್ತಾನೆ.
ಇಂತಹ ನಾಯಕರು ಬೇಕಾಗುತ್ತಾರೆ. ಆಪತ್ತು ಬಂದಾಗ ಓಡಿಹೋಗುವ ನಾಯಕ ನಾಯಕನಲ್ಲ. ಆಪತ್ತು ಬಂದಾಗ ಅಡಗಿ ಕುಳಿತುಕೊಳ್ಳುವವ ನಾಯಕನಲ್ಲ. ಇಡೀ ಸೈನ್ಯಕ್ಕೆ ಪ್ರೇರಣೆ ನೀಡುವಂತಿರಬೇಕು. ಆ ಗುಣವನ್ನು ಇಂದ್ರ ಪ್ರಕಟಿಸುತ್ತಿದ್ದಾನೆ. ಇಂದ್ರನ ಮುಂದಿನ ಮಾತುಗಳು ಅದ್ಭುತವಾಗಿವೆ. ಪ್ರಶ್ನೆ ಬರಬಹುದು ದೇವತೆಗಳಲ್ಲಿ, ನಾವು ಯಾಗ ಮಾಡುತ್ತಿರುವಾಗ ರಾಕ್ಷಸರು ಬಂದು ತಲೆಯೊಡೆದರೆ ಏನು ಮಾಡುವುದು? ಎದೆಗೆ ಶಸ್ತ್ರದಿಂದ ಚುಚ್ಚಿದರೆ? ಆಗ ಹೋಮ-ಪೂಜೆ ಅಸ್ತವ್ಯಸ್ತವಾಗುತ್ತದೆ. ಹೀಗಾಗಬೇಕೇ? ಎನ್ನುವ ಪ್ರಶ್ನೆ ದೇವತೆಗಳಿಗೆ ಬಂದಿರಬಹುದು. ಒಂದು ಯೋಜನ ವಿಸ್ತಾರದ ಕುಂಡವನ್ನು ರಚನೆ ಮಾಡೋಣ, ಅದರೊಳಗೆ ಅಗ್ನಿಯನ್ನು ಪ್ರತಿಷ್ಠಾಪನೆ ಮಾಡೋಣ, ಮಹಾಯಾಗ ವಿಧಾನದಿಂದ ಹವನವನ್ನು ಮಾಡೋಣ. ಮಹಾಯಾಗ ವಿಧಾನ ಎಂದರೆ ಶ್ರೀವಿದ್ಯೆ, ಶ್ರೀಚಕ್ರದ ವಿಧಾನವದು. ಆ ದಾರಿಯಿಂದ ನಾವು ಯಾಗವನ್ನು ಮಾಡೋಣ. ಹೋಮಕ್ಕೆ ಆಹುತಿಯೇನು? ಎಂದರೆ, ನಮ್ಮ ಮಾಂಸವನ್ನೇ ಕತ್ತರಿಸಿ ನಾವು ಹೋಮ ಮಾಡೋಣ. ಅಂದರೆ ನಮ್ಮ ದೇಹದ ಭಾಗಗಳನ್ನೇ ಕತ್ತರಿಸಿ, ಕೈ ಕಾಲುಗಳನ್ನೇ ಕತ್ತರಿಸಿ ನಾವು ಹೋಮ ಮಾಡೋಣ. ಮಹಾಮಾಂಸವೆಂದು ಕರೆಯುತ್ತಾರೆ ಅದನ್ನು. ಬೇರೆ ಪ್ರಾಣಿಗಳ ಮಾಂಸದಿಂದ ಹೋಮ ಮಾಡಿದರೆ ಆಗ ವಿಷಯ ಬೇರೆ. ಆದರೆ ಪುರುಷಮಾಂಸಮ್, ತನ್ನದೇ ಮಾಂಸದಿಂದ ಹಾಗಾಗಿ ಅದು 'ಆತ್ಮಹೋಮ', ನಮ್ಮನ್ನೇ ನಾವು ಹೋಮ ಮಾಡಿಕೊಳ್ಳೋಣ. ಇನ್ನಾವುದೋ ಪಶುವನ್ನು ಬಲಿ ಕೊಡುವುದು ಬೇಡ. ಭಂಡಾಸುರನ ಶಸ್ತ್ರದಿಂದ ನಾವು ಸಾಯುವುದು ಬೇಡ. ಅದರ ಬದಲು ದೇವಿಗೆ ನಾವು ಹೋಮದ ಪುಣ್ಯಾಹುತಿಯಾಗಿ, ದ್ರವ್ಯವಾಗಿ, ಹವಿಸ್ಸಾಗಿ ನಮ್ಮ ಪ್ರಾಣಾರ್ಪಣೆ ಮಾಡೋಣ ಎಂದು ಹೇಳುತ್ತಾನೆ ಇಂದ್ರ. ಇಂದ್ರನ ಈ ಮುಖವನ್ನು ಬಹುಶಃ ಇನ್ನೆಲ್ಲಿಯೂ ನೋಡಿರಲಿಕ್ಕಿಲ್ಲ. ಇಲ್ಲಿ ಮಾತ್ರ ಕಾಣುವಂಥಹದ್ದು.
ಲಲಿತಾ ಸಹಸ್ರನಾಮದಲ್ಲಿ "ಮಹಾಯಾಗ ಕ್ರಮಾರಾಧ್ಯ" ಎನ್ನುವ ಒಂದು ನಾಮ ಬರುತ್ತದೆ. ಇದೇ ಅದು. ಅಂತಹ ವಿಶಿಷ್ಟವಾದ ಮಹಾಯಾಗದ ಕ್ರಮದಿಂದ ಪೂಜೆಗೊಳ್ಳುವವಳು ದೇವಿ. ಇಂದ್ರ ಹೇಳುತ್ತಾನೆ; ನಮಗೆ ಶ್ರೇಯಸ್ಸೇ ಇರುವಂತಹದ್ದು. ಉಳಿದುಕೊಂಡರೆ ಸ್ವರ್ಗವನ್ನು ಆಳೋಣ, ಅದು ಒಳ್ಳೆಯದು, ಉಳಿಯದೆ ಇದ್ದರೆ ಇನ್ನೂ ಒಳ್ಳೆಯದು. ನಾವು ದೇವಿಯ ಪದತಲದಲ್ಲಿ ಲೀನರಾಗೋಣ. ಬ್ರಹ್ಮ ಭಾವವನ್ನು ಹೊಂದೋಣ, ಮುಕ್ತಿಯನ್ನು ಪಡೆಯೋಣ. ದೇವತ್ವಕ್ಕಿಂತ ಶ್ರೇಷ್ಠವಾಗಿರತಕ್ಕಂತಹದ್ದು ಮುಕ್ತಿ. ದೇವತೆಗಳೂ ಮನುಷ್ಯರಾಗಿ ಹುಟ್ಟಿಬಂದು ಸಾಧನೆ ಮಾಡಬೇಕಂತೆ ಮುಕ್ತಿಯನ್ನು ಪಡೆಯಬೇಕೆಂದರೆ. ಉತ್ಕೃಷ್ಟವಾಗಿ ಇರುವಂಥದ್ದು. ಮುಕ್ತಿಯ ಮುಂದೆ ಸ್ವರ್ಗವೆಂಬುದು ಒಂದು ಸಣ್ಣ ಸ್ಥಾನ, ಬಹಳ ಸಣ್ಣ ವಿಷಯ. ಹಾಗಾಗಿ ನಾವು ಮುಕ್ತಿಗೆ ಹೋಗೋಣ ಎಂಬುದಾಗಿ ದೇವತೆಗಳ ದೊರೆ ಉಳಿದ ದೇವತೆಗಳನ್ನು ಪ್ರೇರೇಪಿಸುತ್ತಾನೆ. ಅವನ ಮಾತು *"ಕಾರ್ಯಂ ವಾ ಸಾಧಯಾಮಃ ಮರಣಂ ವಾ ಯಾಸ್ಯಾಮಃ"*. ಒಂದೋ ಕಾರ್ಯವನ್ನು ಸಾಧನೆ ಮಾಡೋಣ ಅಥವಾ ಮರಣವನ್ನೇ ಹೊಂದೋಣ.
ಗೀತೆಯ ಒಂದು ಮಾತು ನೆನಪಾಗುತ್ತದೆ. ಅರ್ಜುನನಿಗೆ ಕೃಷ್ಣ ಹೇಳಿದ್ದು. *"ಹತೋ ವಾ ಪ್ರಾಪ್ಸ್ಯಸಿ ಸ್ವರ್ಗಂ| ಜಿತ್ವಾ ವಾ ಭೋಕ್ಷಸೇ ಮಹೀಮ್||*" ಅರ್ಜುನ ಯುದ್ಧಕ್ಕಾಗಿ ಏಳು. ಈ ಯುದ್ಧ ನಿನಗೆ ಶ್ರೇಯಸ್ಸನ್ನು ಮಾಡುತ್ತದೆ. ಯುದ್ಧದಲ್ಲಿ ಹತನಾದರೆ ವೀರಸ್ವರ್ಗ, ಬದುಕಿದರೆ ಈ ಭೂಮಿಯನ್ನೇ ಸ್ವರ್ಗವನ್ನಾಗಿಸಬಹುದು. ಧರ್ಮಯುಕ್ತವಾದ ಆಳ್ವಿಕೆಯನ್ನು ಕೊಟ್ಟು, ಧರ್ಮ ಸಾಮ್ರಾಜ್ಯವನ್ನು ಸ್ಥಾಪನೆ ಮಾಡಿ ಧರೆಯನ್ನೇ ಸ್ವರ್ಗವನ್ನಾಗಿ ಮಾರ್ಪಡಿಸಬಹುದು. ಆದರೆ ಇದಕ್ಕಿಂತ ಶ್ರೇಷ್ಠವಾಗಿರತಕ್ಕಂಥದ್ದು ಕ್ಷತ್ರಿಯನ ಶಸ್ತ್ರಗಳಿಂದ ನಿನ್ನ ವಧೆಯಾದರೆ, ನಿನ್ನ ಪ್ರಾಣ ಹರಣವಾದರೆ ನಿನಗೆ ವೀರಸ್ವರ್ಗ. *"ತಸ್ಮಾದುತ್ತಿಷ್ಠ ಕೌಂತೇಯ ಯುದ್ಧಾಯ ಕಥನಿಶ್ಚಯಃ"*, ಹಾಗಾಗಿ ಏಳು ಅರ್ಜುನ, ಯುದ್ಧಕ್ಕಾಗಿ ನಿಶ್ಚಯಗೈದು ಎದ್ದೇಳು ಎಂಬುದಾಗಿ ಅರ್ಜುನನಿಗೆ ಕೃಷ್ಣ ಪ್ರೇರಣೆ ನೀಡಿದಂತೆ, ಇಲ್ಲಿ ಸುರರರಸು ಸುರರಿಗೆ ಪ್ರೇರಣೆ ನೀಡುವಂತಹದ್ದು.
ದೇವರಿಗೆ ನಾವು ಎರಡು ರೀತಿಯ ಸಮರ್ಪಣೆ ಮಾಡಬಹುದು. ಒಂದು ನಮ್ಮದೇನಾದರೂ ಸಮರ್ಪಣೆ ಮಾಡುವುದು, ಇನ್ನೊಂದು ನಮ್ಮನ್ನೇ ಸಮರ್ಪಣೆ ಮಾಡುವುದು. ನಮ್ಮನ್ನೇ ನಾವು ದೇವರಿಗೆ ಸಮರ್ಪಿಸಿಕೊಂಡರೆ ಅದಕ್ಕೆ "ಆತ್ಮನಿವೇದನೆ" ಎಂದು ಹೆಸರು. ನವವಿಧ ಭಕ್ತಿಗಳಲ್ಲಿ ಕೊನೆಯದು ಯಾವುದೆಂದರೆ "ಆತ್ಮನಿವೇದನಂ". ಆತ್ಮನಿವೇದನೆಯ ಭಕ್ತಿ. ಇದಕ್ಕೆ ಎರಡು ಉದಾಹರಣೆಗಳನ್ನು ಕೊಡುತ್ತೇವೆ. ಒಂದು, ಕಾರ್ಯಸಾಧನೆಗೋಸ್ಕರವಾಗಿ ಈ ರೀತಿಯ ತ್ಯಾಗಗಳನ್ನು ಮಾಡಿರುವಂಥವರು. ರಾವಣ ತಪಸ್ಸನ್ನು ಮಾಡುತ್ತಾನೆ. ಹತ್ತುಸಾವಿರ ವರ್ಷಗಳ ತಪಸ್ಸು ಬ್ರಹ್ಮನನ್ನು ಕುರಿತು. ಹತ್ತು ತಲೆಗಳಿದ್ದವಲ್ಲಾ, ಒಂದೊಂದೇ ತಲೆಯನ್ನು ಕಡಿದು ಬ್ರಹ್ಮನಿಗೆ ಸಮರ್ಪಣೆ ಮಾಡುತ್ತಿದ್ದ. ತನ್ನದೇ ತಲೆಯನ್ನು ತಾನೇ ಕಡಿದು ಬ್ರಹ್ಮನಿಗೆ ಸಮರ್ಪಣೆ ಮಾಡುತ್ತಿದ್ದದ್ದು. ಹತ್ತನೆಯ ತಲೆಯನ್ನು ಕಡಿಯುವಾಗ ಬ್ರಹ್ಮ ಪ್ರಕಟನಾಗಿ "ನಿನಗೆ ಏನು ಬೇಕು? ತೆಗೆದುಕೋ" ಎಂದ. ಅಂದರೆ ತ್ಯಾಗಕ್ಕೊಂದು ಸೀಮೆ ಇದೆ. ಸೀಮೆಗೆ ನಾವು ತಲುಪುವಾಗ ದೇವರು ಒಲಿಯುತ್ತಾನೆ. ದೇವರು ಅಷ್ಟೊಂದು ಕಟುಕನಲ್ಲ, ಕ್ರೂರಿಯಲ್ಲ, ಕರುಣಾಳು. ತ್ಯಾಗ ಮಾಡುವಾಗ, ಒಂದು ಹಂತಕ್ಕೆ ತಲುಪುವಾಗ ಅವನು ಬರುತ್ತಾನೆ. ಅವನು ಬರಲೇಬೇಕು ಅನ್ಯಮಾರ್ಗವಿಲ್ಲ. ಯಾವ ತ್ಯಾಗವನ್ನೂ ಮಾಡದೇ ದೇವರು ಹಾಗೆಯೇ ಬರಲಿ ಎಂದರೆ ದೇವರು ಬರಲಿಕ್ಕಿಲ್ಲ. ಆದರೆ ನಾವು ಚರಮ ತ್ಯಾಗಕ್ಕೆ ಹೋಗುವಾಗ ದೇವರು ಬಂದು ಒಲಿದು ನಮ್ಮ ಕೋರಿಕೆಯನ್ನು ನೆರವೇರಿಸುತ್ತಾನೆ, ನಮ್ಮನ್ನು ಉದ್ಧರಿಸುತ್ತಾನೆ ಎನ್ನುವುದಕ್ಕೆ ದೃಷ್ಟಾಂತ. ಆದರೆ ಅದನ್ನು ಸದುಪಯೋಗ ಮಾಡಲಿಲ್ಲ ರಾವಣ ಅದು ಬೇರೆ ಮಾತು. ಆದರೆ ಈ ತ್ಯಾಗದ ಮಾರ್ಗಕ್ಕೆ ಮಹಾಫಲ ಇದೆ. ರಾವಣನಿಗೆ ಎಂಥಾ ಶಕ್ತಿ ಬಂತು ಅಂದರೆ, ಅದರ ನಂತರ ಹದಿನಾಲ್ಕು ಲೋಕಗಳಲ್ಲಿ ಅವನಿಗೆ ಯಾರೂ ಎದುರಿಲ್ಲದಂತಾಯಿತು. ಆ ಶಕ್ತಿ ಬರುವಾಗ ಅದರ ಹಿಂದಿನ ತಪಸ್ಸು ಸಣ್ಣದಿರಲಿಲ್ಲ, ತ್ಯಾಗ ಸಣ್ಣದಿರಲಿಲ್ಲ. ಅದ್ಭುತವಾದಂತಹ ತ್ಯಾಗ. ಆತ್ಮಹೋಮ, ಆತ್ಮಸಮರ್ಪಣೆಯಿಂದ ಬಂದಿರುವಂತಹದ್ದು ಅದು. ಇನ್ನೊಂದು ಉದಾಹರಣೆ ತುಂಬಾ ಭಾವಾತ್ಮಕವಾಗಿ ಇರುವಂತಹದ್ದು, ಜಟಾಯುವಿನದು. ರಾಮಾಯಣದ ಯಜ್ಞದಲ್ಲಿ ಜಟಾಯುವಿನದ್ದು ಆತ್ಮಾಹುತಿ. ಗೊತ್ತಿಲ್ಲದೆ ಯುದ್ಧ ಮಾಡಿ ಗಡಿಬಿಡಿಯಲ್ಲಿ ಪ್ರಾಣ ಹೋಗಿದ್ದಲ್ಲ. ಯುದ್ಧಕ್ಕಿಂತ ಮೊದಲು ಅವನ ಪ್ರತಿಜ್ಞೆಯೇ ಹಾಗಿದೆ. *"ಅವಶ್ಯಂತು ಮಯಾ ಕಾರ್ಯಂ ಪ್ರಿಯಂ ತಸ್ಯ ಮಹಾತ್ಮನಃ| ಜೀವಿತೇನಾsಪಿ ರಾಮಸ್ಯ ನಹಿ ಮೇ ಜೀವಮಾನಸ್ಯ"*. ಜೀವವನ್ನು ಕೊಟ್ಟಾದರೂ ಮಹಾತ್ಮನಾದ ರಾಮನ ಕಾರ್ಯವನ್ನು ಮಾಡಬೇಕು. ಹಾಗೆಯೇ ರಾವಣನಿಗೆ ಅವನು ಹೇಳಿದ್ದು "ನಾನು ಬದುಕಿರುವಾಗ ಸೀತೆಯನ್ನು ನೀನು ಕದ್ದೊಯ್ಯಲಾರೆ". ಎನ್ನುವಾಗ ಜಟಾಯುವಿಗೆ ತನ್ನ ಮರಣದ ಕುರಿತು ಗೊತ್ತು. ಹಾಗಾಗಿ ಅವನು ಮಾಡಿದ್ದು ಆತ್ಮಾರ್ಪಣೆ. ಇವೆಲ್ಲಾ ಭಕ್ತಿಯ ಪರಾಕಾಷ್ಠೆಗಳು. ಸಾಕ್ಷಾತ್ ಪರಮಾತ್ಮನೇ ಜಟಾಯುವನ್ನು ತನ್ನ ಮಡಿಲಿನಲ್ಲಿ ಮಲಗಿಸಿಕೊಂಡು ಅವನ ಪ್ರಾಣ ಹೋಗುವಂತಹದ್ದು. ಅಂತಹ ಮರಣ ದುರ್ಲಭದಲ್ಲಿ ದುರ್ಲಭ. ಅಂತಹ ಮುಕ್ತಿ ಜಟಾಯುವಿಗೆ ಪ್ರಾಪ್ತವಾಯಿತು.
ಹಾಗಾಗಿ ಈ ಎತ್ತರದ ತ್ಯಾಗಕ್ಕೆ ದೇವತೆಗಳು ಮುಂದಾಗುತ್ತಿದ್ದಾರೆ ಇಂದ್ರನ ನೇತೃತ್ವದಲ್ಲಿ. ದೇವತೆಗಳನ್ನು ನಾವು ಪೂಜೆ ಮಾಡುತ್ತೇವಲ್ಲ ಅದು ಸುಮ್ಮನೆ ಬಂದಿದ್ದಲ್ಲ. ಅದರ ಹಿಂದೆ ಈ ತರದ ಎಷ್ಟೋ ಚರಿತ್ರೆಗಳಿವೆ, ಎಷ್ಟೋ ತ್ಯಾಗಗಳು, ತಪಸ್ಸುಗಳು ಇದ್ದಾವೆ. ಅವರು ಅನುಭವಿಸಿರುವಂತಹ ಕಷ್ಟಗಳು, ವೇದನೆಗಳು ಇದ್ದಾವೆ. ದೇವತೆಗಳೆಲ್ಲರೂ ಒಪ್ಪಿದರಂತೆ. ಅದು ಸುಲಭವಲ್ಲ. ಪ್ರಾಣಕ್ಕಾಗಿ ಓಡುತ್ತಿರುವಂತಹ ದೇವತೆಗಳು ಈಗ ಪ್ರಾಣ ಹೋಮಕ್ಕೆ ಸಿದ್ಧರಾಗಿದ್ದಾರೆ. ಅದೂ ಸ್ವಸಂತೋಷದಿಂದ ಮಾಡುತ್ತಿರುವಂಥದ್ದು. ಇದು ಹೇಗೆ ಸಾಧ್ಯವಾಯಿತೆಂದರೆ ನಾಯಕನ ಪ್ರೇರಕವಾಣಿ. ಅವರೊಳಗಿನ ಆ ಕಿಚ್ಚನ್ನು ಉದ್ದೀಪನಗೊಳಿಸಿದ ಇಂದ್ರನ ವಾಣಿ. ಅವರೊಳಗಿನ ಭಕ್ತಿಯನ್ನು ಜಾಗೃತ ಮಾಡಿದ ಇಂದ್ರನ ವಾಣಿಯೇ ಕಾರಣ ಅದಕ್ಕೆ. ಮಂತ್ರಪೂರ್ವಕವಾಗಿ ವಿಧಿವತ್ತಾಗಿ ತಮ್ಮ ದೇಹದ ಭಾಗಗಳನ್ನೇ ಕತ್ತರಿಸಿ ದೇವತೆಗಳು ಹೋಮಿಸುತ್ತಿದ್ದಾರೆ. ಅತ್ಯಾಶ್ಚರ್ಯಕರವಾಗಿರುವಂತಹದ್ದು.
ಶಿಬಿ ಚಕ್ರವರ್ತಿಯ ನೆನಪಾಗುತ್ತದೆ. ತನ್ನ ದೇಹಭಾಗವನ್ನೇ ಕತ್ತರಿಸಿ ಕತ್ತರಿಸಿ ತಕ್ಕಡಿಯಲ್ಲಿ ಇಟ್ಟನಂತೆ. ಪಾರಿವಾಳಕ್ಕೂ ಮತ್ತು ಗಿಡುಗಕ್ಕೂ ಸಮಸ್ಯೆ ಬಂದಿದೆ. ಒಂದು ಗಿಡುಗ ಪಾರಿವಾಳವನ್ನು ಕೊಲ್ಲುವುದರಲ್ಲಿದೆ. ಉಳಿಸುವ ಪ್ರಯತ್ನ ಶಿಬಿಯದ್ದು. ಗಿಡುಗ ಹೇಳಿತು, 'ನನ್ನ ಆಹಾರವನ್ನು ಕಿತ್ತುಕೊಳ್ಳುತ್ತಿದ್ದೀಯ ನೀನು, ನಾನು ಬದುಕ ಬೇಡವೇ?' ಅದಕ್ಕೆ ಶಿಬಿ ಹೇಳಿದ, 'ಬೇರೆ ಮಾಂಸವನ್ನು ಕೊಡುತ್ತೇನೆ, ಎಂದ. ಗಿಡುಗ 'ನಿನ್ನ ಮಾಂಸವನ್ನೇ ಪಾರಿವಾಳದ ತೂಕದಷ್ಟು ಕೊಡುತ್ತೀಯಾ?' ಎಂದಾಗ ಶಿಬಿ ತನ್ನ ದೇಹದ ಭಾಗಗಳನ್ನು ಕತ್ತರಿಸಿ ಕತ್ತರಿಸಿ ತಕ್ಕಡಿಯಲ್ಲಿ ಇಡುತ್ತಿದ್ದಾನೆ. ಅವನ ರಾಣಿಯರು, ಮಂತ್ರಿಗಳು ಕಣ್ಣೀರು ಇಡುತ್ತಾ ನೋಡುತ್ತಿದ್ದಾರೆ. ಶಿಬಿಯ ಕಣ್ಣಲ್ಲಿ ನೀರಿಲ್ಲ. ಏನು ಮಾಡಿದರೂ ಕೂಡ ಆ ಪಾರಿವಾಳದ ತೂಕಕ್ಕೆ ಶಿಬಿಯ ಮಾಂಸದ ತೂಕ ಸರಿಯಾಗಲೇ ಇಲ್ಲ. ಪಾರಿವಾಳದ ತಕ್ಕಡಿ ಇದ್ದಲ್ಲೇ ಇತ್ತು. ಕೊನೆಗೆ ಶಿಬಿ ತಾನೇ ಹತ್ತಿ ತಕ್ಕಡಿಯ ಮೇಲೆ ಕುಳಿತುಕೊಳ್ಳುತ್ತಾನೆ. ಆಗ ಅವನಿಗೆ ಧರ್ಮ ಸಾಕ್ಷಾತ್ಕಾರ, ಇಂದ್ರ ಸಾಕ್ಷಾತ್ಕಾರ ಆಗುವಂಥದ್ದು. ಗಿಡುಗ ಮತ್ತು ಪಾರಿವಾಳಗಳು ಮತ್ತಾರೂ ಅಲ್ಲ. ಇಂದ್ರ ಮತ್ತು ಯಮಧರ್ಮರು. ಇಲ್ಲಿಯೂ ಕೂಡ ಅದೇ ಸಂದರ್ಭ. ದೇವತೆಗಳು ಶಿಬಿಯಿಂದ ಯಾವ ಕಾರ್ಯವನ್ನು ಮಾಡಿಸಿದರೋ ಅಂತಹ ಕಾರ್ಯವನ್ನು ಅವರು ಮಾಡುತ್ತಿದ್ದಾರೆ.
ಹೀಗೆಯೇ ಅವರು ಹೋಮಿಸುತ್ತಾ ಹೋಮಿಸುತ್ತಾ ಅವರ ದೇಹದಲ್ಲಿ ಹೋಮಿಸುವುದಕ್ಕೆ ಏನೂ ಉಳಿದಿಲ್ಲವಂತೆ. ಆಗ ಅವರು ಶಿಬಿ ಮಾಡಿದ ಕಾರ್ಯವನ್ನೇ ಮಾಡುತ್ತಾರೆ. *"ಹೋತುಮಿಚ್ಛತ್ಸು ದೇವೇಷು ಕಲೇವರಮಶೇಷತಃ"*. ತಮ್ಮನ್ನೇ ಹೋಮಕ್ಕೆ ಸಮರ್ಪಿಸುವುದಕ್ಕೆ ಮುಂದಾಗುತ್ತಾರೆ. *"ಪರಮಂ ತೇಜಸ್ಪುಂಜಂ ಅನೂಪಮಮ್"*, ಆಗ ಯೋಜನ ವಿಸ್ತಾರವಾದ ಆ ಯಾಗಾಗ್ನಿಯ ಮಧ್ಯದಿಂದ ಅದ್ಭುತವಾಗಿ ಇರುವಂತಹ ಒಂದು ಪ್ರಭೆ, ಅನುಪಮವಾದ ಪ್ರಭೆ, ಅನುಪಮ ಅಂದರೆ ಅದಕ್ಕೆ ಹೋಲಿಕೆ ಇಲ್ಲ ಎಂದು ಅರ್ಥ. ಈ ದೇವತೆಗಳೆಲ್ಲ ತೇಜೋರೂಪರೆ. ಆದರೆ ಈ ಬಗೆಯ ತೇಜಸ್ಸನ್ನು ಅವರು ಕಂಡಿರಲಿಲ್ಲ. ಅಗ್ನಿ ಎಂದರೇ ತೇಜಸ್ಸು. ಯೋಜನ ವಿಸ್ತಾರವಾದ ಕುಂಡ ಅಂದರೆ ಒಂದು ಊರಿನಷ್ಟು ದೊಡ್ಡದಾದ ಕುಂಡ. ಅದರಲ್ಲಿ ಪ್ರಜ್ವಲಿಸಿ ಉರಿಯುತ್ತ ಇರುವಂತಹ ಯಜ್ಞೇಶ್ವರ. ಆ ಯಜ್ಞೇಶ್ವರನೇ ಮಂಕಾಗುವಂತಹ ಒಂದು ಪ್ರಭೆ ಪ್ರಕಟವಾಯಿತು. ಆ ತೇಜಸ್ಸು ಹೇಗಿತ್ತು ಎಂಬುದಕ್ಕೆ ತುಂಬಾ ಆಶ್ಚರ್ಯಕರವಾದ ವರ್ಣನೆಯಿದೆ. *"ಕೋಟಿಸೂರ್ಯ ಪ್ರತೀಕಾಶಂ ಚಂದ್ರಕೋಟಿ ಸುಶೀತಲಮ್"*. ಏಕಕಾಲದಲ್ಲಿ ಒಂದು ಕೋಟಿ ಸೂರ್ಯರು ಉದಯಿಸಿದಂತೆ. ಆದರೆ ಕೋಟಿ ಚಂದ್ರರ ತಂಪು ಪಕ್ಕದಲ್ಲಿ. ಈ ಪರಮಜ್ಯೋತಿಯನ್ನು, ನಮ್ಮ ಒಳಗೆ ಬೆಳಗುವ ಪರತತ್ವವನ್ನು ಕಂಡ ಯೋಗಿಗಳು ಇದೇ ಬಗೆಯಲ್ಲಿ ವರ್ಣನೆ ಮಾಡುವಂಥದ್ದು. ಅದು ಕೋಟಿ ಸೂರ್ಯರ ಪ್ರಭೆಯದ್ದು. ಆದರೆ ಸುಡುವಂತಹದ್ದಲ್ಲ, ಬೇಯಿಸುವ ಬೇಗೆಯಲ್ಲ ಅದು. ಅದು ತಂಪಾಗಿದೆ. ಆಕಾರವಿಲ್ಲ, ಬರೀ ಬೆಳಕು ಮಾತ್ರ. ಅದ್ಭುತವಾದ, ಅತಿ ವಿಸ್ತಾರವಾದ, ಅನಂತವೆನ್ನಿಸುವ ಬೆಳಕು. ಆ ಬೆಳಕಿನ ಮಧ್ಯದಲ್ಲಿ ಒಂದು ಚಕ್ರ. *"ಚಕ್ರಾಕಾರಂ ತನ್ಮಧ್ಯೆ ಸಮುದಭೂತ್ ಚಕ್ರಾಕರಮನುತ್ತಮಮ್"*, ಆ ಚಕ್ರದ ಮಧ್ಯದಲ್ಲಿ ಬಾಲ ಸೂರ್ಯನ ಪ್ರಭೆಯಲ್ಲಿ ಮಹಾದೇವಿ ಪರಾಶಕ್ತಿ ಪ್ರಕಟವಾಗುತ್ತಾಳೆ. ಆಕೆಯ ವರ್ಣನೆ ಇದೆ. *"ಅರುಣಾಂ ಅತಿಶಯ ಕರುಣಾಂ"* , ಉದಯ ಸೂರ್ಯನ ಪ್ರಭೆ ಆಕೆಯದ್ದು. ಅರುಣ ವರ್ಣ ಆಕೆಯದ್ದು. *"ಬ್ರಹ್ಮವಿಷ್ಣುಶಿವಾತ್ಮಿಕಾಂ ಜಗದುಜ್ಜೀವನಾಕಾರಾಮ್"*. ಬ್ರಹ್ಮ, ವಿಷ್ಣು, ಮಹೇಶ್ವರರ ಚೈತನ್ಯಗಳು ಅಲ್ಲಿ ಸಮಾವೇಶಗೊಂಡಿವೆ. ಸೃಷ್ಟಿಶಕ್ತಿ, ಸ್ಥಿತಿಶಕ್ತಿ, ಲಯಶಕ್ತಿಗಳೆಲ್ಲಾ ಅವಳೊಳಗೆ ಸೇರಿಕೊಂಡಿದ್ದಾವೆ. ಜಗತ್ತಿಗೆ ಜೀವ, ಜೀವನಗಳನ್ನು ನೀಡುವ ಮಂಗಳಾಕಾರದಂತೆ. ಅವಳ ದರ್ಶನವಾದರೆ ಸಾಕು. ಜಗತ್ತು ಬಾಳುತ್ತದೆ, ಜಗತ್ತು ಬೆಳೆಯುತ್ತದೆ, ಜಗತ್ತು ಬೆಳಗುತ್ತದೆ. ಜೀವಗಳ ಜೀವನ ಚಿಗುರುತ್ತದೆ. *"ದಾಡಿಮೀ ಕುಸುಮಾಂಬರಾಂ ಜಪಾಕುಸುಮ ಸಂಕಾಶಾಂ"*, ದಾಸವಾಳ ಹೂವಿನ ಕಾಂತಿಯಂತೆ ಆಕೆಯದ್ದು, ಕೆಂಪಾದ ಬಣ್ಣ. ಆಕೆ ಉಟ್ಟ ಸೀರೆಯು ದಾಳಿಂಬೆ ಹೂವಿನ ಬಣ್ಣವಂತೆ. ಸರ್ವಾಭರಣ ಭೂಷಿತೆ. ಒಂದು ಆಭರಣ ಇಲ್ಲ ಎಂದು ಇಲ್ಲ. ಆಭರಣಗಳಿಂದ ದೇವಿಗೆ ಶೋಭೆಯಲ್ಲ. ದೇವಿಯಿಂದ ಆಭರಣಗಳಿಗೆ ಶೋಭೆ ಬಂದಿದೆ. "ದಶರಥನ ಆಸ್ಥಾನದಲ್ಲಿ ರಾಮ ಯುವರಾಜನಾಗುವ ಸಂದರ್ಭದಲ್ಲಿ ರತ್ನಪೀಠಕ್ಕೆ ಬಂದು ಮಂಡಿಸಿದಾಗ ಆ ಪೀಠಕ್ಕೆ ಶೋಭೆ ಬಂತಂತೆ. ಮೇರುವಿನ ಮೇಲೆ ಸೂರ್ಯ ಉದಯವಾದರೆ, ಮೇರುವಿನಿಂದ ಸೂರ್ಯನಿಗೆ ಶೋಭೆಯೋ ಅಥವಾ ಸೂರ್ಯನಿಂದ ಮೇರುವಿಗೆ ಶೋಭೆಯೋ? ಹಾಗೆಯೇ ಸೂರ್ಯನಿಂದ ಮೇರು ಶೋಭಿಸಿದಂತೆ ಆ ಸಭೆ ಶೋಭಿಸಿತು". ನಾಲ್ಕು ಭುಜಗಳು ದೇವಿಗೆ. ಮೇಲೆ ಎರಡು, ಕೆಳಗೆ ಎರಡು. ಮೇಲಿನೆರಡು ಭುಜಗಳಲ್ಲಿ ಪಾಶ ಮತ್ತು ಅಂಕುಶ. ಕೆಳಗಿನ ಒಂದು ಕೈಯಲ್ಲಿ ಕಬ್ಬಿನ ಬಿಲ್ಲು, ಇನ್ನೊಂದು ಕೈಯಲ್ಲಿ ಐದು ಹೂವುಗಳ ಬಾಣಗಳು. ಕುಸುಮಗಳ ಪಂಚಬಾಣಗಳು. *ಪಾಶಾಂಕುಶೇಕ್ಷುಕೋದಂಡ ಪಂಚಬಾಣ ಲಸತ್ಕರಾಂ*
ಹಾಗೆ ನಾಲ್ಕು ಕೈಗಳಿಂದ, ಲಲಿತಾಸಹಸ್ರನಾಮ ಹೇಳುವಂತೆ,
*ರಾಗಸ್ವರೂಪಪಾಷಾಢ್ಯಾ ಕ್ರೋಧಾಕಾರಾಂಕುಶೋಜ್ವಲಾ ಮನೋರೂಪೇಕ್ಷು ಕೋದಂಡಾ ಪಂಚತನ್ಮಾತ್ರಸಾಯಕಾ*
ಕೈಯಲ್ಲಿರುವ ಪಾಶ ಏನು ಅಂದರೆ ರಾಗವೇ ಪಾಶ. ರಾಗ, ಮೋಹದ ಮೂಲಕವಾಗಿ ಬಂಧಿಸುವಂಥದ್ದು. ಕ್ರೋಧವೇ ಅಂಕುಶವಾಯಿತು. ಮನಸ್ತತ್ವವೇ ಕಬ್ಬಿನ ಬಿಲ್ಲಾಯಿತು, ಪಂಚತನ್ಮಾತ್ರಗಳು, ಅಂದರೆ ಪಂಚಭೂತಗಳ ಸೂಕ್ಷ್ಮರೂಪ, ಆಕೆಯ ಬಾಣವಾಗಿದ್ದವು. ಸೃಷ್ಟಿಯೇ ಅವಳ ಆಯುಧವಾಗಿದ್ದವು.
ಆಕೆಯನ್ನು ತ್ರಿಪುರ ಸುಂದರಿ ಎಂದು ಕರೆಯುತ್ತಾರೆ. ಎಷ್ಟು ಸುಂದರವಾಗಿದ್ದಳು ಎಂದರೆ, ಮಾಂಗಲ್ಯಯುಕ್ತವಾಗಿದ್ದಳು. ಇದು ಮಾದಕವಾದ ಸೌಂದರ್ಯವಲ್ಲ ಮಂಗಳಕರವಾದ ಸೌಂದರ್ಯ. ಅದು ಹೇಗಿತ್ತು ಎಂದರೆ
*ಸೌಂದರ್ಯ ಸಾರ ಸೀಮಾನ್ತಾಮ್* ಸೌಂದರ್ಯದ ಸಾರದ ಚರಮ ಸೀಮೆ. ಅದರ ಆಚೆ ಇನ್ನೇನು ಇಲ್ಲ ತುತ್ತತುದಿ. ಇನ್ನೂ ಚೆಂದ ಅಂತ ಇರಲು ಸಾಧ್ಯವಿಲ್ಲ. ಎಲ್ಲಾ ಚಂದಗಳ ಮೂಲ ಭಗವತಿ ತ್ರಿಪುರ ಸುಂದರಿ. ಸೌಂದರ್ಯ ಲಹರಿ ಎನ್ನುವುದು ತಾಯಿಯ ಸೌಂದರ್ಯವೇ ಲಹರಿಯಾಗಿ ಪ್ರಪಂಚದ ಕಡೆಗೆ ಹರಿಯುತ್ತಿರುವುದು. ಅಲ್ಲಿಂದಲೇ ಆನಂದವನ್ನು ಕಾಣುತ್ತಿರುವಂತಹದ್ದು. ಜಗತ್ತಿನ ಎಲ್ಲಾ ಸೌಂದರ್ಯ ಎನ್ನುವುದು ಭಗವತಿ ತ್ರಿಪುರಸುಂದರಿಯ ಭಿಕ್ಷೆ.
*ಸೌಂದರ್ಯ ಸಾರಸೀಮಾನ್ತಾಂ ಆನಂದರಸಸಾಗರಾಮ್*
ಸಮುದ್ರದಷ್ಟು ಆನಂದ ಭಗವತಿಯಲ್ಲಿ ತುಂಬಿದೆ. ನಾವು ಊಹೆ ಮಾಡಲಾಗದಷ್ಟು ಆನಂದವನ್ನು ತನ್ನೊಳಗೆ ಇಟ್ಟುಕೊಂಡಿದ್ದಾಳೆ. ಶೃಂಗಾರವೆಂಬ ರಸಕ್ಕೆ ಜಗತ್ತಿನ ಒಂದೇ ಒಂದು ಆಶ್ರಯ ಎಂದರೆ ತಾಯಿ ತ್ರಿಪುರ ಸುಂದರಿ. ಹೀಗಿದ್ದಳಂತೆ ತಾಯಿ ರಾಜರಾಜೇಶ್ವರಿ.
ತ್ರಿಪುರ ಸುಂದರಿಯ ಕಡೆಗಣ್ಣಿನಲ್ಲಿ ಕರುಣೆಯ ಹೊಳೆಯಿತ್ತು. ಆಕೆಯ ನೋಟ ಬೆಳದಿಂಗಳ ಮಳೆಯಂತೆ. ಲಲಿತೋಪಾಖ್ಯಾನ ತುಂಬಾ ಕಾವ್ಯಮಯವಾಗಿದೆ.
*ಕೃಪಾ ತರಂಗಿತಾಪಾಂಗನಯನಾಲೋಕಕೌಮುದೀ*
ಕೌಮುದಿ ಎಂದರೆ ಬೆಳದಿಂಗಳು. ಆಕೆ ಯಾರನ್ನಾದರೂ ನೋಡಿದರೆ ಅವರ ಮೇಲೆ ಬೆಳದಿಂಗಳು ಚೆಲ್ಲಿದಂತೆ ಆಗುತ್ತಿತ್ತು. ಆಕೆಯ ಕಣ್ಣಿನ ತುದಿಯಲ್ಲಿ ಕರುಣರಸವು ಹರಿಯುತ್ತಿತ್ತು. ಆಕೆಯ ಕಾರುಣ್ಯವೇ ಹಾಲಿನಂತೆ ಅಮೃತ ಸದೃಶವಾದ ರಸದಂತೆ ಹರಿದು ಬರುತ್ತಿತ್ತು. ಅಂತಹ ಕಣ್ಣೋಟ ಅವಳದ್ದು. ಆ ತಾಯಿಗೆ ದೇವತೆಗಳು ಅಮಲೇರಿದಂತೆ, ಹುಚ್ಚು ಹಿಡಿದಂತೆ ಮರಳಿ ಮರಳಿ ಪ್ರಣಾಮವನ್ನು ಸಲ್ಲಿಸುತ್ತಾರೆ.
ದೇವತೆಗಳಿಗೆ ಕಷ್ಟ ಬಂದಾಗ ಎಷ್ಟು ದೊಡ್ಡದಾಗಿ ಬರುತ್ತದೆ ಎಂದರೆ ಎಪ್ಪತ್ತು ಸಾವಿರದ ಎಂಟುನೂರು ವರ್ಷಗಳ ಕಾಲ ಕಷ್ಟಪಟ್ಟಿದ್ದಾರೆ. ದೇವಿಯನ್ನು ನೋಡಿ ಅವರಲ್ಲಿ ಆನಂದದ ಸಂಚಾರ ಉಂಟಾದಂತೆ ಆಗಿದೆ. ದೇವರಾಗುವುದು ಅಥವಾ ಗುರುಗಳಾಗುವುದು ಸುಲಭವಲ್ಲ, ತುಂಬಾ ಕಷ್ಟ ಉಂಟು, ಕೆಲಸ ಉಂಟು.
ಹಾಗೆ ದೇವತೆಗಳು ದೇವಿಗೆ ಮತ್ತೆ ಮತ್ತೆ ನಮಸ್ಕಾರ ಮಾಡುತ್ತಿರುವಾಗ ದೇವಿಯು ಕಣ್ತೆರೆದು ದೇವತೆಗಳನ್ನು ಕರುಣಾ ಭಾವದಿಂದ ನೋಡುತ್ತಾಳೆ. ಆಗ ದೇವತೆಗಳಲ್ಲಿರುವ ಭಂಡಾಸುರನ ಭಯ ದೂರವಾಗಿ ಪವಾಡ ಉಂಟಾಯಿತು. ಅಮ್ಮ ಹತ್ತಿರವಿದ್ದಾಗ ಮಗುವಿನ ಭೀತಿ ಹೇಗೆ ದೂರ ಇರುತ್ತದೆಯೋ ಹಾಗೆ ಭಾಸವಾಯಿತು. ಇದ್ದಕ್ಕಿದ್ದಂತೆ ದೇಹದ ಗಾಯಗಳೆಲ್ಲ ಮಾಯವಾದವು. ಮೊದಲು ಮನಸ್ಸಿನ ಗಾಯ ಮಾಯವಾಯಿತು, ನಂತರ ದೇಹದ ಗಾಯಗಳು ಮಾಯವಾದವು. ಅಂಗಾಂಗಗಳು ಮರಳಿ ಪರಿಪೂರ್ಣವಾದವು. ಮೊದಲಿಗಿಂತ ಮಿಗಿಲಾದ ದೇಹದಾರ್ಢ್ಯವು ಒದಗಿತು. ಮಹಾಬಲಶಾಲಿಗಳಾದರು. ದೇಹಕ್ಕೆ ವಜ್ರ ಸದೃಶವಾಗಿರುವ ಕಾಠಿಣ್ಯವು ಬಂತು. ನಾವು ದೇವರಿಗೆ ಏನನ್ನು ಸಮರ್ಪಿಸುತ್ತೇವೆಯೋ ಅದು ಇಮ್ಮಡಿ ನೂರ್ಮಡಿಯಾಗಿ ನಮಗೆ ಮರಳಿ ಬರುತ್ತದೆ ಎನ್ನುವುದಕ್ಕೆ ಇದೇ ಸಾಕ್ಷಿ.
ರಾಮಾಯಣದ ಯುದ್ಧದ ಬಳಿಕ ದೇವತೆಗಳು ಪ್ರತ್ಯಕ್ಷರಾಗಿ ರಾಮನಲ್ಲಿ ಬೇಕಾದ ವರವನ್ನು ಕೇಳಿಕೋ ಎಂದು ಕೇಳಿದಾಗ "ನನಗಾಗಿ ಹೋರಾಡಿ ಪ್ರಾಣ ಬಿಟ್ಟ ಕಪಿಗಳೆಲ್ಲ ಮತ್ತೆ ಬದುಕಬೇಕು, ಯಾವ ಯಾವ ಕಪಿಗಳ ಅಂಗ ಭಂಗವಾಗಿದೆ ಅಂದರೆ ಕಾಲು, ಬಾಲ ಕತ್ತರಿಸಿದೆ, ಕೈ ತುಂಡಾಗಿದೆ, ಅದೆಲ್ಲವೂ ಪರಿಪೂರ್ಣವಾಗಬೇಕು. ಅಮೃತದ ಮಳೆಯನ್ನು ಸುರಿಸಿ ನನ್ನ ಕಪಿಗಳ ಮೇಲೆ" ಎಂದು ಕೇಳುತ್ತಾನೆ. ಹಾಗಾಗಿ ರಾಮಾಯಣದಲ್ಲಿ ರಾಮನ ಪಕ್ಷದ ಒಬ್ಬನೇ ಒಬ್ಬ ಸೈನಿಕನೂ ಸಾಯಲಿಲ್ಲ ರಾವಣನ ಒಂದೇ ಒಂದು ಸೈನಿಕನೂ ಉಳಿಯಲಿಲ್ಲ.
ದೇವತೆಗಳು ದೇವಿಯ ಸ್ತೋತ್ರವನ್ನು ಮಾಡುತ್ತಾರೆ. ದೇವಿ ಎಲ್ಲವನ್ನು ಕೊಡುವವಳು. ಅವಳು ಕೊಡಲಾರದ್ದು ಎನ್ನುವುದು ಯಾವುದೂ ಇಲ್ಲ. ಅಂತಹ ದೇವಿಯನ್ನು ಆರಾಧನೆ ಮಾಡುತ್ತಾರೆ.
ಲಲಿತಾ ಸಹಸ್ರನಾಮ ಹೇಳುವ ಹಾಗೆ *ದೇವರ್ಷಿಗಣಸಂಘಾತ ಸ್ತೂಯಮಾನಾತ್ಮ ವೈಭವಾಂ* ಈ ಸ್ತೋತ್ರ ತುಂಬಾ ವಿಸ್ತಾರವಾಗಿದೆ. ಅದರ ನಮಃ ಸಹಸ್ರಶೀರ್ಷಾಯೈ ಅಮ್ಮ ನಿನಗೆ ಸಾವಿರ ಮುಖಗಳು, ಸಹಸ್ರ ಕಣ್ಣುಗಳು, ಸಹಸ್ರ ಪಾದಗಳು, ಸಾವಿರ ಹಸ್ತಗಳು. ನೀನು ಅಣುವಿನಲ್ಲಿ ಅಣು, ಮಹತ್ತಿನಲ್ಲಿ ಮಹತ್ತು, ಶ್ರೇಷ್ಠರಲ್ಲಿ ಇನ್ನೂ ಶ್ರೇಷ್ಠ, ಎಲ್ಲಾ ತೇಜಸ್ಸುಗಳಿಗೆ ಬೆಳಕನ್ನು ಕೊಡುವುದೇ ನೀನು, ಅತಲ ನಿನ್ನ ಪಾದ, ವಿತಲ ನಿನ್ನ ಮೊಣಕಾಲು, ರಸಾತಲ ನಿನ್ನ ಕಟಿ, ಭೂಮಿ ನಿನ್ನ ಹೊಟ್ಟೆ, ಭೂರ್ಲೋಕ ನಿನ್ನ ಹೃದಯ, ಸ್ವರ್ಲೋಕ ನಿನ್ನ ಮುಖ, ಸೂರ್ಯ ಚಂದ್ರ ಅಗ್ನಿಗಳು ನಿನ್ನ ಕಣ್ಣುಗಳು, ಬಾಹುಗಳು ದಿಕ್ಕು, ಈ ಗಾಳಿಯೆಲ್ಲ ನಿನ್ನ ಉಸಿರು, ನೀನಾಡುವ ಮಾತುಗಳೆಲ್ಲ ಶ್ರುತಿ ವೇದಗಳು, ಸೃಷ್ಟಿ ನಿನಗೆ ಆಟ, ನಿನ್ನ ಸಖ ಚಿನ್ಮಯ, ಪರಶಿವ. ಆನಂದವೇ ನಿನ್ನ ಆಹಾರ, ಸಜ್ಜನರ ಹೃದಯ ನಿನ್ನ ವಾಸಸ್ಥಾನ. ಕಾಣುವ, ಕಾಣದ ಪ್ರಪಂಚವೆಲ್ಲ ನಿನ್ನ ಮನೆ. ಗಗನ ನಿನ್ನ ತಲೆ ಕೂದಲು, ಆಕಾಶದಲ್ಲಿ ಬೆಳಗುತಾರೆಗಳು ನೀ ಮುಡಿದ ಹೂವುಗಳು.
ನಾಲ್ಕು ಬಾಹುಗಳು ಯಾವುವು ಎಂದರೆ ಧರ್ಮ, ಅರ್ಥ, ಕಾಮ, ಮೋಕ್ಷ. ಈ ನಾಲ್ಕು ಬಾಹುಗಳಿಗೆ ನಾಲ್ಕು ಆಯುಧಗಳು ಅದು ಯಾವುದೆಂದರೆ ಅಧರ್ಮ, ಅಜ್ಞಾನ, ಅವೈರಾಗ್ಯ, ಅನೈಶ್ವರ್ಯ. ಯಾರು ತಪ್ಪು ಮಾಡುತ್ತಾರೋ ದೇವಿ ಅವರನ್ನು ಈ ದಂಡಗಳಿಂದ ಶಿಕ್ಷಿಸುತ್ತಾಳೆ. ಯಮ ನಿಯಮಗಳು ನಿನ್ನ ಕೈಕಾಲುಗಳ ಬೆರಳುಗಳು, ಎಲ್ಲಾ ಪ್ರಾಣಾಯಾಮಗಳು ನಿನ್ನ ನಾಸಿಕ. ಸರಸ್ವತಿ ನಾಲಿಗೆ. ಇಂದ್ರಿಯಗಳೇ ಪ್ರತ್ಯಾಹಾರ. ನಿನ್ನ ಮನಸ್ಸೇ ಧ್ಯಾನ. ಹೃದಯವೇ ಸಮಾಧಿ, ಮರಗಿಡಗಳೆಲ್ಲ ನಿನ್ನ ರೋಮಗಳು, ಸುಪ್ರಭಾತವೇ ನಿನ್ನ ಬಟ್ಟೆ. ಭೂತ, ಭವ್ಯ, ಭವಿಷ್ಯತ್ತು ನಿನ್ನ ಶರೀರ, ಅದು ಶಾಶ್ವತ. ಎಲ್ಲರ ಹೃದಯದಲ್ಲಿ ಇದ್ದೀಯೆ, ಆದರೆ ಕಣ್ಣಿಗೆ ಕಾಣಿಸುವುದಿಲ್ಲ ಅಂತಹವಳು ಆ ದೇವಿ. ನಿನ್ನ ಆಜ್ಞೆಯಂತೆ ಸೂರ್ಯ, ಚಂದ್ರ, ಅಗ್ನಿ, ವಾಯು ಇವೆಲ್ಲವೂ ಕೆಲಸ ಮಾಡುತ್ತವೆ. ಪಂಚಭೂತಗಳು ನಿನ್ನ ಆಜ್ಞೆಯನ್ನು ಪಾಲನೆ ಮಾಡುತ್ತದೆ. ಹೇ ವಿಶ್ವೇಶ್ವರಿಯೇ ವಿಶ್ವವಂದಿತೆಯೇ ಪ್ರಸೀದಾಂ ವಿಶ್ವರೂಪಿಣಿಯೇ ಮಾಯಾಮಣಿಯೇ ಮಂತ್ರವಿಗ್ರಹಯೇ ಪ್ರಸನ್ನಳಾಗು ಎಂದು ದೇವತೆಗಳು ಪರಿಪರಿಯಾಗಿ ಸ್ತುತಿಸಿದಾಗ ಪ್ರಸನ್ನಳಾದ ದೇವಿ ಇಂದ್ರನನ್ನು ಅವಲೋಕಿಸುತ್ತಾ, ಬೇಕಾದ ವರವನ್ನು ಕೇಳು ಎಂಬುದಾಗಿ ಆಜ್ಞೆ ಮಾಡುತ್ತಾಳೆ.
ವರ ಕೇಳುವುದು ಎನ್ನುವುದು ತಪಸ್ಸು ಮಾಡಿದ್ದಕ್ಕಿಂತ ಕಷ್ಟದ ಕೆಲಸ. ಕುಂಭಕರ್ಣ ವರ ಕೇಳಿದ ಹಾಗೆ ಆಗಿಬಿಡಬಹುದು. ಒಳ್ಳೆ ನಿದ್ದೆ ಕೊಡು ಎಂದು. ದೊಡ್ಡದನ್ನು ಕೊಡಬೇಕು ಎಂದು ದೇವರು ಬಂದಿದ್ದರೆ ನಾವು ಚಿಕ್ಕದನ್ನು ಕೇಳಿದರೆ? ಚಿಕ್ಕ ಮಕ್ಕಳ ಎದುರು ಒಂದು ಕೋಟಿ ರೂಪಾಯಿಯ ಒಂದು ಚೆಕ್ ಮತ್ತು ಚಾಕೋಲೇಟ್ ಹಿಡಿದು ಕೇಳಿದರೆ ಆ ಮಗು ಚಾಕೋಲೇಟ್ ಅನ್ನು ತೆಗೆದುಕೊಳ್ಳುತ್ತದೆ. ಅದು ಜಾಣ ಮಗು ಆದರೆ, ನನಗೆ ಯಾವುದು ಒಳ್ಳೆಯದೋ, ಯಾವುದು ಶ್ರೇಯಸ್ಕರವೋ ಅದನ್ನು ಕೊಡು ಎಂದು ಕೇಳಿದರೆ ಅದು ಜಾಣತನ. ಅದರ ಬದಲು ಇದನ್ನೇ ಕೊಡು ಎಂದು ಕೇಳುತ್ತೇವೆ ಎಂದರೆ ನಾವು ಮೂರ್ಖರು ಎಂದೇ ಅರ್ಥ. ಹಾಗಾಗಿ ನೀನೇ ನೋಡು ಎಂದು ಕೇಳಿದರೆ ಸೂಕ್ತ.
ಇಂದ್ರ ಯಾವ ವರವನ್ನು ಕೇಳಿದ ಎಂಬುದನ್ನು ಮುಂದಿನ ಪ್ರವಚನದಲ್ಲಿ ಕೇಳೋಣ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ