ನವರಾತ್ರಿಯ ಪರ್ವಕಾಲದಲ್ಲಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಅನುಗ್ರಹಿಸುತ್ತಿರುವ "ಲಲಿತೋಪಾಖ್ಯಾನ" ಪ್ರವಚನದ ಅಕ್ಷರರೂಪ.
“ದಕ್ಷ ಪ್ರಜಾಪತಿ ಸುತಾ ವೇಷಾಢ್ಯಾಯೈ ನಮೋನಮಃ”
ದಕ್ಷನಿಗೆ ದೇವಿ ಮಗಳಾಗಿ ಹುಟ್ಟಬೇಕಾದರೆ ಅದರ ಹಿಂದೆ ಒಂದು ತಪಸ್ಸಿದೆ, ಉಗ್ರವಾದ ತಪಸ್ಸನ್ನು ಮಾಡಿ ದಕ್ಷ ಸತಿಯನ್ನು ಮಗಳಾಗಿ ಪಡೆದುಕೊಂಡಿರುವಂತದ್ದು. ಪ್ರತ್ಯಕ್ಷವಾಗಿ ದೇವಿಯನ್ನು ಕಾಣಬೇಕು ಮತ್ತು ಆಕೆಯನ್ನು ತನ್ನ ಮಗಳಾಗಿ ಪಡೆದುಕೊಳ್ಳಬೇಕು ಎನ್ನುವ ಕಾರಣಕ್ಕೆ ಮೂರು ಸಹಸ್ರ ದಿವ್ಯ ವರ್ಷಗಳ ಕಾಲ ತಪಸ್ಸನ್ನು ಮಾಡುತ್ತಾನೆ.
ದುರ್ಗಾ ಧ್ಯಾನಸಮಾಸಕ್ತಃ ಚಿರಕಾಲಂ ತಪೋರತಃ||
ಯಮ ನಿಯಮಗಳಿಂದ ಕೂಡಿ ಗಾಢ ತಪಸ್ಸು ಮಾಡುವ ದಕ್ಷನ ಮುಂದೆ ಭಗವತಿ ಪ್ರತ್ಯಕ್ಷವಾಗುತ್ತಾಳೆ. ಸಿಂಹ ವಾಹನವನ್ನು ಏರಿದ ಕಾಳಿ, ನೀಲ ವರ್ಣ ಆದರೆ ಲಕ್ಷಣವಾದ ಸುಂದರವಾದ ಮುಖ, ನಾಲ್ಕು ಹಸ್ತಗಳು, ಒಂದು ಕೈ ವರದ ಹಸ್ತವಾಗಿದ್ದರೆ ಇನ್ನೊಂದು ಅಭಯ, ಒಂದು ಕೈಯಲ್ಲಿ ನೀಲಕಮಲ ಇನ್ನೊಂದು ಕೈಯಲ್ಲಿ ಖಡ್ಗ ಇವೆಲ್ಲವನ್ನು ಧರಿಸಿದ ಮನೋಹರ ರೂಪವನ್ನು ಹೊಂದಿರುವಂತಹ ಕಾಳಿಕೆ ದಕ್ಷನ ಮುಂದೆ ಪ್ರತ್ಯಕ್ಷವಾಗಿ ನಿನಗೇನು ವರ ಬೇಕು ಕೇಳಿಕೋ ಎಂದು ಹೇಳಿದಾಗ ಆತ ಕೇಳಿದ್ದು, “ನನ್ನ ಮಗಳಾಗಿ ಹುಟ್ಟಬೇಕು, ಶಿವನ ಸತಿ ಆಗಬೇಕು”.
ದಕ್ಷನಿಗೆ ಶಿವನ ಮೇಲೆ ತುಂಬಾ ಒಳ್ಳೆಯ ಭಾವನೆ ಇತ್ತು ಆದರೆ ಅವನ ಒಂದೇ ಒಂದು ದುರ್ಗುಣ ಎಂದರೆ ಗರ್ವ, ದುರಹಂಕಾರ. ಎಲ್ಲಾ ದುರ್ಗುಣಗಳು ಇದೊಂದರಲ್ಲೇ ಅಂತರ್ಗತ ಎಂದು ಹೇಳುತ್ತಾರೆ. ಅದು ಬಂದು ಅಡರಿದಾಗ ಎಲ್ಲವೂ ಕೆಟ್ಟು ಹೋಗುತ್ತದೆ.
ಇಲ್ಲಿ ನಮಗೆಲ್ಲರಿಗೂ ಒಂದು ಪಾಠವಿದೆ. ನಮಗೆ ಒಳ್ಳೆಯದಾಗುತ್ತಾ ಹೋದಾಗ ಅಹಂಕಾರ ಬರುತ್ತದೆ, ಒಳಿತಾಗುವುದರಲ್ಲಿರುವ ಒಂದೇ ಒಂದು ಅಪಾಯ ಏನೆಂದರೆ ನಾವು ಮದೋನ್ಮತ್ತರಾಗುತ್ತೇವೆ. “ನಾನು” ಅಂತ ಒಂದು ಬಂದರೆ ಬೇರೆ ಯಾವುದೂ ಉಳಿಯುವುದಿಲ್ಲ. “ನನ್ನದು” ಎನ್ನುವುದು ಹೋಗಿ “ನಿನ್ನದು” ಅಂತ ಬಂದರೆ ದೇವರು ಒಲಿಯುತ್ತಾನೆ. ಹಾಗಾಗಿ ಗೊತ್ತಿಲ್ಲದೆ ಏನಾದರೂ ತಲೆಗೆ ಏರಿತಾ ಎನ್ನುವುದನ್ನು ಪರೀಕ್ಷಿಸಿಕೊಳ್ಳುತ್ತಾ ಇರಬೇಕು. ದುರಹಂಕಾರ ಎನ್ನುವ ಕಾಯಿಲೆ ಬಂದದ್ದು ಗೊತ್ತಾಗುವುದಿಲ್ಲ ಬಂದ ನಂತರ ನಮಗೆ ನಾವು ಸರಿ ಇದ್ದೇವೆ ಎಂದೇ ಅನಿಸುತ್ತಿರುತ್ತದೆ, ಆದರೆ ಬೇರೆಯವರಿಗೆ ಅದು ಸರಿಯಾಗಿ ಗೊತ್ತಾಗುತ್ತದೆ. ಜೀವನದಲ್ಲಿ ಅಪ್ರಿಯವಾದದ್ದನ್ನು ನಮಗೆ ಹೇಳುವಂತಹವರನ್ನು ಇಟ್ಟುಕೊಳ್ಳಬೇಕು, ನಮ್ಮ ದೋಷವನ್ನು ನಮಗೆ ಹೇಳುವಂಥವರು, ನಮ್ಮ ತಪ್ಪುಗಳನ್ನು ತಿದ್ದುವಂತಹವರನ್ನು ಇಟ್ಟುಕೊಳ್ಳಬೇಕು. ನಮ್ಮಲ್ಲಿ ನೂರು ಸದ್ಗುಣಗಳಿದ್ದರೂ ಈ ಗರ್ವ ಪರ್ವತವನ್ನೇರಿ ಕುಳಿತರೆ ಪತನ ನಿಶ್ಚಿತ. ಹಾಗಾಗಿ ನಮ್ಮ ಜೀವನದಲ್ಲಿ ಒಳ್ಳೆಯದಾಗುತ್ತದೆ ಎನ್ನುವ ಸಂದರ್ಭದಲ್ಲಿ ಗರ್ವ ನಮ್ಮ ತಲೆಗೇರಿದೆಯೇ ಎಂದು ಹೇಳಲು ಮಾರ್ಗದರ್ಶಕರು ಬೇಕಾಗುತ್ತಾರೆ.
ಈ ಸಂದರ್ಭದಲ್ಲಿ ದಶರಥನ ಮಾತು ನೆನಪಾಗುತ್ತದೆ. ರಾಮನ ಪಟ್ಟಾಭಿಷೇಕದ ಸಮಯದಲ್ಲಿ ಮುಂದಿನ ಚಕ್ರವರ್ತಿ ನೀನು ಎಂದು ದಶರಥ ರಾಮನಿಗೆ ಹೇಳುವ ಸಂದರ್ಭದಲ್ಲಿ ಮೊದಲು ಹೇಳುವ ಮಾತು "ಭೂಯೋ ವಿನಯಮಾತಿಷ್ಠ" ಇನ್ನಷ್ಟು ವಿನಯ ಸಂಪನ್ನನಾಗು.
ಬಾವಿಯ ಒಳಗೆ ಹೋದ ಕೊಡ ಬಾಗದೇ ಇದ್ದರೆ ನೀರು ತುಂಬಿಸಿಕೊಳ್ಳುವುದು ಹೇಗೆ? ಆಶೀರ್ವಾದ ನಮ್ಮನ್ನು ತುಂಬಬೇಕು ಎಂದರೆ ಬಾಗುವಲ್ಲಿ ಬಾಗುವುದನ್ನು ಕಲಿಯಬೇಕು. ಬಾಗುವಲ್ಲಿ ಬಾಗದೆ ಇದ್ದರೆ ಅಥವಾ ಮಹಾ ಶಕ್ತಿ ನಮ್ಮ ಮುಂದೆ ನಿಂತಾಗ ಬಾಗದೇ ಇದ್ದರೆ ನಾವೇ ಭಗ್ನವಾಗಿ ಹೋಗುವ ಸಂದರ್ಭ ಬರಬಹುದು. ದಕ್ಷನಿಗೆ ಆದಂತೆ ಆಗಬಹುದು. ಒಂದು ವಸ್ತುವನ್ನು ಪಡೆದುಕೊಳ್ಳುವುದು ಎಷ್ಟು ಕಷ್ಟವೋ ಅದನ್ನು ಕಾಪಾಡಿಕೊಳ್ಳುವುದು ಇನ್ನೂ ಕಷ್ಟ. ಗಾಢ ತಪಸ್ಸಿನ ಫಲವಾಗಿ ಜಗದ್ಧಾತ್ರಿಯನ್ನೇ ಮಗಳಾಗಿ ಪಡೆದುಕೊಂಡವನಿಗೆ ಉಳಿಸಿಕೊಳ್ಳಲಾಗಲಿಲ್ಲ, ಅಹಂಕಾರವೇ ಹೆಚ್ಚಾಯಿತು.
ದೇವಿಯಲ್ಲಿ ದಕ್ಷ ವರವನ್ನು ಕೇಳಿದಾಗ ದೇವಿ ಹೇಳಿದ್ದು ಒಂದೇ ಮಾತು “ನಿನ್ನ ಮಗಳಾಗಿ ಹುಟ್ಟುತ್ತೇನೆ ಆದರೆ ಯಾವಾಗ ನೀನು ನನ್ನನ್ನು ಅನಾದರಿಸುತ್ತೀಯೋ ಆ ಕ್ಷಣವೇ ಈ ದೇಹವನ್ನು ತ್ಯಜಿಸುತ್ತೇನೆ, ಆಮೇಲೆ ನನಗೆ ನಿನ್ನಿಂದ ಬಂದ ದೇಹ ಬೇಡ” ಎಂದು ಹೇಳುತ್ತಾಳೆ. ದೊಡ್ಡವರೊಡನೆ ಬಾಂಧವ್ಯಗಳು ಆರಂಭವಾಗುವಾಗ ಅವರು ಜಾಗ್ರತೆಯ ಒಂದು ಮಾತನ್ನು ಹೇಳುತ್ತಾರೆ ಅದನ್ನು ನಾವು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಬೇಕು, ಅವರು ಹಾಕಿದ ಗೆರೆಯನ್ನು ಮೀರಿದರೆ ಭಾಂದವ್ಯಕ್ಕೆ ಕುತ್ತು ಬರುವ ಸಂದರ್ಭವಿರಬಹುದು.
ದೇವಿ ದಕ್ಷನ ಮಗಳಾಗಿ ಹುಟ್ಟಿದಳು, ಶಿವನಿಗಾಗಿ ತಪಸ್ಸು ಮಾಡಿದಳು. ಶಿವನನ್ನು ವರನನ್ನಾಗಿ ಪಡೆಯಲು ದೇವಿ ನಿತ್ಯ ಶಿವಾರ್ಚನೆಯಲ್ಲಿ ನಿರತಳಾದಳು, ಶಿವಧ್ಯಾನದಲ್ಲಿ ಮುಳುಗಿದಳು. ಸತಿಯ ಲಕ್ಷ್ಯವೇ ಹಾಗಿದೆ ಶಿವನನ್ನು ಸೇರಬೇಕು ಎಂದು. ಶಿವನನ್ನು ಸೇರುವ ಸಲುವಾಗಿ ಸತಿ ತಪಸ್ಸು ಮಾಡಿದಾಗ ಬ್ರಹ್ಮ ಮತ್ತು ವಿಷ್ಣು ಶಿವನನ್ನು ಒಲಿಸುತ್ತಾರೆ, ದಕ್ಷನ ಮಗಳು ಸತಿ ನಿನಗಾಗಿ ತಪಸ್ಸು ಮಾಡುತ್ತಿದ್ದಾಳೆ, ಆಕೆಯನ್ನು ಪತ್ನಿಯಾಗಿ ಸ್ವೀಕರಿಸು ಎಂಬುದಾಗಿ ಹೇಳಿದಾಗ ಶಿವ ಒಂದು ಮಾತನ್ನು ಹೇಳುತ್ತಾನೆ. “ನನಗೇನು ಸ್ವಾರ್ಥವಿಲ್ಲ. ಜಗತ್ತಿಗೆ ಒಳಿತಾಗುವುದಾದರೆ ನನ್ನಿಂದ ಏನು ಅಡ್ಡಿಯಿಲ್ಲ. ನಾನು ಸತಿಯನ್ನು ವರಿಸುತ್ತೇನೆ ಆದರೆ ಎಲ್ಲಿಯಾದರೂ ಆಕೆ ನನ್ನ ಮಾತನ್ನು ಮೀರುವುದಾದರೆ, ನನ್ನ ಮಾತಿನಲ್ಲಿ ಆಕೆಗೆ ವಿಶ್ವಾಸ ಕಡಿಮೆಯಾಗುತ್ತದೆ ಅಂತಾದಲ್ಲಿ ಅಲ್ಲಿಂದ ದಾಂಪತ್ಯ ಮುಂದುವರಿಯುವುದಿಲ್ಲ” ಎಂದು ಹೇಳುತ್ತಾನೆ.
ದೊಡ್ಡವರು ಒಂದು ಮಾತನ್ನು ಹೇಳಿದರೆ ಅವರು ಹೇಳಿದ ಮಾತಿಗೆ ಒಂದು ಕಾರಣವಿರುತ್ತದೆ ನಾವು ತುಂಬಾ ಜಾಗರೂಕರಾಗಿರಬೇಕು ಎಂದು ಹೇಳುವುದಕ್ಕೆ ದಕ್ಷ ಮತ್ತು ಸತಿಯರು ಉದಾಹರಣೆಯಾಗಿದ್ದಾರೆ.
'ಗಿರೀಶಬದ್ಧಮಾಂಗಲ್ಯ ಮಂಗಲಾಯೈ ನಮೋನಮಃ||'
ಶಿವ-ಸತಿಯರ ವಿವಾಹ ಏರ್ಪಟ್ಟಿತು. ಸತಿ ಶಿವನನ್ನು ವರಿಸಿ ಮಹಾ ಮಂಗಳಕರಳಾದಳು. ಮಂಗಲವು ಮಂಗಲದೊಟ್ಟಿಗೆ ಸೇರಿ ಲೋಕಮಂಗಲವಾಯಿತು, ಜಗತ್ತಿಗೆ ಮಂಗಲವಾಯಿತು. ದಕ್ಷ ಗೆರೆಯನ್ನು ಮೀರುವಾಗ ಅದಕ್ಕೆ ಕಾರಣ ದುರಹಂಕಾರ, ದರ್ಪ. ದಕ್ಷತೆ ಬಂತು ಅಂತಾದರೆ ದಕ್ಷತೆಯ ಒಟ್ಟಿಗೆ ಗರ್ವವೂ ಬರುತ್ತದೆ ಅದಕ್ಕಾಗಿಯೇ ದಕ್ಷರಾದವರು ತುಂಬಾ ಜಾಗರೂಕರಾಗಿರಬೇಕು. ದೇವರ ಬಾಗಿಲನ್ನು ಜೀವ ತಟ್ಟುವಾಗ ದೇವರು ಯಾರು ಎಂದು ಕೇಳುತ್ತಾನೆ ಆಗ ಜೀವನು ನಾನು ಅಂತ ಹೇಳಿದರೆ ದೇವರು ಬಾಗಿಲನ್ನು ತೆಗೆಯುವುದಿಲ್ಲ, ಮತ್ತಷ್ಟು ಕಾಲ ತಪಸ್ಸು ಮಾಡಿ ದೇವರಲ್ಲಿ ಬಂದಾಗ ಬಾಗಿಲು ತಟ್ಟಿ ದೇವರು ಯಾರು ಅಂತ ಕೇಳಿದಾಗ ನೀನು ಅಂತ ಹೇಳಿದರೆ ದೇವರು ಬಾಗಿಲು ತೆಗೆಯುತ್ತಾನೆ. “ನಿನ್ನ ಒಂದು ಅಂಶ ನಾನು, ನೀನು ಸೂರ್ಯನಾದರೆ ನಾನು ಒಂದು ಕಿರಣ, ನೀನು ಅಗ್ನಿಯಾದರೆ ನಾನೊಂದು ಕಿಡಿ”, ಎಂಬ ಭಾವ ಇರಬೇಕು. ಅದು ವ್ಯತ್ಯಾಸವಾದಾಗ ದಕ್ಷನು ಸತಿಯನ್ನು ಕಳೆದುಕೊಳ್ಳುತ್ತಾನೆ. ಪ್ರಕರಣ ಏನು ಅಂದರೆ ಸಭೆಗೆ ದಕ್ಷ ಬಂದಾಗ ಶಿವ ಎದ್ದುನಿಂತು ಗೌರವ ಕೊಡಲಿಲ್ಲ ಎಂದು.
ನಾವು ದೊಡ್ಡವರ ಮೇಲೆ ಕಣ್ಣಿಟ್ಟಾಗ ನಾವು ವಿನಮ್ರತೆಯನ್ನು ಕಲಿಯಬೇಕು. ಶಿವನಿಗೆ ಸತಿಯಾಗಲಿ ತನ್ನ ಮಗಳು ಸತಿ ಎಂಬ ಭಾವದಲ್ಲಿದ್ದವನಿಗೆ ಶಿವನ ಶಿವತ್ವವು ಮರೆತು ಹೋಗಿ ತನ್ನ ಅಳಿಯ ಎಂಬುದಷ್ಟೇ ಉಳಿಯಿತು. ಒಂದು ವ್ಯಕ್ತಿತ್ವದಲ್ಲಿ ಹಲವು ಮುಖಗಳಿರುತ್ತವೆ, ಉದಾಹರಣೆಗೆ ರಾಮ ದಾಶರಥಿ ಎನ್ನುವುದು ಒಂದು ಮುಖ, ಕೌಸಲ್ಯಾ ಸುತ ಎನ್ನುವುದು ಇನ್ನೊಂದು ಮುಖ, ಲಕ್ಷ್ಮಣಾಗ್ರಜ ಇನ್ನೊಂದು ಮುಖ, ಸೀತಾಪತಿ ಇನ್ನೊಂದು ಮುಖ, ರಾವಣ ಸಂಹಾರಿ ಇನ್ನೊಂದು ಮುಖ, ಹಲವಾರು ಮುಖಗಳು ಎಲ್ಲರಲ್ಲೂ ಇರುತ್ತವೆ. ಹಾಗೆ ಶಿವ ಎಂದರೆ ಬರೀ ದಕ್ಷನ ಅಳಿಯ ಅಲ್ಲ, ಶಿವನ ದೊಡ್ಡ ರೂಪದಲ್ಲಿ ಅದು ಒಂದು ಸಣ್ಣ ಅಂಶ ಅಷ್ಟೇ. ಶಿವನ ಸಂಕಲ್ಪದಲ್ಲಿಯೇ ದೇವಿ ದಕ್ಷನ ಮಗಳಾಗಿ ಹುಟ್ಟುವಂತದ್ದು. ದಕ್ಷನು ಶಿವನ ಸಾವಿರಾರು ಮುಖಗಳನ್ನು ಮರೆತು ತನ್ನ ಅಳಿಯ ಎಂಬುದಷ್ಟನ್ನೇ ನೆನಪಿಟ್ಟುಕೊಂಡಾಗ, ಸಮಸ್ತ ಸೃಷ್ಟಿಯ ಎಲ್ಲ ದೊಡ್ಡವರ ತುಂಬಿರುವ ಸಭೆಯಲ್ಲಿ ದಕ್ಷನು ವಿನೀತನಾಗಿ ಇರುವ ಬದಲು ದುರಹಂಕಾರವನ್ನು ತೋರಿಸುತ್ತಾನೆ. ತನ್ನ ವಿವೇಕವನ್ನು ಕಳೆದುಕೊಂಡು ಎಲ್ಲರೂ ಗೌರವ ಕೊಡಬೇಕು ಗೌರವ ಕೊಟ್ಟಷ್ಟು ಸಾಲದು ಎಂಬುದನ್ನು ಬಿಟ್ಟು ದೊಡ್ಡತನವನ್ನು ಮೆರೆಯಬೇಕಿತ್ತು.
ಸಾಮಾನ್ಯ ಸೇವಕನಾಗಿ ಗುರು ಸೇವೆಯನ್ನು ಮಾಡುತ್ತಾ ಇದ್ದವನು ದೊಡ್ಡ ಸ್ಥಾನ ಸಿಕ್ಕಿದಾಗ ಈ ದಕ್ಷನ ಹಾಗೆ ಆಗಿಬಿಡಬಹುದು ತಾನು ಸೇವಕ ಎನ್ನುವುದನ್ನು ಮರೆತು ತಾನೇ ನಾಯಕ ಎಂಬುದು ತಲೆಗೆ ಬಂದಾಗ ಅಲ್ಲಿಗೆ ಗುರು ಸೇವೆ ಮುಗಿಯಿತು. ಅಲ್ಲಿಂದ ಮುಂದೆ ಪತನವೇ ಇರುವಂತದ್ದು, ಅಲ್ಲಿಂದ ಉದ್ಧಾರದ ದಾರಿ ಇಲ್ಲ. ಉದ್ಧಾರಗೊಳ್ಳಬೇಕು ಎಂಬುವವನು, ಪತನಗೊಳ್ಳಬಾರದು ಎಂದಿರುವವನು ತನ್ನನ್ನು ತಾನು ಪ್ರತಿದಿನ ಅವಲೋಕನ ಮಾಡಿಕೊಳ್ಳಬೇಕು.
ಸಮಿತಿಯಲ್ಲಿ ನಾವು ದೋಷವನ್ನೆಣಿಸಬಾರದು ಆದರೆ ಅಲ್ಲಿರುವ ಪಾಠವನ್ನು ಸ್ವೀಕಾರ ಮಾಡಬೇಕು. ಉದಾಹರಣೆಗೆ ಸೀತೆಯಲ್ಲಿ ದೋಷವನ್ನೆಣಿಸಕೂಡದು ಆದರೆ ಒಂದು ಪಾಠ ಇದೆ. ಏನೆಂದರೆ “ನಂಬಬೇಕಾದುದನ್ನು ನಂಬಬೇಕು, ಸಂಶಯಿಸಬೇಕಾದುದನ್ನು ಸಂಶಯಿಸಬೇಕು.” ಸೀತೆ ಲಕ್ಷ್ಮಣನನ್ನು ನಂಬಬೇಕಿತ್ತು, ಮಾಯಾಮೃಗವನ್ನು ಸಂಶಯಿಸಬೇಕಿತ್ತು. ನಂಬಿಕೆಯಿಡುವಲ್ಲಿ ಸಂಶಯ ಮಾಡಿದರೆ, ಸಂಶಯಿಸಬೇಕಾದಲ್ಲಿ ನಂಬಿಕೆಯಿಟ್ಟರೆ ಏನಾಗಬಹುದು ಎಂಬ ಪಾಠ ಇದೆ ಅಲ್ಲಿ. ಲೋಕೋದ್ಧಾರಕ್ಕಾಗಿ ಈ ಭಾವಗಳನ್ನ ಆ ಸಂದರ್ಭಗಳಲ್ಲಿ ತಂದುಕೊಳ್ಳುತ್ತಾರೆ. ಅದು ಅವರ ಯೋಗ್ಯತೆಗೆ ಕುಂದು ಅಥವಾ ಕೊರತೆ ಅಲ್ಲ. ಸೀತೆ ರಾಮನಲ್ಲಿ ಇಟ್ಟ ಪ್ರೀತಿಗೆ ಹೋಲಿಕೆ ಎಲ್ಲಿದೆ ಹೇಳಿ. ಆ ಪಾವಿತ್ರ್ಯಕ್ಕೆ ಹಾಗೂ ಆ ಸರ್ವಾರ್ಪಣೆಗೆ ಎಣೆಯೇ ಇಲ್ಲ, ಆದರೆ ನಮಗೆ ಪಾಠವಿದೆ. ಹಾಗೆ ಸತಿ ನಮಗೆ ಹೇಳಿದ ಪಾಠ ಏನೆಂದರೆ, ಈ ಮಮತೆ ಏನೆಲ್ಲಾ ಮಾಡಬಹುದು ಎಂಬುದು.
ತವರು ಮನೆ ಎಂದರೆ ಹೆಣ್ಣು ಮಕ್ಕಳಿಗೆ ಬಹಳ ಪ್ರೀತಿ ಇರುತ್ತದೆ. ಹೆಣ್ಣು ಮದುವೆ ಆದ ಮೇಲೆ ತನ್ನ ಮನೆಯನ್ನ ಬಿಟ್ಟು ಗಂಡನ ಮನೆಗೆ ಹೋಗುತ್ತಾಳೆ, ಆದರೆ ಸಂಬಂಧ ಮುರಿಯುವಂಥದ್ದಲ್ಲ. ಆ ಬಾಂಧವ್ಯ ಬಹಳ ದೃಢ. ತವರು ಮನೆಯ ಮೇಲಿನ ಪ್ರೀತಿ ತಪ್ಪಲ್ಲ, ಆದರೆ ಜಾಗ್ರತೆ ಬೇಕಾಗುತ್ತದೆ. ದಕ್ಷನ ಯಜ್ಞ ನಡೆಯುತ್ತಿದೆ, ಕರೆ ಬಂದಿಲ್ಲ, ಹೋಗಬೇಕೋ ಬೇಡವೋ ಎನ್ನುವ ಪ್ರಶ್ನೆ ಇದೆ. ಸತಿಯ ಮಾತೇನೆಂದರೆ ತಂದೆಯ ಮನೆಗೆ ಕರೆಯಬೇಕೆಂದೇನಿಲ್ಲ. ಆದರೆ ಶಿವನ ಮಾತೇನು ಎಂದರೆ, "ಸಂಭಾವಿತಸ್ಯಚಾಕೀರ್ತಿಃ ಮರಣಾsದತಿರಿಚ್ಯತೇ". ಹೋದ ಮೇಲೆ ಅಪಮಾನವಾದರೆ ಅದು ಮರಣಕ್ಕಿಂತಲೂ ದೊಡ್ಡದಾಗಬಹುದು ಜಾಗ್ರತೆ. ಶಿವ ಅಂದು ಏನು ಹೇಳಿದನೋ ಅದು ಸರ್ವತಃ ಖಚಿತ, ಸತಿ ಸ್ವೀಕಾರ ಮಾಡಬೇಕಿತ್ತು ಅದನ್ನ ಅಂತಹ ಮಾತುಗಳು ಅವು. ಬೇಡ, ತವರುಮನೆಗೆ ಹೋಗಬೇಡ ಎಂದು ಗಂಡ ಹೇಳಿದರೆ ಎಂತಹ ಸತಿ ಶಿರೋಮಣಿ ಆದರೂ ಕೂಡ ಸ್ವಲ್ಪ ವ್ಯತ್ಯಾಸ ಆಗುತ್ತದೆ ಅನ್ನುವುದಕ್ಕೆ ಸಾಕ್ಷಿ ಅದು. ಹಾಗಾಗಿ ನಂತರ ಶಿವ ಮೌನವನ್ನು ತಾಳಿದ, ಎಷ್ಟು ಹೇಳಿದರೂ ಕೇಳದೆ ಇದ್ದ ಮೇಲೆ ಏನು ಮಾಡುವುದು? ಎಂದು ಸುಮ್ಮನಾದ. ಸತಿ ಅದನ್ನು ಮೌನಂ ಸಮ್ಮತಿ ಲಕ್ಷಣಂ ಎಂದು ಸ್ವೀಕಾರ ಮಾಡಿದಳು. ಹಾಗೆಯೇ ಅವಳು ಗೆರೆಯನ್ನ ಮೀರಿ ತಂದೆಯ ಮನೆಗೆ ಎಂದು ಹೇಳುವುದಕ್ಕಿಂತ ದಕ್ಷನ ಮನೆಗೆ ಹೋದಳು. ತಂದೆಯ ಮನೆಯಲ್ಲ ಎಂಬುದು ಆಮೇಲೆ ತಿಳಿಯಿತು. ಹೋಗುವಾಗ ತಂದೆಯ ಮನೆಗೆ ಎಂದು ಹೋಗಿದ್ದಳು ಹೋದ ನಂತರ ನೋಡಿದರೆ ತಂದೆ ತಂದೆಯ ಹಾಗೆ ಇರಲೇ ಇಲ್ಲ. ಅಹಂಕಾರದ ಮುದ್ದೆಯಾಗಿದ್ದ. ತಪಸ್ಸು ಮಾಡಿ ಪಡೆದ ಮಗಳು ದೊಡ್ಡ ಯಜ್ಞದ ಸಮಯದಲ್ಲಿ ಕರೆಯದಿದ್ದರೂ ಮನೆಗೆ ಬಂದಿದ್ದಾಳೆ ಎಂದರೆ ಪ್ರೀತಿಯಿಂದ ಮಾತಾಡಿಸಬೇಕು ಎನ್ನುವ ಪರಿವೆಯೇ ಇಲ್ಲ ದಕ್ಷನಿಗೆ. ಇಂತವರು ಗೌರವದ ನಿರೀಕ್ಷೆ ಮಾಡಬಾರದು. ಕೊನೆಗೆ ಅದೇ ಆಯ್ತು.
"ಸಂಭಾವಿತಸ್ಯ ಸ್ವಯನಾ ಪರಾಭವಃ
ಯದಾಸ ಸದ್ಯೋ ಮರಣಾಯ ಕಲ್ಪತೇ"
ಸಂಭಾವನೆ ಅಂದರೆ ಹಣ ಎಂದಲ್ಲ, ಗೌರವ ಎಂದರ್ಥ. ಸಂಭಾವಿತ ಅಂದರೆ ಗೌರವಕ್ಕೆ ಪಾತ್ರವಾದವನು ಎಂದರ್ಥ. ಮೊದಲು ನಮಗೆ ಎಲ್ಲಿ ಗೌರವ ಸಿಗುತ್ತಿತ್ತೋ ಅಲ್ಲಿ ಅಪಮಾನವಾದರೆ ಜೀರ್ಣ ಮಾಡಿಕೊಳ್ಳಲು ಕಷ್ಟವಾಗುತ್ತದೆ. ಮರಣಕ್ಕಿಂತ ಹೆಚ್ಚು ಎಂದು ಆಗುತ್ತದೆ. ಹುಟ್ಟಿನಿಂದಲೇ ಗೌರವವಿಲ್ಲ ಎಂದರೆ ತೊಂದರೆ ಇಲ್ಲ. ಮೊದಲು ಗೌರವ ಪಡೆದು ಈಗ ಇಲ್ಲ ಎಂದಾದಾಗ ಅದನ್ನು ಸಹಿಸಲು ಆಗುವುದಿಲ್ಲ. ಅನಾದರ ಮಾಡಿದ ದಕ್ಷ. ಸತಿಯೊಡನೆ ಬಂದ ಶಿವನ ಗಣಗಳು ದಕ್ಷನನ್ನು ಧ್ವಂಸ ಮಾಡಲು ಮುಂದಾದರು, ಅವರನ್ನು ತಡೆದಳು ಸತಿ. ಏಕೆಂದರೆ ಅವನಿಗೆ ಇಲ್ಲವಾದರೂ ಸತಿಗೆ ತಂದೆಯ ಭಾವ ಇತ್ತು. ಆ ಮಾತನ್ನು ಸತಿ ನೆನಪು ಮಾಡುತ್ತಾಳೆ. ಯಾವುದೆಂದರೆ, ನೀನು ಮಂದಾಂಧನಾದರೆ ಮರು ಕ್ಷಣದಲ್ಲೇ ದೇಹವನ್ನು ಬಿಡುತ್ತೇನೆ. ಎಲ್ಲಿಯವರೆಗೆ ಆದರವೋ ಅಲ್ಲಿಯವರೆಗೆ ಈ ವರ. ಯಾವಾಗ ಆದರವಿಲ್ಲವಾಯಿತೋ ಆವಾಗ ವರವು ಕೂಡಾ ಇಲ್ಲ. ನಿನ್ನ ಮಗಳಾಗಿ ನಾನು ಉಳಿಯುವುದಿಲ್ಲ ಎಂದು ನಿಶ್ಚಯ ಮಾಡುತ್ತಾಳೆ.
ಸತಿಯು ಅನಿಲಾಗ್ನಿ ಧಾರಿಣೆ ಎಂಬ ವಿಶಿಷ್ಟ ಯೋಗಾಗ್ನಿಯ ಮೂಲಕ ದೇಹ ತ್ಯಾಗವನ್ನು ಮಾಡುತ್ತಾಳೆ. ಪ್ರಾಣಾಯಾಮದಿಂದ ಪ್ರಾಣಾಪಾನಗಳನ್ನು ಸಮಗೊಳಿಸಿ ಅನಿಲಾಗ್ನಿ ಧಾರಣೆಯನ್ನು ಅವಳು ಮಾಡುತ್ತಾಳೆ. ಅಂಗ ಅಂಗಗಳಲ್ಲಿ ಅಗ್ನಿಯನ್ನು ಉದ್ಭೂತಗೊಳಿಸುವಂತಹ ಒಂದು ಯೋಗ ಪ್ರಕ್ರಿಯೆಯದು. ಆಕೆಗೆ ದಕ್ಷ ಬೇಡ ಅಂದಮೇಲೆ ಅಲ್ಲಿಯ ಯಜ್ಞದ ಅಗ್ನಿಯ ಅವಶ್ಯಕತೆ ಏನಿದೆ? ಎಂದು ಯೋಗದ ಮೂಲಕ ತನ್ನೊಳಗಿನ ಅಗ್ನಿಯನ್ನು ಉದ್ದೀಪನಗೊಳಿಸಿ, ಅಂಗ ಅಂಗಗಳಲ್ಲಿ ಅಗ್ನಿಯನ್ನು ಆವಿರ್ಭಾವಗೊಳಿಸಿ ತನ್ಮೂಲಕ ಶರೀರವನ್ನು ಭಸ್ಮೀಪತ ಮಾಡುತ್ತಾಳೆ. ಪರಶಿವನು ಪ್ರೀತಿಯಿಂದ ಸ್ವೀಕಾರ ಮಾಡಿದಂತಹ ಶರೀರವಾದರೂ ಕೂಡ ಸತಿದೇವಿ ಸಮಯ ಬಂತು ಎಂದು ಯೋಗಾಗ್ನಿಯಲ್ಲಿ ತನ್ನ ಶರೀರವನ್ನು ಭಸ್ಮಗೊಳಿಸಿದಳು. ನಂತರ ಅಲ್ಲಿ ಶಿವನು ಕೂಡ ಪ್ರಳಯಾಗ್ನಿ ಆಗುತ್ತಾನೆ, ಪ್ರಚಂಡ ಕೋಪವನ್ನು ತಾಳುತ್ತಾನೆ. ಅದರ ಪರಿಣಾಮವಾಗಿ ದಕ್ಷ ತನ್ನ ಶಿರವನ್ನೇ ಕಳೆದುಕೊಳ್ಳುತ್ತಾನೆ. ಬೇರೆ ಬೇರೆ ದೇವತೆಗಳಿಗೆಲ್ಲಾ ತಕ್ಕ ಪ್ರಾಯಶ್ಚಿತ್ತವಾಯಿತು. ದಕ್ಷ ಯಜ್ಞದ ಧ್ವಂಸವೂ ಆಯ್ತು ದಕ್ಷ ಯಜ್ಞದ ಪುನರ್ಜೀವನವೂ ಆಯ್ತು.
ಆದರೆ ಈ ಸತಿ ಆಕೆಯ ದೇಹವನ್ನು ಮಾತ್ರ ತ್ಯಾಗ ಮಾಡಿರುವಂತದ್ದು. ಶಿವನನ್ನು ಆಕೆ ಬಿಡುವಂತೆಯೇ ಇಲ್ಲ. ಅವರಿಬ್ಬರೂ ಬೇರೆ ಅಲ್ಲ, ಒಟ್ಟಿಗೆ ಇರಬೇಕಾಗಿರುವಂತವರು. ಆಕೆ ಮತ್ತೆ ಹುಟ್ಟಿ ಬರುತ್ತಾಳೆ. ಎಲ್ಲಿ ಅಂದರೆ,
"ಹಿಮಾಚಲ ಮಹಾವಂಶ ಪಾವನಾಯೈ ನಮೋ ನಮಃ"
ಏವಂ ದಾಕ್ಷಾಯಣೀ ಹಿತ್ವಾ
ಸತೀ ಪೂರ್ವ ಕಲೇವರಂ|
ಯಜ್ಞೇ ಹಿಮಮತಃ ಕ್ಷೇತ್ರೇ ಮೇನಾಯಾಮ್ ಇತಿ ಸುಶೃಮಾಂ||"
ದಾಕ್ಷಾಯಿಣಿಯು ತನ್ನ ಮೊದಲ ಶರೀರವನ್ನು ತ್ಯಾಗ ಮಾಡಿ ಹಿಮವಂತ ಮತ್ತು ಮೇನೆಯರ ಮಗಳಾಗಿ ಮತ್ತೆ ಹುಟ್ಟಿ ಬಂದಳು. ಪರ್ವತನ ಮಗಳು 'ಪಾರ್ವತಿ' ಆಕೆಯ ಹೆಸರು. ಮತ್ತೆ ಹುಟ್ಟಿ ಬಂದ ನಂತರ ಮತ್ತೆ ಅದೇ ಕೆಲಸ, ಶಿವ ಭಕ್ತಿ, ಶಿವ ಪ್ರೀತಿ. ಶಿವನ ಕುರಿತು ತಪಸ್ಸು, ಶಿವನ ಸೇವೆ. ಅತ್ತ ಈಶ್ವರನು ಕೂಡ ಸತಿಯ ವಿರಹದ ಬಳಿಕ ತನ್ನೊಳಗೆ ತಾನೇ ಮುಳುಗಿದ್ದಾನೆ.
"ಆತ್ಮಾನಮಾತ್ಮನಾಪಷ್ಯನ್ ಜ್ಞಾನಾನಂದ ರಸಾತ್ಮಕಃ". ತನ್ನೊಳಗೆ ತನ್ನನ್ನು ತಾನೇ ನೋಡುತ್ತಾ, ಜ್ಞಾನಾನಂದ ರಸಾತ್ಮಕನಾಗಿ ಆತ ಯೋಗಮಯ ಆಗಿದ್ದಾನೆ. ಶಿವನು ತನ್ನನ್ನೇ ತಾನು ತಪಸ್ಸು ಮಾಡುತ್ತಾನೆ. ಹಿಮಾಲಯದ ಪರಿಸರದಲ್ಲಿ, ಗಂಗಾ ತೀರದಲ್ಲಿ ಶಿವ ತಪಸ್ಸು ಮಾಡುತ್ತಾ ಇದ್ದಾನೆ. ಅಲ್ಲಿಯೇ ಹುಟ್ಟಿ ಬಂದಳು ಸತಿ ದೇವಿ. ಎಳವೆಯಲ್ಲಿಯೇ ಶಿವನಲ್ಲಿ ಆಸಕ್ತಳಾಗಿ, ಶಿವನ ಸೇವೆ ಮಾಡುತ್ತಾ ಇದ್ದಳು. ಇಂದಲ್ಲ ನಾಳೆ ಶಿವಪಾರ್ವತಿಯರು ಸೇರಲೇಬೇಕು. ಆದರೆ ತಾನಾಗೇ ಆಗುವಂತದ್ದನ್ನು ನಾವು ಮಾಡಿಸಲಿಕ್ಕೆ ಹೋದಾಗ ಅದು ಕೆಲವೊಮ್ಮೆ ಬೇರೆಯ ರೀತಿ ಆಗುತ್ತದೆ. ಅದರ ಮಧ್ಯ ಶಿವೆ ಶಿವರನ್ನು ನಾವು ಕೂಡಿಸುತ್ತೇವೆ ಎಂಬ ಒಂದು ಪ್ರಯತ್ನ ದೇವತೆಗಳಿಂದ ನಡೆಯಿತು.
ತಾರಕಾಸುರನ ಸಂಹಾರಕ್ಕಾಗಿ ಶಿವ ಶಿವೆಯರು ಒಂದಾಗಬೇಕಿತ್ತು. ತಾರಕಾಸುರನ ಸಂಹಾರವನ್ನು ಶಿವ ಶಿವೆಯರ ಪುತ್ರನೇ ಮಾಡಬೇಕಿತ್ತು. ಹಾಗಾಗಿ ಶಿವನ ಮದುವೆಯ ಚಿಂತೆ ದೇವತೆಗಳಿಗೆ ಇತ್ತು.
ಪಾರ್ವತಿ ಶಿವನ ಸೇವೆ ಮಾಡುತ್ತಿದ್ದರೂ ಕೂಡಾ ಶಿವ ಅವಳ ಸೇವೆಯನ್ನು ಸ್ವೀಕಾರ ಮಾಡುತ್ತಿದ್ದನೇ ಹೊರತು ಎಲ್ಲಿಯೂ ಚಾಂಚಲ್ಯ ಇರಲಿಲ್ಲ. ಹಾಗಾಗಿ ಶಿವನ ಮದುವೆ ಆಗಬೇಕು, ಶಿವನ ಪುತ್ರನಿಂದ ತಾರಕಾಸುರನ ಸಂಹಾರವಾಗಬೇಕು ಎಂದು, ಶಿವ ಪಾರ್ವತಿಯರನ್ನು ಸೇರಿಸಲು ದೇವತೆಗಳೆಲ್ಲಾ ಮನ್ಮಥನ ಬಳಿ ಹೋಗುತ್ತಾರೆ. ಶಿವ ಪಾರ್ವತಿಯರೆಲ್ಲಿ ಮನ್ಮಥನೆಲ್ಲಿ! ಅದೆಷ್ಟು ದೊಡ್ಡದು ಇದೆಷ್ಟು ಸಣ್ಣದು. ಆ ದೊಡ್ಡವರ ಮಧ್ಯೆ ಈ ಮನ್ಮಥನನ್ನು ಸೇರಿಸುವಂತಹ ಒಂದು ಕೆಲಸ. ಅದಕ್ಕಾಗಿ ಒಂದು ದೊಡ್ಡ ಸೂತ್ರವನ್ನೇ ಮಾಡುತ್ತಾರೆ. ದೇವತೆಗಳೆಲ್ಲಾ ಮನ್ಮಥನ ಬಳಿ ಹೋಗಿ ಮನ್ಮಥನ ಕಥೆಯನ್ನು ಅವನಿಗೇ ಹೇಳುತ್ತಾರೆ.
ಆ ಕಥೆ ಏನೆಂದರೆ, ಸೃಷ್ಟಿಯ ಆರಂಭ, ಬ್ರಹ್ಮ ವಿಧವಿಧವಾದ ಪ್ರಜಾವರ್ಗವನ್ನು ಸೃಷ್ಟಿ ಮಾಡುತ್ತಾ ಇದ್ದಾನೆ, ಸಮಾಧಾನವಾಗಲಿಲ್ಲ. ತಕ್ಕ ವೇಗವನ್ನು ಸೃಷ್ಟಿ ಪಡೆದುಕೊಳ್ಳುತ್ತಾ ಇಲ್ಲ. ಅವನು ಎಷ್ಟು ಸೃಷ್ಟಿ ಮಾಡುತ್ತಾನೋ ಅಷ್ಟೇ ಆಗುತಿತ್ತು. ಅದು ಪುನಃ ಸೃಷ್ಟಿ ಆದರೆ ತಾನೇ ಸೃಷ್ಟಿ ಮುಂದುವರಿಯುವುದು. ಸಮಾಧಾನ ಆಗಲಿಲ್ಲ ಬ್ರಹ್ಮನಿಗೆ, ಹಾಗಾಗಿ ಬ್ರಹ್ಮ ತಪಸ್ಸು ಮಾಡುತ್ತಾನೆ. ಅವನ ತಪಸ್ಸಿಗೆ ನಾರಾಯಣ ಒಲಿದು ಬರುತ್ತಾನೆ. ಬೇಕಾದ ವರವನ್ನು ಕೇಳು ಎಂದು ಹೇಳಿದಾಗ ಬ್ರಹ್ಮ ಕೇಳಿದ್ದು, ಅನಾಯಾಸದಿಂದ ಸೃಷ್ಟಿ ಮುಂದುವರಿಯಬೇಕು, ಅದಕ್ಕೆ ಏನು ಮಾಡಬೇಕು? ನಾನು ಮಾಡಿದ ಸೃಷ್ಟಿ ನನ್ನ ಪ್ರಯತ್ನ ಇಲ್ಲದೆ ಮತ್ತೆ ಮುಂದುವರಿಯಬೇಕು, ಅದು ಹೇಗೆ? ಆಗ ನಾರಾಯಣ ಏನು ಮಾತಾಡಲಿಲ್ಲ. ಒಮ್ಮೆ ತಿರುಗಿ ಲಕ್ಷ್ಮಿಯನ್ನು ನೋಡಿದ. ಮಹಾವಿಷ್ಣುವಿನ ದೃಷ್ಟಿಪಾತ ಮಹಾಲಕ್ಷ್ಮಿಯ ಮೇಲೆ. ಆಗ ಹುಟ್ಟಿ ಬಂದವನು ಕಾಮ. "ತದಾ ಪ್ರಾದುರ್ಭೂಸ್ತ್ವಂವೈ ಜಗನ್ಮೋಹನರೂಪದೃಕ್", ಜಗತ್ತನ್ನೇ ಮೋಹಗೊಳಿಸುವಂತಹ ರೂಪವಂತೆ ಅದು. ಜಗತ್ತನ್ನೇ ವಶ ಮಾಡುವಂತಹ ಅದ್ಭುತ ಸುಂದರ ರೂಪ ಕಾಮನದ್ದು. ಹಾಗೆ ದೃಷ್ಟಿ ಮಾತ್ರದಿಂದ ಕಾಮನನ್ನು ಸೃಷ್ಟಿ ಮಾಡಿದ ಭಗವಂತ. ಕಾಮನಿಗೆ ಒಂದು ಆಯುಧವನ್ನು ಕೊಡುತ್ತಾನೆ. ಅದೇನು ಎಂದರೆ, ದೇವಿಯ ಕೈಯ ಆಯುಧವನ್ನು ಹೋಲುವಂತದ್ದು. ಕಬ್ಬಿನ ಬಿಲ್ಲು, ಹೂವಿನ ಬಾಣ. ಐದೇ ಐದು ಹೂವುಗಳು. ಅರವಿಂದ, ಅಶೋಕ, ಚ್ಯೂತ, ಮಲ್ಲಿಗೆ ಹಾಗೂ ನೀಲೋತ್ಪಲ.
ಶಂಕರಾಚಾರ್ಯರು ಸೌಂದರ್ಯಲಹರಿಯಲ್ಲಿ ಎಷ್ಟು ಸುಂದರವಾಗಿ ವರ್ಣನೆ ಮಾಡುತ್ತಾರೆ.
"ಧನುಃಪೌಷ್ಪಂ ಮೌರ್ವೀ ಮಧುಕರಮಯೀ ಪಂಚ ವಿಶಿಖಾಃ
ವಸಂತಃ ಸಾಮಂತೋ ಮಲಯಮರುದಾಯೋಧನರಥಃ|
ತಥಾಪ್ಯೇಕಃ ಸರ್ವಂ ಹಿಮಗಿರಿಸುತೇ ಕಾಮಪಿ ಕೃಪಾಂ ಅಪಾಂಗಾತ್ತೇ ಲಬ್ಧ್ವಾ ಜಗದಿದಮನಂಗೋ ವಿಜಯತೇ||"
ಕಬ್ಬಿನ ಬಿಲ್ಲು, ಅದಕ್ಕೆ ದುಂಬಿಯ ಹೆದೆ, ಐದು ಹೂವಿನ ಬಾಣಗಳು, ವಸಂತ ಋತುವೇ ಸಾಮಂತ, ಹಾಗೆ ಯುದ್ಧದ ರಥ ಯಾವುದೆಂದರೆ ಮಲಯ ಮಾರುತ. ಕಬ್ಬು, ಹೂವು, ಮಾರುತಗಳು ಹೀಗೆ ಇಂಥದ್ದೇ ಅವನ ಆಯುಧಗಳು. ಹೀಗಿದ್ದರೂ ಕೂಡ
“ತಥಾಪ್ಯೇಕಃ ಸರ್ವಂ ಹಿಮಗಿರಿಸುತೇ ಅನಂಗೋ ವಿಜಯತೇ”
ಹೀಗೆ ಜಗತ್ತನ್ನೇ ಗೆಲ್ಲುತ್ತಾನೆ, ಎಂತೆಂಥವರೆಲ್ಲ ಅವನ ವಶವಾಗುತ್ತಾರೆ. ಬೇರೆನಿಲ್ಲ ನಿನ್ನ ಕೃಪೆಯೇ ಕಾರಣ ಎಂದು ಶಂಕರಾಚಾರ್ಯರು ದೇವಿಯ ಸ್ತೋತ್ರವನ್ನು ಮಾಡುತ್ತಾ ಹೇಳಿದ್ದಾರೆ. ಹೀಗೆ ಇಂತಹ ರಥವನ್ನು ಆಯುಧಗಳನ್ನು ಎಲ್ಲಾ ಕೊಟ್ಟು ವರವನ್ನು ಕೂಡ ನೀಡುತ್ತಾನೆ. “ವಿಜಯತ್ವಂ, ಅಲಂಘ್ಯತ್ವಂ” ಕಾಮ ಬಂದು ಅಡರಿತೆಂದಾದರೆ ಅವನನ್ನು ದಾಟಲು ಸಾಧ್ಯವಿಲ್ಲ. ಅವನನ್ನು ಮೀರಲಾಗದು,
ಉದಾಹರಣೆಗೆ ರಾವಣ ಅವನಿಗೆ ದಿನ ಬೆಳಗಾದರೆ ತನ್ನ ಪತನ ಕಾಣುತ್ತಿದೆ, ಸೇನೆ ನಾಶವಾಗುತ್ತಿದೆ ಪ್ರಮುಖರು ಕಣ್ಣ ಮುಂದೆಯೇ ಸಾಯುತ್ತಿದ್ದಾರೆ. ಕೊಟ್ಟ ಕೊನೆಯಲ್ಲಿ “ಜೇತವ್ಯಮಿತಿ ಕಾಕುತ್ಸ್ಥಃ ಮರ್ತವ್ಯಮಿತಿ ರಾವಣಃ” ಸಾವನ್ನು ನಿಶ್ಚಯ ಮಾಡಿಕೊಂಡು ಯುದ್ಧವನ್ನು ಮಾಡುತ್ತಾನೆ. ಆದರೆ ಬಿಡಲಿಕ್ಕಿಲ್ಲ.
“ವೃದ್ಧೋ ಯಾತಿ ಗೃಹೀತ್ವಾ ದಂಡಂ ತದಪಿ ನ ಮುಂಚತ್ಯಾಶಾಪಿಂಡಂ” ಅದೇ ಕಾಮ. ಹಾಗಾಗಿ ಆ ಎರಡು ವರಗಳು ವಿಜಯತ್ವಂ, ಅಲಂಘ್ಯತ್ವಂ ಕಾಮನಿಗೆ ಸೋಲದವರು ಅಪರೂಪ. ಅವನನ್ನು ಮೀರಿದವರು ಕೂಡ ಅತ್ಯಂತ ಅಪರೂಪ. ಕಗ್ಗದ ಕವಿ ಹೇಳುತ್ತಾರೆ
“ಸೊಬಗು ಬಯಸದ ನರಪ್ರಾಣಿ ಎಲ್ಲಿಹುದಯ್ಯ ಮಗುವೇ? ಮುದುಕರೇ? ಪುರಾಣಿಕ, ಪುರೋಹಿತರೆ? ಜಗದ ಕಣ್ಣು ಎಣುಕದೆಡೆ ಮುಕುರದೆದುರೊಳು ನಿಂತು ಮೊಗವ ತಿದ್ದುವರೆಲ್ಲ” ಚೆಲುವು ಯಾರಿಗೆ ಬೇಡ ಹೇಳಿ; ಯಾರಿಗೂ ಕಾಣದಂತೆ ಕನ್ನಡಿ ಮುಂದೆ ನಿಂತು ಮೊಗವ ತಿದ್ದುವುದು ಎಲ್ಲರೂ. ಅದು ಆ ಮನ್ಮಥನ ಪ್ರತಾಪವೇ.
ದೇವತೆಗಳು ಕಾಮನನ್ನು ಹೀಗೆಲ್ಲಾ ವರ್ಣಿಸುತ್ತಾರೆ. ಇಂತಹ ಆಯುಧಗಳನ್ನು, ವರಗಳನ್ನು ಪಡೆದವನು ನೀನು ಹಾಗೆ ಹುಟ್ಟಿಬಂದವನು. ಮನ್ಮಥನನ್ನು ಸೃಷ್ಟಿ ಮಾಡಿ ವಿಷ್ಣುವು ಬ್ರಹ್ಮನಿಗೆ ಹೇಳಿದನಂತೆ “ಇನ್ನು ನೀನು ಚಿಂತಿಸದಿರು ಇವನು ತನ್ನ ಕರ್ಮಗಳ ಮೂಲಕವಾಗಿ ಸೃಷ್ಟಿಯನ್ನು ಮುಂದುವರಿಸುತ್ತಾನೆ. ನೀನು ನಿಶ್ಚಿಂತೆಯಾಗಿರಬಹುದು.” ಹಾಗಾಗಿ “ಕಾಮದೇವನೇ ನೀನೆಷ್ಟು ದೊಡ್ಡವನು ಎಂದರೆ ಬ್ರಹ್ಮನಿಗೆ ನೀನು ವಿರಾಮವನ್ನು ಕೊಟ್ಟವನು ನಿನ್ನ ಆವಿರ್ಭಾವದ ಬಳಿಕ ಬ್ರಹ್ಮದೇವನು ಸತ್ಯ ಲೋಕದಲ್ಲಿ ನಿಶ್ಚಿಂತೆಯಾಗಿದ್ದಾನೆ. ನೀನು ಸೃಷ್ಟಿ ಕಾರ್ಯವನ್ನು ಮುಂದುವರಿಸುತ್ತಿದ್ದಿಯೇ”. “ಹಾಗಾಗಿ ನಿನ್ನ ಬಲವೀರ್ಯಗಳು ಅಮೋಘ, ನಿನ್ನ ಪರಾಕ್ರಮಗಳು ಅಮೋಘ, ನಿನ್ನ ಅತ್ಯಂತ ಕೋಮಲವಾದ ಸುಕುಮಾರ ಕುಸುಮಾಸ್ತ್ರಗಳು ಅದ್ಭುತ. ನಿನ್ನಿಂದ ಒಂದು ಸಣ್ಣ ಕೆಲಸ ಆಗಬೇಕಿತ್ತು, ತಾರಕಾಸುರನ ಸಂಹಾರವಾಗಬೇಕಿದೆ. ಅದು ಬಹುದೊಡ್ಡ ಕೆಲಸ. ನೀನು ಮಾಡಬೇಕಿರುವುದು ಸಣ್ಣ ಕೆಲಸ. ಶಿವನ ಮುಂದೆ ಪಾರ್ವತಿ ಇದ್ದಾಳೆ. ಪ್ರತಿದಿನ, ಪ್ರತಿಕ್ಷಣ ಅವನ ಸೇವೆ ಮಾಡುತ್ತಿದ್ದಾಳೆ. ಶಿವ ಆಕೆಯ ಕಡೆಗೆ ವಿಶೇಷ ಗಮನ ನೀಡುತ್ತಿಲ್ಲ. ಸೇವಕಳು ಎಂಬಷ್ಟೇ ಭಾವವಿದೆ. ಹೇಗಾದರೂ ಮಾಡಿ ಶಿವನಿಗೆ ಪಾರ್ವತಿಯ ಮೇಲೆ ಮನಸ್ಸಾಗುವಂತೆ ಮಾಡು, ಮತ್ತೆ ನೀನು ಎಲ್ಲಿ ಬೇಕಾದರೂ ಹೋಗು, ಸುಖವಾಗಿರು”.
ಶಿವನನ್ನು ಕೆಣಕಿ ಸುಖವಾಗಿರಲು ಸಾಧ್ಯವಾ? ದೇವತೆಗಳು ಕಾಮನನ್ನು ಉಬ್ಬಿಸುತ್ತಿದ್ದಾರೆ. ನಿನ್ನನ್ನು ಬಿಟ್ಟು ಬೇರೆ ಯಾರಿಗೂ ಈ ಕಾರ್ಯವನ್ನು ಮಾಡಲು ಸಾಧ್ಯವಿಲ್ಲ. ಶಿವನನ್ನು ವಿಚಲಿತಗೊಳಿಸುವ ಶಕ್ತಿ ಯಾರಿಗೂ ಇಲ್ಲ. ಶಿವನು ಆತ್ಮ್ಯೆಕ್ಯ ಧ್ಯಾನ ನಿರತನಾಗಿದ್ದಾನೆ. ಪಕ್ಕದಲ್ಲಿ ಗೌರಿ ಇದ್ದರೂ ಕೂಡ ನೋಡುತ್ತಿಲ್ಲ. ಹಾಗಾಗಿ ಅಲ್ಲಿ ನೀನು ಹೋಗಿ ನಿನ್ನ ಬಾಣವನ್ನು ಪ್ರಯೋಗ ಮಾಡಬೇಕು ಎಂದು ಕಾಮನನ್ನು ಕರೆದುಕೊಂಡು ದೇವತೆಗಳು ಶಿವ ತಪಸ್ಸು ಮಾಡುತ್ತಿದ್ದ ಹಿಮಾಲಯದ ಕಡೆಗೆ ತೆರಳುತ್ತಿದ್ದಾರೆ.
ಲಲಿತೋಪಾಖ್ಯಾನದಲ್ಲಿ ಹೇಳಿದಂತೆ ಶಿವನು ತಪಸ್ಸು ಮಾಡುತ್ತಿದ್ದ ಕಡೆಗೆ ಕಾಮನು ಹೋದ. “ಜಗಾಮ ಆತ್ಮ ವಿನಾಶಾಯ” ತನ್ನ ನಾಶಕ್ಕಾಗಿಯೇ ಹೋದ. ಸೀತೆಯನ್ನು ರಾವಣ ಅಪಹರಣ ಮಾಡುವಾಗ ವಾಲ್ಮೀಕಿಗಳು ಇದೇ ಮಾತನ್ನು ಹೇಳುತ್ತಾರೆ. “ಜಹಾರ ಆತ್ಮ ವಿನಾಶಾಯ” ತನ್ನ ನಾಶಕ್ಕಾಗಿ ರಾವಣ ತನ್ನನ್ನು ತಾನು ಕೊಂದುಕೊಳ್ಳುವ ಸಲುವಾಗಿ. ಗೊತ್ತಿದ್ದು ಅಲ್ಲ, ಮುಂದಾಗುವ ಪರಿಣಾಮ ಅದು.
ಕಾಳಿದಾಸ ಈ ರೀತಿ ಹೇಳಿದ್ದಾನೆ "ಪತಂಗವದ್ವಹ್ನಿಮುಖಂ ವಿವಕ್ಷುಃ" ಬೆಂಕಿಯನ್ನು ಪ್ರವೇಶಿಸುವ ಪತಂಗದಂತೆ ದೀಪದ ಹುಳು ಹೋಗಿ ದೀಪದಲ್ಲಿ ಬಿದ್ದು, ತನ್ನನ್ನು ತಾನು ಸುಟ್ಟು ಕೊಳ್ಳುವಂತೆ.
ಹೀಗೆ ಕಾಮನು ಕೂಡ ಶಿವನಿದ್ದಲ್ಲಿ ಹೋಗಿ ಕಾಯುತ್ತಿದ್ದಾನೆ. “ಉಮಾ ಸಮಕ್ಷಮ್ ಹರಬದ್ಧಲಕ್ಷ್ಯಃ”. ಕಬ್ಬಿನ ಬಿಲ್ಲಿಗೆ ಹೂವಿನ ಬಾಣವನ್ನು ಇಟ್ಟು ಶಿವನನ್ನು ಗುರಿಯಾಗಿ ಇರಿಸಿಕೊಂಡು ಮತ್ತೆ ಮತ್ತೆ ಬಿಲ್ಲಿನ ಹೆದೆಯನ್ನು ಸ್ಪರ್ಶಿಸುತ್ತಾ ಯಾವಾಗ ಬಾಣ ಪ್ರಯೋಗ ಮಾಡಲಿ ಎಂಬ ಕಾತರದಿಂದ ಕಾಯುತ್ತಿದ್ದಾನೆ.
ಅದೇ ಸಮಯದಲ್ಲಿ ಕಮಲದ ಬೀಜದ ಮಾಲೆಯೊಂದನ್ನು ಪಾರ್ವತಿಯು ಶಿವನಿಗೆ ಅರ್ಪಿಸುತ್ತಾಳೆ. 'ಮಂದಾಕಿನಿ ಪುಷ್ಕರ ಬೀಜ ಮಾಲಾ' ಅಂದರೆ ಗಂಗಾ ನದಿಯ ಕಮಲ ಪುಷ್ಪಗಳ ಅಕ್ಷ ಮಾಲೆಯನ್ನು 'ತಾಮ್ರರಚಾಕರೇಣ' ಸಸ್ಯದ ಚಿಗುರುಗಳನ್ನು ಹೋಲುವಂತಹ ಕೆಂಪಾದ ತನ್ನ ಕೈಗಳಿಂದ ತಂದು ಅರ್ಪಿಸುತ್ತಿದ್ದಾಳೆ. ಅದನ್ನು ಶಿವ ಪ್ರೀತಿಯಿಂದ ಸ್ವೀಕರಿಸುತ್ತಿದ್ದಾನೆ. ಶಿವನು ಭಕ್ತ ಪ್ರಿಯ, ಆಶುತೋಷ. ಹಾಗಾಗಿ ಭಕ್ತಿಯಿಂದ ಪಾರ್ವತಿಯು ಅರ್ಪಿಸುತ್ತಿರುವುದನ್ನು ಶಿವ ಅದೇ ಪ್ರೀತಿಯಿಂದ ಸ್ವೀಕರಿಸುತ್ತಿರುವ ಆ ಸಮಯವೇ ಸರಿಯಾದ ಸಂದರ್ಭ ಎಂದು ಕಾಮ ತನ್ನ ಬಾಣಪ್ರಯೋಗವನ್ನು ಮಾಡಿದ್ದ.
ಸಮ್ಮೋಹನವೆಂಬ ಅದ್ಭುತವಾದ ಪುಷ್ಪ ಬಾಣವನ್ನು ಕಾಮನು ಆ ಸಮಯದಲ್ಲಿ ತನ್ನ ಬಾಣದಲ್ಲಿ ಹೂಡಿ ಶಿವನ ಮೇಲೆ ಪ್ರಯೋಗಿಸಿದ್ದ. ಶಿವನ ಮೇಲೆ ಪರಿಣಾಮ ಉಂಟಾದದ್ದು ಸಣ್ಣ ಚಲನೆಯಷ್ಟೇ. ಹೇಗೆಂದರೆ ಚಂದ್ರೋದಯವಾಗುವಾಗ ಸಮುದ್ರದಲ್ಲಿ ಆಗುವ ಸಣ್ಣ ಚಲನೆಯಂತೆ. ಅವಿಕಾರನಾದ ಹರನು ತನ್ನ ಮುಂದೆ ಇರುವ ಪಾರ್ವತಿಯ ಮುಖಚಂದ್ರವನ್ನು ಕಂಡ ಶಿವನು ಪ್ರೀತಿಯಿಂದ ನೋಡಿದ. ಮನ್ಮಥನ ಬಾಣ ಒಂದು ನಿಮಿತ್ತ ಮಾತ್ರ. ದೃಷ್ಟಿಯಲ್ಲಿ ಮತ್ತು ಭಾವನೆಯಲ್ಲಿ ಕೊಂಚ ಪರಿವರ್ತನೆ ಇತ್ತು ಅಷ್ಟೇ. ಕಾಮನ ಕೈಯಿಂದ ಆಗಿದ್ದು ಇಷ್ಟೇ. ಆದರೆ ಆತನಿಗೆ ಆಗಿದ್ದು ಬಹಳ ದೊಡ್ಡದು. ಮರುಕ್ಷಣವೇ ತನ್ನರಿವು ಶಿವನಿಗೆ ಉಂಟಾಯಿತು. ತನಗೆ ಏನಾಗುತ್ತಿದೆ ಎಂದು ಗೊತ್ತಾದ ಕೂಡಲೇ, ಯಾಕಾಗುತ್ತಿದೆ ಎಂದು ಶಿವನು ಅರಿತಾಗ ಇದರ ಹಿಂದೆ ಇರುವ ಮನ್ಮಥನು ಗೋಚರನಾದ. ಕಾಮ ಕಣ್ಣ ಮುಂದೆ ಬಂದು ನಿಂತಾಗ ಶಿವನಿಗೆ ಉಂಟಾಗಿದ್ದು ಕಾಮವಲ್ಲ, ಬೆಂಕಿಯಂತಹ ಕ್ರೋಧ. “ಕ್ರೋಧಂ ಪ್ರಭೋ ಸಂಹರ ಸಂಹರೇತಿ” ಎಂದು ಎಲ್ಲ ದೇವತೆಗಳು ಕ್ರೋಧವನ್ನು ನಿಗ್ರಹಿಸು ನಿಗ್ರಹಿಸು ಎಂದು ಹೇಳುತ್ತಿರುವಂತೆಯೇ ಶಿವನ ಮೂರನೇ ಕಣ್ಣಿನಿಂದ ಹೊರಬಂದ ಕ್ರೋಧಾಗ್ನಿಯಿಂದ ಮನ್ಮಥನು ಸುಟ್ಟು ಬೂದಿಯಾದ. ದೊಡ್ಡವರ ವಿಷಯದಲ್ಲಿ ಸಣ್ಣ ತಪ್ಪು ಮಾಡಿದರೂ ಕೂಡ ಪರಿಣಾಮ ದೊಡ್ಡದೇ ಆಗಿರುತ್ತದೆ. ದೊಡ್ಡವರ ವಿಷಯದಲ್ಲಿ ಮಾಡುವ ಸಣ್ಣ ತಪ್ಪು ಪೂರೈಸಬಹುದು. ಸಣ್ಣವರ ವಿಷಯದಲ್ಲಿ ದೊಡ್ಡವರು ತಪ್ಪು ಮಾಡಿದರೂ ಪೂರೈಸಿಬಿಡಬಹುದು. ಆದರೆ ದೊಡ್ಡವರ ವಿಷಯದಲ್ಲಿ ಮಾಡುವ ಸಣ್ಣ ತಪ್ಪು ಕೂಡ ದೊಡ್ಡದೇ ಆಗಿರುತ್ತದೆ. ಅಂತೆಯೇ ದೊಡ್ಡವರ ವಿಷಯದಲ್ಲಿ ಸಣ್ಣ ಸೇವೆ ಮಾಡಿದರೂ ಸಾಕು; ದೊಡ್ಡದಾದ ಆಶೀರ್ವಾದದ ಫಲವೇ ದೊರೆಯುತ್ತದೆ. ಹಾಗಾಗಿ ದೊಡ್ಡವರ ಬಳಿ ಜಾಗರೂಕರಾಗಿ, ಬುದ್ಧಿಪೂರ್ವಕವಾಗಿ ವ್ಯವಹಾರವನ್ನು ಮಾಡಬೇಕು. ತಿಳಿದು ತಿಳಿದು ತಪ್ಪಾಗದಂತೆ ಇರಬೇಕು. ಮನ್ಮಥ ಬೂದಿಯ ರಾಶಿಯಾಗಿ ಧರೆಯ ಮೇಲೆ ಬಿದ್ದ. ಶಿವನ ಹುಬ್ಬಿನಿಂದ ಮೇಲೆ ಇರುವ ಮೂರನೇ ಕಣ್ಣು ಎಲ್ಲದಕ್ಕಿಂತ ಮೇಲೆ ಇದೆ. ಜ್ಞಾನೇಂದ್ರಿಯ ಕರ್ಮೇಂದ್ರಿಯಗಳನ್ನು ದಾಟಿ ಎಲ್ಲಿ ಕೇವಲ ಜ್ಞಾನ ಮಾತ್ರ ಇರಲು ಸಾಧ್ಯವೋ ಅಷ್ಟು ಎತ್ತರದಲ್ಲಿ ಇರುವಂತದ್ದು. ಅದು ಮಸ್ತಿಷ್ಕದಲ್ಲಿ ಇರುವಂತದ್ದು. ಕಾಮವನ್ನು, ಕಾಮಸಂಜಾತವಾದ ಕರ್ಮಗಳನ್ನು ಸುಟ್ಟು ಬೂದಿ ಮಾಡಿ ಭಸ್ಮವಾಗಿ ಹಚ್ಚಿಕೊಳ್ಳುವವನು ಶಿವ. ಹೀಗೆ ಮನ್ಮಥ ಭಸ್ಮವಾದ.
ಹಾಗಾಗಿ ಇವತ್ತಿನ ಪ್ರವಚನದ ಕೊನೆಯಲ್ಲಿ ಇರುವಂತಹ ಪ್ರಶ್ನೆ ಏನೆಂದರೆ ತಪ್ಪು ಮಾಡಿದವರಿಗೆ ಮಾತ್ರ ಶಿಕ್ಷೆಯಾ? ಅಥವಾ ಮಾಡಿಸಿದವರಿಗೂ ಇದೆಯಾ? ಶಾಸ್ತ್ರ ಹೇಳುವುದು ಏನೆಂದರೆ
ಕರ್ತಾ ಕಾರಯಿತಾ ಚೈವ ಪ್ರೇರಕಶ್ಚ ಅನುಮೋದಕಃ|
ಸುಕೃತೇ ದುಷ್ಕೃತೇ ಚೈವ ಚತ್ವಾರ ಸಮಭಾಗಿನಃ||
ಯಾವುದೇ ಒಳ್ಳೆಯ ಕೆಲಸವಾಗಲಿ ಕೆಟ್ಟ ಕೆಲಸವೇ ಆಗಲಿ ಅದು ನಾಲ್ಕು ಕಡೆ ಪಾಲು ಹಂಚಿ ಹೋಗುತ್ತದೆ, ಕರ್ತಾ- ಮಾಡಿದವನು, ಕಾರಯಿತಾ - ಮಾಡಿಸಿದವನು, ಪ್ರೇರಕಃ - ಪ್ರೇರಣೆ ಕೊಟ್ಟವನು ಹಾಗೂ ಅನುಮೋದಕಃ - ಸರಿ ಸರಿ ಎಂದು ತಲೆ ತೂಗಿಸಿದವನು. ಈ ನಾಲ್ಕು ಜನರಿಗೆ ಕೂಡ ಅವರವರ ಪಾಪಕ್ಕೆ ಅಥವಾ ಪುಣ್ಯಕ್ಕೆ ತಕ್ಕದಾದಷ್ಟು ಲಭಿಸುತ್ತದೆ. ಮನ್ಮಥನಿಗೆ ಸುಟ್ಟುರಿದು ಹೋಗುವ ಶಿಕ್ಷೆಯಾದರೆ ದೇವತೆಗಳಿಗೆ ಏನು ಶಿಕ್ಷೆ?
ಮಾಡಿಸಿದವರಿಗೆ ಏನು ಶಿಕ್ಷೆ ಎಂದರೆ ಭಂಡಾಸುರನೇ ಶಿಕ್ಷೆ. ಏಕೆಂದರೆ ಆ ಬೂದಿಯಿಂದ ಹುಟ್ಟಿ ಬಂದವನು ಭಂಡಾಸುರ. ಕಾಮ ಸುಟ್ಟ ಬೂದಿಯಿಂದ ಹುಟ್ಟಿ ಬಂದ ಭಂಡಾಸುರ 60 ಸಹಸ್ರ ವರ್ಷಗಳ ಕಾಲ ದೇವತೆಗಳನ್ನು ಪೀಡಿಸಿದನು. ಒಂದು ಅರ್ಥದಲ್ಲಿ ನೋಡುವುದಾದರೆ ಮಾಡಿದವನಿಗೆ ಸಣ್ಣ ಶಿಕ್ಷೆ. ಏಕೆಂದರೆ ಕಾಮನು ಕ್ಷಣಮಾತ್ರದಲ್ಲಿ ಸುಟ್ಟುಹೋದ. ಮಾಡಿಸಿದವರಿಗೆ ಬಹುದೊಡ್ಡ ಶಿಕ್ಷೆ. ದೇವತೆಗಳೆಲ್ಲ ಓಡಿಹೋಗಿ ಪಾತಾಳದಲ್ಲಿ ತಲೆಮರಿಸಿಕೊಂಡು, ಕೆಲವರು ಸಮುದ್ರದಾಳದಲ್ಲಿ ಅಡಗಿ ಕುಳಿತುಕೊಂಡು, ಕೆಲವರು ಕಾಡು ಸೇರಿಕೊಂಡು, ವೇಷ ಮೆರೆಸಿಕೊಂಡು, ಪಶುಗಳಂತೆ ದಿಕ್ಕು ದಿಕ್ಕಿಗೆ ಅಲೆಯುವಂತಹ ಸ್ಥಿತಿ ದೇವತೆಗಳಿಗೆ ಬಂತು. ಭಂಡಾಸುರನ ಪ್ರಚಂಡ ಪ್ರತಾಪ ದೇವತೆಗಳ ಮೇಲೆ ಆಯಿತು.
ಹಾಗೆ ಆ ಶಿವನ ಕೋಪಕ್ಕೆ ದೇವತೆಗಳು ಕೂಡ ತುತ್ತಾಗುತ್ತಾರೆ. ಯಾವ ಮನ್ಮಥನನ್ನು ಪ್ರಚೋದಿಸಿ; ಶಿವನ ತಪಸ್ಸನ್ನು ಭಂಗಗೊಳಿಸುವ ಕೆಲಸಕ್ಕೆ ದೇವತೆಗಳು ಕಾಮನನ್ನು ಪ್ರೇರೇಪಿಸಿದರೋ ಅದೇ ಬೂದಿಯಿಂದ ಭಂಡಾಸುರನ ಹುಟ್ಟಾಯಿತು. ತಪ್ಪು ದೇವತೆಗಳು ಮಾಡಿದರೂ ಅವರಿಗೆ ಶಿಕ್ಷೆ ಉಂಟು. ಹೀಗೆ ಮನ್ಮಥನ ಭಸ್ಮದಿಂದ ಹುಟ್ಟಿದ ರಾಕ್ಷಸ ದೇವತೆಗಳನ್ನು ಪರಿಪರಿಯಾಗಿ ಬಹುಕಾಲ ಪೀಡಿಸಿದ. ಆಗ ರಾಜರಾಜೇಶ್ವರಿಯು, ಲಲಿತಾತ್ರಿಪುರಸುಂದರಿಯು ಭಂಡಾಸುರನ ಸಂಹಾರಕ್ಕಾಗಿ ಉದಿಸಿ ಬರಬೇಕಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ