ನವರಾತ್ರ ನಮಸ್ಯಾ- ಲಲಿತೋಪಾಖ್ಯಾನ ಪ್ರವಚನ- 3 ಅಕ್ಷರರೂಪ

Upayuktha
0

ನವರಾತ್ರಿಯ ಪರ್ವಕಾಲದಲ್ಲಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಅನುಗ್ರಹಿಸುತ್ತಿರುವ "ಲಲಿತೋಪಾಖ್ಯಾನ" ಪ್ರವಚನದ ಅಕ್ಷರರೂಪ.




 

ಸಕುಂಕುಮ ವಿಲೇಪನಾಂ ಅಲಿಕಚುಂಬಿ ಕಸ್ತೂರಿಕಾಂ

ಸಮಂದಹಸಿತೇಕ್ಷಣಾಂ ಸಶರಚಾಪಪಾಶಾಂಕುಶಾಮ್|

ಅಶೇಷಜನ ಮೋಹಿನೀಂ ಅರುಣಮಾಲ್ಯ ಭೂಷಾಂವರಾಂ 

ಜಪಾಕುಸುಮ ಭಾಸುರಾಂ ಜಪವಿಧೌ ಸ್ಮರೇದಂಬಿಕಾಮ್||


ಕೆಂಪು ದಾಸವಾಳದ ಹೂವಿನ ಬಣ್ಣ ತಾಯಿಯದು, ಆಕೆ ಉಟ್ಟ ಸೀರೆ ಕೂಡ ಅರುಣ ವರ್ಣದಿಂದ ಶೋಭಿಸಿದೆಯಂತೆ. ಆಕೆಯ ಆಭರಣಗಳು ಕೂಡ ಮಾಣಿಕ್ಯ ಮಣಿಗಳಿಂದ ವಿರಚಿತವಾದ ಕೆಂಬಣ್ಣದ ಆಭರಣಗಳು, ಕೆಂಪು ವರ್ಣದ ಮಾಲೆ, ಪೂರ್ತಿ ಅರುಣ ವರ್ಣವೇ ಅಮ್ಮನನ್ನು ಆವರಿಸಿದೆ. ಕೈಯಲ್ಲಿ ನಿನ್ನೆ ಹೇಳಿದ ಹಾಗೆ ಕಬ್ಬಿನ ಬಿಲ್ಲು ಮತ್ತು ಹೂವಿನ ಬಾಣ. ಅಮ್ಮನವರಿಗೆ ಸಿಟ್ಟು ಬಂತೆಂದರೆ ಕಬ್ಬಿನ ಬಿಲ್ಲನ್ನು ಎತ್ತಿ, ಹೂವಿನ ಬಾಣವನ್ನು ಪ್ರಯೋಗ ಮಾಡುತ್ತಾರೆ. ಕೋಪ ಕೂಡ ಎಷ್ಟು ಕೋಮಲ ಅಮ್ಮನವರದು ಎನ್ನುವುದಕ್ಕೆ, ಇಕ್ಷು ಚಾಪ ಮತ್ತು ಸುಮ ಬಾಣಗಳೇ ಸಾಕ್ಷಿ. ಮೈಗೆಲ್ಲಾ ಕೇಸರಿಯ ಲೇಪನ, ಹಣೆಯಲ್ಲಿ ಕಸ್ತೂರಿ ತಿಲಕ, ಕಣ್ಣಿನಲ್ಲಿಯೇ ಅಂದರೆ ನೇತ್ರ ಮಾತ್ರದಲ್ಲಿಯೇ ತಾಯಿಯ ಮಂದಹಾಸ ಸಮಂದಹಸಿತೇಕ್ಷಣಾಂ ಆಕೆ ಯಾರು ಅಂದರೆ, ಅಶೇಷಜನ ಮೋಹಿನೀಂ ಮೋಹಿನಿ ಎಲ್ಲರನ್ನು ಮೋಹಗೊಳಿಸುವವಳು. ಹಿರಿಯರಿರಬಹುದು, ಕಿರಿಯರಿರಬಹುದು, ಪುರುಷರಿರಬಹುದು, ಮಹಿಳೆಯರಿರಬಹುದು, ಅಜ್ಜನಿರಬಹುದು, ಪ್ರಾಜ್ಞನಿರಬಹುದು, ರಾಜನಿರಬಹುದು, ರಂಕನಿರಬಹುದು, ದೇವತೆ ಇರಬಹುದು, ರಾಕ್ಷಸನಿರಬಹುದು, ಸಕಲ ಜೀವ ಜಾಲವನ್ನು ಮೋಹಗೊಳಿಸುವ ಅವಳ ರೂಪವನ್ನು ಜಪಿಸುವಾಗ, ಅರ್ಚನೆಯ ಸಮಯದಲ್ಲಿ ಸ್ಮರಿಸಬೇಕಂತೆ.


  

ಮೊಟ್ಟ ಮೊದಲು ಆಕೆಯ ಸ್ಮರಣೆಯನ್ನು ಮಾಡುತ್ತೇವೆ. ಮತ್ತೆ ಮಳೆ ಬಂದಿದೆ, ನಿಮಗೆಲ್ಲಾ ನಿನ್ನೆಯ ನೆನಪಾಗಿರುತ್ತದೆ. ಏಕೆಂದರೆ ಮಳೆ ಎಂಬುದು ದೈವ ಕೃಪೆಯ ಲಕ್ಷಣ, ಒಂದೊಳ್ಳೆ ಹೋಮವನ್ನು ಅಥವಾ ಪೂಜೆಯನ್ನು ಮಾಡಿದರೆ, ಪೂರ್ಣಾಹುತಿ ಅಥವಾ ಮಂಗಳಾರತಿಯ ಬಳಿಕ ಮಳೆ ಬಂತು ಎಂದಾದರೆ, ನಾವು ಮಾಡಿದ ಪೂಜೆ, ಹೋಮ ದೇವರಿಗೆ ತಲುಪಿತು ಎಂದರ್ಥ. ಮಳೆ ಎನ್ನುವುದು ರಶೀದಿ ಇದ್ದ ಹಾಗೆ, ದೇವರಿಗೆ ನಮ್ಮ ಭಕ್ತಿ, ಸೇವೆ ತಲುಪಿದ್ದಕ್ಕೆ, ಅಲ್ಲಿಂದ ರಶೀದಿ ಬರುವ ಕ್ರಮ ಹೇಗೆಂದರೆ  ಹೀಗೆ, ಮಳೆಯ ರೂಪದಲ್ಲಿ. ಇಲ್ಲದೆ ಇದ್ದಿದ್ದರೆ ಇಷ್ಟು ಹೊತ್ತು ಯಾವ ಮಳೆಯ ಸುಳಿವು, ಲಕ್ಷಣವು ಇಲ್ಲದೆ, ಈಗ ನಾವು ಬಂದು ಅಮ್ಮನವರ ಬಗ್ಗೆ ನಾಲ್ಕು ಒಳ್ಳೆಯ ಮಾತು ಹೇಳಬೇಕು ಎಂದುಕೊಳ್ಳುವಾಗಲೇ ಬರುವ ಮಳೆ ಇದೆಯಲ್ಲಾ ಅದು ಆಕೆಯ ಆನಂದಭಾಷ್ಪ. ಮಕ್ಕಳು ತೊದಲು ಮಾತನಾಡುವಾಗ ತಾಯಿಗೆ ಸಂತೋಷದ ಕಣ್ಣೀರು ಬರುತ್ತದೆ. ಹಾಗಾಗಿ ನಮ್ಮೆಲ್ಲರ ಕಷ್ಟವನ್ನು ಕಂಡ ತಾಯಿಯ ಕಣ್ಣೀರೋ, ಅಥವಾ ನಮ್ಮ ಸೇವೆಯಿಂದ ಸಂತೋಷಗೊಂಡು ತಾಯಿ ಸುರಿಸುವ ಕಣ್ಣೀರೋ, ಈ ಮಳೆ ಅಂತು ದೇವರ ಅಥವಾ ದೇವಿ ರಾಜರಾಜೇಶ್ವರಿಯ ಕಣ್ಣೀರು ಎಂಬುದನ್ನು ಈ ಸಮಯದಲ್ಲಿ ನೆನಪಿಸಿಕೊಂಡು ಮತ್ತೆ ಮುಂದುವರೆಯುತ್ತೇವೆ. 



ಅಶೇಷಜನ ಮೋಹಿನೀಂ ನಿನ್ನೆ ನಾವು ಮೋಹಿನಿಯ ವರ್ಣನೆ ಮಾಡುತ್ತಿದ್ದೆವು. ತ್ರಿಪುರ ಸುಂದರಿಯ, ರಾಜರಾಜೇಶ್ವರಿಯ ಹಿಂದಿನ ರೂಪ ಯಾವುದೆಂದರೆ ಈ ಮೋಹಿನಿಯ ರೂಪ. ಮೋಹಿನಿ ಶಬ್ದದ ಅರ್ಥ ಮೋಹಗೊಳಿಸುವವಳು, ಮಂಕು ಬೂದಿ ಎರಚುವವಳು, ಬೋಧ ತಪ್ಪಿಸುವವಳು, ಜ್ಞಾನವನ್ನು ಮರೆಮಾಡುವವಳು ಎಂಬುದಾಗಿ ಮೇಲ್ನೋಟಕ್ಕೆ ಅರ್ಥ. ಯಾರಲ್ಲಿ ಮೋಹವೆಂಬ ಆಯುಧವಿದೆಯೋ ಅವಳೇ ಮೋಹಿನಿ. ನಮ್ಮಲ್ಲೂ ಮೋಹ ಉಂಟು, ಹಾಗಂತ ನಾವೂ ಮೋಹನರೋ, ಮೋಹನಿಯರೋ ಅಲ್ಲ. ಆ ಶಬ್ದ ಯಾರಿಗೆ ಇರುವಂತದ್ದು, ಮೋಹ ಯಾರ ನಿಯಂತ್ರಣದಲ್ಲಿ ಇದೆಯೋ, ಮೋಹ ಯಾರ ಉಪಕರಣವಾಗಿ ಕೆಲಸ ಮಾಡುತ್ತದೋ ಅವಳು ಮೋಹಿನಿ. ಅದು ಯಾಕೆ ಹಾಗೆ, ಅಮ್ಮನವರೇ ಯಾಕೆ ಹಾಗೆ ಮಾಡುವುದು, ಮೋಹಗೊಳಿಸುವುದು ಯಾಕಪ್ಪಾ? ಮೋಹ ಶಬ್ದಕ್ಕೆ, ವಿವೇಕವು ಇಲ್ಲದಿರುವಿಕೆ ಎಂಬ ಅರ್ಥ ಉಂಟು, ಅಂದರೆ ಸರಿ ಯಾವುದು? ತಪ್ಪು ಯಾವುದು? ಒಳಿತು ಯಾವುದು? ಕೆಡಕು ಯಾವುದು? ಮಾಡಬೇಕಾದದ್ದು ಯಾವುದು? ಮಾಡಬಾರದ್ದಾವುದು? ಇದನ್ನು ನಾವು ವರ್ಗೀಕರಣ ಮಾಡತಕ್ಕಂತಹ, ಬೇರೆ ಬೇರೆಯಾಗಿ ಗುರುತಿಸುವ ಶಕ್ತಿಗೆ ವಿವೇಕ ಎಂದು ಹೆಸರು. ತದ್ವಿರುದ್ಧವಾಗಿರುವಂತಹದ್ದು ಮೋಹ, ಅಂದರೆ ಮುಸುಕು, ಮರೆ, ಸರಿ ತಪ್ಪು ಯಾವುದು ಎಂದು ಗೊತ್ತಾಗುವುದಿಲ್ಲ. ರಾವಣ ಸೀತೆಯನ್ನು ಕದ್ದ ಎಂದರೆ ಕಾರಣ ಏನು? ಮೋಹವೇ ಕಾರಣ. ಸೀತೆಯ ಸೌಂದರ್ಯ ಮನಸ್ಸಿಗೆ ಬಂತು, ಸರಿ ತಪ್ಪು ವಿವೇಚನೆ ಹೊರಟುಹೋಯಿತು. ಪರಸತಿ, ಆಕೆಯನ್ನು ಆ ದೃಷ್ಟಿಯಿಂದ ನೋಡಬಾರದು ಎಂಬ ಸರಿ ಮರೆಯಾಗಿ ಹೋಯಿತು. ಮೋಹದಲ್ಲಿ ಆಗುವಂತಹದ್ದು ಇದು. ಹಾಗಾಗಿ ಮೋಹವನ್ನು ಷಡ್ವೈರಿಗಳಲ್ಲಿ ಒಂದು ಎಂದು ಪರಿಗಣನೆ ಮಾಡಿದ್ದಾರೆ. ಆರು ವೈರಿಗಳು, ಭಾರತೀಯರ ದೃಷ್ಟಿ ಬಹಳ ಆಳವಾಗಿ ಇರುವಂತಹದ್ದು. ಎದುರಿರುವವನು ಆಮೇಲೆ, ಮೊದಲ ವೈರಿ ನಮ್ಮ ಮನಸ್ಸು. ಕಾಮದ ಮನಸ್ಸು, ಮೋಹದ ಮನಸ್ಸು, ಕ್ರೋಧದ ಮನಸ್ಸು, ಮದ-ಮತ್ಸರಗಳ ಮನಸ್ಸು, ಈ ಮನಸ್ಸೇ ವೈರಿ. ನಾವು ಯಾವಾಗಲು ಹೇಳುತ್ತಿರುತ್ತೇವೆ, ರಾವಣನ ವೈರಿ ಯಾರು ಎಂದರೆ ಕಾಮ, ಆಮೇಲೆ ರಾಮ. ರಾವಣನ ಒಳಗಿನ ಕಾಮವೇ ರಾವಣನ ವೈರಿ ಹೊರತು ರಾಮನಲ್ಲ. ಒಂದು ವೇಳೆ ದುಷ್ಕಾಮ ಇಲ್ಲದೆ ಇದ್ದಿದ್ದರೆ, ರಾಮ ರಾವಣನಿಗೆ ವೈರಿ ಆಗುತ್ತಿರಲಿಲ್ಲ.

ಹಾಗಾಗಿ ಮೊದಲ ಶತ್ರು, ಅದು ನಮ್ಮೊಳಗೆ ಇರುವಂತಹದ್ದು ಹೊರಗಡೆ ಅಲ್ಲ. ಜಗತ್ತಿನಲ್ಲಿ ಯಾರ ಜೊತೆಗಾದರು ವೈರ ಬೆಳೆಯಿತು ಎಂದರೆ ಕಾರಣವನ್ನು ನಾವು ನಮ್ಮೊಳಗೆ ಹುಡುಕಬೇಕು. ನಮ್ಮ ಯಾವ ಕೆಟ್ಟ ವಿಚಾರ, ನಮ್ಮ ಯಾವ ಅಂತರಂಗದ ದುರ್ಗುಣ ಅದಕ್ಕೆ ಕಾರಣವಾಯಿತು ಎಂಬುದನ್ನು ಯೋಚನೆ ಮಾಡಬೇಕು. ಎಲ್ಲಾ ವೈರಗಳ ಮೂಲ ನಮ್ಮ ಮನಸ್ಸಿನಲ್ಲೆ ಇರುತ್ತದೆ. ಉದಾಹರಣೆ ಇದೆ : ರಾವಣನ ಒಳಗಿನ ಕಾಮವೇ ಆತನ ಸಾವಿಗೆ ಕಾರಣವಾಗಿದ್ದು, ರಾಮ ನಿಮಿತ್ತ ಮಾತ್ರ. ರಾವಣ ರಾಮನಿಗೆ ಏನೂ ಅಲ್ಲ, ಆ ಕಾಮದ ಕಾರಣದಿಂದ ಶಸ್ತ್ರ ಪ್ರಯೋಗ ಮಾಡಿರುವಂತದ್ದು. 




ಹಾಗಾಗಿ ಆರು ವೈರಿಗಳು, ಕಾಮ, ಕ್ರೋಧ, ಮೋಹ, ಲೋಭ, ಮದ- ಮತ್ಸರ ಎಂಬ ನಮ್ಮ ಒಳಗಿನ ಆರು ಭಾವಗಳೇ ವೈರಿಗಳು. ಅವುಗಳಲ್ಲಿ ಒಂದು ಈ ಮೋಹ. ಅರೇ! ಮೋಹವುಳ್ಳವಳನ್ನು ನಾವು ದೇವರೆಂದು ಪೂಜೆ ಮಾಡುತ್ತೇವೆ. ನಮ್ಮಲ್ಲಿ ಮೋಹವನ್ನು ಜಾಗೃತಗೊಳಿಸುವವಳನ್ನು ದೇವರೆಂದು ಪೂಜೆ ಮಾಡಬೇಕಾ? ಮೂಲಭೂತ ಪ್ರಶ್ನೆ ಇದು, ಮೋಹ ಕೆಡುಕೆ? ಒಳಿತೇ? ಒಂದು ತೀರ್ಮಾನಕ್ಕೆ ಬರೋಣವೇ, ಪ್ರಸಿದ್ಧವಾದ ಅಭಿಪ್ರಾಯ ಮೋಹ ಕೆಟ್ಟದ್ದು ಎಂದು ಇದೆ. ಆರು ವೈರಿಗಳಲ್ಲಿ ಯಾವಾಗ ಮೋಹವನ್ನು ಪರಿಗಣನೆ ಮಾಡಿದರೋ ಅದು ಕೆಟ್ಟದ್ದು ಎಂದಾಯಿತು. ಹಾಗಿದ್ದರೆ ಅದಕ್ಕೆ ಯಾಕೆ ಪೂಜೆ? ದೇವರಲ್ಲಿ ಅದಕ್ಕೆ ಜಾಗ ಏತಕ್ಕೆ? ಆಲೋಚನೆ ಮಾಡಿ. ಮಹಾವಿಷ್ಣು ಏತಕ್ಕೆ ಮೋಹಿನಿ ರೂಪವನ್ನು ತಾಳಬೇಕು? ಏಕೆಂದರೆ ಅದಕ್ಕೆ ಸರಿಯಾದ ಉತ್ತರ ಇದು, ಮೊಟ್ಟಮೊದಲ ಪ್ರಶ್ನೆ ಸೃಷ್ಟಿಯಲ್ಲಿ ಕೆಟ್ಟದಿರಲು ಸಾಧ್ಯವಾ? ಯಾರು ಸೃಷ್ಟಿ ಮಾಡಿದ್ದು ಎಂದರೆ, ದೇವರೇ ಸೃಷ್ಟಿ ಮಾಡಿದ್ದು. ದೇವರ ಸೃಷ್ಟಿಯಲ್ಲಿ ಕೆಟ್ಟದಿರಲು ಸಾಧ್ಯವಾ ಎಂದು ಆಲೋಚಿಸಬೇಕು ನಾವು. ಇಲ್ಲ, ಯಾವುದೂ ಕೆಟ್ಟದ್ದಿಲ್ಲ. ಹಾಗಾಗಿ ನೀವು ಇದು ಕೆಟ್ಟದ್ದು ಎಂದು ಯಾವುದಕ್ಕೂ ಲೇಬಲ್ ಅಂಟಿಸುವಂತಿಲ್ಲ. ನಮ್ಮ ಬಳಕೆ ಸರಿಯಾಗದಿದ್ದಾಗ ಕೆಟ್ಟದಾಗಬಹುದು, ಅದು ಬೇರೆ ವಿಷಯ. ನಿನ್ನೆ ನಮ್ಮ ಹಿರಿಯ ಶಿಷ್ಯರೊಬ್ಬರು ಒಂದಿಷ್ಟು ಚೂರಿಗಳನ್ನು ತಂದು ಸಮರ್ಪಣೆ ಮಾಡಿದರು, ಅವರೇ ಸ್ವತಃ ಮಾಡುತ್ತಾರೆ, ಅಂಗಡಿಯಿಂದ ತಂದಿದ್ದಲ್ಲ. ಕಬ್ಬಿಣದ ಚೂರಿಗಳು, ರಾಮದೇವರ ಪಾಕಶಾಲೆಗೆ ಉಪಯೋಗವಾಗಲಿ ಎಂಬ ಕಾರಣಕ್ಕೆ ತಂದುಕೊಟ್ಟಿದ್ದರು. ಕೂಡಲೇ ನಮ್ಮ ಬಾಯಿಯಿಂದ ಬಂದಿದ್ದು, ಚೂರಿಯಿಂದಲು ಪುಣ್ಯ ಸಂಪಾದನೆ ಮಾಡಲು ಸಾಧ್ಯವಿದೆ ಎಂದಾಯಿತು ಹೇಳಿ. ಚೂರಿ ಡಾಕ್ಟರ್ ಕೈಗೆ ಬಂದರೆ ಪುಣ್ಯ ಸಂಪಾದನೆಯ ಕಾರ್ಯ ಆಗುತ್ತದೆ. ಅದೇ ಡಾಕುವಿನ ಕೈಗೆ ಹೋದರೆ ಪಾಪ ಸಂಪಾದನೆ ಕಾರ್ಯ ಆಗುತ್ತದೆ. ಯಾರ ಕೈಯಲ್ಲಿದೆ ಎನ್ನುವುದು ಮುಖ್ಯ. ಡಾಕ್ಟರ್ ಹೊಟ್ಟೆ ಕೊಯ್ದರೆ ನಾವೇನೂ ಆಕ್ಷೇಪಣೆ ಮಾಡದೇ, ದುಡ್ಡು ಕೊಟ್ಟು, ಧನ್ಯವಾದ ಹೇಳಿ ಬರುತ್ತೇವೆ. ಅದೇ ಡಾಕು ಹೊಟ್ಟೆಗೆ ಚಾಕು ಹಾಕಿದರೆ, ನಾವು ದುಡ್ಡು ಕೊಡುತ್ತೇವೆಯಾ, ಧನ್ಯವಾದ ಹೇಳುತ್ತೇವೆಯಾ? ಇಲ್ಲ ಅಲ್ಲವೇ. ಅದು ಯಾಕೆ ಕೆಟ್ಟದ್ದು, ಇದು ಏಕೆ ಒಳ್ಳೆಯದು ? ಡಾಕುವಿನ ಕೈಯಲ್ಲಿ ಚಾಕು ಇದೆ ಅದರ ಹಿಂದೆ ಕೆಟ್ಟ ಮನಸ್ಸಿದೆ. ಅದೇ ಡಾಕ್ಟರ್ ಕೈಯಲ್ಲಿ ಚಾಕು ಇದ್ದರು ಅದರ ಹಿಂದೆ ಒಳ್ಳೆಯ ಮನಸ್ಸಿದೆ. ಜೀವ ಉಳಿಸುವ ಪ್ರಯತ್ನ ಡಾಕ್ಟರ್ ಅವರದ್ದು, ಜೀವ ತೆಗೆಯುವ ಪ್ರಯತ್ನ ಡಾಕುವಿನದು. ಹಾಗಾಗಿ ಯಾವ ವಸ್ತುವಾದರು ಒಳ್ಳೆಯ ಉದ್ದೇಶಕ್ಕೆ ಬಳಕೆಯಾದರೆ ಒಳ್ಳೆಯದು, ಕೆಟ್ಟ ಉದ್ದೇಶಕ್ಕೆ ಬಳಕೆಯಾದರೆ ಕೆಟ್ಟದ್ದು. ಹಾವಿನ ವಿಷವಾದರು ಕೂಡ ಔಷಧಕ್ಕೆ ಪ್ರಯೋಗವಾದರೆ ಒಳ್ಳೆಯದು. ಹಾಲಾದರು ಕೂಡ ಮಿತಿ ಮೀರಿ ಸೇವಿಸಿದಾಗ ಅದು ಕೆಟ್ಟದ್ದು. ಬಳಕೆ ಮೇಲಿದೆ, ಬೆಂಕಿ ಒಳ್ಳೆಯದು ಯಾವಾಗ ಎಂದರೆ, ಅದು ನಮ್ಮ ಮನೆಯ ಅಡುಗೆ ಒಲೆಯಲ್ಲಿ ಇದ್ದರೆ ಒಳ್ಳೆಯದು. ಅದೇ ಬೆಂಕಿ ಮನೆಯ ಮಾಡಿಗೆ ಹತ್ತಿದರೆ, ಬಟ್ಟೆಗೆ ಹತ್ತಿದರೆ ಕೆಟ್ಟದ್ದು. ಹಾಗಾಗಿ ಒಳ್ಳೆಯದು ಆಗಬಹುದು, ಕೆಟ್ಟದ್ದು ಆಗಬಹುದು. ದೇವರ ಪ್ರಸಾದದ ಹೂವಿನ ಮಾಲೆ ಒಳ್ಳೆಯದ್ದೋ, ಕೆಟ್ಟದ್ದೋ ? ಆದರೆ ಇಂದ್ರ ಆ ಹೂವಿನ ಮಾಲೆಯಿಂದಲೆ ಆಪತ್ತನ್ನು ತಂದುಕೊಂಡ. ತಾಯಿಯ ಪ್ರಸಾದದ ಮಾಲೆಗೆ ಕೊಡಬೇಕಾದ ಗೌರವ ಕೊಡದೆ, ತಲೆಯ ಮೇಲೆ ಇಡಬೇಕಾದದ್ದನ್ನು, ಆನೆಯ ಮೇಲೆ ಉಪೇಕ್ಷೆಯಿಂದ ಎಸೆದಾಗ ಮುಂದಾದ ಪರಿಣಾಮ ಏನು ನೋಡಿ, ಅವನಿಗೆ ಸ್ವರ್ಗವೇ ತಪ್ಪಿತು, ಪತನ ಉಂಟಾಯಿತು. ಹಾಗಾಗಿ ಯಾವುದಕ್ಕು ಲೇಬಲ್ ಅಂಟಿಸುವಂತಿಲ್ಲ. ಇದು ಕೇವಲ ಒಳ್ಳೆಯದು, ಇದು ಕೇವಲ ಕೆಟ್ಟದ್ದು ಎನ್ನುವಂತಹದ್ದು ಜಗತ್ತಿನಲ್ಲಿ ಯಾವುದು ಇಲ್ಲ. ಯಾವಾಗ ಒಳ್ಳೆಯದು? ಯಾರಿಗೆ ಒಳ್ಳೆಯದು? ಹೇಗೆ ಬಳಕೆಯಾದರೆ ಒಳ್ಳೆಯದು ಎನ್ನುವುದನ್ನು ನಾವು ಆಲೋಚನೆ ಮಾಡಬೇಕು.



ಮೋಹವು ಕೂಡ ಹಾಗೆ, ಯಾವಾಗಲೂ ಕೆಟ್ಟದ್ದು ಎನ್ನಲು ಸಾಧ್ಯವಿಲ್ಲ. ನಾವು ಒಂದು ಕಥೆಯನ್ನು ಆಗಾಗ ನೆನಪಿಸಿಕೊಳ್ಳುತ್ತ ಇರುತ್ತೇವೆ. ನಾರದರ ಕಥೆ ಇದು, ನಾರದರು ಜಗತ್ತನ್ನು ವೀಕ್ಷಣೆ ಮಾಡಿದಾಗ ಹೀಗೆ ಅಗಸ್ತ್ಯರ ಕಥೆಯಂತೆ ಎಲ್ಲೆಲ್ಲಿಯೂ ದುಃಖವಿದೆ, ನೋವಿದೆ, ಕಷ್ಟವಿದೆ. ಇದಕ್ಕೆಲ್ಲಾ ಏನು ಕಾರಣ ಎಂದು ಯೋಚಿಸಿದಾಗ ಮೋಹವೇ ಕಾರಣ ಎಂದು ಗೊತ್ತಾಯಿತಂತೆ. ನಾವೆಲ್ಲಾ  ಪಡುವ ಕಷ್ಟದ ಹಿಂದೆ ಮೋಹವಿದೆ. ನೇರವಾಗಿ ಶ್ರೀಹರಿಯ ಬಳಿಗೆ ಹೋಗಿ, ದೇವರೇ ನನಗೊಂದು ವರ ಕೊಡು, ಆಯಿತು ಏನೆಂದು ಕೇಳಿದರೆ, ಜಗತ್ತಿನಲ್ಲಿ ಮೋಹವಿರಬಾರದು.  ಭಗವಂತ ಕೇಳಿದನಂತೆ, ಯಾಕಪ್ಪಾ? ನಾನೇ ಸೃಷ್ಟಿಸಿದ್ದು ಮೋಹವನ್ನು ಯಾಕೆ ಹೀಗೆ ಕೇಳುತ್ತಿದ್ದಿಯಾ ಎಂದು ಕೇಳಿದಾಗ, ನಾರದರು ಜಗತ್ತಿನ ಎಲ್ಲಾ ಕಷ್ಟಕ್ಕೂ ಮೋಹವೇ ಕಾರಣ, ಅದು ಇರಬಾರದು ಎಂದು ಹೇಳುತ್ತಾರೆ. ಆಯಿತು ವರ ಕೊಟ್ಟಿದ್ದೇನೆ. ಈಗ ಇನ್ನೊಮ್ಮೆ ಪ್ರಪಂಚ ಪರ್ಯಟನೆ ಮಾಡಿ, ಎಷ್ಟು ಸುಖಿಗಳಾಗಿದ್ದಾರೆ ಎಲ್ಲರೂ ಎಂದು ವರದಿ ಮಾಡು ಎಂದು ನಾರದರನ್ನು ಲೋಕದ ಕಡೆಗೆ ಭಗವಂತ ಕಳುಹಿಸಿಕೊಟ್ಟಾಗ ನಾರದರು ಬಂದು ನೋಡುತ್ತಾರೆ, ಎಲ್ಲಾ ಅವ್ಯವಸ್ಥೆ. ಮಗು ಹಡೆದ ತಾಯಿಗೆ ಮಗನ ಮೇಲೆ ಮಮಕಾರವಿಲ್ಲ, ಹಸುಗೂಸಿಗೆ ತಾಯಿ ಹಾಲುಣಿಸುವುದಿಲ್ಲ, ಯಾಕೆಂದರೆ ಮೋಹವಿಲ್ಲ. ಹಸುವಿಗೆ ಕರು ಬೇಡ, ಗಂಡ ಹೆಂಡತಿಯರ ಮಧ್ಯೆ ಸಾಮರಸ್ಯವಿಲ್ಲ, ಪ್ರೀತಿ ಇಲ್ಲ. ಈ ಮೋಹವೆಂಬುವುದು ನಮ್ಮನ್ನು ಪರಸ್ಪರ ಬಂಧಿಸಿದೆ. ಹಾಗಾಗಿ ನಾವು ಒಬ್ಬರಿಗೊಬ್ಬರು ಒಳ್ಳೆಯದನ್ನ ಮಾಡುತ್ತೇವೆ. ಒಂದು ವೇಳೆ ಆ ಹಗ್ಗ ಹರಿದರೆ, ಯಾರಿಗೆ ಯಾರುಂಟು ಹೇಳಿ ? ಯಾರಿಗೆ ಯಾರೂ ಸಂಬಂಧವಿಲ್ಲ. ಮೋಹಕ್ಕೂ ಕೂಡ ಪಾತ್ರ ಇದೆ, ಎಲ್ಲಿ ಹೇಗಿರಬೇಕೋ ಹಾಗಿದ್ದರೆ ಅದು ಒಳ್ಳೆಯದೆ ಹೊರತು ಕೆಟ್ಟದಲ್ಲ. ನಾರದರು ತಮ್ಮ ಭಕ್ತಿ ಸೂತ್ರದಲ್ಲಿ ಒಂದು ಮಾತನ್ನು ಹೇಳುತ್ತಾರೆ, "ನಿನಗೆ ಕಾಮವನ್ನು ಬಿಡಲಿಕ್ಕೆ ಆಗಲಿಲ್ಲ ಎಂದರೆ ಚಿಂತೆಯಿಲ್ಲ ಅದನ್ನು ದೇವರಲ್ಲಿ ಇಡು. ದೇವರನ್ನು ಕಾಮಿಸು, ಗೋಪಿಯರಿಗೆ ಸಿಕ್ಕಂತಹ ಮುಕ್ತಿ ಸಿಗುತ್ತದೆ ನಿನಗೆ. ಕ್ರೋಧವನ್ನು, ದ್ವೇಷವನ್ನು ಬಿಡಲಿಕ್ಕೆ ಆಗಲಿಲ್ಲ, ಅದನ್ನು ದೇವರಲ್ಲೇ ಇಡು, ಶಿಶುಪಾಲನಿಗೆ ಸಿಕ್ಕ ಹಾಗೆ ಮುಕ್ತಿ ಸಿಗಬಹುದು ನಿನಗೆ. ಯಾವಾಗ ಇಂತಹ  ಭಾವಗಳನ್ನು ಬಿಡಲು ಸಾಧ್ಯವಾಗುವುದಿಲ್ಲವೋ ಅದನ್ನು ದೇವರಿಗೆ ಸಮರ್ಪಣೆ ಮಾಡು. ಆದರೆ ಬಿಡಬೇಕು, ಆಗದಿದ್ದರೆ ದೇವರಲ್ಲಿ ಇಡಬೇಕು. ಶಂಕರಾಚಾರ್ಯರ ಮಾತು, ಸಂಘವನ್ನು ಬಿಡು, ಅದು ಸಾಧ್ಯವಾಗದಿದ್ದರೆ ಸಜ್ಜನರಲ್ಲಿ ಸಂಘವನ್ನು ಮಾಡು. ಹಾಗಾಗಿ ನಾರದರು ತೀರ್ಮಾನಕ್ಕೆ ಬಂದರು ಮೋಹವು ಕೂಡ ಬೇಕಾಗುತ್ತದೆ. 



ಗೋಪಿಕೆಯ ತಲೆಯ ಮೇಲೆ ಮೊಸರು ಗಡಿಗೆ, ಹಾಲು ಇತ್ಯಾದಿ ಇದೆ. ಮಥುರೆಯ ಪೇಟೆಯಲ್ಲಿ ಅದೆಲ್ಲವನ್ನು ಮಾರಲು ಹೊರಟಿದ್ದಾಳೆ, ಹಾಗಾಗಿ ಹಾಲು ಬೇಕಾ, ಮೊಸರು ಬೇಕಾ ಎಂದು ಕೂಗಿ ಕರೆಯಬೇಕು ಅಲ್ಲವೇ? ಆದರೆ ಅವಳು ಕೃಷ್ಣನಲ್ಲಿ ಎಷ್ಟು ಮೋಹಿತಳಾಗಿದ್ದಳೆಂದರೆ, ಬಾಯ್ತೆರೆದರೆ ಕೃಷ್ಣ, ಮುರಾರಿ, ಗೋವಿಂದ ಎಂದು ಕರೆಯುತ್ತಿದ್ದಳು. ಈ ಮೋಹ ಬೇಕೋ ? ಬೇಡವೋ ? ಹಾಗಾಗಿ ಸರ್ವಥಾ ಮೋಹವನ್ನು ತ್ಯಾಜ್ಯ ಎಂದು ಹೇಳಲು ಸಾಧ್ಯವಿಲ್ಲ. ಮೋಹಕ್ಕೂ ಕೂಡ ಈ ಜಗತ್ತಿನಲ್ಲಿ ಒಂದು ಪಾತ್ರವಿದೆ, ಸಂದರ್ಭವಿದೆ.



ಹಾಗಾಗಿ ಸಮುದ್ರಮಂಥನದ ಸಂದರ್ಭದಲ್ಲಿ ಭಗವಂತ ಶ್ರೀಮನ್ನಾರಾಯಣ ಈ ತತ್ವವನ್ನು ಮನಸ್ಸಿಗೆ ತೆಗೆದುಕೊಳ್ಳುತ್ತಾನೆ. ಎಂತಹ ವಿಶೇಷ ಸಂದರ್ಭ, ದೇವ - ದಾನವರು ಆಜನ್ಮ ವೈರಿಗಳು, ಸಹಜವಾದ ಶತ್ರುತ್ವವಂತೆ, ಈ ಜಿಂಕೆ ಹಾಗೂ ಹುಲಿಗೆ ಆಜನ್ಮ ವೈರ, ಅವುಗಳಿಗೆ ಹೇಳಿಕೊಡಬೇಕೆಂದೇನಿಲ್ಲ, ನೈಸರ್ಗಿಕ ವೈರವಿದೆ. ವಿಜ್ಞಾನಿಗಳು ಒಂದು ಪ್ರಯೋಗ ಮಾಡಿದ್ದಾರೆ, ಹುಲಿಗೆ ಮೂರಾರು ತಲೆಮಾರುಗಳ ಕಾಲ ಜಿಂಕೆಯನ್ನು ತೋರಿಸದೆ ಇದ್ದರು ಕೂಡ, ಜಿಂಕೆಯನ್ನು ನೋಡಿದರೆ ಅದು ಕೂಡಲೆ ಜಿಂಕೆ ಮೇಲೆ ಹಾರುತ್ತದೆ, ಏಕೆಂದರೆ ಅದು ಸಹಜ ವೈರ. ಹೊಂದಾಣಿಕೆ ಮಾಡಿಕೊಂಡು ದೇವ ದಾನವರು ಸಮುದ್ರ ಮಂಥನ ಮಾಡುತ್ತಾರೆ. ಒಂದು ಒಳ್ಳೆ ಕೆಲಸ ಮಾಡಬೇಕಾದರೆ ಹೊಂದಾಣಿಕೆ ಮಾಡಿಕೊಳ್ಳಬೇಕು. ಸಂಘಟನೆಯ ಪಾಠ ಕೂಡ ಅದರಲ್ಲಿದೆ. ವಿಶ್ವದ ಒಳಿತಿಗೆ  ದೇವತೆಗಳು, ರಾಕ್ಷಸರು ಸೇರಿ ಸಮುದ್ರ ಮಂಥನ ಮಾಡುತ್ತಾರೆ, ಔಷಧಿ ಲತೆಗಳನ್ನು ತಂದು ಕ್ಷೀರ ಸಾಗರದಲ್ಲಿ ಹಾಕಿ ಮಂಥನ ಮಾಡಿದ್ದಾರೆ. ಹಾಗಾಗಿ ಅಲ್ಲಿ ಕಡೆಗೋಲು ಮಂದರ ಪರ್ವತ, ಅದಕ್ಕೆ ಆಧಾರ ಆದಿ ಕೂರ್ಮ. ಕಡೆಯುವ ಹಗ್ಗ ವಾಸುಕಿ, ಕಡೆಯುವವರು ದೇವ - ದಾನವರು. 



ಮಥನ ಮಾಡಿದಾಗ ಬಂದದ್ದು ಹಾಲಾಹಲ ವಿಷ, ಅದು ಸೃಷ್ಟಿಯಲ್ಲಿ ಇರುವ ಎಲ್ಲರನ್ನು ಸಂಹಾರ ಮಾಡಲು ಸಾಕು. ಆ ದಿನ ಶಿವನೊಬ್ಬನಿಲ್ಲದಿದ್ದರೆ ಪ್ರಪಂಚವೇ ಇಲ್ಲ. ಶಿವ ವಿಷವನ್ನು ಕುಡಿದು ಪ್ರಪಂಚವನ್ನು ಉಳಿಸುತ್ತಾನೆ. ಅದರ ಬಳಿಕ ಅನೇಕ ಸುವಸ್ತುಗಳು ಬಂದವು, ಕೊಟ್ಟ ಕೊನೆಯಲ್ಲಿ ಅಮೃತ ಬಂದಿರುವಂತದ್ದು. ಇಷ್ಟೆಲ್ಲಾ ಕಷ್ಟಪಟ್ಟು ಬಂದ ಅಮೃತವನ್ನು ಅಸುರರು ಅಪಹರಣ ಮಾಡಿದ್ದಾರೆ. ದೇವತೆಗಳು ಬಹಳ ಕಷ್ಟ ಪಟ್ಟಿದ್ದಾರೆ. ಯಾಕೆಂದರೆ ಈ ಐಡಿಯಾ ಯಾರದ್ದು ಎಂಬುದು ಮೊದಲ ಪ್ರಶ್ನೆ. ಯಾರಿಗೆ ಅದರ ಫಲ ಹೋಗಬೇಕು ಅಂದರೆ, ಅದು ಯಾರ ಐಡಿಯಾ ಆಗಿರುತ್ತದೆಯೋ ಅವರಿಗೆ ಸಲ್ಲಬೇಕು. ಸಮುದ್ರಮಥನ ಮಾಡಬೇಕು ಎನ್ನುವುದು ರಾಕ್ಷಸರ ಐಡಿಯಾ ಅಲ್ಲ, ದೇವತೆಗಳದ್ದು. ದೇವತೆಗಳಿಗೆ ಹರಿಯಿಂದ ಬಂದಿರುವಂತಹದ್ದು. ಹಾಗಾಗಿ ಅವರಿಗೆ ಫಲವಿಲ್ಲ, ಎನ್ನುವ ಪರಿಸ್ಥಿತಿ. ಸಮಸ್ಯೆಗಳು ಬಂದಾಗ ದೇವತೆಗಳಿಂದನೆ ಪರಿಹಾರವಾಗಿದ್ದು. ಉದಾಹರಣೆಗೆ, ಮಂದರ ಪರ್ವತವನ್ನು ಕ್ಷೀರ ಸಮುದ್ರದಲ್ಲಿ ಇಟ್ಟು ಕಡೆಯಬೇಕು ಎಂದು ಪ್ರಯತ್ನ, ಅದು ಮುಳುಗಿಯೇ ಹೋಯಿತು. ಆದಿ ಕೂರ್ಮನನ್ನು ಕರೆದವರು ಯಾರೆಂದರೆ ದೇವತೆಗಳು. ಇಷ್ಟೆಲ್ಲಾ ಇದ್ದರು ಕೂಡ ಅಮೃತವು ನ್ಯಾಯವಾಗಿ ದೇವತೆಗಳಿಗೆ ಸಿಗಬೇಕಾಗಿತ್ತು. ಮತ್ತೆ ಅವರು ಒಳ್ಳೆಯವರು, ಅವರಿಗೆ ಸಿಕ್ಕಿದರೆ ಪ್ರಪಂಚಕ್ಕೆಲ್ಲಾ ಒಳ್ಳೆಯದನ್ನು ಮಾಡುತ್ತಾರೆ. ಯಾವುದು ಒಳಿತೋ ಅದು ಶಾಶ್ವತವಾಗಬೇಕು  ಕೆಡುಕು ಶಾಶ್ವತವಾಗಬಾರದು. ಉದಾಹರಣೆಗೆ ರಾವಣ, ಪರಿಹಾರ ಉಂಟು, ಮನುಷ್ಯರಿಂದ ಸಾವಿದೆ. ಹಿರಣ್ಯಕಶಿಪು ಪರಿಹಾರ ಉಂಟು, ಅವನು ಶಾಶ್ವತನಲ್ಲ, ಹಗಲು, ರಾತ್ರಿ ಸೇರಿದ ಸಂಧ್ಯಾಕಾಲ, ನರ - ಮೃಗ ಸೇರಿದ ನೃಸಿಂಹ ರೂಪ, ಒಳಗೂ ಅಲ್ಲ, ಹೊರಗೂ ಅಲ್ಲದ ಹೊಸ್ತಿಲು, ಮೇಲು ಅಲ್ಲ, ಕೆಳಗೂ ಅಲ್ಲದ ಮಡಿಲು, ಆಯುಧವಲ್ಲದ ಉಗುರು, ಇದರಿಂದ ಸಾವುಂಟು ಅವನಿಗೆ. ಒಂದು ಪರಿಹಾರವಿದೆ. ಹಾಗಾಗಿ ಕೆಡುಕು ಶಾಶ್ವತ ಆಗಬಾರದು, ಒಳಿತು ಶಾಶ್ವತವಾಗಬೇಕು. 



ಆದರೆ ಇಲ್ಲಿ ಪರಿಸ್ಥಿತಿ ಬೇರೆಯಾಗಿದೆ, ರಾಕ್ಷಸರು ಧನ್ವಂತರಿಯಿಂದ ಅಮೃತವನ್ನು ಕಸಿದುಕೊಂಡು ತಾವೇ ಪಾನ ಮಾಡುವ ಗಡಿಬಿಡಿಯಲ್ಲಿದ್ದಾರೆ. ಯಾರು ಎಷ್ಟು ಪಾನ ಮಾಡಬೇಕು ಎನ್ನುವ ವಿಚಾರದಲ್ಲಿ ವಿಮರ್ಶೆಯಾಗುತ್ತಿತ್ತು. ಈ ಸಮಯದಲ್ಲಿ ದೇವತೆಗಳು ಕೈಚೆಲ್ಲಿ ಕುಳಿತಾಗ, ಶ್ರೀಮನ್ನಾರಾಯಣ ಸಮಸ್ತ ಲೋಕಗಳನ್ನು ರಕ್ಷಣೆ ಮಾಡುವವನು. ಅವನ ಮುಂದೆ ಪ್ರಶ್ನೆ ಇದೆ, ಪ್ರಪಂಚ ಉಳಿಯಬೇಕೋ, ಬೇಡವೋ? ರಾಕ್ಷಸರು ಶಾಶ್ವತರಾದರೆ ಪ್ರಪಂಚ ನಾಶವಾಗುತ್ತದೆ, ದೇವತೆಗಳು ಶಾಶ್ವತರಾದರೆ ಪ್ರಪಂಚ ಉಳಿಯುತ್ತದೆ. ಅಗ್ನಿ, ವರುಣ, ವಾಯು ಯಾವಾಗಲೂ ಬೇಕು. ಹಿರಣ್ಯಕಶಿಪು, ರಾವಣ, ಕಂಸ ಶಾಶ್ವತರಾಗಬೇಕಾ ಎಂದರೆ, ಬೇಡ. ಹಾಗಾಗಿ ವ್ಯವಸ್ಥೆಯ ವಿಧ್ವಂಸಕರು ಉಳಿಯಬಾರದು, ವ್ಯವಸ್ಥೆಯ ಸಂರಕ್ಷಕರು, ವ್ಯವಸ್ಥಾಪಕರು ಉಳಿಯಬೇಕು ಎನ್ನುವ ಸಂದರ್ಭ. ಅಮೃತವು ದೇವತೆಗಳಿಗೆ ಸಿಗಬೇಕು, ಹಾಗೆ ಮಾಡುವುದು ಹೇಗೆ? 


ಆ ಸರ್ವ ಲೋಕೈಕರಕ್ಷಕನು ಲಲಿತೆಯನ್ನು, ರಾಜರಾಜೇಶ್ವರಿಯನ್ನು, ತ್ರಿಪುರ ಸುಂದರಿಯನ್ನು ಅತ್ಯಂತ ಶ್ರೇಷ್ಠವಾದ ವಿಧಾನದಿಂದ, ಅಂತರಂಗದಲ್ಲಿಯೇ ಆರಾಧಿಸಿದನು. ಯಾರವಳು? ಎಂದರೆ ಸ್ವೈಕ್ಯ ರೂಪಿಣಿ; ಅವಳು ಬೇರೆಯಲ್ಲ ಹರಿ ಬೇರೆಯಲ್ಲ. ತನ್ನಿಂದ ಬೇರೆಯಲ್ಲದ ತನ್ನೊಳಗೆ ಒಂದಾಗಿರುವ ಲಲಿತಾತ್ರಿಪುರಸುಂದರಿಯನ್ನು, ಪರಾಭಟ್ಟಾರಿಕೆಯನ್ನು ಧ್ಯಾನಿಸಿದ, ಆರಾಧಿಸಿದ ಹರಿ. ಮೋಹವು ಮಾಯೆಯಲ್ಲಿ ಇರುವಂತಹುದು. ಮೋಹದ ಪರಮಾಶ್ರಯ ಯಾವುದು ಅಂದರೆ ಮಹಾಮಾಯೆ, ಆದಿಶಕ್ತಿ. ಸೃಷ್ಟಿಮೂಲಳು ಅವಳು. ಹಾಗಾಗಿ ಅವಳನ್ನು ಅವನು ಧ್ಯಾನ ಮಾಡುತ್ತಾನೆ. ರಾಜರಾಜೇಶ್ವರಿ ಮತ್ತು ಶ್ರೀಮನ್ನಾರಾಯಣರಲ್ಲಿ ಐಕ್ಯವುಂಟು. ಒಂದೇ ನಾಣ್ಯದ ಎರಡು ಮುಖಗಳು, ಹೊರತು ಬೇರೆಯಲ್ಲ. ಯಾವ ಗ್ರಂಥದಲ್ಲಿಯೂ ಇದನ್ನು ನಿರೂಪಿಸಿಲ್ಲ. ವ್ಯಾಖ್ಯಾನಗಳಲ್ಲಿ ಈ ಬಗ್ಗೆ ವಿವರಣೆಯಿಲ್ಲ. ಆದರೆ ಬಗೆದು ನೋಡಿದರೆ, ಇವೆರಡೂ ಒಂದೇ ಎಂದು ಗೋಚರವಾಗುತ್ತದೆ. ಅದಕ್ಕೆ ಆಧಾರಗಳೂ ಸಿಗುತ್ತವೆ. ಗ್ರಂಥಾಧಾರ ಬೇಕೆಂದರೆ ಲಲಿತೋಪಾಖ್ಯಾನದಲ್ಲಿ ಹೇಳಲಾಗಿದೆ “ಲಲಿತಾಂ ಸ್ವೈಕ್ಯ ರೂಪಿಣಿ”. ಹಾಗಾಗಿಯೇ ಕಾಮಾಕ್ಷಿಯ ದರ್ಶನ ಮಾಡಿದ ಅಗಸ್ತ್ಯರಿಗೆ ವಿಷ್ಣುವಿನ ಕುರಿತಾಗಿ ತಪಸ್ಸು ಮಾಡುವ ಪ್ರೇರಣೆ;  ತಪಸ್ಸು ಮಾಡಿದಾಗ ವಿಷ್ಣುವು ಹಯಗ್ರೀವ ರೂಪದಲ್ಲಿ ಪ್ರತ್ಯಕ್ಷನಾಗುತ್ತಾನೆ ಮತ್ತು ಆತ ಉಪದೇಶ ಮಾಡಿದ್ದು ಶ್ರೀವಿದ್ಯೆಯನ್ನು. 

’ಕರಾಂಗುಲಿ ನಖೋತ್ಪನ್ನ ನಾರಾಯಣ ದಶಾಕೃತಿಃ’ ನಾರಾಯಣನ ಹತ್ತೂ ಅವತಾರಗಳು ಲಲಿತಾತ್ರಿಪುರಸುಂದರಿಯಿಂದ ಬಂದಿವೆ ಎಂದರ್ಥ. ಏಕೆಂದರೆ, ತೋರಲು ರೂಪ ಬೇರೆಯಾದರೂ ಮೂಲತಃ ಒಂದೇ ತತ್ವವದು.



ಯಾಚಕನೊಬ್ಬ ಚಕ್ರವರ್ತಿಯಲ್ಲಿ ಯಾಚಿಸುವ ಸಂದರ್ಭ. ಆತ ಒಂದು ಶ್ಲೋಕ ಹೇಳುತ್ತಾನೆ- “ಅರ್ಧಂ ದಾನವವೈರಿಣಾ ಗಿರಿಜಯಾಪ್ಯರ್ಧಂ ಶಿವಸ್ಯಾರ್ಧಮ್”. ಶಿವನ ಒಂದು ಅರ್ಧವನ್ನು ವಿಷ್ಣುವೂ ಮತ್ತರ್ಧವನ್ನು ಗಿರಿಜೆಯೂ ತೆಗೆದುಕೊಂಡಾಗ; ಲೋಕದಲ್ಲಿ ಶಿವನೇ ಇಲ್ಲವೆಂಬಂಥ ಸಂದರ್ಭದಲ್ಲಿ, ಶಿವ ತೊಟ್ಟ ವಸ್ತುಗಳೆಲ್ಲ ಬೇರೆ ಬೇರೆ ಕಡೆ ಹೋದವಂತೆ. ಗಂಗೆ ಹರಿದು ಸಮುದ್ರ ಸೇರಿದಳು, ಚಂದ್ರಕಲೆ ಆಕಾಶ ಸೇರಿತು, ಸರ್ಪಗಳು ನಾಗಲೋಕಕ್ಕೆ ಹೋದವು. ಉಳಿದಿದ್ದು ಸರ್ವಜ್ಞತ್ವ ಮತ್ತು ಈಶ್ವರತ್ವ. ಯಾಚಕ ಹೇಳುತ್ತಾನೆ, “ಇವೆರಡೂ ನಿಮ್ಮಲ್ಲಿಗೆ ಬಂದಿವೆ ಮತ್ತು ಶಿವನ ಕಪಾಲ ಅಂದರೆ ಭಿಕ್ಷಾಪಾತ್ರೆ ನನ್ನ ಕೈಯ್ಯಲ್ಲಿ ಬಂದಿದೆ". “ಎಲ್ಲ ತಿಳಿದ, ಎಲ್ಲದರ ಮೇಲೂ ಈಶತ್ವ ಹೊಂದಿರುವ ದೊರೆಯೇ ಏನಾದರೂ ನೀಡು” ಎಂದು ಭಿಕ್ಷುಕ ಸ್ವಾರಸ್ಯಕರವಾಗಿ ರಾಜನಲ್ಲಿ ಯಾಚಿಸಿದನು. ಇಲ್ಲಿ ಜನಜನಿತವಾಗಿರುವ ತತ್ವವನ್ನು ಗಮನಿಸಬಹುದು. ಅದೇನೆಂದರೆ ಪಾರ್ವತಿ ಹೇಗೆ ಶಿವನ ಅರ್ಧ ಭಾಗವೋ,  ಹಾಗೆಯೇ ವಿಷ್ಣುವೂ ಶಿವನ ಅರ್ಧ ಭಾಗ ಎಂದು. 



ನಮ್ಮ ಮಸ್ತಿಷ್ಕದಲ್ಲಿರುವ ಸಹಸ್ರಾರ ಚಕ್ರದಲ್ಲಿ ಎರಡು ಭಾಗವಿದೆ, ಅರ್ಧವನ್ನು ಕೈಲಾಸವೆಂದೂ ಮತ್ತರ್ಧವನ್ನು ವೈಕುಂಠವೆಂದೂ ಭಾವಿಸಲಾಗುತ್ತದೆ. ಎಡಭಾಗದ ಮೆದುಳು ಬಲಭಾಗದ ಶರೀರವನ್ನು ನಿಯಂತ್ರಣ ಮಾಡುತ್ತದೆ ಮತ್ತು ಬಲಭಾಗದ ಮೆದುಳು ಎಡಭಾಗದ ಶರೀರವನ್ನು. ಹರಿಹರರಲ್ಲಿ ಎಂಥಾ ಅದ್ವೈತವಿದೆ, ಸಮನ್ವಯವಿದೆ. ಇದರಿಂದ ಏನು ತಿಳಿಯಬಹುದೆಂದರೆ ಹೇಗೆ ಶಿವ-ಶಕ್ತಿ ಎಂದು ಹೇಳುತ್ತೇವೋ ಹಾಗೆಯೇ ಶಿವ ಮತ್ತು ವಿಷ್ಣು ಎಂದು ಹೇಳಬಹುದು. ವಿಷ್ಣುವನ್ನು ಶಕ್ತಿರೂಪನೆಂದು ಹೇಳಬಹುದು. 



ವಿಷ್ಣುವಿನ ಮೋಹಿನಿ ರೂಪವು ಇದಕ್ಕೆ ಇನ್ನೊಂದು ನಿದರ್ಶನ. “ಭಗವಾನಪಿ ಯೋಗೀಂದ್ರಃ ಸಮಾರಾಧ್ಯ ಮಹೇಶ್ವರೀಂ, ತದೇಕ ಧ್ಯಾನಯೋಗೇನ ತದ್ರೂಪಃ ಸಮಜಾಯತ” ಹರಿಯು ಮೋಹಿನಿಯಾದ. ಹೇಗೆಂದರೆ, ಮೋಹಿನಿಯನ್ನು ಧ್ಯಾನ ಮಾಡಿದ. ಧ್ಯಾನವು ನಿರಂತರವಾದಾಗ, ಯಾವುದನ್ನಾದರೂ ಅತಿಶಯವಾಗಿ ಭಾವಿಸಿದಾಗ, ಅಲ್ಲಿ ಅದ್ವೈತ ಬಂದುಬಿಡುತ್ತದೆ.  ದೇವ ಸ್ಮರಣೆ ನಿರತ ಭಕ್ತರು ಹೇಗೆ ದೇವರ ಸಾಲೋಕ್ಯ, ಸಾಮೀಪ್ಯ ಮತ್ತು ಸಾರೋಪ್ಯ ಅಂದರೆ ದೇವರ ರೂಪವನ್ನೇ ಪಡೆಯುವರೋ ಹಾಗೆಯೇ ಮಹಾವಿಷ್ಣುವು ದೇವಿಯನ್ನು ತದೇಕಚಿತ್ತದಿಂದ ಧ್ಯಾನಿಸಿ ಮೋಹಿನಿಯ ರೂಪವನ್ನೇ ತಾಳಿದನು. ಹರಿಹರಾದ್ವೈತದಂತೆಯೇ  ಹರಿ-ಶಕ್ತಿಗಳ ಅದ್ವೈತವನ್ನು ಈ ಸಂದರ್ಭಗಳು ವರ್ಣಿಸಿವೆ. ನೆನಪಿನಲ್ಲಿಟ್ಟುಕೊಳ್ಳಬೇಕಾದ ಸಂಗತಿಯೇನೆಂದರೆ, ರೂಪ ಹಲವು ಆದರೆ ತತ್ವವೊಂದೇ. ಮಿಠಾಯಿಯನ್ನು ನಾನಾ ಆಕಾರದಲ್ಲಿ ತಯಾರಿಸಬಹುದು, ಆದರೆ ಅದರ ಸ್ವಾದ ಒಂದೇ, ಮೂಲದ್ರವ್ಯಗಳು ಬೇರೆ ಬೇರೆಯಲ್ಲ. ಶ್ರುತಿಗಳು ಹೇಳಿರುವಂತೆ “ಏಕಂ ಸತ್ ವಿಪ್ರಾಃ ಬಹುಧಾ ವದಂತಿ”. 


 

“ಸರ್ವಸಮ್ಮೋಹಿನೀ ಸಾ ತು ಸಾಕ್ಷಾತ್ ಶೃಂಗಾರನಾಯಿಕಾ”. ಮೋಹಿನಿಯ ಮೋಹಕ ರೂಪ ಹೇಗಿತ್ತೆಂದರೆ, ಯಾರು ನೋಡಿದರೂ ಸಹ ಸಮ್ಮೋಹಕ್ಕೆ ಒಳಗಾಗುತ್ತಾರೆ, ಆ ರೂಪಕ್ಕೆ ಅಧೀನರಾಗುತ್ತಾರೆ, ವಶವಾಗುತ್ತಾರೆ. ಧರ್ಮರಕ್ಷಣೆಯ ಕಾರ್ಯ ಎಷ್ಟೋ ಬಾರಿ ರೌದ್ರರಸದಿಂದ, ಭೀಭತ್ಸ ರೂಪದಿಂದ ಆಗುವುದುವುಂಟು. ಆದರೆ ಇಲ್ಲಿ ಶೃಂಗಾರ ರಸವೊಂದೇ. “ಸರ್ವ ಶೃಂಗಾರ ವೇಷಾಢ್ಯಾ ಸರ್ವಾಭರಣ ಭೂಷಿತಾ”. ಸೃಷ್ಟಿಯ ಸರ್ವೋಚ್ಛವಾದ ಎಲ್ಲ ಆಭೂಷಣಗಳೂ, ಅಲಂಕಾರಗಳೂ ಆ ಮೋಹಿನಿಯನ್ನು ಅಲಂಕರಿಸಿದ್ದವು. ಹೀಗೆ ಅಲಂಕೃತಳಾದ ಮೋಹಿನಿ ರಣಾಂಗಣಕ್ಕೆ ಬರುತ್ತಾಳೆ.



ರಣಾಂಗಣಕ್ಕೆ ಮೋಹಿನಿಯ ಆಗಮನವಾಗುತ್ತಿದ್ದ ಹಾಗೆಯೇ ಯುದ್ಧ ನಿಂತು ಹೋಯಿತು. ಎಲ್ಲರೂ ಆಕೆಯನ್ನು ವೀಕ್ಷಿಸುವುದರಲ್ಲಿ ಆಸಕ್ತರು. ಅಂತಹ ರೂಪವದು. “ಸುರಾಣಾಂ ಅಸುರಾಣಾಂ ಚ ನಿವಾರ್ಯ ರಣಮದ್ಭುತಮ್”. ಯುದ್ಧ ನಿಲ್ಲಿಸಿ, ಆಕೆಯ ಕಟಾಕ್ಷ ಬಿದ್ದಿದ್ದು ರಾಕ್ಷಸರ ಕಡೆಗೆ. ಮಿಂಚಿನ ಸಂಚಾರವುಂಟಾಯಿತು ರಾಕ್ಷಸರ ಮಧ್ಯೆ. ಒಂದು ಅಸ್ತ್ರವನ್ನು ಪ್ರಯೋಗ ಮಾಡುತ್ತಾಳೆ ಮೋಹಿನಿ - “ಮಂದಸ್ಮಿತೇನ ದೈತೇಯಾನ್ ಮೋಹಯಂತೀ ಜಗಾದಹಾ”. ಯಾವ ಅಸ್ತ್ರವೆಂದರೆ- ಮಂದಸ್ಮಿತ, ಮೋಹಿನಿ ಮೆಲುನಗುವನ್ನು ನಕ್ಕಳು. ರಾಕ್ಷಸರು ಅಷ್ಟಕ್ಕೇ ಆಕೆಯ ವಶವಾದರು. ಆಕೆ ರಾಕ್ಷಸರನ್ನು ಉದ್ದೇಶಿಸಿ ಹೇಳುತ್ತಾಳೆ – “ಯಾಕೆ ಸುಮ್ಮನೆ ಯುದ್ಧ ಮಾಡುತ್ತೀರಿ, ಅಮೃತಕ್ಕಾಗಿ ಕುಲನಾಶವಾಗುತ್ತಿದೆ. ನಾನು ಹಂಚಿಕೊಡುತ್ತೇನೆ ಅಮೃತವನ್ನು. ಒಂದು ಪಂಕ್ತಿಯಲ್ಲಿ ರಾಕ್ಷಸರು ಕುಳಿತುಕೊಳ್ಳಿ, ಮತ್ತೊಂದು ಪಂಕ್ತಿಯಲ್ಲಿ ದೇವತೆಗಳು. ಮತ್ತು ಅಮೃತಕಲಶವನ್ನು ನನ್ನ ಕೈಗೆ ಕೊಡಿ.” ಅಮೃತಕಲಶ ಮೋಹಿನಿಯ ಕೈ ಸೇರಿತು. ಮೋಹದ ಪ್ರಭಾವವಿದು, ಶಕ್ತಿಯಿದು. ಇಲ್ಲಿ ಮೋಹವೆಂಬ ಪರಮಾಯುಧ ಕೆಟ್ಟದ್ದಲ್ಲ ಏಕೆಂದರೆ ಅದು ಜಗದಂಬಿಕೆಯ, ತ್ರಿಪುರಸುಂದರಿಯ ಕೈಯ್ಯಲ್ಲಿದೆ. ಮುಂದಾಗುವುದೆಲ್ಲಾ ಒಳ್ಳೆಯದೇ ಆಗಲಿದೆ.




ಧನ್ವಂತರಿಯೂ ಮಹಾವಿಷ್ಣುವಿನ ರೂಪವೇ. ಅಮೃತಕಲಶವನ್ನು ಹಿಡಿದು ಎದ್ದು ಬಂದ  ಧನ್ವಂತರಿಯು ವಿಷ್ಣುವಿನ ಅವತಾರ. ಅಲ್ಲಿಂದ ರಾಕ್ಷಸರು ಅದನ್ನು ಕಿತ್ತುಕೊಂಡರು. ಆದರೆ ಅವನೇ ಮೋಹಿನಿಯ ರೂಪವಾಗಿ ಬಂದಾಗ ತಾವಾಗೇ ಕೊಟ್ಟರು. ಒಂದೂ ಮರುಮಾತಾಡದೇ ರಾಕ್ಷಸರು ಅಮೃತಕಲಶವನ್ನು ಮೋಹಿನಿ ಕೈಯಲ್ಲಿ ಕೊಟ್ಟರಂತೆ.



ರಾಕ್ಷಸರಿಗೆ ನಮಗಿಂತ ಭಾವಗಳು ಹೆಚ್ಚು. ಈ ಕಾಮ, ಕ್ರೋಧ, ಲೋಭ, ಮೋಹ, ಮದ-ಮತ್ಸರಗಳು ಹೆಚ್ಚಾದಾಗಲೇ ರಾಕ್ಷಸ ಎಂದು ಹೆಸರು ಬರುವುದು. ಇವೆಲ್ಲಾ ಮಿತಿ ಮೀರಿದರೆ ಮನುಷ್ಯನೂ ರಾಕ್ಷಸನೇ. ಹಾಗಾಗಿ ಅವರೇ ಬಿಟ್ಟುಕೊಟ್ಟರು ಸುಲಭವಾಗಿ ಅಂದರೆ ನಮ್ಮ ಪಾಡೇನು? ಅಂದರೆ ಮೋಹದ ಪ್ರಭಾವ ಎಂಥಹದ್ದು? ಈ ಲೋಭವೆಲ್ಲಾ ಅಧಿಕ  ರಾಕ್ಷಸಕರಿಗೆ‌. ಅಂತವರೇ ಹೇಳಿದ್ದೆಲ್ಲವನ್ನೂ ಕೇಳುತ್ತಾರೆ ಅಂದರೆ ಅದು ಮೋಹ ಎಂಬ ಬ್ರಹ್ಮಾಸ್ತ್ರದಿಂದ ಮಾತ್ರ ಸಾಧ್ಯ. ಎರಡು ಪಂಕ್ತಿಗಳು, ಒಂದು ದೇವತೆಗಳ ಪಂಕ್ತಿ ಇನ್ನೊಂದು ರಾಕ್ಷಸರ ಪಂಕ್ತಿ ನಡುವಿನಲ್ಲಿ ಮೋಹಿನಿ. ಈ ಮಧ್ಯಸ್ಥರಿರುತ್ತರಲ್ಲಾ, ನ್ಯಾಯ ಒದುಗಿಸಿಕೊಡುವವರು‌ ಅವರು ಒಂದಲ್ಲಾ ಒಂದು ಕಡೆಗೆ ಒಲಿದೇ ಒಲಿಯುತ್ತಾರೆ‌. ನಿರ್ಮಾಧ್ಯಸ್ಥ್ಯ ಅಂದರೆ ನಿಷ್ಪಕ್ಷಪಾತವಾಗಿ ಆಕಡೆಯೂ ಇಲ್ಲ ಈಕಡೆಯೂ ಇಲ್ಲ ಎನ್ನುವ ಹಾಗೆ ಇರುವವರು ತುಂಬಾ ಅಪರೂಪ. ಸಾಮಾನ್ಯವಾಗಿ ಅವರು ತಮ್ಮ ಒಲವನ್ನು ಪ್ರಕಟಪಡಿಸುತ್ತಾರೆ. ತಪ್ಪಲ್ಲ, ಆದರೆ ಎಲ್ಲಿ ಒಳಿತಿದೆ ಅಲ್ಲಿ ನಮ್ಮ ಒಲವು ಪ್ರಕಟವಾಗಬೇಕು ಅದು ಸರಿ. ಇಂತಹ ಸಂದರ್ಭ ಬಂದಾಗ ಎಲ್ಲಿ ಒಳಿತಿದೆ, ಶುಭವಿದೆ, ಆ ಕಡೆಗೆ ನಾವು ಒಲಿಯಬೇಕು. ಹಾಗಾಗಿ ಇಬ್ಬರ ಮಧ್ಯಸ್ಥ ಸ್ಥಾನ ಮೋಹಿನಿಗೆ ಇರುವಂತಹದ್ದು. ಆಕೆ ದೇವತೆಗಳ ಕಡೆಗೆ ಒಲಿಯುತ್ತಾಳೆ. ಮೋಹದಿಂದ ರಾಕ್ಷಸರನ್ನು ವಶೀಕರಿಸಿ ದೇವತೆಗಳಿಗೆ ಕೊಡಬೇಕಾಗಿರುವುದನ್ನು ಕೊಡುತ್ತಾಳೆ. ಇಂತವರು ಪ್ರಪಂಚದಲ್ಲಿ ಯಾವಾಗಲೂ ಬೇಕಾಗುತ್ತಾರೆ‌. ಇವರ ಅಗತ್ಯವಿಲ್ಲ ಎನ್ನುವಂತಹ ಕಾಲವೇ ಇಲ್ಲ. ಸರ್ವಕಾಲಗಳಲ್ಲಿ,  ಸರ್ವದೇಶಗಳಲ್ಲಿ ಇಂಥವರ ಅಗತ್ಯ ಪ್ರಪಂಚಕ್ಕೆ ಬೇಕಾಗುತ್ತದೆ‌‌. ಮೋಹಿನಿಯು ಮಾಡಿದ್ದು ಇದನ್ನೇ. ರಾಕ್ಷಸರ ಕಡೆಗೆ ಮುಗುಳುನಗೆ, ದೇವತೆಯರ ಕಡೆಗೆ ಅಮೃತ.  ದೇವತೆಯರ ಪಂಕ್ತಿಗೆ ಅಮೃತವನ್ನು ಬಡಿಸುತ್ತಿದ್ದರೂ ರಾಕ್ಷಸರು ಒಂದೂ ಮಾತನಾಡಲಿಲ್ಲ ಯಾಕೆಂದರೆ ಮೋಹ ಕೆಲಸ ಮಾಡುತ್ತಿದೆ‌. ಮೋಹಿನಿಗೆ ಬೇಸರವಾಗುವಂತೆ  ನಡೆದುಕೊಳ್ಳಲು ರಾಕ್ಷಸರು ಸಿದ್ಧವಿರಲಿಲ್ಲ. ಅಮೃತ ಹೋದರೆ ಹೋಯಿತು. ಹೀಗೇ ರಾಜ್ಯಗಳು, ಅರಸುತನಗಳೆಲ್ಲಾ ಹೆಸರಿಲ್ಲದೆ ಮರೆಯಾಗಿದ್ದು ಈ ದಾರಿಯಲ್ಲೇ.  ಮೋಹಿನಿ ದೇವತೆಗಳ ಕಡೆ ಅಮೃತವನ್ನು ಬಡಿಸುತ್ತಿದ್ದಾಳೆ, ಅವಳ ಕೈ ಕಂಕಣದ 'ಕಣ ಕಣ' ಶಬ್ದ ಅದು ರಾಕ್ಷಸರಿಗೆ ಬಹಳ ಹಿತವನ್ನುಂಟುಮಾಡುತ್ತಿತ್ತು. ಹಾಗೆ ರಾಕ್ಷಸರಿಗೆ ಕಂಕಣದ ಶಬ್ದ ದೇವತೆಗಳಿಗೆ ಅಮೃತ.



ಎಂತಹ ವಿಚಿತ್ರ ಅಂದರೆ ಅಷ್ಟು ವ್ಯವಸ್ಥಿತವಾಗಿ ಕಾರ್ಯಕ್ರಮ ನಡೆಯುತ್ತಿದೆ ಒಬ್ಬ ರಾಕ್ಷಸ ದೇವತೆಯ ರೂಪ ತಾಳಿ ಕುಳಿತಿದ್ದ ಪಂಕ್ತಿಯಲ್ಲಿ. ಸ್ವರ್ಭಾನು ಎಂದು ಆತನ ಹೆಸರು, ರಾಹು ಎಂದು ಕರೆಯುತ್ತೇವೆ‌. ಎಲ್ಲರೂ ಮೋಹಕ್ಕೆ ಒಳಗಾದರೂ ಆತನೊಬ್ಬ ಮೋಹಕ್ಕೆ ಒಳಗಾಗಿಲ್ಲ. ಒಂದು ವಿಶೇಷವಿದೆ ಅವನಲ್ಲಿ ‌ಆದರೆ ಕಪಟ ಬುದ್ದಿಯೂ ಇದೆ‌. ಅವನಿಗೆ ಗೊತ್ತಾಗಿದೆ ಅಮೃತ ದೇವತೆಗಳಿಗೆ ಸಿಗುತ್ತದೆ ನಮಗೆ ಸಿಗುವುದಿಲ್ಲ ಎಂದು. ಹಾಗಾಗಿ ದೇವತೆಗಳ ಪಂಕ್ತಿಯಲ್ಲಿ ಕುಳಿತದ್ದು‌. ಯಾರಿಗೂ ಹೇಳುವುದಿಲ್ಲ, ತನ್ನವರಿಗೂ ಸಿಗಬಾರದು ತನಗೆ ಮಾತ್ರ ಸಿಗಬೇಕು ಎಂಬ ಬುದ್ಧಿ ಅವನದು, ಅದು ರಾಕ್ಷಸರ ಬುದ್ಧಿ. ಹಾಗೆ ಸ್ವರ್ಭಾನುವಿಗೆ ಅಮೃತ ಸಿಕ್ಕಿದೆ. ಆದರೆ ತನಗೆ ಮಾತ್ರ ಎಂಬ ಕಪಟ ಬುದ್ಧಿ ಹಾಗೆ ಇದೆ. ತನಗೆ ತನಗೆ ಎಂದು ಯಾವತ್ತೂ ಬರಬಾರದು, ಅದು ದಾನವ ಗುಣ. ಆದರೆ ಎಷ್ಟು ಕಾಲ ಇದನ್ನು ಗುಟ್ಟಾಗಿಡಲು ಸಾಧ್ಯ? ಎಲ್ಲಾ ಪಾಪವೂ ಒಂದಲ್ಲಾ ಒಂದು ದಿನ ಹೊರಗೆ ಬರಲೇಬೇಕು. ಸೂರ್ಯ ಚಂದ್ರರು ಮೋಹಿನಿಗೆ ಸೂಚನೆ ಕೊಡುತ್ತಾರೆ ಅದು ದೇವತೆ ಅಲ್ಲ ರಾಕ್ಷಸ ಎಂದು.



"ದಿಶಂತಿ ಕ್ರಮಶಸ್ತತ್ರ ಚಂದ್ರಭಾಸ್ಕರ ಸೂಚಿತಮ್|

ಧರ್ಭೀಮುಖೇನಜಿಚ್ಛೇದ  ಸೈಹ್ಮಿಕೇಯಂತು ಮಧ್ಯಗಂ||"

ಸಿಂಹಿಕೆಯ ಮಗ ಸೈಹ್ಮಿಕೇಯ ಎಂದು ಕರೆಯುತ್ತಾರೆ ರಾಹುವನ್ನು. ದೇವತೆಗಳ ಮಧ್ಯೆ ಕುಳಿತಿದ್ದಾನೆ‌ ಅವನು. ಸೂರ್ಯಚಂದ್ರರ ಸೂಚನೆಯನ್ನು ಅರ್ಥೈಸಿಕೊಂಡ ಮೋಹಿನಿಯು ತನ್ನ ರೂಪವನ್ನು ಬದಲಿಸುವಂತಿಲ್ಲ. ಅಮೃತವನ್ನು ರಾಕ್ಷಸ ಸ್ವಲ್ಪ ಕುಡಿದಾಗಿದೆ ಆಗ ಮೋಹಿನಿ ತನ್ನ ರೂಪವನ್ನು ಬಿಡದೇ, ಸ್ವಾರಸ್ಯದಿಂದ ಬಡಿಸುವಾಗಲೇ ಆತನ ತಲೆ ಕಡಿದಳು. ಮೋಹಿನಿಗೆ ಸೌಟಿನಿಂದ ಅಮೃತವನ್ನು ಬಡಿಸಲಿಕ್ಕೂ ಬರುತ್ತದೆ ಹಾಗೆ ಅದೇ ಸೌಟಿನಿಂದ ತಲೆ ಕಡಿಯಲೂ ಬರುತ್ತದೆ‌. ಆದರೆ ತಲೆಯ ಭಾಗಕ್ಕೆ ಅಮೃತ ಸಿಕ್ಕಿದ್ದರಿಂದ ರಾಹು ಆಕಾಶಕ್ಕೆ ಹಾರಿ ಹೋದನಂತೆ. ಗ್ರಹಗಳಲ್ಲಿ ಒಬ್ಬನಾಗಿ ಈ ದೇವ ವರ್ಗದ ಕಾರ್ಯವನ್ನೇ ಮಾಡುವಂತಾಯಿತು.



ಇಷ್ಟೆಲ್ಲಾ ಆದರೂ ರಾಕ್ಷಸರು ಮೋಹಿನಿ ಬಳಿ ಆತನ ತಲೆ ಯಾಕೆ ಕಡಿದೆ ಎಂದು ಕೇಳಲಿಲ್ಲ. ಮೋಹಕ್ಕೆ ಒಳಗಾದರೆ ಸ್ವರವೇ ಹೋಗುತ್ತದೆ‌. ನಿಮಗೆ ತಪ್ಪು ಎಂದು ಗೊತ್ತಾಗುವುದಕ್ಕೂ ಸಾಧ್ಯವಿಲ್ಲ, ಒಂದು ವೇಳೆ ತಪ್ಪು ಎಂದು ಗೊತ್ತಾದರೂ ಸ್ವರ ಹೊರಹೊಮ್ಮುವುದಿಲ್ಲ. ಹಣದ ವ್ಯಾಮೋಹ, ಸ್ತ್ರೀವ್ಯಾಮೋಹ, ಪುರುಷವ್ಯಾಮೋಹ ಯಾವುದೇ ವ್ಯಾಮೋಹವಾಗಲಿ ಅಲ್ಲಿ ಮೊದಲು ಹೋಗುವುದು ವಿವೇಕ‌.



ದೇವತೆಗಳ ಪಂಕ್ತಿ ಮುಗಿಯಿತು, ಅಮೃತ ಪಾತ್ರೆ ಖಾಲಿಯಾಯಿತು‌‌. ಖಾಲಿ ಪಾತ್ರೆಯನ್ನು ರಾಕ್ಷಸರ ಮುಂದಿಟ್ಟು ಮಾಯವಾದಳು‌.  ಮೋಹ ಕೇವಲ ಕೆಟ್ಟದಲ್ಲ. ಸ್ವತಃ ಭಗವಂತನೇ ಮೋಹವನ್ನು ಪ್ರಯೋಗ ಮಾಡುತ್ತಾನೆ. ಹಾಗಾಗಿ ಸಪ್ತಶತಿಯಲ್ಲಿ ಆರಂಭದಲ್ಲಿಯೇ ಆ ಉಲ್ಲೇಖ. ಸಪ್ತಶತಿಯಲ್ಲಿ, ರಾಜನಿಗೂ ಮತ್ತು ವೈಶ್ಯನಿಗೂ ಋಷಿಗಳು ದೇವತೆಯ ತತ್ತ್ವವನ್ನು ನಿರೂಪಣೆ ಮಾಡುವಾಗ ಅಲ್ಲಿಂದಲೇ ಪ್ರಾರಂಭ ಮಾಡುವಂತಹದ್ದು. ಮಹಾಮಾಯೆ ಅವಳು, ಅವಳಿಂದಲೇ ಪ್ರಪಂಚ ನಡೆಯುತ್ತಿದೆ. ಹಾಗಾಗಿ ಮೋಹ ಕೆಡುಕಲ್ಲ.


               

ಹೀಗೊಂದು ಪಂಚಾಯಿತಿ, ನ್ಯಾಯ ನಿರ್ಣಯ ಮೋಹಿನಿ ಮಾಡಿದ್ದು. ಆಚೆಯವರಿಗೆ ಒಂದು ಬಿಂದುವೂ ಇಲ್ಲ, ಈಚೆಯವರಿಗೆ ಎಲ್ಲವೂ. ಅಷ್ಟು ಚಂದವಾಗಿ ಪಾಲು ಪಟ್ಟಿ ಆಗಿದೆ‌. ಮೋಹಿನಿ ಶಾಶ್ವತವಾಗಿರುವಂತದ್ದಲ್ಲ. ಇಂದ್ರಜಾಲ, ಮಹೇಂದ್ರಜಾಲದಂತೆ. ಒಂದು ವೇಳೆ ಮೋಹವೇ ತ್ಯಾಜ್ಯ ಎಂದಾಗಿದ್ದರೆ 64 ಕಲೆಗಳಲ್ಲಿ ಇಂದ್ರಜಾಲ, ಮಾಹೇಂದ್ರಜಾಲ ಇರುವುದಕ್ಕೆ ಸಾಧ್ಯವಿರಲಿಲ್ಲ. ಮೋಹಿನಿ ಹೊರಟು ಹೋದ ಮೇಲೆ ರಾಕ್ಷಸರಿಗೆ ತಾವು ಮೋಸ ಹೋಗಿದ್ದೇವೆ ಎಂದು ಎಚ್ಚರವಾಯಿತು.‌ ಆದರೆ ಮಾಡುವುದೇನು? ಅಮೃತ ಖಾಲಿ ಆಗಿದೆ. ನಂತರ ರಾಕ್ಷಸರು ದೇವತೆಗಳ ವಿರುದ್ಧ ಯುದ್ಧ ಮಾಡಿದರು‌. ಮೊದಲು ಮಾಡಿದ್ದು ಯುದ್ಧವೇ, ಮಧ್ಯದಲ್ಲಿ ಬರಿ ಮಾಯಾಜಾಲವೇ, ಮಸುಕು, ಮಂ‌ಕು. ಯುದ್ಧವನ್ನು ಮುಂದುವರಿಸಿದರು. ವ್ಯತ್ಯಾಸ ಏನೆಂದರೆ ಆಗ ದೇವತೆಗಳು ದುರ್ಬಲರಾಗಿದ್ದರು‌ ಆದರೆ ಈಗ ಅಮೃತವನ್ನು ಸ್ವೀಕರಿಸಿ ಅತಿಶಯ ಬಲಶಾಲಿಗಳಾಗಿದ್ದಾರೆ ಮತ್ತು ಸಾವಿಲ್ಲದವರಾಗಿದ್ದಾರೆ. ಹಾಗಾಗಿ ರಾಕ್ಷಸರಿಗೆ ದೊಡ್ಡ ಸೋಲುಂಟಾಯಿತು. ಸ್ವರ್ಗವನ್ನು ಬಿಟ್ಟು ಮತ್ತೆ ಪಾತಾಳಕ್ಕೆ ಸೇರುವಂತಾಯಿತು ಎಂಬುದು ಸಮುದ್ರಮಥನದ ಕಥೆ.

 


ಇದು ದೇವಿಯ ಎರಡನೇ ರೂಪ. ಮೊದಲ ರೂಪ ಪ್ರಕೃತಿ. ಕಾಣುವ, ಕೇಳುವ ಈ ಪ್ರಪಂಚವೆಲ್ಲವೂ ಆಕೆಯ ರೂಪ. ಎರಡನೇ ರೂಪವೇ ಸಮುದ್ರಮಥನದಲ್ಲಿ ಪ್ರಕಟವಾಗಿರುವಂತಹ ವಿಷ್ಣುವನ್ನೇ ಮೋಹಿನಿಯಾಗಿ ಪರಿವರ್ತನೆ ಮಾಡಿರುವಂತಹ ರೂಪ, ವಿಷ್ಣುವಿನೊಡನೆ ಐಕ್ಯ ಸಾಧನೆ ಮಾಡಿರುವಂತಹ ರೂಪ ಎಂದು ಲಲಿತೋಪಾಖ್ಯಾನ ವರ್ಣನೆ ಮಾಡಿದೆ‌. ಹಾಗೆ ದೇವೇಂದ್ರ ಪುನಃ ನಿತ್ಯಶ್ರೀಯನ್ನು, ವಿಜಯಶ್ರೀಯನ್ನು ಪಡೆದುಕೊಂಡು ದೇವಲೋಕದಲ್ಲಿ ತನ್ನ ಮದವನ್ನು ಕಳೆದುಕೊಂಡು ಮೊದಲಿನಂತೆ ಧರ್ಮರಾಜ್ಯವನ್ನು ಮಾಡಲು ಆರಂಭಿಸುತ್ತಾನೆ. ಇದರ ಮಧ್ಯೆ ನಾರದರು ಕೈಲಾಸಕ್ಕೆ ಹೋದರಂತೆ. ಶಿವನ ಬಳಿ ಉಭಯಕುಶಲೋಪರಿಯಾದ ನಂತರ ಮೋಹಿನಿಯ ವರ್ಣನೆಯನ್ನು ಮಾಡುತ್ತಾರೆ. ‌ತುಂಬಾ ವರ್ಣನೆ ಮಾಡಿದಾಗ ಶಿವನಿಗೂ ಕುತೂಹಲ ಉಂಟಾಯಿತಂತೆ. ಹಾಗಾಗಿ ಶಿವ ನೇರವಾಗಿ ವೈಕುಂಠಕ್ಕೆ ಹೋಗುತ್ತಾನೆ. ವಿಷ್ಣುವಿನ ಬಳಿ ಹೋಗಿ “ನೀನು ಮೋಹಿನಿಯ ರೂಪ ತಾಳಿದೆಯಂತಲ್ಲ ಅದು ಹೇಗಿರುತ್ತದೆ? ಒಮ್ಮೆ ತೋರಿಸುವೆಯಾ?” ಎಂದು ಕೇಳಿದನಂತೆ. ಕ್ಷಣ ಮಾತ್ರದಲ್ಲಿ ವೈಕುಂಠದ ವಾತಾವರಣವೆಲ್ಲ ಮಾಯವಾಗಿ ನಂದನವನದ ಪ್ರಾದುರ್ಭಾವ ಅಲ್ಲಿ ಉಂಟಾಗುತ್ತದೆ. ಮನಸ್ಸಿಗೆ ಮುದ ನೀಡುವಂತಹ, ಸುಂದರ ಗಿಡ ಮರಗಳು, ಮೃಗ ಪಕ್ಷಿಗಳು. ಇದ್ದಕ್ಕಿದ್ದಂತೆ ಒಂದು ಸ್ವರ್ಗ ಅಲ್ಲಿ ನಿರ್ಮಾಣಗೊಂಡು ಅದರ ಮಧ್ಯೆ ಮೋಹಿನಿ ಪ್ರಕಟಗೊಂಡಾಗ ಕ್ಷಣಕಾಲ ಹರನು ಕೂಡ  ಮೋಹಗೊಂಡ. ಶಿವ ಎಂದರೆ ವೈರಾಗ್ಯ ಮೂರ್ತಿ. ಗಜಚರ್ಮಾಂಬರಧರ, ಕೆಲವೊಮ್ಮೆ ದಿಗಂಬರ. ಮೈಗೆ ಗಂಧವನ್ನು ಹಚ್ಚಿಕೊಳ್ಳುವುದಿಲ್ಲ‌‌ ಚಿತಾಭಸ್ಮವನ್ನು ಹಚ್ಚಿಕೊಳ್ಳುತ್ತಾನೆ. ಅಂತಹ ಪರಮ ವೈರಾಗ್ಯ ಮೂರ್ತಿಗೂ ಕೂಡ ಕ್ಷಣಕಾಲ ಮೋಹ ಉಂಟಾಯಿತಂತೆ‌. ಮೋಹದ ಫಲವಾಗಿ ಹರಿಹರ ತತ್ವಗಳ ಸಂಗಮ ಏರ್ಪಡುವಂತದ್ದು. ಪಾರ್ವತಿ, ತ್ರಿಪುರಸುಂದರಿ, ರಾಜರಾಜೇಶ್ವರಿ ಎಲ್ಲರೂ ವಿಷ್ಣುವೆ. ಅದಕ್ಕೆ ಉದಾಹರಣೆ ಇಲ್ಲಿದೆ‌. ಹಾಗೆ ಹರ-ಮೋಹಿನಿಯರ ಸಂಗಮದಲ್ಲಿ ಅಯ್ಯಪ್ಪ ಹುಟ್ಟಿ ಬಂದ. ಮಹಾಶಾಸ್ತಾರನ ಉದಯವಾಯಿತು. “ತತಃ ಸಮುದಿತೋ ದೇವಃ ಮಹಾಶಾಸ್ತಾ ಮಹಾಬಲಃ, ಅನೇಕ ಕೋಟಿ ದೈತ್ಯೇಂದ್ರ ಗರ್ವ ನಿರ್ವಾಪಣಕ್ಷಮಃ” ಅನೇಕ ಕೋಟಿ ದೈತ್ಯರಾಜರುಗಳ ಗರ್ವವನ್ನು ಧ್ವಂಸ ಮಾಡಬಲ್ಲ ದೈತ್ಯ ಸಂಹಾರಿ, ದುಷ್ಟರ ಶಕ್ತಿಗಳನ್ನು ದಮನ ಮಾಡುವಂತಹ ಮಹಾಶಾಸ್ತಾ, ಅವನ ಆವಿರ್ಭಾವ ಆ ಸಮಯದಲ್ಲಿ ಉಂಟಾಯಿತು. ಶಿವನ ತೇಜಸ್ಸಿನಿಂದ ಬೆಳ್ಳಿ ಬಂಗಾರಗಳ ಖನಿಗಳು ಕೂಡ ಆ ಸಮಯದಲ್ಲೇ ಹುಟ್ಟಿಕೊಂಡವಂತೆ. ಹರನಿಗೂ ಮೋಹವೇ? ಎಂದು ಕೇಳಿದರೆ ಪ್ರಪಂಚಕ್ಕೆ ಅಯ್ಯಪ್ಪನನ್ನು ಕೊಡುವ ಸಲುವಾಗಿ. ಹರಿಯ ಮೋಹಿನಿಯ ರೂಪ ಹೇಗಿತ್ತೆಂದರೆ ಹರನೂ ಮೋಹಗೊಳ್ಳುವಂತೆ ಇತ್ತು. ಹಾಗಾಗಿ ತ್ರಿಪುರಸುಂದರಿಯ, ರಾಜರಾಜೇಶ್ವರಿಯ ಇನ್ನೊಂದು ಹೆಜ್ಜೆ ಮಹಾಶಾಸ್ತಾ. ಆ ಮಹಾಶಾಸ್ತಾ ಹುಟ್ಟಿ ಬಂದಿದ್ದು ಕೆಡುಕಿನ ನಿವಾರಣೆಗಾಗಿ. ಹೀಗೆ ಎರಡು ರೂಪಗಳು.



ಮೂರನೇ ರೂಪದ ಬಗ್ಗೆ ಒಂದು ಪೀಠಿಕೆ. ಕಬ್ಬಿನ ಬಿಲ್ಲು, ಹೂವಿನ ಬಾಣ, ಪಾಶ ಅಂಕುಶ ಧನುರ್ಬಾಣಗಳನ್ನು ಧರಿಸಿರುವಂತಹ ಅಪರೂಪದ ರೂಪ ರಾಜರಾಜೇಶ್ವರಿಯದು.  ಅತಿಸೌಮ್ಯ, ಮನೋಹರವಾದಂತಹ ರೂಪವದು‌. ಆ ರೂಪ ಹುಟ್ಟಿದ್ದು ಹೇಗೆ? ಅಂದರೆ, ಹಯಗ್ರೀವ ಅಗಸ್ತ್ಯರಿಗೆ ಹೇಳುತ್ತಾನೆ “ಈವರೆಗೆ ನಾನು ಯಾರಿಗೂ ಹೇಳಲಿಲ್ಲ ‌ಅಂತಹ ರಹಸ್ಯ ಚರಿತ್ರೆಯನ್ನು ನಿನಗೆ ನಾನು ಹೇಳುತ್ತೇನೆ”. ಅಗಸ್ತ್ಯರು ಅಷ್ಟೊಂದು ರಹಸ್ಯವಾಗಿ ಇಡಲಿಲ್ಲ. ರಾಮಾನುಜರ ಬಗ್ಗೆ ಹೇಳುತ್ತಾರೆ. ಗುರುಗಳು "ಓಂ ನಮೋ ನಾರಾಯಣಾಯ” ಮಂತ್ರವನ್ನು ಉಪದೇಶ ಮಾಡುವಾಗ ಯಾರಿಗೂ ಹೇಳಬಾರದು ಎಂದು ಹೇಳಿದ್ದರಂತೆ. ಆದರೆ ರಾಮಾನುಜರು ಕೋಟೆಯನ್ನು ಹತ್ತಿ ಜೋರಾಗಿ ಇಡೀ ಊರಿಗೆ ಕೇಳುವಂತೆ ಹೇಳಿದರಂತೆ. ಯಾಕಂದರೆ “ನನಗೆ ದೋಷ ಬಂದರೆ ಬರಲಿ ಆದರೆ ಈ ಮಂತ್ರದಿಂದ ಎಲ್ಲರೂ ಉದ್ಧಾರವಾಗಲಿ”. ಹಾಗೇ ಅಗಸ್ತ್ಯರು ಪ್ರಪಂಚಕ್ಕೆ ಆ ರಹಸ್ಯವನ್ನು ಪ್ರಕಟಪಡಿಸುತ್ತಾರೆ.



ಬಹಳ ಒಳ್ಳೆಯದಾಗಬೇಕು ಅಂದರೆ ಮೊದಲು ಬಹಳ ಕೆಟ್ಟದ್ದಾಗಬೇಕಾಗುತ್ತದೆ. ಅತ್ಯಂತ ಶುಭ ಅವತರಿಸಬೇಕು ಎಂದರೆ ಅತ್ಯಂತ ಅಶುಭ ಮೊದಲಾಗಿರಬೇಕು. ರಾಮನಿದ್ದಾನೆ ಅಂದರೆ ಅದರ ಹಿಂದೆ ರಾವಣ ಬೇಡವೇ? ಕೆಡುಕು ಕೆಡುಕಲ್ಲ ಬಹಳ ಒಳ್ಳೆಯ ಸೂಚನೆಯೂ ಆಗಿರುತ್ತದೆ. ಹಾಗೇ ದೊಡ್ಡ ಕೆಡುಕು ಸೃಷ್ಟಿಯಲ್ಲಿ ಬಂದಾಗ ಅದರ ಪರಿಹಾರಕ್ಕಾಗಿ ಲಲಿತಾತ್ರಿಪುರಸುಂದರಿ ರಾಜರಾಜೇಶ್ವರಿಯ ಅವತರಣವಾಯಿತು.



ಆತನ ಹೆಸರು ಭಂಡಾಸುರ. ಆತನಿಗೆ ದೈತ್ಯರನ್ನು ಸೃಷ್ಟಿ ಮಾಡುವ ವಿಶೇಷ ಶಕ್ತಿಯಿತ್ತು‌. ತನ್ನ ಬಲಹೆಗಲಿನಿಂದ ವಿಶುಕ್ರನನ್ನು ಎಡಹೆಗಲಿನಿಂದ ವಿಡಂಗನನ್ನು ಸೃಷ್ಟಿಸುತ್ತಾನೆ‌. ಇಷ್ಟಬಂದಂತೆ ದೈತ್ಯರನ್ನು ಸೃಷ್ಟಿಸುವ ಶಕ್ತಿ ಇತ್ತು. ಆತ ವಿಶುಕ್ರ ವಿಡಂಗ ಮತ್ತು ಧೂಮಿನಿ, ಮೂವರನ್ನು ಸೃಷ್ಟಿಸುತ್ತಾನೆ‌. ಮೂವರು ಬಹಳ ಸಮರ್ಥರಂತೆ. ಈ ಮೂವರೊಡಗೂಡಿ ದೊಡ್ಡ ದೈತ್ಯರ ತಂಡವನ್ನು ಕಟ್ಟಿ ಬ್ರಹ್ಮಾಂಡವನ್ನು ಖಂಡನೆ ಮಾಡ್ತಾನೆ ಭಂಡದೈತ್ಯ. ಇವರಿಂದಾಗಿ ದೇವತೆಗಳಿಗೆ ಉಸಿರಾಡುವುದಕ್ಕೂ ಕಷ್ಟವಾಯಿತಂತೆ. ದೇವತೆಗಳೆಲ್ಲ ಪಲಾಯನ ಮಾಡಿದರಂತೆ. ಕೆಲವು ದೇವತೆಗಳು ಪಾತಾಳ, ಸಮುದ್ರ, ದಿಗಂತದಾಚೆಯೆಲ್ಲೋ ಓಡಿದರು. ಕೆಲವರು ವೇಷ ಮರೆಸಿ ತಿರುಗಾಡಿದರು. ತಮ್ಮ ಶಕ್ತಿ ಪ್ರಭಾವ ಎಲ್ಲವನ್ನೂ ಕಳೆದುಕೊಂಡು ದೇವತೆಗಳು ಪಶುಗಳಂತಾಗುವ ಕಾಲಬಂತಂತೆ. ಭಂಡಾಸುರ ದೇವತೆಗಳನ್ನು ತೃಣ ಸಮಾನರಂತೆ ಕಂಡನು‌. ಅರವತ್ತು ಸಹಸ್ರ ವರ್ಷಗಳ ಕಾಲ ಅವನ ಆಳ್ವಿಕೆ ನಡೆಯಿತಂತೆ‌. ಅದು ಮಿತಿ ಮೀರಿದಾಗ ಲಲಿತಾತ್ರಿಪುರಸುಂದರಿ ರಾಜರಾಜೇಶ್ವರಿಯು ಅಗ್ನಿಕುಂಡದಿಂದ ಎದ್ದು ಬಂದಳು. ಪ್ರಪಂಚವೇ ಬೇಗೆಯ ಬೆಂಕಿಯಲ್ಲಿ ಬಿದ್ದಿದೆ. ಅದನ್ನು ಪರಿಹಾರ ಮಾಡುವ ಸಲುವಾಗಿ ಯಾಗಾಗ್ನಿಯಲ್ಲಿ ಎದ್ದು ಬಂದಳು. “ಚಿದಗ್ನಿಕುಂಡ ಸಂಭೂತಾ ದೇವಕಾರ್ಯ ಸಮುದ್ಯತಾ” ಯೋಗಾಗ್ನಿಯಲ್ಲಿ ತನುವನ್ನು ಲಯಗೊಳಿಸಿದವಳು ಯಾಗಾಗ್ನಿಯಲ್ಲಿ ಎದ್ದು ಬರುತ್ತಾಳೆ.


ಅವಳ ಕಥೆಯನ್ನು ನಾಳೆ ಕೇಳೋಣ.


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top