ಸ್ವಚ್ಛ ಮನಸ್ಸಿನ ಮುಗ್ಧ ಮನವೊಂದು ಜಗಕ್ಕೆ ಸಾಹಿತ್ಯದ ರಸದೌತಣ ಬಡಿಸುತ್ತಿದೆ. ಇವರೆಂದರೆ ಎಲ್ಲರಿಗೂ ಅಚ್ಚುಮೆಚ್ಚು, ಇವರೆಂದು ಶುದ್ಧ ಸಾಹಿತ್ಯದ ಸಂಪತ್ತು. ಅಲ್ಪವೂ ಅಹಂ ಇಲ್ಲದ ಜೀವವೊಂದು ತಾನು ಬೆಳೆಯುತ್ತಾ, ಇತರರ ಬೆಳವಣಿಗೆಗೆ ಮಾರ್ಗದರ್ಶನ ವಾಗಿರುವ ವ್ಯಕ್ತಿತ್ವ ಇವರದು. ಸಾಧನೆಯ ಪಥದಲ್ಲಿ ಸಾಗುತ್ತಾ ಸಾಧಕರ ಪಟ್ಟಿಯಲ್ಲೊಂದಾಗಿರುವ ಇವರು ಜನ–ಮನಗಳ ಗೆದ್ದ ನಾಯಕ ಹಾಗೂ ಚಿಗುರೆಲೆಗಳಿಗೆ ಜೀವ ತುಂಬಿದ ಸಾಹುಕಾರ– ನಾರಾಯಣ ಕುಂಬ್ರರವರು.
ಇವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಪುಟ್ಟ ಹಳ್ಳಿ ಕುಂಬ್ರದವರು. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕುಂಬ್ರದಲ್ಲಿ, ಪ್ರೌಢ ಶಿಕ್ಷಣವನ್ನು ಶ್ರೀರಾಮ ಪ್ರೌಢಶಾಲೆಯಲ್ಲಿ ಮತ್ತು ಪದವಿ ಪೂರ್ವವನ್ನು ಸ.ಪ. ಪೂರ್ವ ಕಾಲೇಜು ಕೊಂಬೆಟ್ಟುನಲ್ಲಿ ಪೂರ್ಣಗೊಳಿಸಿದ್ದಾರೆ.
ನಾರಾಯಣ ಕುಂಬ್ರರವರು ಸ.ಪ.ಪೂ. ಕಾಲೇಜು ಕುಂಬ್ರಾದಲ್ಲಿ 2 ವರ್ಷ ಗೌರವ ನೆಲೆಯಲ್ಲಿ ಕಚೇರಿ ಸಿಬ್ಬಂದಿಯಾಗಿ, 2003 ರಿಂದ ಸುದಾನ ವಸತಿ ಶಾಲೆ ಪುತ್ತೂರಿನಲ್ಲಿ 10 ವರ್ಷ ಹಾಗೂ ಕಳೆದ 10 ವರ್ಷಗಳಿಂದ ಪುತ್ತೂರಿನ ಪ್ರತಿಷ್ಠಿತ ವಿವೇಕಾನಂದ ಪದವಿ ಮಹಾವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ಪ್ರಯೋಗ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕುಂಬ್ರರವರು ಕಾಲೇಜಿನಲ್ಲಿ ಕರ್ತವ್ಯದಲ್ಲಿರುವಾಗಲೇ ಸುದ್ದಿ ಬಿಡುಗಡೆ ಪತ್ರಿಕೆಗೆ ಹೊಸ ವರ್ಷಕ್ಕೆ ಶುಭ ಕೋರುವ ಕವನಗಳನ್ನು ಕಳುಹಿಸಿ ಕೊಡುತ್ತಿದ್ದರು. ಅದಲ್ಲದೆ ಕಾಲೇಜಿನ ಮಕ್ಕಳಿಗೆ ನಿರ್ಭಾಗ್ಯೆ (ವಿಶೇಷ ಚೇತನರ ಕುರಿತಾಗಿ) ಎಂಬ ಕಿರು ನಾಟಕ ರಚಿಸಿ ನಿರ್ದೇಶನ ಮಾಡಿರುತ್ತಾರೆ. ಕೊಂಬೆಟ್ಟು ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಗೆ 'ಪೆದ್ದೆ ಕಿಟ್ಟು' ಮತ್ತು 'ಮನಸ್ಥ ವನಸ್' ತುಳು ಕಿರು ನಾಟಕ ರಚಿಸಿ ನಿರ್ದೇಶನ ಮಾಡಿರುತ್ತಾರೆ. ಸುದಾನ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮಕ್ಕಳೊಂದಿಗೆ "ರಾಜು ಚಾಚಾ, ಅಮ್ಮ, ಮುದುಕಿ, ನರಿ, ನವಿಲು, ಕುದುರೆ, ಶಿಲ್ಪಿ ಪಾತ್ರಗಳನ್ನಲ್ಲದೇ ಯಕ್ಷಗಾನ ನೃತ್ಯ ಮಾಡಿ ಮಕ್ಕಳ ಮತ್ತು ಪೋಷಕರ ಪ್ರೀತಿಗೆ ಪಾತ್ರರಾಗಿದ್ದಾರೆ".
ಸುದಾನ ಶಾಲೆಯಲ್ಲಿರುವಾಗ ಮಧ್ಯಾಹ್ನದ ಬಿಡುವಿನ ಹೊತ್ತಿನಲ್ಲಿ ಸ. ಹಿ.ಪ್ರಾ. ಶಾಲೆ ಬೊಳ್ವಾರು ಇಲ್ಲಿನ 6ನೇ ಮತ್ತು 7ನೇ ತರಗತಿಯ ವಿದ್ಯಾರ್ಥಿಗಳಿಗೆ ತುಳು ಪಾಠವನ್ನು ಉಚಿತವಾಗಿ ಬೋಧನೆ ಮಾಡಿರುತ್ತಾರೆ ಇವರು ವೃತ್ತಿಯೊಂದಿಗೆ ಪ್ರವೃತ್ತಿಯಾಗಿ ಕವನ ರಚನೆ, ಹಾಡು, ಅಲ್ಲದೆ ಯಕ್ಷಗಾನವನ್ನು ಹವ್ಯಾಸವಾಗಿ ರೂಡಿಸಿಕೊಂಡಿದ್ದಾರೆ. ಪ್ರತಿ ಕ್ಷೇತ್ರದಲ್ಲೂ ತಮ್ಮನ್ನು ತಾವು ಗುರುತಿಸಿಕೊಂಡಿರುವ ಇವರು ಸಕಲಕಲಾವಲ್ಲಭ ಎಂದೇ ಹೆಸರುವಾಸಿಯಾಗಿದ್ದಾರೆ.
ಇವರ ತುಳು ಮತ್ತು ಕನ್ನಡ ಕವನಗಳು ರೇಡಿಯೋ ಪಾಂಚಜನ್ಯದಲ್ಲಿ ಪ್ರಸಾರಗೊಂಡಿವೆ. ಹಲವಾರು ತಾಲೂಕು, ಜಿಲ್ಲಾ, ಅಂತರ್ ಜಿಲ್ಲಾ ಮತ್ತು ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದು ಕವನ, ಹನಿಗವನ, ಚುಟುಕು, ಹಾಯ್ಕು, ನ್ಯಾನೋ ಕಥೆ ಇನ್ನಿತರ ಪ್ರಕಾರಗಳ ರಚನೆ ಮಾಡಿರುತ್ತಾರೆ. ಕೊರೋನಾ ಸಂದರ್ಭದಲ್ಲಿ ಅಂತರ್ಜಾಲ ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ.
ಇವರು ಹಲವಾರು ಲೇಖನಗಳನ್ನು ಬರೆದಿದ್ದು ಉದಯವಾಣಿ ಪತ್ರಿಕೆ, ತುಳುನಾಡು ವಾರ್ತೆ, ಅಪರಾಧಕ್ಕೆ ಸವಾಲು, ಸ್ಥಳೀಯ ಸುದ್ದಿ ಬಿಡುಗಡೆಯಲ್ಲಿ ಪ್ರಕಟಗೊಂಡಿದೆ. ಅಲ್ಲದೆ ಪ್ರಜಾವಾಣಿ ಮತ್ತು ಜಯಕಿರಣ ಪತ್ರಿಕೆಯಲ್ಲಿ ಕವನ ಮತ್ತು ಜನಮತ ವಿಭಾಗದಲ್ಲಿ ಪ್ರಕಟಗೊಂಡಿದೆ.
ಕುಂಬ್ರರವರು ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಗ್ರಾಮ ಸಾಹಿತ್ಯ ಸಂಭ್ರಮದ ಸಂಚಾಲಕರಾಗಿ, ಕಪ್ಪತ್ತಗಿರಿ ಸಾಹಿತ್ಯ ಕಲಾ ಮತ್ತು ಸಾಂಸ್ಕೃತಿಕ ವೇದಿಕೆ ಗದಗ ಇದರ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿ, ಚು.ಸಾ.ಪ. ಪುತ್ತೂರು ಇದರ ಕಾರ್ಯದರ್ಶಿಯಾಗಿ, ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಇದರ ಸಂಯೋಜಕರಾಗಿದ್ದಾರೆ.
ಇತ್ತೀಚೆಗೆ ಇವರ ಚೊಚ್ಚಲ ಕವನ ಸಂಕಲನ 'ಸ್ವಪ್ನಗಳ ತೇರು' ಕನ್ನಡ ಸಾರಸ್ವತ ಲೋಕಕ್ಕೆ ಲೋಕಾರ್ಪಣೆಗೊಂಡಿದೆ. ಇವರ ಸಾಹಿತ್ಯದ 'ಸೋಮವಾರ ಸಂತೆಗ್' ತುಳು ಆಲ್ಬಮ್ ಹಾಡು ಚಿತ್ರೀಕರಣಗೊಂಡು ಸದ್ಯದಲ್ಲೇ ಬಿಡುಗಡೆಗೊಳ್ಳಲಿದೆ.
ಇವರ ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಗಾಗಿ ಜಿ.ಶಂ.ಪ ಸಾಹಿತ್ಯ ವೇದಿಕೆ ಮತ್ತು ಕನ್ನಂಬಾಡಿ ದಿನಪತ್ರಿಕೆ ಮಂಡ್ಯ, ವತಿಯಿಂದ 'ಕಾವ್ಯಶ್ರೀ', ಯಶಸ್ವಿ ನಾಗರೀಕ ಸಂಘ (ರಿ) ಕಾರ್ಕಳ, ಮಂಗಳ ಕಲಾ ಸಾಹಿತ್ಯ ವೇದಿಕೆ ಪಟ್ಟೆ ಬಡಗನ್ನೂರು, ಒಳಮೊಗ್ರು ಗ್ರಾಮ ಪಂಚಾಯತ್ ಗ್ರಂಥಾಲಯ ಸಪ್ತಾಹದಂಗವಾಗಿ "ಕವಿಚೇತನ" ಚಂದನ ಸಾಹಿತ್ಯ ವೇದಿಕೆ ಸುಳ್ಯಾ ವತಿಯಿಂದ "ಸಾಹಿತ್ಯ ರತ್ನ " ಪ್ರಶಸ್ತಿ ನೀಡಿರುವುದಲ್ಲದೆ ಪಡ್ಡಾಯೂರು ಅನ್ನಪೂರ್ಣೇಶ್ವರಿ ಭಜನಾ ಮಂಡಳಿ ಪಡ್ನೂರು ಇದರ ನವರಾತ್ರಿ ಸಂದರ್ಭದಲ್ಲಿ ಇವರಿಗೆ ಗೌರವದ ಸನ್ಮಾನ ಕೂಡ ಮಾಡಿರುತ್ತಾರೆ.
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದಿಂದ ಆಯೋಜಿಸುವ ಪುತ್ತೂರು ತಾಲೂಕಿನ 22 ಗ್ರಾಮದಲ್ಲಿ "ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ" ಎಂಬ ಘೋಷವಾಕ್ಯದಲ್ಲಿ ನಡೆಯುವ ಗ್ರಾಮ ಸಾಹಿತ್ಯ ಸಂಭ್ರಮದ ಸಂಚಾಲಕರಾಗಿ ಹಾಗೂ ಸಾಹಿತ್ಯ ಪರಿಷತ್ತಿನ ಸೇವಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಕಳೆದ ಒಂದು ವರ್ಷದಲ್ಲಿ ಹಲವಾರು ಗ್ರಾಮಗಳಲ್ಲಿ ಸಾಹಿತ್ಯ ಸಂಭ್ರಮವನ್ನು ಯಶಸ್ವಿಯಾಗಿ ಪೂರೈಸಿದ್ದಾರೆ ಹಾಗೂ ಉಳಿದ ಗ್ರಾಮಗಳಲ್ಲಿ ನಿರಂತರ ಗ್ರಾಮ ಸಾಹಿತ್ಯ ಸಂಭ್ರಮ ನಡೆಸಲು ಕಾರ್ಯ ಪ್ರವೃತ್ತರಾಗಿದ್ದಾರೆ. ಕಳೆದ ಒಂದು ವರ್ಷದಲ್ಲಿ ಸುಮಾರು ಹದಿನಾರಕ್ಕೂ ಅಧಿಕ ಸಾಹಿತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸುಮಾರು 950 ಯುವ ಸಾಹಿತಿಗಳಿಗೆ ವೇದಿಕೆಯನ್ನು ಕಲ್ಪಿಸಿ ಕೊಟ್ಟಿದ್ದಾರೆ. ಜೊತೆಗೆ 250ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವೇದಿಕೆಯನ್ನು ಕಲ್ಪಿಸಿ ಕೊಟ್ಟ ಗೌರವ ಇವರಿಗೆ ಸಲ್ಲುತ್ತದೆ.
ಇವರ ಸಾಧನೆಗೆ ಬೆನ್ನೆಲುಬಾಗಿ ನಿಂತು ಸದಾ ಪ್ರೇರೇಪಿಸುವ ಕುಂಬ್ರರವರ ಸಹ ಧರ್ಮಿಣಿ ರೂಪಾ ರವರು ನೀಡುತ್ತಿರುವ ಪ್ರೋತ್ಸಾಹ ಇವರ ಸಾಧನೆಗೆ ಸ್ಫೂರ್ತಿಯಾಗಿದೆ. "ಹೆಣ್ಣೊಂದು ನಗುತ್ತಿದ್ದರೆ, ಮನೆಯೊಂದು ಆನಂದ" ಎಂಬಂತೆ ಕುಂಬ್ರರವರ ಎಲ್ಲಾ ಸಾಧನೆಗೆ ನಿರಂತರ ಬೆನ್ನೆಲುಬಾಗಿ ನಿಂತಿರುವ ರೂಪ ರವರಿಗೆ ನನ್ನದೊಂದು ಮೆಚ್ಚುಗೆ. ಪ್ರಸ್ತುತ ಕುಂಬ್ರರವರು ತನ್ನ ಮಡದಿಯೊಂದಿಗೆ ಅಳಿಕೆಯಲ್ಲಿ ಸುಖ ಜೀವನ ಸಾಗಿಸುತ್ತಿದ್ದಾರೆ.
ಜನತೆಗೊಂದು ಹಿತನುಡಿ: ಯಾವುದೇ ವ್ಯಕ್ತಿಯು ಸಂತೋಷಕ್ಕಾಗಿ ವೃತ್ತಿ ಜೊತೆಗೆ ಪ್ರವೃತ್ತಿಯನ್ನು ಜೀವನದಲ್ಲಿ ಅಳವಡಿಸಿಕೊಂಡರೆ ನೆಮ್ಮದಿ ಕಾಣಬಹುದು ಎಂಬ ಆಶಯ ಇವರದು. ಸಾಧಿಸಲು ಹೊರಟವ ತನ್ನ ಗುರಿಯನ್ನು ಮುಟ್ಟಬೇಕು. ಸಾಧನೆಗೆ ಸತತ ಪ್ರಯತ್ನ ಮೆಟ್ಟಿಲಾಗಬೇಕು. ನಮ್ಮ ಸಾಧನೆ ಪ್ರಶಸ್ತಿಯ ಹಿಂದೆ ಹೋಗುವುದಲ್ಲ ಸಾಧನೆಯನ್ನು ಪರಿಗಣಿಸಿ ಪ್ರಶಸ್ತಿ, ಸನ್ಮಾನಕ್ಕೆ ಅರ್ಹತೆ ಪಡೆಯುವಂತಿರಬೇಕು. ತಾನು ಬೆಳೆಯುತ್ತಾ ತನ್ನವರನ್ನು ಬೆಳೆಸುವ ವಿಶಾಲ ಹೃದಯ ಸಾಹಿತಿಗಳಲ್ಲಿರಬೇಕು ಎಂದು ಕುಂಬ್ರರವರು ಹೇಳಿದ್ದಾರೆ.
ಚಿಗುರೊಡೆದ ಚಿಗುರೆಲೆಗಳ ಪ್ರತಿಭೆಗಳಿಗೆ ಕುಂಬ್ರ ರವರ ಮಾತೇ ಸ್ಪೂರ್ತಿದಾಯಕ. ಕುಂಬ್ರರವರ ಒಂದೊಂದು ಮಾತುಗಳು ಸಾಹಿತಿ ಹೃದಯಗಳಿಗೆ ಮಾಣಿಕ್ಯವಿದ್ದಂತೆ. ಒಬ್ಬರು ಸಹಾಯ ಕೇಳಿದ ತಕ್ಷಣ ಮಿಡಿಯುವ ಹೃದಯ ಇವರದು. ಸದಾ ಹಸನ್ಮುಖಿಯಾಗಿರುವ ಮೊಗದವರು. ನೇರ– ದಿಟ್ಟ– ನಿರಂತರದ ಸ್ವಭಾವದವರು. ಆಡು ಮುಟ್ಟದ ಸೊಪ್ಪಿಲ್ಲ, ಇವರು ನೋಡದ ಸಾಹಿತ್ಯವಿಲ್ಲ. ಎಲ್ಲದಕ್ಕೂ ಸೈ ಎನ್ನುವವರು. ನಿಜಕ್ಕೂ ಇವರು ನನ್ನ ಸಾಹಿತ್ಯದ ಮಾರ್ಗದರ್ಶಕರೆಂದರೆ ಸುಳ್ಳಾಗದು. ನಿಮ್ಮ ನಡಿಗೆ ಜನತೆಯನ್ನು ಸಾಹಿತ್ಯದೆಡೆ ಕೊಂಡೊಯ್ಯುವ ಕಡೆಗೆ. ನಾ ಆಶಿಸುವೆ ನಿಮ್ಮ ಕನಸು ನನಸಾಗಲಿ, ಸಾಹಿತ್ಯ ರಂಗಕ್ಕೆ ನಿಮ್ಮ ಕೀರ್ತಿ ಒದಗಲಿ.
- ಕೀರ್ತನ ಒಕ್ಕಲಿಗ ಬೆಂಬಳೂರು
ದ್ವಿತೀಯ ಬಿಬಿಎ
ವಿವೇಕಾನಂದ ಮಹಾವಿದ್ಯಾಲಯ ಪುತ್ತೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ