ಪತ್ರಕರ್ತ ಶ್ರೀನಿವಾಸ ಜೋಕಟ್ಟೆಯವರ 40 ನೇ ಕೃತಿ ದೇವರುಗಳ ನ್ಯಾಯಾಲಯ ಮತ್ತು ,41 ನೇ ಕೃತಿ ಎಲ್ಲಿಗೋ ಪಯಣ ಯಾವುದೋ ದಾರಿ ಬಿಡುಗಡೆ
ಮುಂಬಯಿ: ಬರಹಗಾರರಲ್ಲಿರುವ ಜ್ಞಾನವು ಅದು ಅವರಲ್ಲೇ ಬತ್ತಿ ಹೋಗಬಾರದು. ಇನ್ನೊಬ್ಬರಿಗೆ ಅದು ಪ್ರಯೋಜನಾಗಬೇಕು. ಹಾಗಾಗಿ ಜನರಲ್ಲಿ ಓದುವ ಜಿಜ್ಞಾಸೆಯನ್ನು ಬೆಳೆಸಲು ಉತ್ತಮ ಕೃತಿಗಳು ಪ್ರಕಟವಾಗುತ್ತಾ ಇರಬೇಕು. ಕೃತಿಗಳು ಓದುಗರ ಬದುಕಿನಲ್ಲಿ ಉದ್ದಕ್ಕೂ ಅಚ್ಚರಿಯಾಗಿ ಉಳಿದು ಅವರ ಬದುಕು ಇನ್ನಷ್ಟು ಪರಿವರ್ತನೆ ಮಾಡಿಕೊಳ್ಳಲು ನೆರವಾಗಬೇಕು. ಮಸ್ತಕದಿಂದ ಪುಸ್ತಕಕ್ಕೆ ಬರುವ ದಾರಿಯಲ್ಲಿ ನಾನಾ ರೀತಿಯ ಪಲ್ಲಟಗಳು ಕಾಣಿಸಿಕೊಳ್ಳಬಹುದು. ಮಸ್ತಕದಲ್ಲಿ ಇದ್ದದ್ದು ಪುಸ್ತಕದಲ್ಲಿದ್ದುದಕ್ಕೆ ಬೀಳುವಾಗ ತುಂತುರು ಮಳೆಯ ಹನಿಯಂತೆ ಭಾಸವಾಗಬಹುದು.
ಒಂದು ಕೃತಿಯ ಹಿಂದೆ ಪರಿಶ್ರಮ ಇದೆ. ಪ್ರೀತಿ ಪ್ರೇಮ ವಾತ್ಸಲ್ಯ ಬರಹಗಾರರಲ್ಲಿದ್ದಾಗ ಮಾತ್ರ ಉತ್ತಮ ಕೃತಿಗಳು ಹೊರಬರಲು ಸಾಧ್ಯ ಎಂದು ಪ್ರಖ್ಯಾತ ಸಂಘಟಕರು, ಯಕ್ಷಗಾನ ಕಲಾವಿದರು, ಕಾರ್ಪೊರೇಟ್ ವ್ಯವಹಾರಗಳ ತಜ್ಞರು ,ಸಾಫಲ್ಯ ಸೇವಾ ಸಂಘ ಮುಂಬಯಿ ಮತ್ತು ಶನೀಶ್ವರ ದೇವಸ್ಥಾನ ಮಲಾಡ್ ಮುಂಬಯಿ ಇದರ ಅಧ್ಯಕ್ಷರಾಗಿರುವ ಶ್ರೀನಿವಾಸ ಪಿ ಸಾಪಲ್ಯ ಹೇಳಿದರು.
ಅವರು ಮೈಸೂರು ಅಸೋಸಿಯೇಷನ್ ಗ್ರಂಥಾಲಯ ಸಭಾಗೃಹದಲ್ಲಿ ಅಕ್ಟೋಬರ್ 8ರಂದು ಸಂಜೆ ಸಾಹಿತಿ ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಅವರ ಮಂಡ್ಯದ ಶ್ರೀರಾಮ ಪ್ರಕಾಶನ ಪ್ರಕಟಿಸಿದ 40ನೇ ಕೃತಿ ದೇವರುಗಳ ನ್ಯಾಯಾಲಯ ಮತ್ತು ಸ್ಮಶಾನದಲ್ಲಿ ನೃತ್ಯ ಹಾಗೂ 41ನೇ ಕೃತಿ ಬೆಂಗಳೂರಿನ ಸಾಹಿತ್ಯ ಸುಗ್ಗಿ ಪ್ರಕಾಶನ ಪ್ರಕಟಿಸಿದ ಎಲ್ಲಿಗೋ ಪಯಣ ಯಾವುದೋ ದಾರಿ ಬಿಡುಗಡೆ ಸಮಾರಂಭದಲ್ಲಿ 40ನೇ ಕೃತಿ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು
ನ್ಯಾಯಾಲಯದಂತಿರುವ ಈ ಗ್ರಂಥಾಲಯದಲ್ಲಿ ಪುಸ್ತಕ ಬಿಡುಗಡೆ ಆಗಿರುವುದು ಸಂತೋಷದ ಸಂಗತಿ. ನಮ್ಮ ಬದುಕೇ ಒಂದು ನ್ಯಾಯಾಲಯ. ಸಿರಿ ಸಂಪತ್ತೇ ಬದುಕಲ್ಲ. ವಿಷಯ ಸಂಗ್ರಹ,ಪರಿಪಕ್ವತೆ ,ಚಾಕಚಕ್ಯತೆ ಹಾಗೂ ಸಾಮಾಜಿಕ ದೃಷ್ಟಿಕೋನವಿದ್ದಾಗ ನಿಖರವಾಗಿ ನೋಡಿ ಅದನ್ನು ಬರಹಕ್ಕಿಳಿಸಲು ಸಾಧ್ಯವಾಗುವುದು. ಜೋಕಟ್ಟೆ ಅವರ ಕೃತಿಗಳು ಅಂತಹ ಆನಂದವನ್ನು ನೀಡುವುದು ಎಂದರು.
41ನೇ ಕೃತಿ ಯನ್ನು ಬಿಡುಗಡೆಗೊಳಿಸಿದ ಮುಂಬೈ ಹೈಕೋರ್ಟ್ ಅಡ್ವಕೇಟ್ ಆರ್ ಎಂ ಭಂಡಾರಿ ಅವರು ಮಾತನಾಡುತ್ತಾ ಯಾವುದೇ ಕೃತಿಗಳನ್ನು ಆಗಲಿ ಓದಿದ ನಂತರವೇ ನಾವು ಪ್ರತಿಕ್ರಿಯಿಸಬೇಕು ಆವಾಗ ಮಾತ್ರ ಬರೆದವರಿಗೆ ನ್ಯಾಯ ಸಿಗುವುದು ನಾವಿಂದು ಮರಾಠಿ ಮಣ್ಣಿನಲ್ಲಿದ್ದರೂ ಕನ್ನಡದ ಪ್ರೀತಿಯನ್ನು ಉಳಿಸಿಕೊಂಡವರು ಇದ್ದೇವೆ. ದಿನವಿಡಿ ನಾವು ಇಂಗ್ಲೀಷಲ್ಲಿ ವ್ಯವಹರಿಸಿದ್ದರೂ ಕೂಡ ನಾನು ಮನೆಗೆ ಕನ್ನಡ ಪತ್ರಿಕೆಗಳನ್ನು ತರಿಸುವುದು ನನ್ನ ಕನ್ನಡ ಮರೆತು ಹೋಗಬಾರದು ಎಂದು. ರಾತ್ರಿ ಮನೆಗೆ ಬಂದವನೇ ಮೊದಲಿಗೆ ನಾನು ಕನ್ನಡ ದೈನಿಕ ಗಳನ್ನು ಓದುತ್ತೇನೆ. ಆ ಮೂಲಕ ನನ್ನ ಕನ್ನಡ ಇಂದಿಗೂ ಉಳಿದುಕೊಂಡಿದೆ ಎಂದರು. 4೦ನೇ ಕೃತಿ ದೇವರುಗಳ ನ್ಯಾಯಾಲಯವನ್ನು ಕರ್ನಾಟಕ ಸಂಘ ಮುಂಬಯಿ ಇದರ ಅಧ್ಯಕ್ಷ ಡಾ. ಭರತ್ ಕುಮಾರ್ ಪೊಲಿಪು ಅವರು ಪರಿಚಯಿಸಿದರು. 41ನೇ ಕೃತಿ ಎಲ್ಲಿಗೋ ಪಯಣ ಯಾವುದೋ ದಾರಿಯನ್ನು ಯುವ ಲೇಖಕಿ (ಜಿಎಂ ಹೆಗಡೆ ಅವರ ಸಂಪ್ರಬಂಧಕ್ಕೆ ಎಂಫಿಲ್ ಮಾಡಿರುವ ರೂಪಾ ಸಂಗೋಳಿ ಪರಿಚಯಿಸುತ್ತಾ -ಪ್ರಥಮ ಬಾರಿಗೆ ಪುಸ್ತಕ ಪರಿಚಯದ ನೆಪದಲ್ಲಿ ವೇದಿಕೆ ಹತ್ತುವ ಅವಕಾಶವೊಂದು ದೊರೆತಿರುವುದಕ್ಕೆ ಖುಷಿ ಪಟ್ಟಿದ್ದೇನೆ. ಈ ಕೃತಿಯು ಒಟ್ಟು 47 ಲೇಖನಗಳನ್ನು ಒಳಗೊಂಡಿದೆ. ಶೀರ್ಷಿಕೆಗಳನ್ನು ಓದಿದಾಗ ಈ ಸಂಕಲನದ ಲೇಖನಗಳನ್ನು ಹಲವು ವಿಭಾಗಗಳಲ್ಲಿ ವಿಂಗಡಿಸಬಹುದಾಗಿದೆ.ಇಲ್ಲಿ
ಕೊರೊನಾ ಕಾಲದ ಬರಹಗಳು, ಕನ್ನಡ ಸಾಹಿತ್ಯ ಲೋಕದ ದಿಗ್ಗಜರ ಕುರಿತ ಲೇಖನಗಳು, ಮುಂಬೈ ಕನ್ನಡಿಗ ಸಾಧಕರು, ಬಾಲಿವುಡ್ ಕುರಿತ ಲೇಖನಗಳು, ನಮಗೆ ತಿಳಿದಿರದ ರೋಚಕ ಸಂಗತಿಯ ಲೇಖನಗಳು, ಮುಂಬಯಿ ನಗರದ ಕುರಿತ ವಿಶೇಷ ಲೇಖನಗಳು, ಪ್ರವಾಸ ಲೇಖನಗಳು... ಹೀಗೆಲ್ಲ ವೈವಿಧ್ಯತೆಗಳು ಇಲ್ಲಿನ ಬರಹಗಳಲ್ಲಿವೆ. ಇವೆಲ್ಲ ಓದುಗರ ಮನಸ್ಸು ತಟ್ಟುವ ಲೇಖನಗಳಾಗಿವೆ ಎಂದರು.
ಅಧ್ಯಕ್ಷತೆಯನ್ನು ಬಿ ಎಸ್ ಕೆ ಬಿ ಎಸೋಸಿಯೇಷನ್ ನ ಅಧ್ಯಕ್ಷ ಡಾಕ್ಟರ್ ಸುರೇಶ್ ರಾವ್ ಅವರು ವಹಿಸಿದ್ದರು.
ಕೃತಿಕಾರ ಶ್ರೀನಿವಾಸ ಜೋಕಟ್ಟೆ ಮಾತನಾಡುತ್ತಾ ತನ್ನ ಬರಹಗಳು ಮೂಡಿ ಬರುವ ಸಂದರ್ಭಗಳನ್ನು ನೆನಪಿಸಿದರು. ಒಂದೊಂದು ಪತ್ರಿಕೆಗಳದ್ದು ಒಂದೊಂದು ಧೋರಣೆ ಇರುತ್ತದೆ. ಅದನ್ನು ಗಮನದಲ್ಲಿರಿಸಿ ಬರಹಗಾರ ಲೇಖನಗಳನ್ನು ಕಳುಹಿಸಬೇಕಾಗುತ್ತದೆ.ನಮಗೆ ಲೇಖನಗಳು ಪ್ರಕಟವಾಗುವುದು ಮುಖ್ಯ. ಪ್ರಕಟವಾದರೆ ಅದು ಜನರನ್ನು ತಲುಪುವುದು ಎಂದರು. ಜಯಲಕ್ಷ್ಮೀ ಜೋಕಟ್ಟೆ ಪ್ರತಿಕ್ರಿಯಿಸಿದರು.
ಡಾ.ಸುರೇಶ್ ರಾವ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದ ನಿರ್ವಹಣೆಯನ್ನು ಟೀಂ ಐಲೇಸಾ ಬೆಂಗಳೂರು ಮತ್ತು ಕರ್ನಾಟಕ ಸಂಘ ಮುಂಬಯಿ ಕಲಾ ಭಾರತಿ ತಂಡದವರು ಮಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಟೀಮ್ ಐ ಲೇಸಾದ ಸೂರಿ ಮಾರ್ನಾಡ್ ಮತ್ತು ಖ್ಯಾತ ಕಂಠದಾನ ಕಲಾವಿದ ರಂಗನಟ ಅವಿನಾಶ್ ಕಾಮತ್ ಮಾಡಿದರು. ಮೋಹನ್ ಮಾರ್ನಾಡ್.ಕೃಪಾ ಪೂಜಾರಿ, ಲತೇಶ್ ಪೂಜಾರಿ, ಸುವಿದ್ ಮಾರ್ನಾಡ್
ಅಕ್ಷರಾ ಕಾಮತ್, ಸ್ವರ ಮಾರ್ನಾಡ್, ರಿಯಾನ್, ಮುಕುಲ್ ಸಹಕರಿಸಿದರು. ಐಲೇಸಾದ ರಮೇಶ್‌ಚಂದ್ರ (ಲಿರಿಕ್ಸ್ ಸೂರಿ ಮಾರ್ನಾಡ್ )ಜ್ಞಾನ ಜ್ಯೋತಿ ಸರಸ್ವತಿ ಚಪ್ಪಾಳೇ ಹಾಡು -ಐಲೇಸಾದ ಪ್ರಕಾಶ್ ಪಾವಂಜೆ( ಲಿರಿಕ್ಸ್ ಸೂರಿ ಮಾರ್ನಾಡ್ ) ಪ್ರಸ್ತುತಪಡಿಸಿದರು.
ಪುಸ್ತಕಾಭಿಮಾನಿಗಳು ಗ್ರಂಥಾಲಯಕ್ಕೆ ತಲುಪುವಾಗಲೇ ಮುಂಬಾಗಿಲಲ್ಲಿ ಪುಸ್ತಕ ಪ್ರೇಮಿಗಳಿಗೆ ಬೆಲ್ಲ ನೀರು ಆಕರ್ಷಿಸಿತು.
ಪ್ರಥ್ವಿ ಥಿಯೇಟರ್ನಲ್ಲಿದ್ದಂತೆ ವೇದಿಕೆಯನ್ನು ಸಿದ್ಧಪಡಿಸಲಾಗಿತ್ತು. ಕನ್ನಡದ ದ್ವಜದ ಬಣ್ಣ ಹೊಂದಿರುವ ಬಿದಿರಿನ ಬುಟ್ಟಿಯಲ್ಲಿ .ಚಿಣ್ಣರು ಎಳೆ ಶಾರದೆಯರಂತೆ ಕೃತಿಗಳನ್ನು ತಲೆಯಲ್ಲಿ ಹೊತ್ತುಕೊಂಡು ಬಿಡುಗಡೆಗೆ ತಂದಿದ್ದರು.
ಪ್ರೇಮ ತತ್ವವನ್ನು ,ಮಾನವ ಪ್ರೀತಿಯನ್ನು ಸಾರುವುದು ಸಾಹಿತ್ಯದ ಕೆಲಸವಾಗಬೇಕು.- ಡಾ.ಭರತ್ ಕುಮಾರ್ ಪೊಲಿಪು
ಸಾಹಿತ್ಯದ ಉದ್ದೇಶ ಜವಾಬ್ದಾರಿ. ಇಂದು ಸ್ವಾರ್ಥ ಕೇಂದ್ರಿತ ಹಿಂಸಾ ದೃಶ್ಯಗಳು ಹೆಚ್ಚುತ್ತಿವೆ .ಅದು ದೈಹಿಕವಾದ ಹಿಂಸೆ ಆಗಿರಬಹುದು ಅಥವಾ ಮಾನಸಿಕವಾದ ಹಿಂಸೆ ಆಗಿರಬಹುದು. ಬದುಕಿನ ಪ್ರತಿ ಕ್ಷಣದಲ್ಲೂ ಹಿಂಸೆ ಗೊತ್ತಿದ್ದೋ ಗೊತ್ತಿಲ್ಲದೆಯೋ ನಾವು ಅನುಭವಿಸುತ್ತಿದ್ದೇವೆ .ಇಂಥ ಸ್ಥಿತಿಯಲ್ಲಿ ಸಾಹಿತ್ಯ ನಮಗೆ ಅನಿವಾರ್ಯ. ಪ್ರೇಮ ತತ್ವವನ್ನು ಸಾರುವುದು, ಮಾನವ ಪ್ರೀತಿಯನ್ನು ಸಾರುವುದು ಸಾಹಿತ್ಯದ ಕೆಲಸವಾಗಬೇಕು. ಅನೇಕ ವೈಪರೀತ್ಯಗಳಿಗೆ ಸಾಮಾಜಿಕ ಜವಾಬ್ದಾರಿಗಳಿಗೆ ಸಾಹಿತ್ಯ ಮುಖಾಮುಖಿ ಆಗಿ ಸ್ಪಂದಿಸಬೇಕು .ಬೇರೆ ಬೇರೆ ಸಾಹಿತ್ಯ ಪ್ರಕಾರಗಳ ಮೂಲಕ ಚಿಂತನೆಗೆ ಒಡ್ಡಿಕೊಳ್ಳಬೇಕು. ಧ್ವನಿ ಆಗಬೇಕು ಸಾಹಿತಿ.
ಸಾಹಿತ್ಯದಲ್ಲಿ ಪಂಥಗಳು ಇರಲಿ ಆದರೆ ಹೊಗಳಿಕೆ ಇರಬೇಕಾದ ಸಂದರ್ಭದಲ್ಲಿ ತೆಗಳಿಕೆಯ ರೀತಿಯಲ್ಲಿ ಬರಹ ಬಳಸುವ ಪರಂಪರೆ ನಮ್ಮಲ್ಲಿ ಬೆಳೆದಿರುವುದು ಅಪಾಯಕಾರಿ. ಆದರೆ ಕಾಲವನ್ನು ಮೀರಿದ ಸತ್ಯ ಯಾವುದೂ ಇಲ್ಲ. ಕೃತಿಯಲ್ಲಿನ ಸತ್ವವೇ ಅದು ಸಾರ್ವತ್ರಿಕ ಸತ್ಯ
ಸಾಹಿತ್ಯ ಸಮಾಜವನ್ನು ಬೆಸೆಯಬೇಕು. ಮನುಷ್ಯ ಪ್ರೀತಿಯನ್ನು ಹಂಚಬೇಕು. ವರ್ತಮಾನಕ್ಕೆ ಸ್ಪಂದಿಸಬೇಕು, ಮುಖಾಮುಖಿಯಾಗಬೇಕು. ಅಂತಹ ಪ್ರಯತ್ನವನ್ನುಜೋಕಟ್ಟೆ ಅವರು ತಮ್ಮ ಕೃತಿಗಳಿಂದ ಮಾಡುತ್ತಾ ಬಂದಿದ್ದಾರೆ ಎಂದರು ಡಾ.ಭರತ್ ಕುಮಾರ್ ಪೊಲಿಪು.
ನಿಮ್ಮ ಚಿಂತನೆಯನ್ನು ಒಳ್ಳೆಯ ಕೆಲಸಗಳಿಗೆ ವಿನಯೋಗಿಸುತ್ತಾ ಇರಿ .ಅಲ್ಲಿ ದೇವರ ಆಶೀರ್ವಾದ ಇರುತ್ತದೆ- ಡಾಕ್ಟರ್ ಸುರೇಶ್ ರಾವ್
ಅಧ್ಯಕ್ಷತೆಯನ್ನು ವಹಿಸಿದ ಬಿ ಎಸ್ ಕೆ ಬಿ ಅಸೋಸಿಯೇಷನ್ ಅಧ್ಯಕ್ಷ ಡಾಕ್ಟರ್ ಸುರೇಶ್ ರಾವ್ ಅವರು ಶ್ರೀನಿವಾಸ ಜೋಕಟ್ಟೆ ಅವರ ಕ್ರಿಯಾಶೀಲತೆಯನ್ನು ಕಂಡು ಅವರಿಗೆ ಬಿ ಎಸ್ ಕೆ ಬಿ ಎಸೋಸಿಯೇಷನ್ ನ ಗೋಕುಲವಾಣಿಯ ಸಂಪಾದಕರ ಜವಾಬ್ದಾರಿಯನ್ನು ನಿಂಜೂರರ ನಂತರ ಕಳೆದ ವರ್ಷ ನಾವು ನೀಡಿದ್ದೇವೆ. ಅವರು ಸಂಪಾದಕನಾಗಿ ಪತ್ರಿಕೆಯನ್ನು ಒಂದು ವರ್ಷದಿಂದ ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ. ಯಾರು ಈ ಸಮಾಜದಲ್ಲಿ ಪರಮಾತ್ಮನಿಗೆ ಬೇಕಾದಂತಹ ಒಳ್ಳೆಯ ಕೆಲಸಗಳನ್ನು ಮಾಡುತ್ತಾರೋ ಅವರೇ ಭಾಗ್ಯಶಾಲಿಗಳು. ಒಳ್ಳೆಯ ಭಕ್ತಿಯಿಂದ ಮಾಡಿದ ಕೆಲಸಗಳು ಸಾರ್ಥಕತೆಯನ್ನು ಪಡೆಯುತ್ತವೆ. ಒಳ್ಳೊಳ್ಳೆಯ ಕೆಲಸ ಪುಸ್ತಕಗಳನ್ನು ಓದುತ್ತಾ ಇರಿ. ಜ್ಞಾನ ಬೆಳೆಯುವ ಎಲ್ಲ ಕೆಲಸಗಳನ್ನು ನಾವು ಕೈಗೆತ್ತಿಕೊಂಡಾಗ ಬದುಕಿಗೊಂದು ಅರ್ಥ ದೊರೆಯುವುದು. ನಾವೆಲ್ಲ ಚಿಂತನೆಯನ್ನು ಒಳ್ಳೆಯ ಕೆಲಸಗಳಿಗೆ ವಿನಯೋಗಿಸುತ್ತಾ ಇರ ಬೇಕು. ಅಲ್ಲಿ ದೇವರ ಅನುಗ್ರಹಗಳು ದೊರೆಯುವುದು ಎಂದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ