ಪಣಜಿ: ಗೋವಾದ ಬೈನಾದಲ್ಲಿರುವ ಈ ಕನ್ನಡ ಶಾಲೆಯ ದುಸ್ಥಿತಿಯನ್ನು ಕಂಡು ನನಗೆ ತುಂಬಾ ಬೇಸರವಾಯಿತು. ನಾನು 1979 ರಲ್ಲಿ ನನ್ನ ಊರಲ್ಲಿ ಕಲಿತ ಶಾಲೆ ಇನ್ನೂ ಎಷ್ಟೋ ಉತ್ತಮವಾಗಿತ್ತು. ಕಲಿಯಲು ಒಂದು ವಾತಾವರಣ ಬೇಕು. ಈ ಶಾಲೆ ಅಭಿವೃದ್ಧಿಯಾಗಬೇಕಾದರೆ ಸ್ಥಳೀಯ ಶಾಸಕರ ಮೂಲಕ ಮತ್ತು ಕರ್ನಾಟಕ ಸರ್ಕಾರದ ಬಳಿ ಒತ್ತಡ ಹೇರುವ ಮೂಲಕ ಗೋವಾದ ಕನ್ನಡ ಶಾಲೆಯನ್ನು ಅಭಿವೃದ್ಧಿ ಪಡಿಸಬೇಕು. ಇಲ್ಲಿ ಮೂಲ ಸೌಕರ್ಯಕ್ಕೆ ಬೇಕಾದ ವ್ಯವಸ್ಥೆಗೆ ನಾನು ಕೂಡ ಅಗತ್ಯ ಸಹಾಯ ಮಾಡುತ್ತೇನೆ ಎಂದು ಗೋವಾ ರಾಜ್ಯ ಬಿಜೆಪಿ ಕರ್ನಾಟಕ ಸೆಲ್‍ನ ಕನ್ವೀನಿಯರ್ ಹಾಗೂ ಹೋಟೆಲ್ ಉದ್ಯಮಿ ಮುರಳಿ ಮೋಹನ್ ಶೆಟ್ಟಿ ನುಡಿದರು.
ಗೋವಾದ ವಾಸ್ಕೊದ ಬೈನಾದಲ್ಲಿರುವ ಶ್ರೀ ಯಲ್ಲಾಲಿಂಗೇಶ್ವರ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಉಚಿತ ಸಮವಸ್ತ್ರ ವಿತರಣೆ ಹಾಗೂ ಹೃದಯವಂತ ಕನ್ನಡ ಕಣ್ಮಣಿಗಳ ಸನ್ಮಾನ ಸಮಾರಂಭದ ಉಧ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು. ಸಮವಸ್ತ್ರ ಎಂದರೆ ಎಲ್ಲರೂ ಸಮನಾಗಿರುವುದು ಎಂದರ್ಥ, ಶಾಲೆಯಲ್ಲಿ ಎಲ್ಲರೂ ಯಾವುದೇ ಬೇಧಭಾವವಿಲ್ಲದೆಯೇ ವಿದ್ಯಾಭ್ಯಾಸ ಮಾಡುವಂತಾಗಬೇಕು. ಶಾಲೆಯಲ್ಲಿ ಬಡವ,ಶ್ರೀಮಂತ ಎಂಬ ಬೇಧಭಾವವಿಲ್ಲಬಾರದು. ಶಿಕ್ಷಕರು ಕೂಡ ಪಾಠ ಮಾಡುವಾಗ ಯಾರು ದೊಡ್ಡವರು ಚಿಕ್ಕವರು ಎಂಬ ಬೇಧ ಭಾವ ಮಾಡುವುದಿಲ್ಲ. ನಮ್ಮ ಕಾಲದಲ್ಲಿ ನಮಗೆ ಸಮವಸ್ತ್ರವನ್ನು ಯಾರೂ ವಿತರಣೆ ಮಾಡುತ್ತಿರಲಿಲ್ಲ. ಆದರೆ ಇಂದು ವಿದ್ಯಾರ್ಥಿಗಳಿಗೆ ಅವರ ಪಾಲಕರು ಕೂಡ ಶಿಕ್ಷಣ ಕೊಡಿಸಲು ಸಾಕಷ್ಟು ಖರ್ಚು ಮಾಡುತ್ತಾರೆ. ಆದರೆ ವಿದ್ಯಾರ್ಥಿಗಳು ಇದೆಲ್ಲವನ್ನು ಸದುಪಯೋಗ ಪಡಿಸಿಕೊಂಡು ಸಾಧನೆ ಮಾಡಬೇಕು ಎಂದು ಮುರಳಿ ಮೋಹನ್ ಶೆಟ್ಟಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕನ್ನಡ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಿಸಿದ ಗೋವಾ ರಾಜ್ಯ ಬಿಜೆಪಿ ಕರ್ನಾಟಕ ಸೆಲ್‍ನ ಕಾರ್ಯದರ್ಶಿ ರಾಜೇಶ್ ಶೆಟ್ಟಿ ಮಾತನಾಡಿ- ಇಂದಿನ ಕಾಲದಲ್ಲಿ ಯಾವುದೇ ರೀತಿ ಮುಂದುವರೆಯಲು ಮತ್ತು ನಮ್ಮ ದೇಶದ ಅಭಿವೃದ್ಧಿಯಲ್ಲಿ ನಮ್ಮ ಪಾಲು ಇರಬೇಕಾದರೆ ನಮಗೆ ಶಿಕ್ಷಣ ಅತಿ ಮುಖ್ಯ. ಚಂದ್ರಯಾನ 3 ಯಶಸ್ವಿ ಉಡಾವಣೆ ಮಾಡಿ ನಮ್ಮ ದೇಶಕ್ಕೆ ಕೀರ್ತಿ ತಂದುಕೊಟ್ಟಿದ್ದು ನಮ್ಮ ವಿಜ್ಞಾನಿಗಳು. ಇಂದಿನ ವಿದ್ಯಾರ್ಥಿಗಳು ಕೂಡ ಈ ನಿಟ್ಟಿನಲ್ಲಿ ಸಾಧನೆ ಮಾಡಲು ಉತ್ತಮ ಶಿಕ್ಷಣ ಅಗತ್ಯ ಎಂದರು.
ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಉಪಸ್ಥಿತರಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ಗೋವಾ ರಾಜ್ಯಾಧ್ಯಕ್ಷ ಮಂಜು ನಾಟೀಕರ್ ಮಾತನಾಡಿ- ನಾನು ಶಿಕ್ಷಣ ಪಡೆದಿದ್ದು ಕೂಡ ಇದೇ ಶಾಲೆಯಲ್ಲಿ. ಈ ಶಾಲೆಯಲ್ಲಿ ಹಲವು ಕುಂದು ಕೊರತೆಯನ್ನು ಪರಿಹರಿಸಲು ನಾವು ಸರ್ಕಾರದ ಮೂಲಕ ಹೋರಾಟ ನಡೆಸುವ ಅಗತ್ಯವಿದೆ. ಅಂದಾಗ ಈ ಕನ್ನಡ ಶಾಲೆಯನ್ನು ಅಭಿವೃದ್ಧಿ ಪಡಿಸಿ ಈ ಶಾಲೆಗೆ ಇನ್ನೂ ಹೆಚ್ಚಿನ ವಿದ್ಯಾರ್ಥಿಗಳನ್ನು ಕರೆತರಲು ಸಾಧ್ಯವಾಗುತ್ತದೆ. ಇದಕ್ಕೆ ನಾವು ಸತತ ಹೋರಾಡಲು ಸಿದ್ಧರಿದ್ದೇವೆ ಎಂದರು.
ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಮಹೇಶ ಬಳಬಟ್ಟಿ, ಬಸವರಾಜ ಗೌಡರ್, ಶಾಲೆಯ ಮುಖ್ಯಾಧ್ಯಾಪಕ ಪಿ.ವಿ.ಪಾಟೀಲ್, ಶಿವಾನಂದ ಮಸಬಿನಾಳ, ಪತ್ರಕರ್ತ ಅನೀಲ ಸನದಿ, ಪ್ರಕಾಶ ಭಟ್, ವೀರಶೈವ ಲಿಂಗಾಯತ ಸಮಾಜದ ಜುವಾರಿನಗರ ಅಧ್ಯಕ್ಷ ರುದ್ರಯ್ಯ ಹಿರೇಮಠ, ರಾಮನಗೌಡ ಕಾರಟಿ, ಮತ್ತಿತರರು ಉಪಸ್ಥಿತರಿದ್ದು ಮಾತನಾಡಿದರು. ಸಂಗೀತ ಶಿಕ್ಷಕ ಬಾಬು ಬೂಸಾರಿ ಹಚ್ಚೇವು ಕನ್ನಡದ ದೀಪ ಗೀತೆ ಹಾಡಿದರು. ಶಾಲಾ ವಿದ್ಯಾರ್ಥಿಗಳು ಸ್ವಾಗತ ಗೀತೆ ಹಾಡಿದರು. ಶಿಕ್ಷಕ ಪಿವಿ ಪಾಟೀಲ್ ಕಾರ್ಯಕ್ರಮಕ್ಕೆ ಸ್ವಾಗತ ಕೋರಿದರು. ಹಿರಿಯ ಶಿಕ್ಷಕ ಸುಧೀರ ಬೆಂಡೆ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ವನಜಾ ರೊಸಲಿನ್ ವಂದನಾರ್ಪಣೆಗೈದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ