ನಮ್ಮ ದೇಶದಲ್ಲಿ ಅಧಿಕಾರವನ್ನು ಕೆಲವರು ಆಯ್ಕೆ ಮುಖಾಂತರ ದಕ್ಕಿಸಿಕೊಂಡು ಹತ್ತಾರು ವರ್ಷಗಳ ಕಾಲ ದೇಶವನ್ನು ಆಳಿದರೂ ಹೇಳಿಕೊಳ್ಳುವ ಸಾಧನೆ ಮಾಡದೇ ಹೋಗುತ್ತಾರೆ. ಇನ್ನು ಹಲವರು ಜನರಿಂದ ರಾಜತಾಂತ್ರಿಕವಾಗಿ ಆಯ್ಕೆಯಾಗಿ ಅಧಿಕಾರದಲ್ಲಿ ಕೆಲವೇ ತಿಂಗಳುಗಳ ಕಾಲ ಇದ್ದರೂ ಇಡೀ ದೇಶವೇ ನೂರಾರು ವರ್ಷಗಳ ಕಾಲ ನೆನಪಿಸಿಕೊಳ್ಳುವಂತಹ ಸಾಧನೆಯನ್ನು ಮಾಡಿ ಎಲೆಮರೆ ಕಾಯಿಯಂತೆ ಹೋಗಿಬಿಡುತ್ತಾರೆ. ಎರಡನೇ ರೀತಿಯ ವ್ಯಕ್ತಿಗಳ ಸಾಲಿಗೆ ಸೇರುವವರು ಹೆಮ್ಮೆಯ ಪ್ರಧಾನಿಗಳಾಗಿದ್ದ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿಗಳು.
ಭಾರತದಲ್ಲಿ ಗಾಂಧೀಜಿ ಅವರ ನಂತರ ಅಂತರಾಷ್ಟ್ರೀಯ ಮಟ್ಟದಲ್ಲಿ ಸರಳತೆ ಸತ್ಯ ಹಾಗೂ ಅಹಿಂಸೆಯನ್ನು ಸಾರಿದ ವ್ಯಕ್ತಿ ಯಾರಾದರೂ ಇದ್ದರೆ ಅದು ನಮ್ಮ ದೇಶದ ಎರಡನೇ ಪ್ರಧಾನಿ ಹಾಗೂ ಮಹಾನ್ ಶಾಂತಿದೂತ ಲಾಲ್ ಬಹದ್ದೂರ್ ಶಾಸ್ತ್ರಿ ಜಿ. ಉತ್ತರ ಪ್ರದೇಶದ ಹಿಂದೂಗಳ ಪರಮ ಪವಿತ್ರ ಕ್ಷೇತ್ರವಾದ ವಾರಾಣಸಿಯಿಂದ ಏಳು ಕಿಲೋಮೀಟರ್ ದೂರದಲ್ಲಿರುವ ಮುಗಲ್ ಸರಾಯ್ ಎಂಬ ಪುಟ್ಟ ಹಳ್ಳಿಯಲ್ಲಿ ಅಕ್ಟೋಬರ್ 2, 1904ರಂದು ಜನಿಸಿದ ಶ್ರೀ ಲಾಲ್ ಬಹಾದ್ದೂರ್ ಶಾಸ್ತ್ರಿಯವರು ದೇಶ ಕಂಡ ಶ್ರೇಷ್ಠ ಮುತ್ಸದ್ಧಿ ಸಜ್ಜನ ನೇತಾರ.
ಲಾಲ್ ಬಹದ್ದೂರ್ ಶಾಸ್ಗ್ರಿಗಳು ತಮ್ಮ ಒಡಹುಟ್ಟಿದ 13 ಜನರ ಪೈಕಿ ಕಡೆಯವರಾಗಿದ್ದ ಕಾರಣ ಪ್ರೀತಿಯಿಂದ ನನ್ಹೆ ಅರ್ಥಾತ್ ಪುಟ್ಟ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಮುಂದೆ ಅದೇ ಅನ್ವರ್ಥವಾಗಿ ಶಾಸ್ತ್ರಿಗಳು ಕೇವಲ 5 ಅಡಿ 2 ಇಂಚು ಎತ್ತರದ ಸರಳ ಸಾಧಾರಣವದ ಖಾದಿಯ ಧೋತಿ ಧರಿಸುತ್ತಲೇ ದೇಶದ ಅತ್ಯುನ್ನತ ಪ್ರಧಾನಿ ಪಟ್ಟಕ್ಕೆ ಏರಿದ್ದರು ಎಂದರೆ ಅವರ ಸಾಮರ್ಥ್ಯ ಎಷ್ಟಿತ್ತು ಎಂಬುದರ ಅರಿವಾಗುತ್ತದೆ. ಶಾಸ್ತ್ರಿಜೀಯವರು ಬಾಳಿ ಬದುಕಿದ ರೀತಿ ನಿಜಕ್ಕೂ ನಮಗೆಲ್ಲರಿಗೂ ಆದರ್ಶ ಅನುಕರಣೀವಾದವು.
ಸರಳತೆಗೆ ಅನ್ವರ್ಥವೇ ಶಾಸ್ತ್ರಿಗಳು :
ಭಾರತದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರದ್ದು ಮೇರು ವ್ಯಕ್ತಿತ್ವ. ಎರಡು ದಶಕಗಳ ನೆಹರೂ ಆಡಳಿತ ಕೊನೆಗೊಂಡಾಗ ಭಾರತವನ್ನು ಮುನ್ನಡೆಸುವವರು ಯಾರು ಎಂಬ ಪ್ರಶ್ನೆ ಎದುರಾಗಿತ್ತು. ಆ ಸಮಯದಲ್ಲಿ ದೇಶದ ಜನರಿಗೆ ಬೇಕಾಗಿದ್ದದ್ದು ಒಬ್ಬ ದಕ್ಷ ಮತ್ತು ಸಜ್ಜನ ರಾಜಕಾರಣಿ. ದೇಶದ ಆರ್ಥಿಕತೆಗೆ ಶಕ್ತಿ ತುಂಬಬಲ್ಲ ಪ್ರಾಮಾಣಿಕ ವ್ಯಕ್ತಿ. ದೇಶವನ್ನು ಸಮರ್ಥವಾಗಿ ಮುನ್ನಡೆಸಬಲ್ಲ ನಾಯಕ. ಭಾರತದ ಜನ ಲಾಲ್ ಬಹದ್ದೂರ್ ಶಾಸ್ತಿ್ರಯವರಲ್ಲಿ ಈ ಎಲ್ಲಾ ಗುಣಗಳನ್ನು ಕಂಡಿದ್ದರು. ಹಾಗಾಗಿ ದೇಶ ಶಾಸ್ತ್ರೀಜಿಯವರನ್ನು ಪ್ರಧಾನಿ ಸ್ಥಾನಕ್ಕೆ ಬಯಸಿತ್ತು. ಕಾಂಗ್ರೆಸ್ಸಿಗರಿಗೂ ನೆಹರೂರವರ ಸಾಮರ್ಥ್ಯಕ್ಕೆ ಸರಿಸಾಟಿಯಾಗಬಲ್ಲ ನಾಯಕರಾಗಿ ಕಂಡದ್ದು ಲಾಲ್ ಬಹದ್ದೂರ್ ಶಾಸ್ತ್ರೀಜಿಯವರು. ಶಾಸ್ತ್ರೀಜಿ ದೇಶದ ಚುಕ್ಕಾಣಿ ಹಿಡಿದರು. ಹಾಗೆ ನೋಡಿದರೆ ಬಡತನದಲ್ಲೇ ಹುಟ್ಟಿ, ಬಡತನದಲ್ಲೇ ಬೆಳೆದು, ಬಡತನದಲ್ಲೇ ನಿಧನರಾದ ಭಾರತದ ಏಕೈಕ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ. ಬಡತನ ಅವರಿಗೆ ಸಹನೆ, ತಾಳ್ಮೆ ಮತ್ತು ವಿನಯವನ್ನು ಕಲಿಸಿತ್ತು.
ಸರಳ ಸಜ್ಜನ ಹಾಗೂ ಸಮರ್ಥ ರಾಜಕಾರಣಿ:
ಅವರು ಆಡಳಿತ ನಡೆಸಿದ್ದು ಕೆಲವೇ ಕೆಲವು ತಿಂಗಳುಗಳಾದರೂ ಅಷ್ಟುಸಣ್ಣ ಅವಧಿಯಲ್ಲೇ ಪಾಕಿಸ್ತಾನದೊಂದಿಗಿನ ಯುದ್ಧದಲ್ಲಿ ದೇಶವನ್ನೂ ಮುನ್ನಡೆಸಿದರು. ದೇಶದಲ್ಲಿನ ಆಹಾರ ಕೊರತೆಯನ್ನು ನೀಗಿಸಿದರು. ಹಿಂದಿ-ಇಂಗ್ಲಿಷ್ ಭಾಷಾ ಗೊಂದಲವನ್ನು ಬಗೆಹರಿಸಿದರು. ಕಾಶ್ಮೀರದ ಹಜರತ್‌ಬಾಲ್‌ನಂತಹ ಸಮಸ್ಯೆಯನ್ನು ಹೂವೆತ್ತಿದಂತೆ ಪರಿಹರಿಸಿದರು. ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ಭಾರತದ ಅವಿಭಾಜ್ಯ ಅಂಗವೆಂದು ಗಟ್ಟಿದನಿಯಲ್ಲಿ ಹೇಳಿದರು. ಶಾಸ್ತ್ರೀಜಿ ಪ್ರಧಾನಿಯಾಗಿದ್ದಾಗ ನೆರೆಯ ಚೀನಾದ ಕ್ಯಾತೆಗೆ ಬಗ್ಗಲಿಲ್ಲ. ವಿಶ್ವಸಂಸ್ಥೆಯ ಒತ್ತಡಕ್ಕೂ ಮಣಿಯಲಿಲ್ಲ. ಅಮೆರಿಕದ ಬೆದರಿಕೆಗೆ ಕ್ಯಾರೇ ಎನ್ನಲಿಲ್ಲ. ಕೊನೆಗೆ ಶಾಂತಿ ಮಂತ್ರ ಜಪಿಸುತ್ತಾ ತಾಷ್ಕೆಂಟಿಗೆ ಹೋಗಿ ಅಲ್ಲಿ ತಮ್ಮ ಜೀವವನ್ನೇ ಬಲಿಕೊಟ್ಟರು.
ಪ್ರಾಮಾಣಿಕತೆಯ ಪ್ರತಿ ರೂಪ:
ಸ್ವತಂತ್ರ ಸಂಗ್ರಾಮದಲ್ಲಿ ಭಾಗವಹಿಸಿ, ಜೈಲಿನಲ್ಲಿದ್ದವರ ಕುಟುಂಬಕ್ಕೆ ತಿಂಗಳಿಗೆ 50 ರು ಪಾವತಿ ಮಾಡಲಾಗುತ್ತಿತ್ತು. ಇದರ ಬಗ್ಗೆ ಹೆಂಡತಿಗೆ ಪತ್ರ ಬರೆದಿದ್ದ ಶಾಸ್ತ್ರಿ ಅವರು 50 ರೂ ಸರಿಯಾಗಿ ಬರುತ್ತಿದೆಯಾ ಎಂಬುದನ್ನ ಕೇಳಿದಾಗ, ಅವರ ಪತ್ನಿ, ಬರುತ್ತಿದೆ, ಅದರಲ್ಲಿ 40 ರೂ ಖರ್ಚಾಗಿ 10 ರೂ ಉಳಿಯುತ್ತಿದೆ ಎಂದಿದ್ದರು. ಅದನ್ನು ತಿಳಿದ ಅವರು ಹಣ ನೀಡುತ್ತಿದ್ದ ಸಂಸ್ಥೆಗೆ ಪತ್ರ ಬರೆದು, ನಮಗೆ 40 ರೂ ಸಾಕು 10 ರೂವನ್ನು ಕಷ್ಟದಲ್ಲಿರುವ ಇತರೆ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡಬೇಕೆಂದು ಮನವಿ ಮಾಡಿದ್ದರಂತೆ.
ಉದಾತ್ತ ಗುಣಗಳ ಗಣಿ:
ಶಾಸ್ತ್ರೀಜಿಯವರು ಪ್ರಧಾನಮಂತ್ರಿಗಳಾಗಿದ್ದಾಗ ಅದೊಂದು ದಿನ ಬಿಹಾರದಿಂದ ಒಂದಷ್ಟುಜನ ಅವರನ್ನು ಭೇಟಿ ಮಾಡಲು ಅನುಮತಿ ಕೇಳಿದ್ದರು. ಶಾಸ್ತ್ರೀಜಿಯವರು ಸಂಸತ್ ಭವನದಲ್ಲಿ ನಡೆಯುತ್ತಿದ್ದ ಸಭೆಯೊಂದರಲ್ಲಿ ಭಾಗಿಯಾಗಿದ್ದರು. ಸಭೆ ಮುಗಿಯುವುದು ಸ್ವಲ್ಪ ತಡವಾಯಿತು. ಸಭೆ ಮುಗಿದ ಕೂಡಲೇ ಮನೆಗೆ ಬಂದರು. ಆದರೆ ಅದಾಗಲೇ ಬಿಹಾರದಿಂದ ಬಂದಿದ್ದ ಜನ ಪ್ರಧಾನಿಗಳಿಗೆ ಕಾದು ಅಲ್ಲಿಂದ ಹೊರಟುಬಿಟ್ಟಿದ್ದರು. ಮನೆಗೆ ಬಂದ ಕೂಡಲೇ ತಮ್ಮನ್ನು ಭೇಟಿ ಮಾಡಲು ಬಂದಿದ್ದ ಜನರ ಬಗ್ಗೆ ವಿಚಾರಿಸಿದಾಗ ಈಗಷ್ಟೇ ಹೊರಟುಹೋದರು ಎಂಬ ವಿಷಯ ತಿಳಿದು ಬಹುಶಃ . ಕೂಡಲೇ ಶಾಸ್ತ್ರೀಜಿಯವರು ಸರಸರನೆ ನಡೆದುಕೊಂಡೇ ಬಸ್ ನಿಲ್ದಾಣದತ್ತ ಹೊರಟುಬಿಟ್ಟರು. ಅವರ ಕಾರ್ಯದರ್ಶಿ ಆ ಎಲ್ಲರನ್ನೂ ಇಲ್ಲಿಗೇ ಕರೆಸುತ್ತೇನೆ ಎಂದರೂ ಪ್ರಧಾನಿಗಳು ಕೇಳಲಿಲ್ಲ. ಖುದ್ದಾಗಿ ಬಸ್ ನಿಲ್ದಾಣದಲ್ಲಿ ಅವರೆಲ್ಲರನ್ನೂ ಭೇಟಿ ಮಾಡಿ ಮನೆಗೆ ಕರೆದುಕೊಂಡು ಬಂದು ಮಾತನಾಡಿಸಿದರು.
ಸರಳತೆಯ ಸಾಕಾರ ಮೂರ್ತಿ:
ಅದೊಂದು ದಿನ ದೆಹಲಿಯ ಕುತುಬ್ ಮಿನಾರ್‌ನಲ್ಲಿ ಪ್ರಧಾನಿ ನೆಹರೂರವರ ಕಾರ್ಯಕ್ರಮವೊಂದು ಆಯೋಜನೆಗೊಂಡಿತ್ತು. ಅದನ್ನು ಮುಗಿಸಿ ವಾಪಾಸ್ ಬರುವ ಹಾದಿಯಲ್ಲಿ ಕಾರು ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಬಳಿ ಬಂದಾಗ ರೈಲ್ವೆ ಕ್ರಾಸಿಂಗ್‌ನ ಬಾಗಿಲು ಮುಚ್ಚಿಬಿಟ್ಟಿತು. ಶಾಸ್ತ್ರೀಜಿಯವರು ಕಿಟಕಿಯಿಂದ ಹಾಗೇ ಹೊರಗೆ ನೋಡಿದರು. ಅಲ್ಲೇ ಹತ್ತಿರದಲ್ಲಿ ವ್ಯಾಪಾರಿಯೊಬ್ಬ ಕಬ್ಬನ್ನು ಅರೆಯುತ್ತಾ ಕಬ್ಬಿನ ರಸವನ್ನು ಮಾರುತ್ತಿದ್ದ. ಕೂಡಲೆ ಶಾಸ್ತ್ರೀಜಿ ತಮ್ಮ ಮಾಧ್ಯಮ ಸಲಹೆಗಾರರಿಗೆ ‘ರೈಲ್ವೆ ಗೇಟು ತೆಗೆಯುವವರೆಗೆ ಕಬ್ಬಿನ ಹಾಲು ಕುಡಿದು ಬರಬಹುದಲ್ಲವೇ?’ ಎಂದು ಹೇಳಿ ಕಾರಿನ ಬಾಗಿಲು ತೆಗೆದು ಸರಸರನೆ ಆ ಕಬ್ಬಿನ ಗಾಡಿಯತ್ತ ಹೆಜ್ಜೆ ಹಾಕಿದರು. ಮಾಧ್ಯಮ ಸಲಹೆಗಾರರಿಗೆ ಏನು ಹೇಳಬೇಕು ಎನ್ನುವುದೇ ತಿಳಿಯದಾಗಿತ್ತು. ಅವರು ಸುಮ್ಮನೆ ಶಾಸ್ತ್ರೀಜಿಯವರನ್ನು ಹಿಂಬಾಲಿಸಿದರು. ಇಬ್ಬರೂ ಒಂದೊಂದು ಗ್ಲಾಸ್ ಕಬ್ಬಿನ ಹಾಲು ಕುಡಿದರು. ಶಾಸ್ತ್ರೀಜಿ ತಮ್ಮ ಕಿಸೆಯಿಂದ ಹಣ ತೆಗೆದುಕೊಟ್ಟರು. ಸುತ್ತಮುತ್ತ ಯಾರೂ ಇವರನ್ನು ಗಮನಿಸಲಿಲ್ಲ. ಕಬ್ಬಿನ ಹಾಲಿನ ವ್ಯಾಪಾರಿಗೂ ಇವರು ಯಾರು ಎಂದು ತಿಳಿಯಲಿಲ್ಲ. ಅಲ್ಲದೆ ಶಾಸ್ತ್ರೀಜಿಯವರೂ ತಾವು ಯಾರೆಂದು ಆ ವ್ಯಾಪಾರಿಯ ಬಳಿ ಹೇಳಲಿಲ್ಲ.
ಲಾಲ್ ಬಹದ್ದೂರ್ ಶಾಸ್ತ್ರಿಯವರು ಕಡಿಮೆ ಸಮಯದಲ್ಲಿ ತಮ್ಮ ಉದಾತ್ತ ನೀತಿಗಳು ಮತ್ತು ಪ್ರಭಾವಶಾಲಿ ಘೋಷಣೆಗಳಿಂದ ರಾಷ್ಟ್ರದ ಆಕಾರವನ್ನು ಬದಲಾಯಿಸಿದರು. ಅವುಗಳಲ್ಲಿ ಕೆಲವು ಶಾಸ್ತ್ರಿ ಜೀಯವರ ಸ್ಫೂರ್ತಿ ದಾಯಕ ನೀತಿಗಳು.
••••••••••••••••••••••••••••••••••••••••••••••••••••••••••
* ಸ್ವಾತಂತ್ರ್ಯವನ್ನು ಕಾಪಾಡುವ ಜವಾಬ್ದಾರಿ ಬರೀ ಯೋಧರಲ್ಲ, ಅದು ಇಡೀ ದೇಶದ ಜವಾಬ್ದಾರಿ.
* ನಾವು ಬರೀ ನಮಗಾಗಿ ಶಾಂತಿಯನ್ನು ಬಯಸುತ್ತಿಲ್ಲ ಇಡೀ ಜಗತ್ತಿನ ಏಳಿಗೆಗಾಗಿ ಶಾಂತಿಯನ್ನು ಪ್ರತಿಪಾದಿಸುತ್ತಿದ್ದೇವೆ.
* ಸುಳ್ಳು ಹಾಗೂ ಹಿಂಸೆಯಿಂದ ನಿಜವಾದ ಪ್ರಜಾಪ್ರಭುತ್ವ ಸೃಷ್ಟಿಯಾಗಲು ಸಾಧ್ಯವೇ ಇಲ್ಲ.
* ನಮ್ಮ ಕೆಲಸ ಮಾತಿನಿಂದಲ್ಲ ಫಲಿತಾಂಶದಿಂದ ವ್ಯಕ್ತವಾಗಬೇಕು.
* ನಾವು ಆಂತರಿಕವಾಗಿ ಬಲಿಷ್ಠರಾಗಿ ಬಡತನ ಮತ್ತು ನಿರುದ್ಯೋಗವನ್ನು ಶಾಶ್ವತವಾಗಿ ನಮ್ಮ ದೇಶದಿಂದ ತೊಲಗಿಸಿದರೆ ಮಾತ್ರ ನಾವು ಜಗತ್ತಿನ ಗೌರವವನ್ನು ಸಂಪಾದಿಸಬಹುದು.
* ಶಿಸ್ತು ಮತ್ತು ಒಗ್ಗಟ್ಟು ದೇಶದ ಶಕ್ತಿಯ ಮೂಲವಾಗಿದೆ.
* ದೇಶದ ಪ್ರಜಾತಂತ್ರ ಗಟ್ಟಿಯಾಗಿ ಉಳಿಯಬೇಕೆಂದರೆ ಪ್ರತಿಯೊಬ್ಬರೂ ಕಾನೂನನ್ನು ಗೌರವಿಸುವುದು ಅನಿವಾರ್ಯವಾಗಿದೆ.
* ಜೈ ಜವಾನ್ ಜೈ ಕಿಸಾನ್. (1965 ರಲ್ಲಿ ಇಂಡೋ-ಪಾಕ್ ಯುದ್ಧದ ಸಮಯದಲ್ಲಿ ಜೈ ಜವಾನ್, ಜೈ ಕಿಸಾನ್ ಎಂಬ ಜನಪ್ರಿಯ ಘೋಷಣೆಯನ್ನು ಹಾಕಿದರು)
ಲಾಲ ಬಹದ್ದೂರ್ ಶಾಸ್ತ್ರಿಗಳು ಕೇವಲ 17 ತಿಂಗಳು ಪ್ರಧಾನಿಯಾಗಿದ್ದರೂ 17 ವರ್ಷಗಳ ಕಾಲ ದೇಶವನ್ನಾಳಿದ ನೆಹರು ಅವರನ್ನೇ ಮರೆಯುವಂತೆ ಮಾಡಿದ್ದರು ಎಂದರೂ ಅತಿಶಯೋಕ್ತಿಯೇನಲ್ಲ. ಶಾಂತಿದೂತ, ಚೀನಿ ಗಡಿಯಲ್ಲಿ ಕಳೆದು ಹೋಗಿದ್ದ ಭಾರತದ ಗೌರವವನ್ನು ಮತ್ತೆ ವಿಶ್ವ ರಂಗದಲ್ಲಿ ಸ್ಥಾಪಿಸಿದ ಮಹಾನ್ ರಾಜಕಾರಣಿ, ಸ್ವಾಭಿಮಾನದ ಪ್ರತಿರೂಪ ಚಿಕ್ಕಮೂರ್ತಿ ಚೊಕ್ಕಮೂರ್ತಿ, ಕೆಲಸ ಮನಸ್ಸು ಮಾತು ಮೂರನ್ನು ಶುದ್ಧವಾಗಿಟ್ಟುಕೊಂಡು ಬಾಳಿದ ಜೀವ, ನಿರ್ಲಿಪ್ತ, ಸ್ವಾರ್ಥ ರಹಿತ, ಸರಳತೆಯ ಸಹಕಾರ, ಪ್ರಾಮಾಣಿಕತೆಗೆ ಮತ್ತೊಂದು ಹೆಸರು ನಮ್ಮ ಭಾರತದ ನಿಜವಾದ "ಭಾರತ ರತ್ನ " ಶಾಸ್ತ್ರೀಜೀಯಂತಹ ಮಹಾತ್ಮರೊಬ್ಬರು ನಮ್ಮ ದೇಶದ ಪ್ರಧಾನಿಯಾಗಿದ್ದರು ಎಂಬುದೇ ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಅವರ ಜನ್ಮ ದಿನವಾದ ಅಕ್ಟೋಬರ್ 2ರಂದು ಇಂತಹ ಪ್ರಾತಃಸ್ಮರಣೀಯರನ್ನು ನೆನೆಯದೇ ಹೋದಲ್ಲಿ ನಾವು ಬದಕಿದ್ದೂ ಸತ್ತಂತೆಯೇ ಸರಿ.. ಹಾಗಾಗಿ ಅವರ ಮೆಚ್ಚಿನ ಘೋಷಣೆಯಾದ ಜೈ ಜವಾನ್ ಜೈ ಕಿಸಾನ್ ಎಂಬುದನ್ನು ಒಮ್ಮೆ ಗಟ್ಟಿಯಾದ ಧ್ವನಿಯಲ್ಲಿ ಹೇಳುವುದರ ಜೊತೆಗೆ ತುಂಬು ಹೃದಯದಿಂದ ಅವರಿಗೊಂದು ನಮನಗಳನ್ನು ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವೇ ಹೌದು.
-ಸೌಮ್ಯ ಸನತ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ