ಯುವ ಜನತೆಯಲ್ಲಿ ಸಂಸ್ಕಾರದ ಕೊರತೆಯೇ?

Upayuktha
0



ಲ್ಲರ ಮನೆಗಳಲ್ಲಿರುವ ಬೆಳ್ಳಿಯ, ಹಿತ್ತಾಳೆಯ ಮತ್ತು ಕಂಚಿನ ಪಾತ್ರೆಗಳನ್ನು ಅವಶ್ಯಕತೆ ಇದ್ದಾಗ ಹುಣಸೆಹಣ್ಣು ಹಾಕಿ ತೊಳೆದು ತಳ ತಳಿಸುವಂತೆ ಮಾಡಿ ಒಣ ಬಟ್ಟೆಯಿಂದ ಒರೆಸಿ ಪೂಜೆಗೆ ಬಳಸುತ್ತೇವೆ. ಪಾತ್ರೆಗಳು ಹಳೆಯವಾಗಿರಬಹುದು ಆದರೆ ಅವುಗಳ ಮೂಲ ಗುಣವನ್ನು ಅವು ಎಂದು ಮರೆತಿಲ್ಲ..... ಬಳಸದೆ ಹೋಗಿರುವುದರಿಂದ ಅವುಗಳ ಬಣ್ಣ ಮಾಸಿ ಹೋಗಿರಬಹುದು ಹೊಳಪು ಕಳೆದಿರಬಹುದು. ಅಂತೆಯೇ ಮಕ್ಕಳಲ್ಲಿ ಸಂಸ್ಕಾರ ಕೂಡ. ಚಿಕ್ಕಂದಿನಿಂದಲೇ ಗುರು ಹಿರಿಯರಲ್ಲಿ ಭಕ್ತಿ, ಸ್ನೇಹಿತರಲ್ಲಿ ಪ್ರೀತಿ ವಿಶ್ವಾಸ, ದೀನದಲಿತರಲ್ಲಿ ಕರುಣೆ ಮುಂತಾದ ಗುಣಗಳನ್ನು ಗುಣಗಳನ್ನು ಪಾಲಕರು ತಮ್ಮ ಮಕ್ಕಳಿಗೆ ಖಂಡಿತವಾಗಿ ಹೇಳಿಕೊಟ್ಟಿರುತ್ತಾರೆ ಮತ್ತು ಮಕ್ಕಳು ಅದನ್ನು ಪಾಲಿಸಿಯೇ ಇರುತ್ತಾರೆ. 




ಉತ್ತಮ ನಾಗರಿಕತೆಯನ್ನು, ಸಾಮಾಜಿಕ ಪ್ರಜ್ಞೆಯನ್ನು ಬಹುತೇಕ ಎಲ್ಲ ಮಕ್ಕಳು ತಮ್ಮ ಸುಸಂಸ್ಕೃತ ಪಾಲಕರಿಂದ ಪಡೆದೆ ಇರುತ್ತಾರೆ. ಇನ್ನೂ ಕೆಲ ನತದೃಷ್ಟ ಮಕ್ಕಳು ಪಾಲಕರಿಂದ ಪಡೆಯದೆ ಹೋದರು ಸಾಮಾಜಿಕ ನೀತಿ ನಿಯಮಾವಳಿಗಳನ್ನು ನೋಡಿ, ಅರಿತು ಕಲಿತಿರುತ್ತಾರೆ. ಶಾಲೆ ಕಾಲೇಜುಗಳಲ್ಲಿ ಕೂಡ ಮೌಲ್ಯ ಶಿಕ್ಷಣದ ಹೆಸರಿನಲ್ಲಿ ಪ್ರೀತಿ, ವಿಶ್ವಾಸ, ನಂಬಿಕೆ, ಕರುಣೆ, ಸಹಾಯತಾ ಮನೋಭಾವ, ಸ್ನೇಹಪರತೆ ಅಭಿಮಾನಗಳನ್ನು ಕಲಿಸಿರುತ್ತಾರೆ. ಬದುಕಿನ ನಾಗಾಲೋಟದ ಈ ಸಮಯದಲ್ಲಿ ಮಕ್ಕಳು ಬಹುಬೇಗ ಮನೆಯಿಂದ ದೂರವಾಗಿ ವಸತಿ ಶಾಲೆಗಳಲ್ಲಿ, ಕಾಲೇಜಿನ ಹಾಸ್ಟೆಲುಗಳಲ್ಲಿ ಇರತೊಡಗುತ್ತಾರೆ. 




ಎಂತದ್ದೇ ಆಧುನಿಕತೆಯ ಬಿರುಗಾಳಿ ಬೀಸಿದರು ನಮ್ಮ ಸ್ವಂತಿಕೆಯ ಮೂಲ ಬೇರನ್ನು ಉಳಿಸಿಕೊಂಡು ಬರುವ ಮಕ್ಕಳಿಗೇನು ಕೊರತೆಯಿಲ್ಲ.! ಆದರೆ ಆಧುನಿಕತೆಯ ಮಹಾ ಪ್ರವಾಹದ ಹೊಡೆತಕ್ಕೆ ಸಿಲುಕಿ ಬುಡ ಸಮೇತ ಉರುಳಿ ಹೋಗಿರುವ ನೂರಾರು ಮರಗಳು ಇದ್ದರೂ ಸಾವಿರಾರು ಲಕ್ಷಾಂತರ ಮರಗಳು ಇನ್ನೂ ಗಟ್ಟಿಯಾಗಿ ತಮ್ಮ ಮೂಲವನ್ನು ಹಿಡಿದು ಕುಳಿತುಕೊಂಡಿವೆ. ಅಂತೆಯೇ ಅವುಗಳ ಮೇಲೆ ಕಾಲನ ಪ್ರವಾಹದ ಧೂಳು ಮುಸುಕಿರಬಹುದು, ಬಾಹ್ಯ ಆಕಾರ ವಿಕಾರಗೊಂಡಿರಬಹುದು ಮೂಲದ ಬೇರಿನಲ್ಲಿ ಇನ್ನೂ ಸತ್ವವಿದೆ.ಅದರ ಅರಿವು ಅವರಿಗಾಗಬೇಕಷ್ಟೆ.




ಎಷ್ಟೋ ಬಾರಿ ತಮಗೆ ತಮ್ಮ ಸಂಸ್ಕೃತಿಯ ಬಗ್ಗೆ ಅರಿವಿದ್ದರೂ ಕೂಡ ಮಕ್ಕಳು ತಮ್ಮ ಜೊತೆಗಿರುವವರ ಮುಂದೆ ತಾವು ಕೂಡ ಆಧುನಿಕರು ಎಂದು ತೋರಿಸಿಕೊಳ್ಳುವ ಭರದಲ್ಲಿ ಆಧುನಿಕತೆಯ ಸೋಗನ್ನು ಹಾಕುತ್ತಾರೆ. ತಾವು ಕೂಡ ಚೆನ್ನಾಗಿ ದುಡಿಯುತ್ತಿದ್ದೇವೆ ಎಂದು ತೋರಿಸಿಕೊಳ್ಳಲು ಬ್ರಾಂಡೆಡ್ ಬಟ್ಟೆಗಳು, ಶೂಗಳು, ವಾಚುಗಳು, ಮೊಬೈಲ್ ಮತ್ತಿತರ ಎಕ್ಸೆಸರಿಗಳ ಮೂಲಕ ಮತ್ತೊಬ್ಬರನ್ನು ಅಳೆಯುವ ಪರಿಪಾಠ ಶುರುವಾಗಿದೆ. ಆದ್ದರಿಂದಲೇ ಒಬ್ಬರನ್ನು ನೋಡಿ ಮತ್ತೊಬ್ಬರು ತಾವೇನು ಕಡಿಮೆ ಎಂಬಂತೆ ಹೊರಗಿನ ಥಳುಕಿನ  ಪ್ರಪಂಚಕ್ಕೆ ಮಾರುಹೋಗುತ್ತಿದ್ದಾರೆ. 




ಅದೆಷ್ಟೇ ಗಿಡ ಉದ್ದ ಬೆಳೆದರೂ ತನ್ನ ರೆಂಬೆ ಕೊಂಬೆಗಳನ್ನು ಜಾಚಿದರೂ ಕುಟುಂಬ ಎಂಬ ಮೂಲ ತಾಯಿಬೇರಿನಿಂದ ಹೊರತಾಗಿರುವುದಿಲ್ಲ ಎಂಬ ಸತ್ಯ ಅವರಿಗೆ ಅರಿವಿಗೆ ಬರುವ ಹೊತ್ತಿಗೆ ಕಾಲ ಸಂದು ಹೋಗಿರುತ್ತದೆ. ಹಾಗೆ ಕಾಲಸರಿಯುವ ಮುನ್ನವೇ ಅರಿವಿಗೆ ಬರಬೇಕಾದರೆ ಈ ಯುವ ಜನತೆ ಮಾಡಬೇಕಾದದ್ದು ಇಷ್ಟೇ,..... ತಾನು ಮಾಡುತ್ತಿರುವ ಕೆಲಸ ತನಗೆ ಕಸಿವಿಸಿ ಉಂಟು ಮಾಡುತ್ತಿದೆಯಾ? ತಾನು ತನ್ನ ಕಂಫರ್ಟ್ ಜೋನ್ ನಲ್ಲಿ ಇದ್ದುಕೊಂಡು ಈ ರೀತಿ ಮಾಡುತ್ತಿದ್ದೇನೆಯೇ?? ಎಂದು ಯೋಚಿಸಬೇಕು. ಮತ್ತು ಹಾಗೆ ತನಗಿಷ್ಟವಾಗದೇ ಇರುವುದನ್ನು ಮಾಡದೇ ಇರಲು ಗಟ್ಟಿ ಮನಸ್ತತ್ವವನ್ನು  ರೂಢಿಸಿಕೊಳ್ಳಬೇಕು.




ಊರಿನಲ್ಲಿ ಅಮ್ಮ ಹೇಳುವವರೆಗೆ ಕೈಕಾಲು ಮುಖ ತೊಳೆಯದೆ, ಸ್ನಾನ ಮಾಡದೆ ಮಂಗನಂತೆ ಆಡುವ ಮಕ್ಕಳು, ಪೂಜೆ ಪುನಸ್ಕಾರಗಳಲ್ಲಿ ಅಸಡ್ಡೆ ತೋರುವ  ಅಪ್ಪ ಅಮ್ಮಂದಿರನ್ನು ಅಜ್ಜಿ ತಾತನನ್ನು ಸದರದಿಂದ ನೋಡುವ ಮಕ್ಕಳು .... ಮನೆಯಿಂದ ದೂರವಾಗಿ ಓದು, ಉದ್ಯೋಗ ನಿಮಿತ್ತ ಹೊರ ಊರುಗಳಲ್ಲಿ ನೆಲೆಸಿದಾಗ ಅವರಿಗೆ ತಮ್ಮ ಮನೆಯ ಸಂಪ್ರದಾಯ ಸಂಸ್ಕೃತಿಗಳ ಅರಿವಾಗುತ್ತದೆ. ಅದರ ಹಿಂದಿನ  ಆಶಯಗಳು ಅರ್ಥವಾಗುತ್ತವೆ. ಹೊಸ ಗಾಡಿ ಖರೀದಿ ಮಾಡಿದಾಗ, ಪ್ರಮೋಷನ್ ಸಿಕ್ಕಾಗ  ಸ್ನೇಹಿತರೊಂದಿಗೆ ಪಾರ್ಟಿ ಮಾಡುವ ಮುನ್ನ ದೇವಸ್ಥಾನಕ್ಕೆ ಹೋಗಿ ವಾಹನವನ್ನು ಪೂಜಿಸಿ ಕಾಯಿ ಒಡೆಸಿಕೊಂಡು ಬರುತ್ತಾರೆ. ಪ್ರತಿ ಹಬ್ಬಗಳಿಗೆ ಊರಿಗೆ ಹೊರಟು ಬರುತ್ತಾರೆ. 




ಮೊದಲಿಗಿಂತ ವಿನೀತವಾಗಿ ಪೂಜೆ ಪುನಸ್ಕಾರಗಳಲ್ಲಿ ಪಾಲ್ಗೊಳ್ಳುತ್ತಾರೆ. ತಮ್ಮ ಪಾಲಕರಿಗಿಂತ ಹೆಚ್ಚು ವಸ್ತುನಿಷ್ಠವಾಗಿ ಸಂಪ್ರದಾಯಗಳ ಕುರಿತು ವೈಜ್ಞಾನಿಕವಾಗಿ ಮತ್ತು ವೈಚಾರಿಕವಾಗಿ ಯೋಚಿಸುತ್ತಾರೆ.. ಅದೆಷ್ಟೇ ಸ್ನೇಹಿತರ ಜೊತೆ, ಸಹೋದ್ಯೋಗಿಗಳ ಜೊತೆ ಪಿಕ್ನಿಕ್, ಪಾರ್ಟಿ, ಮೋಜು, ಮಸ್ತಿ ಎಂದು ಅಲೆದರು ಅದರ ಜೊತೆ ಜೊತೆಗೆ ಅಲ್ಲಿಯೇ ಸುತ್ತಲೂ ಇರುವ ದೇಗುಲಗಳಿಗೆ ಭೇಟಿ ನೀಡುತ್ತಾರೆ. ಅನ್ನಸಂತರ್ಪಣೆಯಲ್ಲಿ ಗಣೇಶ ಉತ್ಸವಗಳಲ್ಲಿ, ದಸರೆಯ ವೈಭೋಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಧನ್ಯತೆಯ ಭಾವವನ್ನು ಹೊಂದುತ್ತಾರೆ.




ಮನೆಯ ವಿಷಯಕ್ಕೆ ಬಂದರೆ ತಂದೆಗೆ ಆರ್ಥಿಕವಾಗಿ ಸಹಾಯಕವಾಗುತ್ತಾರೆ. ಅಜ್ಜ ಅಜ್ಜಿಗೆ ಅಮ್ಮ ಮತ್ತು ಸಹೋದರ ಸಹೋದರಿಯರಿಗೆ ಬಟ್ಟೆ ಬರೆ ತಂದು ಕೊಟ್ಟು ಸಂತೋಷಪಡಿಸುತ್ತಾರೆ. ಒಡಹುಟ್ಟಿದವರ ಓದು, ವಿದ್ಯಾಭ್ಯಾಸಕ್ಕೆ, ಮದುವೆ ಮುಂಜಿಗೆ ಮನೆಯ ಹಣಕಾಸಿನ ತೊಂದರೆಗಳಲ್ಲಿ ಅಪ್ಪನಿಗೆ ಊರುಗೋಲಾಗುತ್ತಾರೆ. ಇದು ಪ್ರತಿ ಮನೆಯ ಕಥೆ.




ನೂರಾರು ಧಾನ್ಯಗಳಲ್ಲಿ ಒಂದಷ್ಟು ಹುಳುಕಾಗಿರುವಂತೆ ಎಲ್ಲೋ ಕೆಲವು ಜನ ಹಾದಿ ತಪ್ಪಿದ್ದಾರೆ ಎಂದು ಅನ್ನಿಸ ಬಹುದು ಕೆಲವೊಮ್ಮೆ ತಪ್ಪಿರಲೂಬಹುದು ಆದರೆ ಅದಕ್ಕೆ ಸಂಸ್ಕಾರದ ಕೊರತೆ ಕಾರಣವಲ್ಲ ಅವರು ಬೆಳೆದು ಬಂದ ಪರಿಸರ ಮತ್ತು ಆ ಪರಿಸರದಿಂದ ಅವರು ಪಡೆದುಕೊಂಡ ಪಾಠಗಳು ಕಾರಣವಾಗಿರಬಹುದು. ಕಾಲಾಯ ತಸ್ಮೈ ನಮಃ ಎಂದು ಹೇಳಬಹುದು.


-ವೀಣಾ ಹೇಮಂತ್ ಗೌಡ ಪಾಟೀಲ್ , ಮುಂಡರಗಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top