ನಿವೃತ್ತ ಪ್ರಾಂಶುಪಾಲರಿಗೆ ಹಳೆ ವಿದ್ಯಾರ್ಥಿಗಳಿಂದ ಸನ್ಮಾನ
ಕುಮಟಾ: "ಒಂದು ಕಾಲೇಜು ಅಭಿವೃದ್ಧಿ ಪಥದತ್ತ ಸಾಗಬೇಕಾದರೆ ನಮ್ಮ ಜೊತೆ ವಿದ್ಯಾರ್ಥಿಗಳ ಬೆಂಬಲವೂ ಸಹಕಾರವು ಅತ್ಯಗತ್ಯವಾಗಿರುತ್ತದೆ. ಇಂದು ನನ್ನ ಈ ಸಾಧನೆಗೆ ನನ್ನ ವಿದ್ಯಾರ್ಥಿಗಳೇ ಕಾರಣ ನನ್ನ ವಿದ್ಯಾರ್ಥಿಗಳೇ ನನ್ನ ದೇವರು" ಎಂದು ಡಾಕ್ಟರ್ ಸರಸ್ವತಿ ಕಳಸದ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಸರಕಾರಿ ಪ್ರಥಮ ದರ್ಜೆ ಕಾಲೇಜು ಕುಮಟಾದಲ್ಲಿ ಮಂಗಳವಾರ ಸರಸ್ವತಿ ಆರ್ ಕಳಸದವರ ವಿಶ್ರಾಂತಿ ಜೀವನಕ್ಕೆ ಶುಭ ಹಾರೈಕೆಯ ಜೊತೆಗೆ ಅಭಿಮಾನದ ಸನ್ಮಾನ ಕಾರ್ಯಕ್ರಮವನ್ನು ಹಳೆಯ ವಿದ್ಯಾರ್ಥಿಗಳ ಸಂಘ ಹಮ್ಮಿಕೊಂಡಿತ್ತು. ಈ ಸಂದರ್ಭದಲ್ಲಿ ಸರಸ್ವತಿ ಕಳಸದವರು ತಮ್ಮ ಕಾಲೇಜಿನ ಅನುಭವವನ್ನು ಮೆಲಕು ಹಾಕಿದರು. ಈ ಕಾಲೇಜಿನ ಅಭಿವೃದ್ಧಿಗೆ ಸಹಕರಿಸಿದ ತಮ್ಮ ಕಾಲೇಜಿನ ಸಿಬ್ಬಂದಿಗಳು, ಮಾಜಿ ಶಾಸಕರಾದ ಮೋಹನ್ ಕೆ ಶೆಟ್ಟಿ ಹಾಗೂ ವಿದ್ಯಾರ್ಥಿಗಳ ಸಹಕಾರವನ್ನು ನೆನೆದರು. ಅವರಿಗೆಲ್ಲ ತಮ್ಮ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತಾ "ಜೀವನದಲ್ಲಿ ಮೊದಲು ಅವಮಾನ, ನಂತರದಲ್ಲಿ ಸನ್ಮಾನ" ಇದೇ ಜೀವನದ ಒಂದು ಸತ್ಯ ಎಂದು ವಿದ್ಯಾರ್ಥಿಗಳಿಗೆ ನುಡಿಮುತ್ತು ಹೇಳಿದರು.
ಈ ಕಾರ್ಯಕ್ರಮವನ್ನು ಮಾಜಿ ಶಾಸಕರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿ ಅವರು ಉದ್ಘಾಟಿಸಿದರು. ಸಭೆಯಲ್ಲಿ ಪ್ರಮೋದ್ ಹೆಗಡೆ, ಐ.ಕೆ. ನಾಯಕ್ ಕಾಲೇಜಿನ ಪ್ರಾಂಶುಪಾಲರಾದ ವಿಜಯಾ ನಾಯಕ್ ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ಯೋಗೀಶ್ ನಾಯಕ್ ಅವರು ನಿರೂಪಿಸಿದರು. ಹಳೆಯ ವಿದ್ಯಾರ್ಥಿಗಳಾದ ವಿನಾಯಕ ವನ್ನಹಳ್ಳಿ. ನೇತ್ರಾವತಿ ಮೊದಲಾದವರು ತಮ್ಮ ಇಂದಿನ ಜೀವನದ ಯಶಸ್ವಿಗೆ ಸರಸ್ವತಿ ಕಳಸದವರ ಒಂದು ಧೈರ್ಯ ಪ್ರೋತ್ಸಾಹ ಹುರಿದುಂಬಿಸುವಿಕೆ, ಅವರ ಒಂದು ಶಿಸ್ತಿನ ಮಾತುಗಳೇ ಕಾರಣವೆಂದು ವಿದ್ಯಾರ್ಥಿ ಜೀವನದ ನೆನಪುಗಳನ್ನು ಹಂಚಿಕೊಂಡರು.
ಸರಸ್ವತಿ ಕಳಸದವರ ಒಂದು ಜೀವನದ ಪರಿಚಯವನ್ನು ವಿಟಿ ಮೂಲಕ ಪ್ರದರ್ಶಿಸಲಾಯಿತು. ನಂತರದಲ್ಲಿ ಎಲ್ಲಾ ಬೋಧಕ- ಬೋಧಕೇತರ ಸಿಬ್ಬಂದಿಗಳಿಗೆ ನೆನಪಿನ ಕಾಣಿಕೆಯನ್ನು ನೀಡಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ವಿಜಯಾನಂದ ಡಾಕ್ಟರ್ ಸರಸ್ವತಿ ಕಳಸದವರನ್ನು ಸನ್ಮಾನಿಸಿದರು. ಕೊನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ವರದಿ: ಸೌಮ್ಯಾ ಕೊಡಿಯಾ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ