ಕುಡ್ಲದ ಪಿಲಿ ಪರ್ಬ-2023 ಗೆ ವಿಧ್ಯುಕ್ತ ಚಾಲನೆ

Upayuktha
0


ಮಂಗಳೂರು: ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಆಯೋಜಿಸಲಾಗಿರುವ ಎರಡನೇ ವರ್ಷದ 'ಕುಡ್ಲದ ಪಿಲಿಪರ್ಬ 2023' ಸ್ಪರ್ಧಾಕೂಟವು ಜಿಲ್ಲೆಯ ಕೇಂದ್ರ ಮೈದಾನದಲ್ಲಿ ತುಳುನಾಡಿನ ನೆಲದ ಪರಂಪರೆಯ ಹುಲಿವೇಷ ಕುಣಿತಕ್ಕೆ ರಾಷ್ಟ್ರಮಟ್ಟದಲ್ಲಿ ಮಾನ್ಯತೆ ದೊರಕಿಸುವ ಮತ್ತು ಈ ಕಲಾ ಶ್ರೇಷ್ಠತೆಯನ್ನು ಮುಂದಿನ ತಲೆಮಾರಿಗೆ ದಾಟಿಸುವ ಸದುದ್ದೇಶದಿಂದ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನವು ಸಂಸದ ನಳಿನ್ ಕುಮಾರ್ ಕಟೀಲ್ ಅವರ ಮಾರ್ಗದರ್ಶನ ಹಾಗೂ ಶಾಸಕ ಡಿ.ವೇದವ್ಯಾಸ್ ಕಾಮತ್‌ರವರ ನೇತೃತ್ವದಲ್ಲಿ ಕುಡ್ಲದ ಪಿಲಿಪರ್ಬವನ್ನು ಅ.21ರ ಶನಿವಾರ ಬೆಳಗ್ಗೆ ದೀಪ ಬೆಳಗಿಸಿ ವೈಭವದಿಂದ ಉದ್ಘಾಟಿಸಲಾಯಿತು. 


ಈ ವೇಳೆ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ತುಳುನಾಡಿನ ಸಂಸ್ಕೃತಿ ಇನ್ನುಷ್ಟು ಬೆಳಗಲಿ, ತುಳುನಾಡಿನ ಕೀರ್ತಿ ದೇಶಕ್ಕೆ ಪಸರಿಸಲಿ, ತುಳುನಾಡಿನ ಪರಂಪರೆ ಇಡೀ ರಾಜ್ಯದಲ್ಲಿ ಬೆಳೆಯುತ್ತಿದೆ. ಹುಲಿವೇಷ ಕೇವಲ ಮನರಂಜನೆಯ ಕ್ರೀಡೆ ಅಲ್ಲ. ಭಕ್ತಿಯ ಸಂಕೇತ. ಹುಲಿವೇಷ ದಕ್ಷಿಣ ಕನ್ನಡದ ಪರಂಪರೆ ಯಾಗಿ ಬೆಳೆಯುವ ರೀತಿಯಲ್ಲಿ ಕುಡ್ಲ ನೂತನ ಬೆಳವಣಿಗೆಗೆ ಕಾರಣವಾಗಿದೆ. ಇದು ಯುವಕರಿಗೆ ಸ್ಪೂರ್ತಿ, ಹುಲಿ ಬಡವ, ಶ್ರೀಮಂತ ಎಂಬ ಭಾವನೆಯನ್ನು ತೊಡೆದು ಹಾಕಿ ಬೆಳೆದು ನಿಲ್ಲಲು ಸ್ಪೂರ್ತಿಯಾಗಿದೆ ಎಂದರು. 


ಈ ವೇಳೆ ವೇದಿಕೆಯಲ್ಲಿ ತೀರ್ಪುಗಾರರಿಗೆ ಶಾಲು ಹೊದಿಸಿ ಗೌರವಿಸಲಾಯಿತು. ಕೇಂದ್ರ ಮೈದಾನದ ಭವ್ಯ ಹಾಗೂ ವಿಶಾಲ ವೇದಿಕೆಯಲ್ಲಿ, ಜಿಲ್ಲೆಯ ಅತ್ಯಂತ ಪರಿಣಿತ ತೀರ್ಪುಗಾರರ ಸಮ್ಮುಖದಲ್ಲಿ, ಕರಾವಳಿಯ ಜನಪ್ರಿಯ 15 ಹುಲಿವೇಷ ತಂಡಗಳು ಸ್ಪರ್ಧಾಕೂಟದಲ್ಲಿ ಪಾಲ್ಗೊಳ್ಳುತ್ತಿವೆ. ಇಡೀ ದಿನ ಕಡಲನಗರಿ ಹುಲಿಗಳ ಭರ್ಜರಿ ಘರ್ಜನೆ ಕೇಳಿ ಬರಲಿದೆ. ಈ ಸಂಭ್ರಮದಲ್ಲಿ ಪಾಲ್ಗೊಳ್ಳಲು ಮಕ್ಕಳಿಂದ ಹಿಡಿದು ಹಿರಿಯರ ತನಕ ಪ್ರತಿಯೊಬ್ಬ ಕಲಾಪ್ರೇಮಿಗೂ ಮುಕ್ತ ಅವಕಾಶವಿದ್ದು, ಸ್ಪರ್ಧಾಕೂಟದಲ್ಲಿ ಒಂದಕ್ಕಿಂತ ಒಂದು ವಿಭಿನ್ನತೆಯಿಂದ ಕೂಡಿರುವ ಹುಲಿವೇಷ ತಂಡಗಳಿಂದಇಡೀ ದಿನ ಸ್ಪರ್ಧಾಕೂಟದ ಮನರಂಜನೆಯಲ್ಲಿ ಮಿಂದೇಳುವ ಅವಕಾಶವಿದೆ. ಜನಸಾಮಾನ್ಯರ ಮನರಂಜನೆಯೇ ಈ ಸ್ಪರ್ಧಾಕೂಟದ ಪ್ರಮುಖ ಉದ್ದೇಶವೂ ಆಗಿದೆ.




ಪಿಲಿಪರ್ಬದಲ್ಲಿ ಭಾಗವಹಿಸುವ ಹುಲಿವೇಷ ತಂಡಗಳು ಮೆರವಣಿಗೆಯ ಮೂಲಕ ವೇದಿಕೆಗೆ ಪ್ರವೇಶ ಮಾಡಲಿದ್ದು, 20 ನಿಮಿಷಗಳ ಪ್ರದರ್ಶನ ನೀಡಲಿವೆ. ಪ್ರತಿ ತಂಡವೂ 38 ಕೆ.ಜಿ ಭಾರದ ಅಕ್ಕಿಮುಡಿ ಹಾರಿಸುವುದು ಕಡ್ಡಾಯವಾಗಿದ್ದು, ಕರಿಹುಲಿಗಳು, ಮರಿಹುಲಿಗಳು, ಹಿಮ್ಮೇಳ, ಧರಣಿ ಮಂಡಲ ಹೀಗೆ ಇಡೀ ಕೂಟವು ವೈವಿಧ್ಯತೆಯಿಂದ ಕೂಡಿರಲಿದೆ.


ತುಳುನಾಡಿನ ಸಮಸ್ತ ದೈವ, ದೇವರುಗಳ ಆಶೀರ್ವಾದದಿಂದ ಕಳೆದ ಬಾರಿಯ ಪ್ರಥಮ ವರ್ಷದ ಪಿಲಿಪರ್ಬವು ಅತ್ಯಂತ ಯಶಸ್ವಿಯಾಗಿದ್ದು ಕಳೆದ ಬಾರಿಗಿಂತ ಈ ಬಾರಿ ಅತ್ಯಧಿಕ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುವ ನಿರೀಕ್ಷೆ ಇದ್ದು ಎಲ್ಲಾ ವಿಭಾಗಗಳಲ್ಲಿಯೂ ಸಕಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.


ಸ್ಪರ್ಧಾಕೂಟ ನಡೆಯುವ ಮೈದಾನದಲ್ಲಿ 5 ಸಾವಿರ ಮಂದಿ ಕುಳಿತು ವೀಕ್ಷಿಸಬಹುದಾದ ಸುಸಜ್ಜಿತ ಪ್ರೇಕ್ಷಕ ಗ್ಯಾಲರಿ ನಿರ್ಮಿಸಲಾಗಿದ್ದು, ಅಲ್ಲಿಯೇ ದೊಡ್ಡ ಪರದೆಯ ವ್ಯವಸ್ಥೆಯನ್ನೂ ಮಾಡಲಾಗಿದೆ. ಕಾರ್ಯಕ್ರಮಕ್ಕೆ ಬರಲು ಉತ್ಸುಕರಾಗಿದ್ದು ಜನಜಂಗುಳಿಯಿಂದಾಗಿ ಬರಲು ಸಾಧ್ಯವಾಗದೇ ಇರುವ ಹಿರಿಯರು ಹಾಗೂ ಮಕ್ಕಳಿಗಾಗಿ ಮನೆಯಲ್ಲಿಯೇ ಕುಳಿತು ಕಾರ್ಯಕ್ರಮ ವೀಕ್ಷಿಸಲು ನೇರ ಪ್ರಸಾರದ ವ್ಯವಸ್ಥೆಯನ್ನೂ ಮಾಡಲಾಗಿದೆ. ತಮ್ಮ ವಾಹನಗಳಲ್ಲಿ ಬರುವವರಿಗೆ ಮೈದಾನದಲ್ಲಿ ಅಚ್ಚುಕಟ್ಟಾದ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸಲಿರುವ ಗಣ್ಯರು, ಹಾಗೂ ದಾನಿಗಳಿಗೆ ವಿಶೇಷ ಆಸನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.





ವೇದಿಕೆಯಲ್ಲಿ ಶಾಸಕ ಡಿ.ವೇದವ್ಯಾಸ್ ಕಾಮತ್, ಅಧ್ಯಕ್ಷರಾದ ದಿವಾಕರ್ ಪಾಂಡೇಶ್ವರ್, ಗೌರವಾಧ್ಯಕ್ಷರಾದ ಗಿರಿಧರ್ ಶೆಟ್ಟಿ, ಸುನೀತ, ಉದಯ್ ಪೂಜಾರಿ, ಮೊನಪ್ಪ ಬಂಡಾರಿ, ದಕ್ಷಿಣ ವಿಧಾನಸಭಾ ಅಧ್ಯಕ್ಷರು ವಿಜಯ್ ಕುಮಾರ್ ಶೆಟ್ಟಿ, ಮೀನುಗಾರಿಕೆ ಅಧ್ಯಕ್ಷ ನಿತಿನ್ ಕುಮಾರ್, ಮನೋಹರ್ ಪ್ರಸಾದ್, ದಯಾನಂದ್ ಅಂಚನ್, ರಾಜ್ ಗೋಪಾಲ್ ರೈ, ವಸಂತ್ ರೈ ಮತ್ತಿತ್ತರರು ಉಪಸ್ಥಿತರಿದ್ದರು.  ಶಾಸಕ ಡಿ. ವೇದವ್ಯಾಸ ಕಾಮತ್ ಗಣ್ಯರನ್ನು ಸ್ವಾಗತಿಸಿದರು. ನಿತೇಶ್ ಶೆಟ್ಟಿ ಎಕ್ಕಾರ್ ಮತ್ತು ಶರ್ಮಿಳಾ ಅಮಿನ್ ಕಾರ್ಯಕ್ರಮವನ್ನು ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top