ಯಕ್ಷಗಾನ ಒಂದು ಕಲಾ ಭೂಮಿಕೆ. ದಕ್ಷಿಣ ಕನ್ನಡದ ಸಾಂಪ್ರದಾಯಿಕ ಕಲೆ ಯಕ್ಷಗಾನ. ಯಕ್ಷಗಾನಕ್ಕೆ ಮನಸೋತವರು ಅನೇಕ ಕಲಾವಿದರು. ಯಕ್ಷಗಾನ ಒಂದು ಬ್ರಹ್ಮವಿದ್ಯೆ ಇದ್ದಂತೆ ಅದರಲ್ಲಿ ತನನ್ನು ತಾನು ತೊಡಗಿಸಿಕೊಂಡವರು ಉನ್ನತ ಸ್ಥಾನದಲ್ಲಿ ಇದ್ದಾರೆ ಅಂತಹ ಕಲಾವಿದರಲ್ಲಿ ಉಡುಪಿ ಜಿಲ್ಲೆಯ ಪುತ್ತಿಗೆ ಗ್ರಾಮದ ನಿತ್ಯಾನಂದ ನಾಯಕ್ ಒಬ್ಬರು.
ಗಣೇಶ್ ನಾಯಕ್ ಹಾಗೂ ಸುಶೀಲಾ ನಾಯಕ್ ಇವರ ಪುತ್ರ. ನಿತ್ಯಾನಂದ ನಾಯಕ್ 6 ನೇ ತರಗತಿ ವರೆಗೆ ವಿದ್ಯಾಭ್ಯಾಸ ಮಾಡಿದ್ದು, ಸ್ವಂತ ಆಸಕ್ತಿಯಿಂದ ಯಕ್ಷಗಾನ ರಂಗಕ್ಕೆ ಬಂದವರು. ಸುಬ್ರಹ್ಮಣ್ಯ ಮುದ್ರಾಡಿ ಇವರ ಯಕ್ಷಗಾನ ಗುರುಗಳು. ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಭಾಗವತರ ನಿರ್ದೇಶನದಂತೆ ತಮ್ಮ ಪಾತ್ರಕ್ಕೆ ತಕ್ಕಂತೆ ರಂಗ ಪ್ರದೇಶದಲ್ಲಿ ಸಿದ್ಧತೆಯನ್ನು ಮಾಡಿಕೊಳ್ಳುತ್ತಾರೆ. ಯಕ್ಷಗಾನವು ಅಳಿಯುತ್ತಿದೆ ಎನ್ನುವುದಕ್ಕಿಂತ ತನ್ನ ಹಳೆಯ ರೂಪುರೇಷೆಗಳನ್ನು ಬದಲಿಸಿಕೊಳ್ಳುತ್ತಿದೆ.
ಭಸ್ಮಾಸುರ ಮೋಹಿನಿ, ಮಹಿಷಮರ್ದಿನಿ, ಜಾಂಬವತಿ ಕಲ್ಯಾಣ, ಮೀನಾಕ್ಷಿ ಕಲ್ಯಾಣ, ಪುಣ್ಯಕೋಟಿ, ಕಂಸವಧೆ, ದಕ್ಷ ಯಜ್ಞ, ಅಶೋಕ ಸುಂದರಿ, ಶನೀಶ್ವರ ಮಹಾತ್ಮೆ, ಹಿಡಿಂಬ ವಿವಾಹ ಇತ್ಯಾದಿ ನೆಚ್ಚಿನ ಪ್ರಸಂಗಗಳು. ಭಸ್ಮಾಸುರ, ದೇವಿ, ಮಹಿಷಾಸುರ, ನಾರದ, ದೇವೇಂದ್ರ, ಪದ್ಮಗಂದಿನಿ, ಹುಲಿ, ಪಾರ್ವತಿ, ವೀರಭದ್ರ, ಚಾನುರರಮುಷ್ಟಿಕ ಇವರ ನೆಚ್ಚಿನ ವೇಷಗಳು.
ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಇಲ್ಲಿ ನಾವು ಎರಡು ಪ್ರೇಕ್ಷಕರ ಗುಂಪನ್ನು ಮಾಡಬಹುದು ಒಂದು ಊರಿನ ಕಡೆಯಲ್ಲಿ ನಡೆಯುವ ಯಕ್ಷಗಾನ ಆಟದ ಪ್ರೇಕ್ಷಕರು ಮತ್ತು ನಗರ ಪ್ರದೇಶಗಳಲ್ಲಿರುವ ಯಕ್ಷಗಾನ ಪ್ರೇಕ್ಷಕರು. ಊರಿನ ಪ್ರೇಕ್ಷಕರಿಗೆ ಯಕ್ಷಗಾನವು ಯಕ್ಷಗಾನದ ರೀತಿಯಲ್ಲಿಯೇ ಬೇಕು ಆದರೆ ನಗರ ಪ್ರದೇಶದ ಪ್ರೇಕ್ಷಕರಿಗೆ ಆಧುನಿಕತೆಯ ಆಧುನಿಕ ತಂತ್ರಜ್ಞಾನದ ಸಂಗೀತದ ಯಕ್ಷಗಾನ ಬೇಕು.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:-
ಉತ್ತಮ ಯಕ್ಷಗಾನ ವಿದ್ಯಾರ್ಥಿಗಳನ್ನು ಬೆಳೆಸುವುದು.
ಪರ್ಕಳದ ಮಹಾಲಿಂಗೇಶ್ವರ ಮಹಾಗಣಪತಿ ಸಂಘ, ಬೆಂಗಳೂರಿನ ಯಕ್ಷ ದೇಗುಲ, ಕರ್ನಾಟಕ ಕಲಾದರ್ಶಿನಿ, ಕಲಾಕದಂಬ ಆರ್ಟ್ ಸೆಂಟರ್, ಯಕ್ಷಶ್ರೀ ಮುಂತಾದ ಸಂಘ ಸಂಸ್ಥೆಗಳಲ್ಲಿ ತಿರುಗಾಟವನ್ನು ಮಾಡಿರುತ್ತಾರೆ. ಕನ್ನಡ ಸೇವಾ ರತ್ನ ಪ್ರಶಸ್ತಿ, ಸೃಷ್ಟಿಕಲಾ ರತ್ನ ಪ್ರಶಸ್ತಿ, ಜೀವನಮಾನ ಸಾಧನ ಪ್ರಶಸ್ತಿ, ಸಮಾಜ ಸೇವಾ ರತ್ನ ,ಯುವಕಲಾ ರತ್ನ ಪ್ರಶಸ್ತಿ ಹೀಗೆ ಹಲವು ಸನ್ಮಾನ ಹಾಗೂ ಪ್ರಶಸ್ತಿಗಳು ನಿತ್ಯಾನಂದ ಅವರಿಗೆ ಸಿಕ್ಕಿರುತ್ತದೆ.
ಅಡುಗೆ ಮಾಡುವುದು, ಆಶ್ರಮಗಳಿಗೆ ಮತ್ತು ಕೆಂಗೇರಿ ಸುತ್ತಮುತ್ತಲಿನ ಸರಕಾರಿ ಶಾಲೆಗಳಿಗೆ ಉಚಿತವಾಗಿ ನೃತ್ಯ ಕಲಿಸುವುದು ಹಾಗೂ ಕೆಂಗೇರಿಯ ಸುತ್ತಮುತ್ತಲು ಯಾವುದೇ ಕಾರ್ಯಕ್ರಮದಲ್ಲಿ ಆಹಾರ ಮಿಕ್ಕರೆ ಅವುಗಳನ್ನು ಆಶ್ರಮಗಳಿಗೆ ಹಂಚುವುದು ಇತ್ಯಾದಿ ಇವರ ಹವ್ಯಾಸಗಳು
ನಿತ್ಯಾನಂದ ನಾಯಕ್ ಅವರು ರಾಧಿಕಾ ನಾಯಕ್ ಇವರನ್ನು ಮದುವೆಯಾಗಿ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ. ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
-ಶ್ರವಣ್ ಕಾರಂತ್ ಕೆ
ಶಕ್ತಿನಗರ ಮಂಗಳೂರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ