ಕೆ.ಆರ್.ಪೇಟೆ: ದಸರಾ-ನವರಾತ್ರಿ ಉತ್ಸವದ ಅಂಗವಾಗಿ ಮನೆ ಮನೆಗಳಲ್ಲಿ ಗೊಂಬೆಗಳನ್ನು ಕೂರಿಸಿ ಒಂಬತ್ತು ದಿನಗಳ ಕಾಲವೂ ಪೂಜಿಸುವ ಪದ್ದತಿಯು ನೂರಾರು ವರ್ಷಗಳಿಂದ ನಾಡಿನಾದ್ಯಂತ ರೂಢಿಯಲ್ಲಿದೆ.
ಪ್ರತಿ ವರ್ಷದಂತೆ ಕೆ.ಆರ್.ಪೇಟೆ ತಾಲ್ಲೂಕಿನ ಅಗ್ರಹಾರಬಾಚಹಳ್ಳಿ ಗ್ರಾಮದೇವತೆ ಶ್ರೀ ಲಕ್ಷ್ಮೀದೇವಿ ಅಮ್ಮನವರ ಅರ್ಚಕರಾದ ಸುಬ್ಬರಾಮಪ್ಪ ಹಾಗೂ ಅಂಚೆ ಇಲಾಖೆಯ ಗುಂಡಪ್ಪ(ಬಿ.ಎ.ಸುಬ್ರಹ್ಮಣ್ಯ) ಅವರ ಮನೆಯಲ್ಲಿ ದಸರಾ ಅಂಗವಾಗಿ ಗೊಂಬೆಗಳನ್ನು ಕೂರಿಸಿ ಅಲಂಕರಿಸಿ ಸತತ ೯ದಿನಗಳ ಕಾಲ ನಿತ್ಯ ಪೂಜೆ ಸಲ್ಲಿಸಿ ಗೊಂಬೆಗಳ ವೀಕ್ಷಣೆ ಬರುವ ಭಕ್ತಾಧಿಗಳಿಗೆ ಪ್ರಸಾದ ವಿತರಣೆ ಮಾಡುವ ಮೂಲಕ ದಸರಾ ಹಬ್ಬದ ಮೆರಗನ್ನು ಹೆಚ್ಚಿಸಿದ್ದಾರೆ.
ಮೊದಲ ಸಾಲಿನಲ್ಲಿ ರಾಜ, ರಾಣಿ ಪಟ್ಟದ ಗೊಂಬೆಗಳನ್ನ ಕೂರಿಸಿದ್ದಾರೆ. ನಂತರ ಅಷ್ಟ ಲಕ್ಷ್ಮೀಯರು, ಆನೆಗಳು, ರಾಮ, ಕೃಷ್ಣ, ಗೌರಿ, ಗಣೇಶ, ಶ್ರೀಮನ್ನಾರಾಯಣ, ಶಂಕರಾರ್ಯರು, ಅರಮನೆ, ಪ್ರಾಣಿಗಳು, ಸೇರಿದಂತೆ ಹಲವು ಬಗೆಯ ಗೊಂಬೆಗಳನ್ನು ಐದು ಹಂತಗಳಲ್ಲಿ ಕೂರಿಸಿದ್ದಾರೆ. ರಾಮಾಯಣ, ಮಹಾಭಾರತ, ವಿಷ್ಣು ಪುರಾಣ, ಶ್ರೀಕೃಷ್ಣ ಲೀಲೆಗಳು, ದುರ್ಗಾ ಅವತಾರಗಳು ಹೀಗೆ ನಾನಾ ಕಥೆಗಳನ್ನು ಬಿಂಬಿಸುವ ರೀತಿಯಲ್ಲಿ ಗೊಂಬೆಯನ್ನು ಕೂರಿಸಲಾಗಿದೆ.
ಗೊಂಬೆಗಳ ಜೋಡಣೆಯು ನಮ್ಮ ಸಂಸ್ಕೃತಿ- ಪರಂಪರೆ ಹಾಗೂ ಪೌರಾಣಿಕ ಕತೆಗಳನ್ನು ಪ್ರತಿಬಿಂಬಿಸುವ ಗೊಂಬೆಗಳ ಪ್ರದರ್ಶನವು ನಾಡ ಹಬ್ಬ ದಸರಾ ಹಬ್ಬದ ಸಂಭ್ರಮ-ಸಡಗರವನ್ನು ಹೆಚ್ಚಿಸಿದೆ. ಪ್ರತಿ ವರ್ಷವೂ ಬೇರೆ ಬೇರೆ ಸ್ಥಳಗಳಿಗೆ ಪ್ರವಾಸ ಹೋದ ಸಂದರ್ಭದಲ್ಲಿ ಗೊಂಬೆಗಳನ್ನು ಖರೀದಿಸಿ ತಂದು ದಸರಾ-ನವರಾತ್ರಿ ಉತ್ಸವದಲ್ಲಿ ಒಂಭತ್ತು ದಿನಗಳ ಕಾಲ ಗೊಂಬೆಗಳನ್ನು ಕೂರಿಸಿ ಪೂಜೆಸುವ ಮೂಲಕ ನಮ್ಮ ನೆಲದ ಸಂಸ್ಕೃತಿ ಪರಂಪರೆಯನ್ನು ಉಳಿಸುವ ಕೆಲಸಕ್ಕೆ ನಮ್ಮ ಸಣ್ಣ ಕಾಣಿಕೆ ಸಲ್ಲಿಸುತ್ತಿದ್ದೇವೆ ಎಂದು ಅರ್ಚಕ ಸುಬ್ಬರಾಮಪ್ಪ ಹೇಳುತ್ತಾರೆ.
ಗೊಂಬೆಗಳ ಕೂರಿಸುವ ಪದ್ದತಿಯ ಬಗ್ಗೆ ಮಾತನಾಡಿದ ಪೋಸ್ಟ್ ಗುಂಡಪ್ಪ ಅವರು ದಸರಾ ಸಂದರ್ಭದಲ್ಲಿ ಮನೆ ಮನೆಗಳಲ್ಲಿ ಗೊಂಬೆಗಳನ್ನು ಕೂರಿಸಿ ಅಲಂಕರಿಸಿ ಅವುಗಳನ್ನು ಪೂಜಿಸುವ ಪದ್ಧತಿಯು ಮೈಸೂರು ರಾಜರ ಕಾಲದಲ್ಲಿ ಮೊಟ್ಟಮೊದಲು ಆರಂಭವಾಯಿತು ಎಂದು ನಮ್ಮ ಹಿರಿಯರಿಂದ ತಿಳಿದು ಬಂದಿದೆ. ಜಗತ್ ಪ್ರಸಿದ್ಧಿಯಾಗಿರುವ ಮೈಸೂರು ದಸರಾ ಮೈಸೂರು ಅರಮನೆಯಲ್ಲಿ ನಡೆದರೆ ಮೈಸೂರು ಪ್ರಾಂತ್ಯದ ಪ್ರಜೆಗಳ ಮನೆಗಳಲ್ಲಿ ಗೊಂಬೆಗಳನ್ನು ಇಟ್ಟು ಪೂಜಿಸುವ ಪದ್ಧತಿ ಪ್ರಾರಂಭವಾಯಿತು. ಹೀಗೆ ಪ್ರಜೆಗಳು ದಸರಾ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸುತ್ತಿದ್ದರು. ಈ ಗೊಂಬೆ ಕೂರಿಸುವ ಪದ್ಧತಿ ವಿಜಯನಗರ ಸಾಮ್ರಾಜ್ಯದಲ್ಲಿದ್ದು ಅದೇ ಸಂಪ್ರದಾಯವನ್ನು ಮೈಸೂರು ಒಡೆಯರು ಈ ಪ್ರಾಂತ್ಯದ ಜನರಿಗೆ ಪರಿಚಯಿಸಿದರು ಎಂದು ಹೇಳಲಾಗುತ್ತದೆ.
ಗೊಂಬೆಗಳನ್ನು ಸಾಮಾನ್ಯವಾಗಿ ಹೆಚ್ಚು ಗೊಂಬೆ ಇದ್ದವರು 9 ಅಥವಾ 7 ಹಂತಗಳಲ್ಲಿ ಕೂರಿಸುತ್ತಾರೆ. ಕಡಿಮೆ ಗೊಂಬೆಗಳಿದ್ದವರು 5 ಹಂತಗಳಲ್ಲಿ ಕೂರಿಸುತ್ತಾರೆ. ನಾವು ಐದು ಹಂತಗಳಲ್ಲಿ ಕಳೆದ ೫೦ವರ್ಷಕ್ಕೂ ಹೆಚ್ಚಿನ ವರ್ಷಗಳಿಂದಲೂ ನಮ್ಮ ಮನೆಗಳಲ್ಲಿ ಪ್ರತಿ ವರ್ಷವೂ ತಪ್ಪದೇ ಗೊಂಬೆಗಳನ್ನು ಕೂರಿಸಿ ವಿಶೇಷ ಪೂಜೆ ಸಲ್ಲಿಸುತ್ತಾ ಬಂದಿದ್ದೇವೆ. ಕೊನೆಯ ದಿನ ಅಂದರೆ ವಿಜಯದಶಮಿಯ ದಿನ ಮಹಾಮಂಗಳಾರತಿ ಸಲ್ಲಿಸಿ ಪ್ರಸಾದ ವಿತರಣೆ ಮಾಡಿ ಸಂಭ್ರಮಿಸಲಾಗುತ್ತದೆ. ಗೊಂಬೆಗಳ ಪ್ರದರ್ಶನವನ್ನು ಹೆಚ್ಚು ಮಕ್ಕಳು ವೀಕ್ಷಣೆ ಮಾಡಿ ಸಂಭ್ರಮಿಸುತ್ತಾರೆ ಎಂದು ತಿಳಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ