ಕೆ.ಆರ್.ಪೇಟೆ: ಕನ್ನಡನಾಡಿನ ರಾಜರತ್ನ ಡಾ.ಪುನೀತ್ ರಾಜ್ ಕುಮಾರ್ ಅವರು ಯಾರಿಗೂ ತಿಳಿಯದಂತೆ ಮಾಡಿದ ಸಾಮಾಜಿಕ ಸೇವೆಯು ಅವಿಸ್ಮರಣೀಯವಾದುದು ಇದು ಎಲ್ಲರಿಗೂ ಮಾದರಿಯಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ರೈತ ಬಣದ ರಾಜ್ಯಾಧ್ಯಕ್ಷ ಇ.ಎನ್. ಕೃಷ್ಣೇಗೌಡ ಇಂಗಲಗುಪ್ಪೆ ಹೇಳಿದರು.
ಅವರು ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ತಾಲ್ಲೂಕು ಅಪ್ಪು ಯುವ ಸಾಮ್ರಾಜ್ಯ ಸಮಿತಿಯ ವತಿಯಿಂದ ನಿರ್ಮಿಸಿರುವ ಡಾ.ಪುನೀತ್ ರಾಜ್ ಕುಮಾರ್ ಅವರ ಪುತ್ತಳಿಗೆ ತಮ್ಮ ರೈತ ಸಂಘದ ವತಿಯಿಂದ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಿ ಮಾತನಾಡಿದರು.
ಬಾಲ ನಟನಾಗಿ ನಂತರ, ನಾಯಕ ನಟನಾಗಿ ಸುಮಾರು 50ಕ್ಕೂ ಹೆಚ್ಚು ಸದಭಿರುಚಿಯ ಚಲನಚಿತ್ರಗಳಲ್ಲಿ ನಟಿಸುವ ಮೂಲಕ ಕರ್ನಾಟಕ ರಾಜ್ಯದ ಮನೆ ಮನೆಯ ಅಪ್ಪು ಎಂದೇ ಪ್ರಖ್ಯಾತಿ ಪಡೆದಿದ್ದರು. ತಮ್ಮ ಜೀವಿತಾವಧಿಯಲ್ಲಿ ನೂರಾರು ಸಮಾಜಮುಖಿ ಸೇವೆಗಳನ್ನು ಮಾಡಿದ್ದರೂ ಸಹ ತಿಳಿಯದಂತೆ ಮಾಡಿದ್ದರು. ಇವರ ಸೇವೆಗಳು ಪುನೀತ್ ನಿಧನಾನಂತರ ಬೆಳಕಿಗೆ ಬಂದಿವೆ. ಇದರಿಂದ ಅವರ ಕೀರ್ತಿ ಮುಗಿಲೆತ್ತರಕ್ಕೆ ಹೆಚ್ಚಾಗಲು ಕಾರಣವಾಗಿದೆ. ಕಷ್ಟ ಎಂದು ಬಂದ ನೂರಾರು ಬಡವರಿಗೆ ಲಕ್ಷಾಂತರ ರೂ ದೇಣಿಗೆ ನೀಡಿದ್ದಾರೆ. 45 ಉಚಿತ ಶಾಲೆಗಳು, 26 ಅನಾಥಾಶ್ರಮಗಳು, 16 ವೃದ್ಧಾಶ್ರಮಗಳು 19 ಗೋ ಶಾಲೆಗಳು, 1900 ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಕೊಡಿಸುತ್ತಿದ್ದರು ಆದರೆ ಇದು ಗೊತ್ತಾಗಿದ್ದು ಅಪ್ಪು ನಿಧನದ ನಂತರ ಎಂಬುದು ದೇವರು ಮೆಚ್ಚುವ ಪುಣ್ಯದ ಕೆಲಸವಾಗಿದೆ. ಇದರಲ್ಲದೇ ನೇತ್ರದಾನ ಮಾಡುವ ಮೂಲಕ ಇಬ್ಬರು ಅಂದರ ಬಾಳಿಗೆ ಮರಣಾನಂತರವೂ ಬೆಳಕಾಗಿದ್ದಾರೆ. ಇಂತಹ ಅಪರೂಪದ ಮಾಣಿಕ್ಯ ಇಷ್ಟು ಬೇಗ ನಮ್ಮನ್ನು ಅಗಲಿದ್ದು ತುಂಬಾ ದುಃಖದ ವಿಚಾರವಾಗಿದೆ. ಅಪ್ಪು ನಿಧನರಾಗಿ ಸುಮಾರು ಎರಡು ವರ್ಷಗಳು ಕಳೆಯುತ್ತಾ ಬಂದರೂ ಅವರು ಮಾಡಿದ ಒಳ್ಳೆಯ ಕೆಲಸಗಳು ಅವರನ್ನು ಜೀವಂತವಾಗಿರಿಸಿವೆ. ನಾಡಿನ ಪ್ರತಿಯೊಂದು ಊರಿನಲ್ಲಿಯೂ ಇಂದಿಗೂ ಇವರ ಕಟೌಟ್ ಹಾಕಿ ಪೂಜೆ ಸಲ್ಲಿಸುತ್ತಿರುವುದು ಕಂಡು ಬರುತ್ತಿದೆ. ಇಂತಹ ಅಪರೂಪದ ನಟ ಮತ್ತೊಮ್ಮೆ ಈ ನಾಡಿನಲ್ಲಿ ಹುಟ್ಟಿ ಬರಲಿ, ಯುವ ಜನತೆಗೆ ಇವರ ಆದರ್ಶ ಗುಣಗಳನ್ನು ಬೆಳೆಸಿಕೊಳ್ಳಲಿ ಎಂದು ಕೃಷ್ಣೇಗೌಡ ಆಶಯ ವ್ಯಕ್ತಪಡಿಸಿದರು.
ಅಲ್ಲದೇ ಕರ್ನಾಟಕದ ರೈತರ ಜೀವನಾಡಿಯಾಗಿರುವ ಕೆ.ಎಂ.ಎಫ್ ಸಂಸ್ಥೆಯ ನಂದಿನಿ ಉತ್ಪನ್ನಗಳಿಗೆ ಉಚಿತವಾಗಿ ಪ್ರಚಾರ ರಾಯಭಾರಿಯಾಗಿ ಕೆಲಸ ಮಾಡುವ ಮೂಲಕ ರೈತರಿಗಾಗಿ ಶ್ರೇಷ್ಠ ಸೇವೆ ಸಲ್ಲಿಸಿದ್ದ ಪುನೀತ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಿದ ರಾಜ್ಯ ಸರ್ಕಾರದ ಕಾರ್ಯ ಶ್ಲಾಘನೀಯ ಎಂದು ಕೃಷ್ಣೇಗೌಡ ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸಂಘ ರೈತ ಬಣದ ರಾಜ್ಯ ಮುಖಂಡರಾದ ಹೆಮ್ಮಿಗೆ ಚಂದ್ರಶೇಖರ್, ರಾಜ್ಯ ಕಾರ್ಯದರ್ಶಿಸುಶೀಲ್ ಕುಮಾರ್ ಸಿ.ವೈ, ಮೈಸೂರು ಜಿಲ್ಲಾ ಅಧ್ಯಕ್ಷ ಕೆಂಪರಾಜು, ಮಂಡ್ಯ ಜಿಲ್ಲಾಧ್ಯಕ್ಷ ಟಿ.ಎಂ ರಮೇಶ್, ಕರ್ನಾಟಕ ರಾಜ್ಯ ರೈತ ಸಂಘ ರೈತ ಬಣದ ತಾಲ್ಲೂಕು ಅಧ್ಯಕ್ಷ ಹರೀಶ್ ಡಿ.ಎಸ್.ದೊದ್ದನಕಟ್ಟೆ, ಉಪಾಧ್ಯಕ್ಷ ವಸಂತ್, ಯುವ ಘಟಕದ ಅಧ್ಯಕ್ಷ ರೋಹಿತ್, ಪ್ರಧಾನ ಕಾರ್ಯದರ್ಶಿ ಗೋವಿಂದರಾಜು ಕೂಡಲಕುಪ್ಪೆ, ಗೌರವಾಧ್ಯಕ್ಷ ಚೌಡೇನಹಳ್ಳಿ ಕುಮಾರ್, ಸಂಘಟನಾ ಕಾರ್ಯದರ್ಶಿ ಗಳಾದ ಮಾಣಿಕ್ಯ, ಸುನಿಲ್, ತಾಲ್ಲೂಕು ಸಂಚಾಲಕ ಕೆ.ಕೆ.ಹರೀಶ್, ತಾಲ್ಲೂಕು ಜಯಕರ್ನಾಟಕ ಸಂಘಟನೆಯ ಅಧ್ಯಕ್ಷ ಹೆಚ್.ಆರ್.ಸೋಮಶೇಖರ್, ತಾಲ್ಲೂಕು ಅಪ್ಪು ಯುವ ಸಾಮ್ರಾಜ್ಯ ಘಟಕದ ಅಧ್ಯಕ್ಷ ಕೆ.ಎಲ್.ಮಹೇಶ್, ಯೋಗೇಶ್, ಹೊಸಹೊಳಲು ಹರೀಶ್, ರಾಘು, ಕ್ಯಾಂಟೀನ್ ದಿಲೀಪ್ ಮತ್ತಿತರರು ಉಪಸ್ಥಿತರಿದ್ದರು.
ಇದಕ್ಕೂ ಮೊದಲು ಪ್ರವಾಸಿ ಮಂದಿರದಲ್ಲಿ ನಡೆದ ತಾಲ್ಲೂಕು ಪದಾಧಿಕಾರಿಗಳ ಸಭೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ರೈತ ಬಣದ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಡಿ.ಎಸ್. ಹರೀಶ್ ದೊದ್ದನಕಟ್ಟೆ ಅವರಿಗೆ ರಾಜ್ಯಾಧ್ಯಕ್ಷರಾದ ಕೃಷ್ಣೇಗೌಡ ಇಂಗಲಗುಪ್ಪೆ ಅವರು ನೇಮಕಾತಿ ಆದೇಶ ಪತ್ರವನ್ನು ನೀಡಿ ಗೌರವಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ