ಬಂಟ್ವಾಳದಲ್ಲಿ ವೈಭವದ ಶೌರ್ಯ ರಥಯಾತ್ರೆ, ಜಾಗೃತ ಹಿಂದೂ ಸಮಾಜೋತ್ಸವ

Upayuktha
0


ಬಂಟ್ವಾಳ: ಭಾರತ ಟಿಪ್ಪುಸುಲ್ತಾನ್, ಔರಂಗಜೇಬ್ ರಂತಹ ಲೂಟಿಕೋರರ ಭೂಮಿಯಲ್ಲ, ಇದು ಶ್ರೀರಾಮ, ಶಿವಾಜಿ ಮಹಾರಾಜರಂತಹ ಮಹಾಪುರುಷರು ಜನ್ಮತಾಳಿದ ಭೂಮಿ ಎಂದು ಸಾಧ್ವಿ ದೇವಿ ಸರಸ್ವತಿ ಜೀ ಅವರು ಘರ್ಜಿಸಿದರು.


ವಿಶ್ವ ಹಿಂದೂ ಪರಿಷತ್ ಸ್ಥಾಪನೆಯಾಗಿ 60ನೇ ವರ್ಷಕ್ಕೆ ಕಾಲಿಡುತ್ತಿರುವ ಸಂಭ್ರಮದಲ್ಲಿ ದೇಶದಾದ್ಯಂತ ಸಂಚರಿಸುತ್ತಿರುವ 'ಶೌರ್ಯ ಜಾಗರಣಾ ರಥಯಾತ್ರೆ'ಯು ಭಾನುವಾರ ಬಂಟ್ವಾಳಕ್ಕೆ ಆಗಮಿಸಿದ ಹಿನ್ನಲೆಯಲ್ಲಿ ಬಂಟ್ವಾಳ ಬಸ್ತಿಪಡ್ಪು ಶೌರ್ಯ ಮೈದಾನ‌ದಲ್ಲಿ ಸಂಪನ್ನಗೊಂಡ ಬೃಹತ್ "ಜಾಗೃತ ಹಿಂದೂ ಸಮಾಜೋತ್ಸವ"ದಲ್ಲಿ‌ ಅವರು ದಿಕ್ಸೂಚಿ ಭಾಷಣ ಗೈದರು.


ಹಿಂದೂಗಳೆಲ್ಲ ಸಹೋದರರು, ಯಾವ ಜಾತಿಯವನಾದರೂ ಅವನು ಹಿಂದುವೇ ಆಗಿದ್ದಾನೆ. ಹಿಂದೂಗಳು ಒಗ್ಗಟ್ಟಾದರೆ ಮಾತ್ರ ದೇಶ ಉಳಿಯುತ್ತದೆ ಮಾತ್ರವಲ್ಲ ವಿಶ್ವಕ್ಕೂ ಒಳಿತಾಗುತ್ತದೆ ಎಂದರು. ಈ ದೇಶದ ಸಂಸ್ಕೃತಿ ನಾಶವಾದರೆ, ದೇಶವೇ ನಾಶವಾದೀತು, ನಾವೆಲ್ಲರೂ‌ ಸನಾತನಿಗಳು, ಸನಾತನ ಧರ್ಮ ಉಳಿಯಬೇಕಾದರೆ ಹಿಂದೂಗಳೆಲ್ಲರೂ ಒಗ್ಗಟ್ಟಾಗಬೇಕಾದ ಅನೀವಾರ್ಯತೆ ನಿರ್ಮಾಣವಾಗಿದೆ ಎಂದರು.


ಕರ್ನಾಟಕ ಶ್ರೀಗಂಧದ ನಾಡು:

ಕರ್ನಾಟಕ ಶ್ರೀಗಂಧದ ನಾಡು, ಇದು ಅಂಜನೇಯನ ಭೂಮಿ, ಅವನ ಕೈಯಲ್ಲಿರುವ ಗದೆ, ಹಿಂದೂ ಧರ್ಮರಕ್ಷಣೆಗೆ ಆಯಧವಾಗಲಿ ಎಂದ ಅವರು ಮಾತೆಯರು ದುರ್ಗಾ ಮಾತೆಯಾರಾಗಬೇಕು, ಯುವಕರು ಬಜರಂಗಿಗಳಾಗಬೇಕು ಎಂದು ಕರೆ ನೀಡಿದರು.

ನಮ್ಮ ಧರ್ಮ, ಸಂಸ್ಕೃತಿ‌ ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿದೆ. ಇತ್ತೀಚೆಗೆ ಹುಟ್ಟಿದಾತನೋರ್ವ ಸನಾತನ ಧರ್ಮ ನಾಶ ಮಾಡುತ್ತೇನೆಂಬ ದುರಹಂಕಾರ ಹೇಳಿಕೆ ಅವನ ಸರ್ವನಾಶಕ್ಕೆ ನಾಂದಿಯಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಜಾಗೃತರಾಗಿ:

ನಮ್ಮ ಕಾರ್ಯಕರ್ತರಲ್ಲಿ ಸೆರಗೊಡ್ಡಿ ವಿನಂತಿಸುವುದೇನಂದರೆ‌ ನಮ್ಮ ಧರ್ಮಸಂಸ್ಥಾಪನೆಗಾಗಿ ನಾವು ಒಗ್ಗಟ್ಟಾಗಬೇಕು, ಗೋಹತ್ಯೆ ನಿಲ್ಲಲೇ ಬೇಕು, ಸ್ತ್ರೀಯರ ಮಾನ, ಪ್ರಾಣ ರಕ್ಷಣೆಯಾಗಬೇಕು ಅದಕ್ಕೆ ನಾವೆಲ್ಲರು ಜಾಗೃತರಾಗೋಣ ಎಂದರು.


ಹನುಮನ ಪರಾಕ್ರಮ ಯುವಕರಿಗೆ ಪ್ರರೇಣೆ: ಸು.ರಾಮಣ್ಣ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕ ಸು.ರಾಮಣ್ಣ ಮಾತನಾಡಿ, ಹನುಮಂತ ಶೌರ್ಯ ಮತ್ತು ಶೀಲದ ಪ್ರತೀಕವಾಗಿದ್ದು, ಸ್ವಾರ್ಥ ವಿಲ್ಲದ ಜೀವನ ನಡೆಸಿ ಆದರ್ಶನಾಗಿದ್ದಾನೆ. ಹನುಂಮತನ ಅದರ್ಶವನ್ನಿರಿಸಿಕೊಂಡು ಬಜರಂಗದಳ ಆರಂಭವಾಗಿದ್ದು, ಹನುಮಂತನ ಪರಾಕ್ರಮ ನಮ್ಮ ಯುವಕರಿಗೆ ಪ್ರರೇಣೆಯಾಗಬೇಕು ಎಂದರು.


ಹಿಂದೂ ಧರ್ಮದಲ್ಲಿ ಸ್ಪ್ರಶ್ಯ, ಅಸ್ಪ್ರಶ್ಯ, ಮೇಲು, ಕೀಳು ಭಾವನೆಗೆ ಅವಕಾಶವಿಲ್ಲ, ಭಗವಂತನಲ್ಲಿ ನಂಬಿಕೆಯನ್ನಿಟ್ಟುಕೊಂಡ ಧರ್ಮ, ದೇಶವೇ ನಮ್ಮ ಒಂದು ಕುಟುಂಬ, ಭಾರತವೇ ಮಾತೃಭೂಮಿ, ಹುಟ್ಟು ಸಾವಿಲ್ಲದ ಸೂರ್ಯನಂತೆ ಜಗತ್ತಿಗೆ ಬೆಳಕನ್ನು ನೀಡುವ ಹಿಂದೂ ಧರ್ಮಕ್ಕೆ ವಿನಾಶವಿಲ್ಲ ಎಂದರು.




ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಶ್ರೀಧಾಮ‌ ಮಾಣಿಲದ ಮೋಹನದಾಸ ಸ್ವಾಮೀಜಿ, ಕಣಿಯೂರು ಕ್ಷೇತ್ರದ ಮಹಾಬಲ ಸ್ವಾಮೀಜಿ, ಪೊಳಲಿ ರಾಮಕೃಷ್ಣ ತಪೋವನದ ವಿವೇಕ ಚೈತ್ಯನ್ಯಾನಂದ ಸ್ವಾಮೀಜಿ, ವಿಶ್ವಹಿಂದೂ ಪರಿಷತ್ ದಕ್ಷಿಣ ಪ್ರಾಂತದ ಕಾರ್ಯಾಧ್ಯಕ್ಷ ಡಾ.ಎಂ.ಬಿ. ಪುರಾಣಿಕ್, ವಿ.ಹಿಂ.ಪ ಪುತ್ತೂರು ಜಿಲ್ಲಾಧ್ಯಕ್ಷ ಡಾ.ಕೃಷ್ಣ ಪ್ರಸನ್ನರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶೌರ್ಯ ಜಾಗರಣ ರಥಯಾತ್ರೆಯ ಸ್ವಾಗತ ಸಮಿತಿ ಅಧ್ಯಕ್ಷರು, ಕಾವೇಶ್ವರ ದೇವಸ್ಥಾನದ ಸಮಿತಿ ಕಾರ್ಯಾಧ್ಯಕ್ಷ ರಘು ಎಲ್ ಶೆಟ್ಟಿ ಅವರು ಸಭಾಧ್ಯಕ್ಷತೆ ವಹಿಸಿದ್ದರು.


ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಆರ್.ಎಸ್.ಎಸ್ ಮುಖಂಡ ಡಾ. ಪ್ರಭಾಕರ ಭಟ್ ಮೊದಲಾದ ಹಲವು ಗಣ್ಯರು, ಸಂಘಪರಿವಾರ ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು.


ಮಾಣಿಯಲ್ಲಿ ಸ್ವಾಗತ:

ಮಾಣಿಯಲ್ಲಿ ಶೌರ್ಯ ಜಾಗರಣ ರಥಯಾತ್ರೆ ರಥವನ್ನು ಬಂಟ್ವಾಳಕ್ಕೆ ಸ್ವಾಗತಿಸಲಾಯಿತು. ಪೆರಾಜೆ ಶ್ರೀರಾಮ ಚಂದ್ರಾಪುರ ಮಠ ದ್ವಾರದಿಂದ ಬೃಹತ್ ಶೋಭಾಯಾತ್ರೆ ಮಾಣಿಯವರೆಗೆ ಕುಣಿತ ಭಜನೆ, ನಾಸಿಕ್ ಬ್ಯಾಂಡ್ ಸಹಿತ ಹಲವಾರು ಮಂದಿ ಭಾಗವಹಿಸಿದ್ದರು‌. ಕ್ಯಾಪ್ಟನ್ ಬೃಜೇಶ್ ಚೌಟ ಸ್ವಾಗತಿಸಿ ಮಾತನಾಡಿದರು. ಮಾಜಿಶಾಸಕರಾದ ಎ.ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ರಾಜಾರಾಮ ಕಾಡೂರು, ಕ.ಕೃಷ್ಣಪ್ಪ, ಸಾಂತಪ್ಪ ಪೂಜಾರಿ, ಮೋನಪ್ಪ ದೇವಸ್ಯ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.


ಬಿ.ಸಿ. ರೋಡಿನ ರಾಜರಸ್ತೆಯಲ್ಲಿ ಶೋಭಾಯಾತ್ರೆ:

ಬಿ.ಸಿ.ರೋಡಿನ ಕೈಕಂಬ ಪೊಳಲಿದ್ವಾರದ ಬಳಿಯಿಂದ ಶೌರ್ಯ ಜಾಗರಣ ರಥಯಾತ್ರೆಯ ವೈಭವಯುತವಾದ ಶೋಭಾಯಾತ್ರೆಯು ಬಿ.ಸಿ.ರೋಡಿನ ಹೆದ್ದಾರಿಯ ರಾಜಾರಸ್ತೆಯಲ್ಲಿ ಸಾಗಿಬಂದು ಸಮಾಜೋತ್ಸವ ನಡೆಯುವ ಮೈದಾನದಲ್ಲಿ ಸಂಪನ್ನಗೊಂಡಿತು. ಈ ಸಂದರ್ಭದಲ್ಲಿ ಸಾವಿರಾರು ಮಂದಿ ಹಿಂದೂ ಕಾರ್ಯಕರ್ತರು ಹೆದ್ದಾರಿಯುದ್ದಕ್ಕು ಜೈಘೋಷ ಹಾಕಿ ಹೆಜ್ಜೆ ಹಾಕಿದರು.


ತೆರೆದ ವಾಹನದಲ್ಲಿ ಸಾಧ್ವಿ: ಕೈಕಂಬ ಪೊಳಲಿ ದ್ವಾರದಿಂದ ಸಾಧ್ವಿ ದೇವಿ ಸರಸ್ವತಿ ಜೀ ಅವರನ್ನು ತೆರೆದ ವಾಹನದಲ್ಲಿ ಮೈದಾನದತ್ತ ಕರೆತರಲಾಯಿತು. ರಸ್ತೆಯ ಇಕ್ಕೆಲಗಳಲ್ಲಿ ನೂರಾರು ಮಂದಿ ನಿಂತು ಸಾಧ್ವಿ ಅವರಿಗೆ ನಮಸ್ಕರಿಸಿದರಲ್ಲದೆ, ಮೊಬೈಲ್ ಮೂಲಕ ಪೊಟೋ ಕ್ಲಿಕ್ಕಿಸಿದರು. ಸಮಾಜೋತ್ಸವದಲ್ಲಿ ಸಾಗರೋಪಾದಿಯಲ್ಲಿ ತರುಣರು, ಮಹಿಳೆಯರು,ವಯಸ್ಕರು ಸೇರಿದ್ದು,ಸಂಘಟಕರ ನಿರೀಕ್ಷೆಗೂ ಮೀರಿ ಭಾಗವಹಿಸಿದ್ದರು.


ವಿಶ್ವ ಹಿಂದು ಪರಿಷತ್ ಬಂಟ್ವಾಳ ಪ್ರಖಂಡ ಅಧ್ಯಕ್ಷರಾದ ಪ್ರಸಾದ್ ಕುಮಾರ್ ರೈ‌ ಸ್ವಾಗತಿಸಿದರು. ಭಾಸ್ಕರ ರಾವ್ ಪ್ರೇರಣಾ ಗೀತೆ ಹಾಡಿದರು. ವಿ.ಹಿಂ.ಪ.ನ ಕಲ್ಲಡ್ಕ ಘಟಕದ ಅಧ್ಯಕ್ಷ ಸಚ್ಚಿನ್ ಮೆಲ್ಕಾರ್ ವಂದಿಸಿದರು.


ವಿಶ್ವ ಹಿಂದೂ ಪರಿಷತ್ – ಬಜರಂಗ ದಳ ಬಂಟ್ವಾಳ ಪ್ರಖಂಡದ ವತಿಯಿಂದ ನಡೆಯುವ ಜಾಗೃತ ಹಿಂದೂ ಸಮಾಜೋತ್ಸವಕ್ಕೆ ಕಲ್ಲಡ್ಕ, ವಿಟ್ಲ, ವೇಣೂರು ಘಟಕಗಳು ಹಾಗೂ ಆರ್. ಎಸ್ .ಎಸ್.ನ ಅಧೀನದಲ್ಲಿರುವ ಪರಿವಾರ ಸಂಘಟನೆಗಳು ಕೂಡ ಸಾಥ್ ನೀಡಿದರು.



ಪೊಲೀಸ್ ಬಂದೋಬಸ್ತ್:

ಸಮಾಜೋತ್ಸವದ ಹಿನ್ನೆಲೆಯಲ್ಲಿ ಮತ್ತು‌ಕಾರ್ಯಕ್ರಮ ಶಾಂತಯುತವಾಗಿ ನಡೆಯುವ ನಿಟ್ಟಿನಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಲಾಗ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿತ್ತು.



ತುಳುವಿನಲ್ಲಿ ಮಾತು:

"ತುಳುನಾಡ್ ದ ಜನಕ್ಲೆಗ್ ಎನ್ನ ಸೊಲ್ಮೆಲು‌ ಎಂದು ಸಾಧ್ವಿ ದೇವಿ ಸರಸ್ವತಿ ಜೀ ಅವರು ತಮ್ಮ ದಿಕ್ಸೂಚಿ ಆರಂಭಿಸಿ ಬಳಿಕ ನಿರರ್ಗಳವಾಗಿ ಹಿಂದಿಯಲ್ಲಿ ಯುವಕರಿಗೆ ಸ್ಪೂರ್ತಿಯ ಮಾತಗಳನ್ನಾಡಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top