ನ.1: ಸಾಹಿತಿ ವಿ ಬಿ ಕುಳಮರ್ವರ ಕುರಿತ ಕೃತಿ ಬಿಡುಗಡೆ

Upayuktha
0

ಕಾಂತಾವರ ಕನ್ನಡ ಸಂಘದಲ್ಲಿ  ''ಗಡಿನಾಡಿನ ಸಾಹಿತ್ಯ ಶ್ರೀನಿಧಿ' ಸಹಿತ 10 ಕೃತಿಗಳ ಲೋಕಾರ್ಪಣೆ



ಕಾರ್ಕಳ: ಕಾಸರಗೋಡಿನ ಹಿರಿಯ ಸಾಹಿತಿ, ಶಿಕ್ಷಣ ತಜ್ಞರಾದ ವಿ.ಬಿ. ಕುಳಮರ್ವ ಅವರ ಕುರಿತಾದ 'ಗಡಿನಾಡಿನ ಸಾಹಿತ್ಯ ಶ್ರೀನಿಧಿ - ವಿ.ಬಿ. ಕುಳಮರ್ವ' ಕೃತಿಯು 2023 ನವೆಂಬರ್ 1ರಂದು ಬೆಳಗ್ಗೆ 10 ಗಂಟೆಗೆ ಕಾಂತಾವರದ ಕನ್ನಡ ಸಂಘದ ಆಶ್ರಯದಲ್ಲಿ ನಡೆಯುವ ಕಾಂತಾವರ ಉತ್ಸವ-2023ರಲ್ಲಿ ಬಿಡುಗಡೆಯಾಗಲಿದೆ. ಈ ಕೃತಿಯನ್ನು ಕಾಸರಗೋಡಿನ ಪತ್ರಕರ್ತ, ಸಾಹಿತಿ ವಿರಾಜ್ ಅಡೂರು ಬರೆದಿದ್ದಾರೆ. ಕಾಂತಾವರದ ರಥಬೀದಿಯ ಕನ್ನಡ ಸಂಘದ 'ನಾಡಿಗೆ ನಮಸ್ಕಾರ' ಗ್ರಂಥಮಾಲೆಯ 335ನೇ ಕೃತಿಯಾಗಿ ಇದು ಲೋಕಾರ್ಪಣೆಯಾಗಲಿದೆ. ಈ ಕಾರ್ಯಕ್ರಮದಲ್ಲಿ ಒಟ್ಟು 10 ಕೃತಿಗಳು ಬಿಡುಗಡೆಯಾಗಲಿದ್ದು, ಎಲ್ಲಾ ಕೃತಿಗಳ ಕುರಿತು ಕೃತಿಗಳ ಸಂಪಾದಕರಾದ ಡಾ. ಬಿ ಜನಾರ್ದನ ಭಟ್ ಬೆಳ್ಮಣ್ಣು ಮಾತನಾಡುವರು. 



ಕುಂಬಳೆ ಸಮೀಪದ ನಾರಾಯಣಮಂಗಲದ ವಿ.ಬಿ. ಕುಳಮರ್ವ ಅವರು ಪೆರ್ಲ ಸತ್ಯನಾರಾಯಣ ಪ್ರೌಢಶಾಲೆಯಲ್ಲಿ ಅನೇಕ ವರ್ಷಗಳ ಕಾಲ ಶಿಕ್ಷಕರಾಗಿ ನಿವೃತ್ತರಾದವರು. ಅನೇಕ ಕನ್ನಡ ಪರ ಸಮಾವೇಶದಲ್ಲಿ ಅಧ್ಯಕ್ಷತೆಯನ್ನು ವಹಿಸಿಕೊಂಡು ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಅನೇಕ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಪಡೆದಿದ್ದಾರೆ. ಇವರು ಶ್ರೀಪಾರ್ಥಸಾರಥಿ, ಕಾರಂಜಿ, ಸುಲಭ ರಾಮಾಯಣ, ವ್ಯವಹಾರ ಮಾರ್ಗದರ್ಶಿ, ಒಳದನಿ, ದೀಪಿಕೆ ಸೇರಿದಂತೆ ಅನೇಕ ಕೃತಿಗಳನ್ನೂ ಬರೆದಿದ್ದಾರೆ. ವಿ ಬಿ ಕುಳಮರ್ವ ಅವರು ಬರೆದ 'ಹವಿ-ಸವಿ ಕೋಶ' ಹವ್ಯಕ - ಕನ್ನಡ ನಿಘಂಟು ಜನಪ್ರಿಯವಾಗಿದೆ. ಅನೇಕ ಶಿಬಿರಗಳ ಸಂಪನ್ಮೂಲ ವ್ಯಕ್ತಿಯಾಗಿ, ಸಂಘಟಕರಾಗಿ, ಸಾಹಿತ್ಯ ಮತ್ತು ಗಮಕ ಕ್ಷೇತ್ರದಲ್ಲಿ ಸದಾ ಚಟುವಟಿಕೆಯಲ್ಲಿದ್ದಾರೆ.  ಇದೀಗ ಪತ್ನಿ ನಿವೃತ್ತ ಜಿಲ್ಲಾ ವಿದ್ಯಾಧಿಕಾರಿ ಲಲಿತಾಲಕ್ಷ್ಮಿ ಕುಳಮರ್ವ ಅವರ ಜತೆಗೆ ನಿವೃತ್ತ ಜೀವನ ನಡೆಸುತ್ತಿರುವ ವಿ ಬಿ ಕುಳಮರ್ವ ಅವರು ಅನೇಕ ಸಂಶೋಧಕರಿಗೆ, ಸಾಹಿತ್ಯ ಆಸಕ್ತರಿಗೆ ತಮ್ಮ ಮನೆಯಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಇವರು 30 ವರ್ಷಗಳ ಕಾಲ ಕೇರಳ ರಾಜ್ಯ ಕನ್ನಡ ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರಾಗಿಯೂ, ಸಂಪನ್ಮೂಲ ವ್ಯಕ್ತಿಯಾಗಿಯೂ ಇದ್ದರು. ಅಧ್ಯಾಪಕ ತರಬೇತಿಯ ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿಯೂ ಹಲವಾರು ಸಾಹಿತ್ಯ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ರಾಜ್ಯಮಟ್ಟದ ಅಂಗೀಕೃತ ತೀರ್ಪುಗಾರರಾಗಿಯೂ ಕೆಲಸ ಮಾಡಿದ್ದಾರೆ.



'ನಾಡಿಗೆ ನಮಸ್ಕಾರ'ದಲ್ಲಿ ಅನಾವರಣಗೊಳ್ಳುವ ನೂತನ ಹೊತ್ತಗೆಗಳು

ಶತಮಾನದ ಮಹಾಪರಿಕ್ರಮಗಾಥೆ ಕರ್ಣಾಟಕ ಬ್ಯಾಂಕ್ (ಲೇಖಕರು: ಕೃಷ್ಣಪ್ರಕಾಶ ಉಳಿತ್ತಾಯ)

'ಬಾಳಿನ ಗಿಡ' ಖ್ಯಾತಿಯ ಪತ್ರಕರ್ತ- ಸಾಹಿತಿ ಮಾರ್ಪಳ್ಳಿ ಹರಿದಾಸ ರಾವ್ (ಲೇಖಕರು : ಡಾ. ಸರ್ವಮಂಗಳಾ ಪಿ.ಆರ್)

ಹರಿಕೀರ್ತನಾ ವಿದುಷಿ-ಬಾಲಭಾರತಿ ಮಾರ್ಪಳ್ಳಿ ಪದ್ಮಾವತಿ ಶಿವರಾಮ್ ರಾವ್ (ಲೇಖಕರು: ವಿಜಯಲಕ್ಷ್ಮೀ ನಂದಳಿಕೆ ಬಾಲಚಂದ್ರ ರಾವ್)

ಆಯುರ್ವೇದ ಯುಗಪುರುಷ-ಸಮಾಜ ಸುಧಾರಕ ಪಂಡಿತ ತಾರಾನಾಥರು (ಲೇಖಕರು: ಲಕ್ಷ್ಮೀದೇವಿ ಶಾಸ್ತ್ರಿ)

ಗಡಿನಾಡ ಸಾಹಿತ್ಯ ಶ್ರೀನಿಧಿ ವಿ.ಬಿ. ಕುಳಮರ್ವ (ಲೇಖಕರು: ವಿರಾಜ್ ಅಡೂರು)

ಗಡಿನಾಡ ಗಣ್ಯ ಸಾಹಿತಿ ಹರೀಶ್ ಪೆರ್ಲ (ಲೇಖಕರು: ರಾಜಶ್ರೀ ಟಿ. ರೈ ಪೆರ್ಲ)

ಸಾಹಿತ್ಯ ಪೋಷಕ, ವ್ಯಾಖ್ಯಾನಕಾರ, ಸಂಘಟಕ ಕುಲ್ಯಾಡಿ ಮಾಧವ ಪೈ (ಲೇಖಕರು: ಗುಣಾಜೆ ರಾಮಚಂದ್ರ ಭಟ್)

ಮಹತ್ವದ ಇತಿಹಾಸ ತಜ್ಞ-ಲೇಖಕ ಡಾ. ಕೆ.ಜಿ. ವಸಂತ ಮಾಧವ (ಲೇಖಕರು: ಡಾ. ಎಕ್ಕಾರು ಪದ್ಮನಾಭ ಭಟ್)

ಸೇವಾ ಸಾಧನೆಯ ಶೋಭೆ: ಮೂಡುಬಿದಿರೆ ಕೋ-ಆಪರೇಟಿವ್ ಸರ್ವಿಸ್ ಬ್ಯಾಂಕ್ (ಲೇಖಕರು: ಸದಾನಂದ ನಾರಾವಿ)

ಸಂಸ್ಕೃತಿ 'ಚಿಂತನ ಮಾಲೆ'ಯ ಕೃತಿ: ಮಟ್ಟಿ ರಾಧಾಕೃಷ್ಣ ರಾವ್ (ಲೇಖಕರು: ಸುಶೀಲಾ ಎಸ್. ರಾವ್, ಉಡುಪಿ)


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top