ಗಂಗೆ ಗೌರಿ ನಾಟಕ ಪೌರಾಣಿಕ ವಸ್ತು ವಿಷಯ ಒಳಗೊಂಡಂತೆ ಸಮಕಾಲಿನ ವಿಷಯಗಳನ್ನು ಪ್ರಸ್ತುತಿಪಡಿಸಿದ ಜನಪದ ನಾಟಕ. ಈಗಾಗಲೇ ಹಲವು ಪ್ರದರ್ಶನ ಕಂಡ ಈ ನಾಟಕವನ್ನು ನಟ ಕುಮಾರ್ ಚಲವಾದಿಯವರು ಹಾಸನದ ಬೆನಕ ಮಹಿಳಾ ತಂಡಕ್ಕೆ ನಿರ್ದೇಶನ ಮಾಡಿ ಹೊಳೆನರಸೀಪುರದಲ್ಲಿ 66ನೇ ಶ್ರೀ ಮಹಾಗಣಪತಿ ಮಹೋತ್ಸವ ಸೇವಾ ಸಮಿತಿಯ ಸಾಂಸ್ಕøತಿಕ ವೇದಿಕೆಯಲ್ಲಿ ಪ್ರದರ್ಶಿಸಲಾಯಿತು. ಗಂಗೆ ಗೌರಿ ಪ್ರಸಂಗ ಕುರಿತಂತೆ ತಾಲ್ಲೂಕು ಕ.ಸಾ.ಪ.ಅಧ್ಯಕ್ಷ ಆರ್.ಬಿ.ಪುಟ್ಟೇಗೌಡರು ಕರ್ನಾಟಕದಲ್ಲಿ ಪ್ರಚಲಿತದಲ್ಲಿರುವ ವಿಶೇಷವಾಗಿ ದೊಂಬಿದಾಸರಿಂದ ಹಾಡಲ್ಪಡುವ ಗಂಗೆ ಗೌರಿಯ ಹಾಡು ಕಾವ್ಯವನ್ನೇ ಆಧಾರವಾಗಿ ಇಟ್ಟುಕೊಂಡು ಆಧುನಿಕತೆಯ ಸಂದರ್ಭಕ್ಕೆ ಹೊಂದಿಕೊಳ್ಳುವಂತೆ ನಾಟಕವನ್ನು ಡಾ. ಚಂದ್ರು ಕಾಳೇನಹಳ್ಳಿಯವರು ಕಟ್ಟಿ ಕೊಟ್ಟಿದ್ದಾರೆ.
ಪುರಾಣ ಮತ್ತು ಸಮಕಾಲೀನತೆಯ ಸಂಯೋಗವೇ ನಾಟಕದ ಮೂಲ ದ್ರವ್ಯ. ಗಂಗೆ ಎಂದರೆ ನೀರು, ಗೌರಿ ಎಂದರೆ ಭೂಮಿ. ಇವರೆಡನ್ನೂ ಸರಿದೂಗಿಸಿಕೊಂಡು ಹೋಗುತ್ತಿರುವ ಶಿವನೇ ಇದರ ಸೂತ್ರದಾರ ಹಾಗು ಈ ಭೂಮಿಯ ಮೊದಲ ಜಿರಾತುದಾರ. ಬೆಸ್ತರ ಹುಡುಗಿ ಗಂಗೆ ಶಿವನನ್ನು ಮೆಚ್ಚಿ ಕೈಲಾಸಕ್ಕೆ ಹೊರಡುತ್ತಾಳೆ. ಶಿವನ ಮಡದಿ ಗೌರಿ ಗಂಗೆಯನ್ನು ಕೈಲಾಸದಲ್ಲಿ ಸವತಿಯಾಗಿ ಇರಿಸಿಕೊಳ್ಳಲು ಇಚ್ಚಿಸುವುದಿಲ್ಲ. ನೀವಿಬ್ಬರೂ ಹೊಂದಿಕೊಂಡು ಹೋಗಿ ಎಂದು ಶಿವನು ಹೇಳಿದರೆ ಕೇಳಿಯಾರೇ..? ಮುಂದೆ ನಡೆಯುವ ಗಂಗೆ ಗೌರಿ ಜಗಳ ಜನಪದ ಬೈಗುಳದ ಬನಿಯೇ ರಂಜನೀಯ. ಜಗಳ ವಿಕೋಪಕ್ಕೆ ಹೋಗಿ ಗಂಗೆಯನ್ನು ಶೂದ್ರಳೆಂದು ಜರಿದು ಭೂಮಿಗೆ ಹೋಗುವಂತೆ ಆಜ್ಞಾಪಿಸುವ ಗೌರಿ ಆ ಸಮಯಕ್ಕೆ ಸೂತಕವಾಗುತ್ತಾಳೆ. ಇದೇ ಗೌರಿಗೆ ಪಾಠ ಕಲಿಸಲು ತಕ್ಕ ಸಮಯವೆಂದು ತಿಳಿದು ಗಂಗೆ ಭೂಮಿಗೆ ಹಿಂದಿರುಗುತ್ತಾಳೆ.
ಇತ್ತ ಕೈಲಾಸದಲ್ಲಿ ಇದ್ದ ನೀರನ್ನೆಲ್ಲಾ ಗಂಗೆ ಮಾಯ ಮಾಡಿ ಕೈಲಾಸದಲ್ಲಿ ನೀರಿಲ್ಲವಾಗುತ್ತದೆ. ಭೂಮಿಯಲ್ಲಿ ನೀರು ತೆಗೆದುಕೊಂಡು ಬರಲು ಗೌರಿಯೇ ತನ್ನ ಮಗ ಈರಣ್ಣನನ್ನು ಕಳಿಸುತ್ತಾಳೆ. ಈರಣ್ಣನಿಗೆ ಭೂಮಿಯಲ್ಲಿ ನೀರು ಸಿಗದೇ ಪರಿಪಾಠಲು ಪಡುತ್ತಾನೆ. ಭೂಮಿಯಲ್ಲಿ ನೀರು ಕಲುಷಿತವಾಗಿ ಆ ಸ್ಥಿತಿಯಲ್ಲಿಯೇ ಗಂಗೆ ಈರಣ್ಣನಿಗೆ ದರ್ಶನ ನೀಡುತ್ತಾಳೆ. ಆಗ ಈರಣ್ಣ ತನ್ನ ತಾಯಿಯ ಸೂತಕ ಕಳೆಯಲು ಒಂದು ಕೊಡ ನೀರನ್ನು ಕೊಡುವಂತೆ ಕೇಳುತ್ತಾನೆ. ಮಳೆ ಕೂಯ್ಲಿನಿಂದ ಹಿಡಿದು ಇಟ್ಟಿದ್ದ ನೀರನ್ನು ರೈತರಿಂದ ಗಂಗೆ ಕೊಡಿಸುತ್ತಾಳೆ. ಆ ನೀರನ್ನು ಕೈಲಾಸಕ್ಕೆ ಒಯ್ಯುತ್ತಾನೆ.
ಗೌರಿ ಸೂತಕ ಕಳೆಯಲು ಹೊರಟಾಗ ಮತ್ತೆ ನೀರಿನಲ್ಲಿ ಗಂಗೆ ಪ್ರತ್ಯಕ್ಷವಾಗುತ್ತಾಳೆ. ಇದರಿಂದ ಕುಪಿತಗೊಂಡ ಗೌರಿಯು ನೀರಿನಿಂದ ಸೂತಕ ಕಳೆಯಲು ಹೋಗುತ್ತಾಳೆ. ಕೊಡ ಒಡೆದು ಹೋಗುತ್ತದೆ. ಮತ್ತೆ ಇನ್ನೊಂದು ಕೊಡ ನೀರಿಗೆ ಗೌರಿ ಈರಣ್ಣನಲ್ಲಿ ಮೊರೆ ಹೋಗುತ್ತಾಳೆ. ಅವನು ಸಾಧ್ಯವಿಲ್ಲ ಎಂದು ತೆರಳುತ್ತಾನೆ. ಅಂತೂ ಕಡೆಗೆ ಗೌರಿ ಭೂಮಿಗೆ ಹೋಗಿ ಗಂಗೆಗೆ ಶರಣಾಗುತ್ತಾಳೆ. ಮಳೆ ಬರುತ್ತದೆ ಸೂತಕ ಕಳೆಯುತ್ತದೆ ಶಿವ ಪ್ರತ್ಯಕ್ಷನಾಗುತ್ತಾನೆ. ನೀವಿಬ್ಬರೂ ಸಾಮರಸ್ಯದಿಂದ ಇದ್ದರೆ ಭೂಮಿಗೆ ಒಳಿತಾಗುತ್ತದೆ. ನಿಮ್ಮಿಬರ ಸಂಯೋಗದಿಂದ ಭೂಮಿಯ ಸೂತಕ ಕಳೆಯುತ್ತದೆ ಎಂಬಲ್ಲಿಗೆ ನಾಟಕ ಮುಕ್ತಾಯವಾಗುತ್ತದೆ. ಭೂಮಿ ಮತ್ತು ನೀರಿನ ಸಂಬಂಧವನ್ನು ಗಂಗೆ ಗೌರಿ ರೂಪಕದಲ್ಲಿ ಜಾನಪದೀಯವಾಗಿ ನಿರೂಪಿಸಲಾಗಿದೆ.
ಶಿಕ್ಷಕಿ ರಾಣಿ ಚರಾಶ್ರೀ ಗಂಗೆ ಪಾತ್ರದಲ್ಲಿ ಮತ್ತು ತುಳಸಿ ಅವರು ಗೌರಿ ಪಾತ್ರದಲ್ಲಿ ನಾಟಕವನ್ನು ಸರಿದೂಗಿಸಿಕೊಂಡು ಹೋಗುತ್ತಾರೆ. ಶಿವನಾಗಿ ಪುಟ್ಟಬಸಮ್ಮ ವೀರಭದ್ರನಾಗಿ ಗಾಯಿತ್ರಿ ಪ್ರಕಾಶ್ ಪಾತ್ರಕ್ಕೆ ನ್ಯಾಯ ಒದಗಿಸುತ್ತಾರೆ. ನಂದಿಯಾಗಿ ಪದ್ಮ ವೆಂಕಟೇಶ್ ಜಯಲಕ್ಷ್ಮಿ, ಟಾಕೂರ್ ಮೇಳದವಗಾಗಿ ಶಾಂತಮ್ಮ ಕೊಣವೇಗೌಡನ ಪಾತ್ರದಲ್ಲಿ ನಟಿಸಿದರು. ನೇಪಥ್ಯದಲ್ಲಿ ಯಾಕೂಬ್ ಸಹಕರಿಸಿದರು.
-ಗೊರೂರು ಅನಂತರಾಜು, ಹಾಸನ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ