ನನ್ನ ಊರು ಯೋಗಿಹಳ್ಳಿ. ದುದ್ದ ಹೋಬಳಿ ದ್ಯಾಪಲಾಪುರ ಅಂಚೆ ಹಾಸನ ತಾಲ್ಲೂಕು. ತಂದೆ ಹನುಮಂತೇಗೌಡ ತಾಯಿ ನಂಜಮ್ಮ. ರೈತ ಕುಟುಂಬದಲ್ಲಿ ಎಂಟು ಮಕ್ಕಳ ತುಂಬು ಕುಟುಂಬದ 2ನೇ ಮಗ ನಾನು. 1 ರಿಂದ 4ನೇ ತರಗತಿ ವ್ಯಾಸಂಗ ಹುಟ್ಟೂರು ಯೋಗಿ. ಹಳ್ಳಿಯಲ್ಲಿ 5 ರಿಂದ 10 ಪಕ್ಕದೂರು ಗಾಡೇನಹಳ್ಳಿಯಲ್ಲಿ. ಪ್ರತಿ ದಿನ ಬೆ. 2 ಸಂಜೆ 2 ಕಿ.ಮೀ. ದೂರ ನಡೆದೆ ಎಸ್‍ಎಸ್‍ಎಲ್‍ಸಿ ಮುಗಿಸಿ ಉಷ್ ಎಂದು ಉಸಿರುಬಿಟ್ಟೆ. ಮುಂದೇನು ಎನ್ನುವಾಗ 2 ವರ್ಷ ಎಜುಕೇಷನ್ ಕೋರ್ಸ್ ಮಾಡಿದರೆ ಪ್ರೈಮರಿ ಶಾಲೆ ಮೇಷ್ಟ್ರು ಅಗಬಹುದೆಂದು ಹೋಗಿ ಕೇಳಿದರೆ ಆಗುವುದಿಲ್ಲವೆಂದರು.
ನನ್ನ ಚಿತ್ರಕಲೆಗೆ ನನ್ನ ತಂದೆಯವರೇ ಉತ್ತೇಜಕರು. ಊರಿನಲ್ಲಿ ಯಾವುದೇ ಮದುವೆ ಸಮಾರಂಭ ನಡೆದರೂ ಅಲ್ಲಿ ನಮ್ಮ ತಂದೆ ಹಸೆ ಚಿತ್ರಗಳನ್ನು ಗೋಡೆಯ ಮೇಲೆ ಚಿತ್ರಿಸುತ್ತಿದ್ದರು. ಇದನ್ನೆಲ್ಲ ನೋಡಿ ನನಗೆ ಚಿತ್ರಕಲೆಯಲ್ಲಿ ಆಸಕ್ತಿ ಬೆಳೆಯಿತು. 6ನೇ ತರಗತಿಯಲ್ಲಿ ಇದ್ದಾಗ್ಗ ಹೆಡ್‍ಮೇಷ್ಟ್ರು ಕಪ್ಪು ಹಲಗೆಯ ಮೇಲೇ ಹಿಂದಿ ಭಾಷಾ ಪುಸ್ತಕದ ಮೀನಿನ ಚಿತ್ರ ಬರೆದು ಇದನ್ನು ನಾನು ಹೊರಗೆ ಹೋಗಿ ಬರುವಷ್ಟರಲ್ಲಿ ಬರೆಯಿರಿ ಮಕ್ಖಳೇ ಎಂದು ಟೀ ಕುಡಿಯಲು ಆಚೆ ಕಡೆ ಹೋದರು. ಅವರು ಟೀ ಕುಡಿದು ಬರುವಷ್ಟರಲ್ಲಿ ಹೆಡ್ ಮೇಸ್ಟ್ರಕ್ಕಿಂತ ನಾನೇ ಚೆನ್ನಾಗಿ ಮೀನು ಬಿಡಿಸಿದ್ದೆ. ವೈ ಜಯರಾಮ್ ಎದ್ದೇಳು ಎಂದು ಎದ್ದು ನಿಲ್ಲಿಸಿ ತರಗತಿಯ ಎಲ್ಲ ಮಕ್ಕಳೆದುರು ಬೆನ್ನು ತಟ್ಟಿ ಪ್ರೋತ್ಸಾಹಿಸಿದಾಗ ಕೆರೆ ಮೀನು ತಿಂದಷ್ಟೇ ಖುಷಿಯಾಯಿತು. ನನ್ನ ಮೀನನ್ನು ಶಾಲೆಯ ಎಲ್ಲಾ ಶಿಕ್ಷಕರಿಗೂ ತೋರಿಸಿ ಖುಷಿಪಟ್ಟರು. ಆದರೆ ತಿನ್ನಲ್ಲಿಕ್ಕೆ ಅವಕಾಶ ಇರಲಿಲ್ಲ.
ಅರೇ, ಜಯರಾಮ್ ಎಷ್ಟು ಚೆನ್ನಾಗಿ ಜೋಕ್ಸ್ ಕಟ್ ಮಾಡ್ತೀರಿ ಎಂದು ಇಂಟರ್‍ವ್ಯೂ ಮಧ್ಯೆ ಎಂಟ್ರಿ ಆದೆ. ಇರಲಿ ಕೇಳಿ ಅನಂತ್ ಸಾರ್ ನನ್ನ ಕಥೆ. ಇಲ್ಲಿಂದಲೇ ಶುರುವಾಯಿತು ನನ್ನ ಚಿತ್ರಕಲಾ ಅಭ್ಯಾಸ. ಎಲ್ಲಾ ಮಕ್ಕಳು ನೋಟ್ಸ್ ಬರೆಯುತ್ತಿದ್ದರೆ ನನ್ನ ನೋಟ್ ಪುಸ್ತಕದಲ್ಲಿ ಚಿತ್ರಗಳೇ ತುಂಬಿರುತ್ತಿದ್ದವು. ನೋಟ್ಸ್ ಬರೆಯದೇ ಎಲ್ಲಾ ಶಿಕ್ಷಕರಿಂದ ಏಟು ತಿನ್ನುವುದೇ ನನ್ನ ಪ್ರತಿದಿನದ ಚಾಳಿಯಾಯಿತು.
ಎಜುಕೇಷನ್ ಕೋರ್ಸ್ ಸಿಗದೇ ತೀವ್ರ ನಿರಾಶನಾಗಿ ತಲೆಯ ಮೇಲೇ ಕೈ ಹೊತ್ತು ಕುಳಿತಾಗ ನನ್ನ ಚಿಕ್ಕಪ್ಪ, ಜಯರಾಮ ಏಕೋ ಚಿಂತೆ ಮಾಡ್ತಿ. ನೀನು ಹೇಗಿದ್ದರೂ ಚಿತ್ರ ಚೆನ್ನಾಗಿ ಬರೆಯುತ್ತಿಯಾ ತಾನೇ? ಹೋಗಿ ಯಾವುದಾದರೂ ಚಿತ್ರಕಲಾ ತರಬೇತಿ ಶಾಲೆಗೆ ಸೇರು ಎಂದರು. ನಿರ್ಮಲಾ ಚಿತ್ರಕಲಾ ಶಾಲೆಗೆ ಸೇರಿದೆ. 4 ವರ್ಷಗಳ ಕೋರ್ಸು ಈರಣ್ಣ ದಂಡಿನ್, ಆರ್.ಸಿ.ಕಾರದಕಟ್ಟಿಯವರಿಂದ 5ನೇ ವರ್ಷದ ಡ್ರಾಯಿಂಗ್ ಡಿಪ್ಲೋಮಾವನ್ನು ಎಸ್.ಆರ್.ಗಿರೀಶ್. ರವೀಂದ್ರಲಾಲ್‍ರವರಲ್ಲಿ ಅತಿ ಹೆಚ್ಚು ಅಂಕದೊಂದಿಗೆ ಮುಗಿಸಿದೆ. ಹಾಸನದ ಶಾಂತಲಾ ಲಲಿತ ಕಲಾ ಶಾಲೆಯಲ್ಲಿ ಉಪನ್ಯಾಸಕನಾಗಿ 2 ವರ್ಷ, ಮಂಡ್ಯದ ಜೈ ಭಾರತ್ ವಿದ್ಯಾಲಯದಲ್ಲಿ 3 ವರ್ಷ ಬೋದಿಸಿದೆ. ನಂತರ ಇನ್ನುಳಿದ ಕೆಲ ವರ್ಷ ಹಾಸನದ ಸಿಟಿ ಬಸ್‍ಸ್ಟ್ಯಾಂಡ್‍ನ ಕಟ್ಟಿನಕೆರೆ ಮಾರ್ಕೇಟಿನಲ್ಲಿ ಸ್ನೇಹಿತರೊಂದಿಗೆ ಮಾಸ್ಟರ್ ಆಟ್ರ್ಸ್ ಶಾಪ್ ಮಾಡಿ ಬೋರ್ಡ್ ಬ್ಯಾನರ್ ಬರೆದೆ. ಈ ನಡುವೆ ನನಗಿಷ್ಟವಾದ ಕಲಾಕೃತಿಗಳನ್ನು ಕ್ಯಾನ್ವಾಸ್ ಮೇಲೇ ಚಿತ್ರಿಸಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಮಾಡಿ ಕಲಾಕೃತಿಗಳನ್ನು ಮಾರಾಟ ಮಾಡಿದೆ.
ಹಣ್ಣು ಮಾರುವ ಅಜ್ಜಿಯ ಚಿತ್ರ ಸುಮಾರು 18 ಕಲಾಕೃತಿ ರಚಿಸಿ ಮಾರಾಟವಾಗಿದೆ. ಹಂಪಿ ಕಲ್ಲಿನ ಚಿತ್ರ 5. ಎತ್ತಿನಗಾಡಿ ರೈತ 6, ಮೇಕೆ ಮಾಲೀಕ 8, ಹೊಲ ಉಳುವ ರೈತ 5 ಬಾರಿ ಚಿತ್ರ ರಚಿಸಿ ಮಾರಾಟ ಮಾಡಿದ್ದೇ ಈವರೆಗಿನ ಲಾಭ. ಇನ್ನೂ ಅನೇಕ ಕಲಾಕೃತಿಗಳು ಪುನ: ಪುನ: ರಚನೆ ಮಾಡಿ ಮಾರಾಟ ಮಾಡಿರುವೆ. ಇವೆಲ್ಲಾ ಕಲಾಕೃತಿಗಳು 2.4 ಅಡಿ 3.9 ಅಡಿ ಅಳತೆಯ ಅಕ್ರಾಲಿಕ್ ವರ್ಣಚಿತ್ರ ಮತ್ತು ತೈಲವರ್ಣದ ರಚನೆಗಳು.
ಹಾಸನದ ಇಂಜಿನಿಯರಿಂಗ್ ಭವನದಲ್ಲಿ ಇರುವ ವಿಶ್ವೇಶ್ವರಯ್ಯನವರ ಕಲಾಕೃತಿ 3 ಅಡಿ 5 ಅಡಿ ಅಕ್ರಾಲಿಕ್ ವರ್ಣದಲ್ಲಿ ಕೇವಲ ಮೂರು ದಿನಗಳಲ್ಲಿ ಮಾಡಿಕೊಟ್ಟಿರುವೆ. 10 ಕಡೆ ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನ ಮಾಡಿ 8 ಗುಂಪು ಪ್ರದರ್ಶನಗಳಲ್ಲಿ ಭಾಗಿಯಾಗಿರುವೆ. ಮೈಸೂರು ದಸರಾ ವಸ್ತು ಪ್ರದರ್ಶನ, ಕರ್ನಾಟಕ ಲಲಿತಕಲಾ ಅಕಾಡೆಮಿ ಬೆಂಗಳೂರು ಚಿತ್ರಕಲಾ ಪರಿಷತ್‍ನ ಚಿತ್ರಸಂತೆಯಲ್ಲಿ ಭಾಗವಹಿಸಿರುವೆ ಎಂದು ಕ್ಷಣ ಹೊತ್ತು ಮಾತು ನಿಲ್ಲಿಸಿ ಮೌನವಾದರು. ಜಯರಾಮ್ ಮಾತನಾಡುವುದೇ ಕಡಿಮೆ. ನಾನೇ ಕೇಳಿದ್ದಕ್ಕೆ ಇಷ್ಟು ಮಾಹಿತಿ ಹಂಚಿಕೊಂಡರು. ಇವರ ಕಲಾಕೃತಿಗಳು ನಾನು ಗಮನಿಸಿದಂತೆ ಹಳ್ಳಿಯ ಸೊಗಡಿನಿಂದ ಕೂಡಿವೆ.
ಇವು ಜನರು ಇಷ್ಟಪಡುವ ಕಲಾಕೃತಿಗಳಾಗಿ ಮಾರಾಟವಾಗಿರುವುದಕ್ಕೆ ಒಂದು ಸಿಂಪಲ್ ಕಾರಣವಾಗಿರಬಹುದು. ಇವರಿಗೆ ಶಾಂತಲಾ ಫೈನ್ ಆಟ್ಸ್ ಪಾಯಿಂಟ್ ಇವರಿಂದ ಕರ್ನಾಟಕ ಕಲಾ ರತ್ನ ಪ್ರಶಸ್ತಿ, ಕ.ಸಾ.ಪ. ಹಾಸನದಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಹೊಯ್ಸಳ ಚಿತ್ರಕಲಾ ಪರಿಷತ್ತು ಹಾಸನ ಇವರಿದ ವಿಶ್ವ ಚಿತ್ರಕಲಾ ದಿನಾಚರಣೆಯಂದು ಸನ್ಮಾನ ಸಂದಿದೆ. ಇಂಡಿಯನ್ ಅಕಾಡೆಮಿ ಆಫ್ ಆರ್ಟ್ ಗುಲ್ಬರ್ಗ ಇವರಿಂದ ಕಲಾ ಶಿಕ್ಷಕಶ್ರೀ ಸ್ಟೇಟ್ ಅವಾರ್ಡ್ ಸಿಕ್ಕಿದೆ. ಇವರ ಶ್ರೀಮತಿ ರೂಪ ಟಿ.ಎಂ.ಕೂಡ ಚಿತ್ರಕಲಾ ಶಿಕ್ಷಕರು.
-ಗೊರೂರು ಅನಂತರಾಜು, ಹಾಸನ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ