ಕೃತಿ ಪರಿಚಯ: ಬದುಕು ಚಕ್ಕಡಿ ಬಾಳ್ವೆ ತಕ್ಕಡಿ

Upayuktha
0





ಧು ನಾಯ್ಕ ಪೋನ್ ಹಚ್ಚಿ ಅನಂತರಾಜ್ ಸಾರ್, ನಮ್ಮ ಹರಿಹರದ ಎ.ಸಿ.ಮಂಜಪ್ಪನವರ ಒಂದು ಕವನ ಸಂಕಲನ ನಿಮಗೆ ಕಳಿಸಿಕೊಡುತ್ತಿದ್ದೇನೆ. ಇವರು ನಮ್ಮ ದೋಸ್ತಿ ಇದಾರಾ. ಇವರ ಪುಸ್ತಕ ಓದಿ ಒಂದು ವಿಮರ್ಶೆ ಬರೆದುಕೊಡ್ರಲಾ.. ಎಂದಾಗ ಕರ್ನಾಟಕ ರಾಜ್ಯ ಬರಹಗಾರರ ಸಂಘದ ಅಧ್ಯಕ್ಷರ ಮಾತಿಗೆ ಉಘೆ ಎಂದೆ. ಅವರಾದರೂ ಮೊನ್ನೆ ಗಿನಿಸ್ ದಾಖಲೆಯ ನೂರು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ನೂರೈವತ್ತಕ್ಕೂ ಹೆಚ್ಚು ಕೃತಿಗಳನ್ನು ಒಮ್ಮೆಲೆ ಅನಾವರಣ ಗೊಳಿಸಿದ್ದರು. ಬದುಕು ಬಾಳ್ವೆಯ ಮುಖಪುಟವೇ ಒಮ್ಮೆಗೆ ನನ್ನ ಮನ ಸೆಳೆಯಿತು. ಮುಖಪುಟ ವಿನ್ಯಾಸ ಶ್ರೀ ನಾಮದೇವ ಕಾಗದವಾರ. ಅದು ನೋಡುತ್ತಿದ್ದಂತೆ ನನಗೆ ಒಂದು ಪದಸಾಲು ನೆನಪಾಯಿತು. ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ.. ಆಗ ಯಾಕೂಬ ಪೋನ್ ಹಚ್ಚಿದ. ‘ಏನಲೇ ಬೆಳಿಗ್ಗೆ ಬೆಳಿಗ್ಗೆನೆ ಎಣ್ಣೆ ಅಂಗಡಿಯಲ್ಲಿದ್ದೇನೋ.. ನಾನೇ ಮೊದಲು ಮಾತನಾಡಿದೆ. ‘ಇಲ್ಲ ದೇವ್ರು ಪೇಪರ್ ತಗೊಳ್ತಾ ಇದ್ದೀನಿ.. ನಾನು ಮತ್ತೇ ಈ ಪದಸಾಲು ಉಚ್ಚರಿಸಿ ಇದನ್ನು ಬರೆದವರು ಯಾರೋ ಎಂದೆ. ಯಾರಾದರೂ ಇರಲಿ ನಾನೊಂದು ಪದ ಹೇಳ್ತಿನಿ ಕೇಳಿ ದೇವ್ರು.



ಬದುಕು ಕುದುರೆ ಗಾಡಿ. 

ಜಟಕಾ ಸಾಬಿ ಹಾಕದಿರೆ ಹುಲ್ಲು 

ಕುದುರೆ ಓಡುವುದಿಲ್ಲ ನಿಲ್ಲು..


ಯಾಕೂಬನೂ ಎಂ.ಎ.ಪದವೀದರ. ಆದರೆ ಉಪನ್ಯಾಸಕನಾಗಲಿಲ್ಲ. ಆದರೂ ಸಂಸಾರವನ್ನು ಉಪವಾಸ ಬಿಟ್ಟಿಲ್ಲ. ಅವನು ಒಳ್ಳೆಯ ವಾಲ್ ರೈಟರ್. ಕನ್ನಡವನ್ನು ಅಚ್ಚುಕಟ್ಟಾಗಿ ಗೋಡೆಯ ಮೇಲೆ ಬಟ್ಟಿ ಇಳಿಸಬಲ್ಲ ಚತುರ ಕಲೆಗಾರ. ಪೋನ್ ಕರೆ ಬಂದ ಊರಿಗೆ ಹೋಗುವನು. ಸರ್ಕಾರಿ ಬೋರ್ಡ್ ಬರೆಯುವನು. ಶಾಲಾ ಮಾಸ್ತರು ಕೂಡ ಕರೆಯುವರು. ಶಾಲೆಯ ಗೋಡೆಯ ಮೇಲೆ ನಲಿಕಲಿ ಚಿತ್ರ ಬರೆದು ಬಣ್ಣದ ಡಬ್ಬ ಬ್ರಶ್ ಚೀಲ ಹಿಡಿದು ಊರಿಗೆ ಮರುಳುವಾಗ ನಾನು ಅವನಿಗೆ ನೆನಪಾಗಿ “ಎಲ್ಲಿದ್ದೀರಿ ದೇವು..?ಎಂದಾಗಲೇ ನನಗೆ ತಿಳಿಯುವುದು ಆ ಪೆಗ್ ಪರಮಾತ್ಮ ಯಾಕೂಬನ ಪರಕಾಯ ಪ್ರವೇಶ ಮಾಡಿದ್ದಾನೆ ಎಂದು. ಇದೇನು ನಾನು ಎ.ಸಿ.ಮಂಜಪ್ಪನವರ ಬದುಕು ಬಾಳ್ವೆ ಬಿಟ್ಟು ಯಾಕೂಬನ ಬಾಳ್ವೆ ಹರಸಿ ಹೊರಟಿದ್ದೇನೆ. ಇರಲಿ ನನ್ನದು ಸ್ಟಾರ್ಟಿಂಗ್ ಟ್ರಬಲ್. ಅದಕ್ಕೆ ಒಂದಿಷ್ಟು ಪೀಠಿಕೆ ಹೀಗೆ ಇಷ್ಟು. ಇನ್ನೂ ಕೃತಿಕಾರರ ಬಗ್ಗೆ ಒಂದಿಷ್ಟು. ಎ.ಸಿ.ಮಂಜಪ್ಪನವರ ಜನ್ಮ ದಿನಾಂಕ 1-6-1971. ಜನ್ಮ ಸ್ಥಳ ಕೆಂಚನಹಳ್ಳಿ ಎಂಎ ಬಿಇಡಿ ಪದವೀದರರು. ತಂದೆ ಅರಸನಾಳು ಚೌಡಪ್ಪ ತಾಯಿ ಹಾಲಮ್ಮ. 2022ರಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕನ್ನಾಯಕನಹಳ್ಳಿ ಹರಪ್ಪನಹಳ್ಳಿ ತಾ. ಇಲ್ಲಿಗೆ ಪ್ರಾಂಶುಪಾಲರಾಗಿ ಬಡ್ತಿ ಹೊಂದಿರುತ್ತಾರೆ. ಬದುಕು ಬಾಳ್ವೆ, ವಸುಂಧರೆಯ ಒಡಲು ಕವನ ಸಂಕಲನಗಳು. ವಚನ ಸುರಭಿ ಆಧುನಿಕ ವಚನಗಳು, ಜೀವನಾಮೃತ ಚುಟುಕು ಮಾಲೆ, ಜೇನು ಗೂಡು ಇವರ ಹಾಯ್ಕು ಸಂಕಲನ. 


ಬದುಕಿಗೊಂದು ಗುರಿ ಇರಲಿ ಬಾಳಿಗೊಬ್ಬ ಗುರು ಇರಲಿ

ಗುರು ಇಲ್ಲದಾ ಜೀವನ ಜೀವನವೇ ಅಲ್ಲ..


ಸಂಕಲನದ ಮೊದಲ ಕವಿತೆ ಗುರು ದೇವರಾಣೆಯ ಮೊದಲ ಸಾಲಿನಲ್ಲೇ ಖಡಕ್ ವಾಕ್ಯ. ನಿಜ ಗುರು ತೋರಿದ ಮಾರ್ಗದಲ್ಲಿ ನಡೆಯಬೇಕು. ಹಾಗೇ ಎಷ್ಟು ಜನ ನಡೆಯುತ್ತಿದ್ದಾರೆ ಪ್ರಶ್ನೆಗೆ ಉತ್ತರ ಅಷ್ಟು ಸುಲಭವೇ?

ಗುಡಿಯೊಳಗೆ ಗುರು ಇರಲಿ

 ನುಡಿವಾಗ ಅರಿವಿರಲಿ

ದುಡಿದು ಉಣ್ಣುವ ಭಾಗ್ಯ ನೀಡಯ್ಯ

 ನುಡಿದಂತೆ ನನ್ನ ನಡೆಸಯ್ಯ



ವಚನಕಾರರ ಪ್ರಭಾವ ಕವಿಯ ಮೇಲಿದೆ. ಮುನ್ನುಡಿಕಾರರು ಪ್ರೊ.ಸಿವಿ.ಪಾಟೀಲ್ ಬರೆದಂತೆ ಬದುಕು ಬಾಳ್ವೆ ಎನ್ನುವುದು ವಾಚ್ಯತೆಯನ್ನು ಒಳಗೊಂಡಿರುವಂತೆ ಸೂಚ್ಯತೆಯನ್ನು ಧ್ವನಿಸುತ್ತದೆ. ಬದುಕು ಬಾಳ್ವೆಯ ಸಾಮಾನ್ಯ ಅರ್ಥದಿಂದ ಹಿಡಿದು ಅದರ ತಾತ್ವಿಕ ಮತ್ತು ಪಾರಮಾರ್ಥಿಕ ಅರ್ಥದವರೆಗೂ ಅದನ್ನು ವಿವರಿಸಲು ಅದಕ್ಕೆ ಅದರದೇ ಆದ ಆಳ ಅಗಲ ಹಾಗೂ ವೈವಿಧ್ಯತೆಗಳಿವೆ. 



ಬದುಕು ಚಕ್ಕಡಿ ಬಾಳ್ವೆ ತಕ್ಕಡಿ 

ಬಾಳ್ವೆ ರೇಖೆ ಬದುಕು ರೇಖಾಚಿತ್ರ

ಬದುಕನ್ನು ಸಮ ರೇಖೆಯಲ್ಲಿ ಅಳೆದು ತೂಗಿ ನೋಡಬೇಕಷ್ಟೇ. ಬದುಕಿನಲ್ಲಿ ಕಷ್ಟಸುಖಗಳನ್ನು ಸಮಾನವಾಗಿ ಸ್ವೀಕರಿಸಬೇಕು ಎಂದೆಲ್ಲಾ ಅಂದುಕೊಳ್ಳುತ್ತೇವೆ. ಆದರೆ ಅದು ಸಾಧ್ಯವೇ? ಸಿರಿವಂತ ಇನ್ನೂ ಶ್ರೀಮಂತನಾಗಲು ಬಯಸುತ್ತಾನೆ. ಇದ್ಯಾವ ಅವಕಾಶವಿಲ್ಲದ ಬಡವ ಸಿರಿತನದ ನೋವು ಮರೆಯಲು ಸಾರಾಯಿ ಅಂಗಡಿಗೆ ಹೊರಡುತ್ತಾನೆ. ಆದರೆ ಆ ಸೃಷಿಕರ್ತ ಇದ್ದಾನಲ್ಲಾ ಸಿರಿವಂತನ ಸೋಮಾರಿತನಕ್ಕೆ ಇತ್ತೀಚಿಗೆ ಶುಗರ್ ಬಿಪಿ ತುಂಬಿ ಅವನು ಕೊರಗುವಂತೆ ಮಾಡಿರುವುದು ಸರಿಯಷ್ಟೇ. 


ಎಚ್ಚರ ಮನುಜ ಕೊಳೆಗೇರಿಯ ಕೊಚ್ಚೆಯಂತೆ 

ನೀಚ ಕೆಲಸಕ್ಕೆ ಕೈ ಹಾಕಿ ಕನಸಿನ ಗೋಪುರ ಕಟ್ಟಬೇಡ

ನೀನು ಗಳಿಸಿದ ಸಂಪತ್ತು ಯಾರದೋ ಆಗಬಹುದು.. 



ಖಂಡಿತ ಆಗುತ್ತದೆ. ನಮ್ಮ ತಂದೆ ಬಸವಣ್ಣ. ಬಸವನಂತೆ ದುಡಿಯುತ್ತಿದ್ದ ಶ್ರಮಜೀವಿ ರೈತ. ನಾವು ಸ್ಕೇಲ್ ಇಟ್ಟುಕೊಂಡು ಬಿಳಿ ಹಾಳೆಯ ಮೇಲೆ ಗೆರೆ ಎಳೆಯುವಾಗ ಇದೇನೋ ನಿನ್ನ ಪೆನ್ಸಿಲ್ ಗೆರೆ ಕೊಯ್ ಮೂಲೆಗೆ ಹೋಗೈತ್ತಲ್ಲೋ. ಬೆಳಿಗ್ಗೆ ಗದ್ದೆ ಬಳಿ ಬಾ. ನಾನು ಉಳುಮೆ ಮಾಡುತ್ತೇನೆ. ಬಿತ್ತನೆ ಗೆರೆ ಹೇಗೆ ನೇರ ಇರುತ್ತದೆ ತೋರಿಸುತ್ತೇನೆ. ಮನುಷ್ಯ ದುಡಿದು ತಿನ್ನಬೇಕು. ಶ್ರಮದಾನ ಮಾಡಬೇಕು. ಬೆವರು ನೆಲದ ಮೇಲೆ ಬೀಳುವಂತೆ ಗುದ್ದಲಿ ಅಗೆದು ಬದು ಕಟ್ಟಬೇಕು. ಗದ್ದೆಯ ನೀರು ಕೆಳಗೆ ಹರಿದುಹೋಗದಂತೆ ಭದ್ರ ಮಾಡಬೇಕು. ಆಗ ನಮ್ಮ ಬದುಕು ಸುಭದ್ರ. ಹೋಗೋ ಒಳಗೆ ಅವ್ವ ರಾಜಮುಡಿ ಅಕ್ಕಿ ತರಿ ಒಡೆದು ಶಾವಿಗೆ ಮಾಡ್ತಾವ್ಳೇ. ನಾಟಿ ಕೋಳಿ ಸಾರು ಪೊಗದಸ್ತಾಗಿ ಉಣ್ಣೋಗು.. ಎಂದು ಅಪ್ಪ ಛೇಡಿಸಿದಾಗ ಆ ಕೋಳಿಸಾರಿನ ವಾಸನೆ ಮೂಗಿಗೆ ತಾಗಿ ಆಗಲೇ ಪಾಟಿ ಬದಿಗಿಟ್ಟು ಊಟ ಮಾಡಲು ಹೋಗಿದ್ದು ಸತ್ಯ. 



ಶ್ರಮಜೀವಿ ಅಪ್ಪ ನಾಲ್ಕೇ ಗುಕ್ಕಿಗೆ ಬಿಸಿ ಮುದ್ದೆಯನ್ನು ಉಣ್ಣುತ್ತಿದ್ದರೆ ನಾವು ಅಗಿದು ತಿನ್ನುತ್ತಿದ್ದವು. ರಾಗಿ ಮುದ್ದೆ ಉಂಡು ಅವರು ಎಷ್ಟು ಆರೋಗ್ಯವಂತರಾಗಿದ್ದರು. ರಾಜಮುಡಿ ಅಕ್ಕಿ ಅನ್ನ ತಿಂದು ನಾವು ಫಾರಂ ಕೋಳಿಯಂತೆ ಆಗಿದ್ದೇವೆ. ಅಪ್ಪನಿಗೆ ಅಕಸ್ಮಾತ್ ಏನಾದರೂ ನೆಗಡಿ ಆದರೆ ನನ್ನ ಜೀವಮಾನದಲ್ಲೇ ಇಂತಹದ್ದು ನೋಡಿಲ್ಲ ಎಂದು ರಾತ್ರಿಯೆಲ್ಲಾ ಶೀನಿ ನಮ್ಮ ತಲೆ ತಿನ್ನುತ್ತಿದ್ದರು. ನಾನು ಕಷ್ಟಪಟ್ಟಂತೆ ನಮ್ಮ ಮಕ್ಕಳು ಕಷ್ಟಪಡಬಾರದೆಂದು ಅಪ್ಪ ನಮ್ಮನ್ನು ವ್ಯವಸಾಯಕ್ಕೆ ಬಳಸಿಕೊಳ್ಳಲಿಲ್ಲ. ಓದ್ರಿಲ್ಲಾ ಬಿಎ ಪಾಸು ಮಾಡ್ರಿಲ್ಲಾ ಎಂದು ವಾರಕ್ಕೊಮ್ಮೆ ಭಾನುವಾರದ ಸಂತೆಯಲ್ಲಿ ನಾಟಿ ಕೋಳಿ ತಂದು ರುಚಿಕಟ್ಟಾಗಿ ಅಡುಗೆ ಮಾಡಿ ಬಾಯಿರುಚಿ ಬೆಳೆಸಿದರು. ಅದರ ಪ್ರತಿಫಲ ಈಗ ಉಣ್ಣುತ್ತಿದ್ದೇನೆ. ಆಗೆಲ್ಲಾ ಬಾಲ್ಯದಲ್ಲಿ ಮುದ್ದೆ ಉಣ್ಣದೆ ಬರೀ ಅನ್ನ ತಿಂದ ದೇಹ ಇಂದು ಮುದ್ದೆಯನ್ನು ಅನಿವಾರ್ಯವಾಗಿ ನುಂಗಬೇಕಾಗಿದೆ. ಬಿಕಾಸ್ ಶುಗರ್ 



ಒಲೆ ಮುಂದೆ ಕೂತು ಬೆಂಕಿಯ ನೋಡುತ್ತಾ

ಬೂದಿ ಮುಚ್ಚಿದ ಕೆಂಡವಿದು ಮುಪ್ಪು

ದಿನಗಳು ಬೂದಿ ಇದ್ದ ಹಾಗೆ ಕಾಲ ಕೆಂಡವಿದ್ದ ಹಾಗೆ

ದಿನಗಳು ಬೂದಿಯಂತಾಗಿ ಕಾಲ ಕೆಂಡದಂತೆ ಮಿಂಚುತ್ತಿದೆಯೆಲ್ಲಾ

ಎಂದ ಮುದುಕ ಮತ್ತೆ ಮತ್ತೆ ಮುಪ್ಪ ತಡಕ ತೊಡಗಿದ ಬೆದಕಿ ಕೆದಕಿ. 



ಒಟ್ಟಾರೆ ಸಂಕಲನದೊಳಗಿನ 85 ಕವನಗಳನ್ನು ಬೆದಕಿ ಕೆದಕಿ ನೋಡಲು ಹೋಗುತ್ತಿಲ್ಲ. ಕವಿಯಾಗಲು ಹೊರಟು ತಮ್ಮ ಸುತ್ತಣ ಬದುಕನ್ನು ಕಾವ್ಯದಲ್ಲಿ ಕಟ್ಟಿಕೊಡುವಲ್ಲಿ ಕವಿ ಯಶಸ್ವಿಯಾಗಿದ್ದಾರೆ. ಇಲ್ಲಿನ ಎಲ್ಲಾ ಕವಿತೆಗಳು ಉತ್ತಮವೆಂದು ಸಾರಸಗಟಾಗಿ ಹೇಳುವಂತಿಲ್ಲ. ವಾಚ್ಯರ್ತವಾಗಿ ಲಂಬಿಸಿಕೊಂಡು ಹೋಗುವುದಕ್ಕಿಂತ ಸೂಚ್ಯರ್ತವಾಗಿ ಪದಗಳನ್ನು ಸಾಣೆ ಹಿಡಿಯಬಹುದಿತ್ತು. ಇಲ್ಲಿ ಉತ್ತಮ ಕವಿತೆಗಳು ಸಾಕಷ್ಟಿವೆ ಹುಡುಕಬೇಕಷ್ಟೇ. ಕವನದ ಎಲ್ಲಾ ಸಾಲುಗಳು ಉತ್ಕøಷ್ಟವಾಗಲು ಕಷ್ಟ. ಮಧ್ಯೆ ಒಂದೆರಡು ಸಾಲು ಬದುಕನ್ನು ಧ್ವನಿಸಿದರೆ ಸಾಕು ಕವಿತೆ ಸಾರ್ಥಕ್ಯ ಪಡೆಯುತ್ತದೆ. 



ನಮ್ಮ ಬದುಕಿಗೆ ನಾವೇ ಜೋಗಿಯ ಜೋಳಿಗೆ

ನಮ್ಮ ಬಾಳ್ವೆಗೆ ನಾವೇ ಯೋಗಿಯ ಹೋಳಿಗೆ



- ಗೊರೂರು ಅನಂತರಾಜು, ಹಾಸನ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 

 


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top