ಕೆ.ಆರ್.ಪೇಟೆ: ನಾವು ವಾಸಿಸುವ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಚು ಕೊಳ್ಳುವುದರಿಂದ ಆರೋಗ್ಯವಂತ ಸಮಾಜವನ್ನು ನಿರ್ಮಿಸಬಹುದು ಎಂದು ಅಗ್ರಹಾರಬಾಚಹಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ಹರ್ಷವರ್ಧನ್ ಹೇಳಿದರು.
ಅವರು ತಾಲ್ಲೂಕಿನ ಅಗ್ರಹಾರಬಾಚಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮದ ಅಮೃತೇಶ್ವರ ದೇವಾಲಯ ಹಾಗೂ ಬೋರೇದೇವರ ದೇವಾಲಯದಲ್ಲಿ, ಲಕ್ಷ್ಮೀದೇವಿ ದೇವಾಲಯದ ಬಳಿಯ ಅರಳೀಕಟ್ಟೆ ಸ್ವಚ್ಚತಾ ಕಾರ್ಯಕ್ರಮಕ್ಕೆ ಸ್ವತಃ ಕುಡುಗೋಲು ಹಿಡಿದು ಗಿಡಗಂಟಿಗಳನ್ನು ಕತ್ತರಿಸುವ ಮೂಲಕ ಚಾಲನೆ ನೀಡಿ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸಿ ಮಾತನಾಡಿದರು.
ಗ್ರಾಮ ಸ್ವಚ್ಚತೆ, ಹಳ್ಳಿಗಳ ಅಭಿವೃದ್ದಿ, ಗ್ರಾಮೀಣ ಜನರ ಬದುಕು ಹಸನು ಮಾಡಬೇಕು ಎಂಬುದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಆಶಯವಾಗಿತ್ತು. ಹಾಗಾಗಿ ಅವರ ಜಯಂತಿಯನ್ನು ಶ್ರಮಧಾನದ ಮೂಲಕ ಸ್ವಚ್ಚತೆ ಮಾಡುವ ಮೂಲಕ ಆಚರಣೆ ಮಾಡಿ ಮಹಾತ್ಮನ ಆಶಯವನ್ನು ಈಡೇರಿಸಲು ನಾವೆಲ್ಲರೂ ಪ್ರತಿಜ್ಞೆ ಮಾಡಬೇಕು.
ಪ್ರತಿಯೊಬ್ಬರು ಮೊದಲು ತಮ್ಮ ಮನೆಯ ಸುತ್ತಮುತ್ತಲಿನಲ್ಲಿ ಸಚ್ಚತೆ ಕಾಪಾಡಿಕೊಳ್ಳಬೇಕು. ಶೌಚಾಲಯವನ್ನು ಕಡ್ಡಾಯವಾಗಿ ಬಳಕೆ ಮಾಡಬೇಕು. ನಮ್ಮ ಮನೆ ಸುತ್ತಮುತ್ತಲಿನ ಪರಿಸರ ಸ್ವಚ್ಚತೆ ಇದ್ದರೆ ಆರೋಗ್ಯದ ಸಮಸ್ಯೆಗಳಿಂದ ದೂರವಿರಬಹುದು. ಜೊತೆಗೆ ಶುದ್ದ ಕುಡಿಯುವ ನೀರು ಸೇವನೆ ಮಾಡಬೇಕು. ನೀರನ್ನು ಹಿತಮಿತವಾಗಿ ಬಳಕೆ ಮಾಡಬೇಕು ಎಂದು ಪಿಡಿಓ ಹರ್ಷವರ್ಧನ್ ಮನವಿ ಮಾಡಿದರು.
ಗ್ರಾಮ ಪಂಚಾಯಿತಿ ಸದಸ್ಯ ಆರ್.ಶ್ರೀನಿವಾಸ್ ಮಾತನಾಡಿ ಸ್ವಚ್ಛತೆ ಇರುವ ಕಡೆ ದೇವರು ನೆಲೆಸಿರುತ್ತಾನೆ ಆದ್ದರಿಂದ ಗ್ರಾಮದ ಶುಚಿತ್ವ ಕಾರ್ಯವನ್ನು ಪ್ರತಿ ದಿನ ಮಾಡಬೇಕು. ಊರಿನ ಕೆರೆ, ಭಾವಿ, ಬೀದಿ, ಚರಂಡಿ, ಶಾಲೆ, ದೇವಸ್ಥಾನ, ಅಂಗನವಾಡಿ, ಹಾಲಿನ ಡೇರಿ ಸುತ್ತಮುತ್ತಲಿನಲ್ಲಿ ಸ್ವಚ್ಚತೆ ಇರುವಂತೆ ನೋಡಿಕೊಳ್ಳಬೇಕು ಎಂದರು. ಇದಕ್ಕೆ ಗ್ರಾಮದ ಯುವಕರು, ಮಹಿಳಾ ಸಂಘಗಳ ಸದಸ್ಯರು ಸಹಕಾರ ನೀಡಿ ಶ್ರಮಧಾನದಲ್ಲಿ ಭಾಗವಹಿಸಿ ಆರೋಗ್ಯವಂತ ಪರಿಸರ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಶ್ರೀನಿವಾಸ್ ತಿಳಿಸಿದರು.
ಸ್ವಚ್ಚತಾ ಕಾರ್ಯಕ್ರಮದಲ್ಲಿ ಗ್ರಾಮದ ಯಜಮಾನ್ ಲಾಳಿ ಬೋರೇಗೌಡ, ಗ್ರಾಮ ಪಂಚಾಯಿತಿ ಸದಸ್ಯರಾದ ಚಿಲ್ಲದಹಳ್ಳಿ. ಆರ್.ಶ್ರೀನಿವಾಸ್, ಡಿ.ಇ.ಓ ತ್ರಿವೇಣಿ, ಗ್ರಂಥಪಾಲಕಿ ಸೌಮ್ಯ, ಗ್ರಾಮ ಪಂಚಾಯಿತಿ ನೌಕರರಾದ ಕಾಳೇಗೌಡ, ರಮೇಶ್, ಲಿಂಗರಾಜು, ಎ.ಆರ್.ಕುಮಾರ್, ಪ್ರದೀಪ್, ಶಿವಲಿಂಗೇಗೌಡ, ವಾಸು, ರವಿಕುಮಾರ್, ಸಿ.ಎನ್.ಶ್ರೀನಿವಾಸ್, ನಾಗರಾಜು, ಮಂಜೇಗೌಡ, ಅಂಗನವಾಡಿ ಕಾರ್ಯಕರ್ತರಾದ ಎ.ಎನ್.ವಲ್ಲೀದೇವಿ, ಧನಲಕ್ಷ್ಮೀ, ಗೀತಾ, ಗೌರಮ್ಮ, ಕಎನ್.ಆರ್.ಎಲ್.ಎಂ ಕಾರ್ಯಕರ್ತರಾದ ಶಶಿಕಲಾ, ರೇಣುಕಾ, ನೇತ್ರಾವತಿ ಸೇರಿದಂತೆ ಗ್ರಾಮಸ್ಥರು ಹಾಗೂ ಮಹಿಳಾ ಸಂಘಗಳ ಸದಸ್ಯರು ದೇವಾಲಯ ಆವರಣದ ಸ್ವಚ್ಚತೆಗೆ ಕೈಜೋಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ