ಸಕಲ ಸಿದ್ಧತೆಗಳೊಂದಿಗೆ ಸಜ್ಜಾದ ಮೂಡುಬಿದಿರೆಯ ವಿದ್ಯಾಗಿರಿ ಆವರಣ
ವಿದ್ಯಾಗಿರಿ: ಹದಿಮೂರು ಸಾವಿರದ ಆರು ನೂರಕ್ಕೂ ಹೆಚ್ಚಿನ ಉದ್ಯೋಗಾವಕಾಶ, 203 ಕ್ಕೂ ಹೆಚ್ಚು ಪ್ರಸಿದ್ಧ ಬಹುರಾಷ್ಟ್ರೀಯ ಹಾಗೂ ಸ್ಥಳೀಯ ಸೇರಿದಂತೆ ವಿವಿಧ ವಲಯಗಳ ಕಂಪೆನಿಗಳ ಸಮಾಗಮದ ಬೃಹತ್ ಉದ್ಯೋಗ ಮೇಳವಾದ ‘ಆಳ್ವಾಸ್ ಪ್ರಗತಿ -2023’ 13ನೇ ಆವೃತಿಗೆ ವಿದ್ಯಾಗಿರಿಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಸಜ್ಜಾಗಿದೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು 2023ರ ಅಕ್ಟೋಬರ್ 6 ಮತ್ತು 7ರಂದು ಮೂಡುಬಿದಿರೆಯ ಆಳ್ವಾಸ್‍ವಿದ್ಯಾಗಿರಿ ಆವರಣದಲ್ಲಿ ‘ಆಳ್ವಾಸ್ ಪ್ರಗತಿ-2023’ ಬೃಹತ್ ಉದ್ಯೋಗ ಮೇಳವನ್ನು ಹಮ್ಮಿಕೊಂಡಿದೆ.
ಆಳ್ವಾಸ್ ಪದವಿಪೂರ್ವ ಕಾಲೇಜಿನ ಆವರಣ ಹಾಗೂ ಗ್ರಂಥಾಲಯ ಬ್ಲಾಕ್‍ನಲ್ಲಿ ಉದ್ಯೋಗ ಮೇಳದ ಸಂದರ್ಶನ, ಪರೀಕ್ಷೆ ಇತ್ಯಾದಿಗಳಿಗೆ ವ್ಯವಸ್ಥೆ ಮಾಡಲಿದ್ದು, ಉದ್ಘಾಟನೆಯು ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಅ.6ರಂದು ಬೆಳಿಗ್ಗೆ 9.30ಕ್ಕೆ ನಡೆಯಲಿದೆ.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸುವರು. ಮೂಲ್ಕಿ ಮೂಡುಬಿದಿರೆ ವಿಧಾನಸಭಾಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸುವರು. ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕ ಯು. ರಾಜೇಶ್ ನಾಯ್ಕ್, ಮಂಗಳೂರು ನಗರ ಉತ್ತರ ಕ್ಷೇತ್ರದ ಶಾಸಕ ಡಾ.ವೈ. ಭರತ್ ಶೆಟ್ಟಿ, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜಾ, ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್, ವಿಧಾನಪರಿಷತ್ ಸದಸ್ಯರಾದ ಎಸ್.ಎಲ್. ಭೋಜೇಗೌಡ ಹಾಗೂ ಕೆ. ಹರೀಶ್ ಕುಮಾರ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಯುಎಇ ಮೂಲದ ಬುರ್ಜಿಲ್ ಹೋಲ್ಡಿಂಗ್ಸ್‍ನ ಮಾನವ ಸಂಪನ್ಮೂಲದ ಸಮೂಹ ಮುಖ್ಯಸ್ಥ ಡಾ. ಸಂಜಯ್‍ಕುಮಾರ್, ಅಲೆಂಬಿಕ್ ಫಾರ್ಮಾಸ್ಯುಟಿಕಲ್ಸ್ ಮಾನವ ಸಂಪನ್ಮೂಲದ ಸಹ ಉಪಾಧ್ಯಕ್ಷ ಅರವಿಂದ ತ್ರಿಪಾಠಿ, ಫ್ಯಾಕ್ಟ್‍ಸೆಟ್ ಸಿಸ್ಟಮ್ ಇಂಡಿಯಾ ಪ್ರೈ. ಲಿ. ಹಾಗೂ ಭಾರತ ಮತ್ತು ಫಿಲಿಫೈನ್ಸ್ ಟಾಲೆಂಟ್ ಅಕ್ವಸಿಷನ್ ಉಪಾಧ್ಯಕ್ಷರಾದ ಅನುಪ್ಮ ರಂಜನ್ ವಿಶೇಷ ಅತಿಥಿಗಳಾಗಿ ಪಾಲ್ಗೊಳ್ಳುವರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡುವರು.
ವೈದ್ಯಕೀಯ, ಅರೆ ವೈದ್ಯಕೀಯ, ಎಂಜಿನಿಯರಿಂಗ್, ಕಲಾ, ವಾಣಿಜ್ಯ ಮತ್ತು ಆಡಳಿತ ನಿರ್ವಹಣೆ, ಮೂಲ ವಿಜ್ಞಾನ, ನರ್ಸಿಂಗ್, ಐಟಿಐ, ಡಿಪ್ಲೊಮಾ ಹಾಗೂ ಕೌಶಲ ಹೊಂದಿದ ಪಿಯುಸಿ ಮತ್ತು ಎಸ್‍ಎಸ್‍ಎಲ್‌ಸಿ ಅರ್ಹತೆ ಹೊಂದಿದವರು ಸೇರಿದಂತೆ ಎಲ್ಲ ಪದವಿ ಹಾಗೂ ಸ್ನಾತಕ ಪದವೀಧರರಿಗೆ ‘ಆಳ್ವಾಸ್ ಪ್ರಗತಿ -2023’ ಯು ಅತ್ಯುತ್ತಮ ಉದ್ಯೋಗಳ ಬೃಹತ್ ಅವಕಾಶವನ್ನು ಕಲ್ಪಿಸಿದೆ.
ಔದ್ಯೋಗಿಕ ಉನ್ನತೀಕರಣ ಕೇಂದ್ರವನ್ನು ಸ್ಥಾಪಿಸಲಾಗಿದ್ದು, 120 ಮಂದಿ ಕಾರ್ಯ ನಿರ್ವಹಿಸಲಿದ್ದಾರೆ. ಅವರಿಗೆ ಎಂಟು ದಿನಗಳ ಕಾಲ ಕಾರ್ಪೊರೇಟ್ ತರಬೇತಿ ನೀಡಲಾಗಿದೆ. 200 ಮಂದಿ ಸಿಬ್ಬಂದಿ ಸೇರಿದಂತೆ 700 ಮಂದಿ ಸ್ವಯಂ ಸೇವಕರಾಗಿ ಸಹಕರಿಸಲಿದ್ದಾರೆ.
ವಿದ್ಯಾರ್ಥಿಗಳ ಅರ್ಹತೆಗೆ ಅನುಗುಣವಾಗಿ ‘ಸಪ್ತವರ್ಣ’ ವಿನ್ಯಾಸ ಮಾಡಲಾಗಿದೆ. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಗೆ ‘ಕೆಂಪು’, ಐಟಿಐಗೆ ‘ಕಿತ್ತಳೆ', ಡಿಪ್ಲೊಮಾಗೆ ‘ಪಿಂಕ್’, ಪದವೀಧರರಿಗೆ ‘ಹಸಿರು’, ಎಂಜಿನಿಯರಿಂಗ್‍ಗೆ ‘ನೀಲಿ’, ನರ್ಸಿಂಗ್ ಮತ್ತು ಅರೆವೈದ್ಯಕೀಯಕ್ಕೆ ‘ಬಿಳಿ’, ಸ್ನಾತಕೋತ್ತರ ಪದವೀಧರರಿಗೆ ‘ಹಳದಿ’ ಬಣ್ಣವನ್ನು ನೀಡಲಾಗಿದೆ. ಈ ಬಣ್ಣದ ವ್ಯವಸ್ಥೆಯು ನಿರ್ದಿಷ್ಟ ಅರ್ಹತೆಯ ಹುದ್ದೆಗಳಿಗೆ ಆಯ್ಕೆ ಮಾಡಲು ಸಹಕಾರಿಯಾಗಲಿದೆ.
ಔದ್ಯೋಗಿಕ ವಲಯ ಆಧಾರದಲ್ಲಿ ಕೈಪಿಡಿಯನ್ನು ಮುದ್ರಿಸಲಾಗಿದ್ದು, ಈ ಪುಸ್ತಕದಲ್ಲಿ ಕಂಪೆನಿಯ ಹೆಸರು, ಹುದ್ದೆಯ ಹೆಸರು, ಖಾಲಿ ಇರುವ ಹುದ್ದೆಗಳು, ಅರ್ಹತೆ, ಕೋರ್ಸ್, ವೇತನದ ವಿವರ, ಅನುಭವ, ಉದ್ಯೋಗದ ಸ್ಥಳ ಹಾಗೂ ಸಂದರ್ಶನ ನಡೆಯುವ ಕೊಠಡಿಯ ಸಂಖ್ಯೆಯನ್ನು ನೀಡಲಾಗಿದೆ. ಈ ಕೈಪಿಡಿಯು ಆಕಾಂಕ್ಷಿಗಳಿಗೆ ನೆರವಾಗಲಿದೆ.
ಆವರಣದ ವಿವಿಧೆಡೆ ‘ಕ್ಯು-ಆರ್ ಕೋಡ್’ ಫಲಕಗಳನ್ನು ಹಾಕಲಾಗಿದ್ದು, ಸ್ಕ್ಯಾನ್ ಮಾಡಿದರೆ ವಿದ್ಯಾರ್ಹತೆಗೆ ಅನುಗುಣವಾಗಿ ಇರುವ ಕಂಪೆನಿ ಹಾಗೂ ಉದ್ಯೋಗಗಳ ಮಾಹಿತಿಯನ್ನು ತಕ್ಷಣವೇ ಪಡೆಯಬಹುದಾಗಿದೆ.
ನೋಂದಣಿ ಮಾಡಿಕೊಂಡ 8732 ಉದ್ಯೋಗಾಂಕ್ಷಿಗಳಿಗೆ ಎಸ್ಸೆಮ್ಮೆಸ್ ಮೂಲಕ ನೋಂದಣಿ ಸಂಖ್ಯೆಯನ್ನು ಕಳುಹಿಸಿಕೊಡಲಾಗಿದೆ.
ಸುರಕ್ಷತೆ ಹಾಗೂ ನಿರ್ವಹಣೆಗಾಗಿ ಕೇಂದ್ರೀಕೃತ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದ್ದು, ಪ್ರಗತಿ ನಡೆಯುವ ಆವರಣದ ಎಲ್ಲೆಡೆ ಸಿಸಿಟಿವಿ ಕ್ಯಾಮೆರಾ ಹಾಕಲಾಗಿದೆ. 320ಕ್ಕೂ ಅಧಿಕ ಕೊಠಡಿಗಳನ್ನು ನೀಡಲಾಗಿದೆ. ಮಾಹಿತಿಗಾಗಿ ಬೃಹತ್ ಎಲ್‍ಇಡಿ ಪರದೆ ಅಳವಡಿಸಲಾಗಿದೆ. ಸಂದರ್ಶನ ಹಾಗೂ ಪರೀಕ್ಷೆ ನಡೆಸುವ ವಿವಿಧ ಕಂಪೆನಿಗಳ 560ಕ್ಕೂ ಅಧಿಕ ಮಾನವ ಸಂಪನ್ಮೂಲ ಅಧಿಕಾರಿಗಳು ಪಾಲ್ಗೊಳ್ಳುತ್ತಿದ್ದು, ಪ್ರಯಾಣ ಹಾಗೂ ವಾಸ್ತವ್ಯದ ವ್ಯವಸ್ಥೆಯನ್ನು ಮಾಡಲಾಗಿದೆ.
ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳ ವಸತಿಗಾಗಿ 1500 ಕೊಠಡಿಗಳನ್ನು ಮೀಸಲು ಇರಿಸಲಾಗಿದೆ. ಮೂಡುಬಿದಿರೆ ಮಾತ್ರವಲ್ಲದೇ, ಪುತ್ತೂರು, ಬೆಳ್ತಂಗಡಿ ಮತ್ತು ಮಂಗಳೂರು ಶಾಸಕರು ‘ಪ್ರಗತಿ’ಗೆ ಪ್ರೋತ್ಸಾಹ ನೀಡಿದ್ದು, ಆಯಾ ಸ್ಥಳದಿಂದ ಬರಲು ವಿದ್ಯಾರ್ಥಿಗಳಿಗೆ ಆಳ್ವಾಸ್ ಸಂಸ್ಥೆಯು ಬಸ್‍ಗಳ ವ್ಯವಸ್ಥೆಯನ್ನು ಮಾಡಿದೆ. ಉಡುಪಿಗೂ ಬಸ್ ವ್ಯವಸ್ಥೆ ಮಾಡಲಾಗಿದೆ.
ದಕ್ಷಿಣ ಕನ್ನಡ ಹಾಗೂ ಸುತ್ತಲ ಜಿಲ್ಲೆಗಳ ವಿವಿಧ ಕೇಂದ್ರಗಳಲ್ಲಿ ಶಾಸಕರ ನೇತೃತ್ವದಲ್ಲಿ ಕಾಲೇಜು, ಐಟಿಐಗಳ ಪ್ರಾಂಶುಪಾಲರ ಸಭೆ ನಡೆಸಲಾಗಿದೆ.
‘ಆಳ್ವಾಸ್ ಪ್ರಗತಿ 2023’ರಲ್ಲಿ ಪಾಲ್ಗೊಳ್ಳಲು ಹಾಗೂ ಸಿದ್ಧತಾ ಪರಿಕರಗಳನ್ನು ಪಡೆದುಕೊಳ್ಳಲು ಆನ್‍ಲೈನ್ ನೋಂದಣಿಕಡ್ಡಾಯವಾಗಿದೆ. ಪ್ರವೇಶದ ದ್ವಾರದ ಸಮೀಪವೇ ವಿದ್ಯಾರ್ಥಿಗಳಿಗೆ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಉದ್ಯೋಗಾಕಾಂಕ್ಷಿಗಳು http://alvaspragati.com/CandidateRegistrationPage ನಲ್ಲಿ ಉಚಿತ ನೋಂದಣಿ ಮಾಡಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9008907716 / 9663190590 / 7975223865 / 9741440490 ಸಂಪರ್ಕಿಸಬಹುದು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ