
ಗೋಕರ್ಣ: ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀಮಹಾಸ್ವಾಮೀಜಿಯವರ ಸಂಘಟನಾ ಚಾತುರ್ಮಾಸ್ಯ ವ್ರತದ ಅಂಗವಾಗಿ ಈ ತಿಂಗಳ 9ರಂದು (ಶನಿವಾರ) ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಆವರಣದಲ್ಲಿ ಬೃಹತ್ ಯುವ ಸಮಾವೇಶ ಆಯೋಜಿಸಲಾಗಿದೆ.
ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸುವ ಎರಡು ಸಾವಿರಕ್ಕೂ ಅಧಿಕ ಯುವಕ- ಯುವತಿಯರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದು, ರಾಘವೇಶ್ವರ ಶ್ರೀಗಳ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದೆ. ಭಾರತದ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೊ)ದ ಯು.ಆರ್.ರಾವ್ ಬಾಹ್ಯಾಕಾಶ ಕೇಂದ್ರದ ಹಿರಿಯ ವಿಜ್ಞಾನಿ ಡಾ.ರಾಧಾಕೃಷ್ಣ ವಾಟೆಡ್ಕ "ಆಕಾಶದಲ್ಲಿ ಅವಕಾಶ" ಎಂಬ ವಿಷಯದ ಬಗ್ಗೆ ಯುವಜನತೆ ಜತೆ ಸಂವಾದ ನಡೆಸುವರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರ್ನಹಳ್ಳಿ ಅತಿಥಿಗಳಾಗಿ ಆಗಮಿಸುರು. ಹವ್ಯಕ ಮಹಾಮಂಡಲ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ಅಧ್ಯಕ್ಷತೆ ವಹಿಸುವರು.
ಚಂದ್ರಯಾನ ಹವ್ಯಕ ಗೀತೆಯನ್ನು ಪರಂಪರಾ ಗುರುಕುಲದ ವಿದ್ಯಾರ್ಥಿಗಳು ಪ್ರಸ್ತುತಪಡಿಸಲಿದ್ದು, ಇದಕ್ಕೆ ಹಿರಿಯ ಚಿತ್ರ ಕಲಾವಿದ ನೀರ್ನಳ್ಳಿ ಗಣಪತಿ ಮತ್ತು ಯುವ ಚಿತ್ರ ಕಲಾವಿದೆ ಶ್ರೀಲಕ್ಷ್ಮಿ ಕುಳೂರು ಚಿತ್ರದ ಅಭಿವ್ಯಕ್ತಿ ನೀಡುವ ವಿಶೇಷ ಜುಗಲ್‍ಬಂದಿ ನಡೆಯಲಿದೆ.
ಇದೇ ಸಂದರ್ಭದಲ್ಲಿ ಡಾ.ರಾಧಾಕೃಷ್ಣ ಅವರಿಗೆ ವಿಷ್ಣುಗುಪ್ತ ಸನ್ಮಾನ ನೀಡಿ ಗೌರಿಸಲಾಗುವುದು. ಹಿರಿಯ ಕಲಾವಿದ ನೀರ್ನಳ್ಳಿ ಗಣಪತಿಯವರಿಗೆ ಉಂಡೆಮನೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಯುವ ಸಾಧಕರನ್ನು ಹವ್ಯಕ ಯುವಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಸಮಾವೇಶದ ಅಂಗವಾಗಿ ಯುವಕ/ ಯುವತಿಯರಿಗಾಗಿ 'ಬೆಂಕಿ ರಹಿತ ಅಡುಗೆ ಸ್ಪರ್ಧೆ' ಹಮ್ಮಿಕೊಳ್ಳಲಾಗಿದೆ. 100ಕ್ಕೂ ಹೆಚ್ಚು ಮಂದಿ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವರು. ಯುವಚೇತನ ಸ್ಫುರಣೆಗಾಗಿ ವಿಶೇಷ ಶಕ್ತಿಧರ ಕುಮಾರ ಪೂಜೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಮಠದ ಪ್ರಕಟಣೆ ಹೇಳಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ