ತುಳುನಾಡಿನ ಕರಾವಳಿಯಲ್ಲಿ ಯಕ್ಷಗಾನವನ್ನು ಗಂಡು ಮೆಟ್ಟಿದ ಕಲೆ ಎಂದೇ ಪ್ರಸಿದ್ದಿಯನ್ನು ಪಡೆದಿದೆ. ಜಾತಿ, ಧರ್ಮ, ಹಿರಿಯ ಕಿರಿಯ ಎಂಬ ಭೇದವನ್ನು ಮರೆತು ಯಕ್ಷಗಾನವನ್ನು ಮಾಡುವವರ ಸಂಖ್ಯೆ ಅಪಾರ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಮಾತಿನಂತೆ ನೋಡಲು ಸಾಧಾರಣ ವ್ಯಕ್ತಿಯಂತೆ ಕಂಡರೂ ತನ್ನನ್ನು ತಾನು ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಪ್ರತಿಭೆ ಬಿ.ಸಿ ರೋಡಿನ ವೀಕ್ಷಿತ ಜಿ ಕುಲಾಲ್.
ಇವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿಸಿ ರೋಡಿನ ನಿವಾಸಿಯಾಗಿದ್ದು ಬಿ ಗಣೇಶ್ ಮತ್ತು ಪ್ರೇಮಲತಾ ದಂಪತಿಯ ಪುತ್ರಿ.
ಇವರು ತಮ್ಮ ಪ್ರಾರ್ಥಮಿಕ ಶಿಕ್ಷಣವನ್ನು ಇನ್ಫೆಂಟ್ ಜೀಸಸ್ ಹಿರಿಯ ಪ್ರಾರ್ಥಮಿಕ ಶಾಲೆ ಮೊಡಂಕಾಪು ಪ್ರೌಢಶಿಕ್ಷಣವನ್ನು ಹಾಗೂ ಪಿಯುಸಿ ವಿದ್ಯಾಭ್ಯಾಸವನ್ನು ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದಲ್ಲಿ ಪೂರೈಸಿದರು. ಈಗ ಪ್ರಸ್ತುತ ಯುನಿವರ್ಸಿಟಿ ಕಾಲೇಜ್ ಹಂಪನಕಟ್ಟೆಯಲ್ಲಿ ವಾಣಿಜ್ಯ ವಿಷಯದ ವಿದ್ಯಾರ್ಥಿನಿ.
ಬಾಲ್ಯದಿಂದಲೇ ನೃತ್ಯ, ನಟನೆಯಲ್ಲಿ ಆಸಕ್ತಿಯನ್ನು ಹೊಂದಿದ ಇವರು ಅನೇಕ ಕಾರ್ಯಕ್ರಮದಲ್ಲಿ ತನ್ನ ನೃತ್ಯ ಪ್ರದರ್ಶನ ಹಾಗೂ ಶಾಲೆಯಲ್ಲಿ ನಾಟಕಗಳನ್ನು ಮಾಡುತಿದ್ದರು. ಕಾಲಕ್ರಮೇಣ ಹೋದಂತೆ ಯಕ್ಷಗಾನದಲ್ಲಿ ಆಸಕ್ತಿ ಹೊಂದಿದ ಇವರು ತನ್ನ ಐದನೇ ತರಗತಿಯಲ್ಲಿ ಯಕ್ಷಗಾನ ತರಬೇತಿಗೆ ಸೇರಿಕೊಂಡರು. ಮೊದಲಿಗೆ ಯಕ್ಷಗಾನ ತರಬೇತಿಯನ್ನು ‘ಚಿಣ್ಣರ ಲೋಕ ಮೋಕೆದ ಕಲಾವಿದೆರ್ ಬಿ.ಸಿ ರೋಡಿ’ನ ಸೇವಾ ಟ್ರಸ್ಟ್ ಎಂಬ ಸಂಸ್ಥೆಯಲ್ಲಿ ಸೇರಿಕೊಂಡ ಇವರು ಅರುಣ್ ಕುಮಾರ್ ಧರ್ಮಸ್ಥಳ ಎಂಬ ಗುರುವಿನ ಜೊತೆ ಯಕ್ಷಗಾನವನ್ನು ಕಲಿತರು. ಈಗ ಮೊಡಂಕಾಪಿನಲ್ಲಿ ಸುನಿಲ್ ಪಲ್ಲಮಜಲ್ ಎಂಬ ಗುರುವಿನ ಜೊತೆ ಸೇರಿ ಯಕ್ಷಗಾನವನ್ನು ಕಲಿಯುತ್ತಿದ್ದಾರೆ.
ಇವರಿಗೆ ಯಕ್ಷಗಾನ ಕ್ಷೇತ್ರದಲ್ಲಿ ಅನೇಕ ಸನ್ಮಾನಗಳನ್ನು ಮುಡಿಗೇರಿಸಿಕೊಂಡಿದ್ದಾರೆ. 2015ರಲ್ಲಿ ಸುರತ್ಕಲ್ ಕುಲಾಲ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗಿದೆ. ಹಾಗೂ 2015ರಲ್ಲಿ ಜಾನಪದ ಕಲೋತ್ಸವ ಪ್ರಶಸ್ತಿ, 2017ರಲ್ಲಿ ಚಿಣ್ಣರ ಪ್ರಶಸ್ತಿ ಲಭಿಸಿದೆ. ಹೀಗೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಹುಮಾನಗಳನ್ನು ಕೂಡ ಪಡೆದಿದ್ದಾರೆ.
ಚಿಣ್ಣರ ಪ್ರಶಸ್ತಿಗೆ ಭಾಜನರಾದ ಇವರು ಇದು ನನ್ನ ಜೀವನದಲ್ಲಿ ಮರೆಯಲಾಗದ ಒಂದು ಅದ್ಭುತ ಕ್ಷಣ ಎಂದು ಹೇಳಿದ್ದಾರೆ. ಯಕ್ಷಗಾನ ಕ್ಷೇತ್ರದಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ ಕೀರ್ತಿ ಇವರದು. ಮಹಿಷಿ ಮರ್ದಿನಿ ಪ್ರಸಂಗದಲ್ಲಿ ಮಾಲಿನಿಯಾಗಿ, ಸುದರ್ಶನ ವಿಜಯ ಪ್ರಸಂಗದಲ್ಲಿ ಲಕ್ಷ್ಮಿಯಾಗಿ, ಲವಕುಶ ಪ್ರಸಂಗದಲ್ಲಿ ಸೀತೆಯಾಗಿ, ಜಾಂಬವತಿ ಕಲ್ಯಾಣ ಪ್ರಸಂಗದಲ್ಲಿ ಕೃಷ್ಣನಾಗಿ ಕೋಟಿ ಚೆನ್ನಯ್ಯ ಪ್ರಸಂಗದಲ್ಲಿ ಕಿನ್ನಿದಾರುವಾಗಿ, ಅಭಿಮನ್ಯು ಕಾಳಗ ಪ್ರಸಂಗದಲ್ಲಿ ಧರ್ಮರಾಯನಾಗಿ, ಅಭಿಮನ್ಯು ಕಾಳಗ ಪ್ರಸಂಗ ಸುಭದ್ರೆಯಾಗಿ, ಮಾಯ ಸೂರ್ಪನಕಿಯಲ್ಲಿ ಸ್ತ್ರೀವೇಷ, ಪಾಂಚಜನ್ಯ ಪ್ರಸಂಗದಲ್ಲಿ ಸದ್ಬೋಧಿನಿಯಾಗಿ ಅಭಿನಯಿಸಿದ್ದಾರೆ.
"ಯಕ್ಷಗಾನವು ನಮ್ಮ ತುಳುನಾಡಿನ ಸಂಸ್ಕೃತಿ. ಯಕ್ಷಗಾನವನ್ನು ಉಳಿಸಿ ಹಾಗೂ ಬೆಳೆಸಿಕೊಂಡು ಹೋಗಬೇಕು. ಉಳಿಸಿ ಬೆಳೆಸಲು ಕಲಾವಿದರೇ ಆಗಬೇಕೆಂದಿಲ್ಲ ಎಲ್ಲರೂ ಅದಕ್ಕೆ ಗೌರವವನ್ನು ನೀಡಬೇಕು" ಎಂದು ವೀಕ್ಷಿತ.ಜಿ ಕುಲಾಲ್ ಹೇಳಿದರು. ಇವರಿಗೆ ಯಕ್ಷಗಾನ ಕ್ಷೇತ್ರದಲ್ಲಿ ಇನ್ನಷ್ಟು ಅವಕಾಶ ದೊರಕಲಿ ಹಾಗೂ ಮೂಲೆ ಮೂಲೆಗಳಲ್ಲಿ ಗುರುತಿಸಿಕೊಳ್ಳಲಿ ಎಂಬುದು ನಮ್ಮ ಆಶಯ.
- ರಮ್ಯ ಎಂ ಶ್ರೀನಿವಾಸ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ