ವಿವೇಕಾನಂದ ಕಾಲೇಜಿನಲ್ಲಿ ಫಾರ್ಮಾಸ್ಯುಟಿಕಲ್ ಸೈನ್ಸ್ ಸಂಸ್ಥೆ ಉದ್ಘಾಟನೆ
ಪುತ್ತೂರು: ಸಾಂಸ್ಕೃತಿಕವಾಗಿ ಶ್ರೀಮಂತಿಕೆಯಿಂದ ಕೂಡಿದ ಪುತ್ತೂರಿನ ಈ ಪ್ರದೇಶದಲ್ಲಿ ವೈದ್ಯಕೀಯ ಶಿಕ್ಷಣವನ್ನು ಕೊಡುವ ಸಂಸ್ಥೆ ಪ್ರಾರಂಭಗೊಂಡಿರುವುದು ಒಳ್ಳೆಯ ವಿಚಾರವಾಗಿದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವುದು ಸರ್ಕಾರದ ಗುರಿಯಾಗಿದೆ. ಪ್ರಧಾನ ಮಂತ್ರಿಗಳ ನೇತೃತ್ವದಲ್ಲಿ ಶಿಕ್ಷಣದ ಎಲ್ಲಾ ಕ್ಷೇತ್ರಗಳಿಗೂ ಒತ್ತು ನೀಡಿ ಅವುಗಳ ಸಂಖ್ಯೆಯನ್ನು ಉನ್ನತೀಕರಿಸಿದ್ದಾರೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಅಮೋಘ ಸಾಧನೆಯನು ಮಾಡಿದೆ. ಎಲ್ಲರೂ ಮುಂದುವರಿದ ಡಿಜಿಟಲ್ ಯುಗದಲ್ಲಿ ಬದುಕುತ್ತಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಭಾರತವು ಇಂದು ಹೊರದೇಶಗಳಿಗೆ ರಫ್ತು ಮಾಡುವಷ್ಟು ಬೆಳೆದಿದೆ. ಕೋವಿಡ್ -19 ನ ಸಂದರ್ಭದಲ್ಲಿ ತಯಾರಿಸಿದ ಔಷಧಿಯನ್ನು ಬೇರೆ ಬೇರೆ ರಾಷ್ಟ್ರಗಳು ಖರೀದಿಸಿ ಭಾರತೀಯ ವೈದ್ಯಕೀಯ ಶಕ್ತಿಯನ್ನು ಜಗತ್ತು ತಿಳಿಯಿತು. ಗ್ರಾಮಗಳಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರವನ್ನು ಆರಂಭಿಸಿ ಪ್ರತಿಯೊಬ್ಬರಿಗೂ ತಮ್ಮ ಸೇವೆಯನ್ನು ನೀಡುವುದೇ ನಮ್ಮ ಉದ್ದೇಶವಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವೆ ಡಾ. ಭಾರತಿ ಪ್ರವೀಣ್ ಪವಾರ್ ಹೇಳಿದರು.
ಇವರು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ 80ನೇ ಸಂಸ್ಥೆಯಾದ ವಿವೇಕಾನಂದ ಇನ್ ಸ್ಟಿಟ್ಯೂಟ್ ಆಪ್ ಫಾರ್ಮಾಸ್ಯುಟಿಕಲ್ ಸೈನ್ಸಸ್ ಇದರ ಉದ್ಘಾಟನಾ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ
ಸಂಘದ ಅಧ್ಯಕ್ಷ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಅಧ್ಯಕ್ಷೀಯ ಮಾತುಗಳನ್ನಾಡಿ ಇಂದು ಇಡೀ ಜಗತ್ತು ಭಾರತದತ್ತ ನೋಡುತಿದೆ. ಭಾರತದಲ್ಲಿರುವ ಹಲವು ಉತ್ತಮ ಅಂಶಗಳನ್ನು ವಿವಿಧ ರಾಷ್ಟ್ರಗಳು ತನ್ನಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ನಮ್ಮ ದೇಶವು ಯಾರೂ ಯೋಚನೆ ಮಾಡದೇ ಇರುವುದನ್ನು ಯೋಚಿಸುತ್ತದೆ. ಭಾರತೀಯರು ಇಡೀ ಸಮಾಜದ ಜನರಿಗಾಗಿ ದುಡಿಯುವ ಮನಸ್ಥಿತಿಯನ್ನು ಹೊಂದಿದ್ದಾರೆ. ಔಷಧೀಯ ಕ್ಷೇತ್ರದಲ್ಲಿ ದಾಪುಗಾಲು ಇಡುವ ಪ್ರಯತ್ನ ಭಾರತ ಮಾಡಿದೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಈ ವಿದ್ಯಾಸಂಸ್ಥೆಯು ಉತ್ತಮ ವೈದ್ಯಕೀಯ ಶಿಕ್ಷಣವನ್ನು ನೀಡಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿವಿ ಸಿಂಡಿಕೇಟ್ ಸದಸ್ಯ ಡಾ. ರಾಮಚಂದ್ರ ಸೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಔಷಧ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಭಾರತ ತನ್ನ ಸಾಧನೆಯನ್ನು ಮೆರೆಯುತ್ತಿದೆ. ಭಾರತದ ಔಷಧಿಗಳು ಜಗತ್ತನ್ನೇ ಆಳುತ್ತಿದೆ. ಭಾರತ ಔಷಧಿ ವ್ಯವಸ್ಥೆಯಲ್ಲಿ ಮೂರನೇ ಸ್ಥಾನ ಮತ್ತು ಬೆಲೆಯಲ್ಲಿ ಐದನೇ ಸ್ಥಾನದಲ್ಲಿದೆ. ಕೈಗೆಟುಕುವ ಬೆಲೆಯಲ್ಲಿ ಔಷಧಿಯನ್ನು ತಯಾರಿಸುವ ಸಾಮಥ್ರ್ಯವನ್ನು ನಮ್ಮ ದೇಶವು ಹೊಂದಿದೆ. ಜಗತ್ತು ಭಾರತವನ್ನು ಗ್ಲೋಬಲ್ ಫಾರ್ಮಸಿ ಎಂದು ಗುರುತಿಸುತ್ತಿದೆ. ಔಷಧಿ ವಿಜ್ಞಾನಿಗಳ ತಪಸ್ಸಿನ ಫಲ. ಈ ಸಂಸ್ಥೆ ವಿಶ್ವ ಮಾನ್ಯತೆಯನ್ನು ಪಡೆಯಲಿ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಈ ಸಂಸ್ಥೆಯು ಸ್ವರ್ಗವಾಗಲಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಅತಿಥಿಗಳು ಭಾರತ ಮಾತೆ ಮತ್ತು ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ವೇದಿಕೆ ಆಗಮಿಸಿ, ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು .
ಈ ಸಂಸ್ಥೆಗೆ ಮೊದಲ ದಾಖಲಾತಿಗೊಂಡ ಇಬ್ಬರು ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಲಾಯಿತು.
ವೇದಿಕೆಯಲ್ಲಿ ನೂತನ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಗೋವಿಂದ ಪ್ರಕಾಶ್ ಸಾಯ, ಕಾಲೇಜಿನ ಪ್ರಾಂಶುಪಾಲ ಡಾ.ಗುರುರಾಜ ಎಂ.ಪಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ. ಯಂ ಕೃಷ್ಣ ಭಟ್ ಸ್ವಾಗತಿಸಿ, ನೂತನ ಕಾಲೇಜಿನ ಅಧ್ಯಕ್ಷ ಯಂ.ಗೋಪಿನಾಥ ಶೆಟ್ಟಿ ವಂದಿಸಿ, ಸ್ನಾತಕೋತ್ತರ ವಿಭಾಗದ ಡೀನ್ ಡಾ. ವಿಜಯ ಸರಸ್ವತಿ ಮತ್ತು ಸ್ನಾತಕೋತ್ತರ ವಿಭಾಗದ ರಸಾಯನಶಾಸ್ತ್ರ ಉಪನ್ಯಾಸಕಿ ಸ್ಮಿತಾ ನಿರ್ವಹಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ