ಪ್ರತಿಭೆ: ಪಟ್ ಪಟ್ ಪಟಾಕಿ ಪುತ್ತೂರಿನ ದೀಕ್ಷಾ.ಡಿ.ರೈ

Upayuktha
0





ವೇದಿಕೆ ಏರಿದ ಕೂಡಲೇ ಎಲ್ಲರೂ ನಟರಾಗಲು, ಕಲಾವಿದರಾಗಲು ಅಥವಾ ನೃತ್ಯಪಟುವಾಗಲು ಸಾಧ್ಯವಿಲ್ಲ. ಅದಕ್ಕಾಗಿ ಕಠಿಣ ಪರಿಶ್ರಮ ಬೇಕೇ ಬೇಕು. ಅದೇ ರೀತಿ ಕೈಯಲ್ಲಿ ಪೆನ್ಸಿಲ್, ಕುಂಚ ಹಿಡಿದೊಡನೆ ಎಲ್ಲರೂ ಕಲಾವಿದರಾಗಲು ಸಾಧ್ಯವಿಲ್ಲ. ಜೀವನದ ಏಳು ಬೀಳಿನ ಅನುಭವ, ಶ್ರಮ, ಪ್ರಯತ್ನ, ಶ್ರದ್ಧೆ, ತಾಳ್ಮೆ, ಏಕಾಗ್ರತೆಯಿಂದ ಮಾತ್ರ ವಿನೂತನ ಕಲೆ ಮತ್ತು ಕೆಲಗಾರರು ಹುಟ್ಟಲು ಸಾಧ್ಯ. ಇವೆಲ್ಲದರ ಜೊತೆಗೆ ಕಲೆಯ ಮೇಲಿರುವ ಆಸಕ್ತಿಯೂ ಮುಖ್ಯವಾಗುತ್ತದೆ. ಹೀಗೆ ಆಸಕ್ತಿಯಿಂದ ತಮ್ಮಲ್ಲಿದ್ದ ಹವ್ಯಾಸಗಳತ್ತ ಹೆಚ್ಚು ಒಲವು ಹರಿಸಿ ಕಲಾಶಾರದೆಯನ್ನು ಒಲಿಸಿಕೊಂಡ ಸಾಧಕರ ಪೈಕಿ ಪುತ್ತೂರಿನ ಮಾತಿನ ಮಲ್ಲಿ, ದೀಕ್ಷಾ.ಡಿ.ರೈ ಚಲನಚಿತ್ರ ನಟ ಪುನೀತ್ ರಾಜ್ ಕುಮಾರ್ ಅವರನ್ನೇ ಕನ್ನಡದ ಕೋಟ್ಯಾಧಿಪತಿ ಹಾಟ್ ಸೀಟಿನಲ್ಲಿ ಕೂರಿಸಿ ತುಂಟ ಪ್ರಶ್ನೆ ಕೇಳಿದ್ದಾಳೆ. 



ಈಕೆ ಶಶಿಕಲಾ ಡಿ ರೈ ಮತ್ತು ದಯಾನಂದ ಎಸ್ ರೈ ಇವರ ಪುತ್ರಿ. ಈಕೆ ಹುಟ್ಟಿದ್ದು, ಬೆಂಗಳೂರು ಆದರೂ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬನ್ನೂರು ಗ್ರಾಮದ ನೀರ್ಪಾಜೆಯಲ್ಲಿ ನೆಲೆಸಿದ್ದಾರೆ. ದೀಕ್ಷಾ ತನ್ನ ಎಲ್.ಕೆ.ಜಿ ಮತ್ತು ಯು.ಕೆ.ಜಿ  ವಿದ್ಯಾಭ್ಯಾಸವನ್ನು ಹೆಚ್.ಎಮ್.ಆರ್ ಪಬ್ಲಿಕ್ ಸ್ಕೂಲ್ ಬೆಂಗಳೂರು ಮತ್ತು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣದ 8ನೇ ತರಗತಿಯನ್ನು ಸುದಾನ ವಸತಿಯುತ ಶಾಲೆ ಪುತ್ತೂರು ಇಲ್ಲಿ ಓದುತ್ತಿದ್ದಾರೆ. ಬಾಲ ಕಲಾವಿದೆಯಾಗಿರುವ ದೀಕ್ಷಾ ನೃತ್ಯ, ಸಂಗೀತ, ನಟನೆ, ಈಜು, ಯೋಗದಲ್ಲಿ ಆಸಕ್ತಿ ಹೊಂದಿದ್ದು ಆ ಕ್ಷೇತ್ರದಲ್ಲಿ ಅಗಾಧ ಸಾಧನೆಯನ್ನು ಮಾಡಿದ್ದಾರೆ.



ಇವರ ತಂದೆ ಉದ್ಯಮಿಯಾಗಿದ್ದು ತಾಯಿ ಗೃಹಿಣಿಯಾಗಿದ್ದಾರೆ. ತಂದೆಯೂ ಒಬ್ಬ ಕಲಾವಿದನಾ ದ್ದರಿಂದ ಅವರ ಕಲಾಭಿರುಚಿ ಧಾರಾಳವಾಗಿ ಮಗಳಲ್ಲಿಯೂ ಕಾಣಿಸುತ್ತದೆ. ಇದನ್ನು ಅರಿತಿರುವ ತಂದೆ ತಾಯಿ ಇಬ್ಬರೂ ಮುದ್ದಿನ ಮಗಳ ಇಷ್ಟಗಳಂತೆ ಮಗಳನ್ನು ಪ್ರಬುದ್ಧ ಕಲಾವಿದೆಯಾಗಿ ರೂಪಿಸುತ್ತಿದ್ದಾರೆ. ಇವರಿಗೆ ಗುರುಗಳಾಗಿ ಶ್ರೀನಿ ಆಚಾರ್, ಸಂತೋಷ್ ಮಂಗಳೂರು, ಸುದರ್ಶನ್ ಬೆಂಗಳೂರು ಇವರುಗಳು ನೃತ್ಯವನ್ನು ಕಲಿಸಿದ್ದಾರೆ. ದೀಕ್ಷಾ ಸವಿತಾ ಮತ್ತು ಶಿವಾನಂದ ನಾಯಕ್ ಇವರ ಗರಡಿಯಲ್ಲಿ ಸಂಗೀತವನ್ನು ಕಲಿಯುತ್ತಿದ್ದಾರೆ.



ಈ ತುಂಟ ಮಾತಿನ ಪೋರಿ ಮಾಡಿದ ಸಾಧನೆ ಜನರು ಹೆಮ್ಮೆ ಪಡುವಂತದ್ದು. ದಾಯ್ಜಿ ವರ್ಲ್ಡ್ ಚಾನೆಲ್ ಮಂಗಳೂರು ಇದರ ಜೂನಿಯರ್ ಮಸ್ತಿ ಡಾನ್ಸ್ ಕಾಂಪಿಟೇಷನ್‌ನಲ್ಲಿ ‘ರನ್ನರ್ ಅಪ್’ ಪ್ರಶಸ್ತಿ, ಸ್ಟಾರ್ ಸುವರ್ಣ ಚಾನೆಲ್‌ನಲ್ಲಿ ಪ್ರಸಾರವಾದ ಡಾನ್ಸ್ ಡಾನ್ಸ್ ಜೂನಿಯರ್ ಸೀಸನ್ 2ರಲ್ಲಿ ‘ರನ್ನರ್ ಅಪ್’ ಪ್ರಶಸ್ತಿ, ಸ್ಟಾರ್ ಸುವರ್ಣ ಚಾನೆಲ್ ಇದರ ಭರ್ಜರಿ ಕಾಮೆಡಿ ಶೋನಲ್ಲಿ ಪ್ರಶಸ್ತಿ ಪತ್ರ. ಸುಳಿಯೊಳಗೆ ಆಲ್ಬಮ್ ವೀಡಿಯೋ ಸಾಂಗ್‌ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದು ಇದರಲ್ಲಿ ಬೆಸ್ಟ್ ಚೈಲ್ಡ್ ಆರ್ಟಿಸ್ಟ್ ಪ್ರಶಸ್ತಿಯನ್ನು ಪಡೆದಿದ್ದಾರೆ. ನಂತರ ದೃಶ್ಯ ಮೂವೀಸ್ ಬ್ಯಾನರಿನಡಿಯಲ್ಲಿ ತಯಾರಾದ ‘ಪೆನ್ಸಿಲ್ ಬಾಕ್ಸ್’ ಕನ್ನಡ ಚಲನಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.



ಇವರಿಗೆ ‘ನೃತ್ಯ ತಿಲಕ’ ಮತ್ತು ‘ತುಳುನಾಡ ಸಿರಿ ಪಿಂಗಾರ’ ಇವರಿಗೆ ಸಂದ ಬಿರುದುಗಳು. ‘ಪಟ್ ಪಟ್ ಪಟಾಕಿ’, ‘ಪುತ್ತೂರಿನ ಮುತ್ತು’, ‘ಮಾತಿನ ಮಲ್ಲಿ’, ‘ನವರಸ ನಾಯಕಿ’, ‘ಏರಿಯಲ್ ಕ್ವೀನ್’ ಇವಳಿಗೆ ಇರುವ ಇತರ ಹೆಸರುಗಳು. 



ದೀಕ್ಷಾ ಇದುವರೆಗೂ 500ಕ್ಕೂ ಅಧಿಕ ಸ್ಟೇಜ್ ಶೋಗಳನ್ನು ನೀಡಿ 200ಕ್ಕೂ ಹೆಚ್ಚು ಸನ್ಮಾನಗಳನ್ನು ಪಡೆದಿದ್ದಾಳೆ. ‘ಏರಿಯಲ್ ಡಾನ್ಸ್’, ಪುನೀತ್ ರಾಜ್ ಕುಮಾರ್ ಅವರಿಗೆ ಕನ್ನಡದ ಕೋಟ್ಯಾಧಿಪತಿ ಸೀಟಿನಲ್ಲಿ ಕೂರಿಸಿ ಕೇಳಿದ ತುಂಟ ಪ್ರಶ್ನೆಗಳು, ಯೋಗ ಗುರು ಬಾಬಾ ರಾಮ್ ದೇವ್ ಅವರಿಗೆ ಕಲಿಸಿದ ಕನ್ನಡ ಪಾಠ, ಸಿನಿಮಾ ರಂಗ ಖ್ಯಾತ ನಟ ನಟಿಯರಾದ ನೆನಪಿರಲಿ ಖ್ಯಾತಿಯ ಪ್ರೇಮ್, ರಾಧಿಕಾ ಕುಮಾರಸ್ವಾಮಿ, ಡಾನ್ಸ್ ಇಂಡಿಯಾ ಡಾನ್ಸ್ ಖ್ಯಾತಿಯ ಸಲ್ಮಾನ್, ಶ್ವೇತಾ ಚಂಗಪ್ಪ ಇವರೆಲ್ಲರಿಗೂ ಡಾನ್ಸ್ ಕಲಿಸಿದ ಕ್ಷಣವನ್ನು ಸದಾ ನೆನಪಿಸಿಕೊಳ್ಳುವ ಈ ಮಾತಿನ ಮಲ್ಲಿ ಭರ್ಜರಿ ಕಾಮೆಡಿಯಲ್ಲಿ ಖ್ಯಾತ ನಟ ದೊಡ್ಡಣ್ಣನರ ಮೊಮ್ಮಗಳು ಹಾಗೂ ಖ್ಯಾತ ನಿರ್ದೇಶಕ ಗುರುಪ್ರಸಾದ್ ಅವರಿಂದ ನೆನಪಿನ ಕಾಣಿಕೆಯಾಗಿ ಭಗವದ್ಗೀತೆಯ ಪುಸ್ತಕವನ್ನು ಪಡೆದಿದ್ದಾರೆ.



ಈಗ ಮುಂಬೈ ಹಿಂದಿ ಚಾನೆಲ್‌ಗಳಾದ ಝೀ ಟಿವಿ, ಕಲರ್ಸ್, ಸ್ಟಾರ್ ಪ್ಲಸ್ ಮುಂತಾದ ಚಾನೆಲ್‌ಗಳಲ್ಲಿ ನಟಿಸಲು ಕರೆಗಳು ಬಂದಿದ್ದು, ಕನ್ನಡ ಚಿತ್ರಗಳಲ್ಲಿ ನಟಿಸಲೂ ಬೇಡಿಕೆಗಳು ಬರುತ್ತಿವೆ. ಸ್ಟಾರ್ ಸುವರ್ಣ ಚಾನೆಲ್‌ನ ಡಾನ್ಸ್ ಡಾನ್ಸ್ ಜೂನಿಯರ್‌ನಲ್ಲಿ ಮೈನವಿರೇಳಿಸುವಂತೆ ಕುಣಿದು ಕರ್ನಾಟಕದ ಜನರ ಮನ ಗೆದ್ದ ಪುತ್ತೂರಿನ ಮುತ್ತು ಬಾಲ್ಯದಲ್ಲಿಯೇ ಕಲೆಯಲ್ಲಿ ಆಸಕ್ತಿ ಹೊಂದಿದ್ದಾಳೆ. ಇವಳಿಗೆ ನಟನೆ, ನೃತ್ಯ, ಯೋಗ, ಸಂಗೀತ ಇವೆಲ್ಲದರಲ್ಲಿ ಇನ್ನೂ ಹೆಚ್ಚಿನ ಅವಕಾಶಗಳು ಒಲಿದು ಬರಲಿ ಹಾಗೂ ವಿದ್ಯಾಭ್ಯಾಸ ದಲ್ಲಿಯೂ ಶಾರದೆಯ ಆಶೀರ್ವಾದ ಸದಾ ಇರಲಿ ಎಂದು ಹಾರೈಸೋಣ.


 - ಸಂತೋಷ್ ರಾವ್ ಪೆರ್ಮುಡ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top