ಮಾಮೂಲಿನಂತೆ ಸೈಕಲ್ ತುಳಿದುಕೊಂಡು ಕಾಲೇಜಿಗೆ ಹೊರಟೆ. ಮನೆ ಕೆಲಸ ಮುಗಿಸಿ ಹೊರಡುವುದು ಯಾವಾಗಲೂ ತಡವೇ. ಸೈಕಲ್ ಹತ್ತಿದ ತಕ್ಷಣ ಆ ಕಡೆ ಈ ಕಡೆ ನೋಡದೇ ವೇಗವಾಗಿ ಹೋಗುವುದು ರೂಢಿಯಾಗಿಬಿಟ್ಟಿದೆ. ಮನೆಯಿಂದ ಸ್ವಲ್ಪ ದೂರ ಹೋಗುತ್ತಿದ್ದಂತೆ ಕೆರೆ ಏರಿ ಇತ್ತು. ಅದರ ಮೇಲೆ ಹೋಗುವುದರಿಂದ ಕಾಲೇಜಿಗೆ ಹತ್ತು ನಿಮಿಷದ ದಾರಿ ಉಳಿಯುತ್ತಿತ್ತು. ಕೆರೆ ಏರಿ ಒಂದು ಕಿಲೋಮೀಟರ್ ಅಷ್ಟೇ ಉದ್ದವಿತ್ತು. ಅರೆರೇ...! ಏರಿಯ ತುದಿಭಾಗದ ಇಳಿಜಾರಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಬರುತ್ತಿರುವ ವ್ಯಕ್ತಿಗೆ ಗುದ್ದಿ ಬಿದ್ದುಬಿಟ್ಟೆ. ಇವೆಲ್ಲ ಕ್ಷಣದಲ್ಲಿ ನಡೆದುಹೋಯಿತು. ಗಡಿಬಿಡಿಯಲ್ಲಿ ಏನು ಮಾಡಲೂ ತಿಳಿಯದೆ ತಲೆ ಎತ್ತಿ ಮುಖ ನೋಡಿದೆ. ಅವನ ಮುಖ ನೋಡಿದ ನನಗೆ ಬಿದ್ದಿದ್ದು ನೆನಪಾಗುತ್ತಲೆಯಿಲ್ಲ. ಅವನನ್ನೇ ನೋಡುತ್ತಿದ್ದೇನೆ, ಇನ್ನೂ ನೋಡುತ್ತಿದ್ದೇನೆ...! ಅವನ ಕಣ್ಣುಗಳಲ್ಲಿ ನನ್ನ ಪ್ರತಿಬಿಂಬ ಕಾಣುತ್ತಿದೆ. ಕ್ಷಣಮಾತ್ರದಲ್ಲಿ ಅಷ್ಟು ಆಳಕ್ಕೆ ಹೋಗಿಬಿಟ್ಟೆ. ಮೈ ಮನಗಳು ಸೆಳೆಯುವಂತೆ ಸುಂದರ ಮುಖ ಅವನದು.
ನನಗೇನಾಗುತ್ತಿದೆ ಎಂದು ತಿಳಿಯಲಾರದ ಅನುಭವ ಅದು. ಇದೇ ಅಲ್ಲವೆ? ಇದೇ ಅಲ್ಲವೆ ಮೊದಲ ಪ್ರೇಮ. ನೆಲದ ಮೇಲೆ ಬಿದ್ದ ನನ್ನ ಎರಡೂ ಕೈಹಿಡಿದು ಮೇಲಕ್ಕೆತ್ತಿ ʼನಿಧಾನ ಹೋಗುʼ ಎಂದು ಮುಗುಳು ನಗೆಯ ಮುಖದೊಂದಿಗೆ ಹೋಗಿಬಿಟ್ಟ. ಅವನ ಸ್ಪರ್ಶ ನನ್ನ ನೋವನ್ನೆಲ್ಲ ಮರೆಸಿ, ಮಿಂಚೊಂದು ಎರಗಿ ಶುಭ ಹಾರೈಸಿದಂತಾಯಿತು. ಇಲ್ಲಿಯವರೆಗೆ ಈ ರೀತಿಯ ಅನುಭವ ನನಗಾಗಿರಲಿಲ್ಲ. ಆ ನಗುವಿನಲಿ ಎಂಥಾ ಶಕ್ತಿ. ದೂರದಲ್ಲಿ ಹೋಗುತ್ತಿದ್ದ ಅವನನ್ನು ಮರೆಯಾಗುವವರೆಗೂ ನೋಡುತ್ತ ನಿಂತಿದ್ದೆ.
ಅದೇ ಗುಂಗಿನಲ್ಲಿ ಕಾಲೇಜು ತಲುಪಿದೆ. ಮನಸ್ಸಿನಿಂದ ದೂರವಾಗದ ಮುಖ ಅವನದು, ಸ್ಪರ್ಶ ನೆನೆಯುತ್ತಾ ಗೆಳತಿಯೊಡನೆ ನಡೆದ ಆ ಘಟನೆಯನ್ನು ತಿಳಿಸಿದೆ. ಹೇಳುತ್ತಿದ್ದವಳಿಗೆ ಒಳಗಿನ ಮನಸ್ಸು ಮಾತಾಡುವುದು ಕೇಳುತ್ತಿತ್ತು. 'ಇದೇ ನಿನ್ನ ಮೊದಲ ಪ್ರೀತಿʼ, 'ಹದಿ ಹರೆಯದ ಪ್ರೀತಿʼ, 'ನೀನೆಂಥಾ ಅದೃಷ್ಟವಂತೆʼ. ಕಾಲೇಜಿನಲ್ಲಿ ಯಾರನ್ನು ನೋಡಿದರೂ ಅವನನ್ನೇ ಕಂಡಂತೆ ಆಗುತ್ತಿತ್ತು. ಮಧ್ಯಾಹ್ನದ ಊಟ ಯಾಕೋ ರುಚಿಸಲಿಲ್ಲ. ಹೇಗೋ ಕಾಲೇಜು ಮುಗಿಸಿ ಹೊರಟವಳಿಗೆ ಕೆರೆಯ ಏರಿಯಲ್ಲಿ ಅವನು ಕಂಡರೆ ಮಾತಾಡಿಸಿಬಿಡಬೇಕು ಅನ್ನಿಸಿತು. ಕೆರೆಯ ಏರಿಯ ಮೇಲೆ ನಾನು ನಡೆದು ಹೋಗುತ್ತಿದ್ದರೆ ಅವನ ಯಾವ ಸುಳಿವೂ ಸಿಗದೇ ಬೇಸರದಿಂದ ಮನೆ ಸೇರಿದೆ. ಇಡೀ ರಾತ್ರಿ ಶಿವರಾತ್ರಿಯಾಯಿತು.
ಬೆಳಗಿನ ಕೆಲಸ, ತಿಂಡಿ ಮುಗಿಸಿ ಕಾಲೇಜಿಗೆ ಹೊರಟ ನಾನು ಒಂದು ನಿರ್ಧಾರಕ್ಕೆ ಬಂದೆ. ಅವನು ಸಿಕ್ಕರೆ ನೆನ್ನೆಯ ಸಹಾಯಕ್ಕೆ ಥ್ಯಾಂಕ್ಸ್ ಹೇಳಿ ಐ ಲವ್ ಯು ಎಂದು ಹೇಳಿಯೇ ಬಿಡುತ್ತೇನೆ ಎಂದು ರೆಡಿಯಾಗಿ ಸೈಕಲ್ಲನ್ನು ಜೋರಾಗಿ ತುಳಿಯುತ್ತಾ ಕೆರೆ ಏರಿಗೆ ಬಂದಾಗ ದೂರದಲ್ಲಿ ಯಾರೋ ಬರುತ್ತಿರುವಂತೆ ಕಾಣಿಸಿತು. ಇನ್ನೂ ವೇಗವಾಗಿ ಸೈಕಲನ್ನು ತುಳಿಯುತ್ತಿದ್ದೇನೆ. ಅವನೇ, ನೆನ್ನೆ ಕಂಡವನೆ! ಓ ದೇವರೇ, ನೀನು ನನಗೆ ಸಹಾಯ ಮಾಡಲೇಬೇಕು, ಧೈರ್ಯವನ್ನು ಕೊಡು, ನನ್ನ ಪ್ರೇಮಿ ಬರುತ್ತಿದ್ದಾನೆ ಎಂದು ಮನದಲ್ಲಿಯೇ ಹೇಳಿಕೊಳ್ಳುತ್ತಾ ಅವನೆದುರಿಗೆ ಸೈಕಲ್ಲನ್ನು ನಿಲ್ಲಿಸಿದೆ. ಕೈ- ಕಾಲು ನಡುಗುತ್ತಿದೆ. ಏನು ಮಾಡುವುದೆಂದು ತಿಳಿಯುತ್ತಿಲ್ಲ. ಆದರೆ ಹಿಂಭಾಗದಲ್ಲಿ ಅವನ ಹೆಂಡತಿ ಮಗುವಿನೊಂದಿಗೆ ಹೆಜ್ಜೆ ಇಡುತ್ತಾ ಬರುತ್ತಿದ್ದಾಳೆ. ಇದನ್ನು ನೋಡುತ್ತಾ ನಾನು ಗರ ಬಡಿದವಳಂತೆ ನಿಂತೇಯಿದ್ದೆ. ತನ್ನ ಹೆಂಡತಿ - ಮಗುವಿನೊಂದಿಗೆ ಅವನು ಮಾತಾಡುತ್ತಾ ಸೈಕಲ್ಲನ್ನು ದಾಟಿ ಹೋಗಿಯೇಬಿಟ್ಟ...! ನಾನು ನಿಟ್ಟುಸಿರು ಬಿಡುತ್ತಾ ಅಲ್ಲಿಯೇ ಸೈಕಲ್ ಹಿಡಿದು ನಿಂತೇ....!
(ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಕೆ.ವಿ.ಸುಬ್ಬಣ್ಣ ರಂಗ ಸಮೂಹದ ಸಹಯೋಗದಲ್ಲಿ ನಡೆದ 'ಸಂಘಟನಾ ರಂಗಕಮ್ಮಟ' ಮೂರು ದಿನದ ಕಾರ್ಯಾಗಾರದ ಕಥಾ ಬರಹದ ತರಬೇತಿಯಿಂದ ಪ್ರೇರಣೆಗೊಂಡು ಬರೆದ ಕಥೆ)
- ಸಂಧ್ಯಾ ಎನ್.
ದ್ವಿತೀಯ ಬಿ ಎ ವಿದ್ಯಾರ್ಥಿನಿ.
ಸಹ್ಯಾದ್ರಿ ಕಲಾ ಕಾಲೇಜು. ಶಿವಮೊಗ್ಗ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ