ಉಜಿರೆ: "ಸೇವಾಭಾರತಿ ಇಂದು ಬೆನ್ನುಹುರಿ ಅಪಘಾತಕ್ಕೆ ಒಳಗಾದವರಲ್ಲಿ, ತಮಗೆ ಬಂದ ಆರೋಗ್ಯ ಸಮಸ್ಯೆಗಳನ್ನು ಎದುರಿಸಲಾಗದೆ, ಇಡೀ ಜಗತ್ತು ಬೇಡವಾಗಿ, ಆತ್ಮಹತ್ಯೆಗೆ ಪ್ರಯತ್ನ ಪಟ್ಟ ಎಷ್ಟೋ ಮಂದಿಗೆ 'ನೀವು ಸಮಾಜಕ್ಕೆ ಬೇಕು, ನೀವು ಕೂಡ ಬದುಕಬಲ್ಲಿರಿ' ಎಂದು ಅವರಿಗೆ ಬೆನ್ನೆಲುಬಾಗಿ ನಿಂತದ್ದು ಸೇವಾಭಾರತಿ ಸಂಸ್ಥೆಯಾಗಿದೆ. ವಿಶ್ವ ಬೆನ್ನುಹುರಿ ಅಪಘಾತ ದಿನಾಚರಣೆಯ ಅಂಗವಾಗಿ ನಮ್ಮ ಜಿಲ್ಲೆಯಲ್ಲಿಯೇ ಪ್ರಥಮ ರ‌್ಯಾಲಿ ಇದಾಗಿದೆ" ಎಂದು ಸೇವಾಧಾಮ ಸಂಸ್ಥೆಯ ಸಂಸ್ಥಾಪಕರು ಮತ್ತು ಸಂಸ್ಥೆಯ ಖಜಾಂಜಿಗಳಾದ ಕೆ.ವಿನಾಯಕ ರಾವ್ ಹೇಳಿದರು.
ಪ್ರತಿ ವರ್ಷ ಸೆ.5 ಅನ್ನು ವಿಶ್ವ ಬೆನ್ನುಹುರಿ ಅಪಘಾತ ದಿನಾಚರಣೆ ಎಂದು ಆಚರಿಸಲಾಗುತ್ತದೆ. ಬೆನ್ನುಹುರಿ ಅಪಘಾತದ ಕಾರಣ, ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವುದೇ ಈ ದಿನದ ಮುಖ್ಯ ಉದ್ದೇಶವಾಗಿದೆ. ಸೆ.5 ಬೆಳಗ್ಗೆ ಸುಮಾರು 11 ಗಂಟೆಗೆ ಸೇವಾ ಭಾರತಿ ಬೆಳ್ತಂಗಡಿ-ಸೇವಾಧಾಮ, ಇದರ ಆಶ್ರಯದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಸ್ವಾಯತ್ತ, ಉಜಿರೆಯ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಹಯೋಗದೊಂದಿಗೆ ವಿಶ್ವ ಬೆನ್ನು ಹುರಿ ಅಪಘಾತ ದಿನಾಚರಣೆ ಹಾಗೂ ಗಾಲಿ ಕುರ್ಚಿ ರ‌್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನ, ಉಜಿರೆಯ ಆಡಳಿತ ಮುಖ್ಯಸ್ಥರಾದ ಶರತ್ ಕೃಷ್ಣ ಪಡುವೆಟ್ನಾಯ, ಇವರ ಚಾಲನೆಯಲ್ಲಿ ಶುರುವಾದ ರ‌್ಯಾಲಿಯು ಎಸ್.ಡಿ. ಎಂ. ಸ್ನಾತಕೊತ್ತರ ಪದವಿ ಕಾಲೇಜಿನಿಂದ ಶುರುವಾಗಿ ಶ್ರೀಕೃಷ್ಣಾನುಗ್ರಹ ಸಭಾಭವನ, ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನ, ಉಜಿರೆಯನ್ನು ತಲುಪಿತು. ಮಧ್ಯ ಹಾದಿಯಲ್ಲಿ ಮಳೆರಾಯನ ಆರ್ಭಟ ಜೋರಾಗಿದ್ದರು. ಒಟ್ಟು 185 ಸ್ವಯಂಸೇವಕರು ಹಾಗೂ 20 ಮಂದಿ ದಿವ್ಯಾಂಗರ ಜೋಶ್, ಹುಮ್ಮಸ್ಸಿನ ಪಾಲ್ಗೊಳ್ಳುವಿಕೆಯಿಂದ ರ‌್ಯಾಲಿಯು ಯಶಸ್ವಿಯಾಗಿ ಮುಕ್ತಾಯವಾಯಿತು.
ಸಭಾಕಾರ್ಯಕ್ರಮದಲ್ಲಿ ಕೆ. ವಿನಾಯಕ ರಾವ್ ರವರು ಮಾತನಾಡಿ, "ಬೆನ್ನುಹುರಿ ಅಪಘಾತಕ್ಕೆ ಒಳಗಾದವರ ಸಂಖ್ಯೆ ನಮ್ಮ ಜಿಲ್ಲೆಯಲ್ಲಿಯೇ ಹೆಚ್ಚು ಇರುವುದು. ಅಪಘಾತಕ್ಕೊಳಗಾದ ದಿವ್ಯಾಂಗರು, ಅವರ ಬದುಕಿನ ಮೇಲೆ ಭರವಸೆಯನ್ನೇ ಕಳೆದುಕೊಂಡಾಗ, ಪುನಶ್ಚೇತನದಂತಹ ಕಾರ್ಯಕ್ರಮಗಳಿಂದ ಅವರಲ್ಲಿ ಆತ್ಮವಿಶ್ವಾಸ ಮೂಡಿಸಲಾಗುತ್ತಿದೆ. 15 ಸಾವಿರಕ್ಕೆ ಖರೀದಿಸಬೇಕಾದ ಗಾಲಿ ಕುರ್ಚಿಯನ್ನು ಕೇವಲ ಒಂದು ಸಾವಿರ ರೂಪಾಯಿಗೆ ನಮ್ಮ ಸಂಸ್ಥೆ ನೀಡುತ್ತಿದೆ. ಬೆನ್ನುಹುರಿ ಅಪಘಾತಕ್ಕೆ ಒಳಗಾದ ದಿವ್ಯಾಂಗರಿಗೆ ಸರ್ಕಾರ 1,400 ರೂಪಾಯಿ ಅನುದಾನವನ್ನು ನೀಡುತ್ತದೆ. ಆದರೆ ಅದು ನಾಮಕಾವ್ಯವಸ್ಥೆಗೆ ಮಾತ್ರ. 21ನೇ ಡಿಸೆಬಿಲಿಟಿಯಾಗಿ ಬೆನ್ನುಹುರಿ ಅಪಘಾತಕ್ಕೊಳಗಾದವರಿಗೆ ಸ್ಪೆಷಲ್ ಕ್ಯಾಟಗರಿ ನೀಡಬೇಕು. ನಾನು ಒಬ್ಬ ದಿವ್ಯಾಂಗನಾಗಿ 2012ರಲ್ಲಿ ಸೇವಾಧಾಮವನ್ನು ಶುರು ಮಾಡಿದೆ. ಇಂದು ಇದೇ ಸಂಸ್ಥೆಯು ದೊಡ್ಡ ಮರವಾಗಿ ಫಲ ನೀಡುತ್ತಿದೆ. ನಾವು ಯಾವ ಸಂಘ-ಸಂಸ್ಥೆಗಳಿಗಾಗಲಿ ಸಮಾಜಕ್ಕಾಗಲಿ ಹೊರೆಯಾಗಲು ಬಯಸುವುದಿಲ್ಲ. ನಮಗೆ ಅನುಕಂಪ ಬೇಡ, ಅವಕಾಶ ಕೊಡಿ"ಎಂದು ಹೇಳಿದರು.
ಬೆಳ್ತಂಗಡಿಯ ಗೌಡ ಯಾನೆ ಒಕ್ಕಲಿಗರ ಸೇವಾ ಸಂಘದ ಅಧ್ಯಕ್ಷರಾದ ಶ್ರೀ ಪಿ.ಕುಶಾಲಪ್ಪ ಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು, "ವಿನಾಯಕ ರವರ ಆತ್ಮವಿಶ್ವಾಸ ನಮಗೆಲ್ಲರಿಗೂ ಸ್ಪೂರ್ತಿದಾಯಕವಾಗಿದೆ. ದಿವ್ಯಾಂಗರು ಸಮಾಜದಲ್ಲಿ ಹೇಗೆ ಬದುಕಬೇಕು ಎಂದು ಹೇಳಿಕೊಟ್ಟಿದ್ದಾರೆ. ಈ ಆಧುನಿಕ ಕಾಲದಲ್ಲಿ ಜಗತ್ತು ಮುಂದುವರಿದಿದೆ, ಆದರೆ ಬೆನ್ನುಹುರಿ ಅಪಘಾತಕ್ಕೆ ಒಳಗಾದವರಿಗೆ ಇಲ್ಲಿಯವರೆಗೂ ಯಾವ ಪರಿಹಾರವನ್ನೂ ಕಂಡುಕೊಂಡಿಲ್ಲ.ಇದು ದುರದೃಷ್ಟವೇ ಸರಿ"ಎಂದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಎಸ್.ಡಿ.ಎಂ ಕಾಲೇಜು, ಉಜಿರೆಯ ಪ್ರಾಂಶುಪಾಲರಾದ ಡಾ.ಬಿ.ಎ ಕುಮಾರ್ ಹೆಗ್ಡೆ ಅವರ ಮಾತುನಾಡಿ, "ಮಾನವೀಯ ನೆಲೆಯಲ್ಲಿ ಬಹಳ ಮುಖ್ಯವಾದ ಕಾರ್ಯಕ್ರಮವಿದು. ತಮ್ಮ ಜೀವನವನ್ನೇ ಸಮಾಜಸೇವೆಗೆ ಮುಡಿಪಾಗಿಟ್ಟಿರುವ ಕೆ. ವಿನಾಯಕ ರವರು ಆತ್ಮವಿಶ್ವಾಸದ ಜ್ಯೋತಿಯಂತೆ ಬೆಳಗುತ್ತಿದ್ದಾರೆ" ಎಂದರು.
ಬೆನ್ನುಹುರಿ ಅಪಘಾತಕ್ಕೆ ಒಳಗಾದವರಿಗೆ ಗಾಲಿಕುರ್ಚಿಗಳನ್ನು ಹಸ್ತಾಂತರಿಸಲಾಯಿತು. ದಿವ್ಯಾಂಗರಿಗೆ ಅಗತ್ಯವಿರುವ ಸೆಲ್ಫ್ ಕೇರ್ ಮತ್ತು ಮೆಡಿಕಲ್ ಕಿಟ್ ಗಳನ್ನು ವಿತರಿಸಲಾಯಿತು.
ಶ್ರೀಮತಿ ಸ್ವರ್ಣ ಗೌರಿ, ಅಧ್ಯಕ್ಷರು, ಸೇವಾಭಾರತಿ, ಬೆಳ್ತಂಗಡಿ ರವರು ಅಧ್ಯಕ್ಷೀಯ ನುಡಿಗಳನ್ನಾಡಿ, "ವಿನಾಯಕ ರವರ ದೃಢ ಸಂಕಲ್ಪದಿಂದಾಗಿ, ಈ ದಿನ ಜಿಲ್ಲೆಯಲ್ಲಿ ಸುಮಾರು 160 ದಿವ್ಯಾಂಗರು ಪುನಶ್ಚೇತನಗೊಂಡು, ತಮ್ಮ ಜೀವನವನ್ನು ಸಂತಸದಿಂದ ನಡೆಸುತ್ತಿದ್ದಾರೆ. ಇಲ್ಲಿ ನೆರೆದಿರುವ ವಿದ್ಯಾರ್ಥಿಗಳಿಗೆ ಹೇಳುವುದಿದ್ದರೆ, ನಿಮಗೆ ಒದಗಿರುವ ಅವಕಾಶವನ್ನು ಬಳಸಿಕೊಳ್ಳಿ. ತಮ್ಮ ಜೀವನದಲ್ಲಿ ಒದಗಿದ ಸವಾಲುಗಳನ್ನು ಗೆದ್ದು ನಿಮ್ಮ ಮುಂದೆ ಕೂತಿರುವ ಸಾಧಕರೊಂದಿಗೆ ಸಮಾಲೋಚನೆ ನಡೆಸಿ, ಪ್ರೇರಣೆ ಪಡೆದುಕೊಳ್ಳಿ ಎಂದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು, ಉಜಿರೆಯ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿಗಳಾದ ಡಾ.ಮಹೇಶ್ ಕುಮಾರ್ ಶೆಟ್ಟಿ ಅವರು ಮಾತನಾಡಿ, "ಸೌತಡ್ಕದಲ್ಲಿ ಇಬ್ಬರು ವಿನಾಯಕರು. ಒಬ್ಬರು ಜಗತ್ತಿನ ಕಷ್ಟಕಾರ್ಪಣ್ಯಗಳನ್ನು ಪರಿಹರಿಸುತ್ತಿದ್ದರೆ, ಮತ್ತೊಬ್ಬರು ಬೆನ್ನುಹುರಿ ಅಪಘಾತಕ್ಕೊಳಗಾದವದವರಿಗೆ ಭರವಸೆಯ ಬದುಕನ್ನು ಕಟ್ಟಿಕೊಡುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶ ನೀಡಿದ್ದಕ್ಕೆ ಎನ್.ಎಸ್.ಎಸ್ ಗೆ ಸದಾ ಆಭಾರಿಯಾಗಿರುತ್ತೇನೆ"ಎಂದರು.
ಕಾರ್ಯಕ್ರಮದ ಕೊನೆಯಲ್ಲಿ ಸುಮಾರು 15 ನಿಮಿಷಗಳ ಕಾಲ ಮಾಹಿತಿ ಹಂಚಿಕೆ ಕಾರ್ಯಕ್ರಮ ನಡೆಯಿತು. ಬೆನ್ನುಹುರಿ ಅಪಘಾತ ಎಂದರೇನು? ಹೇಗೆ ಆಗುತ್ತದೆ? ಎಂಬ ವಿಚಾರಗಳ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು. ದಿವ್ಯಾಂಗರು ತಮ್ಮ ಜೀವನದ ಅನುಭವಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಕಾರ್ಯದರ್ಶಿ ರೋ|ವಿದ್ಯಾ ಕುಮಾರ್ ಕಾಂಚೋಡು, ಸೌತಡ್ಕ ಸೇವಾಧಾಮದ ಸಂಚಾಲಕ ಕೆ.ಪುರಂದರ ರಾವ್, ಬೆಳ್ತಂಗಡಿ ಸೇವಾ ಭಾರತಿಯ ಕಾರ್ಯದರ್ಶಿ ಬಾಲಕೃಷ್ಣ, ಮತ್ತು ಟ್ರಸ್ಟಿಗಳ ಸಲಹಾ ಮಂಡಳಿ, ವಿಭಾಗಗಳ ಸರ್ವಸದಸ್ಯರು, ಸಿಬ್ಬಂದಿ ವರ್ಗ, ಸಂಸ್ಥೆಯ ಪೋಷಕರು, ಶ್ರೀಮತಿ ದೀಪಾ ಆರ್.ಪಿ, ರಾ.ಸೇ.ಯೋಜನಾ ಘಟಕದ ಯೋಜನಾಧಿಕಾರಿಗಳು, ಎಸ್.ಡಿ.ಎಂ ಕಾಲೇಜು, ಉಜಿರೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರು ಉಪಸ್ಥಿತರಿದ್ದರು.
ಸ್ವಯಂಸೇವಕ ಸುದೇಶ್ ಸ್ವಾಗತಿಸಿದರು, ಕುಮಾರಿ ಪುಷ್ಪಲತಾ, ಸಿಬ್ಬಂದಿ, ಸೇವಾಭಾರತಿ ಇವರು ವಂದಿಸಿದರು ಮತ್ತು ಸ್ವಯಂಸೇವಕಿ ಕುಮಾರಿ ಸಿಂಚನಾ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ