ಮಂಗಳೂರು: ಮಂಗಳಾದೇವಿಯಲ್ಲಿರುವ ಶ್ರೀ ರಾಮಕೃಷ್ಣ ಮಿಷನ್ ವತಿಯಿಂದ ಸ್ವಚ್ಛ ಮಂಗಳೂರು ಅಭಿಯಾನದ ಎರಡನೇ ಹಂತವನ್ನು ಅಕ್ಟೋಬರ್ 1ರಂದು ಮಠದ ಪರಿಸರದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಇದರ ಭಾಗವಾಗಿ ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಪ್ಲಾಗಿಂಗ್ ಡ್ರೈವ್ (ಜಾಗಿಂಗ್ ಮಾಡುತ್ತಲೇ ಸ್ವಚ್ಛತಾ ಕಾರ್ಯ) ನಡೆಸಲಾಗುತ್ತಿದೆ.
ಸ್ವಚ್ಛಾಂಜಲಿ ಹೆಸರಿನ ಈ ಕಾರ್ಯಕ್ರಮಕ್ಕೆ ಎಂಆರ್‌ಪಿಎಲ್ ಸಹಯೋಗವಿದ್ದು, ಸ್ವಚ್ಛತಾ ಹೀ ಸೇವಾ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಘೋಷಣೆಯಂತೆ ಈ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ.
ಕೇಂದ್ರ ಸರಕಾರದ ವಿಶೇಷ ವಿನಂತಿಯ ಮೇರೆಗೆ ಸ್ವಚ್ಛ ಭಾರತ ಅಭಿಯಾನಕ್ಕೆ ಕೈ ಜೋಡಿಸಿ ಸ್ವಚ್ಛ ಮಂಗಳೂರು ಅಭಿಯಾನವನ್ನು ಮಂಗಳೂರಿನ ರಾಮಕೃಷ್ಣ ಮಿಷನ್ ಕೈಗೆತ್ತಿಕೊಂಡಿತು. 2015 ರಿಂದ 5 ವರ್ಷಗಳ ಕಾಲ ನಿರಂತರವಾಗಿ ಸ್ವಚ್ಛತಾ ಅಭಿಯಾನವನ್ನು ವಿನೂತನ ರೀತಿಯಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಸಲಾಯಿತು.
ಮುಂದಿನ ದಿನಗಳಲ್ಲಿ ಮಂಗಳೂರಿನ ಜನರ ಆಶಯದಂತೆ ಸ್ವಚ್ಛ ಮಂಗಳೂರು ಅಭಿಯಾನವನ್ನು ಮತ್ತೊಮ್ಮೆ ಆರಂಭಿಸಲು ನಾವು ನಿರ್ಧರಿಸಿದ್ದೇವೆ. ಈ ಹಂತದಲ್ಲಿ ಮನೆ- ಮನೆ ಜಾಗೃತಿಗೆ ಹೆಚ್ಚು ಒತ್ತು ನೀಡುವುದರೊಂದಿಗೆ, ಶಾಲಾ ಕಾಲೇಜುಗಳಲ್ಲಿ ಸ್ವಚ್ಛ ಮನಸ್ಸು ಕಾರ್ಯಕ್ರಮ, ತಿಂಗಳಿಗೊಂದು ಸ್ವಚ್ಛತಾ ಶ್ರಮದಾನ ಹಾಗೂ ನಗರವನ್ನು ಸುಂದರೀಕರಣಗೊಳಿಸಬೇಕು ಎಂಬುದು ನಮ್ಮ ಆಶಯವಾಗಿದೆ.
ಈ ಉದ್ದೇಶದೊಂದಿಗೆ ಪ್ರಧಾನ ಮಂತ್ರಿಗಳ ಕರೆಯಂತೆ ಅಕ್ಟೋಬರ್ 1ರಂದು "ಸ್ವಚ್ಛಾಂಜಲಿ"- ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮದಲ್ಲಿ ನಮ್ಮ ಎರಡನೇ ಹಂತದ ಸ್ವಚ್ಛ ಮಂಗಳೂರು ಅಭಿಯಾನ ಹಾಗೂ ಪ್ಲಾಗಿಂಗ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಸ್ವಚ್ಛ ಮಂಗಳೂರು ಅಭಿಯಾನದ ಉದ್ಘಾಟನಾ ಕಾರ್ಯಕ್ರಮವು ಮಂಗಳೂರು ರಾಮಕೃಷ್ಣ ಮಠದ ಪರಿಸರದಲ್ಲಿ ಅಕ್ಟೋಬರ್ 1ರಂದು ಬೆಳಗ್ಗೆ 7.30 ಕ್ಕೆ ಸರಿಯಾಗಿ ನಡೆಯಲಿದೆ. ಅಭಿಯಾನದ ಉದ್ಘಾಟನೆಯನ್ನು ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಎನ್. ವಿನಯ ಹೆಗ್ಡೆ ಅವರು ನೆರವೇರಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ವಹಿಸಲಿದ್ದಾರೆ. ಬೆಳಗ್ಗೆ 8.30ಕ್ಕೆ ಸರಿಯಾಗಿ ಬೃಹತ್ ಪ್ಲಾಗಿಂಗ್ ಅಭಿಯಾನ ನಡೆಯಲಿದ್ದು, ಈ ಅಭಿಯಾನವನ್ನು ಎಂ.ಆರ್.ಪಿ.ಎಲ್. ಸಂಸ್ಥೆಯ ಹೆಚ್.ಅರ್. ವಿಭಾಗದ ಪ್ರಧಾನ ವ್ಯವಸ್ಥಾಪಕರಾದ ಕೃಷ್ಣ ಹೆಗ್ಡೆ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಂಸದ ನಳಿನ್ ಕುಮಾರ್ ಕಟೀಲ್, ಗೌರವ ಅತಿಥಿಗಳಾಗಿ ಮನಪಾ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಮಂಗಳೂರು ದಕ್ಷಿಣದ ಶಾಸಕ ಡಿ. ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಡಾ. ಮಂಜುನಾಥ ಭಂಡಾರಿ ಭಾಗವಹಿಸಲಿದ್ದಾರೆ. ಭಾರತೀಯ ಸೇನೆಯ ಮಾಜಿ ಯೋಧ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಸ್ವಾಗತಿಸಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ಮನಪಾ ಪ್ರತಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ, ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಕೆನರಾ ಬ್ಯಾಂಕ್ ಜನರಲ್ ಮ್ಯಾನೇಜರ್ ಸುಧಾಕರ್ ಕೊಟ್ಟಾರಿ ಪಾಲ್ಗೊಳ್ಳಲಿದ್ದಾರೆ.
ಪ್ಲಾಗಿಂಗ್ ಎಂಬ ವಿನೂತನ ಪ್ರಯೋಗವು ಮಂಗಳೂರಿನಲ್ಲಿ ಮೊತ್ತ ಮೊದಲ ಬಾರಿಗೆ ನಡೆಯುತ್ತಿದ್ದು, ಜಾಗಿಂಗ್ ನಡೆಸುತ್ತಾ ಸ್ವಚ್ಛತಾ ಅಭಿಯಾನ ನಡೆಸುವುದು ಇದರಲ್ಲಿ ಒಳಗೊಂಡಿದೆ. ಸುಮಾರು 500ಕ್ಕೂ ಹೆಚ್ಚು ಸ್ವಯಂಸೇವಕರು ಈ ಶ್ರಮದಾನದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಈ ಕಾರ್ಯಕ್ರಮಕ್ಕೆ ಎಲ್ಲಾ ಸಾರ್ವಜನಿಕರನ್ನು ಆದರಪೂರ್ವಕವಾಗಿ ಆಮಂತ್ರಿಸುವುದಾಗಿ ರಾಮಕೃಷ್ಣ ಮಿಷನ್ ಪ್ರಕಟಣೆ ತಿಳಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


