ಆ ಮಗುವಿನ ತಾಯಿ ಸತ್ತು ಹೋಗಿದ್ದಳು. ಆಕೆಯ ಹೆಣದ ಮುಂದೆ ಕುಳಿತ ಆ ಮನುಷ್ಯ ಆಕೆಯ ಮಗಳನ್ನು ಮಾರಿ ತನ್ನಿಂದ ಆಕೆ ಪಡೆದುಕೊಂಡಿರುವ ಸಾಲವನ್ನು ವಜಾ ಮಾಡಿಕೊಳ್ಳುವುದಾಗಿ ಹೇಳುತ್ತಿದ್ದ. ಅಲ್ಲಿಗೆ ಧಾವಿಸಿ ಬಂದ ಆ ತೃತೀಯ ಲಿಂಗಿ ವ್ಯಕ್ತಿಯು ಸತ್ತು ಹೋದ ಹೆಣ್ಣು ಮಗಳು ತನಗೆ 5 ಲಕ್ಷ ರೂಗಳನ್ನು ಕೊಡಬೇಕಾಗಿರುವುದರಿಂದ ಆಕೆಯ ಮಗಳ ಮೇಲೆ ತನಗೆ ಮೊದಲ ಹಕ್ಕು ಇದೆ ಎಂದು ಸುಳ್ಳು ಹೇಳಿದಳು. ಆತ ಆಕೆಯ ಮೇಲೆ ಬೈಗುಳಗಳ ಸುರಿಮಳೆಯನ್ನೇ ಸುರಿಸಿದ. ಆಕೆ ಏನೂ ಕಮ್ಮಿ ಇರಲಿಲ್ಲ ಆಕೆ ಕೂಡ ಆತನ ಮೇಲೆ ತನಗೆ ಗೊತ್ತಿರುವ ಎಲ್ಲಾ ಬೈಗುಳಗಳ ಸುರಿಮಳೆಯನ್ನೇ ಸುರಿಸಿ ಅಂತಿಮವಾಗಿ ಆ ಮಗುವನ್ನು ರಕ್ಷಿಸಿ ಮನೆಗೆ ಕರೆತಂದಳು. ಮನೆಗೇನೋ ಕರೆತಂದಳು ನಿಜ, ಆದರೆ ಆ ಮನೆ ಆ ಪುಟ್ಟ ಮಗುವಿನ ರಕ್ಷಣೆಗೆ ಸೂಕ್ತವಾಗಿರಲಿಲ್ಲ. ಕಾರಣವಿಷ್ಟೇ ಆಕೆಯನ್ನು ಹಾಗೆ ಕರೆತಂದ ವ್ಯಕ್ತಿ ಓರ್ವ ಪುರುಷನಿಂದ ಸ್ತ್ರೀಯಾಗಿ ಬದಲಾದ ತೃತೀಯ ಲಿಂಗಿಯಾಗಿದ್ದಳು. ಆಕೆಯ ಜೊತೆಗಿದ್ದವರು ಕೂಡ ಅಂತಹವರೇ. ಅಂತಹ ಪರಿಸರದಲ್ಲಿ ಯಾರ ಬಳಿಯಲ್ಲಿಯೂ ಮಗುವನ್ನು ಬಿಡಲು ತಯಾರಿಲ್ಲದ ಆಕೆ ಮಂಚದ ಮೇಲೆ ತನ್ನ ಪಕ್ಕದಲ್ಲಿಯೇ ಆ ಮಗುವನ್ನು ಮಲಗಿಸಿಕೊಂಡಳು. ಮಧ್ಯರಾತ್ರಿಯ ಒಂದು ಹೊತ್ತಿನಲ್ಲಿ ಆ ಮಗು ಆಕೆಯ ಹೊಟ್ಟೆಯ ಮೇಲೆ ಕೈ ಹಾಕಿ ನಿಶ್ಚಿಂತೆಯಿಂದ ನಿದ್ರಿಸಿತು. ಮಗುವಿನ ಕೈ ಆಕೆಯ ಹೊಟ್ಟೆಯ ಮೇಲೆ ಬಿದ್ದಾಗ ಆಕೆಯಲ್ಲಿನ ತಾಯ್ತನ ಜಾಗೃತಗೊಂಡು ಮನಸ್ಸು ಅನಿರ್ವಚನೀಯ ಆನಂದದಿಂದ ತುಂಬಿಹೋಯಿತು. ನವ ಮಾಸ ಗರ್ಭದಲ್ಲಿ ಹೊರದೆ ಹೆರದೆ ಆಕೆ ತಾಯಿ ಎನಿಸಿದಳು, ಮಮತೆಯ ಮಡಿಲ ತುಂಬಿಕೊಂಡಳು. ಮುಂದೆ ಆಕೆ ಇಂತಹ ಹಲವಾರು ಮಕ್ಕಳ ತಾಯಿಯಾದಳು. ತನ್ನದೇ ಜನರ ಏಳಿಗೆಗೆ ಕಾರಣಳಾದಳು, ಆಕೆಯೇ ಭಾರತೀಯ ಇತಿಹಾಸದಲ್ಲಿ ತೃತೀಯ ಲಿಂಗಿಗಳಿಗೆ ಸಂವಿಧಾನಾತ್ಮಕ ಹಕ್ಕನ್ನು ದೊರಕಿಸಿಕೊಟ್ಟ ಹೋರಾಟಗಾರ್ತಿ ಮಹಾರಾಷ್ಟ್ರದ ಶ್ರೀಗೌರಿ ಸಾವಂತ್.
ಶ್ರೀಗೌರಿ ಸಾವಂತ್ ಗೌರಿಯಾಗಿ ಬದಲಾಗುವ ಮುನ್ನ ಓರ್ವ ಪೊಲೀಸ್ ಅಧಿಕಾರಿಯ ಮಗ ಗಣೇಶನಾಗಿದ್ದ. ತಾಯಿ ಮತ್ತು ಅಕ್ಕನ ಪ್ರೀತಿಯ ಹೊಳೆಯಲ್ಲಿ ಮಿಂದೇಳುತ್ತಿದ್ದ. ಆದರೆ ಚಿಕ್ಕಂದಿನಲ್ಲಿಯೇ ಹೆಣ್ಣು ಮಕ್ಕಳ ರೀತಿಯಲ್ಲಿ ಉಡುಗೆ ತೊಡುಗೆ ಧರಿಸಿ ಒನಪುವಯ್ಯಾರ ಮಾಡುವ, ಅಡುಗೆ ಮಾಡುವ, ನಾಟ್ಯ ಮಾಡುವ ಆಸೆ ಆಶಯ ಗಣೇಶನಿಗೆ. ಇದನ್ನು ಆತನ ತಂದೆ ಸಹಿಸಲಿಲ್ಲ. ಏಳರ ಹರೆಯದಲ್ಲಿಯೇ ತಾಯಿಯನ್ನು ಕಳೆದುಕೊಂಡ ಗಣೇಶ. ಮುಂದೆ ಕೆಲವೇ ತಿಂಗಳಲ್ಲಿ ಆತನ ಅಕ್ಕನೂ ಕೂಡ ವಿವಾಹವಾಗಿ ಗಂಡನ ಮನೆ ಸೇರಿದಳು. ತಂದೆಯ ಹದ್ದುಬಸ್ತಿನಲ್ಲಿ ಗಣೇಶ ಬೆಳೆಯತೊಡಗಿದ. ಎಸ್‌ಎಸ್‌ಎಲ್‌ಸಿ ಮುಗಿಸಿದ ನಂತರ ಪಿಯುಸಿ ಸೇರಿದ ಗಣೇಶ ಒಂದೊಮ್ಮೆ ಮಾರುಕಟ್ಟೆಯಲ್ಲಿ ವಿಭಿನ್ನ ಭಂಗಿಯ ಜನರನ್ನು ಗುರುತಿಸಿ ತಾನು ಅವರಲ್ಲೊಬ್ಬ ಎಂಬ ಭಾವದಿಂದ ಅವರ ಜೊತೆ ಒಡನಾಡಬಯಸಿದ. ಆದರೆ ಆತನನ್ನು ಅವರು ಒಪ್ಪಿಕೊಳ್ಳಲಿಲ್ಲ.
ಒಂದು ಬಾರಿ ಮನೆಯಲ್ಲಿ ಗಣೇಶ ಆತನ ತಾಯಿಯ ಸೀರೆ ಉಟ್ಟು ನಲಿಯುತ್ತಿರುವಾಗ ತಂದೆಯ ಕೈಯಲ್ಲಿ ಸಿಕ್ಕಿ ಬಿದ್ದನು. ಗಾಬರಿಯಾದ ಆತನ ತಂದೆ ಆತನನ್ನು ಸೂಕ್ತ ವೈದ್ಯರ ಬಳಿ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದರು. ಆದರೆ ವೈದ್ಯರು ನೀಡಿದ ಯಾವುದೇ ಪುರುಷ ಹಾರ್ಮೋನುಗಳ ಮಾತ್ರೆಗಳನ್ನು ಗಣೇಶ ನುಂಗುತ್ತಿರಲಿಲ್ಲ. ದಿನೇ ದಿನ ಮನಸ್ಸಿನಲ್ಲಿ ಹೆಣ್ತನವನ್ನು ತುಂಬಿಕೊಳ್ಳತೊಡಗಿದ ಗಣೇಶ. ಕೊನೆಗೆ ಬೇಸತ್ತು ಹೋದ ತಂದೆ ಕೆಲವು ವರ್ಷಗಳ ಬಳಿಕ ಆತನನ್ನು ಮನೆಯಿಂದ ಹೊರಹಾಕಿದ.
ಹೀಗೆ ಮನೆಯಿಂದ ಹೊರಬಂದ ಗಣೇಶನನ್ನು ಸಮುದಾಯದವರು ಕೂಡ ಒಪ್ಪಿಕೊಳ್ಳದೇ ಹೀಯಾಳಿಸಿದಾಗ ಅನಿವಾರ್ಯವಾಗಿ ಗಣೇಶ ಲಿಂಗ ಪರಿವರ್ತನೆಗೊಳಗಾದನು. ಶಸ್ತ್ರಚಿಕಿತ್ಸೆಯ ನಂತರದ ಅತ್ಯಂತ ಯಾತನಾದಾಯಕ ದಿನಗಳನ್ನು ಕಳೆದ ಗಣೇಶನಿಗೆ ಗೌರಿಯಾಗಿ ಮರು ಹುಟ್ಟು ದೊರೆಯಿತು.
ಮುಂದೆ ಗೌರಿ ತನ್ನದೇ ಸಮುದಾಯದ ಜನರ ದನಿಯಾಗಿ ನಿಂತಳು. ಇದ್ದುದರಲ್ಲಿಯೇ ತುಸು ವಿದ್ಯಾವಂತೆಯಾದ ಗೌರಿಗೆ ತನ್ನ ಸಮುದಾಯದವರು ಹೊಟ್ಟೆಪಾಡಿಗಾಗಿ ಕೈಗೊಳ್ಳುತ್ತಿದ್ದ ವೇಶ್ಯಾವೃತ್ತಿಯಲ್ಲಿ ಅವರಿಗೆ ಎದುರಾಗುತ್ತಿದ್ದ ಖಾಯಿಲೆಗಳು, ಅಸುರಕ್ಷಿತ ಜೀವನಶೈಲಿ ಆತಂಕಕ್ಕೆ ಈಡು ಮಾಡುತ್ತಿದ್ದವು. ಯಾವುದೇ ರೀತಿಯ ಕೆಲಸ ಕಾರ್ಯಗಳನ್ನು ಕೊಡದ ಈ ಸಮಾಜದ ಜನರು ನಾಯಿ ನರಿಗಳಿಗಿಂತ ತಮ್ಮನ್ನು ನಿಕೃಷ್ಟವಾಗಿ ಕಾಣುವುದು ಆಕೆಯಲ್ಲಿ ಆಕ್ರೋಶವನ್ನುಂಟು ಮಾಡುತ್ತಿತ್ತು. ಆಸ್ಪತ್ರೆಗಳಲ್ಲಿಯೂ ಕೂಡ ತಮಗೆ ಪರೀಕ್ಷೆ ಮಾಡಲು ಮೀನ ಮೇಷ ಎಣಿಸುವ ವೈದ್ಯರು, ದಾದಿಯರು, ಯಾವ ನಂಬರಿನ ಕ್ಯಾಥೇಟರ್ ಹಾಕಬೇಕೆಂದು ಕೂಡ ಗೊತ್ತಿರದ ಪರಿಸ್ಥಿತಿ ಇತ್ತು. ಖಾಸಗಿ ಆಸ್ಪತ್ರೆಗಳಲ್ಲಿ ವೆಚ್ಚ ಭರಿಸಲಾಗದ, ಸರಕಾರಿ ಆಸ್ಪತ್ರೆಗಳಲ್ಲಿ ಅವಮಾನ ಭರಿಸಲಾಗದ ಅಸಹಾಯಕತೆ ಈ ಸಮುದಾಯದ ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿತ್ತು.
ಒಂದು ಬಾರಿ ಗೌರಿಯ ಜೊತೆಗಾತಿ ಮಂಗಳಮುಖಿ ಸ್ನೇಹಿತೆ ತನ್ನನ್ನು ಪ್ರೀತಿಸುತ್ತಿರುವ ಸಂಗಾತಿಯೊಂದಿಗೆ ವಿವಾಹವಾಗಿ ಹೊಸ ಜೀವನ ಸಾಗಿಸುವ ಕನಸು ಕಟ್ಟಿ ಹೋದಾಕೆ ಹೆಣವಾಗಿದ್ದಳು. ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿಯೂ ಸ್ಥಳವಿಲ್ಲದೆ ಕಸದ ಡಬ್ಬದ ಬಳಿ ಆಕೆಯ ಹೆಣವನ್ನು ಮಲಗಿಸಿದ್ದು ಕಂಡು ಆಕ್ರೋಶಗೊಂಡ ಗೌರಿ ಸಾವಂತ್ ತನ್ನೆಲ್ಲ ಸಮುದಾಯದವರನ್ನು ಕರೆದುಕೊಂಡು ಮೊತ್ತ ಮೊದಲ ಬಾರಿಗೆ ಹರತಾಳ ನಡೆಸಿದಳು. ಅದೆಷ್ಟೇ ಜೋರಾದ ಮಳೆ ಬಂದರೂ ಜಗ್ಗದೆ ಆಕೆಯ ಸಮುದಾಯದವರು ಮುಂಬೈಯ ಮೆಡಿಕಲ್ ಕಾಲೇಜಿನ ಮುಂದೆ ಗೌರಿಯ ನೇತೃತ್ವದಲ್ಲಿ ಅಹೋರಾತ್ರಿ ಧರಣಿ ಕುಳಿತರು.ಅನಿವಾರ್ಯವಾಗಿ ಮಾತುಕತೆಗೆ ಕುಳಿತ ಡೀನ ರವರಿಂದ ಒತ್ತಾಯ ಪೂರ್ವಕವಾಗಿ ಕ್ಷಮಾಪಣೆ ಪತ್ರವನ್ನು ಪಡೆದೇ ಧರಣಿಯನ್ನು ಅಂತ್ಯಗೊಳಿಸಿದ ಗೌರಿ ಸಾವಂತ್ ಮೊಟ್ಟಮೊದಲ ಬಾರಿಗೆ ತನ್ನ ಸಮುದಾಯದ ಜನರ ಪಾಲಿನ ನಾಯಕಿ ಎನಿಸಿದಳು. ತಾಲೀ ನಹೀ ಬಜಾವೂಂಗಿ.... ತಾಲಿ ಬಜವಾವೂಂಗಿ... ಅಂದರೆ ಚಪ್ಪಾಳೆ ಹೊಡೆಯುವುದಿಲ್ಲ ಚಪ್ಪಾಳೆ ಹೊಡೆಸಿಕೊಳ್ಳುತ್ತೇನೆ ಎಂದು ಘೋಷಿಸಿದಳು.
'ಸಖಿ' ಎಂಬ ತನ್ನದೇ ಸಮಾನ ಮನಸ್ಕರ ಸಂಸ್ಥೆಯನ್ನು ಸ್ಥಾಪಿಸಿದ ಗೌರಿ ಸಾವಂತ್ ತನ್ನ ಸಮುದಾಯದ ಜನರಿಗೆ ಆರೋಗ್ಯದ ಸುರಕ್ಷತೆಗೆ ತರಬೇತಿ ನೀಡಲಾರಂಭಿಸಿದಳು. ಅವರ ದೈಹಿಕ ಮತ್ತು ಮಾನಸಿಕ ಸುರಕ್ಷತೆಗೆ ಅವಶ್ಯಕವಾದ ವ್ಯವಸ್ಥೆಗಳನ್ನು ಕೈಗೊಂಡಳು. ಈ ಮಧ್ಯದಲ್ಲಿ ಅಲ್ಲಲ್ಲಿ ಬಿಸಾಡಿ ಹೋಗುತ್ತಿದ್ದ ಹಸುಗೂಸುಗಳನ್ನು ಆಕೆ ಸಂರಕ್ಷಿಸಿದಳು. ಆಕೆಯ ಅವಿರತ ಶ್ರಮ ಮತ್ತು ಸಾಧನೆಯನ್ನು ಗುರುತಿಸಿದ ವಿದೇಶಿ ಸಂಸ್ಥೆಯು ಆಕೆಯನ್ನು ಕಾರ್ಯಕ್ರಮವೊಂದಕ್ಕೆ ಕರೆಸಿಕೊಂಡಿತು. ಅಲ್ಲಿ ತನ್ನ ಸಮುದಾಯದ ಪರವಾಗಿ ಮಾತನಾಡಿದ ಗೌರಿ ಸಾವಂತ್ ಎಲ್ಲರ ಮನ್ನಣೆ ಗಳಿಸಿ ಭಾರತಕ್ಕೆ ಹಿಂದಿರುಗಿದಳು.
ಮುಂದೆ ಶಾಲೆಯೊಂದರಲ್ಲಿ ತಾನು ಸಾಕಿದ ಮಕ್ಕಳನ್ನು ಪ್ರವೇಶಾತಿಗೆ ದಾಖಲಿಸಲು ಹೋದಾಗ ಆಕೆಯ ಅರಿವಿಗೆ ಬಂದದ್ದು ಕಾನೂನಾತ್ಮಕವಾಗಿ ತನಗೆ ಮಕ್ಕಳನ್ನು ಪಾಲಿಸಲು ಸಾಧ್ಯವಿಲ್ಲ ಎಂಬುದು. ಅದರ ಜೊತೆಜೊತೆಗೆ ಸಂವಿಧಾನದಲ್ಲಿ ತಮಗೆ ಯಾವುದೇ ರೀತಿಯ ಸ್ಥಾನಮಾನ ಇಲ್ಲ ಎಂದು. ಇದನ್ನು ಪ್ರಶ್ನಿಸಿ ಆಕೆ ಸುಪ್ರೀಂ ಕೋರ್ಟ್ ನಲ್ಲಿ ತಮ್ಮಂತಹ ಸಾವಿರಾರು, ಲಕ್ಷಾಂತರ ಜನರಿಗೆ ಸಂವಿಧಾನಾತ್ಮಕ ಮನ್ನಣೆ ಕೊಡಬೇಕೆಂದು ಮನವಿ ಸಲ್ಲಿಸಿದಳು. ಭಾರತದ ಪ್ರಜೆಯಾದ ನಾನು ಎಂದು ಸಂವಿಧಾನದಲ್ಲಿ ಉಲ್ಲೇಖಿಸಿದೆಯೇ ಹೊರತು ಭಾರತೀಯ ಪುರುಷ, ಭಾರತೀಯ ಮಹಿಳೆ ಎಂದು ಎಲ್ಲೂ ಹೇಳಿಲ್ಲ, ಹಾಗಾದರೆ ತೃತೀಯ ಲಿಂಗಿಗಳಾದ ನಾವು ಕೂಡ ಭಾರತೀಯ ಪ್ರಜೆಗಳು ನಮಗೆ ಏಕೆ ಮಾನ್ಯತೆ ಕೊಡಬಾರದು ಎಂದು ಹಕ್ಕೊತ್ತಾಯ ಮಾಡಿದ ಶ್ರೀಗೌರಿ ಸಾವಂತ್ ತನ್ನದೇ ಸಮುದಾಯದ ಹಲವಾರು ಗುರು ಬಂಧುಗಳ ವಿರೋಧವನ್ನು ಕೂಡ ಕಟ್ಟಿಕೊಂಡಳು. ಜನರ ಮೈ ಮುಟ್ಟಿ ಅವರು ಬೆದರುವಂತೆ ಮಾಡಿ, ದೇವರ ಹೆಸರಿನಲ್ಲಿ ಹಣ ಸುಲಿಗೆ ಮಾಡುತ್ತಿದ್ದ ಕೆಲ ಸಮುದಾಯ ಜೀವಿಗಳಿಗೆ ಗೌರಿಯ ಸ್ವಾವಲಂಬನೆಯ ದಾರಿ ಹಿತವೆನಿಸುತ್ತಿರಲಿಲ್ಲ. ಪರಿಣಾಮವೇ ಆಕೆಯನ್ನು ಕುಗ್ಗಿಸುವ ಹಲವಾರು ಪ್ರಯತ್ನಗಳು ನಡೆಯಿತು. ಆದರೆ ಆಕೆ ಇದಾವುದಕ್ಕೂ ಬಗ್ಗಲಿಲ್ಲ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, 'ಟ್ರಾನ್ಸ್ಜೆಂಡರ್' ಎಂಬುದು ಛತ್ರಿ ಪದವಾಗಿದ್ದು, ಲಿಂಗದ ಪ್ರಜ್ಞೆಯು ಹುಟ್ಟಿನಿಂದಲೇ ಅವರಿಗೆ ನಿಯೋಜಿಸಲಾದ ಲಿಂಗದೊಂದಿಗೆ ಹೊಂದಿಕೆಯಾಗದ ವ್ಯಕ್ತಿಗಳನ್ನು ಒಳಗೊಂಡಿರುತ್ತದೆ.
1. ಪುರುಷನಾಗಿ ಜನಿಸಿದ ವ್ಯಕ್ತಿಯು ವಿರುದ್ಧ ಲಿಂಗದೊಂದಿಗೆ ಮಹಿಳೆಯಾಗಿ ಗುರುತಿಸಿಕೊಳ್ಳಬಹುದು.
2. 2011ರ ಜನಗಣತಿಯ ಪ್ರಕಾರ, 'ಗಂಡು' ಅಥವಾ 'ಹೆಣ್ಣು' ಎಂದು ಗುರುತಿಸದೆ 'ಇತರರು' ಎಂದು ಗುರುತಿಸುವ ವ್ಯಕ್ತಿಗಳ ಸಂಖ್ಯೆ 4,87,803 (ಒಟ್ಟು ಜನಸಂಖ್ಯೆಯ 0.04%). ಈ 'ಇತರೆ' ವರ್ಗವು ಪುರುಷ ಅಥವಾ ಮಹಿಳೆ ಎಂದು ಗುರುತಿಸದ ವ್ಯಕ್ತಿಗಳಿಗೆ ಅನ್ವಯಿಸುತ್ತದೆ.
3. 2013 ರಲ್ಲಿ ಲಿಂಗ ಪರಿವರ್ತನೆಗೊಳಗಾದ ವ್ಯಕ್ತಿಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಶೀಲಿಸಲು ಸರ್ಕಾರವು ತಜ್ಞರ ಸಮಿತಿಯನ್ನು ಸ್ಥಾಪಿಸಿತು. ತೃತೀಯಲಿಂಗಿ ವ್ಯಕ್ತಿಗಳು ಸಾಮಾಜಿಕ ಕಳಂಕ ಮತ್ತು ತಾರತಮ್ಯದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಇದು ಅವರ ಶಿಕ್ಷಣ, ಆರೋಗ್ಯ, ಉದ್ಯೋಗ ಮತ್ತು ಸರ್ಕಾರಿ ದಾಖಲೆಗಳ ಪ್ರವೇಶದ ಮೇಲೆ ಪರಿಣಾಮ ಬೀರುತ್ತದೆ ಎಂದು ಸಮಿತಿ ಹೇಳಿದೆ. 2014 ರಲ್ಲಿ ಸರ್ವೋಚ್ಚ ನ್ಯಾಯಾಲಯವು ಪುರುಷ, ಮಹಿಳೆ ಅಥವಾ ತೃತೀಯಲಿಂಗಿ ಎಂದು ಸ್ವಯಂ-ಗುರುತಿಸುವಿಕೆಯ ಟ್ರಾನ್ಸ್ಜೆಂಡರ್ ವ್ಯಕ್ತಿಯ ಹಕ್ಕನ್ನು ಅನುಮೋದಿಸಿತು.
4 ಇದಲ್ಲದೆ, ಲಿಂಗ ಪರಿವರ್ತಿತ ವ್ಯಕ್ತಿಗಳಿಗೆ ಕಾನೂನು ಮಾನ್ಯತೆ ನೀಡಲು, ಸಾಮಾಜಿಕ ಕಳಂಕ ಮತ್ತು ತಾರತಮ್ಯದ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಅವರಿಗೆ ಸಾಮಾಜಿಕ ಕಲ್ಯಾಣ ಯೋಜನೆಗಳನ್ನು ಒದಗಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನ್ಯಾಯಾಲಯ ನಿರ್ದೇಶಿಸಿದೆ.
2014ರಲ್ಲಿ ಶ್ರೀ ತಿರುಚ್ಚಿ ಶಿವ ಅವರು ರಾಜ್ಯಸಭೆಯಲ್ಲಿ ಖಾಸಗಿ ಸದಸ್ಯ ಮಸೂದೆಯನ್ನು ಮಂಡಿಸಿದರು ಮತ್ತು ತೃತೀಯ ಲಿಂಗಿಗಳ ಹಕ್ಕುಗಳನ್ನು ಖಾತರಿಪಡಿಸಲು ಮತ್ತು ಟ್ರಾನ್ಸ್ಜೆಂಡರ್ ವ್ಯಕ್ತಿಗಳಿಗೆ ಕಲ್ಯಾಣ ಕ್ರಮಗಳನ್ನು ಒದಗಿಸಿದರು. ಈ ಮಸೂದೆಯು 2015 ರಲ್ಲಿ ರಾಜ್ಯಸಭೆಯಲ್ಲಿ ಅಂಗೀಕರಿಸಲ್ಪಟ್ಟಿತು ಮತ್ತು ಪ್ರಸ್ತುತ ಲೋಕಸಭೆಯಲ್ಲಿ ಈ ಮಸೂದೆಯ ಅಂಗೀಕಾರ ಸೂಚನೆ ಇನ್ನೂ ಬಾಕಿ ಉಳಿದಿದೆ. ಆಗಸ್ಟ್ 2016 ರಲ್ಲಿ ಸರ್ಕಾರವು ಟ್ರಾನ್ಸ್ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಮಸೂದೆ, 2016 ಅನ್ನು ಲೋಕಸಭೆಯಲ್ಲಿ ಮಂಡಿಸಿತು. 2016 ರ ಮಸೂದೆಯನ್ನು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ಸ್ಥಾಯಿ ಸಮಿತಿಗೆ ಉಲ್ಲೇಖಿಸಲಾಗಿದೆ.
ಮೇಲಿನ ಎಲ್ಲ ಐತಿಹಾಸಿಕ ಘಟನೆಗಳಿಗೆ ಕಾರಣವಾಗಿದ್ದು ಗೌರಿ ಸಾವಂತ್ ಎಂಬ ಲಿಂಗ ಪರಿವರ್ತಿತ ಮಹಿಳೆಯ ಅವಿರತ ಹೋರಾಟ. ಪಶು ಪಕ್ಷಿಗಳಿಗಿಂತ ತಮ್ಮನ್ನು ಕೀಳಾಗಿ ನೋಡುವ ಸಮಾಜದ ಜನರ ಕೀಳು ಮನೋಭಾವನೆಗೆ ಸೆಡ್ಡು ಹೊಡೆದ, ತಮ್ಮ ಸಮುದಾಯದ ಜನರ ಅಸ್ಮಿತೆಯ ಆಕಾಂಕ್ಷಿಯಾಗಿರುವ ಶ್ರೀಗೌರಿ ಸಾವಂತ್ ರ ಸಮುದಾಯಿಕ ಪ್ರಜ್ಞೆ ಅದ್ಭುತ, ಅನನ್ಯ. ಅವರ ಹೋರಾಟಕ್ಕೆ ಜಯ ಸಲ್ಲಲಿ.... ಶಿಖಂಡಿಯನ್ನು ಒಪ್ಪಿಕೊಂಡ ಈ ಜಗತ್ತು ತೃತೀಯ ಲಿಂಗಿಗಳ ಅಸ್ತಿತ್ವಕ್ಕೆ ಪ್ರಜ್ಞಾಪೂರ್ವಕವಾಗಿ ಅಂಗೀಕಾರ ಮುದ್ರೆಯನ್ನು ಒತ್ತಲಿ ಎಂಬುದು ಎಲ್ಲರ ಆಶಯ.
- ವೀಣಾ ಹೇಮಂತ್ ಗೌಡ ಪಾಟೀಲ್. ಮುಂಡರಗಿ, ಗದಗ್.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ