ರಾಮಾಯಣ ಹಕ್ಕಿನೋಟ-52

Upayuktha
0

ರಾಮಾಯಣದ ಕುರಿತು ಪ್ರತಿದಿನ ಕಿರು ಪರಿಚಯ




ಶ್ರೀರಾಮಾಯನಮ:


ರಾಮನ ಮಾತಿಗೆ ಭರತನು- ಅಣ್ಣನಿರುವಾಗ ತಮ್ಮನಾದವನು ಪಟ್ಟವೇರಬಾರದು ಎಂಬುದು ನಮ್ಮ ವಂಶದ ನಂಬಿಕೆ, ಆಚರಣೆ, ಪದ್ಧತಿ, ಪರಂಪರೆ. ಆದುದರಿಂದ ನೀನು ಅಯೋಧ್ಯೆಗೆ ಮರಳಿ ಬಂದು ರಾಜ್ಯವನ್ನಾಳು. ನಾನು ಕೇಕಯದಲ್ಲಿ; ನೀನು ಕಾಡಿನಲ್ಲಿರುವಾಗ ನಮ್ಮ ತಂದೆ ನಮ್ಮ ರಾಜನು ನಿಮ್ಮ ಅಗಲುವಿ ಕೆಯ ನೋವು ತಾಳಲಾರದೇ ಮನೋರೋಗದಿಂದ ಸ್ವರ್ಗಸ್ಥನಾದನು. ನೀನು ಅಕ್ಕರೆಯ ಮಗ. ನಿನ್ನಿಂದ ಕೊಡಲ್ಪಡುವ ತರ್ಪಣದಿಂದ ಅವನಿಗೆ ಪಿತೃಲೋಕ ಗಳಲ್ಲಿ ಅಕ್ಷಯ ಫಲವನ್ನು ನೀಡುವುದು. ನಾನೂ ಶತ್ರುಘ್ನನೂ ನಮ್ಮ ಕರ್ತವ್ಯವನ್ನು ನೆರವೇರಿಸಿದ್ದೇವೆ ಎಂದನು.


ತಂದೆಯ ಮರಣ ವಾರ್ತೆಯನ್ನು ಕೇಳಿ ರಾಮನು ದು:ಖವನ್ನು ಸಹಿಸಲಾರದೆ ಮೂರ್ಛಿತನಾದನು. ಲಕ್ಷ್ಮಣ ಸೀತೆಯರು ಅಳತೊಡಗಿದರು. ನಿಧಾನಕ್ಕೆ ಎಚ್ಚೆತ್ತ ರಾಮನು- ಗತಿಸಿದ ತಂದೆಗೆ ಉತ್ತರ ಕ್ರಿಯೆ ಮಾಡಲಾಗದ ನಾನು ಎಂತಹ ಪಾಪಿ. (ವನವಾಸದ ಕಾಲದಲ್ಲಿ ರಾಮ ಸೀತೆ ಲಕ್ಷ್ಮಣರು ಅತಿ ಸುಖಿಯಾಗಿ ವಿಹರಿಸಿದ್ದುದು ಇದೇ ಕಾಲದಲ್ಲಿ!) ವನವಾಸ ಮುಗಿಸಿ ಅಯೋಧ್ಯೆಗೆ ಮರಳಿದ ಬಳಿಕ ನನಗೆ ಮಾರ್ಗದರ್ಶನ ನೀಡುವವರಿನ್ನು ಯಾರು?...- ಮುಂತಾಗಿ ಶೋಕಿಸಿದನು. ಕೊನೆಗೆ ತಾನೇ ಧೈರ್ಯ ತಂದುಕೊಂಡು ಅಳುತ್ತಿರುವ ಸೋದರರನ್ನು, ಸೀತೆಯನ್ನು ಸಂತೈಸಿ ತರ್ಪಣ ಬಿಡಲು ಸಿದ್ಧತೆ ಮಾಡಲು ಲಕ್ಷ್ಮಣನಿಗೆ ಹೇಳಿದನು.


ಮಂದಾಕಿನೀ ನದಿಗೆ ತರ್ಪಣ ಬಿಡಲು ಹೋಗುವಾಗ ಮುಂದೆ ಸೀತೆ ಮಧ್ಯೆ ಲಕ್ಷ್ಮಣ ಬಳಿಕ ತಾನು ಅನು ಸರಿಸಿಕೊಂಡು (ದುಃಖದ ಸಂದರ್ಭದಲ್ಲಿ ಹೀಗೆ ಹೋಗುವುದು ಸಂಪ್ರದಾಯ) ಹೋದನು. ಅಲ್ಲಿ ರಾಮನು ಹಿಪ್ಪೇಕಾಯಿಯ ಹಿಂಡಿಗೆ ಯಲಚೀಕಾಯಿಯನ್ನು ಬೆರೆಸಿ ಮಾಡಿದ ಪಿಂಡವನ್ನು ಹರಡಿದ ದರ್ಭೆಯ ಮೇಲಿರಿಸಿ ದುಃಖ ತಡೆಯಲಾಗದೆ ಅಳುತ್ತಾ- "ಯದನ್ನ: ಪುರುಷೋಭವತಿ ತದನ್ನಾಸ್ತಸ್ಯ ದೇವತಾ:-ಪ್ರಪಂಚದಲ್ಲಿ ಮಾನವನು ಯಾವುದನ್ನು ಉಣ್ಣು ತ್ತಾನೋ ಅದನ್ನೇ ತನ್ನ ದೇವತೆಗಳಿಗೂ ಉಣಿಸುತ್ತಾನೆ" ಎಂದು ಹೇಳುತ್ತಾ ಪಿಂಡ ಪ್ರದಾನ ಮಾಡಿದನು. ಬಳಿಕ ಅವರೆಲ್ಲರೂ ಪರ್ಣಕುಟಿಗೆ ಮರಳಿದರು.


ಯಥಾ ಶಕ್ತಿ, ಯಥಾ ಸಾಧ್ಯ.. ನಾವು ಮಾಡುವ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ನಮ್ಮ ಹಿರಿಯರು ಹಾಕಿಕೊಟ್ಟ ಮೇಲ್ಪಂಕ್ತಿ. ರಾಮನು ಅದರಲ್ಲಿ ನಡೆದು ನಮಗೆ ತೋರಿದ. ಚಕ್ರವರ್ತಿ ತಂದೆಗೆ ಸಾರ್ವಭೌಮನಾಗುವ ಮಗ ನೀಡಿದ ಪಿಂಡ ಪ್ರದಾನ! ಅರಮನೆಯಲ್ಲಿ ತೀರಿದ ತಂದೆಗೆ ಕಾಡಿನಲ್ಲಿ ಹಿರಿಮಗನ ಉತ್ತರಕ್ರಿಯೆ. ವಿಧಿಯಿಚ್ಛೆ!!


ಸಂಕಲನ: ವಿಶ್ವ ಉಂಡೆಮನೆ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 


Post a Comment

0 Comments
Post a Comment (0)
To Top