ಪ್ರೇರಣಾ-6: ಕಷ್ಟಗಳ ಜತೆ ಬದುಕುವುದು

Upayuktha
0


ನಿರಂತವಾಗಿ ಕಷ್ಟದ ಮೇಲೆ ಕಷ್ಟಗಳು ಬಂದಾಗ ಅವುಗಳೊಂದಿಗೆ ಹೊಂದಿಕೊಂಡು ಹೋಗಲು ಕಲಿಯುತ್ತೇವೆ.


ದಯಾನಗರವೆಂಬ ಒಂದು ಹಳ್ಳಿಯಲ್ಲಿ ತಿಮ್ಮೇಶ ಎಂಬ ಬಡ ರೈತನೊಬ್ಬ ತನ್ನ ಸಣ್ಣ ಜಮೀನಿನಲ್ಲಿ ಸಣಪುಟ್ಟ ಕೃಷಿಯನ್ನು ಮಾಡಿಕೊಂಡು ಜೀವನವನ್ನು ಸಾಗಿಸುತ್ತಾ ಇದ್ದನು. ಹೀಗಿರುವಾಗ ತಿಮ್ಮೇಶನನ್ನು ಪ್ರತಿದಿನವೂ ಒಂದು ರೀತಿ ವಿಚಿತ್ರವಾದ ಸಮಸ್ಯೆಯು ಕಾಡುತ್ತಿತ್ತು. ಆ ಸಮಸ್ಯೆಯಿಂದ ಆತ ಹೊರ ಬರಲಾರದೆ ಬಹಳಷ್ಟು ಚಡಪಡಿಸುತ್ತಿದ್ದನು. ತನ್ನ ವಿಚಿತ್ರ ಸಮಸ್ಯೆಯನ್ನು ಪಟ್ಟಣದ ಖ್ಯಾತ ಮನೋವೈದ್ಯರ ಬಳಿ ತೋರಿಸಲು ನಿರ್ಧರಿಸುತ್ತಾನೆ. ಮಾರನೇ ದಿನ ಬೆಳಗಾಗುತ್ತಿದ್ದಂತೆಯೇ ಪಟ್ಟಣದಲ್ಲಿದ್ದ ಮನೋವೈದ್ಯರನ್ನು ಭೇಟಿ ಮಾಡಿ, ಸ್ವಾಮಿ ನನಗೆ ಪ್ರತಿ ದಿನವೂ ಒಂದು ವಿಚಿತ್ರವಾದ ಕನಸು ಬೀಳುತ್ತಿದೆ, ಆ ಕನಸಿನಲ್ಲಿ ಒಂದು ವಿಚಿತ್ರ ರೂಪದ ಮತ್ತು ದೊಡ್ಡ ಗಾತ್ರದ ಅತ್ಯಂತ ಕ್ರೂರಿ ದೆವ್ವವೊಂದು ನನ್ನನ್ನು ಕೊಲ್ಲಲು ಬರುತ್ತದೆ. ಇದರಿಂದಾಗಿ ನನಗೆ ಭಯವು ಪ್ರಾರಂಭವಾಗಿ ಸರಿಯಾಗಿ ನಿದ್ದೆ ಮಾಡಲು ಆಗುತ್ತಿಲ್ಲ ಮತ್ತು ಮನಸ್ಸಿಗೆ ನೆಮ್ಮದಿಯೂ ಇಲ್ಲ. ನನ್ನ ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಾಗದೇ ನನಗೆ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಎನಿಸಿಬಿಟ್ಟಿದೆ ಎಂದು ಹೇಳುತ್ತಾನೆ. 


ತಿಮ್ಮೇಶನ ಸಮಸ್ಯೆಯನ್ನು ಅರಿತ ಆ ಮನೋವೈದ್ಯರು ನಿನ್ನ ಸಮಸ್ಯೆಯನ್ನು ನಾನು ಸರಿಪಡಿಸಬಲ್ಲೆ. ನಿರಂತರವಾದ ನನ್ನ ಚಿಕಿತ್ಸೆಯಿಂದ ಸುಮಾರು ಎರಡು ವರ್ಷಗಳಲ್ಲಿ ನೀನು ಪೂರ್ತಿ ಈ ಸಮಸ್ಯೆಯಿಂದ ಹೊರ ಬರುತ್ತೀಯ. ಆದರೆ ಈ ಚಿಕಿತ್ಸೆಗೆ ಕನಿಷ್ಠ ಎಂದರೂ ಎರಡೂವರೆ ಲಕ್ಷ ರೂಪಾಯಿ ಖರ್ಚಾಗುತ್ತದೆ, ನೀನು ನಿನ್ನ ಹಳ್ಳಿಗೆ ಹೋಗಿ ಆದಷ್ಟು ಬೇಗ ಅಷ್ಟೂ ಹಣವನ್ನು ಹೊಂದಿಸಿ ತೆಗೆದುಕೊಂಡು ಬಾ ನಾನು ನಿನಗೆ ಚಿಕಿತ್ಸೆಯನ್ನು ನೀಡುತ್ತೇನೆ ಎಂದು ಹೇಳುತ್ತಾರೆ. ಇದರಿಂದ ಆಶ್ಚರ್ಯಗೊಂಡ ತಿಮ್ಮೇಶನು, ಸ್ವಾಮೀ,ನನ್ನ ಈ ಸಮಸ್ಯೆಯನ್ನು ಗುಣಪಡಿಸುವ ಚಿಕಿತ್ಸೆಗೆ ಒಟ್ಟು  ಎರಡೂವರೆ ಲಕ್ಷ ರೂಪಾಯಿಯೇ? ಅಷ್ಟೊಂದು ದೊಡ್ಡ ಮೊತ್ತದ ದುಡ್ಡನ್ನು ನಾನು ನಿಮಗೆ ನೀಡುವುದರ ಬದಲು, ಆ ಕ್ರೂರಿ ದೆವ್ವದ ಜೊತೆಗೆ ಗೆಳೆತನ ಮಾಡಿಕೊಂಡು ಅದರೊಂದಿಗೆ ಜೀವನ ಪೂರ್ತಿ ಬದುಕುತ್ತೇನೆ ಎಂದು ಹೇಳುತ್ತಾ ಅಲ್ಲಿಂದ ಆತ ಹೊರ ನಡೆದ.


ಜೀವನದಲ್ಲಿ ನಮಗೆ ನಿರಂತರವಾಗಿ ಕಷ್ಟದ ಮೇಲೆ ಕಷ್ಟಗಳು ಬರುತ್ತಿದ್ದಾಗ, ನಾವು ಆ ಕಷ್ಟಗಳಿಂದ ಹೊರಗೆ ಬರಲು ಪ್ರಯತ್ನಿಸದೇ ಆ ಕಷ್ಟಗಳೊಂದಿಗೇ ಹೊಂದಿಕೊಂಡು ಬದುಕುವುದನ್ನು ಅಭ್ಯಾಸ ಮಾಡಿಕೊಂಡು ಆ ಕಷ್ಟಗಳಿಗೆ ಶಾಶ್ವತವಾದ ಪರಿಹಾರ ಕಂಡುಕೊಳ್ಳಲೂ ಪ್ರಯತ್ನಿಸುವುದಿಲ್ಲ. ಕಷ್ಟಗಳು ಬಂದಾಗ ಮನುಷ್ಯನು ಅವುಗಳಿಂದ ಹೊರಬರಲು ಬೇರೆ ಬೇರೆ ದಾರಿಗಳನ್ನು ಕಂಡುಕೊಳ್ಳುತ್ತಾನೆ. ಆದರೆ ಅದೇ ಸಮಸ್ಯೆಗಳಿಗೆ ಪರಿಹಾರವೇ ಇಲ್ಲದೆ ಆತನನ್ನು ಜರ್ಜರಿತನನ್ನಾಗಿ ಮಾಡಿದಾಗ ಆತ ಅದರೊಂದಿಗೆ ಹೊಂದಿಕೊಂಡು ಬದುಕುವುದನ್ನು ಕಲಿಯುತ್ತಾನೆ. ಪರಿಹಾರವಿಲ್ಲದ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಅದರೊಂದಿಗೆ ಹೊಂದಿಕೊಂಡು ಮುನ್ನಡೆಯುವುದು ಬೆಳವಣಿಗೆಯ ದೃಷ್ಟಿಯಿಂದ ಒಳ್ಳೆಯದೇ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top