ಶ್ರವಣ್ ಅದಾಗಲೇ ತನ್ನ ಎಂ.ಬಿ.ಎ ವಿದ್ಯಾಭ್ಯಾಸವನ್ನು ಡಿಸ್ಟಿಂಕ್ಷನ್‌ನಲ್ಲಿ ಮುಗಿಸಿದ್ದನು. ಒಂದು ಒಳ್ಳೆಯ ಬಹುರಾಷ್ಟ್ರೀಯ ಕಂಪನಿಯಲ್ಲಿ ಆಡಳಿತಾಧಿಕಾರಿಯ ಕೆಲಸವನ್ನೂ ಪಡೆದುಕೊಂಡನು. ಶ್ರವಣ್‌ನದ್ದು ಒಂದು ಸಂಪ್ರದಾಯಸ್ಥ ಕುಟುಂಬವಾಗಿದ್ದು, ಶ್ರವಣ್ ಮತ್ತು ಆತನ ತಂದೆ ದೇವರಾಜ್ ಮಧ್ಯೆ ಉತ್ತಮವಾದ ಗೆಳೆಯರ ರೀತಿಯ ಸಂಬಂಧವಿತ್ತು. ಅದೇ ರೀತಿ ಶ್ರವಣ್‌ಗೆ ತನ್ನ ತಂದೆ ಮೇಲೆ ಅತಿಯಾದ ಗೌರವವೂ ಇತ್ತು.
ಹೀಗಿರುವಾಗ ಒಂದು ದಿನ ದೇವರಾಜ್ ಅವರು, 'ಮಗನೇ ನಿನಗೆ ನಾನು ನನಗಿಷ್ಟವಾದ ಕುಟುಂಬದ ಒಂದು ಹುಡುಗಿಯನ್ನು ನೋಡಿ ನಿನಗೆ ಮದುವೆ ಮಾಡಬೇಕೆಂದು ನಿರ್ಧರಿಸಿದ್ದೇನೆ' ಎಂದು ಹೇಳಿದರು. ಆಗ ಶ್ರವಣ್ ಇಲ್ಲಪ್ಪಾ, 'ನಾನು ಮದುವೆ ಆಗುವ ಹುಡುಗಿಯನ್ನು ನಾನೇ ಆಯ್ಕೆ ಮಾಡಿಕೊಳ್ಳುತ್ತೇನೆ' ಎಂದು ಹೇಳಿದ. ಆಗ ತಂದೆಯು, 'ಹುಡುಗಿಯ ಆಯ್ಕೆಯನ್ನು ನೀನೇ ಮಾಡಿಕೊಳ್ಳುವುದಾದರೆ ಆ ಹುಡುಗಿ ಬಿಲ್‌ಗೇಟ್ಸ್‌ರ ಮಗಳೇ ಆಗಿರಬೇಕು' ಎಂದು ಸವಾಲು ಹಾಕಿದರು. ಆಗ ಶ್ರವಣ್ ನಗುತ್ತಾ 'ಸರಿಯಪ್ಪಾ, ಹಾಗೆಯೇ ಆಗಲಿ' ಎಂದು ಆ ಸವಾಲನ್ನು ಸ್ವೀಕರಿಸಿದ.
ಮರುದಿನವೇ ನನ್ನ ಮಾತೂ ಉಳಿಯಬೇಕು ಮಗನ ಆಸೆಯೂ ಈಡೇರಬೇಕು ಎಂಬ ಉದ್ದೇಶದಿಂದ ದೇವರಾಜ್ ಅವರು ನೇರವಾಗಿ ಬಿಲ್‌ಗೇಟ್ಸ್‌ರನ್ನು ಭೇಟಿ ಮಾಡಲು ನಿರ್ಧರಿಸಿದರು. ಬಿಲ್‌ಗೇಟ್ಸ್‌ರನ್ನು ಭೇಟಿ ಮಾಡಿದ ದೇವರಾಜ್, 'ನಾನು ನಿಮ್ಮ ಮಗಳಿಗೆ ಮದುವೆ ಮಾಡಲು ಒಬ್ಬ ಹುಡುಗನನ್ನು ನೋಡಿದ್ದೇನೆ' ಎಂದು ಹೇಳಿದರು. ಆದರೆ 'ನನ್ನ ಮಗಳಿಗೆ ಮದುವೆ ಮಾಡುವಷ್ಟು ವಯಸ್ಸು ಇನ್ನೂ ಆಗಿಲ್ಲ' ಎಂದು ಬಿಲ್‌ಗೇಟ್ಸ್ ನಕಾರಾತ್ಮಕವಾಗಿ ಹೇಳಿದರು. ಆಗ ದೇವರಾಜ್ 'ನೀವು ಹೇಳೊದೇನೋ ಸರಿ, ಆದರೆ ನಾನು ನಿಮ್ಮ ಮಗಳಿಗೆ ನೋಡಿರುವ ಹುಡುಗ ವಿಶ್ವಬ್ಯಾಂಕಿನ ಸಿ.ಇ.ಓ' ಎಂದು ಹೇಳಿದರು. ಈ ಮಾತನ್ನು ಕೇಳಿದ ಬಿಲ್‌ಗೇಟ್ಸ್ ಖುಷಿಯಿಂದ 'ಓಹೋ ಹೌದಾ, ಹಾಗಾದರೆ ಸರಿ, ನನ್ನ ಮಗಳಿಗೆ ಮದುವೆ ಮಾಡಲು ಸಿದ್ಧನಿದ್ದೇನೆ' ಎಂದು ತಿಳಿಸಿದರು.
ಕೊನೆಯದಾಗಿ ದೇವರಾಜ್ ಅವರು ವಿಶ್ವಬ್ಯಾಂಕಿನ ಅಧ್ಯಕ್ಷರನ್ನು ಭೇಟಿ ಮಾಡಿ, ಸರ್ ನಮಸ್ತೆ, ನೀವು ವಿಶ್ವಬ್ಯಾಂಕಿನ ಅಧ್ಯಕ್ಷರು, ನಿಮಗೆ ಕೆಲಸದ ಒತ್ತಡ ಅತಿಯಾಗಿರುತ್ತದೆ. ನೀವ್ಯಾಕೆ ಇನ್ನೊಬ್ಬ ಕಾರ್ಯನಿರ್ವಹಣಾ ಅಧಿಕಾರಿಯನ್ನು ಆಯ್ಕೆ ಮಾಡಿಕೊಳ್ಳಬಾರದು? ಇದರಿಂದ ನಿಮ್ಮ ಕೆಲಸದ ಒತ್ತಡವು ಕಡಿಮೆಯಾಗುತ್ತದೆ. 'ನೀವು ಒಪ್ಪಿದರೆ ನಾನು ನಿಮ್ಮ ವಿಶ್ವಬ್ಯಾಂಕಿಗೆ ವಿದ್ಯಾವಂತ ಮತ್ತು ಚತುರ ಸಿ.ಇ.ಓನನ್ನು ಸೂಚಿಸುತ್ತೇನೆ' ಎಂದು ವಿಶ್ವಬ್ಯಾಂಕಿನ ಅಧ್ಯಕ್ಷರಿಗೆ ಹೇಳಿದರು. ಆಗ ವಿಶ್ವಬ್ಯಾಂಕಿನ ಅಧ್ಯಕ್ಷರು 'ಆದರೆ ನನಗೆ ಈಗಾಗಲೇ ಹಲವು ಮಂದಿ ಸಿ.ಇ.ಓಗಳು ಇದ್ದಾರೆ, ಹಾಗಾಗಿ ನನಗೆ ಹೆಚ್ಚುವರಿ ಸಿ.ಇ.ಓನ ಅವಶ್ಯಕತೆ ಇಲ್ಲ' ಎಂದು ಖಡಾಖಂಡಿತವಾಗಿ ತಿಳಿಸಿದರು.
ಆಗ ತನ್ನ ಬುದ್ಧಿವಂತಿಕೆ ಉಪಯೋಗಿಸಿದ ದೇವರಾಜ್ ಅವರು, 'ಆದರೆ ನಾನು ಸೂಚಿಸುವ ಹುಡುಗ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಬಿಲ್‌ಗೇಟ್ಸ್ ಅವರ ಅಳಿಯ' ಎಂದು ಹೇಳಿದರು. ಈ ಮಾತನ್ನು ಕೇಳಿ ಆಶ್ಚರ್ಯಕ್ಕೆ ಒಳಗಾದ ವಿಶ್ವಬ್ಯಾಂಕಿನ ಅಧ್ಯಕ್ಷರು, 'ಹೌದಾ, ಹಾಗಾದರೆ ನೀವು ಸೂಚಿಸುವ ವ್ಯಕ್ತಿಯನ್ನು ವಿಶ್ವಬ್ಯಾಂಕಿನ ಹೆಚ್ಚುವರಿ ಸಿ.ಇ.ಓ ಆಗಿ ನಾನು ಆಯ್ಕೆ ಮಾಡಿಕೊಳ್ಳುತ್ತೇನೆ' ಎಂದು ತಿಳಿಸಿದರು.
ದೇವರಾಜ್ ಅವರ ಈ ವಿಭಿನ್ನವಾದ ಪ್ರಯತ್ನದಿಂದ ತಂದೆಯ ಸವಾಲೂ ಪೂರೈಸಲ್ಪಟ್ಟಿತು, ಮಗ ಸ್ವೀಕರಿಸಿದ ಸವಾಲೂ ಸಾಕಾರವಾಯಿತು, ಮಗನಿಗೆ ಬಿಲ್‌ಗೇಟ್ಸ್ ಮಗಳೊಂದಿಗೆ ಮದುವೆಯೂ ಆಯಿತು, ಮಗನಿಗೆ ವಿಶ್ವಬ್ಯಾಂಕ್‌ನ ಸಿ.ಇ.ಓ ಹುದ್ದೆಯೂ ದೊರೆಯಿತು.
ಸಾಧ್ಯವೇ ಇಲ್ಲದ ಒಂದು ಕೆಲಸವು ಹೇಗೆ ತನ್ನ ಧನಾತ್ಮಕವಾದ ಯೋಚನೆ, ಮನೋಭಾವ, ಸಂಪರ್ಕಿಸುವ ರೀತಿ ಮತ್ತು ಸಂವಹನದ ಶೈಲಿಯಿಂದ ವ್ಯಕ್ತಿಗಳನ್ನು ಒಪ್ಪಿಸುವ ಮೂಲಕ ಸಾಧ್ಯವಾಯಿತು ಎಂದು ತಿಳಿಯಬಹುದು. ಈ ಕಾಲ್ಪನಿಕ ಕಥೆಯ ಸಾರಾಂಶ ಹೀಗಿದೆ, 'ವ್ಯಕ್ತಿಯೊಬ್ಬನಲ್ಲಿ ಏನು ಇಲ್ಲವೆಂದರೂ ಪರವಾಗಿಲ್ಲ, ಆತ ಎಲ್ಲವನ್ನೂ ಗಳಿಸಿಕೊಳ್ಳಲು ಖಂಡಿತಾ ಸಾಧ್ಯವಿದೆ. ಆದರೆ ಆ ವ್ಯಕ್ತಿಯ ಮನೋಧರ್ಮ ಮತ್ತು ಇತರರೊಂದಿಗೆ ಮಾತನಾಡುವ ರೀತಿ ಎಂದಿಗೂ ಧನಾತ್ಮಕವಾಗಿ ಇರಬೇಕು ಅಷ್ಟೇ'.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ