ಸಾಮಾನ್ಯವಾಗಿ ‘ಜ್ಞಾನ’ ಎಂದರೆ ‘ನಾನು ಮುಂದಕ್ಕೆ ಏನನ್ನು ಮಾಡುವುದು’ ಎಂದು ತಿಳಿಯುವುದು, ‘ಕೌಶಲ’ ಎಂದರೆ ‘ಅದನ್ನು ಹೇಗೆ ಮಾಡುವುದು’ ಎಂದು ತಿಳಿಯುವುದು. ‘ಸರಿಯಾದ ಗುಣ’ ಎಂದರೆ ‘ತಿಳಿದಿರುವುದನ್ನು ಕಾರ್ಯರೂಪಕ್ಕೆ ತರುವುದು’ ಎಂದು ಜ್ಞಾನಿ ಡೇವಿಡ್ ಸ್ಟಾರ್ ಜಾರ್ಡನ್ ಹೇಳಿದ್ದಾರೆ. ಪರಿಪೂರ್ಣವಾದ ಜೀವನವನ್ನು ನಡೆಸಲು ನಾವೇನು ಮಾಡಬೇಕೆಂಬುದು ನಮ್ಮಲ್ಲಿ ಬಹಳಷ್ಟು ಮಂದಿಗೆ ತಿಳಿದಿದೆ. ಆದರೆ ಇಲ್ಲಿರುವ ನಿಜವಾದ ಸಮಸ್ಯೆ ಎಂದರೆ ನಮಗೆ ಏನು ತಿಳಿದಿದೆಯೋ ಅದನ್ನು ನಾವು ಮಾಡುವುದಿಲ್ಲ. ಪ್ರೇರಣಾತ್ಮಕ ಭಾಷಣಕಾರರು ‘ಜ್ಞಾನವೇ ನಿಜವಾದ ಶಕ್ತಿ’ ಎಂಬ ಮಾತನ್ನು ಆಗಿಂದಾಗ್ಗೆ ಹೇಳುತ್ತಿರುತ್ತಾರೆ. ಆದರೆ ಈ ಮಾತು ಅಷ್ಟೊಂಂದು ಸರಿ ಎಂದು ಎನಿಸುವುದಿಲ್ಲ, ಏಕೆಂದರೆ ಕೇವಲ ‘ಜ್ಞಾನವಷ್ಟೇ ಶಕ್ತಿ ಅಲ್ಲ’, ಅದು ‘ಕೇವಲ ಸಂಭಾವ್ಯವಾದ ಶಕ್ತಿ’ ಅಷ್ಟೇ. ನಮ್ಮಲ್ಲಿ ಇರುವ ಸೂಕ್ತ ಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಅದನ್ನು ಅನುಷ್ಠಾನಿಸಿದರೆ ಅದು ನೈಜ ಶಕ್ತಿಯಾಗಿ ತನ್ನಿಂದ ತಾನಾಗಿಯೇ ಪರಿವರ್ತನೆಗೊಳ್ಳುತ್ತದೆ.
ದೃಢವಾದ ಮತ್ತು ಪ್ರಬಲವಾದಂತಹ ವ್ಯಕ್ತಿತ್ವವಿರುವ ವ್ಯಕ್ತಿಯು ಸದಾಕಾಲ ತಾನು ಖುಷಿಯಾಗಿ ಇರುವಂತಹ ಕೆಲಸವನ್ನು ಮಾಡುವುದರಲ್ಲಿ ಮತ್ತು ತನಗೆ ಇಷ್ಟವಿರುವ ಕೆಲಸವನ್ನು ಮಾತ್ರವೇ ಮಾಡುತ್ತಾ ಇರುವುದರಲ್ಲಿ ಯಶಸ್ಸನ್ನು ಕಾಣುವುದಿಲ್ಲ. ಬದಲಿಗೆ ತಾನು ತನ್ನ ಯಶಸ್ಸಿಗಾಗಿ ಏನನ್ನು ಮಾಡಬೇಕು ಎನ್ನುವುದನ್ನು ನಿರಂತರವಾಗಿ ಯೋಚಿಸುತ್ತಾ, ಆ ಕುರಿತು ಪ್ರಯತ್ನಿಸುತ್ತಾ ಇರುತ್ತಾನೆ. ಮತ್ತು ಸರಿಯಾದ ಕೆಲಸವನ್ನು ಮಾಡುವುದರಲ್ಲಿ ತನ್ನ ಸಮಯವನ್ನು ಕಳೆಯುತ್ತಾನೆ.
ಉದಾ: ತನ್ನ ಬಿಡುವಿಲ್ಲದ ಕೆಲಸದ ಮಧ್ಯೆ ಆಯಾಸವನ್ನು ಕಳೆಯಲು ಮನರಂಜನೆಗಾಗಿ 2-3 ಗಂಟೆ ಟಿ.ವಿಯನ್ನು ನೋಡುತ್ತಾ ಸಮಯವನ್ನು ಕಳೆಯುವ ಬದಲು ತನಗೆ ಇಷ್ಟವಾದ ಬರವಣಿಗೆ, ಓದು, ಚಿತ್ರಕಲೆ, ಮಕ್ಕಳಿದ್ದರೆ ಮಕ್ಕಳಿಗೆ ಓದಿಸುವುದು, ಅಭ್ಯಾಸ ಮೊದಲಾದ ಕೆಲಸವನ್ನು ಮಾಡುವ ಧೈರ್ಯವನ್ನು ತೋರುತ್ತಾನೆ. ಅತಿಯಾದ ಚಳಿ ಇರುವ ಚಳಿಗಾಲದ ಮುಂಜಾವಿನಲ್ಲಿ ಬೆಚ್ಚಗೆ ಹೊದ್ದುಕೊಂಡು ಮಲಗುವ ಬದಲು ಚಳಿಯ ಮಧ್ಯೆಯೂ ಜೀವನ ಶಿಸ್ತನ್ನು ರೂಪಿಸುವಂತಹ ಯೋಗ, ಪ್ರಾಣಾಯಾಮ, ಓಟ, ವ್ಯಾಯಾಮ, ಮುಂತಾದುವುಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾನೆ. ಕ್ರಿಯೆ ಎನ್ನುವುದು ಒಂದು ಅಭ್ಯಾಸ, ಆದ್ದರಿಂದ ಹೆಚ್ಚು ಹೆಚ್ಚು ಸಕಾರಾತ್ಮಕ ಕ್ರಿಯೆಗಳನ್ನು ನಿತ್ಯವೂ ಮಾಡುತ್ತಾ ಇದ್ದರೆ ಅದನ್ನು ಸ್ವೀಕರಿಸುವ ಮನೋಭಾವವೂ ಅಷ್ಟೇ ಗಟ್ಟಿಯಾಗುತ್ತದೆ. ಬಹಳಷ್ಟು ಮಂದಿ ನಮಗೆ ಒಳ್ಳೆಯ ಮತ್ತು ಸರಿಯಾದ ಸಮಯ (ಅವಕಾಶ) ಬರಲಿ ಎಂದು ಕಾಯುತ್ತಾ ಕುಳಿತು, ತಮ್ಮ ಮುಂದೆ ಇರುವ ಸಮಯವನ್ನು (ಅವಕಾಶ) ಕಳೆದು ಬಿಡುತ್ತಾರೆ. ಒಳ್ಳೆಯ ಸಮಯವು ಧನಾತ್ಮಕವಾಗಿ ಮುಂದಕ್ಕೆ ಸಾಗಿದಾಗ ಬರುತ್ತದೆಯೇ ಹೊರತು ಕಾಯುತ್ತಾ ಕುಳಿತಾಗ ಬರುವುದಿಲ್ಲ ಎನ್ನುವುದನ್ನು ಮರೆಯಬಾರದು. ಜೀವನದಲ್ಲಿ ಕನಸನ್ನು ಕಾಣುವುದು ಒಳ್ಳೆಯದೇ, ಆದರೆ ಕೇವಲ ಕನಸನ್ನು ಕಾಣುವುದರಿಂದ ಯಶಸ್ಸಿನ ಉತ್ತುಂಗಕ್ಕೆ ಏರಲು, ಮಾದರಿ ವ್ಯಕ್ತಿಯಾಗಲು, ಬದುಕಿನ ಖರ್ಚುವೆಚ್ಚಗಳನ್ನು ತೂಗಿಸಿಕೊಳ್ಳಲು ಸಾಧ್ಯವಿಲ್ಲ, ಅದಕ್ಕಾಗಿ ಪ್ರಯತ್ನ ಬಹಳ ಮುಖ್ಯ.
ವ್ಯಕ್ತಿಯೊಬ್ಬನ ವಿಚಾರಧಾರೆಗಳು ಎಷ್ಟೇ ಶ್ರೇಷ್ಠವಾಗಿದ್ದರೂ ಅದರ ಅನುಷ್ಟಾನವಾಗದೇ ಯಶಸ್ಸು ಸಾಧ್ಯವಿಲ್ಲ. ಕೇವಲ ದೊಡ್ಡ ದೊಡ್ಡ ವಿಚಾರಗಳನ್ನು ಮಾಡುವುದಕ್ಕಿಂತ, ದೃಢವಾದ ನಿರ್ಧಾರದೊಂದಿಗೆ ಚಿಕ್ಕ ಚಿಕ್ಕ ಕೆಲಸಗಳನ್ನು ಅನುಷ್ಠಾನಿಸುವುದು ಹೆಚ್ಚು ಶ್ರೇಷ್ಠ. ಈ ರೀತಿ ಮಾಡಿದಾಗ ಸಣ್ಣ ಸಣ್ಣ ಯಶಸ್ಸಿನ ಮೂಲಕ ದೊಡ್ಡ ಪ್ರಮಾಣದ ಯಶಸ್ಸಿಗೆ ಅಗತ್ಯವಿರುವ ಪೂರ್ವ ತಯಾರಿಯನ್ನು ಮಾಡಿಕೊಳ್ಳಲು ಸಹಾಯವಾಗುತ್ತದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ